Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕೃಷಿಗೆ ಬೇವು ಬೆಲ್ಲ

Saturday, 23.12.2017, 3:04 AM       No Comments

ದೇಶದ ಅರ್ಥ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕ್ಷೇತ್ರ ಕೃಷಿ. ಇದನ್ನು ಮೀರಿ ಈ ಸಲ ಸರ್ಕಾರದ ಮುಂಗಡ ಪತ್ರಗಳಲ್ಲಿ ದಶಕಗಳ ನಂತರ ಕೃಷಿ ಕ್ಷೇತ್ರಕ್ಕೆ ಆದ್ಯತೆ ಸಿಕ್ಕಿದರೂ, ಮುಂಗಾರು ಕೊರತೆ ಕರ್ನಾಟಕ ಸೇರಿ ಹಲವು ರಾಜ್ಯಗಳನ್ನು ಬಾಧಿಸಿತು. ನೋಟು ನಿಷೇಧದ ಪರಿಣಾಮ ಕೃಷಿ ಕ್ಷೇತ್ರದ ಮೇಲಾಗಿದ್ದರೂ, ಹೆಚ್ಚಾಗಿಲ್ಲ ಎಂಬ ಮಾತು ಕೇಳಿದೆ. ಈ ವರ್ಷ ಕೃಷಿ ಕ್ಷೇತ್ರದ ಮಟ್ಟಿಗೆ ಕಹಿಯ ಜೊತೆಗೆ ಸ್ವಲ್ಪ ಸಿಹಿಯನ್ನೂ ಒದಗಿಸಿದೆ. 

ಸತತ ನಾಲ್ಕನೇ ವರ್ಷವೂ ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿತ್ತು. ಮುಂಗಾರು ಕೊರತೆ, ಮೋಡ ಬಿತ್ತನೆ ಬೆನ್ನಲ್ಲೇ ಹಿಂಗಾರು ಮಳೆ ಉತ್ತಮವಾದ್ದರಿಂದ ಬೆಳೆಗೆ ವರದಾನವಾಯಿತು. ಈ ನಡುವೆ, ರೈತರ ಆತ್ಮಹತ್ಯೆ, ಕೃಷಿ ಸಾಲ ಮನ್ನಾ ವಿಚಾರಗಳು ಕೂಡ ಹೆಚ್ಚು ಸದ್ದು ಮಾಡಿದ್ದವು.

ರಾಜ್ಯದಲ್ಲಿ ಬರ, ಮೋಡ ಬಿತ್ತನೆಯ ವರ

ರಾಜ್ಯದಲ್ಲಿ ಮುಂಗಾರು ಕೊರತೆ ಕಂಡು, 13 ಜಿಲ್ಲೆಗಳು ಬರ ಪರಿಸ್ಥಿತಿ ಅನುಭವಿಸಿದ್ದವು. ಇದಕ್ಕೂ ಮುನ್ನ ಕಳೆದ ವರ್ಷ ಹಿಂಗಾರಿನಲ್ಲಿಯೂ ರಾಜ್ಯ 7,97.89 ಕೋಟಿ ರೂ. ನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಬೆಳೆ ಪರಿಹಾರದ ಜತೆಗೆ ಪರಿಹಾರ ಕಾಮಗಾರಿಗಳಿಗೆ 3,310 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಒಟ್ಟಾರೆ 6,993.58 ಕೋಟಿ ರೂ. ಬೆಳೆ ನಷ್ಟಕ್ಕೆ 919.92 ಕೋಟಿ ರೂ. ಕೇಳಿದೆ.

