Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಕೆಚ್ಚೆದೆಯ ಸುಭಾಷ್ ಚಂದ್ರ ಬೋಸರ ದಿಟ್ಟಹೆಜ್ಜೆ

Saturday, 21.10.2017, 3:02 AM       No Comments

| ಜ ಟಿ.ಎನ್. ರಾಮಕೃಷ್ಣ

1897ರ ಜನವರಿ 23ರಂದು ಈಗಿನ ಒಡಿಶಾ ರಾಜ್ಯದ ಕಟಕ್​ನಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿ ದಂಪತಿಯ ಪುತ್ರನಾಗಿ ಜನಿಸಿದ ಸುಭಾಷ್ ಚಂದ್ರ ಬೋಸ್, ಬಾಲ್ಯದಿಂದಲೇ ಅಪ್ರತಿಮ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಶಿವಾಜಿ, ಗುರುಗೋವಿಂದ ಸಿಂಹ, ಸ್ವಾಮಿ ವಿವೇಕಾನಂದ, ಬಂಕಿಮಚಂದ್ರ ಚಟರ್ಜಿ, ಅರವಿಂದ ಘೋಷ್ ಮೊದಲಾದವರಿಂದ ಅಪಾರವಾದ ಪ್ರೇರಣೆ ಪಡೆದಿದ್ದ ಸುಭಾಷ್ ವಿದ್ಯಾರ್ಥಿ ದೆಸೆಯಲ್ಲೇ ಮಿಲಿಟರಿ ಶಿಕ್ಷಣ ಪಡೆದಿದ್ದರು. ಬ್ರಿಟಿಷರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆಯ ಆಡಳಿತದಿಂದ ತೀವ್ರವಾಗಿ ಮನನೊಂದಿದ್ದ ಸುಭಾಷ್, ಸ್ವಾತಂತ್ರ್ಯ ಸಂಗ್ರಾಮದ ಯಜ್ಞಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಲು ನಿರ್ಧರಿಸಿದರು.

ತಂದೆ-ತಾಯಿಯ ಮಹದಾಸೆಯಂತೆ ಪ್ರತಿಷ್ಠಿತ ಐಸಿಎಸ್ ಪದವಿಯನ್ನು ಅತ್ಯಂತ ಕಡಿಮೆ ಸಮಯದ ಕೇವಲ 8 ತಿಂಗಳ ಅಧ್ಯಯನದೊಂದಿಗೆ 4ನೇ ರ್ಯಾಂಕಿನಲ್ಲಿ ಯಶಸ್ವಿಯಾಗಿ ತೇರ್ಗಡೆಗೊಂಡ ಸುಭಾಷ್, ದೊಡ್ಡ ಸರ್ಕಾರಿ ಹುದ್ದೆ, ಅದರ ಜತೆಯಲ್ಲಿ ಸಿಗುತ್ತಿದ್ದ ಬ್ರಿಟಿಷ್ ಸರ್ಕಾರದ ಉನ್ನತ ಗೌರವ, ಸ್ಥಾನಮಾನ, ವಿಲಾಸಿ ಜೀವನ ಮುಂತಾದವನ್ನೆಲ್ಲ ತಿರಸ್ಕರಿಸಿ ಐಸಿಎಸ್​ಗೆ ರಾಜೀನಾಮೆ ನೀಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪೂರ್ತಿ ತೊಡಗಿಸಿಕೊಂಡರು.

