Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಕಾಯುವವರತ್ತ ಕಳಕಳಿ

Friday, 21.04.2017, 3:00 AM       No Comments

ಸೈನಿಕರು ಸದಾ ಸವಾಲುಗಳನ್ನು ಎದುರಿಸುತ್ತಲೇ ಕ್ಲಿಷ್ಟಕರವಾದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾವಿರಾರು ಅಡಿಗಳ ಎತ್ತರದಲ್ಲಿ, ಮೈನಸ್ 30-40 ಡಿಗ್ರಿ ತಾಪಮಾನದಲ್ಲಿ, ಹಿಮಾವೃತ ಪ್ರದೇಶದಲ್ಲಿ, ಯಾವುದೇ ಮೂಲಸೌಕರ್ಯಗಳು ತಲುಪದ ಸ್ಥಳದಲ್ಲಿ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುವ ಸೈನಿಕರ ಮನೋಸ್ಥೈರ್ಯ ಅಸಾಧಾರಣ ಹಾಗೂ ವಿಶಿಷ್ಟ. ಗಡಿಗಳಲ್ಲಿ ಕಾರ್ಯನಿರ್ವಹಿಸಬೇಕಾದರಂತೂ ಕ್ಷಣಕ್ಷಣಕ್ಕೂ ಅಪಾಯವನ್ನು ಎದುರುಗೊಳ್ಳುತ್ತಲೇ ಸಾಗಬೇಕು. ಶತ್ರುಪಡೆಯ ಗುಂಡು, ಗ್ರೆನೇಡ್ ಯಾವ ಕ್ಷಣದಲ್ಲಿ ಬಂದಪ್ಪಳಿಸಿ ಅನಾಹುತ ಸೃಷ್ಟಿಸುತ್ತದೆ ಎಂದು ಹೇಳಲಾಗದು. ಹೀಗೆ ಕರ್ತವ್ಯ ನಿರ್ವಹಿಸುತ್ತಲೇ ಸೈನಿಕ ಹುತಾತ್ಮನಾದರೆ ಅವನನ್ನೇ ನಂಬಿಕೊಂಡಿರುವ ಕುಟುಂಬ ಕಂಗೆಡುತ್ತದೆ. ಆರ್ಥಿಕ ಸಂಕಷ್ಟವೂ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದೊಂದು ಕ್ರಮಕ್ಕೆ ಮುಂದಾಗಿದ್ದು ಕರ್ತವ್ಯದ ವೇಳೆ ಸೈನಿಕರು ಹುತಾತ್ಮರಾದರೆ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಒದಗಿಸುವ ಬಗ್ಗೆ ಚಿಂತನೆ ನಡೆಸಿದೆ. ಕರ್ನಾಟಕ ಪ್ರವಾಸದಲ್ಲಿದ್ದ ರಕ್ಷಣಾ ಖಾತೆ ರಾಜ್ಯ ಸಚಿವ ಡಾ.ಸುಭಾಸ ಭಾಮ್ರೆ ಬುಧವಾರ ಈ ಮಾಹಿತಿ ನೀಡಿದ್ದಾರೆ.

ಸೇನಾಪಡೆ ಯೋಧರು ರಕ್ಷಣಾ ಸಚಿವಾಲಯಕ್ಕೆ ಸೇರಿದರೆ ಕೇಂದ್ರ ಮೀಸಲು ಪಡೆ ಪೊಲೀಸರು (ಸಿಆರ್​ಪಿಎಫ್) ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತಾರೆ. ಹಾಗಾಗಿ ಈ ವಿಷಯದಲ್ಲಿ ಎರಡೂ ಸಚಿವಾಲಯಗಳು ಚರ್ಚೆ ನಡೆಸಿ ಶೀಘ್ರದಲ್ಲೇ ನಿರ್ಣಯಕ್ಕೆ ಬರಲಾಗುವುದೆಂದು ಸಚಿವರು ಹೇಳಿರುವುದು ಗಮನಾರ್ಹ. ಹಣಕಾಸು ನೆರವು ಅಂದಾಕ್ಷಣ ಅದು ಸೈನಿಕನಿಗೆ ಕಟ್ಟುವ ಬೆಲೆ ಎಂದು ತಿಳಿಯಬೇಕಿಲ್ಲ. ದೇಶಕ್ಕಾಗಿ ಹೋರಾಡುತ್ತ ಪ್ರಾಣಾರ್ಪಣೆ ಮಾಡಿದರೆ ಆತನನ್ನು ನಂಬಿಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಬಾರದು ಎಂಬ ಕಳಕಳಿ ಈ ಚಿಂತನೆಯ ಹಿಂದಿದೆ. ಈ ಹಿಂದೆ ಒಆರ್​ಒಪಿ ಜಾರಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಶರಣಾಗಿದ್ದ ನಿವೃತ್ತ ಯೋಧನ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದರು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಕರ್ತವ್ಯನಿರತರಾಗಿರುವಾಗ ಸಾವನ್ನಪ್ಪುವ ಪೊಲೀಸರಿಗೂ ಕೋಟಿ ರೂ. ಪರಿಹಾರ ನೀಡುವ ಘೊಷಣೆಯನ್ನು ಕೇಜ್ರಿವಾಲ್ ಮಾಡಿದ್ದಾರೆ.

ಆದರೆ, ನಮ್ಮ ದೇಶದಲ್ಲಿ ಸೈನಿಕರ ಬೇಡಿಕೆಗಳು ಕೂಡಲೇ ಈಡೇರುವುದಿಲ್ಲ ಎಂಬುದು ವಿಪರ್ಯಾಸ. ಇದಕ್ಕೆ ‘ಸಮಾನ ಹುದ್ದೆ ಸಮಾನ ಪಿಂಚಣಿ’ (ಒಆರ್​ಒಪಿ) ಉತ್ತಮ ನಿದರ್ಶನ ಎನ್ನಬಹುದು. ಕಳೆದ ಹಲವು ದಶಕಗಳಿಂದ ನಿವೃತ್ತ ಸೈನಿಕರು ಒಆರ್​ಒಪಿ ಜಾರಿಗಾಗಿ ಆಗ್ರಹಿಸುತ್ತಲೇ ಬಂದಿದ್ದು ಇದಕ್ಕಾಗಿ ಹಲವು ಸ್ವರೂಪದ ಹೋರಾಟಗಳನ್ನು ನಡೆಸಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕಡೆಗೂ ಒಆರ್​ಒಪಿಯನ್ನು

ಜಾರಿಗೊಳಿಸುವ ಮೂಲಕ ಸೈನಿಕರ ಹಳೇ ಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ. ಈ ಕುರಿತು ಕೆಲ ಸಣ್ಣಪುಟ್ಟ ಅಸಮಾಧಾನ ಇನ್ನೂ ಇದೆ ಎಂಬುದು ಬೇರೆ ವಿಚಾರ. ಸೈನಿಕರಿಗೆ ಸಾಧ್ಯವಿರುವ ನೆರವು, ಸೌಲಭ್ಯ ನೀಡುವುದು ಸರ್ಕಾರದ ಜವಾಬ್ದಾರಿಯೂ ಹೌದು. ಇದರಿಂದ ಸೈನಿಕರ ಮನೋಬಲ ಹೆಚ್ಚುತ್ತದೆ; ಇತರರಿಗೂ ಸೇನೆ ಸೇರಲು ಉತ್ತೇಜನ ಸಿಕ್ಕಂತಾಗುತ್ತದೆ.

Leave a Reply

Your email address will not be published. Required fields are marked *

Back To Top