Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಕನ್ನಡ-ಕರ್ನಾಟಕದ ಅಭಿವೃದ್ಧಿಯ ಸಾಧ್ಯತೆಗಳು

Sunday, 09.07.2017, 3:05 AM       No Comments

ಸೂಕ್ತ ಸ್ಥಾನದಲ್ಲಿ ಸಮರ್ಥ ಪ್ರಾಮಾಣಿಕ ಅಧಿಕಾರಿಯಿದ್ದರೆ ಅದರಿಂದ ಲಕ್ಷಾಂತರ ನಾಗರಿಕರು ಲಾಭ ಪಡೆಯುತ್ತಾರೆ. ಜನಸಾಮಾನ್ಯರ ಬದುಕನ್ನು ಸಹನೀಯಗೊಳಿಸುವ ಅವಕಾಶ ಹಾಗೂ ಸಂಪನ್ಮೂಲ ಇವರ ಅಧಿಕಾರದ ವ್ಯಾಪ್ತಿಯಲ್ಲಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ.

 ಸುಮಾರು ಕಾಲು ಶತಮಾನಕ್ಕೂ ಹಿಂದಿನ ಘಟನೆ. ಡಾ| ಸಾ ಶಿ ಮರುಳಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಕೆಲಕಾಲ ನಾನು ಪರಿಷತ್ತಿನ ಕಾರ್ಯದರ್ಶಿಯಾಗಿದ್ದೆ. ಆಗ ನಾನು ಯೋಚಿಸಿದ ಎರಡು ಯೋಜನೆಗಳೂ ಫಲಪ್ರದವಾಗಲಿಲ್ಲ. ‘ಪ್ರಥಮ ಚುಂಬನಂ ದಂತಭಗ್ನಂ’ ಎಂಬಂತೆ ಆರಂಭದ ಹಂತದಲ್ಲೇ ಸೋತುಹೋದವು.

ಅವುಗಳಲ್ಲಿ ಮೊದಲನೆಯದು ಪರಿಷತ್ತಿನಲ್ಲಿ ಒಂದು ‘ಪರಾಮರ್ಶನ ಗ್ರಂಥಾಲಯ’ ಸ್ಥಾಪಿಸಬೇಕೆಂಬುದು. ಕನ್ನಡದ ಪ್ರಮುಖ ಲೇಖಕರ ಎಲ್ಲ ಪುಸ್ತಕಗಳೂ ಅಲ್ಲಿ ಸಿಗುವಂತಿರಬೇಕು. ಅವುಗಳನ್ನು ನಾವು ವಿತರಿಸಬಾರದು. ಆಸಕ್ತರು ಅಲ್ಲಿಯೇ ಕುಳಿತು ಓದಲು ಅವಕಾಶ ಕಲ್ಪಿಸಬೇಕು. ಪುಸ್ತಕದ ಯಾವುದಾದರೂ ಭಾಗ ಬೇಕೆಂದರೆ ಜೆರಾಕ್ಸ್ ಮಾಡಿಸಿಕೊಳ್ಳಲು ಅಲ್ಲಿಯೇ ಅನುವು ಮಾಡಿಕೊಡಬೇಕು. ಕನ್ನಡ ಸಂಶೋಧನೆಗೆ ಇಂತಹ ವ್ಯವಸ್ಥೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯೆಂದರೆ ಆಕರಸಾಹಿತ್ಯದ ಕೊರತೆ. ನಮಗೆ ಬೇಕೆಂದ ಪುಸ್ತಕ ಅಗತ್ಯವಿದ್ದಾಗ ಸಿಗುವುದಿಲ್ಲ. ಹೀಗಾಗಿ ಪ್ರಮುಖ ಲೇಖಕರ ಗ್ರಂಥಗಳನ್ನೆಲ್ಲ ಸಂಗ್ರಹಿಸಿ ‘ಪರಾಮರ್ಶನ ಗ್ರಂಥಾಲಯ’ವೊಂದನ್ನು ನಾವು ಸ್ಥಾಪಿಸಿದರೆ ಕನ್ನಡದ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನನ್ನ ಆಲೋಚನೆಯಾಗಿತ್ತು. ಈಗಲೂ ರಾಜ್ಯದಲ್ಲಿ ಎಲ್ಲಿಯೂ ಈ ಬಗೆಯ ಗ್ರಂಥಾಲಯ ಇದ್ದಂತಿಲ್ಲ. ಈ ವಿಚಾರವನ್ನು ನಾನು ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಪ್ರಸ್ತಾಪಿಸಿದೆ. ಒಂದು ವರ್ಷ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ವನ್ನು ನಡೆಸದಿದ್ದರೂ ಪರವಾಗಿಲ್ಲ, ಸಮ್ಮೇಳನಕ್ಕೆ ವೆಚ್ಚವಾಗುವ ಹಣದಲ್ಲಿ ಈ ಪರಾಮರ್ಶನ ಗ್ರಂಥಾಲಯವನ್ನು ಖಂಡಿತ ರೂಪಿಸಬಹುದು ಎಂದು ಸೂಚಿಸಿದೆ. ಆ ಸಮಿತಿಯಲ್ಲಿ ಮೂವತ್ತೇಳು ಸದಸ್ಯರಿದ್ದಂತೆ ನೆನಪು. ಡಾ| ವಿವೇಕ ರೈ ಒಬ್ಬರನ್ನು ಬಿಟ್ಟು ನನ್ನ ಈ ವಿಚಾರಕ್ಕೆ ಯಾರೂ ಸಹಮತ ವ್ಯಕ್ತಪಡಿಸಲಿಲ್ಲ. ಕೆಲಕ್ಷಣ ಸಭೆ ಮೌನವಾಗಿತ್ತು. ಯಾರೋ ಒಬ್ಬರು ವಿರೋಧಿಸಿದರು. ಅದಕ್ಕೇ ಕಾಯುತ್ತಿದ್ದವರಂತೆ ಎಲ್ಲರೂ ಅದಕ್ಕೆ ದನಿಗೂಡಿಸಿದರು. ನನ್ನ ನಿರ್ಣಯ ಬಿದ್ದುಹೋಯಿತು. ಸಭೆ ಮುಗಿದ ನಂತರ ವಿವೇಕ ರೈ ನನ್ನ ಬಳಿ ಬಂದು ಸಮಾಧಾನ ಹೇಳಿದರು. ಆದರೆ ನನಗೆ ಬೇಸರವೇನೂ ಆಗಿರಲಿಲ್ಲ. ನಮ್ಮವರ ಸ್ವಭಾವ ನನಗೆ ತಿಳಿಯದ್ದೆ? ಈಗಲೂ ಪರಿಷತ್ತು ಮಾತ್ರವಲ್ಲ, ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಂಸ್ಕೃತಿ ಇಲಾಖೆ ಅಷ್ಟೇಕೆ ನಮ್ಮ ಸಾರ್ವಜನಿಕ ಗ್ರಂಥಾಲಯ ಯಾರಾದರೂ ಈ ದಿಕ್ಕಿನಲ್ಲಿ ಯೋಚಿಸಬಹುದು. ಸರ್ಕಾರವೇ ಆಸಕ್ತಿ ವಹಿಸಿ ಕನ್ನಡದ ಎಲ್ಲ ಮುಖ್ಯ ಪುಸ್ತಕಗಳೂ ಒಂದೆಡೆ ದೊರೆಯುವಂತಹ ‘ಪರಾಮರ್ಶನ ಗ್ರಂಥಾಲಯ’ವೊಂದನ್ನು ಸ್ಥಾಪಿಸಿದರೆ ಕನ್ನಡ ಸಂಶೋಧನೆಗೆ ಅಗತ್ಯ ವಾತಾವರಣ ಕಲ್ಪಿಸಿದಂತಾಗುತ್ತದೆ. ಸರ್ಕಾರದ ಅಂಗಳದಲ್ಲಿ ಓಡಾಡುವ ನಮ್ಮ ಚಿಂತಕರಾದರೂ ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿ, ಕಿವಿ ಹಿಂಡಿದರೆ ಕನ್ನಡದ ಬೆಳವಣಿಗೆಗೆ ನೆರವಾದಂತಾಗುತ್ತದೆ. ಕರ್ನಾಟಕ ಸರ್ಕಾರದ ಒಟ್ಟು ಬಜೆಟ್ಟಿನಲ್ಲಿ ಇದಕ್ಕೆ ಎಷ್ಟು ಮಹಾ ಬೇಕಾದೀತು? ಇದೇನು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯೇ? ಹಣವಲ್ಲ, ಮನಸ್ಸು ಬೇಕಷ್ಟೆ! ಈಗಂತೂ ಒಂದು ಸಾಹಿತ್ಯ ಸಮ್ಮೇಳನಕ್ಕೆ ಐದಾರು ಕೋಟಿ ರೂ. ವೆಚ್ಚವಾಗುತ್ತದೆ. ಈ ವರ್ಷ ‘ವಿಶ್ವ ಕನ್ನಡ ಸಮ್ಮೇಳನ’ ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ನಮ್ಮಲ್ಲಿ ಹಣಕ್ಕೆ ಕೊರತೆಯೇ? ಹೀಗೆ ಕನ್ನಡವನ್ನು ಮೆರೆಸುತ್ತಿರುವ ನಾವು ಆಸಕ್ತ ಓದುಗರಿಗೆ ಅಗತ್ಯ ಬೇಕಾದ ಒಂದು ಕನ್ನಡ ಪುಸ್ತಕ ಸಿಗುವ ವ್ಯವಸ್ಥೆ ಮಾತ್ರ ಮಾಡಿಲ್ಲ.

ಜಾಫರ್ ಮಾತು: ಮತ್ತೊಂದು ನನ್ನ ಯೋಜನೆ ಆಗ ಮಂಡಿಸಿದ್ದು ಇದೇ ರೀತಿಯದಾದರೂ ಇದಕ್ಕಿಂತ ಭಿನ್ನ ಸ್ವರೂಪದ್ದು. ಆಗ ಕೇಂದ್ರ ಸರ್ಕಾರದಲ್ಲಿ ನಮ್ಮ ರಾಜ್ಯದ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದರು. ಅವರನ್ನು ಒಮ್ಮೆ ಪರಿಷತ್ತಿಗೆ ಆಹ್ವಾನಿಸಿ ಒಂದು ಅಹವಾಲನ್ನು ಅವರ ಮುಂದಿಟ್ಟೆವು: ಅವರು ರೈಲ್ವೆ ಸಚಿವರಾಗಿರುವುದರಿಂದ ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳಲ್ಲಿ ಕನ್ನಡ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ಕೋರಿದೆವು. ಅವರು ಮುಗುಳ್ನಗುತ್ತಾ, ‘ಒಳ್ಳೆಯ ಯೋಜನೆ. ನಾನು ಈಗಲೇ ಆದೇಶ ಹೊರಡಿಸಬಹುದು. ಆದರೆ ಅದು ಜಾರಿಯಾಗುವುದಿಲ್ಲ’ ಎಂದರು. ನಾವು ಕುತೂಹಲದಿಂದ ‘ಯಾಕೆ ಸರ್’ ಎಂದೆವು. ‘ನೋಡಿ, ನಾನೇನೊ ಆದೇಶ ಮಾಡಿಬಿಡುತ್ತೇನೆ. ಆದರೆ ನಮ್ಮ ಐಎಎಸ್ ಅಧಿಕಾರಿಗಳು ಯಾವುದೋ ಕೊಕ್ಕೆ ಹಾಕಿ ಅದು ಸಾಧ್ಯವಿಲ್ಲ ಎನ್ನುತ್ತಾರೆ. ನಾವು ಆಗ ಅಸಹಾಯಕರು. ನಿಜದಲ್ಲಿ ದೇಶವನ್ನು ಆಳುತ್ತಿರುವವರು ನಮ್ಮ ಅಧಿಕಾರಿಗಳು. ಕೆಲವು ನಿರ್ಣಯಗಳನ್ನು ನಾವು ಕೈಗೊಳ್ಳುತ್ತೇವೆ. ಅವುಗಳಲ್ಲಿ ಎಷ್ಟು ಅನುಷ್ಠಾನಗೊಳ್ಳುತ್ತವೆ ಎಂದು ಪರಿಶೀಲಿಸಿದಾಗ ಬಹಳಷ್ಟು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಅದಕ್ಕೆ ಕಾರಣ ನಮ್ಮ ಆಡಳಿತಶಾಹಿ. ಆಗಲಿ, ನೋಡೋಣ, ಪ್ರಯತ್ನಿಸುತ್ತೇನೆ’ ಎಂದರು. ಅವರ ಕಡೆಯ ಮಾತುಗಳು ಔಪಚಾರಿಕವಾಗಿತ್ತು ಎಂದು ಯಾರಿಗಾದರೂ ತಿಳಿಯುವಂತಿತ್ತು. ಮುಂದೆ ಅವರು ಆದೇಶ ಮಾಡಿದರೋ ಇಲ್ಲವೋ, ಮಾಡಿಯೂ ಅನುಷ್ಠಾನವಾಗ ಲಿಲ್ಲವೋ, ಒಟ್ಟಾರೆ ನಮ್ಮ ಸೂಚನೆ ಕಾರ್ಯರೂಪಕ್ಕೆ ಬರಲಿಲ್ಲವೆಂಬುದು ಮಾತ್ರ ನಿಜ.

ಮಾಲ್​ಗಳಲ್ಲೂ ಇರಲಿ ಪುಸ್ತಕದ ಅಂಗಡಿ: ಈಗ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಈ ಯೋಜನೆಯನ್ನೂ ಕಾರ್ಯರೂಪಕ್ಕೆ ತರಬಹುದು. ತನ್ನ ಅಧಿಕಾರವ್ಯಾಪ್ತಿಯಲ್ಲಿರುವ ಪ್ರತಿ ಬಸ್ಸು ನಿಲ್ದಾಣಗಳಲ್ಲಿಯೂ ಎಲ್ಲ ರೀತಿಯ ಅಂಗಡಿಗಳಿರುವಂತೆ ಕಡ್ಡಾಯವಾಗಿ ಕನ್ನಡ ಪುಸ್ತಕದ ಅಂಗಡಿಗಳೂ ಇರಬೇಕೆಂದು ಆದೇಶ ಮಾಡಿದರೆ ಓದುವ ಹವ್ಯಾಸವನ್ನು ಬೆಳೆಸಬಹುದು. ಆ ಮೂಲಕ ಜನಸಮುದಾಯದ ಮನಸ್ಸನ್ನು ಸೃಜನಶೀಲವಾಗಿಡಲು, ಉಲ್ಲಾಸವಾಗಿಡಲು ನೆರವಾದಂತಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ಬಗೆಯ ವ್ಯವಸ್ಥೆಯಿದೆ. ನಮ್ಮ ವಿಮಾನ ನಿಲ್ದಾಣಗಳಲ್ಲೂ ಪುಸ್ತಕದ ಶಾಪ್​ಗಳು ಇದ್ದೇ ಇರುತ್ತವೆ. ಹೀಗೆ ಹೇಳುವಾಗ ಜನರು ಪುಸ್ತಕ ಕೊಳ್ಳುವುದಿಲ್ಲ ಎಂಬ ದೂರು ಸಾಮಾನ್ಯ. ಈ ಅಂಶ ಸ್ವಲ್ಪ ಮಟ್ಟಿಗೆ ನಿಜವಿರಬಹುದು. ಆದರೆ ಅಭ್ಯಾಸವಾದರೆ ನಂತರ ಜನ ಕೊಂಡುಕೊಳ್ಳುತ್ತಾರೆ. ಒಳ್ಳೆಯ ಅಭ್ಯಾಸಗಳನ್ನು ಎಷ್ಟೇ ಕಷ್ಟವಾದರೂ ನಾವು ರೂಢಿಗೆ ತರುವುದು ಒಳ್ಳೆಯದು. ನಮ್ಮ ಮಾಲ್​ಗಳಲ್ಲಿಯೂ ಎಲ್ಲ ಬಗೆಯ ಅಂಗಡಿಗಳೂ ಇರುತ್ತವೆ. ಆದರೆ ಪುಸ್ತಕದ ಅಂಗಡಿಗಳು ಮಾತ್ರ ಕಾಣಿಸುವುದಿಲ್ಲ. ಪುಸ್ತಕಗಳು ಕಣ್ಣಿಗೇ ಕಾಣಿಸದಿದ್ದರೆ ಕೊಂಡುಕೊಳ್ಳುವುದಾದರೂ ಹೇಗೆ? ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ದೂರುತ್ತೇವೆ. ಅದನ್ನು ಬೆಳೆಸಲು ನಾವು ಏನು ಮಾಡುತ್ತಿದ್ದೇವೆ?

ಆ ಸಂದರ್ಭದಲ್ಲಿ ಜಾಫರ್ ಷರೀಫ್ ಅವರು ನನ್ನೊಡನೆ ಮಾತನಾಡುತ್ತ ಮತ್ತೊಂದು ಮಹತ್ವದ ಸಂಗತಿಯೊಂದನ್ನು ಪ್ರಸ್ತಾಪಿಸಿದರು: ‘‘ನೋಡಿ, ಕನ್ನಡ, ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ಆಗಬೇಕಾದರೆ ಕೇಂದ್ರ ಸೇವೆಯಲ್ಲಿ ನಮ್ಮ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಮ್ಮದು ಒಕ್ಕೂಟ ವ್ಯವಸ್ಥೆ. ಅನೇಕ ವೇಳೆ ನಮಗೆ ಕೇಂದ್ರದಿಂದ ಸಹಜವಾಗಿ, ನ್ಯಾಯಯುತವಾಗಿ ಸಿಗಬೇಕಾದ ಅನುದಾನವೂ ಸಿಗುವುದಿಲ್ಲ. ಏಕೆಂದರೆ ಯಾವ ಬಾಬ್ತಿನಲ್ಲಿ ಹೇಗೆ ಅನುದಾನ ಪಡೆಯಬೇಕೆಂಬುದೇ ನಮಗೆ ಕೆಲವೊಮ್ಮೆ ತಿಳಿದಿರುವುದಿಲ್ಲ. ಸರಿಯಾದ ಮಾಹಿತಿ, ತಿಳಿವಳಿಕೆ ಇಲ್ಲದೆ ಸಹಾಯ ಪಡೆಯುವುದೂ ಕಷ್ಟ. ಇಂತಹ ಮಾಹಿತಿಗಳು ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳಿಗೆ ಸಹಜವಾಗಿ ತಿಳಿದಿರುತ್ತದೆ. ಅವರ ಸಲಹೆಯೇ ಅನೇಕ ವೇಳೆ ನಮಗೆ ದೊಡ್ಡಮಟ್ಟದ ಅನುಕೂಲ ಮಾಡಿ ಕೊಡಬಲ್ಲದು. ಕೆಲವು ರಾಜ್ಯಗಳು ಅನುಕೂಲ ಪಡೆಯುವುದು ಹೀಗೆ. ನಾವು ಆ ಬಗ್ಗೆ ಯೋಚಿಸುವ ವೇಳೆಗಾಗಲೇ ಅವರು ಅನುದಾನ ಪಡೆದು ಅದನ್ನು ಬಳಕೆ ಮಾಡಿಯೂ ಆಗಿರುತ್ತದೆ. ಆದ್ದರಿಂದ ಕೇಂದ್ರ ಸೇವೆಗೆ ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳಿಸುವ ದಿಕ್ಕಿನಲ್ಲಿ ಯೋಚಿಸಿ’ ಎಂದರು. ಅವರ ಈ ಚಿಂತನೆಯ ಹಿಂದೆ ಸುದೀರ್ಘ ರಾಜಕೀಯ ಜೀವನದ ಅನುಭವವಿರುವುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಮಂಜುಗಡ್ಡೆ ಕರಗಿದಂತೆ…: ಇದು ವಾಸ್ತವ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗದಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಕಾರ್ಯಾಂಗದ ಪಾತ್ರ ಅತ್ಯಂತ ಮಹತ್ವದ್ದು. ನಮ್ಮ ಜನಪ್ರತಿನಿಧಿಗಳು ಯಾವುದೇ ಯೋಜನೆ ಹಾಕಿಕೊಂಡರೂ ಅದು ಜನರನ್ನು ತಲುಪುವುದು ನಮ್ಮ ಅಧಿಕಾರಿಗಳ ಮೂಲಕವೇ. ಒಂದು ಕತೆ ನೆನಪಾಗುತ್ತಿದೆ: ಅಕ್ಬರ್ ಜನೋಪಯೋಗಿಯಾದ ಅನೇಕ ಯೋಜನೆಗಳನ್ನು ಹಾಕಿರುತ್ತಾನೆ. ಅದಕ್ಕಾಗಿಯೇ ಸಾಕಷ್ಟು ಹಣವನ್ನೂ ಒದಗಿಸಿರುತ್ತಾನೆ. ಆದರೆ ಜನರು ಮಾತ್ರ ನೆಮ್ಮದಿ ಕಾಣದೆ ದೊರೆಯ ಬಳಿ ಮತ್ತೆ ಮತ್ತೆ ದೂರು ನೀಡುತ್ತಿರುತ್ತಾರೆ. ಇಷ್ಟು ಹಣ ಒದಗಿಸಿದರೂ ಜನರ ಸಮಸ್ಯೆ ಏಕೆ ಪರಿಹಾರವಾಗುತ್ತಿಲ್ಲ ಎಂದು ಆತನಿಗೆ ಗೊಂದಲವುಂಟಾಗುತ್ತದೆ. ಇದನ್ನು ಬೀರಬಲ್ಲನೊಡನೆ ಪ್ರಸ್ತಾಪಿಸುತ್ತಾನೆ. ಆಗ ಮೌನವಾಗಿದ್ದ ಬೀರಬಲ್ ಮಾರನೆಯ ದಿನ ಆಸ್ಥಾನದಲ್ಲಿ ರಾಜ ಅಕ್ಬರನ ಕೈಯಲ್ಲಿ ಒಂದು ಮಂಜುಗಡ್ಡೆಯನ್ನು ಕೊಟ್ಟು ದೂರದಲ್ಲಿ ಬಾಗಿಲ ಬಳಿಯಿದ್ದ ಜನಸಾಮಾನ್ಯ ವ್ಯಕ್ತಿಯೊಬ್ಬನಿಗೆ ಅದನ್ನು ತಲುಪಿಸಲು ಹೇಳುತ್ತಾನೆ. ಅಕ್ಬರ್ ಆ ಮಂಜುಗಡ್ಡೆಯನ್ನು ಮಂತ್ರಿಗೆ ಕೊಡುತ್ತಾನೆ. ಆತ ಅದನ್ನು ತನ್ನ ಸಹಾಯಕನಿಗೆ ಕೊಡುತ್ತಾನೆ. ಆತ ಮತ್ತೊಬ್ಬನಿಗೆ… ಹೀಗೆ ಅದು ಅನೇಕರ ಕೈ ಹಾದು ಕಡೆಗೆ ಬಾಗಿಲ ಬಳಿ ನಿಂತಿದ್ದ ಸಾಮಾನ್ಯ ಪ್ರಜೆಯ ಕೈ ತಲುಪುತ್ತದೆ. ಆಗ ಬೀರಬಲ್ ಆ ಮಂಜುಗಡ್ಡೆಯನ್ನು ಸಾಮಾನ್ಯ ಪ್ರಜೆಯಿಂದ ಪಡೆದು ಅಕ್ಬರನಿಗೆ ಕೊಡುತ್ತಾನೆ. ಆ ವೇಳೆಗೆ ಅದು ಅನೇಕರ ಕೈ ಹಾದು ಬಂದದ್ದರಿಂದ ಕರಗಿ ಮುಷ್ಟಿಯಷ್ಟು ಇದ್ದದ್ದು ಕಿರುಬೆರಳಿನಷ್ಟಾಗಿರುತ್ತದೆ.