ಕೃಷಿಯಲ್ಲಿ ಉದ್ಯೋಗ

ಗ್ರಾಮೀಣ ಯುವಕರನ್ನು ಕೃಷಿಯ ಉದ್ಯೋಗದತ್ತ ಆಕರ್ಷಿಸಲು, ಸ್ಥಳೀಯವಾಗಿ ಕೃಷಿ ಉಪಕರಣಗಳ ತಯಾರಿಕೆ ಮತ್ತು ಬಳಕೆಯನ್ನು ಪ್ರೋತ್ಸಾಹಿಸಲು -ಠಿ;10 ಕೋಟಿ ಅನುದಾನದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು 174 ‘ಗ್ರಾಮೀಣ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ. ಕೃಷಿ ಭಾಗ್ಯ ವಿಸ್ತರಣೆ

ನೀರಾವರಿ ಒದಗಿಸುವ ಮೂಲಕ ಬರ ಪರಿಸ್ಥಿತಿ ಎದುರಿಸಲು ಸಹಕಾರಿಯಾಗಿರುವ ‘ಕೃಷಿ ಭಾಗ್ಯ’ ಯೋಜನೆಯನ್ನು ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಎಲ್ಲ ತಾಲೂಕುಗಳಿಗೂ (ಅಚ್ಚುಕಟ್ಟು ಪ್ರದೇಶಗಳ ಹೊರತು) ವಿಸ್ತರಿಸುವುದಾಗಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಪ್ರಕಟಿಸಿದ್ದಲ್ಲದೆ, -ಠಿ;600 ಕೋಟಿ ಒದಗಿಸಿದೆ. ‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ಗಾಗಿ ಕೇಂದ್ರ ನೀಡುವ ನೆರವಿನೊಂದಿಗೆ ರಾಜ್ಯ ಸರ್ಕಾರವೂ 845 ಕೋಟಿ ರೂ.ಗಳ ನೆರವು ನೀಡಲಾಗಿದ್ದು, ಹೆಚ್ಚುವರಿಯಾಗಿ 31.5 ಲಕ್ಷ ಹೆಕ್ಟೇರ್ ಭೂಮಿಯನ್ನು ಸೇರ್ಪಡೆಗೊಳಿಸಲಾಗಿದೆ. ಒಟ್ಟಾರೆ, 2017-18ನೇ ಸಾಲಿನಲ್ಲಿ ಕೃಷಿ ಇಲಾಖೆಗೆ 5,080 ಕೋಟಿ ರೂ. ನೆರವು ದೊರೆತಿದೆ.

ಅನ್ನದಾತರಿಗೆ ಭರ್ಜರಿ ಕೊಡುಗೆ

ಕೃಷಿ ಪ್ರಧಾನ ರಾಷ್ಟ್ರ ಎಂದೇ ಗುರುತಿಸಿಕೊಂಡಿರುವ ಭಾರತ ಮತ್ತೆ ಕೃಷಿಯತ್ತ ಹೊರಳುತ್ತಿದೆ ಎಂಬುದಕ್ಕೆ ಈ ವರ್ಷದ ಖಾರಿಫ್ ಮತ್ತು ರಾಬಿ ಬಿತ್ತನೆ ಹೆಚ್ಚಾಗಿರುವುದೇ ಸಾಕ್ಷಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಖಾರಿಫ್ ಮತ್ತು ರಾಬಿ ಬಿತ್ತನೆ ಪ್ರಮಾಣ ಏರಿಕೆಯಾಗಿದೆ. ಈ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿದ್ದು, ಕೃಷಿಕರೂ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ಶೇಕಡ 4.1ಕ್ಕೆ ಏರಬಹುದೆಂಬ ನಿರೀಕ್ಷೆ ಇರಿಸಿಕೊಂಡಿದ್ದೇವೆ ಎಂದು ಸರ್ಕಾರ ಹೇಳಿತ್ತು. ಮುಂಗಡಪತ್ರದಲ್ಲಿ ಕೃಷಿ ಕ್ಷೇತ್ರದ ಅನುದಾನ ಶೇಕಡ 24 ಹೆಚ್ಚಳವಾಗಿದೆ. ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆ. ಗ್ರಾಮೀಣ, ಕೃಷಿ ಹಾಗೂ ಪೂರಕ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, 2017-18ರ ಹಣಕಾಸು ವರ್ಷದಲ್ಲಿ 1,87,223 ಕೋಟಿ ರೂಪಾಯಿ ಮೀಸಲಿಟ್ಟಿದೆ.

