Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಕೊರಗುವ ಬದಲು ಆತ್ಮಬಲ ಬೆಳೆಸಿಕೊಳ್ಳಿ…

Saturday, 01.04.2017, 10:25 AM       No Comments

ವಯಸ್ಸಾಗುತ್ತ ಹೋದಂತೆ ಪರಾವಲಂಬನೆಯೂ ಹೆಚ್ಚುತ್ತ ಹೋಗುವುದು ವೃದ್ಧರು ಅನಿವಾರ್ಯವಾಗಿ ಎದುರಿಸಬೇಕಾಗಿ ಬರುವ ಪರಿಸ್ಥಿತಿ. ಆದರೆ ಬಯಸಿದ ನೆರವಿನ ಊರುಗೋಲು ಸಿಗದ ಪಕ್ಷದಲ್ಲಿ ಅವರಲ್ಲಿ ಅಸಹಾಯಕತೆ ಮನೆಮಾಡಬಹುದು. ಹಾಗಂತ ವೃದ್ಧರು ಧೃತಿಗೆಡದೆ ಆತ್ಮಬಲವನ್ನು ಹೆಚ್ಚಿಸಿಕೊಳ್ಳುತ್ತ ಹೋದರೆ, ಎಂಥದೇ ಪರಿಸ್ಥಿತಿಯಲ್ಲೂ ಅದು ಔಷಧವಾಗಿ ಪರಿಣಮಿಸಬಲ್ಲದು.

 ಕೆಲವು ದಿನಗಳ ಹಿಂದೆ ಒಂದು ವಿಡಿಯೋ ನೋಡಿದೆ. 78ರ ಮಹಿಳೆಯೊಬ್ಬರು ತನ್ನ ವಯಸ್ಸಿಗಿಂತ ಅರ್ಧದಷ್ಟಿದ್ದ ವ್ಯಕ್ತಿಗಳ ಜತೆಯಲ್ಲಿ ಮ್ಯಾರಥಾನ್ ಓಡುತ್ತಿದ್ದರು. ಕೃಶಾಂಗಿಯೂ, ಐದೇ ಅಡಿ ಎತ್ತರದವರೂ ಆದ ಆಕೆಯ ಓಟವಂತೂ ಬೆಕ್ಕಸ ಬೆರಗಾಗಿ ನೋಡುವಂತಿತ್ತು. ಒಂದಿಷ್ಟಾದರೂ ಏದುಸಿರಿಲ್ಲ; ಅಲ್ಲಲ್ಲಿ ನಿಲ್ಲುವ, ಶರೀರವನ್ನು ಬಗ್ಗಿಸುವ ಮಾತೇ ಇಲ್ಲ. ಒಂದೇ ಲಯ, ಒಂದೇ ರೀತಿಯ ಓಟ. ಆಕೆಯ ಅಕ್ಕಪಕ್ಕದಲ್ಲಿದ್ದ ವ್ಯಕ್ತಿಗಳು ಓಡಲು ಕಷ್ಟಪಡುತ್ತಿದ್ದಾರೇನೋ ಎನಿಸುತ್ತಿತ್ತು. ನಂತರ ಆಕೆಯ ಸಂದರ್ಶನವಿತ್ತು. ಅದರಲ್ಲಿ ಆಕೆ ಹೇಳಿದ ಮುಖ್ಯವಾದ ಮಾತುಗಳಿವು- ‘‘ನಾನು ಬಾಲ್ಯದಿಂದಲೂ ಈ ಮ್ಯಾರಥಾನ್ ಓಟವನ್ನು ಇಷ್ಟಪಟ್ಟು ಓಡುತ್ತಿದ್ದೇನೆ. ಚಿಕ್ಕವಯಸ್ಸಿನಲ್ಲಿ ಮತ್ತು ಯೌವನದಲ್ಲಿ ಬಹಳಷ್ಟು ಮ್ಯಾರಥಾನ್​ಗಳಲ್ಲಿ ಭಾಗವಹಿಸುತ್ತಿದ್ದೆ. ಈಗ ವಯಸ್ಸಾಗಿದೆ. ಆದರೂ ವರ್ಷಕ್ಕೊಮ್ಮೆ ಭಾಗವಹಿಸುವುದನ್ನು ಬಿಡುವುದಿಲ್ಲ. ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಂಡು, ‘ನಾನು ಓಡುವುದಕ್ಕೆ ಸಮರ್ಥಳಾಗಿದ್ದೇನೆ’ ಎಂದು ಅವರು ಹೇಳಿದ ಮೇಲೆಯೇ ನನ್ನ ಹೆಸರನ್ನು ಇಲ್ಲಿ ದಾಖಲಿಸುತ್ತೇನೆ’’.

