Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಕುರ್ಚಿಯೇ ಪರಮಸತ್ಯವಾದವರ ಕತೆ

Tuesday, 31.10.2017, 3:01 AM       No Comments

| ಡಾ. ಕೆ. ಎಸ್​. ನಾರಾಯಣಚಾರ್ಯ

ಕನ್ನಡದ ಕವಿಯೊಬ್ಬ ಬೆಕ್ಕನ್ನು ಕುರಿತು ಬರೆದ ಒಂದು ಕಂದಪದ್ಯ ನಮಗೆ ಬಾಲ್ಯದಲ್ಲಿ ಪಠ್ಯವಾಗಿತ್ತು-

ಎಲೆ ಬೆಕ್ಕೆ, ರೂಪಿನಿಂದಲಿ

ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ |

ಬಲುಮೆಯು ನಿನ್ನಲಿಹುದೇ?

ಇಲಿಗಳ ಹಿಡಿಯುವುದರೊಳಗಾಯ್ತು, ನಿನ್ನಯ ಶೌರ್ಯಂ ||

ಆಂಡಯ್ಯ ಎಂಬ ಕವಿಯದು ಇರಬೇಕು. ಅರ್ಥ- ‘ಎಲೈ ಬೆಕ್ಕೆ, ನೀನೂ ರೂಪದಲ್ಲಿ ಹುಲಿಯ ಜಾತಿಗೆ ಸೇರಿದ ಪ್ರಾಣಿ ಎಂಬುದು ಪ್ರತೀತಿ. ಆಕಾರ, ಆಹಾರ, ಕಣ್ಣು, ಬಾಲ, ಮೈ ಪಟ್ಟೆಗಳು- ಎಲ್ಲದರಲ್ಲೂ ನೀನೂ ಹುಲಿಯೂ ಒಂದೇ ಜಾತಿ ಎನ್ನುತ್ತಾರೆ. ಆದರೆ ಇಷ್ಟು ಮಾತ್ರದಿಂದ ನೀನು ಗರ್ವಪಡಲು ಕಾರಣವಿಲ್ಲ! ನಿನ್ನಲ್ಲಿ ಏನು ಪರಾಕ್ರಮ ಇದೆ? ಗರ್ಜಿಸಲು ಬರುತ್ತದೆಯೇ? ‘ಮಿಯಾಂವ್’ಗುಡುತ್ತೀಯೆ, ಅಷ್ಟೆ. ಬಲುಮೆ=ಪರಾಕ್ರಮ ನಿನ್ನಲ್ಲಿ ಏನಿದೆ? ಜಿಂಕೆ, ನರಿ, ಕಾಡುಪ್ರಾಣಿಗಳು ಏನನ್ನು ತಿನ್ನಲು ನಿನಗೆ ಶಕ್ತಿಯುಂಟು ನಿನಗೆ? ನಾಯಿ ಬೊಗಳಿದರೆ ಹೆದರುವ, ಬಾಲವನ್ನು ಕಾಲುಸಂದಿಯಲ್ಲಿಟ್ಟುಕೊಂಡು ಪಲಾಯನ ಮಾಡುವ ನೀನು ಏನಿದ್ದರೂ ಇಲಿಗಳನ್ನು ಹಿಡಿಯುವುದರಲ್ಲೇ ಶೌರ್ಯ ತೋರಿಸುತ್ತೀಯೆ. ಅದೇ ನಿನ್ನ ಯೋಗ್ಯತೆ’.

ಇದೊಂದು ಅನ್ಯೋಕ್ತಿ. ಹಾಗೆಂದರೆ ಬೇರಾರನ್ನೋ ಟೀಕಿಸಲು ಒಂದು ಪ್ರಾಣಿಯನ್ನು ಸಂಕೇತಮಾಡಿ ಬರೆದ ಸೂಕ್ತಿ. ಇದರ ಪ್ರಕೃತ ಅನ್ವಯವನ್ನು ಕುರಿತು ವಿವರಿಸುವ ಮುನ್ನ ಸಂಸ್ಕೃತದ ಇಂಥದೇ ಇನ್ನೊಂದು ಅನ್ಯೋಕ್ತಿಯನ್ನು ನೋಡೋಣ-

ರೇ! ರೇ! ರಾಸಭ! ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ?

