Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಕರಿಷ್ಮಾ ಕಪೂರ್ ಎಂಬ ಬೆಳದಿಂಗಳ ಬೆಡಗಿ

Friday, 21.04.2017, 3:03 AM       No Comments

| ರಾಘವೇಂದ್ರ ಗಣಪತಿ, ಬೆಂಗಳೂರು

ಬಾಲಿವುಡ್​ನಲ್ಲಿ ಮದುವೆಗಳೆಂದರೆ, ವಾಟ್ಸ್ ಆಪ್​ನಲ್ಲಿ ಡಿಪಿ ಬದಲಿಸಿದಷ್ಟೇ ವೇಗ ಎಂಬ ಮಾತಿದೆ. ಏಕೆಂದರೆ, ಅಲ್ಲಿ ವಿವಾಹವೂ ಬೇಗ, ವಿಚ್ಛೇದನವೂ ಬೇಗ. ಫ್ರೆಂಡ್​ಷಿಪ್, ಬ್ರೇಕ್​ಅಪ್ ಎರಡೂ ಶರವೇಗದಲ್ಲಿ ಆಗಿ ಹೋಗಿರುತ್ತದೆ. ಇವರಿಬ್ಬರು ಜೋಡಿ ಎಂದುಕೊಳ್ಳುತ್ತಿರುವಾಗಲೇ ದೂರಾಗಿ ಪರಸ್ಪರರ ಜಾಗದಲ್ಲಿ ಬೇರೊಬ್ಬರು ಬಂದಾಗಿರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲವೂ ಫಟಾಫಟ್. ಮೊನ್ನೆ ಬಾಲಿವುಡ್​ನಲ್ಲೊಂದು ಮದುವೆ ನಡೆಯಿತು. ಕೆಲವೇ ದಿನಗಳಲ್ಲಿ ಇನ್ನೊಂದು ಮದುವೆಗೂ ಸಿದ್ಧತೆ ನಡೆಯುತ್ತಿದೆ. ಈ ಎರಡೂ ಮದುವೆಗಳ ನಡುವೆ ಒಂದು ಸಿಹಿ-ಕಹಿ ಕೊಂಡಿ ಇದೆ. ಅದೇ ಬಾಲಿವುಡ್ ಸ್ವಾರಸ್ಯ. ಬಾಲಿವುಡ್​ನ ಒರಿಜಿನಲ್ ಮೊದಲ ಕುಟುಂಬ (ಫಸ್ಟ್ ಫ್ಯಾಮಿಲಿ) ಕಪೂರ್ ಖಾನ್​ದಾನ್​ಗೆ ಸೇರಿದ ಕರಿಷ್ಮಾ ಕಪೂರ್​ಗೆ

