Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಕಾಲ ಎಲ್ಲವನ್ನೂ ಬದಲಿಸುತ್ತದೆ

Saturday, 20.05.2017, 3:00 AM       No Comments

| ರಾಜು ಭೂಶೆಟ್ಟಿ

ಕಾಡಿನಿಂದ ತಪ್ಪಿಸಿಕೊಂಡು ಬಂದ ನರಿಯೊಂದು ಹಳ್ಳಿಯೊಳಗೆ ನುಗ್ಗಿತು. ಗಡಿಬಿಡಿಯಲ್ಲಿ, ಅಲ್ಲಿನ ಮನೆಯೊಂದರ ಮುಂದೆ ಗಾಢ ಕೆಂಪುಬಣ್ಣವನ್ನು ತುಂಬಿಡಲಾಗಿದ್ದ ದೊಡ್ಡ ಪಾತ್ರೆಯೊಂದರಲ್ಲಿ ಬಿದ್ದುಬಿಟ್ಟಿತು. ಇದರಿಂದ ಮತ್ತೆ ಗಾಬರಿಗೊಂಡು ಅದರಿಂದ ಜಿಗಿದು ಓಡುವಾಗ, ಹಾದಿಯಲ್ಲಿ ನದಿಯೊಂದು ಸಿಕ್ಕಿತು. ನದಿಯನ್ನು ದಾಟುತ್ತಿರುವಾಗ ತನ್ನ ದೇಹದ ಬಣ್ಣ ಸಂಪೂರ್ಣ ಕೆಂಪುಬಣ್ಣಕ್ಕೆ ತಿರುಗಿರುವುದು ಕಂಡು ಅದರ ಮನದಲ್ಲೊಂದು ಕುಟಿಲ ಆಲೋಚನೆ ಹೊಳೆಯಿತು. ಕಾಡನ್ನು ಪ್ರವೇಶಿಸಿದ ತಕ್ಷಣ ಎಲ್ಲ ನರಿಗಳ ಸಭೆ ಕರೆದು- ‘ನಿಮಗೆಲ್ಲ ನಾಯಕನಾಗುವಂತೆ ಈ ಕಾಡಿನ ದೇವತೆಯು ನನಗೆ ಆಶೀರ್ವದಿಸಿ ಕಳಿಸಿದ್ದಾಳೆ. ಅದಕ್ಕೆ ಸಾಕ್ಷಿ ಎಂಬಂತೆ ನನ್ನ ದೇಹಕ್ಕೆ ಕೆಂಪುಬಣ್ಣವನ್ನು ನೀಡಿದ್ದಾಳೆ. ಇನ್ನು ಮುಂದೆ ನೀವೆಲ್ಲರೂ ನನ್ನ ಆದೇಶವನ್ನು ಚಾಚೂತಪ್ಪದೆ ಪಾಲಿಸಬೇಕು, ನನಗೆ ವಿಧೇಯರಾಗಿರಬೇಕು. ಒಂದು ವೇಳೆ ನನ್ನ ವಿರುದ್ಧ ನಡೆದುಕೊಂಡರೆ ದೇವತೆಯ ಶಾಪಕ್ಕೆ ಗುರಿಯಾಗಿವಿರಿ’ ಎಂದು ಹೆದರಿಸಿತು. ಬೆದರಿಕೆಯ ಮಾತು ಕೇಳಿ ಭಯಗ್ರಸ್ತವಾದ ಉಳಿದೆಲ್ಲ ನರಿಗಳು, ಆದೇಶವನ್ನು ಯಥಾವತ್ತು ಪಾಲಿಸುವುದಾಗಿ ಭರವಸೆ ನೀಡಿದವು. ಇದನ್ನು ಕೇಳಿ ‘ಕೆಂಪುನರಿ’ ಹಿರಿಹಿರಿ ಹಿಗ್ಗಿತು.

