Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಕಾನೂನು ಮೌಢ್ಯ ತಡೆಯಲಿ, ವೈಯಕ್ತಿಕ ನಂಬಿಕೆಯನ್ನಲ್ಲ..

Thursday, 12.10.2017, 3:00 AM       No Comments

ಧಾರ್ವಿುಕ ಆಚರಣೆಯು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆಗಳಿಗೆ ಕೇಡುತರುವಂತಿದ್ದರೆ, ಮತ್ತೋರ್ವರ ಮೂಲಭೂತ ಹಕ್ಕನ್ನು ಅತಿಕ್ರಮಿಸುವಂತಿದ್ದರೆ, ಕಾನೂನು ಅದನ್ನು ನಿಷೇಧಿಸಬೇಕು. ಮಾಟದಂಥ ಮೌಢ್ಯಾಚರಣೆ ನಿಸ್ಸಂದೇಹವಾಗಿನಿಷೇಧಾರ್ಹ. ಆದರೆ, ಕಾಣಿಕೆ ಹುಂಡಿಗೆ ನಾಣ್ಯ ಹಾಕುವುದು ಶ್ರೇಯಸ್ಕರ ಎಂಬ ವೈಯಕ್ತಿಕ ನಂಬಿಕೆಯನ್ನು ತಡೆಗಟ್ಟುವ ಸಾಧನವಾಗಿ ಕಾನೂನಿನ ಬಳಕೆಯಾಗಬಾರದು. 

ರಾಜ್ಯದಲ್ಲಿ ರೂಪಿಸಲಾಗಿರುವ ‘ಅಮಾನವೀಯ ಹಾಗೂ ಕೆಟ್ಟ ಆಚರಣೆಗಳ ನಿಷೇಧ’ ವಿಧೇಯಕ ಕುರಿತು ಕಳೆದ ಅಂಕಣದಲ್ಲಿ ಚರ್ಚೆ ಆರಂಭಿಸಿದ್ದೆವು. ಅನವಶ್ಯಕವಾದ ಅಥವಾ ಅತಿರೇಕದ ಕಾನೂನೊಂದನ್ನು ಸಮಾಜವು ಮೌನವಾಗಿ ಒಪು್ಪವಂತಾದರೆ ಅಥವಾ ಅದನ್ನು ಪ್ರಶ್ನಿಸದೆಯೇ ಸುಮ್ಮನಿದ್ದುಬಿಟ್ಟರೆ, ಭವಿಷ್ಯದಲ್ಲಿ ಅಧಿಕಾರವನ್ನು ನಿರಂಕುಶವಾಗಿ ಚಲಾಯಿಸುವುದಕ್ಕೆ ಅದೊಂದು ಸಾಧನೋಪಾಯವಾಗಿ ಪರಿಣಮಿಸಬಹುದು; ಭವಿಷ್ಯದಲ್ಲಿ ರೂಪುಗೊಳ್ಳುವ ಕಾನೂನು ಅನವಶ್ಯಕ ವಾಗಿರುವುದರ ಜತೆಜತೆಗೆ, ಮತ್ತಷ್ಟು ಘೋರವಾಗಿ ಪರಿಣಮಿಸಬಹುದು ಎಂಬ ಗ್ರಹಿಕೆಗೆ ಪುಷ್ಟಿನೀಡುವ ಸಂಗತಿಗಳನ್ನು ಅವಲೋಕಿಸಿದೆವು. ಈಗ ಈ ಕುರಿತಾದ ಇನ್ನಷ್ಟು ಹೊಳಹುಗಳನ್ನು ನೋಡೋಣ.

