Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಕಾರ್ಯದಕ್ಷರಿಂದ ಪ್ರಗತಿಯ ಕಾರ್ಯಸಿದ್ಧಿ

Tuesday, 12.09.2017, 3:03 AM       No Comments

ಯಾವುದೇ ಸರ್ಕಾರದ ಮಂತ್ರಿಮಂಡಲದಲ್ಲಿ ಕಾರ್ಯದಕ್ಷ ಮಂತ್ರಿಗಳಿದ್ದರೆ ಮಾತ್ರ ದೇಶಕ್ಕೆ, ರಾಜ್ಯಕ್ಕೆ ಏನಾದರೂ ಪ್ರಯೋಜನ. ಬರೀ ಜಾತೀಯ ಪ್ರಾತಿನಿಧ್ಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಇವಕ್ಕೇ ಆದ್ಯತೆ ನೀಡಿದರೆ ಸಾಧಿತವಾಗುವ ರಾಷ್ಟ್ರಹಿತವೇನು? ಪ್ರಗತಿಗಳೇನು? ಇನ್ನಾದರೂ ನಾವು ಅವಲೋಕಿಸಬೇಡವೆ?

 ‘ಧೀಃ’ ಎಂಬುದು ಬುದ್ಧಿಯ ಪರ್ಯಾಯಶಬ್ದ. ಇದರ ಕಾರ್ಯವೇ ‘ಧೈರ್ಯ’. ಬುದ್ಧಿಯಿಲ್ಲದವನಿಗೆ ಧೈರ್ಯ ಬರುವುದಿಲ್ಲ. ಪರಮ ಪವಿತ್ರವಾದ ಗಾಯತ್ರೀಮಂತ್ರವು ‘ಎಲ್ಲರಿಗೂ ದೇವರು ಸದ್ಬುದ್ಧಿಯನ್ನು ಇತ್ತು ಸತ್ಕಾರ್ಯಗಳಿಗೆ ಪ್ರಚೋದಿಸಲಿ, ಪ್ರೇರಿಸಲಿ‘ ಎಂದು ಬೋಧಿಸುವಲ್ಲಿ ಈ ಧೀವಿಶೇಷಕ್ಕೂ, ಕಾರ್ಯಪಟುತ್ವಕ್ಕೂ ಇರುವ ಸಂಬಂಧವನ್ನು ಬೋಧಿಸುತ್ತದೆ. ಒಬ್ಬನಿಗೆ ಸಾಧ್ಯವಾದ ಅಗಾಧ ಕೆಲಸ, ಇನ್ನೊಬ್ಬನಿಗೆ ಸುಲಭದ ಕೆಲಸವೂ ಆಗದುದಕ್ಕೆ ಈ ವ್ಯತ್ಯಾಸಗಳೇ ಕಾರಣ. ಸೆಕ್ಯುಲರಿಸ್ಟರಿಗೆ, ಎಲ್ಲ ಬಗೆಯ ಎಡಪಂಥೀಯರಿಗೆ ತಿಳಿಯುವುದಿಲ್ಲ ಈ ಸತ್ಯ. ಅಲ್ಲೇ ‘ಧೀ‘ ವಿನಾಶ, ಅವನತಿ, ಅಧಃಪಾತ, ವಿಕೃತಿ ವಿಶೇಷಗಳು.

ಇದನ್ನು ರಾಜಕಾರಣಕ್ಕೆ ಅನ್ವಯಿಸಿ ನೋಡಿ ಎಂದೆಂದಿನ ಸತ್ಯ ಅರಿಯಬಹುದು. ಧೃತರಾಷ್ಟ್ರ, ಸಂಜಯನಂಥ ವಿದ್ವಾಂಸನನ್ನು ಬರೀ ತನ್ನ ರಥ ನಡೆಸುವ ಗುಲಾಮನನ್ನಾಗಿ ನೇಮಿಸಿದ್ದ. ರಾಜ್ಯಭಾರ ವಹಿಸಿಕೊಂಡಾಗ ಯುಧಿಷ್ಠಿರ ಅವನನ್ನೇ ತನ್ನ ವಿತ್ತ ಸಚಿವನನ್ನಾಗಿ ನೇಮಿಸಿದ! ್ಕRight Man in the right post= ಇದು ಮೆರಿಟ್! ಮೀಸಲಾತಿಯಲ್ಲ! ಸಂಜಯ ಬ್ರಾಹ್ಮಣನೋ, ಕ್ಷತ್ರಿಯನೋ ಆಗಿರದೆ, ಕರ್ಣನಂತೆ ಸೂತನಾಗಿದ್ದ ಎಂಬಲ್ಲಿ ‘ಮೀಸಲಾತಿ‘ಯ ಅಂಶವನ್ನೇ ಕಾಣುವವರು ಕಾಣಲಿ!