ರಾಜಾಶ್ವಾವಸಥಂ ಪ್ರಯಾಹಿ, ಚಣಕಾ ಭ್ಯೂಷಾನ್ ಸುಖಂ ಭಕ್ಷಯ |

ಸರ್ವಾನ್ ಪುಚ್ಛವತೋ ಹಯಾ ಹಿ ವದಂತಿ ತತ್ರ ಅತ್ರಾಧಿಕಾರೇ ಸ್ಥಿತಾಃ

ರಾಜಾ ತೈಃ ಉಪದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ ||

ಒಬ್ಬ ಕವಿ ಒಂದು ಕತ್ತೆಯನ್ನು ನೋಡಿ, ಅದರ ದುಃಸ್ಥಿತಿಗೆ ಮರುಗಿ, ಅದಕ್ಕೆ ಬದುಕಲು ಉತ್ತಮ ಸಲಹೆಯನ್ನು ಕೊಡುವ ಭಾವದಲ್ಲಿದೆ ಈ ಶ್ಲೋಕ. ಅರ್ಥ ಹೀಗೆ-

‘ಎಲೈ ಕತ್ತೆಯೇ, ನಿನ್ನನ್ನು ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಮಡಿವಾಳರ ಸೇವೆಯಲ್ಲಿದ್ದು ಬೆಳಗಿನಿಂದ ಸಂಜೆಯವರೆಗೆ ಮಡಿಬಟ್ಟೆ ಗಂಟನ್ನೂ, ಮಡಿಮಾಡದೆ ಉಳಿದ ಮೂಟೆಗಳನ್ನೂ ಹೊತ್ತುಹೊತ್ತು ನಿನಗೆ ಆಹಾರ ಸಿಕ್ಕಿದ್ದೇನು? ಕೆಲಸಕ್ಕೆ ಬಾರದ ಹುಲ್ಲು, ಹುಳ-ಹುಪ್ಪಟೆ ತಿಂದು ಮಿಕ್ಕ ಸೊಪು್ಪ-ಸದೆ. ಏನೂ ಸಿಗದಿದ್ದರೆ ಕಸವನ್ನೂ, ಕಾಗದವನ್ನೂ ತಿನ್ನುತ್ತೀಯೆ. ಇದು ‘ಕುಗ್ರಾಸ’- ಸರಿಯಾದ ಆಹಾರವಲ್ಲ. ಪಾಪ! ಸೊರಗಿರುವೆ. ಈಗ ಸುಖವಾಗಿರಬೇಕಾದರೆ ಒಂದುಪಾಯ ಮಾಡು. ರಾಜರ ಅರಮನೆ ಸೇರಿಕೋ. ಅಲ್ಲಿ ಬೇಯಿಸಿದ ಕಡಲೆ, ಹುರುಳಿ, ಹಲಸಂದೆಯಂಥ ಪುಷ್ಟ ಆಹಾರ ಭರ್ಜರಿ ದೊರೆಯುತ್ತದೆ. ಅಲ್ಲಿ ಹೇಗೆ ಪ್ರವೇಶ ಎನ್ನುವಿಯಾ? ಬಾಲ ಇರುವ ಪ್ರಾಣಿಗಳೆಲ್ಲ ಕುದುರೆಗಳೇ ಎಂಬುದು ಅಲ್ಲಿನ ಅಧಿಕಾರಿಗಳ ಗ್ರಹಿಕೆ, ವ್ಯಾಖ್ಯಾನ. ರಾಜನೋ? ಇಂಥವರು ಉಪದೇಶಿಸಿದ್ದನ್ನೇ ಕೇಳಿ ಕುಣಿಯುತ್ತಾನೆ. ಬುದ್ಧಿ ಹೇಳುವ ಜಾಣರು, ಕುದುರೆ-ಕತ್ತೆ ವ್ಯತ್ಯಾಸ ತಿಳಿದವರು ಎಲ್ಲರೂ ಅಲ್ಲಿ ಬಾಯಿ ಮುಚ್ಚಿಕೊಂಡಿರುತ್ತಾರೆ. ಅವರೆಲ್ಲ ತಟಸ್ಥ. ನಿನಗೆ ಅಲ್ಲಿ ಪ್ರವೇಶಿಸಲು ಇದೇ ಸದವಕಾಶ’.

