Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಕನ್ನಡ ಲಕ್ಷ್ಮೀ ಮರಾಠಿ ಪ್ರೀತಿ

Friday, 01.09.2017, 3:04 AM       No Comments

ಬೆಂಗಳೂರು/ಬೆಳಗಾವಿ: ಕನ್ನಡದ ಹೆಸರಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಆರೋಪದ ಮಧ್ಯೆಯೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಜೈ ಮಹಾರಾಷ್ಟ್ರ ಎಂದಿದ್ದಾರೆ. ಈ ಹೇಳಿಕೆಗೆ ರಾಜ್ಯಾದ್ಯಂತ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರೂ, ಕಾಂಗ್ರೆಸ್ ನಾಯಕರು ಹೆಬ್ಬಾಳ್ಕರ್ ಕ್ಷಮೆ ಪಡೆದು ವಿವಾದ ಶಮನಕ್ಕೆ ಯತ್ನಿಸಿದ್ದಾರೆ. ವಿವಾದವು ಮುನ್ನೆಲೆಗೆ ಬರುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ಆತಂಕ ಎದುರಾಗಿತ್ತು. ಕನ್ನಡ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಳ್ಳಲು ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಿ ಇದು ಪರಿಣಮಿಸಿತ್ತು. ಕೂಡಲೇ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಕನ್ನಡಿಗರ ಕ್ಷಮೆ ಕೋರಿದರು. ಏತನ್ಮಧ್ಯೆ ಪಕ್ಷದಲ್ಲಿ ತನ್ನದೇ ಪ್ರಭಾವಳಿ ಹೊಂದಿರುವ ಹೆಬ್ಬಾಳ್ಕರ್ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ಒಗ್ಗಟ್ಟಾಗಿ ನಿಂತಿದೆ.

ಉಸ್ತುವಾರಿ ವೇಣುಗೋಪಾಲ್ ಅವರು ಅಸಮಾಧಾನಗೊಂಡು ಕ್ರಮಕ್ಕೆ ಚಿಂತಿಸಿದ್ದರೂ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತು ಹೆಬ್ಬಾಳ್ಕರ್ ಕ್ಷಮೆ ಕೋರಿದ್ದರಿಂದ ವಿಷಯವನ್ನು ಅಲ್ಲಿಗೇ ಅಂತ್ಯಗೊಳಿಸಲು ತೀರ್ವನಿಸಿದರು. ಆದರೆ ರಾಜ್ಯ ಕಾಂಗ್ರೆಸ್ ತೀರ್ವನಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್​ನ ಕನ್ನಡ ಹಾಗೂ ಕರ್ನಾಟಕ ಹೋರಾಟಕ್ಕೆ ಭಾರಿ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ನಮ್ಮವರೇ ಮಾಡಿದ ಉರುಳು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿವಾದವನ್ನು ಬಿಜೆಪಿ ಹಾಗೂ ಎಂಇಎಸ್​ಗೆ ತಳುಕುಹಾಕಿದ್ದು, ಪ್ರತಿಪಕ್ಷದವರು ಹೇಳಿಕೆ ತಿರುಚಿ ವಿವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಖುದ್ದು ಲಕ್ಷ್ಮೀ ಹೆಬ್ಬಾಳ್ಕರ್ ಈ ವಿವಾದಕ್ಕೆ ಸತೀಶ್ ಜಾರಕಿಹೊಳಿ ತಂಡದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ‘ನಮ್ಮ ಪಕ್ಷದವರೇ ನನ್ನ ವಿರುದ್ಧ ಚಿತಾವಣೆ ಮಾಡಿದ್ದಾರೆ. ನನ್ನ ಹೇಳಿಕೆ ತಿರುಚಲಾಗಿದೆ. ಮರಾಠಿ ಯುವಕರ ದುರುಪಯೋಗದ ಬಗ್ಗೆ ಕಾಳಜಿ ತೋರಿ ನೀಡಿರುವ ಹೇಳಿಕೆಯ ಕೊನೆಯ ಭಾಗವನ್ನು ಮಾತ್ರ ಪ್ರಸಾರ ಮಾಡಲಾಗಿದೆ‘ ಎಂದು ಅವರು ಆರೋಪಿಸಿದ್ದಾರೆ. ಆದರೆ ಆರಂಭಿಕ ಹೇಳಿಕೆ ವಿಡಿಯೋ ಅಥವಾ ಆಡಿಯೋವನ್ನು ಅವರು ಈವರೆಗೆ ಬಿಡುಗಡೆ ಮಾಡಿಲ್ಲ.