ರಾಮಾಯಣದ ಸುಮಂತ್ರನೂ ಹಾಗೇ, ಕಾರ್ಯಕುಶಲ. ವಾಕ್​ಚಾತುರ್ಯವುಳ್ಳ ವಿವೇಕಿ. ದಶರಥನಿಗೂ ಬುದ್ಧಿಹೇಳುವ ಸಾಮರ್ಥ್ಯ ಇದ್ದವನು. ದುರ್ಯೋಧನ ಬರೀ ಅವಿವೇಕಿಗಳನ್ನೇ ಸುತ್ತ ಇಟ್ಟುಕೊಂಡಿದ್ದ- ಶಕುನಿ, ಕರ್ಣ, ಕಣಿಕ ಇಂಥವರು. ಅದರಿಂದ ರಾಜ್ಯಭಾರದಲ್ಲಿ ಘನತೆ, ಪ್ರಗತಿ, ಜನಪ್ರೀತಿ, ಜನರಿಗೆ ಇಹಪರ ಸೌಖ್ಯ, ಶಾಂತಿ, ಮೌಲ್ಯ ಸಂರಕ್ಷಣೆ, ವರ್ಧನೆ ಇವು ಏನೂ ಸಾಧಿತವಾಗಲಿಲ್ಲ.

ಯುಪಿಎ 1 ಮತ್ತು 2 ಅವಧಿಯ ಮಂತ್ರಿಮಂಡಲಗಳಲ್ಲಿ ಈ ಬುದ್ಧಿವೈಭವ- ಕಾರ್ಯಚಾತುರ್ಯಗಳನ್ನು ಏಕೆ ಕಾಣಲಾರಿರಿ? ಈಗಿನ ಕರ್ನಾಟಕದಲ್ಲಿಯೋ, ಬಂಗಾಳ, ಕೇರಳ, ದೆಹಲಿ, ಕಾಶ್ಮೀರಾದಿಗಳಲ್ಲಿಯೋ ನೀವು ಮಂತ್ರಿಮಂಡಲ ರಚನೆಯಲ್ಲಿ ಕಾಣುವ ಪ್ರಧಾನಾಂಶಗಳು ಎರಡೇ- 1) ಜಾತೀಯ ಪ್ರಾತಿನಿಧ್ಯ 2) ಪ್ರಾದೇಶಿಕ ಪ್ರಾತಿನಿಧ್ಯ. ಇವುಗಳಿಂದ ಸಾಧಿತವಾದ ರಾಷ್ಟ್ರಹಿತವೇನು? ಜನಸೌಖ್ಯ, ಕ್ಷೇಮ, ಪ್ರಗತಿಗಳೇನು?