ಮೂಲಭೂತ ಹಕ್ಕುಗಳ ಸಂದರ್ಭದಲ್ಲಿ ಹೇಳುವುದಾದರೆ, ಮೂಲಭೂತ ಹಕ್ಕೊಂದರ ಕುರಿತಾದ ಸಮಂಜಸ ನಿರ್ಬಂಧದ ಉದ್ದೇಶವನ್ನು ಸಾಧಿಸುವ ‘ಕನಿಷ್ಠತಮ ಹಸ್ತಕ್ಷೇಪಕ ವಿಧಾನ’ದ ಎಲ್ಲೆಮೀರಿದೆ ಎಂದು ಕಂಡುಬಂದ ಕಾಯಿದೆ-ಕಟ್ಟಳೆಗಳನ್ನು ಉನ್ನತ ನ್ಯಾಯಾಲಯಗಳು ರದ್ದುಪಡಿಸಿವೆ. ಮೂಲಭೂತ ಹಕ್ಕಿನಿಂದ ಧರ್ಮಸ್ವಾತಂತ್ರ್ಯದ ಕಡೆಗೆ ಬರುವುದಾದರೆ, ಇಂಥ ಹಕ್ಕನ್ನು ಕಸಿದುಕೊಳ್ಳುವ ಅಥವಾ ಮೊಟಕಾಗಿಸುವ ಯಾವುದೇ ಕಾನೂನು-ಕಟ್ಟಳೆಯು ಕನಿಷ್ಠತಮ ಹಸ್ತಕ್ಷೇಪಕ ಪರೀಕ್ಷೆಯನ್ನು ಅನುಸರಿಸಬೇಕಷ್ಟೇ ಅಲ್ಲ, ಸಂವಿಧಾನದ ವಿಧಿ 25ರಲ್ಲಿ ಉಲ್ಲೇಖಿಸಲಾಗಿರುವ ಕಟ್ಟುನಿಟ್ಟುಗಳು ಅಥವಾ ನಿರ್ದಯ ಕಾಯ್ದೆಗಳನ್ನೂ ಪಾಲಿಸಬೇಕಾಗುತ್ತದೆ.

ವ್ಯಕ್ತಿಯೋರ್ವನು ತನ್ನಾಯ್ಕೆಯ ಧರ್ಮವನ್ನು ಮುಕ್ತವಾಗಿ ಘೋಷಿಸಿಕೊಳ್ಳುವುದು, ಅನುಸರಿಸುವುದು ಮತ್ತು ಪ್ರಸಾರ ಮಾಡುವುದು, ಭಾರತೀಯ ಸಂವಿಧಾನದ ಅಡಿಯಲ್ಲಿ ಖಾತ್ರಿಪಡಿಸಲಾಗಿರುವ ಒಂದು ಮೂಲಭೂತ ಹಕ್ಕಾಗಿದೆ. ವಿಧಿ 25ರ ಅಡಿಯಲ್ಲಿ, ಈ ಮುಂದಿನವುಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ: 1. ಸಾರ್ವಜನಿಕ ಸುವ್ಯವಸ್ಥೆ, 2. ಆರೋಗ್ಯ, 3. ನೈತಿಕತೆ, 4. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಭಾಗ 3ರ ಇನ್ನಿತರ ಉಪಬಂಧಗಳು.

ಸಂವಿಧಾನದ ವಿಧಿ 25(1)ರ ಅಡಿಯಲ್ಲಿ ನೀಡಲ್ಪಟ್ಟಿರುವ ಸ್ವಾತಂತ್ರ್ಯವೇನೇ ಇದ್ದರೂ, ಎರಡು ಆಕಸ್ಮಿಕ/ಅನಿಶ್ಚಿತ ಘಟನೆಗಳ ಸಂದರ್ಭದಲ್ಲಿ ಕಾನೂನನ್ನು ರೂಪಿಸಲು ವಿಧಿ 25(2)ರ ಅಡಿಯಲ್ಲಿ ಸರ್ಕಾರಕ್ಕೆ ಅಧಿಕಾರವನ್ನೂ ನೀಡಲಾಗಿದೆ. ವಿಧಿ 25(2) ಹೀಗೆನ್ನುತ್ತದೆ: ‘ಈ ವಿಧಿಯಲ್ಲಿನ ಯಾವೊಂದು ಅಂಶವೂ- (1) ಧಾರ್ವಿುಕ ಆಚರಣೆಯೊಂದಿಗೆ ಸಂಬಂಧಿಸಿರಬಹುದಾದ ಯಾವುದೇ ವ್ಯಾಪಾರೀ, ಆರ್ಥಿಕ, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಯನ್ನು ನಿಯಂತ್ರಿಸುವಂಥ ಅಥವಾ ನಿರ್ಬಂಧಿಸುವಂಥ, (2) ಸಮಾಜ ಕಲ್ಯಾಣ ಮತ್ತು ಸುಧಾರಣೆಗೆ ಅಥವಾ ಹಿಂದೂಗಳ ಎಲ್ಲ ವರ್ಗಗಳು ಮತ್ತು ಪಂಗಡಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಸಾರ್ವಜನಿಕ ವೈಶಿಷ್ಟ್ಯದ ಹಿಂದೂ ಧಾರ್ವಿುಕ ಸಂಸ್ಥೆಗಳಿಗೆ ಅವಕಾಶ ಒದಗಿಸುವಂಥ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವುದಿಲ್ಲ ಅಥವಾ ಯಾವುದೇ ಕಾನೂನನ್ನು ರೂಪಿಸದಂತೆ ಸರ್ಕಾರವನ್ನು ತಡೆಯುವುದಿಲ್ಲ‘. ಮೇಲೆ ಉಲ್ಲೇಖಿಸಿರುವ ವ್ಯಾಪ್ತಿಯನ್ನು ಹೊರತುಪಡಿಸಿ, ಭಾರತದ ಸಂವಿಧಾನದಡಿಯಲ್ಲಿ ಧರ್ಮಸ್ವಾತಂತ್ರ್ಯವು ಅಬಾಧಿತವಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ ತೀರಾ ಇತ್ತೀಚೆಗೆ, ಅಂದರೆ 2017ರ ಅಕ್ಟೋಬರ್ 1ರಂದು, ದುರ್ಗಾ ವಿಗ್ರಹ/ಮೂರ್ತಿಗಳ ವಿಸರ್ಜನೆಗೆ ನಿರ್ಬಂಧ ವಿಧಿಸಿತು. ಮತ್ತು ಪ್ರಾಸಂಗಿಕವಾಗಿ ಆ ದಿನವು ಮೊಹರಂ ದಿನವೂ ಆಗಿತ್ತು. ಯಾವುದೇ ಕೋಮುಸಂಘರ್ಷ/ಉದ್ವಿಗ್ನ ಸನ್ನಿವೇಶವನ್ನು ತಡೆಗಟ್ಟುವ ಉದ್ದೇಶದ ಕ್ರಮವಿದು ಎಂಬುದಾಗಿ ಸರ್ಕಾರ ಈ ನಿರ್ಬಂಧಕ್ಕೆ ಹಣೆಪಟ್ಟಿ ಕಟ್ಟಿತು. ಸರ್ಕಾರದ ಈ ನಿರ್ಣಯದಿಂದಾಗಿ ತೊಂದರೆಗೀಡಾದವರು, ಹಿಂದೂ ಪಂಚಾಂಗದ ಅನುಸಾರ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ವಿಗ್ರಹಗಳನ್ನು ಮುಳುಗಿಸುವ ಧಾರ್ವಿುಕ ವಿಧಿಯನ್ನು ಆಚರಿಸುವುದಕ್ಕೆ ಅನುಮತಿಸಬೇಕೆಂದು ಕೋಲ್ಕತ ಉಚ್ಚ ನ್ಯಾಯಾಲಯದ ಮೊರೆಹೋದರು.

ವಾಸ್ತವವಾಗಿ, ಕೋಲ್ಕತ ಉಚ್ಚ ನ್ಯಾಯಾಲಯ ಇಂಥದೊಂದು ಅನುಮತಿಯನ್ನೇನೋ ನೀಡಿತು. ಅದೇ ರೀತಿಯಲ್ಲಿ ಸರ್ಕಾರಕ್ಕಿದ್ದ ಅಳುಕಿನ ಕುರಿತೂ ನಿಗಾ ವಹಿಸುವ ನಿಟ್ಟಿನಲ್ಲಿ, ವಿಭಿನ್ನ ಕೋಮುಗಳು ಪರಸ್ಪರರು ಅತಿಕ್ರಮಿಸದಂತಿರಲು ದುರ್ಗಾ ಮೂರ್ತಿಗಳನ್ನು ಮುಳುಗಿಸಲು ತೆರಳುವ ಗುಂಪು ಹಾಗೂ ತಜಿಯಾಗಳ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸುವಂತೆ ಹಾಗೂ ಸಮರ್ಪಕ ರೀತಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಒದಗಿಸುವಂತೆ ನ್ಯಾಯಾಲಯವು ರಾಜ್ಯ ಪೊಲೀಸ್ ಇಲಾಖೆಗೂ ನಿರ್ದೇಶಿಸಿತು. ಹೀಗೆ ಮಾಡುವಾಗ, ಸಾರಾಸಗಟು ನಿಷೇಧದಂಥ ಒಂದು ಅತಿರೇಕದ ನಡೆಯನ್ನು ತಿರಸ್ಕರಿಸಿ, ಎರಡು ವಿಭಿನ್ನ ಮೆರವಣಿಗೆಗಳಿಗಾಗಿ ಪ್ರತ್ಯೇಕ ಮಾರ್ಗಗಳನ್ನು ವ್ಯವಸ್ಥೆಗೊಳಿಸುವಂಥ ಹೊಂದಾಣಿಕೆಯ ನಡೆಗೆ ಮಣೆಹಾಕಲಾಯಿತು.