ಲಕ್ಷ್ಮೀ ಹೆಬ್ಬಾಳ್ಕರ್ ವಜಾಕ್ಕೆ ಬಿಜೆಪಿ ಆಗ್ರಹ: ಕನ್ನಡ ವಿರೋಧಿ ಧೋರಣೆ ತಳೆದಿರುವ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹೆಬ್ಬಾಳ್ಕರ್ ಹೇಳಿಕೆ ಮಾಧ್ಯಮಗಳಲ್ಲಿ ವಿಡಿಯೋ ಸಹಿತ ಬರುತ್ತಿದೆ. ಹೀಗಾಗಿ ಸಿಎಂ ಅನಗತ್ಯವಾಗಿ ಪಿತೂರಿ ಎಂದು ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ್ಲ ನಾವು ಮರಾಠಿಗರ ವಿರುದ್ಧವಲ್ಲ. ಆದರೆ ಮರಾಠಿಗೆ ಜೈಕಾರ ಹಾಕಿ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯದಲ್ಲಿ ಮುಂದುವರಿಯಬಾರದು ಎಂಬುದು ನಮ್ಮ ಒತ್ತಾಯವೆಂದರು. ಭಾಷೆ, ಧ್ವಜದ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ ಇದೀಗ ವಿವಾದ ಮಾಡಲು ತಮ್ಮ ಪಕ್ಷದ ನಾಯಕಿಯನ್ನು ಛೂಬಿಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಹೇಳಿದ್ದಾರೆ, ಈ ಮೂಲಕ ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿರುವ ಅವರ ಕುರಿತು ತಮ್ಮ ನಿಲುವೇನು ಎಂದು ಸಿಎಂ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು. ಬೆಳಗಾವಿ ಯಾರಿಗೆ ಸೇರಬೇಕೆಂಬ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಸಚಿವ ಶಿವರಾಜ್ ಪಾಟೀಲ್ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಕೊಟ್ಟಿದ್ದರು. ಮಹಾಜನ್ ವರದಿಯಂತೆಯೇ ನಿಲುವು ಕೈಗೊಳ್ಳಬೇಕೆಂದು ಪ್ರಮಾಣಪತ್ರ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ ಗೊಂದಲ

ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಪ್ರಭಾವಳಿ ಕಾರಣದಿಂದ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಆದರೆ ಈ ಹೇಳಿಕೆಯಿಂದ ಕಾಂಗ್ರೆಸ್​ನ ಕನ್ನಡಪರ ಧೋರಣೆ ಹಾಗೂ ರಾಜಕೀಯ ಹೋರಾಟಕ್ಕೆ ಪೆಟ್ಟು ಬೀಳಲಿದೆ. ಮಹಿಳಾ ಘಟಕದಿಂದ ಸದ್ಯಕ್ಕೆ ರಾಜೀನಾಮೆ ಪಡೆಯುವುದು ಒಳ್ಳೆಯದು ಎಂದು ಬೆಳಗಾವಿ ಕಾಂಗ್ರೆಸ್ ಹಾಗೂ ರಾಜ್ಯದ ಕೆಲ ಹಿರಿಯ ಕಾಂಗ್ರೆಸಿಗರು ಪಕ್ಷದ ಉಸ್ತುವಾರಿ ವೇಣುಗೋಪಾಲ್​ಗೆ ಸಲಹೆ ನೀಡಿದ್ದಾರೆ. ಆದರೆ ಅಂತಿಮವಾಗಿ ಎಚ್ಚರಿಕೆ ನೀಡಿ ಕ್ಷಮಿಸಲು ರಾಜ್ಯ ಘಟಕ ನಿರ್ಧರಿಸಿದೆ.

ಮರಾಠಿ ಮತದಾರರನ್ನು ಓಲೈಸುವ ಉದ್ದೇಶ ದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಈ ಹೇಳಿಕೆ ನೀಡಿದ್ದು, ಅದನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಖಂಡಿಸುತ್ತದೆ. ಮತಕ್ಕಾಗಿ ಕನ್ನಡಿಗರ ಹಿತವನ್ನೇ ಬಲಿ ಕೊಡಲು ಮುಂದಾಗಿದ್ದು, ಕಾಂಗ್ರೆಸ್ ಕ್ರಮ ಕೈಕೊಳ್ಳಬೇಕು

| ಅಶೋಕ ಚಂದರಗಿ ಅಧ್ಯಕ್ಷ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ

 

ಕಾಂಗ್ರೆಸ್​ಗೆ ಅಖಂಡ ಕರ್ನಾಟಕ ಕಲ್ಪನೆ ಇದ್ದರೆ ತಕ್ಷಣವೇ ಹೆಬ್ಬಾಳ್ಕರ್​ರನ್ನು ಪಕ್ಷದಿಂದ ಹೊರಹಾಕಬೇಕು. ಬೆಳಗಾವಿಗಾಗಿ ರಾಜ್ಯದ ಅದೆಷ್ಟೋ ಜನ ಹೋರಾಟ ನಡೆಸುತ್ತಿದ್ದಾರೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ವಿವಾದಾತ್ಮಕ ಹೇಳಿಕೆ ಕೊಡಿಸುತ್ತಿದ್ದಾರೆ

| ಎಚ್.ವಿಶ್ವನಾಥ್,  ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ

 

ಮರಾಠಿ ಓಲೈಕೆಗೆ ಹೇಳಿಕೆ?

