Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಕೊರಗು ಅರ್ಥವಿಲ್ಲದ್ದು, ಉಲ್ಲಾಸ ವ್ಯರ್ಥವಲ್ಲದ್ದು

Saturday, 26.11.2016, 6:53 AM       No Comments

ಆ ಅಕ್ಕ-ತಂಗಿಯರು ಆಕಾಶವೇ ತಲೆಮೇಲೆ ಬಿದ್ದಂತೆ ಮುಖಮಾಡಿಕೊಂಡು ನನ್ನ ಮುಂದೆ ಕುಳಿತಿದ್ದರು. ಮಾತು ಶುರುಮಾಡಿದ ಅಕ್ಕ, ‘ಮೇಡಂ, ನಾನು ಫೋನಿನಲ್ಲಿ ಹೇಳಿದೆನಲ್ಲ, ಇವಳೇ ನನ್ನ ತಂಗಿ; ನೀವು ಇವಳನ್ನು ಮಾತಾಡಿಸಿ, ನಾನು ಹೊರಗಿರುತ್ತೇನೆ’ ಎಂದು ಹೇಳಿ ನನ್ನ ಉತ್ತರಕ್ಕೂ ಕಾಯದೆ ಹೊರಹೋದಳು. ಆಕೆ ಹಿಂದಿನ ದಿನ ಫೋನಿನಲ್ಲಿ ಹೇಳಿದ್ದನ್ನು ನೆನಪಿಸಿಕೊಂಡೆ. ಈಕೆ ಅವಳ ತಂಗಿ. ಇವಳ ಗಂಡ ಮತ್ತು ಬಿ.ಇ. ಕೊನೆಯ ವರ್ಷದಲ್ಲಿ ಓದುತ್ತಿರುವ ಮಗ ಇಬ್ಬರೂ ಒಳ್ಳೆಯವರೇ. ಇವಳೇ ಸದಾ ಅವರನ್ನು ಬಯ್ಯುತ್ತಾ, ಅವರು ಏನೇ ಮಾಡಿದರೂ ಟೀಕಿಸುತ್ತಾ ಜಗಳ ತೆಗೆಯುತ್ತಾಳೆ. ಅವರಿಗೂ ಸಹಿಸಿ ಸಹಿಸಿ ಸಾಕಾಗಿದೆ. ಕಡೆಗೆ ‘ನೀನು ಕೌನ್ಸೆಲಿಂಗ್ಗೆ ಹೋಗು; ನಿನಗೆ ಯಾಕೆ ಹೀಗೆ ಪದೇಪದೆ ಕೋಪ ಬರುತ್ತದೆ ಅಂತ ತಿಳಿದುಬಾ. ಅದನ್ನು ಕಡಿಮೆಮಾಡಲು ಏನು ಮಾಡಬೇಕು ಕೇಳಿ ಬಾ. ನೀನು ಹೀಗೆ ಮಾಡದಿದ್ದರೆ ನಾವಿಬ್ಬರೂ ಮನೆ ಬಿಟ್ಟೇ ಹೋಗಿಬಿಡುತ್ತೇವೆ’ ಎಂದು ಹೆದರಿಸಿ, ಅಕ್ಕನ ಜತೆಗೆ ಇಲ್ಲಿಗೆ ಕಳಿಸಿದ್ದಾರೆ. ಇದು ಒಂದು ಮುಖದ ದರ್ಶನ. ಇವಳ ಕಡೆಯಿಂದಲೂ ಸಮಸ್ಯೆಯ ಮತ್ತೊಂದು ಮುಖವನ್ನು ಅರಿಯಬೇಕಲ್ಲ? ಕೇಳಿದೆ- ‘ಹೇಳಿ, ಯಾವ ವಿಚಾರ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತಿದೆ?’.