ವಾಸ್ತವದ ಅರಿವು: ಇದು ವಯಸ್ಸನ್ನು ಕೇವಲ ಒಂದು ಸಂಖ್ಯೆ ಎಂದು ಪರಿಗಣಿಸಿ ತಮ್ಮನ್ನು ತಾವು ವಾಸ್ತವದ ಜತೆಯಲ್ಲಿ ಹೊಂದಿಸಿಕೊಂಡು ಬದುಕುವ ವೃದ್ಧಾಪ್ಯದ ವರ್ಗ. ಈ ಗುಂಪಿನ ಜನ ತುಂಬ ಒಳ್ಳೆಯ ‘ಪಾಸಿಟಿವ್ ಮೆಂಟಲ್ ಹೆಲ್ತ್’ ಹೊಂದಿರುತ್ತಾರೆ. ತಾವು ಕಳೆದ ಬದುಕಿನ ಬಗ್ಗೆ ತೃಪ್ತಿಯನ್ನು ಹೊಂದಿರುತ್ತಾರೆ. ಯಾವುದೇ ಗೊಣಗಾಟವಿಲ್ಲದೆ ವಾಸ್ತವವನ್ನು ಎದುರಿಸುತ್ತಾರೆ. ತಮ್ಮ ಮನೆಯ ಸದಸ್ಯರ ಬಗ್ಗೆ ಮತ್ತು ಸಮಾಜದ ಬಗ್ಗೆ ಒಲವು ಹಾಗೂ ಗೌರವವನ್ನು ಸದಾ ತೋರಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಸುತ್ತಲಿನ ಸಮಾಜವೂ ಮತ್ತು ಮನೆಯ ಸದಸ್ಯರೂ ಇವರನ್ನು ಗೌರವಿಸುವ ವಾತಾವರಣವನ್ನು ಇವರೇ ಸೃಷ್ಟಿಸಿಕೊಂಡಿರುತ್ತಾರೆ. ಸ್ವಲ್ಪ ಕಣ್ಣುಬಿಟ್ಟು ನೋಡಿದರೆ ನಮ್ಮ ಸುತ್ತಲೂ ಇಂಥ ಎಷ್ಟೊಂದು ಜನರಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಇಂದಿಗೂ ತಮ್ಮ ನೆನಪಿನ ಗಣಿಯನ್ನು ಜೋಪಾನವಾಗಿಯೂ, ಸದಾ ಜಾಗೃತವಾಗಿಯೂ ಇಟ್ಟುಕೊಂಡಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ದೇಶದ ಕೆಲಸವೆಂದರೆ ಸರಿರಾತ್ರಿಯಲ್ಲೂ ತಯಾರಾಗಿಯೇಬಿಡುವ ಎಚ್.ಎಸ್. ದೊರೆಸ್ವಾಮಿಯವರು, ಶರೀರ ಬಾಗಿದ್ದರೂ ವಿದ್ಯಾರ್ಥಿಗಳ ಬಗ್ಗೆಯೇ ಚಿಂತಿಸುವ ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು, ಒಬ್ಬರೇ? ಇಬ್ಬರೇ? ಇವರೆಲ್ಲ ವೃದ್ಧರಿಗಷ್ಟೇ ಅಲ್ಲ, ಎಲ್ಲ ವಯಸ್ಸಿನ ಮನುಷ್ಯರಿಗೂ ಆದರ್ಶಪ್ರಾಯರೇ!