ಹೈನುಗಾರಿಕೆಗೆ 8 ಸಾವಿರ ಕೋಟಿ: ಹಾಲು ಉತ್ಪಾದನಾ ಸಂಸ್ಕರಣೆ ಮತ್ತು ಸೌಕರ್ಯ ಅಭಿವೃದ್ಧಿಗೆ ನಬಾರ್ಡ್​ನಲ್ಲಿ ಮೂಲ ನಿಧಿಯನ್ನು ಸ್ಥಾಪಿಸಿ ಮೂರು ವರ್ಷದಲ್ಲಿ 8,000 ಕೋಟಿ ರೂ.ಗಳನ್ನು ಖರ್ಚು ಮಾಡುವ ಗುರಿಹೊಂದಲಾಗಿದೆ. ಮೊದಲ ವರ್ಷ 2 ಸಾವಿರ ಕೋಟಿ ರೂ.ಗಳ ಮೂಲನಿಧಿಯನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು.

ಕೃಷಿ ಮಾರುಕಟ್ಟೆ: ಕೊಯ್ಲೋತ್ತರವಾಗಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಕಿಸಿ ಕೊಡಲು ಕ್ರಮ, ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ಎನ್​ಎಎಂ)ಗಳನ್ನು 250 ಮಾರುಕಟ್ಟೆಗಳಿಂದ 585 ಎಪಿಎಂಸಿಗಳಿಗೆ ವಿಸ್ತರಣೆ, ಪ್ರತಿ ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳಲ್ಲಿ ಸ್ವಚ್ಛತೆ, ಶ್ರೇಯಾಂಕ ಮತ್ತು ಪ್ಯಾಕೇಜಿಂಗ್ ವ್ಯವಸ್ಥೆಗೆ 75 ಲಕ್ಷ ರೂ.ಗಳ ಅನುದಾನ.

ಕಡಿಮೆ ಬಡ್ಡಿ ಸಾಲ

ರೈತರಿಗೆ ವಾರ್ಷಿಕ ಶೇ.7ರ ಬಡ್ಡಿದರಲ್ಲಿ 3 ಲಕ್ಷ ರೂ.ವರೆಗೆ ಅಲ್ಪಾವಧಿ ಸಾಲ ಸೌಲಭ್ಯವನ್ನೂ ಒದಗಿಸಲಾಗಿದೆ. ರೈತರು ಸಾಲವನ್ನು ನಿಗದಿತ ಸಮಯದೊಳಗೆ ತೀರಿಸಿದ್ದಲ್ಲಿ ಬಡ್ಡಿದರದಲ್ಲಿ ಶೇ.3ರಷ್ಟನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ರೈತರಿಗೆ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಒದಗಿಸಿದಂತಾಗಲಿದೆ.

ಕೃಷಿ ಸಾಲ ಮನ್ನಾ ಎಂಬ ಸವಾಲು..

ಉತ್ತರಪ್ರದೇಶ ಸರ್ಕಾರ ಕೃಷಿಕರ ಸಾಲಮನ್ನಾ ಘೊಷಣೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್ ಮತ್ತು ಕರ್ನಾಟಕದಲ್ಲೂ ಸಾಲ ಮನ್ನಾ ಜಾರಿಗೊಂಡಿದೆ.

