Friday, 20th April 2018  

Vijayavani

ಕಾಂಗ್ರೆಸ್​​​​​​​ನಿಂದ ಬಿಜೆಪಿಯತ್ತ ನಾಯಕರ ಜಿಗಿತ - ಎನ್​​.ವೈ.ಗೋಪಾಲಕೃಷ್ಣ ಬಿಜೆಪಿಗೆ ಸೇರ್ಪಡೆ - ಪಕ್ಷಕ್ಕೆ ಬರಮಾಡಿಕೊಂಡ ಬಿಎಸ್​ವೈ        ಶುಭ ಶುಕ್ರವಾರದಂದು ನಾಮಪತ್ರ ಪರ್ವ - ಮೈಸೂರಿನಲ್ಲಿ ಸಿಎಂರಿಂದ ಉಮೇದುದಾರಿಕೆ - ರಾಮನಗರ, ಚನ್ನಪಟ್ಟಣದಿಂದ ಎಚ್​ಡಿಕೆ ನಾಮಿನೇಷನ್​        ಮತಕೇಳಲು ಹೋದ ನಾಯಕರಿಗ ತರಾಟೆ - ಕೊಪ್ಪಳದಲ್ಲಿ ಶಿವರಾಜ ತಂಗಡಗಿಗೆ ಜನರ ಕ್ಲಾಸ್ - ಮಾನ್ವಿಯಲ್ಲಿ ಹಂಪಯ್ಯಗೆ ನೀರಿಳಿಸಿದ ಮತದಾರ        ರಾತ್ರೋರಾತ್ರಿ ಕೋಟಿ ಕೋಟಿ ಸಾಗಾಟ - ಅನುಮಾನಾಸ್ಪದವಾಗಿ ಬ್ಯಾಂಕ್​​​ ವಾಹನದ ಓಡಾಟ - ಮಂಡ್ಯ ಪೊಲೀಸರಿಂದ 20 ಕೋಟಿ ಹಣ ಸೀಜ್​​​​        ದಶಕಗಳಿಂದ ಆ ಹೆಸರಿನವ್ರದ್ದೇ ಪಾರುಪತ್ಯ - ಗೆದ್ದವರಿಗೆ ಶಕ್ತಿಸೌಧದಲ್ಲೂ ಆತಿಥ್ಯ - ವಿಜಯಪುರದಲ್ಲಿ ಪಾಟೀಲರದ್ದೇ ಅಧಿಪತ್ಯ        ಕೊನೆಗೂ ಮೌನ ಮುರಿದ ಪವರ್​ಸ್ಟಾರ್​ - ನನ್ನ ತಾಯಿ ಮರ್ಯಾದೆ ಕಾಪಾಡದಿದ್ರೆ ನಾನು ವೇಸ್ಟ್​ - ಬದುಕಿದ್ದೂ ಸತ್ತಂತೆ ಎಂದು ಪವನ್ ಟ್ವೀಟ್​​       
Breaking News

ಕೈನಲ್ಲಿ ನಾಯಕತ್ವದ್ದೇ ಗೊಂದಲ

Monday, 15.05.2017, 3:00 AM       No Comments

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಸಾಮೂಹಿಕ ನಾಯಕತ್ವವೋ ಅಥವಾ ಏಕ ನಾಯಕತ್ವವೋ ಎಂಬ ಬಗ್ಗೆ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಗೊಂದಲ ಬಗೆಹರಿಯುವಂತೆ ಕಾಣುತ್ತಿಲ್ಲ. ‘ನನ್ನದೇ ನಾಯಕತ್ವದಲ್ಲಿ ಚುನಾವಣೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದರೆ, ಹಿರಿಯ ಕಾಂಗ್ರೆಸಿಗರು ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಮಾವೇಶದಲ್ಲಿಯೂ, ಸಿದ್ದರಾಮಯ್ಯ ತಮ್ಮದೇ ನಾಯಕತ್ವ ಎಂದು ಗಟ್ಟಿಯಾಗಿ ಮಾತನಾಡಿದ್ದರು. ಆದರೆ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದಾಗಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಘೊಷಿಸಿದ್ದಾರೆ. ಕಾಂಗ್ರೆಸ್​ನೊಳಗೂ ಇದೇ ಬೇಡಿಕೆ ದಿನೇದಿನೆ ಹೆಚ್ಚುತ್ತಿದೆ.

‘ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಚುನಾವಣಾ ಫಲಿತಾಂಶದ ಬಳಿಕ ಶಾಸಕಾಂಗ ಸಭೆ ಹಾಗೂ ಹೈಕಮಾಂಡ್​ನಿಂದ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ’ ಎಂದು ಬೆಂಗಳೂರಿನಲ್ಲಿ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೂಡ ಎರಡು ವಾರಗಳ ಹಿಂದೆ ಇದೇ ಮಾತನ್ನಾಡಿದ್ದರು. ಹಾಗೆಯೇ ಪಕ್ಷದ ಹಿರಿಯ ಮುಖಂಡ ವಿ.ಆರ್.ಸುದರ್ಶನ್ ಅವರೂ ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆಗೆ ಹೋಗಬೇಕು ಎಂದು ಸಲಹೆ ನೀಡಿದ್ದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದು ಅಭಿಪ್ರಾಯ ಸಂಗ್ರಹಣೆ ಮಾಡುವಾಗಲೂ ಮೂಲ ಕಾಂಗ್ರೆಸಿಗರಿಂದ ಈ ಬಗ್ಗೆ ಅಭಿಪ್ರಾಯ ಕೇಳಿಬಂದಿತ್ತು ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಬೇಕಿರುವ ಪಕ್ಷದ ವರಿಷ್ಠರು, ನಾಯಕತ್ವದ ಬಗೆಗೂ ಸ್ಪಷ್ಟಪಡಿಸಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಖರ್ಗೆ ಹಾಗೂ ಪರಮೇಶ್ವರ್ ಅವರಂಥ ಹಿರಿಯ ನಾಯಕರೇ ಸಾಮೂಹಿಕ ನಾಯಕತ್ವದ ಬಗ್ಗೆ ಮಾತನಾಡಿರುವಾಗ, ಹೈಕಮಾಂಡ್ ಈ ಬಗ್ಗೆ ನಿಲುವು ತಾಳದಿರಲು ಸಾಧ್ಯವಿಲ್ಲ. ಇದೇ ರೀತಿ ಮುಂದಿನ ಮುಖ್ಯಮಂತ್ರಿಯೂ ನಾನೇ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದರು. ರಾಜ್ಯ ಕಾಂಗ್ರೆಸ್​ಗೆ ನೂತನ ಉಸ್ತುವಾರಿ ನೇಮಕವಾದ ಬಳಿಕ, ಸಿದ್ದರಾಮಯ್ಯ ಮಾತು ಬದಲಿಸಿದ್ದಾರೆ.

ಕೇಂದ್ರದ ವಿರುದ್ಧ ಖರ್ಗೆ ಕಿಡಿ

ಕೇಂದ್ರ ಸರ್ಕಾರವು ಆಡಳಿತದ ಪ್ರತಿ ಹಂತದಲ್ಲಿ ಎಡವಿದೆ. ಜಿಡಿಪಿ ಬೆಳವಣಿಗೆಯಾಗಿಲ್ಲ. ಕಲ್ಯಾಣ ಯೋಜನೆಗಳ ಅನುದಾನ ಕಡಿತವಾಗಿದೆ. ಜನಸಾಮಾನ್ಯರ ಮೇಲೆ ಅನವಶ್ಯಕ ಹೊರೆ ಬೀಳುತ್ತಿದೆ. ಕಪ್ಪು ಹಣ ತಂದು ಜನರಿಗೆ ಹಂಚುತ್ತೇನೆ ಎನ್ನುವುದು ಹೇಳಿಕೆಗಷ್ಟೇ ಸೀಮಿತವಾಯಿತು. ಕಡೇ ಪಕ್ಷ ನೋಟು ಅಮಾನ್ಯೀಕರಣದಿಂದ ಎಷ್ಟು ಹಣ ಸಂಗ್ರಹವಾಯಿತು ಎಂಬ ಲೆಕ್ಕವನ್ನೂ ನೀಡುತ್ತಿಲ್ಲ ಎಂದು ಖರ್ಗೆ ಆರೋಪಿಸಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ, ಭಾಷಣ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಗುಜರಾತ್​ನಲ್ಲಿ ಲೋಕಾಯುಕ್ತ ಸಂಸ್ಥೆ ಹಾಳು ಮಾಡಿದ ಅವರು, ಕೇಂದ್ರದಲ್ಲಿ ಲೋಕಪಾಲ ಸಂಸ್ಥೆ ಆರಂಭಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿಯಾಗಿ ಮೂರು ವರ್ಷವಾದರೂ ಲೋಕಪಾಲರನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಟೀಕಿಸಿದರು.

ಅಧ್ಯಕ್ಷ ಗಾದಿಗೆ ಅರ್ಜಿ ಹಾಕಿಲ್ಲ

ಕೆಪಿಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕವಾಗುವ ಮೂಲಕ ರಾಜ್ಯ ರಾಜಕೀಯಕ್ಕೆ ಹಿಂತಿರುಗುತ್ತಾರೆ ಎಂಬ ಉಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಖರ್ಗೆ, ನಾನು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಅಂಥ ಉಸಾಬರಿಗೆ ಹೋಗುವವನೂ ನಾನಲ್ಲ. ಈ ಬಗ್ಗೆ ಅನವಶ್ಯಕ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ. ಬಿಜೆಪಿಯಂತೆ ನಮ್ಮಲ್ಲಿ ಮೋದಿ ಒಬ್ಬರೇ ನಾಯಕರಲ್ಲ. ನಮ್ಮಲ್ಲಿ ಕೇಳೋಕೆ, ಹೇಳೋಕೆ ಸಾಕಷ್ಟು ನಾಯಕರಿದ್ದಾರೆ ಎಂದು ಸ್ಪಷ್ಟಪಡಿಸಿದರು.


ನೀರಸ ಮತದಾನಕ್ಕೆ ಹಿರಿಯರು ಗರಂ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿನ ಮತದಾನ ಪ್ರಮಾಣ ಇಳಿಕೆಗೆ ಪಕ್ಷದ ಹಿರಿಯ ಮುಖಂಡರು ಕೋಪಗೊಂಡಿದ್ದಾರೆ.

ಭಾನುವಾರ ಆರಂಭವಾದ ಚುನಾವಣೆಯಲ್ಲಿ ಶೇ.30ಕ್ಕೂ ಕಡಿಮೆ ಮತದಾನವಾಗಿದೆ. ಇನ್ನೂ ಮೂರು ದಿನ (17ರವರೆಗೆ) ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿನ ಮತದಾನ ಪ್ರಮಾಣ ಕಡಿಮೆಯಾಗಿರುವುದಕ್ಕೆ ಅಭ್ಯರ್ಥಿಗಳಿಗೆ ಕೆಪಿಸಿಸಿ ಮುಖಂಡರು ತರಾಟೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾಯಚೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿ 10 ಜಿಲ್ಲೆಗಳಲ್ಲಿ ಭಾನುವಾರ ಮತದಾನ ನಡೆದಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿಯೇ ಅತಿ ಕಡಿಮೆ ಮತದಾನವಾಗಿರುವುದು ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಉಳಿಕೆ 3 ದಿನ ಹೆಚ್ಚಿನ ಪ್ರಮಾಣದಲ್ಲಿ ಮತ ದಾನಕ್ಕೆ ಸದಸ್ಯರನ್ನು ಕರೆತರುವಂತೆ ಮುಖಂಡರು ಫರ್ವನು ಹೊರಡಿಸಿದ್ದಾರೆ. ಒಟ್ಟಾರೆ 3.62 ಲಕ್ಷ ಅರ್ಹ ಮತದಾರರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶಾಸಕ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ, ಶಾಸಕ ಹಂಪನಗೌಡ ಬಾರ್ದಲಿ ಅವರ ಸಹೋದರನ ಪುತ್ರ ಬಸವನಗೌಡ ಬಾರ್ದಲಿ, ಬೆಂಗಳೂರಿನ ಉಮೇಶ್ ಬೊರೇಗೌಡ, ಅಮೃತ್, ಶಿವಕುಮಾರ್, ಸಾಮ್ಯಾ ತಬ್ರೇಜ್, ಕೆಂಪರಾಜು ಹಾಗೂ ಚಿಕ್ಕಮಗಳೂರಿನ ಪುಷ್ಪಲತಾ ಸ್ಪರ್ಧಿಸಿದ್ದಾರೆ. ಇವರಲ್ಲಿ ಒಬ್ಬರು ಅಧ್ಯಕ್ಷರಾಗಲಿದ್ದು, ಸೋತ ನಾಲ್ವರು ಉಪಾಧ್ಯಕ್ಷರಾಗಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ 55 ಅಭ್ಯರ್ಥಿಗಳು ಕಣದಲ್ಲಿದ್ದು, 11 ಜನ ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ.

ಸೌಮ್ಯಾ ರೆಡ್ಡಿಗೆ ಉಪಾಧ್ಯಕ್ಷೆ ಸ್ಥಾನ ಖಚಿತ

ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸಿದ್ದರು. ಆದರೆ ಒಬ್ಬಳೇ ಮಹಿಳಾ ಅಭ್ಯರ್ಥಿಯಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗದಿದ್ದರೆ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ಹೊರತುಪಡಿಸಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಎಂ.ಆರ್.ಸೀತಾರಾಮ್ ಪುತ್ರ ರಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಕೂಡ ಸ್ಪರ್ಧಿಸಿದ್ದಾರೆ.

Leave a Reply

Your email address will not be published. Required fields are marked *

Back To Top