Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಕಾವೇರಿ ನೀರಿನ ಹಕ್ಕನ್ನು ಬಿಡಲಾಗದು

Wednesday, 19.07.2017, 3:00 AM       No Comments

| ಸಜನ್​ ಪೂವಯ್ಯ

‘ಕಾಲಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬುದು ನದಿಯು ನಮ್ಮೆದುರು ಬಿಚ್ಚಿಡುವ ರಹಸ್ಯ; ಏಕಕಾಲಕ್ಕೆ ಉಗಮ ಸ್ಥಾನದಲ್ಲಿ, ಜಲಪಾತದಲ್ಲಿ, ಜಲವಿಹಾರ ತಾಣದಲ್ಲಿ, ಪ್ರವಾಹದಲ್ಲಿ, ಸಮುದ್ರದಲ್ಲಿ ಮತ್ತು ಪರ್ವತ ಶಿಖರಾಗ್ರದಲ್ಲಿ ಹೀಗೆ ಎಲ್ಲೆಲ್ಲೂ ಕಾಣಿಸಿಕೊಳ್ಳುವುದು ಅದೇ ನೀರೇ ಆದರೂ, ವರ್ತಮಾನವೆಂಬುದು ಅದರ ಅಸ್ತಿತ್ವದ ಕುರುಹಾಗುತ್ತದೆಯೇ ವಿನಾ, ಭೂತ-ಭವಿಷ್ಯತ್ ಕಾಲಗಳ ಛಾಯೆಯಲ್ಲ’

| ಹರ್ಮನ್ ಹೆಸ್

ಮುಂಗಾರಿನ ಪುನರಾವರ್ತನೆ ಮತ್ತು ವೈಫಲ್ಯಗಳು ಈಗ, ಕಾವೇರಿ ನೀರಿನ ವಿವಾದದ ಮರುಕಳಿಕೆ ಮತ್ತು ತರುವಾಯದಲ್ಲಿ ಅದು ತಂದೊಡ್ಡುವ ಸಮಸ್ಯೆಗಳ ಪರ್ಯಾಯರೂಪವೇ ಅಗಿಬಿಟ್ಟಿವೆ. ಆದರೆ ಇಂಥ ಸಮಸ್ಯೆಗಳಿಂದ ನಮ್ಮ ಹೋರಾಟಗಳೇನೂ ದುರ್ಬಲವಾಗುವುದಿಲ್ಲ. ಕರ್ನಾಟಕದ ನಿವಾಸಿಗಳಾದ ನಮಗೆ ಕಾವೇರಿಯ ಸಹಜ ಹರಿವಿನ ಮೇಲೆ ಹಕ್ಕಿದೆ ಮತ್ತು ಈ ವಿಷಯದಲ್ಲಿ ಯಾರದ್ದೂ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಕರ್ನಾಟಕದ ರೈತಬಂಧುಗಳು ಮತ್ತು ಪಟ್ಟಣ-ನಗರಗಳಲ್ಲಿ ನೆಲೆಗೊಂಡಿರುವ ಜನರು ಕ್ರಮವಾಗಿ ನೀರಾವರಿ ಮತ್ತು ಪೋಷಣೆಯ ಅಗತ್ಯಗಳಿಗೆಂದು ಕಾವೇರಿ ನೀರಿನ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ. ಅನೇಕ ಭೌಗೋಳಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮರ್ಥನೆಗಳಲ್ಲೂ ಈ ನಿಲುವಿಗೆ ಬೆಂಬಲ ಸಿಗುತ್ತದೆ. ನಮ್ಮ ಸಂವಿಧಾನವು ಈ ಗ್ರಹಿಕೆಯನ್ನು ದೃಢೀಕರಿಸುತ್ತ, ನೀರಿನ ಬಳಕೆಗೆ (ಅಂದರೆ, ನೀರು ಪೂರೈಕೆ, ನೀರಾವರಿ, ಕಾಲುವೆ, ನಾಲೆ, ಅಣೆಕಟ್ಟು, ಜಲಸಂಗ್ರಹಣೆ ಮತ್ತು ಜಲವಿದ್ಯುತ್ ವ್ಯವಸ್ಥೆಗಳಿಗೆ) ಸಂಬಂಧಿಸಿ ಕರ್ನಾಟಕಕ್ಕಿರುವ ಕಾನೂನಾತ್ಮಕ ಹಕ್ಕನ್ನೂ ಖಾತ್ರಿಪಡಿಸಿದೆ.

ಈಗಾಗಲೇ ಅಂಗೀಕರಿಸಿರುವಂತೆ, ಕರ್ನಾಟಕ ರಾಜ್ಯದಿಂದ ಚಲಾಯಿಸಲ್ಪಡುತ್ತಿರುವ ಮೇಲ್ಕಾಣಿಸಿದ ಸ್ವಾಮ್ಯದ ಹಕ್ಕು, ಅಂತಾರಾಜ್ಯ ನದಿಗಳ ನಿಯಂತ್ರಣ ಮತ್ತು ಅಭಿವೃದ್ಧಿಯನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಕೇಂದ್ರದ ಅಧಿಕಾರಕ್ಕೆ ಒಳಪಟ್ಟಿದೆ ಮತ್ತು ಸಂಸತ್ತಿನ ಅಭಿಪ್ರಾಯದನುಸಾರ ಇದು ಯಥೋಚಿತ ಕ್ರಮವೂ ಹೌದು. ಸಂಸತ್ತಿನಿಂದ ಜಾರಿಮಾಡಲ್ಪಟ್ಟ ‘ನದಿ ಮಂಡಳಿಗಳ ಕಾಯ್ದೆ 1956’ ಕೂಡ ಅಂತಾರಾಜ್ಯ ನದಿಗಳ ನಿಯಂತ್ರಣ ಮತ್ತು ಅಭಿವೃದ್ಧಿಯನ್ನು ಹತೋಟಿಗೆ ತೆಗೆದುಕೊಳ್ಳುವ ಆಶಯವನ್ನು ಅಕ್ಷರಶಃ ಹೊಂದಿದೆ. ಆದಾಗ್ಯೂ, 1956ರ ಈ ಕಾಯ್ದೆಯು, ಈ ವಿಷಯಗಳಲ್ಲಿ ಭಾವತಃ ತೊಡಗಿಸಿಕೊಂಡಿದ್ದು ಕಮ್ಮಿಯೇ. ಅಂತಾರಾಜ್ಯ ಜಲವಿವಾದಗಳ ಕುರಿತಾಗಿ ರಾಜ್ಯ ಸರ್ಕಾರಗಳಿಗೆ ಸಲಹೆಯನ್ನಷ್ಟೇ ನೀಡುವ ನದಿ ಮಂಡಳಿಗಳ ಸ್ಥಾಪನೆಗಷ್ಟೇ ಇದು ಅನುವುಮಾಡಿಕೊಟ್ಟಿದೆ ಎನ್ನಲಡ್ಡಿಯಿಲ್ಲ. ಆದ್ದರಿಂದ, ಪರಸ್ಪರರ ಪ್ರಯೋಜನಕ್ಕಾಗಿ ಅಂತಾರಾಜ್ಯ ನದಿಗಳ ಅಭಿವೃದ್ಧಿಗೆ ಅವಕಾಶ ಒದಗಿಸಿಕೊಡುವುದು ಹಾಗಿರಲಿ, ಸಂಬಂಧಪಟ್ಟ ರಾಜ್ಯಗಳ ಭೌಗೋಳಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಪರಿಗಣಿಸಲ್ಪಟ್ಟು ಕಾರ್ಯಸಾಧ್ಯ ಪರಿಣಾಮಕಾರಿ ಕಾರ್ಯವಿಧಾನವೊಂದನ್ನು ಒದಗಿಸಲು ವಿಫಲವಾಗಿರುವುದರಿಂದ, ಸದರಿ ಕಾಯ್ದೆಯು ಹಲ್ಲಿಲ್ಲದ ಹುಲಿಯಾಗೇ ಉಳಿದುಬಿಟ್ಟಿದೆ. ಇಲ್ಲಿ ಮತ್ತೊಂದು ಸಂಗತಿಯನ್ನೂ ಉಲ್ಲೇಖಿಸಿದರೆ ಅನುಚಿತವಾಗಲಾರದು