Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಕಲಹ ಶಾಂತಿ, ಸರ್ಕಾರದ ವಿರುದ್ಧ ಕ್ರಾಂತಿ

Friday, 19.05.2017, 3:03 AM       No Comments

| ರಮೇಶ ದೊಡ್ಡಪುರ

ತುಮಕೂರು: ನಾಯಕರೊಳಗೆ ಸಂಪರ್ಕವಿಲ್ಲದೆ ಭಿನ್ನಮತದಲ್ಲಿ ಕುದಿಯುತ್ತಿದ್ದ ಬಿಜೆಪಿ ಜನಸಂಪರ್ಕ ಅಭಿಯಾನದ ಮೂಲಕ ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ಮತ್ತೊಮ್ಮೆ ತೇಪೆ ಹಚ್ಚುವ ಕೆಲಸ ಆರಂಭಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಜನಸಂಪರ್ಕ ಅಭಿಯಾನ’ದಲ್ಲಿ ಎಲ್ಲ ಅಗ್ರ ಪಂಕ್ತಿಯ ನಾಯಕರು ಕೈ ಹಿಡಿದುಕೊಂಡು ವೇದಿಕೆ ಹಂಚಿಕೊಳ್ಳುವ ಮೂಲಕ, ಕಳೆದೊಂದು ವರ್ಷದ ಬಿಜೆಪಿ ಒಳಜಗಳವೇ ಸುಳ್ಳು ಎಂಬ ರೀತಿಯಲ್ಲಿ ವರ್ತಿಸಿದರು. ಬಿಜೆಪಿ ವರಿಷ್ಠರ ಖಡಕ್ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ಈಶ್ವರಪ್ಪ ಹಾಗೂ ಯಡಿಯೂರಪ್ಪ, ಒಂದೇ ವೇದಿಕೆಯಲ್ಲಿ ಬಹು ದಿನಗಳ ಬಳಿಕ ಅಕ್ಕಪಕ್ಕದಲ್ಲಿ ಕುಳಿತು ಹರಟಿದರು. ಹಿಂದೆ ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮನೆಯಲ್ಲಿ ಹಚ್ಚಿದ್ದ ತೇಪೆ ಕೆಲವೇ ದಿನಗಳಲ್ಲಿ ಕಿತ್ತು ಹೋಗಿತ್ತು. ಇದೀಗ ಮುರಳೀಧರರಾವ್ ಮತ್ತೆ ಆ ಪ್ರಯತ್ನ ಮಾಡಿದ್ದಾರೆ.

ಈಶ್ವರಪ್ಪ ‘ನಾಡಿನ ರೈತರ ಕಣ್ಮಣಿ, ನಮ್ಮೆಲ್ಲರ ನಾಯಕರಾದ ಯಡಿಯೂರಪ್ಪನವರೇ’ ಎಂದು ಸಂಬೋಧಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಹಾಗೆಯೇ ಯಡಿಯೂರಪ್ಪ ಅವರು ಸಂಬೋಧಿಸಿ, ತಮ್ಮ ನಡುವಿನ ಅಂತರ ಕಡಿಮೆಯಾಗಿದೆ ಎಂಬ ಸಂದೇಶ ರವಾನಿಸಿದರು.

ರಾಜ್ಯ ಪ್ರಭಾರಿ ಮುರಳೀಧರ ರಾವ್, ಶೋಭಾ ಕರಂದ್ಲಾಜೆ, ಎನ್. ರವಿಕುಮಾರ್, ಡಿ.ಎಸ್.ವೀರಯ್ಯ ಅವರಿದ್ದ ವೇದಿಕೆಯಲ್ಲೆ, ‘ವಿರೋಧಿ ಬಣ’ ಎನ್ನಲಾಗುತ್ತಿದ್ದ ಕೆ.ಎಸ್.ಈಶ್ವರಪ್ಪ, ಸೊಗಡು ಶಿವಣ್ಣ, ಸೋಮಣ್ಣ ಬೇವಿನಮರದ ಕಾಣಿಸಿಕೊಂಡರು. ಭಾಷಣ ಮಾಡುವ ಸಮಯದಲ್ಲೂ ಎಲ್ಲ ನಾಯಕರ ಹೆಸರನ್ನೂ ಉಲ್ಲೇಖ ಮಾಡಿದರು. ಆನಂತರ ಮಧ್ಯಾಹ್ನ ಗುಬ್ಬಿಯಲ್ಲಿ ನಡೆದ ಸಮಾವೇಶದಲ್ಲೂ ಎಲ್ಲರೂ ಒಟ್ಟಿಗಿದ್ದು ಒಗ್ಗಟ್ಟಿನ ಮಂತ್ರ ಜಪಿಸಿದರು. ಇದಕ್ಕೂ ಮುಂಚೆ ಕೇಂದ್ರ ಸಚಿವರಾದ ಅನಂತಕುಮಾರ್ ಹಾಗೂ ಡಿ.ವಿ.ಸದಾನಂದಗೌಡ ಕೂಡ ರಾಜ್ಯ ಬಿಜೆಪಿ ನಾಯಕರಿಗೆ ಸಾಥ್ ನೀಡಿದರು.