‘ಯಾರು ಯಾವ ಮಂತ್ರಿ ಶಾಖೆಯನ್ನಾದರೂ ನಿಭಾಯಿಸಬಲ್ಲರು‘ ಎಂಬುದು Proven foolery ‘ಕಣ್ಣಿಗೆ ಮಣ್ಣೆರಚುವ ಕಲೆಯಲ್ಲಿ ಒಂದು ಪರಿಣತಿ‘. ವಿ.ಕೆ. ಕೃಷ್ಣ ಮೆನನ್​ರಿಂದ ಹಿಡಿದು ಮೊನ್ನೆಮೊನ್ನೆಯ ಎ.ಕೆ. ಆಂಟನಿವರೆಗೆ ರಕ್ಷಣಾ ಖಾತೆಯಲ್ಲಿ ಕಾಂಗ್ರೆಸ್ಸು ಸಾಧಿಸಿದ್ದೇನು? ತನ್ನ ಪಕ್ಷದ, ಹೈಕಮಾಂಡ್ ಎಂಬ ಮಹಾಭೂತದ ಖಜಾನೆ ಭರ್ತಿಮಾಡಿದ್ದು, ರಾಷ್ಟ್ರಹಿತದ ಬಲಿಕೊಟ್ಟಿದ್ದು. ನೆಹರು, ತಮಗಿಂತ ಬುದ್ಧಿವಂತರಾದವರನ್ನೆಲ್ಲ ಹೊರದೂಡಿ, ಒಂದು ನಾಟಕ ಸಂಘ ಮಾಡಿಕೊಂಡರು. ಅದೂ ಇದೇ ಆರಂಭದ ಕತೆ. ರಾಜಾಜಿ, ಮುನ್ಷಿ, ಕೊನೆಗೆ ಪಟೇಲ್ ಯಾರೂ ಅವರೊಡನೆ ಏಗಲು ನೆಹರು ಬಿಡಲಿಲ್ಲ. ದಡ್ಡನು ತನಗಿಂತ ಹೆಚ್ಚು ದಡ್ಡರನ್ನೇ ಅಡಿಯಾಳಾಗಿ ಬಯಸುತ್ತಾನೆ! ಶಿಕ್ಷಣ, ಸೇನೆ, ಸಾರ್ವಜನಿಕ ಇಲಾಖೆಗಳು, ಮಠ-ಮಂದಿರಗಳು- ಎಲ್ಲ ಬಗೆಯ ಸಾರ್ವಜನಿಕ ಸಂಘಸಂಸ್ಥೆಗಳಲ್ಲೂ ಇದನ್ನೇ ಕಾಣುತ್ತೀರಿ. ಅಲ್ಲಿ ಸ್ವಾರ್ಥ, ಸ್ವವೈಭವ, ಅಲಂಕಾರಿಕತೆ, ದುರುದ್ದೇಶಗಳೇ ಇರುವುದನ್ನು ರಾವಣನ ಮಂತ್ರಿಮಂಡಲ ಹಾಗೂ ದುರ್ಯೋಧನನ ಮಂತ್ರಿಮಂಡಲ ರಚನೆಯ ರೀತಿಗಳಲ್ಲಿ ಕಾಣಿರಿ.

‘ಯಾರು ಮುಖ್ಯಮಂತ್ರಿಗೆ/ಪ್ರಧಾನಿಗೆ/ಮೇಲ್ಪಟ್ಟ ‘ಹೈಕಮಾಂಡ್‘ ಎಂಬ ಭೂತಭೇತಾಳಕ್ಕೆ ‘ಜೈ, ಹುಜೂರ್‘ ಎಂದು ಸಲಾಂ ಹಾಕಿ, ಅಕಾರ್ಯವನ್ನೂ ಶ್ರದ್ಧೆಯಿಂದ ಮಾಡುವರೋ, ಅವರಿಗೇ ಆಯ್ದ ಮಂತ್ರಿಶಾಖೆಗಳು ಎಂಬುದು ಕಾಂಗ್ರೆಸ್ಸಿನ ‘ಧೀ‘ ವಿಶೇಷ, ವಿಕೃತಿ. ಮುಂಬೈ ತಾಜ್​ಕಟ್ಟಡ ಧ್ವಂಸ ಪ್ರಕರಣದಲ್ಲಿ ಆಗ ಗೃಹಮಂತ್ರಿಯಾಗಿದ್ದ ಶಿವರಾಜ್ ಪಾಟೀಲರು ದಿನಕ್ಕೆ ಮೂರೋ ನಾಲ್ಕೋ ಸಲ ಸೂಟು ಬೂಟು ಟೈ ಬದಲಾಯಿಸುತ್ತಾ ಕಾಲ ಕಳೆದದ್ದು ಬಹಿರಂಗ! ಆಯ್ಕೆ ಯಾರದ್ದು? ಸೋನಿಯಾಜೀ ಅವರದ್ದು! ಚೀನಿಯರು ಗಡಿಯಲ್ಲಿ ಅಕ್ರಮ ಪ್ರವೇಶಿಸಿದಾಗ ‘ಹಾಗೇನೂ ಆಗಿಲ್ಲ‘ ಎಂದು ಸಂಸತ್ತಿನಲ್ಲಿ ಹೇಳಿಕೆ ಇತ್ತು, ಪ್ರತಿಪಕ್ಷದವರು ಆಕ್ರಮಣ ಸಾಕ್ಷ್ಯ ಒದಗಿಸಿದಾಗ ಪೆಚ್ಚಾದ ರಕ್ಷಣಾಮಂತ್ರಿ ಎ.ಕೆ. ಆಂಟನಿಯವರು ಇನ್ನೊಂದು ಸಾಕ್ಷ್ಯ. ‘ನೀವು ನಮ್ಮನ್ನು ಬೆಂಬಲಿಸಿ, ನಿಮಗೆ ಕಾಶ್ಮೀರ ಬಿಟ್ಟುಕೊಡುತ್ತೇವೆ‘ ಎಂದು ಪಾಕ್ ನೆಲದಲ್ಲೇ ಘೋಷಿಸಿದ ಸಲ್ಮಾನ್ ಖುರ್ಷಿದ್! ರತ್ನಗಳು- ಎಲ್ಲಾ! ಪ್ರತಿಯೊಂದು ಖಾತೆ, ಪ್ರತಿಯೊಬ್ಬ ‘ಧೀ-ನಷ್ಟ‘ರ ಹೆಸರನ್ನೂ ಬರೆಯಲು ಇಲ್ಲಿ ಸ್ಥಳವಿಲ್ಲ. ‘ಭಾರತಕ್ಕೆ ಹೇಳುವವರು ಕೇಳುವವರು ಇಲ್ಲ, ಕಳ್ಳ ದರೋಡೆಕೋರರ ಸುಗ್ಗಿಯ ಕಣ ಇದು‘ ಎಂಬ ಮೊಘಲರ, ಬ್ರಿಟಿಷರ ಉತ್ತರಾಧಿಕಾರಿಗಳಾಗಿ ಬಂದ ಕಾಂಗ್ರೆಸ್ಸು ಸರ್ಕಾರಗಳ ರೀತಿ, ರಿವಾಜು, ನೀತಿಗಳೂ ಇದೇ ಆಗಿ ಮುಂದುವರಿದವು.