ಹೀಗೆ ಆ ಕೆಂಪುನರಿ ದಿನಕ್ಕೊಂದು ಆದೇಶ ಮಾಡುತ್ತಿತ್ತು, ಉಳಿದ ನರಿಗಳು ಹೆದರಿ ಅದನ್ನು ಪಾಲಿಸುತ್ತಿದ್ದವು. ಇದರಿಂದಾಗಿ ಕೆಂಪುನರಿಗೆ ಅಧಿಕಾರದ ಮದವೇರಿತು. ನರಿಗಳಷ್ಟೇ ಏಕೆ ಕಾಡಿನ ಉಳಿದೆಲ್ಲ ಬಲಾಢ್ಯ ಪ್ರಾಣಿಗಳೂ ತನ್ನ ಮಾತನ್ನು ಕೇಳುವಂತಾಗಬೇಕೆಂಬ ದುರ್ವಿಚಾರ ಮೊಳೆಯಿತು. ತಕ್ಷಣ ಹುಲಿ-ಸಿಂಹಗಳ ಸಭೆ ಕರೆದು, ಹಿಂದೆ ನರಿಗಳ ಸಭೆಯಲ್ಲಿ ಹೇಳಿದ್ದ ಕಟ್ಟುಕತೆಯನ್ನೇ ಹೇಳಿ ಹೆದರಿಸಿತು. ಆ ಬಲಾಢ್ಯ ಪ್ರಾಣಿಗಳೂ ಈ ಮಾತು ನಂಬಿ, ಕೆಂಪುನರಿಯನ್ನು ಕಾಡಿನರಾಜನೆಂದು ಒಪ್ಪಿಕೊಂಡವು. ಕೆಂಪುನರಿಯ ದರ್ಪ ಹೆಚ್ಚಿ, ಎಲ್ಲ ಬಲಾಢ್ಯ ಪ್ರಾಣಿಗಳಿಗೂ ತೊಂದರೆಕೊಡಲು ಶುರುಮಾಡಿದ್ದರ ಜತೆಗೆ, ಮಿಕ್ಕ ನರಿಗಳ ಜತೆ ಒಡನಾಡಿದರೆ ತನ್ನ ಘನತೆಗೆ ಕುಂದು ಎಂದು ಭಾವಿಸಿ ಅವನ್ನು ಕಾಡಿನಿಂದ ಹೊರಹಾಕಿತು. ಕೆಂಪುನರಿಯ ಕಾಟದಿಂದ ತೀವ್ರ ನೊಂದ ಕಾಡಿನೆಲ್ಲ ಪ್ರಾಣಿಗಳು ಅದಕ್ಕೆ ಸೂಕ್ತ ತಿರುಗೇಟು ನೀಡಲು ಕಾಯುತ್ತಿದ್ದವು. ಒಂದು ದಿನ ಎಲ್ಲ ಪ್ರಾಣಿಗಳೂ ಒಟ್ಟಾಗಿ ಕೆಂಪುನರಿಯ ಬಳಿಬಂದು, ‘ಕಾಡಿನಲ್ಲಿ ಆಟವೊಂದನ್ನು ಏರ್ಪಡಿಸಿದ್ದೇವೆ; ರಾಜರಾಗಿರುವ ನೀವು ಬರಲೇಬೇಕು’ ಎಂದು ಆಹ್ವಾನಿಸಿದವು. ಕೆಂಪುನರಿಗೆ ತುಂಬಾ ಖುಷಿಯಾಗಿ ಒಪ್ಪಿಕೊಂಡಿತು. ಆದರೆ ಅಲ್ಲಿ ಏರ್ಪಡಿಸಿದ್ದು ನೀರೆರಚುವ ಆಟ. ಅಧಿಕಾರದ ಮದದಲ್ಲಿದ್ದ ಕೆಂಪುನರಿಗೆ ಇದರ ಹಿಂದಿದ್ದ ತಂತ್ರ ಅರ್ಥವಾಗಿರಲಿಲ್ಲ. ಎಲ್ಲ ಪ್ರಾಣಿಗಳೂ ಒಗ್ಗೂಡಿ ರಭಸದಿಂದ ನೀರೆರಚುತ್ತಿದ್ದಂತೆ ಆ ವಂಚಕ ನರಿಯ ಮೈಮೇಲಿನ ಕೆಂಪುಬಣ್ಣವೆಲ್ಲ ತೊಳೆದು ನಿಜಬಣ್ಣ ಬಯಲಾಯಿತು! ಎಲ್ಲ ಪ್ರಾಣಿಗಳಲ್ಲೂ ಕ್ಷಮೆಯಾಚಿಸಿದ ಕೆಂಪುನರಿ ಇನ್ನು ಮುಂದೆ ಇಂಥ ತಪ್ಪುಮಾಡುವುದಿಲ್ಲ ಎಂದು ಹೇಳಿತು.

ಒಂದು ಪುಟ್ಟಮರ ಲಕ್ಷಾಂತರ ಬೆಂಕಿಕಡ್ಡಿಗಳನ್ನು ತಯಾರಿಸಬಹುದು; ಆದರೆ ಒಂದು ಬೆಂಕಿಕಡ್ಡಿ ಲಕ್ಷಾಂತರ ಮರಗಳನ್ನೇ ಸುಡಬಲ್ಲದು. ಇಂದು ಶಕ್ತಿಯುತವಾಗಿದ್ದವರು ಅಹಂಕಾರದಿಂದ ಮೆರೆದರೆ, ಅವರಿಗಿಂತ ಶಕ್ತಿಶಾಲಿಯಾದವರನ್ನು ಕಾಲ ಮುಂದುಮಾಡುತ್ತದೆ. ಆದ್ದರಿಂದ ಯಾರನ್ನೂ, ಯಾರ ಭಾವನೆಗಳನ್ನೂ ಹೀಯಾಳಿಸಿ ನೋಯಿಸಬಾರದು. ಕಾರಣ, ಕಾಲಕ್ಕೆ ಎಲ್ಲವನ್ನೂ ಬದಲಿಸುವ ತಾಕತ್ತಿದೆ.

Leave a Reply

Your email address will not be published. Required fields are marked *

Back To Top