ಅಹಿಂದ ಮತದ ಮೇಲೆ ಕಣ್ಣು

ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳನ್ನು ಸೆಳೆಯಲು ಬಿಜೆಪಿ ಹೊಸ ತಂತ್ರ ಆರಂಭಿಸಿದೆ. ಜಾತಿ ಗಣತಿ ವರದಿ ಮೂಲಕ ಬಿಜೆಪಿಯನ್ನು ಕಟ್ಟಿಹಾಕಲು ಸಿಎಂ ಸಿದ್ದರಾಮಯ್ಯ ಆಲೋಚಿಸುತ್ತಿರುವ ಹಿನ್ನೆಲೆಯಲ್ಲಿ, ಜನಸಂಪರ್ಕ ಅಭಿಯಾನದಲ್ಲಿ ಅಹಿಂದ ಮತಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ತುಮಕೂರಿನ ಹೊರವಲಯದ ದಲಿತರು ಹಾಗೂ ಮುಸ್ಲಿಮರು ಹೆಚ್ಚಾಗಿರುವ ಮರಳೂರು ದಿಣ್ಣೆಗೆ ಭೇಟಿ ನೀಡಿದ ನಾಯಕರು ಸ್ಥಳೀಯ ಬಿಜೆಪಿ ದಲಿತ ಕಾರ್ಯಕರ್ತರೊಬ್ಬರ ಮನೆಯಲ್ಲಿ ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್ ಸೇವಿಸಿದರು.

ಬಿಎಸ್​ವೈ ಖುದ್ದು ಆಹ್ವಾನ!

ಅಭಿಯಾನ ಆರಂಭಕ್ಕೂ ಮುನ್ನ ಬಿಜೆಪಿ ನಾಯಕರು ಸಾಕಷ್ಟು ಪೂರ್ವತಯಾರಿ ನಡೆಸಿದ್ದರು. ಕಳೆದ ವಾರದಿಂದಲೇ ಎಲ್ಲ ‘ವಿರೋಧಿ ಬಣ’ದ ನಾಯಕರಿಗೆ ಮುರಳೀಧರ ರಾವ್ ಕರೆ ಮಾಡಿ ಮಾತನಾಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಬುಧವಾರ ರಾತ್ರಿ ಸ್ವತಃ ಬಿಎಸ್​ವೈ ಕರೆ ಮಾಡಿ ‘ನಾಳೆ ಕಾರ್ಯಕ್ರಮಕ್ಕೆ ಬಂದುಬಿಡಪ್ಪ’ ಎಂದು ಬಹುತೇಕ ಭಿನ್ನಮತೀಯ ನಾಯಕರಿಗೆ ಹೇಳಿದ್ದರು. ಏನೇ ಅಸಮಾಧಾನವಿದ್ದರೂ ಈ ಮಾತಿಗೆ ಒಲ್ಲೆ ಎನ್ನಲು ಆಗಲಿಲ್ಲ. ನಮ್ಮ ನಾಯಕರು ಮಾತನಾಡಿಸಿದರಲ್ಲ ಅಷ್ಟೇ ಸಾಕು ಎಂದು ಬಂದುಬಿಟ್ಟೆ. ಆ ಮಾತಿನಲ್ಲಿದ್ದ ಆಗ್ರಹಪೂರ್ವಕ ಆತ್ಮೀಯತೆ ನಿಜಕ್ಕೂ ಎಲ್ಲವನ್ನೂ ಸರಿಪಡಿಸುವ ವಿಶ್ವಾಸ ನೀಡಿತು ಎಂದರು ಮುಖಂಡರೊಬ್ಬರು.