ಭಾಜಪದಲ್ಲಿ ವಾಜಪೇಯಿ-ಆಡ್ವಾಣಿ ಯುಗದಲ್ಲಿ ತಕ್ಕಮಟ್ಟಿಗೆ ಮಂತ್ರಿಗಳ ಆಯ್ಕೆಯ ವಿಷಯದಲ್ಲಿ ಇದೇ ಧೋರಣೆ- Provincial representation, caste consolidation ಅನ್ನು ನಿತ್ಯಸತ್ಯ ಎಂದು ಒಪ್ಪಿ, ಹೆಚ್ಚು ಸಾಧನೆ ಮಾಡಲಾಗಲಿಲ್ಲ! ಕರ್ನಾಟಕದಲ್ಲಿ ಕೂಡ. ಬಳ್ಳಾರಿ ಗಣಿಧಣಿಗಳನ್ನು ಒಳ ಸೇರಿಸಿದ್ದರಿಂದಾದ ಲಾಭವೇನು? ಕುರುಬ, ಒಕ್ಕಲಿಗ, ಲಿಂಗಾಯತ, ದಲಿತ ರೀತಿಯ ಆಯ್ಕೆಗಳು ಆಗಣ ಬಿಜೆಪಿ ಮುಖ್ಯಮಂತ್ರಿಯವರನ್ನೂ ರಕ್ಷಿಸುವುದಾಗಲಿಲ್ಲ! ಅಪ್ಪನವರೇ? ಅಯ್ಯನವರೇ? ಪ್ರಾಮಾಣಿಕರು ಹೊರಗೇ ಉಳಿದರು. ಒಳಗಿದ್ದವರೇ ದ್ರೋಹಿಗಳಾಗಿ, ಜಾತೀಯ ಸಮೀಕರಣ ಫಲಪ್ರದವಾಗಲಿಲ್ಲ. ಏಕೆ? ಆಗುವಂತೆಯೇ ಇರಲಿಲ್ಲ. ಅದು wrong equation ಆಯ್ತು.