‘ಅಯ್ಯೋ ಏನ್ ಹೇಳ್ತೀರಾ ಮೇಡಂ’ ಎನ್ನುತ್ತಾ ಪ್ರಾರಂಭಿಸಿದ ಆಕೆ- ‘ನಮ್ಮ ಮನೆಯಲ್ಲಿ ಯಾರೂ ಸರಿಯಿಲ್ಲ. ಗಂಡ, ಮಗ ನನ್ನ ಮಾತನ್ನೇ ಕೇಳುವುದಿಲ್ಲ. ನನಗೆ ಮನೆಯಲ್ಲಿ ಬೆಲೆಯೇ ಇಲ್ಲ; ಈ ಅವಮಾನ ಸಹಿಸಿ ಸಹಿಸಿ ಸಾಕಾಗಿದೆ ಮೇಡಂ. ಸಾವಾದರೂ ಬರಬಾರದೇ ಎನಿಸುತ್ತದೆ’ ಎಂದಳು. ಅವಳಿಗಾಗುತ್ತಿರುವ ಅವಮಾನವಾದರೂ ಏನು ಎನ್ನುವ ವಿವರಣೆ ಕೇಳಿದೆ. ಅವಳು ಹೇಳುತ್ತಾ ಹೋದಳು- ಅವರಿಗಿಷ್ಟವಿಲ್ಲದಿದ್ದರೂ ಇವಳು ಮಾಡಿದ ತಿಂಡಿಯನ್ನು ಅವರು ತಿನ್ನಲೇಬೇಕು; ತಿನ್ನದಿದ್ದರೆ ಅವಮಾನವೆನಿಸುತ್ತದೆ. ಇವಳು ಆರಿಸಿದ ಬಟ್ಟೆಯನ್ನೇ ಅವರು ತೊಡಬೇಕು; ಅದು ಬಿಟ್ಟು ಬೇರೆ ಬಟ್ಟೆ ತೊಟ್ಟರೆ ಇವಳಿಗೆ ಅವಮಾನ! ಇವಳು ಹೇಳಿದಲ್ಲಿಗೆ ಬರಬೇಕು; ಬಾರದಿದ್ದರೆ ಅವಮಾನ! ಹೀಗೇ ಅವಳ ಪಟ್ಟಿ ಬೆಳೆಯುತ್ತಾ ಹೋಯಿತು. ಇದು ‘ನಾನೇ ಸರಿ, ಜಗತ್ತಿನಲ್ಲಿ ಮತ್ಯಾರೂ ಸರಿಯಿಲ್ಲ’ ಎನ್ನುವ ಲೆಕ್ಕಾಚಾರದ್ದು.