ಈಶ್ವರಪ್ಪ ಜತೆ ವರಿಷ್ಠರ ಸಮಾಲೋಚನೆ

ಅಭಿಯಾನದಲ್ಲಿ ಭಾಗವಹಿಸಲೆಂದೇ ನವದೆಹಲಿಯಿಂದ ಆಗಮಿಸಿದ್ದ ರಾಜ್ಯ ಪ್ರಭಾರಿ ಮುರಳೀಧರ ರಾವ್, ಮಧ್ಯಾಹ್ನ ತುಮಕೂರಿನ ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್, ಈಶ್ವರಪ್ಪ ಜತೆ ವಿಶೇಷ ಸಭೆ ನಡೆಸಿದರು. ನಿಮ್ಮಲ್ಲಿರುವ ಅಸಮಾಧಾನವನ್ನು ಸಾಕಷ್ಟುಮಟ್ಟಿಗೆ ಹೊರ ಹಾಕಿದ್ದೀರಿ, ಅಮಿತ್ ಷಾ ಗಮನಕ್ಕೂ ಬಂದಿದೆ. ಬಿಎಸ್​ವೈ ನಾಯಕತ್ವಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಹಾಗೂ ಚುನಾವಣೆಯಲ್ಲಿ ಜಯಿಸುವುದೂ ರಾಜಕೀಯ ಪಕ್ಷವೊಂದರ ಕಾರ್ಯಕರ್ತರ ಹೊಣೆ. ಇದೆಲ್ಲ ಹಿರಿಯ ಕಾರ್ಯಕರ್ತರಾದ ತಮಗೆ ತಿಳಿದಿದೆ. ಎಲ್ಲರೂ ಒಟ್ಟಾಗಿ ಸಾಗೋಣ ಎಂದು ಮುರಳೀಧರರಾವ್ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಈಶ್ವರಪ್ಪ ನಾನು ಯಾವತ್ತೂ ಪಕ್ಷಕ್ಕೆ ವಿರುದ್ಧವಾಗಿ ಹೋದವನಲ್ಲ. ನಮ್ಮ ಅಳಲನ್ನು ನಿಮಗೆ ಮುಟ್ಟಿಸಿದ್ದೇನೆ. ನನ್ನಿಂದ ಮುಜುಗರ ಅನುಭವಿಸುವ ಸನ್ನಿವೇಶ ಎದುರಾಗದು ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಆರಂಭಗೊಂಡ ರಾಜ್ಯಯಾತ್ರೆ

ತುಮಕೂರು: ಬರ ಅಧ್ಯಯನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಯಾತ್ರೆ ಸಿದ್ಧಗಂಗೆಯಿಂದ ಆರಂಭಗೊಂಡಿತು. ಈ ಮೂಲಕ 2018 ವಿಧಾನಸಭಾ ಚುನಾವಣಾ ಪ್ರಚಾರವನ್ನು ಬಿಜೆಪಿ ಅಧಿಕೃತವಾಗಿ ಆರಂಭಿಸಿತು.

ಬಿಜೆಪಿ ರಾಜ್ಯ, ರಾಷ್ಟ್ರ ನಾಯಕರ ದಂಡೇ ಗುರುವಾರ ಬೆಳಗ್ಗೆ 10ಕ್ಕೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯಿತು. ನಡೆದಾಡುವ ದೇವರ ದರ್ಶನ ಮಾಡಿ ಯಾತ್ರೆ ಆರಂಭಿಸಿದರೆ ಶುಭವಾಗಲಿದೆ ಎಂಬ ಕಾರಣಕ್ಕೆ ಇಲ್ಲಿಂದಲೇ ಅಭಿಯಾನ ಆರಂಭಿಸಿದ್ದೇವೆ. ಒಳ್ಳೆಯ ಕೆಲಸವನ್ನು ಸಿದ್ಧಗಂಗೆಯಿಂದಲೇ ಆರಂಭ ಮಾಡುತ್ತೇವೆ. 40 ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಗುತ್ತೇವೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ರೂಪಿಸಿದ್ದೇವೆ. ಬರ ಪರಿಸ್ಥಿತಿ ವಾಸ್ತವ ತಿಳಿದು ಮತ್ತೊಮ್ಮೆ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ. ತಂಡದಲ್ಲಿ ಕೇಂದ್ರ ಸಚಿವರು ಇದ್ದು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲಾಗುವುದು ಎಂದರು.