ಮೊದಲಿಗೆ ಕಾಂಗ್ರೆಸ್​ನಿಂದ ತಮ್ಮ ಹೋರಾಟವನ್ನು ಪ್ರಕಟಿಸಿದ ಸುಭಾಷ್, ಅಖಿಲ ಭಾರತ ಮಟ್ಟದಲ್ಲಿ ಯುವಕರ ಕಣ್ಮಣಿಯಾದರು. ಕ್ರಾಂತಿಕಾರಿಗಳ ಹೋರಾಟವನ್ನು ನೇರವಾಗಿ ಬೆಂಬಲಿಸಿದ ಸುಭಾಷ್, ಕಾಂಗ್ರೆಸ್ಸಿನ ಹೋರಾಟದಲ್ಲಿ ಚುರುಕು ಮೂಡಿಸುವ ಪ್ರಯತ್ನ ನಡೆಸಿದರು. ಪ್ರಪಂಚದ ಹಲವಾರು ದೇಶಗಳನ್ನು ಸಂದರ್ಶಿಸಿ ಅಲ್ಲಿನ ರಾಜಕೀಯ ನೇತಾರರು, ವಿವಿಧ ಕ್ಷೇತ್ರಗಳ ಮುಖಂಡರು, ನೀತಿ ನಿರೂಪಕರ ಸದಭಿಪ್ರಾಯವನ್ನು ಭಾರತದ ಸ್ವಾತಂತ್ರ್ಯದ ಪರವಾಗಿ ಯಶಸ್ವಿಯಾಗಿ ನಿರೂಪಿಸಿದರು.

ಒಟ್ಟು 11 ಬಾರಿ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಸುಭಾಷ್, 1938ರಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ರಾಷ್ಟ್ರದ ಭವಿಷ್ಯದ ಕುರಿತ ಹಲವಾರು ಕನಸುಗಳನ್ನು ಕಂಡಿದ್ದ ಸುಭಾಷ್ ಅವುಗಳಿಗೆ ಸಾಕಾರರೂಪ ನೀಡುವ ಕುರಿತು ಕಾರ್ಯಪ್ರವೃತ್ತರಾಗಿ ಮೊದಲಿಗೆ ಯೋಜನಾ ಆಯೋಗ ಪ್ರಾರಂಭಿಸಿದರು. 80ರ ಹರೆಯದ ಸರ್ ಎಂ. ವಿಶ್ವೇಶ್ವರಯ್ಯನವರು ಮುಂಬಯಿಗೆ ತೆರಳಿ ಯೋಜನಾ ಆಯೋಗದ ಮಹತ್ವದ ಸಭೆಯಲ್ಲಿ ಭಾಗವಹಿಸಿ ಸುಭಾಷರನ್ನು ಪ್ರೋತ್ಸಾಹಿಸಿದ್ದು ವಿಶೇಷ. ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವಂತೆ ಕೈಗಾರಿಕೀಕರಣಕ್ಕೆ ಒತ್ತುನೀಡಿದರು.

ಆದರೆ ಗಾಂಧೀಜಿ ಸಹಿತ ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರ ಅಸಹಕಾರದಿಂದ ಬೇಸತ್ತು ಕಾಂಗ್ರೆಸ್ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿದ ಸುಭಾಷ್, ತಮ್ಮ ಧ್ಯೇಯ, ನೀತಿ, ಗುರಿಗಳನ್ನು ಅನುಷ್ಠಾನಗೊಳಿಸಲು ‘ಫಾರ್ವರ್ಡ್ ಬ್ಲಾಕ್’ ಎಂಬ ಪ್ರತ್ಯೇಕ ರಾಜಕೀಯ ವೇದಿಕೆಯನ್ನು ಪ್ರಾರಂಭಿಸಿ, ದೇಶಾದ್ಯಂತ ಬಿರುಗಾಳಿಯೋಪಾದಿಯಲ್ಲಿ ಸಂಚರಿಸಿ ಕೇವಲ 10 ತಿಂಗಳಲ್ಲಿ 400ಕ್ಕೂ ಹೆಚ್ಚು ಪ್ರಚಾರಸಭೆಗಳನ್ನು ನಡೆಸಿ, ಜನಜಾಗೃತಿ ಮೂಡಿಸಿದರು. ಇದರಿಂದ ಬೆಚ್ಚಿಬಿದ್ದ ಬ್ರಿಟಿಷರು ಸುಭಾಷರನ್ನು ಬಂಧಿಸಿ ಕಾರಾಗೃಹದಲ್ಲಿಟ್ಟರೂ, ಸುಭಾಷರ ಉಪವಾಸ ಸತ್ಯಾಗ್ರಹ ಮತ್ತು ಜನಾಗ್ರಹಕ್ಕೆ ಮಣಿದು ನಂತರ ಗೃಹಬಂಧನದಲ್ಲಿರಿಸಿದರು.