ಹೀಗೆ ‘ಎಲ್ಲರನ್ನೂ ಆಳುತ್ತೇನೆ’ ಎಂದು ಹೊರಡುವುದೇ ನೇತ್ಯಾತ್ಮಕ ಮನೋಭಾವ. ಆಕೆಯ ಈ ಮನೋಭಾವ ಎಷ್ಟು ಆಳಕ್ಕಿಳಿದಿರಬಹುದು ಎನ್ನುವುದನ್ನು ತಿಳಿಯಲು ಆಕೆಗೆ ಒಂದು ‘ರೈಟಿಂಗ್ ಥೆರಪಿ’ ಸೂಚಿಸಿದೆ. ‘ಮುಂದಿನ ಬಾರಿ ಬರುವಾಗ, ನಿಮಗೆ ಯಾವಾಗ ತುಂಬ ಸಂತೋಷವಾಯಿತು ಎನ್ನುವುದನ್ನು ನೆನಪಿಸಿಕೊಂಡು ಬರೆದು ತನ್ನಿ’ ಎಂದೆ. ಮುಂದಿನ ಬಾರಿ ಬಂದಾಗ ಖಾಲಿ ಪುಸ್ತಕವನ್ನು ತಂದಳು. ‘ಇದೇನು, ಏನೂ ಬರೆದೇ ಇಲ್ಲವಲ್ಲ?’ ಎಂದೆ. ‘ಏನು ಬರೆಯಲಿ ಮೇಡಂ, ನನ್ನ ಜೀವನದಲ್ಲಿ ಸಂತೋಷವೆನ್ನುವುದೇ ಇಲ್ಲವಲ್ಲ?’ ಎಂದಳು!. ‘ಮಗ ಹುಟ್ಟಿದ ದಿವಸವೂ ನಿಮಗೆ ಸಂತೋಷವಾಗಲಿಲ್ಲವೇ?’ ಎಂದೆ. ‘ಎಲ್ಲಿಯ ಸಂತೋಷ ಮೇಡಂ? ನನ್ನ ಹತ್ತಿರವೇ ಇರಿ ಎಂದು ಗಂಡನಿಗೆ ಎಷ್ಟು ಹೇಳಿದ್ದೆ. ಆದರೆ ಇವರಿಗೆ ಟೂರ್ ಬಿದ್ದಿತಂತೆ ಆಫೀಸಿನಲ್ಲಿ. ರಜೆ ತೆಗೆದುಕೊಳ್ಳಿ ಎಂದರೆ ಕೇಳದೇ ಟೂರ್ ಹೋದರು’ ಎಂದಳು. ಏನು ಮಾಡಿದರೂ ಸುಖದ ಘಳಿಗೆಯನ್ನು ಅನುಭವಿಸುವುದೂ ಇಲ್ಲ, ಗುರುತಿಸುವುದೂ ಇಲ್ಲ, ನೆನೆಸಿಕೊಳ್ಳುವುದೂ ಇಲ್ಲ ಎಂದು ಹಠ ತೊಟ್ಟವರನ್ನು ಹೇಗೆ ಸಕಾರಾತ್ಮಕತೆಯ ಕಡೆಗೆ ಎಳೆದು ತರುವುದು? ಇದು ನಿಜಕ್ಕೂ ಕಠಿಣ ಸವಾಲೇ!. ಆ ಪುಸ್ತಕದ ಮೇಲೊಂದು ಚುಕ್ಕಿ ರಂಗೋಲಿ ಇತ್ತು. ‘ಇದನ್ನು ನೀವು ಬರೆದದ್ದಾ?’ ಎಂದೆ. ‘ಹೌದು ಮೇಡಂ’ ಎಂದಾಗ ಅವಳ ಕಣ್ಣುಗಳು ಸ್ವಲ್ಪ ಹೊಳೆದದ್ದು ಕಂಡೆ. ‘ಹಾಗಾದರೆ ಮುಂದಿನ ಸಲ ಬರುವಾಗ ಒಂದು ಹತ್ತಾರು ಹಸೆಗಳನ್ನು ಬರೆದು ತನ್ನಿ’ ಎಂದೆ. ನನ್ನ ಉದ್ದೇಶ ಅದನ್ನು ಬರೆಯುವಾಗಲಾದರೂ ಅವಳ ಮನಸ್ಸು ಖುಷಿಯ ಭಾವವನ್ನು ಪಡೆಯುತ್ತದೆಯೇನೋ ತಿಳಿಯೋಣ ಎನ್ನುವುದಾಗಿತ್ತು. ಮತ್ತೆ ಬಂದಾಗ ಹತ್ತಾರು ಸುಂದರ ಚುಕ್ಕಿರಂಗೋಲಿಗಳನ್ನು ರಚಿಸಿ ಬಣ್ಣವನ್ನೂ ತುಂಬಿ ತಂದಳು. ಪ್ರತಿಚಿತ್ರದ ಒಳಗೂ ಪುಟ್ಟ ಗಣೇಶನ ಚಿತ್ರವಿತ್ತು ಮತ್ತು ಚಿತ್ರದ ಕೆಳಗೆ ಒಂದು ಸಾಲಿನಲ್ಲಿ ತಮಿಳಿನಲ್ಲಿ ಏನೋ ಬರೆಯಲಾಗಿತ್ತು. ‘ವಾವ್! ತುಂಬಾ ಚೆನ್ನಾಗಿದೆ. ಇದೇನು ಪ್ರತಿ ಚಿತ್ರದಲ್ಲೂ ಗಣೇಶನಿದ್ದಾನೆ?’ ಎಂದೆ. ‘ಅವನೇ ನನ್ನ ಇಷ್ಟದೈವ’ ಎಂದಳು. ‘ಕೆಳಗೆ ಬರೆದಿರುವುದೇನು? ಓದಿ’ ಎಂದೆ. ಅವಳು ಓದಿದ್ದು ಕೇಳಿ ನನಗೆ ತಲೆಸುತ್ತುವ ಹಾಗಾಯಿತು! ಅವಳು ಬರೆದಿದ್ದಳು- ‘ಗಣಪ ನಾನೇನೋ ನಿನ್ನ ಸುತ್ತ ಚಿತ್ರಬಿಡಿಸಿ ರಂಗು ತುಂಬಿದೆ, ನೀನು ನನ್ನ ಬದುಕಿನಲ್ಲಿ ಯಾವ ಬಣ್ಣವೂ ಇಲ್ಲದಂತೆ ವರ್ಣಹೀನ ಮಾಡಿಬಿಟ್ಟೆ!!’.