ದವೆಗೆ ಶ್ರದ್ಧಾಂಜಲಿ: ಕೇಂದ್ರ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಅವರಿಗೆ ಬಿ.ಎಸ್.ಯಡಿಯೂರಪ್ಪ ಶ್ರದ್ಧಾಂಜಲಿ ಅರ್ಪಿಸಿದರು.

ಬಿಜೆಪಿಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ನಮಗೆ ಹಿರಿಯರು, ಹೇಳೋರು ಕೇಳೋರು ಇದ್ದಾರೆ. ಕಾಂಗ್ರೆಸ್​ನಲ್ಲಿ ಹೇಳೋರು ಕೇಳೋರು ಇಲ್ಲ. ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ.

| ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಪ್ರತಿಪಕ್ಷ ನಾಯಕ

 

ನತದೃಷ್ಟ ಕಾಂಗ್ರೆಸ್ ಸರ್ಕಾರದ್ದು ಒಂದೂ ಯೋಜನೆಗಳಿಲ್ಲ, ಕೇಂದ್ರದ ಯೋಜನೆಗಳನ್ನು ಹೆಸರು ಬದಲಾಯಿಸಿಕೊಂಡು ತನ್ನದೆಂದು ಬಿಂಬಿಸಿಕೊಳ್ಳುವುದಷ್ಟೇ ಸಿದ್ದರಾಮಯ್ಯ ಸರ್ಕಾರದ ಕೆಲಸವಾಗಿದೆ. ಇದು ಯೋಗ್ಯ ರಾಜ್ಯಕಾರಣವಲ್ಲ.

| ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

 

ನಂ.1 ಪತ್ರಿಕೆ ನಡೆಸಿರುವ ಸಮೀಕ್ಷೆ ಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಸ್ಟ್ ಪಾಸ್ ಎಂಬುದು ಜಗಜ್ಜಾಹೀರಾಗಿದೆ. ಮೋದಿ ಸರ್ಕಾರಕ್ಕೆ ಜನ ಶೇ.75 ಅಂಕ ನೀಡಿದ್ದಾರೆ.

| ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ


ಹಗಲಲ್ಲಿ ನಿದ್ರಿಸುವ ರಾಹುಲ್, ಸಿದ್ದು!

ತುಮಕೂರು: ತುಮಕೂರು ಹಾಗೂ ಗುಬ್ಬಿಯಲ್ಲಿ ಸೇರಿದ್ದ ಜನರ ಉತ್ಸಾಹ ಕಂಡು ಉತ್ಸುಕರಾದ ಕೇಂದ್ರ ಸಚಿವ ಅನಂತಕುಮಾರ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಹಾಗೂ ಕೇಂದ್ರ ಕಾಂಗ್ರೆಸ್​ಗಿರುವ ಸಾಮ್ಯತೆ ಏನು? ಅಲ್ಲಿ ರಾಹುಲ್ ಬಾಬಾ, ಇಲ್ಲಿ ಸಿದ್ರಾಮಯ್ಯ. ಇಬ್ಬರೂ ಹಗಲೊತ್ತು ನಿದ್ದೆ ಮಾಡ್ತಾರೆ. ರಾತ್ರಿಯ ಯಾವ್ಯಾವ ಪ್ರಭಾವ, ಪರಿಣಾಮಗಳು ಅವರ ಮೇಲೆ ಕೆಲಸ ಮಾಡುತ್ತದೋ ಗೊತ್ತಿಲ್ಲ. ಅದೇ ರಾಜ್ಯ ಹಾಗೂ ಕೇಂದ್ರ ಬಿಜೆಪಿಯಲ್ಲಿ ಸಾಮ್ಯತೆಯೇನು? ಅಲ್ಲಿ ದಿನದ 24 ಗಂಟೆಯೂ ದುಡಿಯುವ ನರೇಂದ್ರ ಮೋದಿ, ಇಲ್ಲಿ ಹೋರಾಟಗಾರ ಯಡಿಯೂರಪ್ಪ. ನಿದ್ರೆ ಮಾಡುವ ಕಾಂಗ್ರೆಸ್ ಸರ್ಕಾರ ಬೇಕೋ, ಮೋದಿ ಮಾಡೆಲ್ ಸರ್ಕಾರ ಬೇಕೋ ನೀವೇ ನಿರ್ಧರಿಸಿ ಎಂದು ತೀಕ್ಷ್ಣವಾಗಿ ಹೇಳಿದರು.