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯ ಪಾಟೀಲ ಶಾಸಕರಾಗಿದ್ದಾರೆ. ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇ ಬೇಕು ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಆಸೆ. ಈ ಕ್ಷೇತ್ರದಲ್ಲಿ ಮರಾಠಿಗರು ನಿರ್ಣಾಯಕರಾಗಿದ್ದಾರೆ. ತಮ್ಮ ರಾಜಕೀಯ ವಿರೋಧಿ ಸತೀಶ ಜಾರಕಿಹೊಳಿ ಮರಾಠಿ ಮುಖಂಡರೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಹಾಗೂ ಸಂಜಯ ಪಾಟೀಲ ಅರಳು ಹುರಿದಂತೆ ಮರಾಠಿಯಲ್ಲಿ ಮಾತನಾಡಿ ಮರಾಠಿಗರ ಮನ ಗೆಲ್ಲುವ ಭೀತಿ ಹೆಬ್ಬಾಳ್ಕರ್ ಅವರನ್ನು ಕಾಡುತ್ತಿದೆ. ಹಾಗಾಗಿ ಚೆಕ್​ವೆುೕಟ್ ಪರಿಸ್ಥಿತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿ ಮತ ಸೆಳೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಬ್ಬಾಳ್ಕರ್ ಹೇಳಿದ್ದೇನು?

ಝಾಲಾಚ್ ಪಾಯಿಜೆ (ಆಗಲೇಬೇಕು). ಏನು ಎಂದರೆ ವಿಕಾಸ ಝಾಲಾಚ್ ಪಾಯಿಜೆ. ಗಡಿ ವಿಷಯ ಝಾಲಾಚ್ ಪಾಯಿಜೆ. ಭಾಷಾ ವಿಷಯ ಝಾಲಾಚ್ ಪಾಯಿಜೆ. ನಾವೀಗ ಕರ್ನಾಟಕದಲ್ಲಿದ್ದೇವೆ. ಗಡಿ ವಿವಾದ ಸುಪ್ರೀಂಕೋರ್ಟ್​ನಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆಯಾದಾಗ, ಎಲ್ಲರಿಗಿಂತ ಮೊದಲು ಈ ಲಕ್ಷ್ಮೀ ಹೆಬ್ಬಾಳ್ಕರ್ ಮಹಾರಾಷ್ಟ್ರದ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎನ್ನುತ್ತಾಳೆ. ಯಾವ ರಾಜಕಾರಣಿಯಲ್ಲೂ ಧೈರ್ಯ ಇಲ್ಲ. ನಾನು ಹೆದರುವುದು ಭಗವಂತನಿಗೆ ಮತ್ತು ತಂದೆ-ತಾಯಿಗೆ ಮಾತ್ರ. ಜಾತಿ, ಭಾಷೆ, ಗಡಿಯಿಂದ ನನಗೇನೂ ಆಗಬೇಕಿಲ್ಲ. ನನಗೆ ಬೇಕಿರುವುದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾತ್ರ. ನಾನು ಏನೇ ಮಾಡಿದರೂ, ಎಲ್ಲೇ ಹೋದರೂ ಈ ಕ್ಷೇತ್ರದ ವಿಕಾಸದ ಬಗ್ಗೆ ಯೋಚಿಸುತ್ತೇನೆ. ಇಲ್ಲಿನ ಜನರ ಮೇಲೆ ಅನ್ಯಾಯ ಆಗುತ್ತಿದೆ. ಇಲ್ಲಿನ ಶಾಸಕರನ್ನು ಈ ಬಗ್ಗೆ ಕೇಳಬೇಕು. ನಮ್ಮ ಭಾಗದ ರೈತರ ಜಮೀನನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜನರಿಗೆ ಬೇಡದ ಯೋಜನೆಗಳನ್ನು ಗ್ರಾಮೀಣ ಕ್ಷೇತ್ರ ಮಾತ್ರ ಕಾಣುತ್ತಿದೆ. ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರ ಇವರಿಗೆ ಕಾಣಿಸುವುದಿಲ್ಲ.

ಲಕ್ಷ್ಮೀ ಹೆಬ್ಬಾಳ್ಕರ್ ಆ ರೀತಿ ಹೇಳಿರಲು ಸಾಧ್ಯವಿಲ್ಲ. ಇದೆಲ್ಲ ಬಿಜೆಪಿ, ಎಂಇಎಸ್ ಪಿತೂರಿ ಇರಬಹುದು.

| ಸಿದ್ದರಾಮಯ್ಯ, ಮುಖ್ಯಮಂತ್ರಿ

Leave a Reply

Your email address will not be published. Required fields are marked *

Back To Top