ಸ್ವಾರಸ್ಯಕರ ಸಂಗತಿಯೆಂದರೆ, ಕೋಲ್ಕತ ಉಚ್ಚ ನ್ಯಾಯಾಲಯ ಈ ವಿಷಯಕ್ಕೆ ಸಂಬಂಧಿಸಿದಂತೆ, ‘ಸರ್ಕಾರಕ್ಕೆ ಯಾವ ಧರ್ಮವೂ ಇಲ್ಲ ಹಾಗೂ ಇದು ಜಾತ್ಯತೀತತೆಗೆ ಆಧಾರವಾಗಿರುವ ಮೂಲಭೂತ ಅಂಶಗಳಲ್ಲೊಂದಾಗಿದೆ ಎಂಬುದನ್ನು ದಾಖಲಿಸುವುದು ಸ್ವಯಂವೇದ್ಯವಾದ/ಸರ್ವಸಮ್ಮತವಾದ ಸಂಗತಿಯಾಗಿದೆ. ಧಾರ್ವಿುಕ ಸಮುದಾಯಗಳಲ್ಲಿ ಕಂಡುಬರುವ ವಿಭಿನ್ನ ಧಾರ್ವಿುಕ ಕರ್ವಚರಣೆಗಳು, ವಿಧಿ-ವಿಧಾನಗಳು, ವ್ರತಾಚರಣೆಗಳು ಮತ್ತು ಶೋಕಾಚರಣೆಗಳ ನಿರ್ವಹಣೆಯ ಸಂದರ್ಭದಲ್ಲಿ ಅಗ್ರಮರ್ಯಾದೆ ಅಥವಾ ಆದ್ಯತೆಯ ಹಕ್ಕು ಎಂಬುದಿರಬಾರದು; ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿನ ವಿಷಯದಲ್ಲಿ ಸಮಾನತೆಯಿದೆ ಹಾಗೂ ಆ ಹಕ್ಕನ್ನು ಸಂರಕ್ಷಿಸುವುದು ಆಯಾ ಸರ್ಕಾರಕ್ಕೆ ಸಂಬಂಧಿಸಿದ ಹೊಣೆಗಾರಿಕೆಯಾಗಿದೆ’ ಎಂದು ಕೂಡ ಅಭಿಪ್ರಾಯಪಟ್ಟಿತು.

‘ಯಾರೋ ಒಬ್ಬರನ್ನು’ ಅಥವಾ ‘ಯಾವುದೋ ಒಂದು ಸಿದ್ಧಾಂತವನ್ನು’ ಇದೇ ನಿರ್ಣಾಯಕ ಅಥವಾ ಆತ್ಯಂತಿಕ ಅಥವಾ ಸರ್ವಶ್ರೇಷ್ಠವಾದುದು ಎಂದು ಒಪ್ಪಿ ಅಪ್ಪಿಬಿಡುವುದು ಬಹುತೇಕ ಜನರ ಪರಿಪಾಠ. ಆ ‘ಯಾರೋ ಒಬ್ಬರು’ ಅಥವಾ ‘ಯಾವುದೋ ಒಂದು’ ಎಂಬುದು ವ್ಯಕ್ತಿಯೋರ್ವನ ಹೃದಯಸಿಂಹಾಸನದಲ್ಲಿ ಪಟ್ಟಾಗಿ ಕುಳಿತುಬಿಡುತ್ತದೆ. ಅಷ್ಟೇ ಅಲ್ಲ, ಆತನ ನಿಯತ್ತು-ನಿಷ್ಠಾವಂತಿಕೆಯ ಮೇಲೆ ನಿಯಂತ್ರಣವನ್ನು ಹೊಂದುತ್ತದೆ, ಆತನ ಜೀವನಕ್ಕೆ ಒಂದು ಆಕಾರನೀಡುತ್ತದೆ ಮತ್ತು ಒಂದು ತೆರನಾದ ಸಂರಕ್ಷಣೆಯನ್ನು ಒದಗಿಸುತ್ತದೆ. ಇಂಥದೊಂದು ಅಂಶವು ಸಾರ್ವಜನಿಕ ಸುವ್ಯವಸ್ಥೆಗೆ, ಆರೋಗ್ಯಕ್ಕೆ, ನೈತಿಕತೆಗೆ ಮತ್ತು ಇತರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿಲ್ಲದರ ಹೊರತು ಮತ್ತು ಹಾಗಿಲ್ಲದಿರುವಂತೆ ಅದು ಪ್ರಮಾಣೀ ಕರಿಸಲ್ಪಟ್ಟಿರುವಾಗ, ಅಂಥ ಅಂಶವನ್ನು ನಿಯಂತ್ರಿಸುವ ಅಗತ್ಯವಾದರೂ ಎಲ್ಲಿದೆ?.