ಈ ಸೃಷ್ಟಿಯ ವೈಚಿತ್ರ್ಯ ಎಷ್ಟೊಂದು ಬಗೆ ನೋಡಿ! ನೆಗೆಟಿವ್ ಚಿಂತನೆ ತುಂಬಿರುವವರಲ್ಲಿ ಯಾರನ್ನು ನೋಡಿದರೂ, ಏನನ್ನು ನೋಡಿದರೂ ‘ಅಲ್ಲಿ ಏನಿಲ್ಲ’ ಎನ್ನುವುದೇ ಮೊದಲು ಕಾಣುವುದು! ಅವರಿಗೇ ಗೊತ್ತಿಲ್ಲದಂತೆ ಮನಸ್ಸು ತನ್ನಷ್ಟಕ್ಕೆ ತಾನೇ ‘ನೆಗೆಟಿವ್ ಚಿಂತನೆಗಳನ್ನು’ ಉತ್ಪತ್ತಿ ಮಾಡುತ್ತಿರುತ್ತದೆ! ಇವು ಮೂರು ಆಯಾಮಗಳಲ್ಲಿ ಕೆಲಸ ಮಾಡುತ್ತವೆ-

1) ತಮ್ಮ ಬಗ್ಗೆಯೇ ನೇತ್ಯಾತ್ಮಕವಾಗಿ (ನಾನು ಕಪ್ಪು, ದಪ್ಪ, ಕುಳ್ಳು, ಪೆದ್ದು, ಅದೃಷ್ಟಹೀನ ಇತ್ಯಾದಿ) ಕಲ್ಪಿಸಿಕೊಳ್ಳುವುದು. 2) ಜಗತ್ತಿನ ಬಗ್ಗೆ ನೇತ್ಯಾತ್ಮಕ ಚಿಂತನೆ (ಯಾರೂ ಒಳ್ಳೆಯವರಲ್ಲ, ಒಳ್ಳೆಯವರಿಗೆ ಸದಾ ಕೆಟ್ಟದ್ದೇ ಆಗುವುದು, ಯಾರನ್ನೂ ನಂಬಬಾರದು, ನಂಬಿದರೆ ಬೆನ್ನಿಗೆ ಚೂರಿ ಹಾಕುತ್ತಾರೆ ಇತ್ಯಾದಿ) ಹೊಂದಿರುವುದು. 3) ತಮ್ಮ ಭವಿಷ್ಯದ ಬಗ್ಗೆ ನೇತ್ಯಾತ್ಮಕವಾಗಿ (ನನ್ನ ಅದೃಷ್ಟವೇ ಸರಿಯಿಲ್ಲ ಆದ್ದರಿಂದ ಕೆಲಸ ಸಿಕ್ಕುವುದಿಲ್ಲ, ನನ್ನನ್ನು ಯಾರೂ ಸತ್ಕರಿಸುವುದಿಲ್ಲ, ವಯಸ್ಸಾದ ಮೇಲೆ ಮಕ್ಕಳು ಬೀದಿಗೆ ತಳ್ಳಿಬಿಡುತ್ತಾರೆ ಇತ್ಯಾದಿ) ಆಲೋಚಿಸುವುದು.

ಇವೆಲ್ಲದರ ಪ್ರಭಾವದಿಂದ ತಮ್ಮ ಭೂತಕಾಲದ ಎಲ್ಲ ಸಂದರ್ಭಗಳನ್ನೂ ಮೇಲೆ ಹೇಳಿದ ಮಹಿಳೆಯಂತೆ ನೇತ್ಯಾತ್ಮಕವಾಗಿಯೇ ನೆನಪಿಸಿಕೊಳ್ಳುತ್ತಾರೆ. ಆದರೆ ಒಂದು ಮಾತು ನೆನಪಿಡಿ- ನಮ್ಮೆಲ್ಲರಲ್ಲೂ ಈ ‘ನೆಗೆಟಿವ್’ ಥಾಟ್ಸ್ ಇದ್ದೇಇದೆ. ಆದರೆ ‘ಪಾಸಿಟಿವ್ ಮೆಂಟಲ್ ಹೆಲ್ತ್’ ಇರುವವರು ಇಂಥ ಯೋಚನೆ ಬಂದಾಗ ಅದನ್ನು ಮರುಚಿಂತನೆಗೆ ಹಚ್ಚಿಕೊಳ್ಳುತ್ತಾರೆ. ತಮ್ಮನ್ನೇ ವಿಮರ್ಶೆ ಮಾಡಿಕೊಳ್ಳುತ್ತಾರೆ ಮತ್ತು ನೇತ್ಯಾತ್ಮಕ ಚಿಂತನೆಗಳನ್ನು ದೂರ ಸರಿಸುವಲ್ಲಿ ಯಶಸ್ವಿಯಾಗುತ್ತಾರೆ.