94 ವರ್ಷ ವಯಸ್ಸಿನ ನಮ್ಮ ಪರಿಚಿತರೊಬ್ಬರು ಮೃತ್ಯುಂಜಯ ಹೋಮವನ್ನು ಏರ್ಪಡಿಸಿ ತುಂಬಾ ಜನರನ್ನು ಆಹ್ವಾನಿಸಿದ್ದರು. ಅವರ ಮನೆಯ ಜನರೂ ತುಂಬಾ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಬಂದ ನೆಂಟರಲ್ಲಿ ಕೆಲವರು ಕುಹಕಿಗಳು ‘ಈ ಮುದುಕಪ್ಪನಿಗೆ ಇನ್ನೂ ಬದುಕುವ ಆಸೆ ನೋಡು’ ಎಂದು ಪಿಸುನುಡಿಯಲ್ಲಿ ಮಾತಾಡಿಕೊಂಡರು. ಬಹುಶಃ ಆ ವೃದ್ಧರಿಗೆ ಹೀಗೊಂದು ‘ಮಾತು’ ಬರಬಹುದು ಎನ್ನುವ ಊಹೆ ಇತ್ತೇನೋ. ಹೋಮವೆಲ್ಲಾ ಮುಗಿದ ಮೇಲೆ, ಅಲ್ಲಿ ನೆರೆದಿದ್ದ ನೆಂಟರು ಮತ್ತು ಆಹ್ವಾನಿತರನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನಾಡಿದ ಅವರು, ‘‘ಈ ಮೃತ್ಯುಂಜಯ ಹೋಮ ಮಾಡುವುದು ‘ಸಾವನ್ನು ಗೆದ್ದು ಶಾಶ್ವತವಾಗಿ ಇಲ್ಲೇ ಇದ್ದುಬಿಡಬೇಕೆಂಬ’ ಕುತ್ಸಿತ ಮನೋಭಾವದಿಂದಲ್ಲ. ಸಾವನ್ನು ಯಾರೂ ಜಯಿಸುವುದಕ್ಕಾಗುವುದಿಲ್ಲವೆಂಬ ಸತ್ಯ ಸಣ್ಣ ಮಕ್ಕಳಿಗೂ ತಿಳಿದಿರುತ್ತದೆ. ನಾವು ಜಯಿಸಬೇಕಾಗಿರುವುದು ಸಾವನ್ನಲ್ಲ; ಕೊನೆಯ ಹಂತದಲ್ಲಿ ರೋಗಗಳು ಈ ದೇಹವನ್ನು ಆಕ್ರಮಿಸಿ ‘ಇತ್ತ ಸಾವೂ ಬರದೆ, ಅತ್ತ ನೋವುಗಳೂ ಅಧಿಕವಾಗಿ ಶರೀರವನ್ನು ಬಾಧಿಸುವ ಸ್ಥಿತಿ’ ಬರುತ್ತದೆಯಲ್ಲ? ಅದನ್ನು ಜಯಿಸಲು ಶಕ್ತಿಕೊಡು ಎಂದು ಭಗವಂತನಲ್ಲಿ ಬೇಡಲು. ನಾನಿವತ್ತು ಮಾಡಿದ ಹೋಮದಲ್ಲಿ ಪಠಿಸಲಾದ ಪ್ರತಿಯೊಂದು ಮಂತ್ರದ ಅರ್ಥವನ್ನೂ ತಿಳಿದುಕೊಂಡಿದ್ದೇನೆ. ಇದುವರೆವಿಗೂ ಆರೋಗ್ಯವಾಗಿದ್ದ ಈ ನನ್ನ ದೇಹಕ್ಕೆ ಯಾವ ರೋಗವಾದರೂ ಬರಲಿ, ಎದುರಿಸುತ್ತೇನೆ. ನನ್ನ ಆತ್ಮಬಲ ಹೆಚ್ಚಾಗಿದೆ’’ ಎಂದರು.