ಸಂವಿಧಾನದ ವಿಧಿ 25ರ ಅಡಿಯಲ್ಲಿ ವಿಧಿಸಲಾಗಿರುವ ಮಿತಿಗಳು ನಿಸ್ಸಂದೇಹವಾಗಿ ಅವಶ್ಯವಾಗಿವೆ. ಕಾರಣ, ಧಾರ್ವಿುಕ ಎಂಬುದಾಗಿ ಸಮರ್ಥಿಸಲ್ಪಟ್ಟಿರುವ ಯಾವುದೇ ಆಚರಣೆ/ಪರಿಪಾಠವು, ಒಂದೊಮ್ಮೆ ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆಗಳಿಗೆ ಕೇಡುತರುವಂತಿದ್ದರೆ ಅಥವಾ ಮತ್ತೋರ್ವರ ಮೂಲಭೂತ ಹಕ್ಕನ್ನು ಅತಿಕ್ರಮಿಸುವಂತಿದ್ದರೆ, ಅಂಥ ಆಚರಣೆಯನ್ನು ನಿಲ್ಲಿಸಬೇಕು. ಆದಾಗ್ಯೂ, ನಿರ್ದಿಷ್ಟ ಆಚರಣೆಯೊಂದು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯಕ್ಕೆ ಹಾನಿಕಾರಕವಾಗಿದೆ ಅಥವಾ ಮತ್ತೋರ್ವರ ಮೂಲಭೂತ ಹಕ್ಕನ್ನು ಅತಿಕ್ರಮಿಸುವಂತಿದೆ ಎಂಬ ಸಮರ್ಥನೆ ಹೊಮ್ಮಿದರೂ, ಅದನ್ನು ಸಕಾರಾತ್ಮಕವಾಗಿ ನಿದರ್ಶಿಸಬೇಕಾಗುತ್ತದೆ ಮತ್ತು ಪ್ರಮಾಣೀಕರಿಸಬೇಕಾಗುತ್ತದೆ.

ವಿಧವೆಯರ ವಿರುದ್ಧ ಪಕ್ಷಪಾತ ತೋರುವಂಥ ಅಥವಾ ಮಾಟದಂಥ ಮೌಢ್ಯಾಚರಣೆಯನ್ನು ಖಂಡಿಸಬೇಕಾಗುತ್ತದೆ, ಕಾನೂನಿನ ಮೂಲಕ ನಿಷೇಧಿಸಬೇಕಾ ಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕಾಣಿಕೆ ಹುಂಡಿಗೆ 1 ರೂ. ನಾಣ್ಯವನ್ನು ಹಾಕುವುದು ಶ್ರೇಯಸ್ಕರ ಎಂಬ ನನ್ನ ವೈಯಕ್ತಿಕ ನಂಬಿಕೆ ಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನನ್ನು ಒಂದು ಸಾಧನವಾಗಿ ಬಳಸಲಾಗದು. ಧರ್ಮಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕೆಂಬುದು, ಸರ್ಕಾರವು ಪ್ರವೇಶಿಸಲಾಗದಿರಬಹುದಾದ ವೈಯಕ್ತಿಕ ಕ್ರಿಯಾಸ್ವಾತಂತ್ರ್ಯದ ಸಂರಕ್ಷಿತ ಸಾಮ್ರಾಜ್ಯವೊಂದಿದೆ ಎಂಬುದಾಗಿ ಸಂವಿಧಾನವು ನಮಗೆ ನೀಡುವ ಒಂದು ಭರವಸೆಯಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top