ಈ ಬಾರಿಯ ಕೌನ್ಸೆಲಿಂಗ್ ಟ್ರೖೆನಿಂಗ್ ಕೋರ್ಸ್ನ ಶಿಕ್ಷಾರ್ಥಿಗಳಿಗೆ ಪಾಠ ಮಾಡುತ್ತಾ ‘ರೈಟಿಂಗ್ ಥೆರಪಿ’ಯ ಬಗ್ಗೆ ಹೇಳಿದೆ. ಅಲ್ಲಿದ್ದ ಒಬ್ಬ ಚುರುಕು ಮಹಿಳೆ ತಾವು ಓದಿದ ಒಂದು ಸಣ್ಣಕತೆಯನ್ನು ಹೇಳಿದರು. ಅದು ‘ಪಾಸಿಟಿವ್ ಮೈಂಡ್’ ಹೇಗೆ ತನ್ನ ನೆಗೆಟಿವಿಟಿಯನ್ನು ದೂರಮಾಡಿಕೊಳ್ಳುತ್ತದೆ ಎನ್ನುವ ಸಂದೇಶ ಕೊಟ್ಟಿದ್ದರಿಂದ ಆ ಕತೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಒಬ್ಬ ತಾಯಿ ತನ್ನ ಮಗಳನ್ನು ವಿದೇಶದಲ್ಲಿರುವ ವರನಿಗೆ ಕೊಟ್ಟು ಮದುವೆ ಮಾಡಿ, ಆಕೆ ತನ್ನ ಗಂಡನ ಮನೆಗೆ ಹೊರಟಾಗ ಒಂದು ಚಿಕ್ಕ ಪುಸ್ತಕವನ್ನು ಕೊಟ್ಟು ‘ಬ್ಯಾಂಕ್ನಲ್ಲಿ ಖಾತೆ ತೆರೆದು, ನಿನಗೆ ಸಂತೋಷವಾದಾಗಲೆಲ್ಲಾ ಆ ಖಾತೆಗೆ ಒಂದು ಡಾಲರ್ ಹಾಕು; ಈ ಚಿಕ್ಕ ಪುಸ್ತಕದಲ್ಲಿ, ಯಾಕೆ ಡಾಲರ್ ಹಾಕಿದೆ ಎನ್ನುವ ಕಾರಣವನ್ನೂ ಬರೆದಿಡು’ ಎಂದರಂತೆ. ದೂರದ ಊರಿನಲ್ಲಿರುವ ಅಮ್ಮನನ್ನು ನೆನೆಯುತ್ತಾ ಮಗಳು ತನಗೆ ಸಂತೋಷವಾದಾಗಲೆಲ್ಲಾ ಪುಸ್ತಕದಲ್ಲಿ ಬರೆದಿಡುತ್ತಾ, ಬ್ಯಾಂಕ್ ಖಾತೆಗೆ ಡಾಲರ್ ಕಟ್ಟುತ್ತಾ ಇದ್ದಳಂತೆ. ಹಲವು ವರ್ಷಗಳ ನಂತರ ಗಂಡ ಹೆಂಡತಿಗೆ ಜಗಳವಾಯಿತು. ‘ಇನ್ನು ಇವನೊಂದಿಗೆ ಬಾಳಲು ಸಾಧ್ಯವೇ ಇಲ್ಲ’ ಎಂದು ಭಾರತದಲ್ಲಿದ್ದ ತಾಯಿಗೂ ಹೇಳಿ ಆಯಿತು. ತಾಯಿ ಹೇಳಿದರು ‘ಸರಿ, ನೀನು ಇಲ್ಲಿಗೆ ಬಂದುಬಿಡು. ಬರುವಾಗ, ನೀನು ಬ್ಯಾಂಕ್ನಲ್ಲಿ ಹಣವಿಟ್ಟಿದ್ದೀಯಲ್ಲ ಅದನ್ನೂ ಮರೆಯದೇ ತೆಗೆದುಕೊಂಡು ಬಾ’. ಮಗಳು ಬ್ಯಾಂಕ್ನಲ್ಲಿ ಹಣ ಎಷ್ಟು ಜಮಾ ಆಗಿದೆಯೆಂದು ಪಾಸ್ಬುಕ್ನಲ್ಲಿ ದಾಖಲಿಸಿರಲಿಲ್ಲವಾದ್ದರಿಂದ ತಾನು ಬರೆದಿದ್ದ ಚಿಕ್ಕ ಪುಸ್ತಕವನ್ನೇ ಹಿಡಿದು ‘ದಾರಿಯಲ್ಲಿ ಲೆಕ್ಕ ಮಾಡಿಕೊಂಡರಾಯಿತು’ ಎಂದುಕೊಂಡಳು.