ಮೋದಿ ಪ್ರಧಾನಿಯಾಗುವುದು ಆಡ್ವಾಣಿಯವರಿಗೆ ಸರಿಗಾಣಲಿಲ್ಲ! ‘ಬರಲಿದೆ ಸರ್ವಾಧಿಕಾರ- Dictatorship” ಎಂದು ಬಹಿರಂಗವಾಗಿಯೇ ಬೊಬ್ಬಿರಿದರು. ಮುನಿಸು ಇನ್ನೂ ಹೋಗಿಲ್ಲ. ‘ಅರ್ಹತೆ ಆಧಾರದ ಆಯ್ಕೆಗಳು ಚಲಾವಣೆಗೆ ಹೊಂದುವುದಿಲ್ಲ‘ ಎಂಬ ಅಂಜಿಕೆಯ, ಅಶ್ರದ್ಧೆಯ ಮನೋಭಾವದಲ್ಲಿ ‘ಗುಲಾಮೀ, ಬೌದ್ಧಿಕ ದಿವಾಳಿತನ‘ ಎನ್​ಡಿಎದಲ್ಲೂ ಮುಂದುವರಿಯಿತು. ಈಗ ಮೋದಿ ಬಿರುಗಾಳಿಯಾಗಿ ಬಂದು, ಆಂಗ್ಲಕವಿ ಷೆಲ್ಲಿಯ “Ode to the westwind” ಕವನದ ಆಶಯದಂತೆ, ಉದುರಿದ ಒಣ ತರಗೆಲೆಗಳನ್ನು ಗುಡಿಸಿ, ‘ಚಳಿಗಾಲ ಬಂದುದಾದರೆ, ವಸಂತವು ದೂರವಿರುವುದೇ?‘ ಎಂಬಂತೆ, ಅರುಣೋದಯ ಆಗಿದೆ, ಸೂರ್ಯೋದಯವನ್ನು ಇನ್ನು ಯಾರೂ ತಡೆಗಟ್ಟಲಾರರು ಎಂಬ ಕವಿವಾಣಿಗೆ ಇಂದಿನ ಭಾರತ ಸಾಕ್ಷಿಯಾಗಿದೆ. ಚೀನಾವನ್ನು ಬಗ್ಗಿಸಿಯಾಯ್ತು. ಕಪು್ಪಹಣ ದಾಂಧಲೆಗೆ ಕಡಿವಾಣವಾಯ್ತು, ಕಾಶ್ಮೀರ ದಾರಿಗೆ ಬರುತ್ತಿದೆ. ಜಾತೀಯವಾದಿಗಳ ಉಪಟಳಕ್ಕೆ ಕಡಿವಾಣ ಬಿದ್ದಿದೆ. ಸೇನೆಗೆ ರಾಷ್ಟ್ರಗಡಿ ರಕ್ಷಣಾ ವಿಷಯದಲ್ಲಿ ಪೂರ್ಣಸ್ವಾತಂತ್ರ್ಯ ಕೊಟ್ಟಾಗಿದೆ. ಇನ್ನುಳಿದುದು ಪ್ರಾದೇಶಿಕ ಪುಂಡರ ಬೇಟೆ. ಇವರ ಬಲ ಇರುವುದು ಜಾತೀಯ ವೋಟುಬ್ಯಾಂಕುಗಳಲ್ಲಿ, ‘ಅದನ್ನು ಮೀರಿ ಅಭ್ಯರ್ಥಿಗಳನ್ನು ಆಯುವುದು ಅಸಾಧ್ಯ‘ ಎಂಬ ಹತಾಶಸ್ಥಿತಿಗೆ ಮೋದಿ ಒಂದು ಔಷಧ ಕಂಡುಹಿಡಿದಿದ್ದಾರೆ. ಒಂದು ಮರೆತ ಸತ್ಯ ಹೇಳುತ್ತೇನೆ.