ಕಾಂಗ್ರೆಸ್​ನಲ್ಲಿ ನಾಯಕ ಯಾರು ಎಂಬುದೇ ಗೊಂದಲ. ಜಿ.ಪರಮೇಶ್ವರ್, ಪಾಟೀಲ್, ಶಾಮನೂರು, ಖರ್ಗೆ, ಮುನಿಯಪ್ಪ ಅವರಲ್ಲಿ ಪಕ್ಷದ ಅಧ್ಯಕ್ಷರು ಯಾರಾಗಬೇಕು ಎಂಬುದರಲ್ಲೇ ಮ್ಯೂಸಿಕಲ್ ಚೇರ್ ಏರ್ಪಟ್ಟಿದೆ. ನಮ್ಮಲ್ಲಿ ಗೊಂದಲವಿಲ್ಲ. ಚುನಾವಣೆಗೆ ಯಡಿಯೂರಪ್ಪ ನಾಯಕತ್ವ, ಅವರೇ ಸಿಎಂ ಅಭ್ಯರ್ಥಿ. ನನ್ನ ನೇತೃತ್ವದಲ್ಲೆ ಚುನಾವಣೆ, ಆದರೆ ಸಿಎಂ ಯಾರೆಂದು ಹೈಕಮಾಂಡ್ ತೀರ್ವನಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೊಂದು ರೀತಿಯಲ್ಲಿ, ಮದುಮಗ ನಾನೆ, ಆದರೆ ಮದುವೆ ಬೇರೆ ಹುಡುಗನ ಜತೆ ಎಂದು ಹೇಳಿದಂತೆ ಎಂದು ಛೇಡಿಸಿದರು. ಜೆಡಿಎಸ್ ಕುರಿತು ಮಾತನಾಡಿದ ಅನಂತಕುಮಾರ್, ಇತ್ತೀಚೆಗೆ ಜೆಡಿಎಸ್ ‘ಹತ್ತಿರ ಹತ್ತಿರ ಬಾ’ ಹಾಡು ಹೇಳುತ್ತಿದೆ. ಅವರು ಯಾವಾಗ ಯಾರಿಗೆ ಹತ್ತಿರವಾಗುತ್ತಾರೆ, ಯಾರಿಗೆ ದೂರಾಗುತ್ತಾರೆ ತಿಳಿಯುವುದಿಲ್ಲ. ಒಟ್ಟಿನಲ್ಲಿ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಎಂದಿಗೂ ಇನ್ನೊಂದು ಪಕ್ಷದ ಜತೆ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಮ್ಮದೇನಿದ್ದರೂ ಅಭಿವೃದ್ಧಿಗಾಗಿ ಜನರೊಂದಿಗೆ ನೇರ ಒಪ್ಪಂದ. ಕಾಂಗ್ರೆಸ್​ನಲ್ಲಿ ನಾಯಕತ್ವದ ಬಿಕ್ಕಟ್ಟು, ಜೆಡಿಎಸ್​ಗೆ ಭವಿಷ್ಯದ ದಾರಿ ಕುರಿತ ಇಕ್ಕಟ್ಟು. ಬಿಜೆಪಿಯಲ್ಲಿ ಮಾತ್ರ ಒಗ್ಗಟ್ಟು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಆರಂಭಿಸಿರುವ ಬರ ಅಧ್ಯಯನ ಪ್ರವಾಸದ ಭಾಗವಾಗಿ ತುಮಕೂರಿನ ಮರಳೂರು ದಿಣ್ಣೆಯಲ್ಲಿ ಆಯೋಜಿಸಿದ್ದ ಶೋಷಿತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಬಳಿಕ ಮುರಳೀಧರರಾವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್​ಕುಮಾರ್ ಹಾಗೂ ಕೆ.ಎಸ್.ಈಶ್ವರಪ್ಪ ಗೌಪ್ಯ ಸ್ಥಳದಲ್ಲಿ ಕೆಲಹೊತ್ತು ಮಾತುಕತೆ ನಡೆಸಿದರು. ಮೇ 20 ರಂದು ಅತೃಪ್ತರ ಜತೆ ಮಾತನಾಡಿ, ಮನವಿ ಆಲಿಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top