ಟಾಕ್ಸಿಯಲ್ಲಿ ಕುಳಿತು ದಾರಿಯಲ್ಲಿ ಆ ಚಿಕ್ಕ ಪುಸ್ತಕವನ್ನು ತೆರೆದು ಓದುತ್ತಾಹೋದಳು. ಗಂಡ ತಂದುಕೊಟ್ಟ ಸರ್ಪ್ರೖೆಸ್ ಗಿಫ್ಟ್ಗಳು, ಮದುವೆಯಾದ ನಂತರದ ಅವಳ ಮೊದಲ ಹುಟ್ಟಿದ ಹಬ್ಬವನ್ನು ಒಂದು ವಾರ ಆಚರಿಸಿದ್ದು, ಅವಳಿಗೆ ಜ್ವರ ಬಂದಾಗ ಅವನು ಕಕ್ಕುಲತೆಯಿಂದ ನೋಡಿಕೊಂಡ ರೀತಿ, ಅವಳ ತಪ್ಪುಗಳನ್ನೆಲ್ಲಾ ಅವನು ಕ್ಷಮಿಸುತ್ತಿದ್ದ ಪರಿ- ಎಲ್ಲವೂ ಅದರಲ್ಲಿ ದಾಖಲಾಗಿದ್ದವು. ಆಗ ಅವಳಿಗೆ ‘ಇಷ್ಟೊಂದು ಸುಂದರವಾಗಿದ್ದ ನಮ್ಮ ದಾಂಪತ್ಯವನ್ನು ನಾನ್ಯಾಕೆ ಹುಚ್ಚಳಂತೆ ಹಾಳುಗೆಡವಿಕೊಳ್ಳುತ್ತಿದ್ದೇನೆ’ ಎಂದು ಅನ್ನಿಸಿ, ಬ್ಯಾಂಕಿನಲ್ಲಿನ ಹಣ ತೆಗೆಯದೇ ವಾಪಸ್ ಬಂದಳು. ಗಂಡನಿಗೆ ಆ ಚಿಕ್ಕ ಪುಸ್ತಕವನ್ನು ಕೊಡುತ್ತಾ ‘ಯಾವ ಯಾವ ಕಾರಣಕ್ಕೋ ಬ್ಯಾಂಕಿನಲ್ಲಿ ಒಂದಿಷ್ಟು ಹಣ ಹಾಕಿದ್ದೇನೆ; ನಿನಗೆ ಬೇಕಾದರೆ ತೆಗೆದುಕೋ’ ಎಂದಳು. ಗಂಡನೂ ಆ ಪುಸ್ತಕವನ್ನು ಓದಿದ. ಆಗ ಅವನಿಗೆ ಅನ್ನಿಸಿತು- ‘ಇಂಥ ಒಳ್ಳೆಯ ಹೆಂಡತಿಯನ್ನು ನಾನು ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಅಂತ. ಅವನು ‘ಸಾರಿ’ ಕೇಳಿದ; ಅವಳೂ ‘ಸಾರಿ’ ಎಂದಳು! ಡಾಲರ್ ಹಣ ಬ್ಯಾಂಕಿನಲ್ಲೇ ಉಳಿಯಿತು!!

ಈ ಮೇಲಿನ ಕತೆ ಓದಿದ ಮೇಲೆ ಹೆಚ್ಚಿನ ವಿವರಣೆ ಕೊಡುವ ಅಗತ್ಯವಿಲ್ಲ, ಅಲ್ಲವೇ?

Leave a Reply

Your email address will not be published. Required fields are marked *

Back To Top