ಈಗ ಅನ್ವಯ ನೋಡಿ. ಈ ಎರಡೂ ಅನ್ಯೋಕ್ತಿಗಳು ಇಂದಿನ ಸೋನಿಯಾ-ರಾಹುಲ ಕಾಂಗ್ರೆಸ್ಸು, ಕರ್ನಾಟಕದ ಆಳುಗರಿಗೆ ಹೇಗೆ ಅನ್ವಯ ನೋಡಿ. ಯಾರು ಸತ್ತರೂ ‘ಇದು ಆರ್​ಎಸ್​ಎಸ್ ಕೈವಾಡ, ಬಲಪಂಥೀಯರದು, ಇದು ಮೋದಿ-ಷಾ ಕೈಚಳಕ’ ಎನ್ನುವುದು ಇಲ್ಲಿನ ಚಾಳಿ! ಡಾ. ಕಲಬುರ್ಗಿಯವರ ಹತ್ಯೆಯ ಬಗೆಗೆ ಬೇರೆಯೇ ಕತೆ ಇದೆ ಎಂದು ಸೂಚ್ಯವಾಗಿ ಅಲ್ಲಲ್ಲಿ ಕೇಳಿಬರುತ್ತಾ, ಅದು ಆಳುಗರಿಗೂ ತಿಳಿಯುತ್ತಾ, ಇವರು ಕೊಲೆಗಡುಕರ ಪತ್ತೆಗೂ ಮುಂಚೆ- ಇಟಞಞಜಿಠಿಠಿಛಿಛ ಕಟಠಜಿಠಿಜಿಟ್ಞ ಏನು ಹೇಳಿಕೆಯಿತ್ತು ಅಬ್ಬರಿಸಿ, ಅಪಪ್ರಚುರಿಸಿ, ಆರ್ಭಟಮಾಡಿ, ರಾಜಕೀಯ ‘ಮೈಲೇಜು’ (ಮೈಲಿಗೆ ಅಲ್ಲ!) ಗಿಟ್ಟಿಸಿಕೊಂಡರೋ ಅದರಿಂದ ಹೊರಬರುವುದು ಆಗುತ್ತಿಲ್ಲ. ಒಬ್ಬರನ್ನು ಬೈದು, ಅದು ಸರಿಯಲ್ಲ ಎಂದು ತಿಳಿದ ಮೇಲೆ ಕ್ಷಮೆ ಕೇಳುವ ಪರಿಪಾಠ ಕಾಂಗ್ರೆಸ್ಸಿಗೆ ಇಲ್ಲ. ‘ಸ್ಟಾನ್ಲೇ’ ಕೊಲೆ- ಒಡಿಶಾದಲ್ಲಿ ನಡೆದುದು, ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಗಳ ಕೊಲೆ, ಇನ್ನೂ ಇತರ ಹಳೇ ಪ್ರಕರಣ ಬಿಡಿ. ಕರ್ನಲ್ ಪುರೋಹಿತ್, ಸಾಧಿ್ವ ಪ್ರಜ್ಞಾಸಿಂಗರ ಕತೆಯಲ್ಲಿ ಏನು ಕಂಡಿರಿ? ಯಾರಾರ ಮೇಲೋ ಹಾರಾಟ, ಹುಚ್ಚುಹಿಡಿದ ಪ್ರಾಣಿಯ ಸ್ಥಿತಿಯದಾಗುತ್ತದೆ. ನೇರಪ್ರಜ್ಞೆಯ ಗೋವಿನದಲ್ಲ! ಅಹ್ಮದ್ ಪಟೇಲರ ಗುಂಪಿನ ನಡುವೆ ವಾಸ್ತವ್ಯರಿಗೆ ದೇಶದ ಸ್ಥಿತಿ ಏನು ಗೊತ್ತು? ಹಗಲೆಲ್ಲ ಹಾರಾಡುವುದು ಆರ್​ಎಸ್​ಎಸ್ ಮೇಲೆ! ಎಷ್ಟು ಸಲ ಆಯಿತಯ್ಯ ರಾಹುಲರೇ? ಯಾರ ತಂಟೆಗೂ ಬಾರದ- ದೇಶಭಕ್ತರನ್ನು- ಹಿಂಸಿಸುವುದಷ್ಟೇ ನಿಮ್ಮ ಹಣೆಬರಹ- ಎಂಬುದು ಮೊದಲ ಅನ್ಯೋಕ್ತಿಯ ಚುಚ್ಚುಭಾವ! ಎಷ್ಟೆಲ್ಲ ಹಗರಣಗಳಾದವು?? ಯಾರನ್ನಾದರೂ ಬಿಟ್ಟುಕೊಟ್ಟಿರಾ? ಯಾರಿಗಾದರೂ ಶಿಕ್ಷೆಯಾಯಿತೇ? ಊಹೂಂ! ಅದು ‘ಮಿಯಾಂವ್’ ಅರ್ಥ.