ಅರ್ಥಪೂರ್ಣ ಬದುಕಿಗೊಂದು ಮಾದರಿ: ಇಂಥದೇ ಆತ್ಮಬಲವಿದ್ದ ಮಹಿಳೆಯೊಬ್ಬರನ್ನು ನಾನು ಬಾಲ್ಯದಲ್ಲಿ ನೋಡಿದ್ದೆ. ಆಗ ಬೆಂಗಳೂರಿನಲ್ಲಿ ಅಲ್ಲಲ್ಲಿ ಕೊಳೆಗೇರಿ ಪ್ರದೇಶಗಳು ಇದ್ದವು. ಈ ಮಹಿಳೆಗೆ ತಮ್ಮ ಅರವತ್ತೈದನೇ ವಯಸ್ಸಿನಲ್ಲಿ ‘ಏನಾದರೂ ಸಮಾಜಸೇವೆ ಮಾಡಬೇಕು’ ಎನಿಸಿತಂತೆ. ಆಕೆಗೆ ವಿದ್ಯಾಭ್ಯಾಸದ ಬಲ ಅಷ್ಟಿರಲಿಲ್ಲ. ಸಂಗೀತ ಇತ್ಯಾದಿ ಕಲೆಗಳು ಗೊತ್ತಿರಲಿಲ್ಲ. ಆದರೂ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎನ್ನುವ ತವಕ. ಕಡೆಗೆ ತಾವೇ ಒಂದು ದಾರಿಯನ್ನು ಹುಡುಕಿಕೊಂಡರು. ಸಂಜೆಯಾಗುತ್ತಲೇ ಒಂದು ಸೋಪು, ಕೊಬ್ಬರಿಎಣ್ಣೆಯ ಒಂದು ಸಣ್ಣ ಬಾಟಲಿ, ಒಂದು ಬಾಚಣಿಗೆ ಮತ್ತು ಟವೆಲ್ ಹಿಡಿದು ಹೊರಡುತ್ತಿದ್ದರು. ಅವರು ತಲುಪುತ್ತಿದ್ದುದು ಒಂದು ಕೊಳೆಗೇರಿ ಪ್ರದೇಶಕ್ಕೆ. ಅಲ್ಲಿ ಆಡುತ್ತಿದ್ದ ಮಕ್ಕಳನ್ನು ಪ್ರೀತಿಯಿಂದ ಕರೆದು ಬೀದಿನಲ್ಲಿಯಲ್ಲಿ ಮುಖ ತೊಳೆಯುತ್ತಿದ್ದರು. ತಲೆಗೆ ಎಣ್ಣೆಹಾಕಿ ಚೆನ್ನಾಗಿ ತಲೆಬಾಚಿ ಅಲ್ಲಿ ಸೇರಿದ್ದ ಹೇನು ಇತ್ಯಾದಿಗಳನ್ನು ತೆಗೆದು ಶುಚಿಮಾಡುತ್ತಿದ್ದರು. ಕೊಳಕು ಕೊಳಕಾಗಿ ಕಾಣುತ್ತಿದ್ದ ಗಂಡು ಮತ್ತು ಹೆಣ್ಣುಮಕ್ಕಳು ಚೆನ್ನಾಗಿ ಕಾಣಲು ತೊಡಗಿದವು. ಕೂಲಿಗೆ ಹೋದ ಅವರ ಅಪ್ಪ-ಅಮ್ಮಂದಿರೂ ಶುಚಿಯಾಗಿರುವ ತಮ್ಮ ಮಕ್ಕಳನ್ನು ಕಂಡು ಖುಷಿಯಾಗುತ್ತಿದ್ದರು. ಒಂದೆರಡು ತಿಂಗಳಲ್ಲೇ ಆ ಮಕ್ಕಳು ಇವರು ಬರುವ ವೇಳೆಗೆ ತಾವೇ ಮುಖ ತೊಳೆದುಕೊಂಡು ತಲೆ ಬಾಚಿಕೊಂಡು ಶುಭ್ರವಾಗಿ ಇವರನ್ನು ಎದುರುಗೊಳ್ಳುತ್ತಿದ್ದರು. ಅಲ್ಲಿಗೆ ಮಕ್ಕಳಿಗೆ ಶುಚಿತ್ವದ ಅರಿವಾಗಿರುತ್ತಿತ್ತು. ಈ ಮಹಿಳೆ ಆ ಕೊಳೆಗೇರಿ ಬಿಟ್ಟು, ಕೊಳಕು ಮಕ್ಕಳಿರುವ ಮತ್ತೊಂದು ಕೊಳೆಗೇರಿಗೆ ಹೊರಡುತ್ತಿದ್ದರು! ಹೀಗೆ ಅವರು ಹನ್ನೆರಡು ವರ್ಷಗಳ ಕಾಲ ಅನೇಕ ಕೊಳೆಗೇರಿಗಳ ಮಕ್ಕಳಿಗೆ ಶುಚಿತ್ವ ಕಲಿಸಿದರು. ಅಷ್ಟೇ ಅಲ್ಲ, ಸಣ್ಣ ಸಣ್ಣ ಕತೆಗಳನ್ನು ಹೇಳಿ ಒಳ್ಳೆಯ ನಡವಳಿಕೆಗಳನ್ನೂ ಕಲಿಸಿದರು. ವೃದ್ಧಾಪ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಬೇಕಾದಷ್ಟು ದಾರಿಗಳಿವೆ ಎನ್ನುವುದನ್ನು ಈಕೆ ತೋರಿಸಿಕೊಟ್ಟರು. ಇವತ್ತು ಅನೇಕ ವೃದ್ಧರು ಇಂಥ ಆತ್ಮಬಲವಿಲ್ಲದೆ ಕೊರಗುತ್ತಿರುವುದು ನಿಜಕ್ಕೂ ದುರಂತವೆನಿಸುತ್ತದೆ.