1941ರ ಅಕ್ಟೋಬರ್ 17ರಂದು, ಚಾಣಾಕ್ಷತನದಿಂದ ಗೃಹಬಂಧನದಿಂದ ತಪ್ಪಿಸಿಕೊಂಡ ಸುಭಾಷರು, ಪೇಶಾವರ, ಕಾಬೂಲ್, ಮಾಸ್ಕೋ ಮೂಲಕ ಜರ್ಮನಿ ತಲುಪಿದರು. ಜರ್ಮನಿಯಲ್ಲಿದ್ದ ಭಾರತೀಯರನ್ನು ಒಗ್ಗೂಡಿಸಿ ಆಕಾಶವಾಣಿ ಕೇಂದ್ರ ಪ್ರಾರಂಭಿಸಿ ‘ಭಾರತ ರಾಷ್ಟ್ರೀಯ ಸೈನ್ಯ’ ಸಂಘಟಿಸಿದರು. ನಂತರ ಇಟಲಿಗೆ ತೆರಳಿ ಅಲ್ಲಿನ ರಾಜಕೀಯ ಮುಖಂಡ ಮುಸಲೋನಿಯನ್ನು ಭೇಟಿಯಾಗಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಇಟಲಿಯ ಸಂಪೂರ್ಣ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಸುಭಾಷ್, ನಂತರ ಜರ್ಮನಿಗೆ ವಾಪಸ್ ಬಂದು ಹಿಟ್ಲರ್​ನನ್ನು ಭೇಟಿಮಾಡಿ ಪರಸ್ಪರ ಸಹಕಾರದ ಭರವಸೆಯನ್ನು ಪಡೆದುಕೊಂಡರು. ಜರ್ಮನಿಯ ಸೈನ್ಯ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಪಸರಿಸಿರುವುದನ್ನು ಮನಗಂಡರು. ಆದರೆ ಜರ್ಮನಿಯ ಸೈನ್ಯ ಭಾರತಕ್ಕೆ ಬರುವುದಕ್ಕೆ ಇಲ್ಲಿದ್ದ ಕ್ಲಿಷ್ಟಕರ ಪರಿಸ್ಥಿತಿ ಅನುವುಮಾಡಿಕೊಡುವುದಿಲ್ಲ ಎಂಬುದು ಅವರಿಗೆ ಮನವರಿಕೆಯಾಯಿತು. ಹೀಗಾಗಿ ಜಪಾನಿನ ನೆರವಿನೊಂದಿಗೆ ಬ್ರಿಟಿಷರ ವಿರುದ್ಧ ಯುದ್ಧ ನಡೆಸಲು ನಿರ್ಧರಿಸಿ, ಜರ್ಮನಿಯಿಂದ ಜಲಾಂತರ್ಗಾಮಿಯಲ್ಲಿ 88 ದಿನ ಪ್ರಯಾಣಿಸಿ ಟೋಕಿಯೋ ತಲುಪಿದರು.