ಕರ್ನಾಟಕ

# – 50,000 ರೂ ವರೆಗಿನ ಕೃಷಿ ಸಾಲ ಮನ್ನಾ

# – 8,165 ಕೋಟಿ ರೂ ಮನ್ನಾ ಆಗಿರುವ ಸಾಲ

ಸಹಕಾರ ವಲಯ

# ಫಲಾನುಭವಿಗಳು: 22.27 ಲಕ್ಷ ರೈತರು

# ಸಾಲದ ಪ್ರಮಾಣ: – 10,500 ಕೋಟಿ ರೂ

ಪಂಜಾಬ್

# 8.75 ಲಕ್ಷ ರೈತರ ಸಾಲಮನ್ನಾ

# 10.25 ಕೃಷಿಕರಿಗೆ ಸಾಲಮನ್ನಾದ ಲಾಭ

ಉ.ಪ್ರದೇಶ

# 1 ಲಕ್ಷ ರೈತರ ಸಾಲಮನ್ನಾ

# 36,359 ಕೋಟಿ ರೂ ಸಾಲ ಮನ್ನಾ

ಮಹಾರಾಷ್ಟ್ರ

#- 1.5 ಲಕ್ಷ ರೂ ತನಕದ ಸಾಲಮನ್ನಾ

# – 34,000 ಕೋಟಿ ರೂ ಪ್ಯಾಕೇಜ್

# 65 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲ

ರಾಜಸ್ಥಾನ

# 50000 ರೂ. ವರೆಗಿನ ಸಾಲಕ್ಕೆ ಅನ್ವಯ

# 14 ಜಿಲ್ಲೆಗಳ ರೈತರಿಗೆ ಅನುಕೂಲ

ಫಸಲ್ ಬಿಮಾ ಬಂಪರ್

ಬಿತ್ತನೆ ಸಮಯದಲ್ಲಿ ರೈತರು ನೈಸರ್ಗಿಕ ವಿಕೋಪಗಳಿಗೆ ಭಯಪಡುವುದು ಸಾಮಾನ್ಯ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರ ಫೆಬ್ರವರಿಯಲ್ಲಿ ಜಾರಿಗೊಳಿಸಿದ ಫಸಲ್ ವಿಮಾ ಯೋಜನೆಯ ವ್ಯಾಪ್ತಿಗೆ ಕಳೆದ ವರ್ಷ ಶೇ.30 ಕೃಷಿ ಭೂಮಿಯನ್ನು ತರಲಾಗಿತ್ತು. 2017-18ರಲ್ಲಿ ಇದರ ಪ್ರಮಾಣವನ್ನು ಶೇ.40ಕ್ಕೆ, 2018-19ರಲ್ಲಿ ಶೇ.50ಕ್ಕೆ ಏರಿಸಲು ಉದ್ದೇಶಿಸಲಾಗಿದೆ. 2016-17ರಲ್ಲಿ ಇದಕ್ಕಾಗಿ 5,500 ಕೋಟಿ ರೂ. ಮೀಸಲಿರಿಸಲಾಗಿತ್ತು. 2017-18ರಲ್ಲಿ ಈ ಬಜೆಟ್ ಮೀಸಲನ್ನು 9,000 ಕೋಟಿ ರೂ.ಗೆ ಏರಿಸಿದ್ದಾಗಿ ಸರ್ಕಾರ ಹೇಳಿತ್ತು.

ನೀರಾವರಿ ನಿಧಿ ಅನುದಾನ ದುಪ್ಪಟ್ಟು

ಪ್ರತಿ ಹನಿಗೂ ಹೆಚ್ಚು ಬೆಳೆ ಗುರಿಯನ್ನು ತಲುಪುವ ಉದ್ದೇಶದಿಂದ ನಬಾರ್ಡ್​ನಿಂದ ಈಗಾಗಲೇ ದೀರ್ಘಾವಧಿ ನೀರಾವರಿ ನಿಧಿಯನ್ನು ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಹೆಚ್ಚುವರಿಯಾಗಿ 20,000 ಕೋಟಿ ರೂಪಾಯಿಯನ್ನು ಅನುದಾನವಾಗಿ ಘೊಷಿಸಿದ್ದಾರೆ. ಈ ಮೂಲಕ ನಿಧಿಯಲ್ಲಿರುವ ಅನುದಾನದ ಪ್ರಮಾಣ 40,000 ಕೋಟಿ ರೂ.ಗೆ ಏರಿಕೆಯಾಗಿದೆ.

ರೈತರ ಆದಾಯ ಹೆಚ್ಚಿಸಿದ ಇ- ಕೃಷಿ ಮಾರುಕಟ್ಟೆ

ದೇಶದೆಲ್ಲೆಡೆ ಕೃಷಿ ಸಾಲ ಮನ್ನಾದ ಕೂಗು ಕೇಳಿಬರುತ್ತಿರುವ ಮಧ್ಯೆಯೇ ಕರ್ನಾಟಕದ ರೈತರು ರಾಷ್ಟ್ರೀಯ ಇ-ಮಾರುಕಟ್ಟೆ ಸೇವೆಯ ಏಕೀಕೃತ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ ಪರಿಣಾಮ ಅವರ ಸರಾಸರಿ ಆದಾಯ ಶೇ.38ರಷ್ಟು ಹೆಚ್ಚಿದೆ ಎಂದು ನೀತಿ ಆಯೋಗ ವರದಿ ಹೇಳಿದೆ.