ಇದು ಈ ಅಂಕಣದಲ್ಲಿನ ನನ್ನ ಐವತ್ತೊಂದನೇ ಲೇಖನ. ನೆಮ್ಮದಿಯ ಬದುಕನ್ನು ಹುಡುಕಿಕೊಳ್ಳಲು ನನ್ನ ಆಪ್ತಸಲಹೆಯ ಅನುಭವದಿಂದ ಮತ್ತು ಓದಿನ ಆಧಾರದಿಂದ ಅನೇಕ ವಿಷಯಗಳ ಬಗ್ಗೆ ಬರೆದೆ. ಇದರಲ್ಲಿ ಪುಟ್ಟಮಕ್ಕಳ ತಂದೆ-ತಾಯಿಯರನ್ನು ಗುರಿಯಾಗಿಸಿಕೊಂಡದ್ದರಿಂದ ಹಿಡಿದು, ಹದಿಹರೆಯ, ಪ್ರೌಢಾವಸ್ಥೆ, ಉದ್ಯೋಗದ ಒತ್ತಡ ಈ ಎಲ್ಲ ವಿಷಯಗಳೂ ಹಾದುಹೋದವು. ಇವೆಲ್ಲಕ್ಕೂ ಒಳ್ಳೆಯ ಪ್ರತಿಕ್ರಿಯೆಗಳೇ ಬಂದವು. ಆದರೆ ನಾನು ಯಾವಾಗ ವೃದ್ಧರ ಬಗ್ಗೆ ಬರೆಯತೊಡಗಿದೆನೋ ನನಗೆ ಬರುವ ಪತ್ರ ಮತ್ತು ಇ-ಮೇಲ್​ಗಳ ಸಂಖ್ಯೆ ದುಪ್ಪಟ್ಟಾಯಿತು!!