1) Community= ವೃತ್ತಿ ಸಮುದಾಯ, ದುಡಿಮೆಯ ಜನರ ಒಂದು ಅಂಶ, ಬೇರೆ. 2) Communalism= ಎಂಬ ಈ ಸಮುದಾಯಗಳ ಸಂಘಟಿತ, ದುರಭಿಮಾನದ, ಅದನ್ನೇ ಬಂಡವಾಳ ಮಾಡಿಕೊಂಡ ಪುಂಡನಾಯಕರ ಉಸಿರೇ ಬೇರೆ. ಇದು ನಮಗೆ ತಿಳಿಯದಂತೆ 70 ವರ್ಷಗಳ ಮಂಕು ನಮಗೆ ಹಿಡಿಸಿದ್ದು ಕಾಂಗ್ರೆಸ್ಸು, ಕಮ್ಯೂನಿಸ್ಟರು, ಎಡಪಂಥೀಯರು. Community ಇರುತ್ತದೆ, ಇರಬೇಕು, ಅದು ದುಡಿಮೆಯ ಕ್ಷೇತ್ರ. ಅಲ್ಲಿ ರಕ್ಷಣೆ, ಬೆಂಬಲ, ದುಡಿಮೆಗೆ ತಕ್ಕ ಫಲ ಬೇಕು. ರೈತ, ವ್ಯಾಪಾರಿ, ಉದ್ಯಮಿ, ಸಾಮಾನ್ಯ ಶ್ರಮಿಕ, ಹೂಗಾರ, ಅಗಸ, ರ್ದಜಿ, ಮೇಷ್ಟ್ರು, ಇಂಜಿನಿಯರು, ವೈದ್ಯ- ಈ ಬಗೆಯ ಸೇವಾಕ್ಷೇತ್ರಗಳಲ್ಲಿ ದುಡಿಮೆಯವರಿಗೆ ಆತ್ಮವಿಶ್ವಾಸ ಹೆಚ್ಚಬೇಕು. ಆದರೆ ಇವರೂ ಸಹಿತ ಬೇರೆ ಬೇರೆ ಜಾತಿಯವರನ್ನು ವೋಟುಬ್ಯಾಂಕು ಮಾಡಿಕೊಳ್ಳುವ Communal ಪರಿಗಣನೆಗಳು ನಿಮೂಲ ಆಗಬೇಕು. ‘ನೀನು ಯಾರಾದರೂ ಆಗಿರು, ಪ್ರತಿಭಾವಂತನಾಗು, ದುಡಿ, ಮೇಲೆದ್ದು ಬಾ‘ ಎಂಬ ವಾತಾವರಣ ಸೃಷ್ಟಿಯಾಗಿ, ಅಲ್ಲಿ ಅರ್ಹತಾ ಸಂಪಾದನೆಯಾದ ಹೊರತು ಈ ದೇಶ ಉದ್ಧಾರವಾಗುವುದಿಲ್ಲ. ಈಗ ಮಂತ್ರಿಮಂಡಲ ಪುನಾರಚನೆಯಲ್ಲಿ ‘ಮೋದಿ+ಷಾ‘ ಆರಂಭಿಸಿರುವ ಕಾಯಕ ಈ ದಾರಿಯದು. ನಿರ್ಮಲಾ ಸೀತಾರಾಮನ್ ರಕ್ಷಣಾ ಮಂತ್ರಿಯಾಗಿದ್ದು ಒಂದು ಸಾಕ್ಷಿ. ಒಬ್ಬರಿಗೆ ರೈಲ್ವೆ ಶಾಖೆ ಕೊಟ್ಟು, ಸರಿಬರದೆ ಕಾರ್ವಿುಕ ಶಾಖೆ ಇತ್ತು, ಸರಿಬರದೆ, Demotion ಆಗಿಸಿದ್ದು, ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಸಿದ್ಧೇಶ್ವರರಿಗೆ ಅವಕಾಶವಿತ್ತು, Non-performanceಗಾಗಿ ಕೈಬಿಟ್ಟದ್ದು ಮತ್ತೊಂದು ಸಾಕ್ಷಿ. ರಾಜೀವ್ ಪ್ರತಾಪ್ ರೂಡಿ, ಕಲ್ರಾಜ್ ಮಿಶ್ರ ಕೈಬಿಟ್ಟದ್ದು ಮಗದೊಂದು. ಕರ್ನಾಟಕಕ್ಕೆ ಬರಲಿರುವ ಚುನಾವಣೆಯಲ್ಲೂ ಈ ಜಾತ್ಯತೀತ ಮಾನದಂಡವನ್ನೇ ಮೋದಿ ಹಿಡಿಯುತ್ತಾರೆ, ಸಂಶಯವಿಲ್ಲ.