ಸಂಬಂಧಿಸಿದ ವಿಚಾರ ಇದು. ಈ ಪೀಳಿಗೆಯ ಯುವಕರಿಗೆ ಕರೀನಾ ಕಪೂರ್ ಹೆಚ್ಚು ಪರಿಚಿತರು. ಆದರೆ, 90ರ ದಶಕದಲ್ಲಿ ಪಡ್ಡೆಗಳ ಎದೆಯಲ್ಲಿ ಕಿಚ್ಚುಹಚ್ಚಿ ಕನಸಿನಲ್ಲಿ ಚೆಲ್ಲಾಟವಾಡಿದ್ದವರು ಕರೀನಾ ಅವರ ಅಕ್ಕ ಕರಿಷ್ಮಾ. ಕರಿಷ್ಮಾ ಕಪೂರ್ ಅವರ ಮಾಜಿ ಗಂಡ, ಉದ್ಯಮಿ ಸಂಜಯ್ ಕಪೂರ್ ಕಳೆದ ವಾರ ರೂಪದರ್ಶಿ ಪ್ರಿಯಾ ಸಚ್​ದೇವ ಅವರನ್ನು ವಿವಾಹವಾದರು. 40 ವರ್ಷದ ಪ್ರಿಯಾ ಈ ಹಿಂದೆ ಅಮೆರಿಕದಲ್ಲಿರುವ ಹೋಟೆಲ್ ಉದ್ಯಮಿ ವಿಕ್ರಂ ಚಟ್ವಾಲ್​ರನ್ನು ವಿವಾಹವಾಗಿದ್ದರು. ಇಬ್ಬರಿಗೂ ಇದು ಎರಡನೇ ಸಲ. ಇನ್ನು ಕೆಲವೇ ದಿನಗಳಲ್ಲಿ ಕರಿಷ್ಮಾ ಕಪೂರ್ ಸಹ ಎರಡನೇ ಸಲ ಸಪ್ತಪದಿ ತುಳಿಯಲಿದ್ದಾರೆ. ಅವರು ಮದುವೆಯಾಗುತ್ತಿರುವುದು ಮತ್ತೋರ್ವ ಉದ್ಯಮಿ ಸಂದೀಪ್ ತೋಷ್ನಿವಾಲ್​ರನ್ನು. ಸಂದೀಪ್ ಇತ್ತೀಚೆಗಷ್ಟೇ ವೈದ್ಯೆ ಡಾ. ಆಶ್ರಿತಾರಿಂದ ವಿಚ್ಛೇದನ ಪಡೆದಿದ್ದಾರೆ. ಅಲ್ಲಿಗೆ ಎಲ್ಲವೂ ಶುಭಸ್ಯ ಶೀಘ್ರಂ. ನಟನೆಯನ್ನು ರಕ್ತದಲ್ಲೇ ಹೊಂದಿದ್ದ ಕರಿಷ್ಮಾ, ರಣಧೀರ್ ಕಪೂರ್-ಬಬಿತಾ ದಂಪತಿಯ ಹಿರಿಯ ಪುತ್ರಿ. ಆಕೆಗೆ ರಾಜ್​ಕಪೂರ್ ಅಜ್ಜನಾದರೆ, ಪೃಥ್ವಿರಾಜ್ ಕಪೂರ್ ಮುತ್ತಜ್ಜ. ಕರಿಷ್ಮಾಗೆ ಲೋಲೋ ಎಂಬ ಅಡ್ಡ ಹೆಸರು ಇಟ್ಟಿದ್ದು ಅಮ್ಮ ಬಬಿತಾ. ಇದಕ್ಕೆ ಪ್ರೇರಣೆ ಖ್ಯಾತ ಹಾಲಿವುಡ್ ನಟಿ ಜೀನಾ ಲೋಲೋಬ್ರಿಗಿಡ.

ದಿಗ್ಗಜ ಪೃಥ್ವಿರಾಜ್ ಕಪೂರ್, ರಾಜ್​ಕಪೂರ್, ರಣಧೀರ್ ಕಪೂರ್, ಶಶಿಕಪೂರ್, ರಿಷಿ ಕಪೂರ್​ರಿಂದ ಇತ್ತೀಚಿನ ರಣಬೀರ್​ವರೆಗೆ ಪೂರ್ತಿ ಕಪೂರ್ ವಂಶವೃಕ್ಷವೇ ಬಾಲಿವುಡ್​ಗೆ ಸಮರ್ಪಿಸಿಕೊಂಡಿದ್ದರೂ, ಕರಿಷ್ಮಾ ಚಿತ್ರರಂಗಕ್ಕೆ ಬರುವಾಗ ಭಾರೀ ವಿರೋಧ ಎದುರಿಸಿದ್ದರು. ಇದೇ ವಿಚಾರವಾಗಿ 1987ರ ಸುಮಾರಿಗೆ ರಣಧೀರ್ ಕಪೂರ್-ಬಬಿತಾ ಬೇರೆಯೂ ಆದರು. ಕೊನೆಗೆ 2007ರಲ್ಲಿ ಅವರಿಬ್ಬರು ಮತ್ತೆ ಒಂದಾದರು.

