Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಕಾಂಗ್ರೆಸ್​ಮುಕ್ತ ಭಾರತ ಕನಸಿಗೆ ಚಾಲನೆ ಸಿಕ್ಕಿದೆ

Saturday, 25.03.2017, 7:52 AM       No Comments

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಾಂಗ್ರೆಸ್​ಮುಕ್ತ ಭಾರತ ಕನಸಿಗೆ ಚಾಲನೆ ದೊರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ನಂತರ ಮೊದಲ ಬಾರಿಗೆ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿ ಅದ್ದೂರಿ ಸಮಾರಂಭದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್ ವಿಸರ್ಜಿಸಲು ಗಾಂಧೀಜಿ ಹೇಳಿದ್ದರು. ಇಂದು ನರೇಂದ್ರ ಮೋದಿ ಮೂಲಕ ಆ ಕನಸು ನನಸಾಗುತ್ತಿದೆ ಎಂದರು.

ಉತ್ತರಪ್ರದೇಶದಲ್ಲಿ ಯುವಕ ಯೋಗಿ ಆದಿತ್ಯ ನಾಥರನ್ನು ಸಿಎಂ ಮಾಡಿದ ಮೋದಿಗೆ ಸಾಷ್ಟಾಂಗವಾಗಿ ನಮಸ್ಕರಿಸಬೇಕು. ಇಂತಹ ನಡೆಯನ್ನು ಕಾಂಗ್ರೆಸ್​ನಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಯೋಗ್ಯತೆ ಇದ್ದರೆ ಕುಟುಂಬ ರಾಜಕಾರಣ ಸರಿ. ಆದರೆ.. ಎಂದು ರಾಹುಲ್ ಗಾಂಧಿಯವರನ್ನು ಟೀಕಿಸಿದರು.

ಮೋದಿಯವರನ್ನು ಕೊಂಡಾಡಿದ ಕೃಷ್ಣ, ನೋಟು ಅಮಾನ್ಯೀಕರಣದ ನಿರ್ಧಾರ ಕೈಗೊಳ್ಳಲು ಗಟ್ಟಿ ಗುಂಡಿಗೆ ಬೇಕು. ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಮೋದಿ ಉತ್ತರ ನೀಡಿದ್ದರು. ಸರ್ಜಿಕಲ್ ಸ್ಟ್ರೈಕ್ ನಡೆಸಲು ಅಸಾಧಾರಣ ಧೀಃಶಕ್ತಿ ಬೇಕು. ಇದೆಲ್ಲವನ್ನೂ ನೋಡಿ ಕಾರ್ಯಕರ್ತನಾಗಿ, ಶುದ್ಧಮನಸ್ಸಿನಿಂದ, ಆಸೆ, ಆಕಾಂಕ್ಷೆ, ನಿರೀಕ್ಷೆ ಇಲ್ಲದೆ ಪಕ್ಷ ಸೇರುತ್ತಿದ್ದೇನೆ. ನನ್ನಿಂದ ಬಿಜೆಪಿಗೆ ಯಾವ ಬಲ ಬರುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಅದ್ದೂರಿ ಸ್ವಾಗತ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 7.30ರಲ್ಲಿ ಆಗಮಿಸಿದ ಕೃಷ್ಣ ಅವರನ್ನು ಯಲಹಂಕ ಹಾಗೂ ದೇವನಹಳ್ಳಿ ಕಾರ್ಯಕರ್ತರು ಸ್ವಾಗತಿಸಿದರು. ಮಾಜಿ ಡಿಸಿಎಂ ಆರ್. ಅಶೋಕ್ ಮತ್ತಿತರ ಮುಖಂಡರಿದ್ದರು.

ಖರ್ಗೆಗೆ ಟಾಂಗ್

ವಯಸ್ಸಿನಲ್ಲಿ ಕಿರಿಯರಾದ ಅಮಿತ್ ಷಾ ಜತೆ ಕೃಷ್ಣ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಕೃಷ್ಣ ತಿರುಗೇಟು ನೀಡಿದರು. 44 ವರ್ಷದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಜತೆ ಖರ್ಗೆ ಹೇಗಿದ್ದಾರೆ? ನನ್ನ ಬಗ್ಗೆ ಮಾತಾಡುವ ಮುನ್ನ ಯೋಚನೆ ಮಾಡಬೇಕು. ಒಬ್ಬೊಬ್ಬರಿಗೆ ಒಂದೊಂದು ಮಾನದಂಡ ಇಟ್ಟುಕೊಂಡಿದ್ದರಿಂದಲೇ ಕಾಂಗ್ರೆಸ್ ಇಂದು ಹಳಿಯಿಲ್ಲದ ರೈಲಿನಂತಾಗಿದೆ ಎಂದು ಹೇಳಿದರು.

ಪೂರ್ಣಕುಂಭ ಸ್ವಾಗತ

ರಾತ್ರಿ 8.45 ಮಲ್ಲೇಶ್ವರದ ಕಚೇರಿಗೆ ಆಗಮಿಸಿದ ಎಸ್.ಎಂ. ಕೃಷ್ಣ ಅವರನ್ನು 25 ಪುರೋಹಿತರ ನೇತೃತ್ವದಲ್ಲಿ ವೇದ ಘೊಷಗಳ ನಡುವೆ ಪೂರ್ಣಕುಂಭಗಳ ಸ್ವಾಗತ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೇರಿ ವಿವಿಧ ಮೋರ್ಚಾ ಅಧ್ಯಕ್ಷರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ನಮ್ಮ ಪಕ್ಷ

ಮಾತನಾಡುವಾಗ ಹಲವು ಬಾರಿ ನೀವು ಬಿಜೆಪಿಯವರು.. ಎಂದ ಎಸ್​ಎಂಕೆಗೆ, ‘ನಮ್ಮ ಪಕ್ಷ’ ಎಂದು ಹಿರಿಯ ಸದಸ್ಯ ರಾಮಚಂದ್ರಗೌಡ ನೆನಪಿಸಿದರು. ಕಾಂಗ್ರೆಸ್​ನಲ್ಲಿ 46 ವರ್ಷ ಇದ್ದ ಗುಂಗು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದ ಕೃಷ್ಣ, ಮುಂದಿನ ಮಾತಿನಲ್ಲಿ ಸರಿಪಡಿಸಿ ಕೊಂಡರು. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.

ಅಂಬಿಗನ ಮರೆತ ಕಾಂಗ್ರೆಸ್

ಶುದ್ಧ ರಾಜಕಾರಣಕ್ಕೆ ರಾಜ್ಯದಲ್ಲಿ ಮೊದಲ ಹೆಸರು ಎಸ್.ಎಂ. ಕೃಷ್ಣ. ಯಾವ ಕಾರಣಕ್ಕೆ ಕಾಂಗ್ರೆಸ್ ತ್ಯಜಿಸಿದ್ದು ಎಂಬುದನ್ನು ಅವರೇ ಹೇಳಿದ್ದಾರೆ. ನದಿ ದಾಟಿಸಿದ ಅಂಬಿಗನನ್ನು ಮರೆಯುವ ಹಂತಕ್ಕೆ ಕಾಂಗ್ರೆಸ್ ಬಂದಿದೆ. ರಾಜ್ಯವನ್ನು ಕಾಂಗ್ರೆಸ್​ಮುಕ್ತ ಮಾಡಲು ಕೃಷ್ಣ ನೆರವಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಅನಿರೀಕ್ಷಿತ ಫಲಿತಾಂಶ ಹೊರಬೀಳುವುದು ನಿಶ್ಚಿತ. ಹಣ ಬಲ, ತೋಳ್ಬಲದಿಂದ ಸಚಿವ ಸಂಪುಟ ಬಳಸಿ ಗೆಲ್ಲಲು ಯತ್ನಿಸುತ್ತಿರುವ ಸಿದ್ದರಾಮಯ್ಯ ಪ್ರಯತ್ನ ಈಡೇರುವುದಿಲ್ಲ ಎಂದರು.

ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ದೇಶದಲ್ಲಿ ಪರಿವರ್ತನೆ ಆಗುತ್ತಿದೆ ಎಂದು ಮೋದಿ ಹೇಳುತ್ತಿರುತ್ತಾರೆ. ಅವರ ಮಾತಿನಲ್ಲಿ ವಿಶ್ವಾಸವಿಟ್ಟು ಕೃಷ್ಣ ಅವರು ಬಿಜೆಪಿ ಸೇರಿದ್ದಾರೆ. ರಾಮಕೃಷ್ಣ ಹೆಗಡೆಯವರ ರೀತಿಯಲ್ಲಿ ಆದರ್ಶ ರಾಜಕಾರಣ ಮಾಡಿರುವ ಕೃಷ್ಣ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಿದೆ. ಬಿಜೆಪಿ 150 ಗುರಿ ಹೊಂದಿದ್ದೆವು. ಇದೀಗ ವಾತಾವರಣ ನೋಡಿದರೆ 175 ಗುರಿ ಹೊಂದಬೇಕು ಎನಿಸುತ್ತಿದೆ. ಕೃಷ್ಣ ಅವರನ್ನು ಸಮರ್ಥವಾಗಿ ಬಳಸಿಕೊಂಡು ಬಲಿಷ್ಠ ಬಿಜೆಪಿ ಕಟ್ಟುತ್ತೇವೆ ಎಂದರು.

ಉಪಚುನಾವಣೆಗಳಲ್ಲಿ ಪ್ರಚಾರ

ಉಪಚುನಾವಣೆಗಳಲ್ಲಿ ಭಾಗವಹಿಸಿ ಪಕ್ಷಕ್ಕೆ ಶಕ್ತಿ ತುಂಬಬೇಕೆಂಬ ಯಡಿಯೂರಪ್ಪ ಅವರ ಮಾತಿಗೆ ಕೃಷ್ಣ ಸಮ್ಮತಿ ಸೂಚಿಸಿದರು. ನಂಜನಗೂಡು, ಗುಂಡ್ಲುಪೇಟೆಗೆ ಹೋಗುತ್ತೇನೆ. ಶ್ರೀನಿವಾಸ ಪ್ರಸಾದ್ ಪ್ರಬಲ ನಾಯಕರು. ಅವರನ್ನು ಸೋಲಿಸಲು ನಾನು ಹಾಗೂ ದೇವರಾಜ ಅರಸು ಪ್ರಯತ್ನಿಸಿ ವಿಫಲವಾಗಿದ್ದೆವು ಎಂದು ಹಳೆಯ ನೆನಪು ಮೆಲುಕು ಹಾಕಿದರು. ಪ್ರತಿ ವಿಷಯ ಮಾತನಾಡುವಾಗಲೂ, ಕಾಂಗ್ರೆಸ್​ನಲ್ಲಿನ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಕೃಷ್ಣ, ಮತ್ತೆ ಸಾವರಿಸಿಕೊಂಡು ಮುಖ್ಯ ವಿಷಯಕ್ಕೆ ಬರುತ್ತಿದ್ದರು. ಟೆನಿಸ್ ನೋಡಲು ಹೊರಡುತ್ತಿದ್ದವನನ್ನು ಕರೆಸಿಕೊಂಡು ಮಂತ್ರಿ ಮಾಡಿದರು. ವಿದೇಶಾಂಗ ಖಾತೆಯಿಂದ ತೆಗೆಯುವಾಗ ಹೇಳಲಿಲ್ಲ. ಹಾಗೆಯೇ ಕೈಬಿಟ್ಟರು. ಯೋಗ್ಯರು ಯೋಗ್ಯರನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಕಾಂಗ್ರೆಸ್​ನಲ್ಲಿ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಜರಿದರು. ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿದೆ, 5-6 ತಿಂಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಎಲ್ಲರೂ ಸೇರಿ ಪಕ್ಷ ಸದೃಢಗೊಳಿಸಿ 2018ಕ್ಕೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದರು.

Leave a Reply

Your email address will not be published. Required fields are marked *

Back To Top