ಹಳೆಯ ಹುಲಿಗಳು, ಪಶುಗಳನ್ನೂ ಹಿಡಿಯಲಾಗದೆ, ಕಾಡಿಗೂ ಹೋಗಲಾಗದೆ, ಪ್ರಾಣಿಶಾಲೆಯ ಪಂಜರಗಳಲ್ಲಿ ಪ್ರಕಾಶಿಸಬೇಕಾಗುತ್ತದೆ. ಒಬ್ಬರು ನಿನ್ನೆ ಹೇಳುತ್ತಾರೆ- ‘ಕರ್ನಾಟಕದಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗುವುದು ಕಷ್ಟ‘ ಅಂತ! ಯಾಕೆ? ನಿಮ್ಮ ಚರಿತ್ರೆ ಹಾಗಿದೆ. ಕೆಂಗಲ್ ಹನುಮಂತಯ್ಯ ಅಂತಹ ಪ್ರತಿಭಾವಂತರನ್ನೂ ಆಳಗೊಡದಂತೆ ಮಾಡಿದವರು ಯಾರು? ಇಂದಿರಾ, ಅವರನ್ನೇ ಏಕೆ ರೈಲ್ವೆ ಮಂತ್ರಿಯನ್ನಾಗಿಸಿದರು? ಒಕ್ಕಲಿಗರಲ್ಲಿ ಪ್ರತಿಭಾವಂತರಿಲ್ಲವೇನ್ರಿ? ಲಿಂಗಾಯತರಲ್ಲಿ? ಕುರುಬರಲ್ಲಿ? ದಲಿತರಲ್ಲಿ? ಜಾತಿ ನೋಡದೆ ಪ್ರತಿಭೆ ನೋಡಿ. ಆಗ ಎಲ್ಲ ಪ್ರಾತಿನಿಧ್ಯವೂ ಆಗುತ್ತೆ. ತಪ್ಪು ಇರುವುದು ನಿಮ್ಮ ಕಂಗಳಲ್ಲಿ! ಮೋದಿ ಈಗಣ ರಾಷ್ಟ್ರಾಧ್ಯಕ್ಷರನ್ನು ಆಯ್ದದ್ದು ಹೇಗೆ?

ಒಂದು ಕತೆ ಹೇಳಿ ಮುಗಿಸುವೆ. ಎಂಟು ಕಳ್ಳರು ರಾತ್ರಿ ಒಬ್ಬ ಧನಿಕನ ಮನೆ ದೋಚಿ, ಹಣ ಒಡವೆ ಗಂಟುಕಟ್ಟಿದರು. ಪಕ್ಕದಲ್ಲಿ ನದಿ. ಅಲ್ಲೊಂದು ದೋಣಿ. ಕಳ್ಳರು ಕದ್ದದ್ದನ್ನು ಅಲ್ಲಿ ಹಾಕಿ ರಾತ್ರೋರಾತ್ರಿ ದೋಣಿಗೆ ಹುಟ್ಟುಹಾಕಿ, ಬಹುದೂರ ಹೋದ ಭ್ರಾಂತಿಯಲ್ಲಿದ್ದರು. ಬೆಳಗಾಗಿ ನೋಡುತ್ತಾರೆ, ದೋಣಿ ಇದ್ದಲ್ಲೇ ಇತ್ತು! ಏಕೆ? ಗೂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿರಲಿಲ್ಲ! ಇದು ‘ಪ್ರಗತಿ‘, ನೆಹರು, ಕಾಂಗ್ರೆಸ್ಸು, ಎಡಪಂಥೀಯರ ಜಾತಿಪ್ರಗತಿ! ಅಯ್ಯಾ, ಗೂಟದ ಹಗ್ಗ ಬಿಚ್ಚಿ, ದುಡಿಮೆಯ ಫಲವನ್ನು ಜನರಿಗೆ ತಲುಪಿಸಿ. ಹಗರಣ-ಮುಕ್ತ ಸರ್ಕಾರ ಬರುತ್ತೆ.

ಈ ಕತೆ ಹೇಳಿದವರು ರಾಮಕೃಷ್ಣ ಪರಮಹಂಸರು! ಅವರ ಹೆಸರನ್ನಾದರೂ ಕೇಳಿರಬೇಕಲ್ಲ, ಅಯ್ಯನವರೇ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top