ತಂತ್ರಜ್ಞಾನ ಬಳಸುವ ರೈತರಿಗೆ ಪ್ರೋತ್ಸಾಹ

ರಾಜ್ಯದಲ್ಲಿ 78 ಲಕ್ಷ ರೈತರಿದ್ದಾರೆ. ಇದರಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆ ಶೇ. 10ರಷ್ಟು ದಾಟುತ್ತಿಲ್ಲ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚು ಮಾಡುವ ಸಲುವಾಗಿ ಪ್ರತಿ ರೈತನಿಗೆ 2ರಿಂದ 3,000 ರೂ.ಯಂತೆ ಗರಿಷ್ಠ 5 ಲಕ್ಷ ರೈತರಿಗೆ ಪ್ರೋತ್ಸಾಹ ಧನ ನೀಡಲು 100 ಕೋಟಿ ರೂ.ಗಳ ಮೊತ್ತವನ್ನು ಸರ್ಕಾರ ಮೀಸಲಿಟ್ಟಿದೆ.

ಆಗಸ್ಟ್, ಸೆಪ್ಟೆಂಬರ್​ನಲ್ಲಿ ಮೋಡ ಬಿತ್ತನೆ

ಕಾವೇರಿ, ತುಂಗಭದ್ರಾ, ಮಲಪ್ರಭಾ, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮೋಡಬಿತ್ತನೆ ಯೋಜನೆ ಜಾರಿಯಾಗಿದೆ. ಮುಂಗಾರು ಕ್ಷೀಣವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದ ಮೂರು ಪ್ರಮುಖ ನದಿ ಪಾತ್ರ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆದಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಯ ಮೇಲುಸ್ತುವಾರಿಯಲ್ಲಿ 30.11 ಕೋಟಿ ರೂ. ವ್ಯಯಿಸಲಾಗಿದ್ದು, 2 ವಿಮಾನ ಹಾಗೂ 3 ರಾಡಾರ್​ಗಳನ್ನು ಬಳಸಿ ಮೋಡ ಬಿತ್ತನೆ ಮಾಡಲಾಗಿದೆ.

ನೋಟು ನಿಷೇಧದ ನಂತರ…

ಪ್ರಧಾನಮಂತ್ರಿ ಘೊಷಿಸಿದ ಪ್ರಕಾರ, ಕೃಷಿಕರು ಸಹಕಾರಿ ಬ್ಯಾಂಕ್​ಗಳಿಂದ ಪಡೆದ ಕೃಷಿ ಸಾಲಕ್ಕೆ ನೋಟು ನಿಷೇಧ ಘೊಷಿಸಿದಲ್ಲಿಂದ 60 ದಿನಗಳ ಅವಧಿಯ ಬಡ್ಡಿಯನ್ನು ವಿಧಿಸಿಲ್ಲ.

ಕೃಷಿ ಶಿಕ್ಷಣ ಅನುದಾನ ಶೇ.47 ಏರಿಕೆ

ಕೃಷಿ ಶಿಕ್ಷಣಕ್ಕಾಗಿ ನೀಡುವ ಅನುದಾನವನ್ನು ಕೇಂದ್ರ ಸರ್ಕಾರ ಈ ಬಾರಿ ಶೇ.47.4ರಷ್ಟು ಏರಿಕೆ ಮಾಡಿದೆ. 2013-14ನೇ ಸಾಲಿಗೆ ಹೋಲಿಸಿದರೆ ಶೇ.47ರಷ್ಟು ಏರಿಕೆಯಾಗಿದ್ದು, ಯುವಜನರು ಕೃಷಿ ಶಿಕ್ಷಣದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

Back To Top