ಎನಿಸುತ್ತದೆ- ಸಂಸತ್ತಿನ ಮತ್ತೊಂದು ಶಾಸನವಾಗಿರುವ ‘ಅಂತಾರಾಜ್ಯ ನದಿನೀರು ವಿವಾದಗಳ ಕಾಯ್ದೆ, 1946’ರ ಅಡಿಯಲ್ಲಿ ನದಿ ವಿವಾದಗಳನ್ನು ನ್ಯಾಯಮಂಡಳಿಗಳಿಗೆ ವಹಿಸಿಬಿಡುವುದು ಒಂದು ಮಾಗೋಪಾಯವಾಗಿಬಿಟ್ಟಿದೆ; ತಾತ್ಪೂರ್ತಿಕ ಆಧಾರದ ಮೇಲಷ್ಟೇ ವಿವಾದಗಳನ್ನು ಪರಿಹರಿಸುವ ಈ ಮಂಡಳಿಗಳ ತೀರ್ವನಗಳನ್ನು ನ್ಯಾಯಸಮ್ಮತ ಮತ್ತು ಅಂತಿಮ ಎಂದು ಸ್ವೀಕರಿಸುವುದು ದುಸ್ತರವೇ.

ಈ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಮೈಸೂರು ರಾಜ್ಯದ ಐತಿಹಾಸಿಕ ಪರಿಪಾಠಗಳಿಂದ ಸ್ಪೂರ್ತಿಯನ್ನು ಪಡೆಯುವ ಮೂಲಕ, ತನ್ನ ಜನರಿಗೆ ಮೊದಲಿಗೆ ನೀರು ಪೂರೈಸುವ ಹಕ್ಕಿನ ಮುಂದುವರಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಅವಶ್ಯವಿರುವ ಎಲ್ಲ ಕ್ರಮಗಳಿಗೂ ಮುಂದಾಗಬೇಕಿರುವುದು ಕರ್ನಾಟಕ ರಾಜ್ಯದ ಹೊಣೆ; ಅದರಲ್ಲೂ ನಿರ್ದಿಷ್ಟವಾಗಿ, ದೇಶದ ಸಂಸತ್ತು ಸದರಿ ಚರ್ಚಾವಿಷಯಕ್ಕೆ ಸಂಬಂಧಿಸಿ ಕೈತೊಳೆದುಕೊಂಡಿರುವ ಈ ಸಂದರ್ಭದಲ್ಲಿ ಇದು ಅನಿವಾರ್ಯವಾಗಿದೆ. 1892ಕ್ಕೂ ಮುಂಚೆ, ಮೈಸೂರಿನ ರಾಜಾಡಳಿತವು, ‘ಹರ್ಮನ್ ಸಿದ್ಧಾಂತ’ವನ್ನಾಧರಿಸಿ ಕಾವೇರಿ ನದಿನೀರಿನ ಹರಿವಿನ ಮೇಲಿನ ತನ್ನ ಹಕ್ಕುಗಳನ್ನು ಸಮರ್ಥಿಸಿಕೊಂಡಿತ್ತು. ಅಂತಾರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಈ ಸಿದ್ಧಾಂತದಲ್ಲಿ ಅಂತರ್ಗತವಾಗಿರುವ ಷರತ್ತಿನಂತೆ, ತನ್ನ ಗಡಿಭಾಗದೊಳಗೆ ಹರಿಯುವ ಅಂತಾರಾಷ್ಟ್ರೀಯ ವ್ಯಾಪ್ತಿಯ ನದಿಯೊಂದರ ಭಾಗದ ಮೇಲೆ ದೇಶವೊಂದಕ್ಕೆ ಪರಿಪೂರ್ಣ ಪರಮಾಧಿಕಾರವಿರುತ್ತದೆ. ಅಂತಾರಾಜ್ಯ ನದಿ ವಿಷಯದಲ್ಲೂ ಈ ಸಿದ್ಧಾಂತವನ್ನು ಅನ್ವಯಿಸುವುದಾದರೆ, ಇಂಥ ನದಿಯ ಬಹುತೇಕ ಭಾಗವನ್ನು ತನ್ನ ನಿಗದಿತ ಉದ್ದೇಶಗಳೆಡೆಗೆ ತಿರುಗಿಸುವುದು ಕರ್ನಾಟಕಕ್ಕೆ ಸಾಧ್ಯವಾಗಬಹುದು. ಆದರೆ, ದುರದೃಷ್ಟವಶಾತ್, ಮೈಸೂರಿನ ರಾಜಾಡಳಿತದ ಅಹವಾಲಿಗೆ ಬ್ರಿಟಿಷ್ ಆಡಳಿತ ಕಿವುಡಾ ಗಿತ್ತು; ಇಂಥ ಯಾವುದೇ ಹಕ್ಕಿನ ಸಮರ್ಥನೆಯಿಂದ, ಅಂದಿನ ಮದ್ರಾಸ್ ಪ್ರಾಂತದ ಬ್ರಿಟಿಷ್ ಅಧಿಪತ್ಯವೂ ಸೇರಿದಂತೆ ಒಟ್ಟಾರೆ ಬ್ರಿಟಿಷ್ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂಬ ಗ್ರಹಿಕೆಯಲ್ಲಿ ಮೈಸೂರಿನಲ್ಲಿದ್ದ ಬ್ರಿಟಿಷ್ ಪ್ರತಿನಿಧಿ ಅದನ್ನು ತಿರಸ್ಕರಿಸಿದ.

ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಮತ್ತು ಕಟ್ಟುನಿಟ್ಟಾಗಿ ಮಾತಾಡುವುದಾದರೆ, ಇತರ ರಾಜ್ಯಗಳಿಗೆ ಹಾನಿಯಾಗುವ ರೀತಿಯಲ್ಲಿ ಅಂತಾರಾಜ್ಯ ನದಿಯೊಂದರಿಂದ ಎಲ್ಲ ನೀರನ್ನೂ ಸಂಪೂರ್ಣವಾಗಿ ತಿರುಗಿಸಿಕೊಳ್ಳುವುದು ಅನುಜ್ಞಾರ್ಹವಲ್ಲ. ಹಾಗಂತ, ತನ್ನೆದುರು ಮಂಡಿಸಲಾದ ಯಾವುದೇ ಮತ್ತು ಎಲ್ಲ ಕೋರಿಕೆಗೂ, ಅದರಲ್ಲೂ ನಿರ್ದಿಷ್ಟವಾಗಿ ರಾಜ್ಯದ ಜನರಿಗೆ ಹಾನಿಕಾರಕವಾಗಿ ಪರಿಣಮಿಸಬಲ್ಲಂಥ ಕೋರಿಕೆಗೂ ಕರ್ನಾಟಕವು ಗೋಣುಹಾಕಬೇಕು ಎಂಬರ್ಥ ಹೊಮ್ಮುವ ರೀತಿಯಲ್ಲಿ ಸಂವಿಧಾನದಡಿಯಲ್ಲಿನ ನದಿವ್ಯಾಪ್ತಿ ನಿರ್ಧಾರದ ಅಧಿಕಾರಗಳನ್ನು ವ್ಯಾಖ್ಯಾನಿಸಲಾಗದು. ಆತ್ಮಘಾತುಕ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕವು ನಿರ್ಬಂಧಕ್ಕೊಳಗಾಗುವಂಥ ಅಥವಾ ರಾಜ್ಯದ ಅಧಿಕಾರ ಚಲಾವಣೆ ಸಾಮರ್ಥ್ಯವು ವ್ಯತಿರಿಕ್ತವಾದ ಶಾಸನಾತ್ಮಕ ನ್ಯಾಯನಿರ್ಣಯ ಪ್ರಕ್ರಿಯೆಯಿಂದ ದಮನಿಸಲ್ಪಡುವಂಥ ಸನ್ನಿವೇಶಗಳು ಸೃಷ್ಟಿಯಾಗುವುದಕ್ಕೆ ಸಂಸತ್ತಿನ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವು ಅನುವುಮಾಡಿಕೊಡಬಾರದು. ಆದ್ದರಿಂದ, ಸಂವಿಧಾನಾತ್ಮಕವಾಗಿ ಅನುಜ್ಞಾರ್ಹವೆನಿಸಿರುವ ಎಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ರಾಜ್ಯದ ಜನರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿರುವಂಥ ವಿಲಕ್ಷಣ ಸನ್ನಿವೇಶವೀಗ ಸೃಷ್ಟಿಯಾಗಿದೆ ಎನ್ನಲಡ್ಡಿಯಿಲ್ಲ. ಆದರೆ, ಜನರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯವು ಇಂಥ ಸಮರ್ಥ ಯತ್ನಗಳಿಗೆ ಮುಂದಾಗದಿರುವುದು ದುರದೃಷ್ಟಕರವೆನ್ನದೆ ವಿಧಿಯಿಲ್ಲ.

ಸಂವಿಧಾನವು ಜಾರಿಯಾಗುವುದಕ್ಕೂ ಬಹು ವರ್ಷ ಹಿಂದೆ, ‘ರಾವ್ ಆಯೋಗ’ ಎಂದೇ ಬಹುತೇಕವಾಗಿ ಉಲ್ಲೇಖಿಸಲ್ಪಡುವ ಇಂಡಸ್ ಆಯೋಗದ ವರದಿಯು ನ್ಯಾಯಶಾಸ್ತ್ರೀಯ ವಿವರಣೆಯೊಂದನ್ನು ಮಂಡಿಸಿತ್ತು; ಅಂತಾರಾಜ್ಯ ನದಿಗಳ ವಿವಾದ ಕುರಿತಾಗಿ ಈ ವಿವರಣೆಯನ್ನು ‘ಪ್ರಸಿದ್ಧ ಪ್ರಮಾಣವಾಕ್ಯ’ವಾಗಿ ಪರಿಗಣಿಸಲಾಗುತ್ತಿದೆ. ಈ ವಿವರಣೆಯ ಅನುಸಾರ, ಒಂದೊಮ್ಮೆ ವಿವಾದಗಳು ಸಮರ್ಪಕವಾಗಿ/ತೃಪ್ತಿಕರವಾಗಿ ಇತ್ಯರ್ಥಗೊಳ್ಳದಿದ್ದರೆ ಅಥವಾ ಒಪ್ಪಂದವೊಂದರ ಅನುಪಸ್ಥಿತಿ ಅಲ್ಲಿ ತಲೆದೋರಿದರೆ, ಧರ್ಮಸಮ್ಮತವಾದ ಹಂಚಿಕೆಯ ನಿಯಮವನ್ನು ಅನ್ವಯಿಸುವ ಮೂಲಕ, ಅಂದರೆ, ಪ್ರತಿ ರಾಜ್ಯವೂ ಒಂದೇ ನದಿನೀರಿನ ನ್ಯಾಯೋಚಿತ ಪಾಲನ್ನು ಪಡೆಯುವಂತಾಗುವುದಕ್ಕೆ ಅನುವುಮಾಡಿಕೊಡುವ ಮೂಲಕ ರಾಜ್ಯಗಳ ಹಕ್ಕುಗಳನ್ನು ನಿರ್ಣಯಿಸಬೇಕು. ಹಾಗಂತ, ಇಂಥದೊಂದು ಸಮಾನಸ್ಕಂಧತೆಯ ಬೇಡಿಕೆಯು, ಇತರರಿಗೋಸ್ಕರ ಸ್ವಹಿತಾಸಕ್ತಿಗಳನ್ನು ತ್ಯಾಗಮಾಡುವಂತೆ ಕರ್ನಾಟಕದ ಮೇಲೆ ಬಲಪ್ರಯೋಗ ಮಾಡುವ ಆಯುಧವಾಗಿ ಎಂದಿಗೂ ಪರಿಣಮಿಸಬಾರದು. ಹೀಗಾಗಿ ‘ಸಮನ್ವಯಕಾರಿ ಮಾಗೋಪಾಯ’ವನ್ನು ನೆಚ್ಚುವುದು ವಿವೇಚನೆ ಎನಿಸುತ್ತದೆ; ಸಂಸತ್ತಿನ ಅಗತ್ಯ ಮಧ್ಯಪ್ರವೇಶವು ಇಂಥ ಮಾಗೋಪಾಯಗಳಲ್ಲಿ ಒಂದಾಗಬಹುದು. ಆದರೆ, ‘ಎರಡೂ ಕೈ ಸೇರಿದರೆ ಚಪ್ಪಾಳೆ’ ಎನ್ನುವಂತೆ, ಈ ಆಶಯ ನೆರವೇರಲು ಉಭಯಪಕ್ಷಸ್ಥರೂ ಪರಸ್ಪರ ಸಹಕರಿಸಬೇಕಾಗುತ್ತದೆ. ಸಮಾನತೆಯನ್ನಾಧರಿಸಿದ ಬೇಡಿಕೆಯನ್ನು, ಕರ್ನಾಟಕದ ಜನರ ನ್ಯಾಯಸಮ್ಮತ ನಿರೀಕ್ಷೆಗಳನ್ನು ಸೋಲಿಸುವುದಕ್ಕಿರುವ ದಬ್ಬಾಳಿಕೆಯ ಸಾಧನವಾಗಿ ಪರಿವರ್ತಿಸಲಾಗದು.

ನದಿಯೆಂಬುದು ಸೌಕರ್ಯ-ಸವಲತ್ತಿಗಿಂತ ಮಿಗಿಲಾದುದು, ಅದೊಂದು ನಿಧಿಯಿದ್ದಂತೆ. ಸಮರ್ಪಕ ಸಮರ್ಥನೆಯ ಕೊರತೆಯಿಂದಾಗಿ ಮತ್ತು ‘ಸಮಾನತೆಯ ಹಕ್ಕುಸಾಧನೆ’ಯ ಕಾರಣದಿಂದಾಗಿ, ರಾಜ್ಯದ ಅಗತ್ಯಗಳನ್ನು ನಿರ್ಲಕ್ಷಿಸುವಂತಾಗುತ್ತಿದೆ ಎಂಬ ಕಾರಣಕ್ಕಾಗಿ, ಕರ್ನಾಟಕವು ಕಾವೇರಿ ನದಿನೀರಿನ ಮೇಲೆ ತನಗಿರುವ ಭೌತಿಕ ವ್ಯಾಪ್ತಿಯ ಅಧಿಕಾರವನ್ನು ಚಲಾಯಿಸುತ್ತಿದೆ ಎಂಬುದನ್ನು ಒತ್ತಿಹೇಳಬೇಕಾಗಿದೆ. ಇತರ ರಾಜ್ಯಗಳ ಹಿತಾಸಕ್ತಿಗಳನ್ನೂ ಕರ್ನಾಟಕ ಸಮಂಜಸವಾಗಿ ಪರಿಗಣಿಸಬೇಕು ಎಂಬುದೇನೋ ನಿಜ, ಆದರೆ ಕರ್ನಾಟಕದ ಪ್ರತಿಯೊಬ್ಬ ನಿವಾಸಿಗೂ ಸಮರ್ಪಕ ಪ್ರಮಾಣದಲ್ಲಿ ನೀರಿನ ಪೂರೈಕೆ ಸಿಗುವುದು ಖಾತ್ರಿ ಎಂಬುದನ್ನು ತೃಪ್ತಿಕರವಾಗಿ ಮನದಟ್ಟುಮಾಡಿಕೊಂಡ ನಂತರವೇ ಇಂಥ ಪರಿಗಣನೆಗೆ ಮುಂದಾಗಬೇಕಾಗುತ್ತದೆ. ತನ್ನ ಜನರೇ ಬಳಲುತ್ತಿರುವಾಗ ಇತರ ರಾಜ್ಯಗಳ ಹಿತಾಸಕ್ತಿಗಳನ್ನು ಕರ್ನಾಟಕ ಕಾಪಾಡುವುದಾದರೂ ಹೇಗೆ? ಇತರ ರಾಜ್ಯಗಳೂ ತಮ್ಮ ಜನರ ಹಿತಾಸಕ್ತಿಯ ರಕ್ಷಣೆಗೆ ಮುಂದಾಗುವುದರ ಜತೆಗೆ, ಕರ್ನಾಟಕದ ಮೇಲೆ ಅನವಶ್ಯಕ ಹೊರೆ ಹೊರಿಸದಿರುವುದಕ್ಕೆ ಬದ್ಧತೆ ತೋರಿದಾಗ ಮಾತ್ರವೇ ಕರ್ನಾಟಕವೂ ನೈತಿಕ ಹೊಣೆಗಾರಿಕೆ ಮತ್ತು ನ್ಯಾಯಶೀಲ ವರ್ತನೆ ಮೆರೆಯುವುದು ಸಾಧ್ಯವಲ್ಲವೆ?

ಮುಂಗಾರು ಮಳೆ ಅದೆಷ್ಟು ಅನಿಶ್ಚಿತವಾಗಿದೆ ಎಂಬುದು ಎಲ್ಲರಿಗೂ ಗೊತ್ತು; ಹೀಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಜಲಸಮಸ್ಯೆಗೆ ಸಮರ್ಪಕ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಾಗದಿರುವುದಕ್ಕೆ ಈ ಪರಿಸ್ಥಿತಿಯನ್ನು ನೆಪವಾಗಿ ಬಳಸುವಂತಾಗಿದೆ. ಸಮೋನ್ನತ ಕಾಲುವೆಗಳನ್ನು ಮತ್ತು ಸುರಂಗಗಳನ್ನು ನಿರ್ವಿುಸುವ ಮೂಲಕ ಹಾಗೂ ಸಂಗ್ರಹಣಾ ವ್ಯವಸ್ಥೆಗಳಿಂದ ಪಂಪ್ ಮಾಡುವ ಮೂಲಕ ಕಾಳಿ, ಶರಾವತಿ, ಚಕ್ರಾ, ನೇತ್ರಾವತಿ, ವಾರಾಹಿ, ಮಹದಾಯಿ, ಬೇಡ್ತಿ, ಅಘನಾಶಿನಿ ಮತ್ತು ಬರಪೊಳೆ ಸೇರಿದಂತೆ ಪಶ್ಚಿಮ ದಿಕ್ಕಿಗೆ ಹರಿಯುವ 13 ನದಿಗಳಿಂದ ನೀರನ್ನು ಬೇರೆಡೆಗೆ ತಿರುಗಿಸುವಂತೆ ಕೆಲವರು