ಜಪಾನಿನ ಮಹಾರಾಜ ಮತ್ತು ಪ್ರಧಾನಿಯನ್ನು ಭೇಟಿಯಾದ ಸುಭಾಷ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಅವರೊಂದಿಗೆ ವಿಶದವಾಗಿ ರ್ಚಚಿಸಿ ಸಂಪೂರ್ಣ ಸಹಕಾರದ ಭರವಸೆಯನ್ನು ಅವರಿಂದ ಪಡೆದುಕೊಳ್ಳುತ್ತಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಭಾರತದ ‘ಸ್ವಾತಂತ್ರ್ಯ ಸಂಗ್ರಾಮದ ಪಿತಾಮಹ’ ಎಂದೇ ಗುರುತಿಸಲ್ಪಟ್ಟ ರಾಸ್ ಬಿಹಾರಿ ಬೋಸ್​ರನ್ನು ಭೇಟಿಮಾಡಿ ರ್ಚಚಿಸಿದರು. ರಾಸ್ ಬಿಹಾರಿಯವರು ತಾವು ಸಂಘಟಿಸಿದ್ದ ಭಾರತ ರಾಷ್ಟ್ರೀಯ ಸೈನ್ಯದ ನಾಯಕತ್ವವನ್ನು ಸುಭಾಷರಿಗೆ ಹಸ್ತಾಂತರಿಸಿದರು.

ಹಂಗಾಮಿ ಆಜಾದ್ ಹಿಂದ್ ಸರ್ಕಾರದ ಸ್ಥಾಪನೆ: ಸುಭಾಷ್ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗಲೇ ಭಾರತಕ್ಕೆ ಹಂಗಾಮಿ ಆಜಾದ್ ಹಿಂದ್ ಸರ್ಕಾರ ಸ್ಥಾಪಿಸುವ ಯೋಜನೆಯನ್ನು ಕಾಂಗ್ರೆಸ್ ನಾಯಕರ ಮುಂದಿಟ್ಟು, ಐರ್ಲೆಂಡ್​ನಲ್ಲಿ ಕ್ರಾಂತಿಕಾರಿಗಳು ಇಂಥ ಸರ್ಕಾರವನ್ನು ಸ್ಥಾಪಿಸಿದ ವಿಷಯವನ್ನು ಮನವರಿಕೆ ಮಾಡಲು ಯತ್ನಿಸಿದರೂ, ಕಾಂಗ್ರೆಸ್ಸಿನ ನಾಯಕರು ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ನಂತರ ಸ್ವಾತಂತ್ರ್ಯ ಸಂಗ್ರಾಮದ ವೇಗವನ್ನು ಯುರೋಪ್ ಖಂಡಕ್ಕೂ ವಿಸ್ತರಿಸಿದ ಸುಭಾಷ್, ಹಂಗಾಮಿ ಸರ್ಕಾರದ ಯೋಜನೆಗೆ ಇಟಲಿ ಮತ್ತು ಜರ್ಮನಿಯ ಬೆಂಬಲ ಪಡೆದುಕೊಂಡರು. ಅಂತಿಮವಾಗಿ ಜಪಾನಿನ ನೆರವಿನೊಂದಿಗೆ ಬ್ರಿಟಿಷರಿಗೆ ನಿರ್ಣಾಯಕವಾಗಿ ಹೊಡೆತ ನೀಡಲೆಂದು ನಿರ್ಧರಿಸಿ ಜಪಾನಿನಲ್ಲೇ ಸರ್ಕಾರ ಪ್ರಾರಂಭಿಸಲು ನಿರ್ಧರಿಸಿದರು.

ನಂತರ ಭಾರತ ರಾಷ್ಟ್ರೀಯ ಸೈನ್ಯದ ಮುಖ್ಯ ಕಚೇರಿಯನ್ನು ಸಿಂಗಾಪುರಕ್ಕೆ ಬದಲಿಸಿದರು. ಏಷ್ಯಾದಲ್ಲೇ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರ ಸೈನ್ಯ ಪ್ರಾರಂಭಿಸಿ ಅದಕ್ಕೆ ‘ಝಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಸೈನ್ಯ’ ಎಂದು ಹೆಸರಿಟ್ಟರು. ಆಗ್ನೇಯ ಏಷ್ಯಾದ ಹಲವಾರು ದೇಶಗಳಿಗೆ ಭೇಟಿಯಿತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಲ್ಲಿನ ಸರ್ಕಾರಗಳ ಬೆಂಬಲ ಖಾತ್ರಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸುಭಾಷರು ಹಂಗಾಮಿ ಸರ್ಕಾರದ ಪ್ರಾರಂಭಕ್ಕೆ ಸ್ಪಷ್ಟರೂಪ ನೀಡಿದರು. ಈ ಪ್ರಯತ್ನಕ್ಕೆ ಜಪಾನ್ ಸರ್ಕಾರದ ಪ್ರಧಾನಿ ಟೋಜೋ ಅವರ ಸಂಪೂರ್ಣ ಸಹಮತ ದೊರೆಯಿತು.