ಎರಡನೆಯ ಶ್ಲೋಕಕ್ಕೆ ಬನ್ನಿ. ‘ಯಾರಿಗಾದರೂ ಸುಖಜೀವನ, ಶ್ರಮ, ಜವಾಬ್ದಾರಿಯಿಲ್ಲದ ಕೆಲಸ, ಸಂಬಳ-ಗಿಂಬಳ, ಸ್ಥಾನಹೋದರೂ ಬಿಡದ ಸರ್ಕಾರಿ ಬಂಗಲೆಗಳು, ಹಗರಣ ಆದರೂ ಏನೇ ತಿಂದರೂ ರಕ್ಷಿಸುವ ರಕ್ಷಕವರ್ಗ, ಅಧಿಕಾರಿಗಳು ಮುಚ್ಚಿಹಾಕುವ ಭಾಗ್ಯ ಇವು ಬೇಕಾದರೆ ನೀವು ಕಾಂಗ್ರೆಸ್ಸಿಗೆ ಸೇರಬೇಕು! ಗಾಂಧಿ ವಿಚಾರವಾದ, ಪ್ರಾಮಾಣಿಕತೆ, ಗ್ರಾಮಸೇವೆ, ಬ್ರಹ್ಮಚರ್ಯ, ಮದ್ಯಪಾನ ನಿಷೇಧಗಳಿಗೆ ಗಂಟುಬಿದ್ದು ಕುಳಿತರೆ ನೀವು ಕತ್ತೆಯಾಗಿಬಿಡುತ್ತೀರಿ. ಅಹ್ಮದ್ ಪಟೇಲ್, ಮಣಿಶಂಕರ ಅಯ್ಯರ್, ದಿಗ್ವಿಜಯ ಸಿಂಗ್, ಜಯಂತೀ ನಟರಾಜನ್, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಕರ್ನಾಟಕದ ‘ಹುಲಿ’ಗಳು ಇಂಥವರನ್ನು ನೋಡಿ, ಸುಖವಾಗಿರುವುದನ್ನು ಕಲಿಯಬೇಡವೇ? ಅಲ್ಲಿ ರಾಜಾಜಿ ಬೇಡ, ನಿಜಲಿಂಗಪ್ಪ ಬೇಡ, ಹನುಮಂತಯ್ಯ ಬೇಡ, ಮುನಿ ್ಷ ಬೇಡ, ಜೈ ಹುಜೂರರೇ ಬೇಕು. ಅಧಿಕಾರದ ಹೈಕಮಾಂಡ್​ಗೆ ಏನೂ ತಿಳಿಯದು. ಯಾರು ಏನು ಹೇಳಿದರೆ ಅದೇ ಸರಿ. ಏಕೆ? ಇಂಡಿಯಾ ಈಜಿಠ್ಚಟಡಛ್ಟಿಢ ಆಗಿಯೇ ಇಲ್ಲ! ಶಿವರಾಜ್ ಪಾಟೀಲ್, ಪ್ರತಿಭಾ ಪಾಟೀಲ್, ಇಂದಿನ ಕರ್ನಾಟಕದ ಅಧಿಕಾರಾರೂಢ ಧಣಿಗಳು, ಹಿಂದಣ ರಕ್ಷಾ ಮಂತ್ರಿ, ವಿದೇಶಾಂಗ ಮಂತ್ರಿ, ಗೃಹಮಂತ್ರಿ, ಕಲ್ಲಿದ್ದಲು ಮಂತ್ರಿ- ಇಂಥವರೇ ಸಾಕಾಗಿರುವಾಗ, ನಡುವೆ ನುಸುಳಿಬಿಡು, ಬಚಾವ್ ಆಗುತ್ತೀಯೆ. ಅವರೂ ಬದುಕುತ್ತಾರೆ. ಇದುಬಿಟ್ಟರೆ ನೀನು ಬುದ್ಧಿಯಿಲ್ಲದ ಪ್ರಾಣಿ’ ಎಂಬುದು ವ್ಯಂಗ್ಯ!