ಸಲಹೆಯಿತ್ತಿದ್ದಾರೆ. ಇಂಥ ಪ್ರಸ್ತಾವನೆ ತಾಂತ್ರಿಕವಾಗಿ ಕೈಗೂಡಬಹುದೆಂದು ಭಾವಿಸಿದರೂ, ಇತರ ರಾಜ್ಯಗಳು ಇಂಥ ಯೋಜನೆಯೊಂದಿಗೆ ಕೈಜೋಡಿಸುತ್ತವೆಯೇ ಮತ್ತು ಅದಕ್ಕೆ ತಗಲುವ ವ್ಯಕ್ತ-ಅವ್ಯಕ್ತ ವೆಚ್ಚಗಳನ್ನು ಹಂಚಿಕೊಳ್ಳುತ್ತವೆಯೇ? ಇಂಥ ಯೋಜನೆಗಳಿಗೆ ಅಗತ್ಯವಾಗುವ ನೆರವನ್ನು ಕೇಂದ್ರ ನೀಡುತ್ತದೆಯೇ? ಎಂಬ ಪ್ರಶ್ನೆಗಳಿಲ್ಲಿ ಉದ್ಭವಿಸುತ್ತದೆ. ಪ್ರಸ್ತಾವನೆಗಳು, ಸಲಹೆ-ಸೂಚನೆಗಳು ಮತ್ತು ಪರಿಕಲ್ಪನೆಗಳನ್ನು ಪ್ರಯೋಗಕ್ಕೆ ಒಡ್ಡುವ, ನಿರ್ಧರಿಸುವ, ಅಭಿವೃದ್ಧಿಪಡಿಸುವ, ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯು ಕೇವಲ ಒಬ್ಬರ ಹೆಗಲ ಮೇಲಿನ ಹೊರೆಯಾಗಬಾರದಲ್ಲ. ಸಮಷ್ಟಿಯ ಪ್ರಯೋಜನಕ್ಕೆ ಎಲ್ಲರ ಯೋಗದಾನವೂ ಅತ್ಯಗತ್ಯ ತಾನೇ?

ಕರ್ನಾಟಕದ ಒಬ್ಬೊಬ್ಬ ನಾಗರಿಕನೂ ರಾಜಕೀಯ ಅರಿವು ಹೊಂದಿದ್ದು, ಚರ್ಚಾವಿಷಯಗಳಲ್ಲಿ ಸಕ್ರಿಯನಾಗಿದ್ದು, ಅಪ್ರತಿಮ ಮಾತುಗಾರಿಕೆ ಮತ್ತು ನೈತಿಕ ಸಮರ್ಥನೆಯಲ್ಲಿ ಪಳಗಿದವನಾಗಿದ್ದು, ತನ್ನ ಹಕ್ಕುಗಳಿಗಾಗಿ ಯಶಸ್ವಿಯಾಗಿ ಹೋರಾಟ ನಡೆಸಬಲ್ಲವನಾಗಿದ್ದ ಪಕ್ಷದಲ್ಲಿ, ಅಥವಾ ಮತ್ತೊಬ್ಬರೊಂದಿಗಿನ ಸಮಸ್ಯೆಗೆ ಸೌಹಾರ್ದಯುತ ಪರಿಹಾರೋಪಾಯವನ್ನು ಕಂಡುಕೊಳ್ಳಬಲ್ಲವನಾಗಿದ್ದಲ್ಲಿ, ಇಂಥ ಸುಸಂಘಟಿತ ಸಮುದಾಯದ ಸಾರಭೂತ ರೂಪವೇ ಆಗಿರುವ ಬಲಾಢ್ಯ ಕರ್ನಾಟಕ ರಾಜ್ಯದಿಂದ ಸಣ್ಣ ಮಟ್ಟದ ಫಲಿತಾಂಶವನ್ನಾದರೂ ಏಕೆ ನಿರೀಕ್ಷಿಸಬೇಕು, ಅಲ್ಲವೇ?

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top