ಹಂಗಾಮಿ ಆಜಾದ್ ಹಿಂದ್ ಸರ್ಕಾರವನ್ನು ಸಿಂಗಾಪುರದ ಹ್ಯಾಂಡಿ ರಸ್ತೆಯಲ್ಲಿರುವ ಕ್ಯಾಥೇ ಹಾಲ್​ನಲ್ಲಿ 1943ರ ಅಕ್ಟೋಬರ್ 21ರಂದು ಮಧ್ಯಾಹ್ನ 4 ಗಂಟೆಗೆ ಅಧಿಕೃತವಾಗಿ ಪ್ರಾರಂಭಿಸಿದರು. ಈ ಸರ್ಕಾರದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಭಾಷರು, ತಮ್ಮ ಮಂತ್ರಿಮಂಡಲದಲ್ಲಿ ಕ್ಯಾಪ್ಟನ್ ಲಕ್ಷ್ಮೀ, ಕರ್ನಲ್ ಚಟರ್ಜಿ, ಕರ್ನಲ್ ಬೋಸ್ಲೆ, ಕರ್ನಲ್ ಭಗತ್, ಶಾನವಾಜ್ ಖಾನ್, ಪ್ರೇಮ್ ಸೆಹಗಲ್ ಮುಂತಾದವರನ್ನು ಸೇರಿಸಿಕೊಂಡರು. ರಾಸ್ ಬಿಹಾರಿ ಬೋಸ್ ಸರ್ಕಾರದ ಸವೋಚ್ಚ ಸಲಹೆಗಾರರಾದ ಮಂಗಳೂರಿನ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಸಂಪುಟ ದರ್ಜೆಯ ಸಚಿವರಾದರು. ಸುಭಾಷರ ಮಾರ್ಗದರ್ಶನದಲ್ಲಿ ಎಲ್ಲಪ್ಪ ರಂಗೂನ್​ನಲ್ಲಿ ಮುಖ್ಯ ಕಚೇರಿ ಹೊಂದಿದ್ದ ‘ಆಜಾದ್ ಹಿಂದ್ ಬ್ಯಾಂಕ್’ ಅನ್ನು ಪ್ರಾರಂಭಿಸಿದರು.

1943ರ ಅಕ್ಟೋಬರ್ 23ರಂದು ಜಪಾನ್ ಈ ಸರ್ಕಾರಕ್ಕೆ ಅಧಿಕೃತ ಮನ್ನಣೆ ನೀಡಿ 10 ಕೋಟಿ ಯೆನ್​ನಷ್ಟು ಸಾಲ ನೀಡಿತು. ಇದೇ ತಿಂಗಳಲ್ಲಿ ಸರ್ಕಾರಕ್ಕೆ ಬರ್ವ, ಜರ್ಮನಿ, ಇಟಲಿಗಳಿಂದ ಮಾನ್ಯತೆ ದೊರಕಿತು. ಮುಂದೆ ರಷ್ಯಾ, ಚೀನಾ, ಫ್ರಾನ್ಸ್, ಥಾಯ್ಲೆಂಡ್, ಕ್ರೊವೇಷಿಯಾ, ಫಿಲಿಪ್ಪೀನ್ಸ್, ಮಂಚೂರಿಯಾ ಸೇರಿದಂತೆ ಹಲವಾರು ದೇಶಗಳು ಈ ಸರ್ಕಾರಕ್ಕೆ ಅಧಿಕೃತ ಮನ್ನಣೆ ನೀಡಿದವು.