ಬೆಳದಿಂಗಳ ಬಾಲೆಯಂಥ ಸೌಂದರ್ಯ ಹಾಗೂ ಅದ್ಭುತ ನಟನೆಯ ಮೂಲಕ 90ರ ದಶಕದಲ್ಲಿ ಜನಪ್ರಿಯತೆ, ಸಂಭಾವನೆಯಲ್ಲಿ ಉತ್ತುಂಗಕ್ಕೇರಿದ್ದ ಕರಿಷ್ಮಾ, ವ್ಯಕ್ತಿಗತ ಬದುಕಿನಲ್ಲಿ ಸಾಕಷ್ಟು ನೋವು ಕಂಡವರು. ಇಬ್ಬರು ಖ್ಯಾತ ನಟರೊಂದಿಗಿನ ಭಗ್ನಪ್ರೇಮದ ಬಳಿಕ ಅಭಿಷೇಕ್ ಬಚ್ಚನ್ ಜೊತೆ 2003ರಲ್ಲಿ ವಿವಾಹ ನಿಶ್ಚಿತಾರ್ಥವೂ ನಡೆದಿತ್ತು. ಆದರೆ, ಕೆಲವೇ ತಿಂಗಳಲ್ಲಿ ಮುರಿದು ಬಿದ್ದಿತ್ತು. ಬಳಿಕ ದೆಹಲಿಯ ವಾಣಿಜ್ಯೋದ್ಯಮಿ ಸಂಜಯ್ ಕಪೂರ್​ರನ್ನು ವಿವಾಹವಾದರೂ, ಅವರ ಸಂಸಾರದಲ್ಲಿ ಸುಖವಿರಲಿಲ್ಲ. ಇಬ್ಬರು ಮಕ್ಕಳಾದ ಬಳಿಕವೂ ಕೌಟುಂಬಿಕ ಸಾಮರಸ್ಯವಿಲ್ಲದೆ ಕೊರಗಿದ ಅವರು ಕೊನೆಗೆ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಸಂದೀಪ್ ಜತೆ ಸ್ನೇಹ ಚಿಗುರಿದ್ದು, ಜೀವನದಲ್ಲಿ ಮತ್ತೊಮ್ಮೆ ‘ವರ’ ಪರೀಕ್ಷೆಗೆ ಹೊರಟಿದ್ದಾರೆ.

ಇದು ಕರಿಷ್ಮಾ ಜೀವನದ ಹಾದಿಯಾದರೆ, ವೃತ್ತಿಜೀವನದಲ್ಲೂ ಅನೇಕ ಅವಕಾಶಗಳನ್ನು ತಿರಸ್ಕರಿಸಿ ಪರಿತಪಿಸಿದ್ದೂ, ಬೇರೆಯವರು ತಿರಸ್ಕರಿಸಿದ ಪಾತ್ರ ನಿರ್ವಹಿಸಿ ಪ್ರಶಸ್ತಿ ಪಡೆದಿದ್ದೂ ಇದೆ. ‘ಇಷ್ಕ್’ನಲ್ಲಿ ಜೂಹಿ ಚಾವ್ಲಾ ಮಾಡಿದ ಪಾತ್ರ, ‘ಗುಪ್ತ್’ನಲ್ಲಿ ಮನೀಷಾ ಕೊಯಿರಾಲ ಪಾತ್ರ, ‘ಅಶೋಕ ದಿ ಗ್ರೇಟ್’ ಹಾಗೂ ‘ತಲಾಶ್’ನಲ್ಲಿ ಅವರ ಸೋದರಿ ಕರೀನಾ ಕಪೂರ್ ನಿರ್ವಹಿಸಿದ ಪಾತ್ರಗಳನ್ನು ಕರಿಷ್ಮಾ ತಿರಸ್ಕರಿಸಿದ್ದರು. ಇಂಗ್ಲಿಷ್ ಚಿತ್ರ ‘ಬ್ರೖೆಡ್ ಆಂಡ್ ಪ್ರಿಜ್ಯುಡೈಸ್’ನಲ್ಲೂ ಕರಿಷ್ಮಾ ನಟಿಸಬೇಕಿತ್ತಾದರೂ, ಕೊನೆಯಲ್ಲಿ ಐಶ್ವರ್ಯಾ ರೈ ಆ ಪಾತ್ರ ಒಪ್ಪಿಕೊಂಡಿದ್ದರು. ಹಾಗೆ ನೋಡಿದರೆ, ಶಾರುಖ್ ಖಾನ್​ರ ಬಂಪರ್ ಹಿಟ್ ‘ದಿಲ್ ತೊ ಪಾಗಲ್ ಹೇ’ ಚಿತ್ರದ ಚಿನಕುರಳಿ ಹುಡುಗಿ ನಿಶಾ ಪಾತ್ರಕ್ಕೆ ಕರಿಷ್ಮಾ ಮೊದಲ ಆಯ್ಕೆ ಆಗಿರಲೇ ಇಲ್ಲ. ರವೀನಾ ಟಂಡನ್, ಜೂಹಿ ಚಾವ್ಲಾ, ಕಾಜೊಲ್, ಮನೀಷಾ ಕೊಯಿರಾಲ, ಶಿಲ್ಪಾ ಶೆಟ್ಟಿ ಎಲ್ಲರೂ ತಿರಸ್ಕರಿಸಿದ ಮೇಲೆ ಕರಿಷ್ಮಾ ಒಪ್ಪಿಕೊಂಡಿದ್ದರು. ವೃತ್ತಿಜೀವನದ ಅತ್ಯಂತ ದೊಡ್ಡ ಯಶಸ್ವಿ ಚಿತ್ರ ‘ರಾಜಾ ಹಿಂದೂಸ್ಥಾನಿ’ಗೂ ಅವರು ಮೊದಲ ಆಯ್ಕೆಯ ನಾಯಕಿ ಆಗಿರಲಿಲ್ಲ. ಅದು ಐಶ್ವರ್ಯಾ ರೈ ಅವರ ಚೊಚ್ಚಲ ಚಿತ್ರ ಆಗಬೇಕಿತ್ತು. ಆದರೆ, ವಿಧಿಲಿಖಿತ ಬೇರೆಯೇ ಇತ್ತು. ‘ರಾಜಾ ಹಿಂದೂಸ್ಥಾನಿ’ಯಲ್ಲಿ ಕರಿಷ್ಮಾ, ಆಮೀರ್ ಖಾನ್ ತುಟಿಗೆ ತುಟಿ ಸೇರಿಸಿದ್ದು ಆ ಕಾಲದಲ್ಲಿ ದೊಡ್ಡ ಕ್ರಾಂತಿಕಾರಕ ನಿರ್ಧಾರವಾಗಿತ್ತು.

ಕರಿಷ್ಮಾ-ಗೋವಿಂದ 90ರ ದಶಕದ ಅತ್ಯಂತ ಹಿಟ್ ಜೋಡಿ ಎನಿಸಿದ್ದರು. ಸಲ್ಮಾನ್ ಖಾನ್-ಕರಿಷ್ಮಾ ಜೋಡಿಯೂ ಅತ್ಯಂತ ಜನಪ್ರಿಯವಾಗಿತ್ತು.

1997ರಲ್ಲಿ ‘ದಿಲ್ ತೋ ಪಾಗಲ್ ಹೇ’ ಚಿತ್ರದ ಪೋಷಕ ನಟಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಕರಿಷ್ಮಾ, 1996ರಲ್ಲಿ ‘ರಾಜಾ ಹಿಂದೂಸ್ಥಾನಿ’ ಮತ್ತು 2000ದಲ್ಲಿ ‘ಫಿಜಾ’ ಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ ಗಳಿಸಿದರು. ‘ಜುಬೇದಾ’ ಚಿತ್ರದಲ್ಲಿನ ಅಭಿನಯ ಕ್ಕಾಗಿ ಫಿಲಂಫೇರ್ ತೀರ್ಪಗಾರರ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಓರ್ವ ನಟಿಯಾಗಿ ತಮ್ಮದೇ ವರ್ಚಸ್ಸು ಹೊಂದಿದ್ದ ಕರಿಷ್ಮಾ 2012 ರಲ್ಲೊಂದು ಚಿತ್ರದಲ್ಲಿ (ಡೇಂಜರಸ್ ಇಷ್ಕ್) ನಟಿಸಿದ್ದರಾದರೂ, ಆನಂತರ ನೇಪಥ್ಯಕ್ಕೆ ಸರಿದಿದ್ದರು. ಬಹುಷಃ ಸಂದೀಪ್ ಜತೆಗಿನ 2ನೇ ದಾಂಪತ್ಯ ದಲ್ಲಿ ನೆಮ್ಮದಿ ದೊರೆತರೆ, ಬಾಲಿವುಡ್​ನಲ್ಲೂ ಅವರ 2ನೇ ಇನಿಂಗ್ಸ್ ಶುರುವಾಗಬಹುದೇನೋ. ಆಲ್ ದಿ ಬೆಸ್ಟ್ ಕರಿಷ್ಮಾ…

Leave a Reply

Your email address will not be published. Required fields are marked *

Back To Top