ಹೆಚ್ಚುತ್ತಿದೆ ವೃದ್ಧರ ಸಂಖ್ಯೆ: ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಇವತ್ತು ನಮ್ಮ ಸಮಾಜದಲ್ಲಿ ಪ್ರತಿಮನೆಯಲ್ಲೂ ವೃದ್ಧರ ಸಮಸ್ಯೆ ಇದೆ. ಸುಮಾರು ಇಪ್ಪತ್ತು ವರ್ಷಗಳ ಕೆಳಗೆ ಬೆಂಗಳೂರಿನ ಬಡಾವಣೆಯೊಂದರಲ್ಲಿ ವೃದ್ಧರಿಗಾಗಿ ‘ಡೇ ಕೇರ್ ಸೆಂಟರ್’ ಒಂದು ಪ್ರಾರಂಭವಾಯಿತು. ಅದರ ಜಾಹೀರಾತಿನ ಪತ್ರವೊಂದು ನನಗೆ ಸಿಕ್ಕಾಗ ತುಂಬಾ ಆಶ್ಚರ್ಯವಾಯಿತು. ಆಗ ನಾನು ಹವ್ಯಾಸಿ ಪತ್ರಕರ್ತೆಯಾಗಿ ಅನೇಕ ದಿನಪತ್ರಿಕೆ, ವಾರಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದೆ. ಇದೊಂದು ಹೊಸಬಗೆಯ ‘ಸ್ಟೋರಿ’ ಆಗುತ್ತದಲ್ಲಾ ಎನಿಸಿ ಆ ‘ಡೇ ಕೇರ್ ಸೆಂಟರ್’ ಗೆ ಹೋದೆ. ಅಲ್ಲಿ ವಿಷಯ ಸಂಗ್ರಹಿಸಿ ಲೇಖನ ಬರೆಯುವ ಮೊದಲು, ಭಾರತದಲ್ಲಿ ಇನ್ನೆಲ್ಲೆಲ್ಲಿ ಇಂಥ ‘ಸೆಂಟರ್’ಗಳಿವೆಯೆಂದು ಅಂತರ್ಜಾಲದಲ್ಲಿ ತಡಕಾಡುತ್ತಿದ್ದಾಗ ದೆಹಲಿಯ ಸಮಾಜಶಾಸ್ತ್ರಜ್ಞರೊಬ್ಬರು ಈ ವಿಷಯದ ಬಗ್ಗೆ ಬರೆದ ಲೇಖನವೊಂದು ಸಿಕ್ಕಿತು. ಆತ ಇದರ ಅಗತ್ಯವನ್ನು ಬಹಳ ತರ್ಕಬದ್ಧವಾಗಿ ಸಮರ್ಥಿಸಿಕೊಳ್ಳುತ್ತಾ ‘2050ರ ಹೊತ್ತಿಗೆ ಭಾರತದ ಮೊದಲ ಸಮಸ್ಯೆ ಹಸಿವಿನದಲ್ಲ, ನೀರಿನದಲ್ಲ, ಭ್ರಷ್ಟಾಚಾರದ್ದಲ್ಲ; ಬದಲಿಗೆ ವೃದ್ಧಾಪ್ಯದ್ದು’ ಎಂದು ಎಚ್ಚರಿಸುತ್ತಾರೆ.

ಅವರು ಮುಂದುವರಿದು, ‘ಔಷಧಗಳ ಗುಣಮಟ್ಟ ಹೆಚ್ಚುತ್ತಿರುವುದರಿಂದ, ಕಾಲರಾ, ಪ್ಲೇಗು ಇತ್ಯಾದಿ ರೋಗಗಳ ನಿಮೂಲನವಾಗಿರುವುದರಿಂದ ಗುಂಪುಗುಂಪಿನಲ್ಲಿ ಸಾಯುತ್ತಿದ್ದವರ ಸಂಖ್ಯೆ ಕಡಿಮೆಯಾಗುತ್ತದೆ. ಭಾರತದ ಮನುಷ್ಯನ ಆಯುಷ್ಯ ಸರಾಸರಿ ಅರವತ್ತು ವರ್ಷ ಇದ್ದದ್ದು ಎಪ್ಪತ್ತು, ಎಂಭತ್ತಕ್ಕೆ ಏರುತ್ತದೆ. ಕೂಡುಕುಟುಂಬಗಳ ನಾಶವಾಗಿ, ಹೆತ್ತವರನ್ನು