‘ಗೋಲ್​ವಾಲ್ ರಾಧಾಕೃಷ್ಣ’ ಚಿತ್ರದ ಸೀತಾಪತಿಯಂತೆ- ‘ನೀವೂ ತಪು್ಪ ತಿಳ್ಕೊಂಡ್ರಾ? ಅಯ್ಯೋ ಇವರಿಗೂ ಕೋಪ ಬಂತಲ್ಲ?’ ಎಂದು ನಾನು ಉದ್ಗರಿಸುವುದು ಬೇಡ, ನೀವು ಈ ಹೋಲಿಕೆಗಳಿಗೆ ಅಪಾರ್ಥ ಮಾಡುವುದು ಬೇಡ. ಈ ಎರಡನೆಯ ಶ್ಲೋಕ ‘ಸುಭಾಷಿತ ರತ್ನ ಭಾಂಡಾಗಾರ’ ಎಂಬ ಗ್ರಂಥದ್ದು (ಪುಟ 234), ನನ್ನದಲ್ಲ.

ಉತ್ತಮ ಪ್ರಧಾನಿಗೆ ‘ಯಾರ ಯೋಗ್ಯತೆ ಏನು? ಏನು ಅಧಿಕಾರ ಕೊಟ್ಟರೆ ಕೆಲಸ ಸಾಧಿಸುತ್ತಾರೆ?’ ಎಂಬ ಪ್ರಜ್ಞೆ ಇರಬೇಕು. ಕರ್ನಾಟಕದಲ್ಲಿ ಯಾರೂ ಗೃಹಮಂತ್ರಿ ಆಗಬಹುದು, ಯಾರೂ ಜೈಲು ವಿಭಾಗಾಧಿಕಾರಿ ಆಗಬಹುದು. ಯಾರೂ ಅರಣ್ಯಖಾತೆಯ ಮಂತ್ರಿ ಆಗಬಹುದು! ಗೌರಿ ಲಂಕೇಶರ ಶೋಚನೀಯ ಹತ್ಯೆಗೆ ಎಲ್ಲರೂ ಬೆಚ್ಚಿದ್ದಾರೆ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಂಪ ರಾದ್ಧಾಂತ ಮಾಡಿ, ಆರ್​ಎಸ್​ಎಸ್, ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಪೆಟ್ಟು ಬೀಳುತ್ತಿದೆ. ಆರ್​ಎಸ್​ಎಸ್ ಕಾರ್ಯಕರ್ತರ ಕೊಲೆಯಾದರೆ ಬೆಲೆಯಿಲ್ಲ! ತಿಳಿಯಿರಿ- ಬೆಲೆ ಇರುವುದೆಲ್ಲ ವಿಚಾರವಾದಿಗಳ ಜೀವಕ್ಕೇ! ಯಾರಿಗೆ? ಆತ್ಮದ ನಂಬಿಕೆ ಇಲ್ಲದ ಜೀವಿಗಳಿಗೆ ಮಾತ್ರ ಬೆಲೆ ಇಲ್ಲುಂಟು.

ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನೂ ಪಾಂಡವರಿಗೆ ಕೊಡೆನೆಂದ ದುರ್ಯೋಧನ ಸತ್ತಾಗ, ಒಂದು ತೊಡೆಯನ್ನೇ ತೋಳ ತಿಂದಾಗಿತ್ತು. ದವಡೆ ಮುರಿದು ಗುರುತೂ ಹತ್ತಲಿಲ್ಲ! ಹಾಗೆಂದು ಕಾಶ್ಮೀರ ಕವಿ ಕ್ಷೇಮೇಂದ್ರ ‘ಭಾರತ ಮಂಜರಿ’ಯಲ್ಲಿ ಬರೆದಿದ್ದಾನೆ. ದುರ್ಯೋಧನನ ಆಸ್ಥಾನವೂ ಹಾಗೇ ಇತ್ತು. ದ್ರೋಣನೂ ಒಂದೇ ಕರ್ಣನೂ ಒಂದೇ, ಭೀಷ್ಮನೂ ಒಂದೇ ಶಕುನಿಯೂ ಒಂದೇ ಎಂಬ ಸಾಮಾಜಿಕ ಸಮೀಕರಣದಲ್ಲಿ ಕಾಣುವುದೇ ‘ಕುದುರೆ=ಕತ್ತೆ’ ಎಂಬ ಸಮೀಕರಣ. ಕೇರಳ, ಬಂಗಾಳ, ಕಾಶ್ಮೀರಗಳಲ್ಲೂ ಇದೇ ಭ್ರಮೆ! ಹಿಂಸಾಚಾರದಿಂದ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಭ್ರಮೆ! ಕರ್ನಾಟಕದ ಅಭಿವೃದ್ಧಿಗೆ ದುಡಿದ ವಿಶ್ವೇಶ್ವರಯ್ಯ ನಮಗೆ ಬೇಡ, ಸಾಹಿತಿಗಳಲ್ಲಿ ಡಿವಿಜಿ, ಬೇಂದ್ರೆ ಬೇಡ. ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸರಳಜೀವಿಗಳು ಬೇಡ. ಬೆಂಗಳೂರಲ್ಲಿ ಸೈಕಲ್ ಶಾಮಣ್ಣ ಅಂತ ಇದ್ದರು. ಇವರು ಬೇಡ. ಹಣತಿನ್ನುವ, ತಿನ್ನಿಸುವ, ಏನನ್ನೂ ಕಬಳಿಸಿ ಜೀರ್ಣಿಸಿಕೊಳ್ಳುವ ಪ್ರಾಣಿಗಳೇ ಬೇಕು! ಅಯ್ಯನವರೇ! ನಿಮ್ಮವರೇ ನಿಮ್ಮ ಮೇಲೆ ಸಿಡಿಯುತ್ತಿದ್ದಾರೆ. ಯಾವ ಸಿಡಿಮಿಡಿ ಸ್ವಾಮಿಯೂ ಕಾಪಾಡಲಾರ! ಹಿಂದೂ, ದಮನಕ್ಕೊಳಗಾದ ಸಮಾಜ ಎಚ್ಚೆತ್ತಿದೆ. ‘ಅಹಿಂದ’ ನಡೆಯುವುದಿಲ್ಲ. ‘ಅಹಿಂಸಾ’ ತಲೆ ಎತ್ತಿದೆ. ನೀವು ಹೇಳಿದ್ದೇ ನ್ಯಾಯವಲ್ಲ! ಎಲ್ಲರನ್ನೂ ಸಮಾನವಾಗಿ ಕಾಣಲು ಎರಡೂ ಕಂಗಳ ದೃಷ್ಟಿ ಒಂದೇ ಆಗಬೇಕು! ಜೈಲಿಗೆ ಹೋಗಲಿರುವ ‘ರತ್ನ’ಗಳಾರೂ ನಿಮ್ಮನ್ನು ಉಳಿಸಲಾರರು. ಉಳಿಸುವುದು ಧರ್ಮ, ಸನಾತನ, ಅಕೃತಕ, ಅನಾದಿ ಮಾನವಧರ್ಮ. ಕೇರಳದ ಪಿಣರಾಯ್, ಬಂಗಾಳದ ಮಮತಾ ನಿಮ್ಮನ್ನು ಕಾಪಾಡುತ್ತಾರೆಯೇ? ಭಾರತ ಸಂಸ್ಕೃತಿಯ ಗಂಧವೇ ಇಲ್ಲದ ಹೈಕಮಾಂಡ್ ನಿಮ್ಮನ್ನು ರಕ್ಷಿಸಲಾರದು. ಈಗಲಾದರೂ ನ್ಯಾಯ ಸರಿತೂಗಿ. ಎಲ್ಲ ಜೀವಗಳ ಬೆಲೆಯೂ ಒಂದೇ. ಯಾರೂ ದುರ್ಮರಣಕ್ಕೀಡಾಗಬಾರದು. ಹಾಗಂತ ಯಾರೂ ಸಿಕ್ಕಸಿಕ್ಕಂತೆ ಮಾತಾಡಬಾರದು, ಬೆರೆಯಬಾರದು. ಈ ಬಿಗಿ ಬರುವುದು ಆಡಳಿತಾರೂಢರ ಸನ್ನಡತೆಯಿಂದ. ಅಲ್ಲೇ ದುರ್ನಡತೆಯಾದರೆ? ಗೋವಿಂದ!!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top