ಹಂಗಾಮಿ ಸರ್ಕಾರ ತನ್ನದೇ ಆದ ಕರೆನ್ಸಿ ನೋಟು, ಛಾಪಾ ಕಾಗದ, ಅಂಚೆಚೀಟಿ, ನ್ಯಾಯಾಂಗ ವ್ಯವಸ್ಥೆ, ಹಲವಾರು ದೇಶಗಳಲ್ಲಿ ದೂತಾವಾಸದ ಕಚೇರಿಗಳನ್ನು ಹೊಂದಿತ್ತು. ಸೈನ್ಯದ ನಿರ್ವಹಣೆ, ಸೈನ್ಯದ ಪದವಿಗಳು, ರಣಗೀತೆ, ಧ್ವಜ ಮುಂತಾದ ವಿಷಯಗಳನ್ನು ಸುಭಾಷ್ ಅಧಿಕೃತಗೊಳಿಸಿದರು. ಜಪಾನ್ ಸೈನ್ಯದ ಜತೆಯಲ್ಲಿ ಭಾರತದ ರಾಷ್ಟ್ರೀಯ ಸೈನ್ಯ ಸಿಂಗಾಪುರದಿಂದ ಭಾರತದ ಮಣಿಪುರದವರೆಗಿನ 4800 ಕಿ.ಮೀ. ದೂರದ ದುರ್ಗಮವಾದ ಅರಣ್ಯ, ಮುಗಿಲುಮುಟ್ಟುವ ಪರ್ವತಗಳು, ಮರುಭೂಮಿ, ಸಮುದ್ರ, ಭಾರತದ ಅತ್ಯಂತ ದೊಡ್ಡನದಿ ಬ್ರಹ್ಮಪುತ್ರದ ಎರಡರಷ್ಟು ದೊಡ್ಡದಾದ ಇರಾವತಿ ನದಿಯನ್ನು, ಅತ್ಯಂತ ಕಷ್ಟಕರವಾದ ಪ್ರತಿಕೂಲ ಪರಿಸ್ಥಿತಿಯಲ್ಲೂ ದಾಟಿ ಪ್ರಯಾಣ ಮಾಡಿ ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಯುದ್ಧಮಾಡಿ ಕೋಹಿಮಾ, ಧಿಮಾಪುರ, ಬಿಷ್ಣುಪುರ, ಮೊಯಿಲಾಂಗ್ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಹೀಗೆ ಸ್ವತಂತ್ರಗೊಂಡ ಭೂಪ್ರದೇಶಗಳು ಹಂಗಾಮಿ ಆಜಾದ್ ಹಿಂದ್ ಸರ್ಕಾರದ ಆಡಳಿತಕ್ಕೆ ಒಳಪಟ್ಟವು.

ಮುಂದೆ ‘ಚಲೋ ದಿಲ್ಲಿ’ ಘೋಷಣೆಯನ್ನು ರಣಮಂತ್ರವಾಗಿಸಿದ ಸುಭಾಷರು, ಬೃಹತ್ ಕ್ರಾಂತಿಗೆ ತಯಾರಿ ನಡೆಸಿದ್ದರು. ಆದರೆ ಎರಡನೇ ಮಹಾಯುದ್ಧದಲ್ಲಿ ಬಹುಕಾಲ ಸೆಣಸಿದ್ದ ಜಪಾನ್, ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿತ್ತು. ಜತೆಗೆ ಅಮೆರಿಕವು ಜಪಾನಿನ ಹಿರೋಷಿಮಾ-ನಾಗಾಸಾಕಿ ನಗರಗಳ ಮೇಲೆ 1945ರ ಆಗಸ್ಟ್​ನಲ್ಲಿ ಏಕಾಏಕಿ ಅಣುಬಾಂಬ್ ದಾಳಿ ಮಾಡಿತು. ಇದರ ಪರಿಣಾಮವಾಗಿ ತತ್ತರಿಸಿಹೋದ ಜಪಾನ್, ಯುದ್ಧವಿರಾಮ ಘೋಷಿಸಿ ಶರಣಾಯಿತು. ರಷ್ಯಾ ಅಥವಾ ಇತರೆ ಬ್ರಿಟಿಷ್-ವಿರೋಧಿ ರಾಷ್ಟ್ರಗಳ ನೆರವಿನಿಂದ ಯುದ್ಧ ಮುಂದುವರಿಸಲು ಸುಭಾಷರು ಯೋಚಿಸಿದರು. ಆದರೆ, ಸುಭಾಷರ ಮುಂದಿನ ಪಯಣ ಹಾಗೂ ಕಾರ್ಯಾಚರಣೆಯ ಕುರಿತಾದ ಸ್ಪಷ್ಟ ಮಾಹಿತಿಯಿಲ್ಲದ ಪರಿಸ್ಥಿತಿಯಲ್ಲಿ ಭಾರತ ರಾಷ್ಟ್ರೀಯ ಸೈನ್ಯದ ಯತ್ನ ಪರಿಸಮಾಪ್ತಿಯಾಯಿತೆಂದೇ ಹೇಳಬೇಕು. ತರುವಾಯದಲ್ಲಿ ಹಂಗಾಮಿ ಆಜಾದ್ ಹಿಂದ್ ಸರ್ಕಾರವೂ ಅಂತ್ಯಗೊಳ್ಳುವಂತಾಯಿತು.

ಪ್ರಸಕ್ತ ವರ್ಷದ ಅಕ್ಟೋಬರ್ 21, ಹಂಗಾಮಿ ಆಜಾದ್ ಹಿಂದ್ ಸರ್ಕಾರದ 75ನೇ ಸಂಸ್ಥಾಪನಾ ದಿವಸ, ಅಂದರೆ ಇದು ಅಮೃತ ಮಹೋತ್ಸವ ವರ್ಷ. ಈ ಸರ್ಕಾರ ಪ್ರಾರಂಭವಾದ ಸಿಂಗಾಪುರದ ಕ್ಯಾಥೇ ಹಾಲ್​ಗೆ, ಯುದ್ಧಸ್ಮಾರಕದ ತಾಣಕ್ಕೆ ರಾಷ್ಟ್ರಗೌರವ ಸಂರಕ್ಷಣ ಪರಿಷತ್ ವತಿಯಿಂದ ಭೇಟಿ ನೀಡುವುದರ ಜತೆಗೆ, ಹಂಗಾಮಿ ಸರ್ಕಾರ ಕುರಿತಾದ ಸೂಕ್ತ ಸ್ಮಾರಕ ನಿರ್ವಿುಸುವಂತೆ ಮನವಿ ಮಾಡಲಿದೆ. ಜತೆಗೆ, 2018-19ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಾದ್ಯಂತದ ಮತ್ತು ಭಾರತದ ಹಲವು ನಗರಗಳಲ್ಲಿನ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನೇತಾಜಿ ಮತ್ತು ಹಂಗಾಮಿ ಆಜಾದ್ ಹಿಂದ್ ಸರ್ಕಾರ ಕುರಿತಾದ ವಿಶೇಷ ಉಪನ್ಯಾಸ ಮಾಲಿಕೆಗಳನ್ನು ಹಮ್ಮಿಕೊಳ್ಳಲಿದೆ.

(ಲೇಖಕರು ರಾಷ್ಟ್ರಗೌರವ ಸಂರಕ್ಷಣ ಪರಿಷತ್​ನ ಅಧ್ಯಕ್ಷರು ಮತ್ತು ಸಂಚಾಲಕರು)

Leave a Reply

Your email address will not be published. Required fields are marked *

Back To Top