ಮಕ್ಕಳು ನೋಡಿಕೊಳ್ಳಬೇಕು ಎನ್ನುವ ನೈತಿಕಮೌಲ್ಯ ನಶಿಸಿಹೋಗಿ, ಮನೆಮನೆಯಲ್ಲೂ ವೃದ್ಧರು ಪರದಾಡುವಂತಾಗುತ್ತದೆ. ಒಂಟಿ ವೃದ್ಧರ ಕೊಲೆ, ಸಾವು ಹೆಚ್ಚುತ್ತದೆ; ಅನಾಥಾಶ್ರಮಗಳಲ್ಲಿ ವೃದ್ಧರ ಸಂಖ್ಯೆ ಏರುತ್ತದೆ. ಬೀದಿಬೀದಿಯಲ್ಲಿ ವೃದ್ಧರು ವಾಹನಗಳ ದಟ್ಟಣೆಯಲ್ಲಿ ಓಡಾಡಲಾರದೆ ಕುಸಿಯುತ್ತಾರೆ. ಸರ್ಕಾರಕ್ಕೆ ವೃದ್ಧರ ಸಮಸ್ಯೆಯೇ ಬಹಳ ದೊಡ್ಡ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ!

ಈಗೆರಡು ಲೇಖನಗಳ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಅವರ ಭವಿಷ್ಯ ನಿಜವಾಗುತ್ತಿದೆಯಲ್ಲಾ ಎನ್ನುವ ಭಯ ಕಾಡುತ್ತದೆ. ಬಹಳಷ್ಟು ಜನ ವೃದ್ಧಾಶ್ರಮದ ವಿಳಾಸ ಕೇಳಿದ್ದಾರೆ. ನನ್ನ ಹತ್ತಿರ ಯಾವ ವಿಳಾಸವೂ ಇಲ್ಲ. ‘ಗೂಗಲ್ ಸರ್ಚ್’ನಲ್ಲಿ ಪ್ರಯತ್ನಪಟ್ಟರೆ ಸಿಗಬಹುದು. ನೀವು ಬರೆದಿರುವ ಎಲ್ಲ ಸಮಸ್ಯೆಗೂ ನಿಮ್ಮ ‘ತಾಳ್ಮೆ ಮತ್ತು ಕರುಣೆ’ ಎನ್ನುವ ಎರಡು ದಿವ್ಯ ಔಷಧಗಳೇ ಪರಿಹಾರ. ಈ ವಯಸ್ಸಿನಲ್ಲಿ ವೃದ್ಧರ ಮನಸ್ಸನ್ನು (ಭಾವನೆಗಳು) ಮತ್ತು ಬುದ್ಧಿಯನ್ನು (ವೈಚಾರಿಕತೆ ) ತಿದ್ದಲಾಗುವುದಿಲ್ಲ, ಬದಲಾಯಿಸಲಾಗುವುದಿಲ್ಲ. ಇದು ವೈಜ್ಞಾನಿಕ ಸತ್ಯ ಎನ್ನುವುದನ್ನು ಅರಿತರೆ, ನಿಮ್ಮ ಚಿಂತನಾಧಾಟಿ ಬದಲಾಗಬಹುದು ಮತ್ತು ನಿಮ್ಮ ‘ಪಾಸಿಟಿವ್ ಮೆಂಟಲ್ ಹೆಲ್ತ್’ನ ಬಲದಿಂದ ಬದಲಿ ದಾರಿಗಳು ನಿಮಗೇ ಖಂಡಿತಾ ಗೋಚರಿಸಬಹುದು.

Leave a Reply

Your email address will not be published. Required fields are marked *

Back To Top