ಬೀರಬಲ್ ಹೇಳುತ್ತಾನೆ: ‘ಜಹಾಪನಾ, ನೀವು ಬೊಕ್ಕಸದಿಂದ ಪ್ರಜೆಗಳಿಗೆಂದು ಬಿಡುಗಡೆ ಮಾಡಿದ ಹಣವೂ ಹೀಗೆಯೇ. ಅನೇಕರ ಕೈ ಹಾದು ಸಮಾಜದ ಅಂಚಿನಲ್ಲಿರುವ ವ್ಯಕ್ತಿಯನ್ನು ತಲುಪುವ ವೇಳೆಗೆ ಸೋರಿಹೋಗಿ ಅವನನ್ನು ತಲುಪುವುದು ಕಿಂಚಿತ್ ಮಾತ್ರ, ಅಥವಾ ಕೆಲವೊಮ್ಮೆ ತಲುಪದೆಯೂ ಇರಬಹುದು. ಅವರ ಸಮಸ್ಯೆ ಪರಿಹಾರವಾಗುವುದಾದರೂ ಹೇಗೆ? ಬೊಕ್ಕಸದ ಹಣ ಮಧ್ಯೆ ಸೋರಿಹೋಗದ ಹಾಗೆ ತಲುಪುವ ವ್ಯವಸ್ಥೆಯಾದರೆ ಪರಿಸ್ಥಿತಿ ಸುಧಾರಿಸಬಹುದು’ ಎನ್ನುತ್ತಾನೆ. ಯಾವುದೇ ಸರ್ಕಾರದ ಯೋಜನೆಗಳೂ ಹೀಗೆಯೇ! ಸರ್ಕಾರ ಹಾಗೂ ಜನಸಾಮಾನ್ಯರ ಮಧ್ಯೆ ‘ಅಧಿಕಾರಶಾಹಿ’ ಇರುತ್ತದೆ. ಬೊಕ್ಕಸದ ಹಣ ಅಲ್ಲಿ ಸೋರಿಹೋಗುತ್ತದೆ. ಜನೋಪಯೋಗಿ ಕಾರ್ಯಗಳಲ್ಲಿ ಈ ಅಧಿಕಾರಶಾಹಿಯ ಪಾತ್ರವೇ ಅತ್ಯಂತ ಮಹತ್ವದ್ದು.

ಇತ್ತೀಚೆಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನನ್ನೊಡನೆ ಮಾತನಾಡುತ್ತಾ ಹೇಳಿದ್ದು: ಬರಪೀಡಿತ ಪ್ರದೇಶದಲ್ಲಿ ನೀರಿನ ಬವಣೆಯಿದ್ದು ಕೊಳವೆಬಾವಿ ತೆಗೆಸುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತದೆ. ನಿಯೋಜಿತ ಅಧಿಕಾರಿಯೊಬ್ಬ ಕೊಳವೆಬಾವಿ ತೆಗೆಯಬೇಕಾದ ಸ್ಥಳ ಗುರ್ತಿಸುತ್ತಾನೆ. ಕೊಳವೆಬಾವಿಯೂ ಸಿದ್ಧವಾಗುತ್ತದೆ. ಆದರೆ ಅದರಲ್ಲಿ ನೀರು ಬರುವುದಿಲ್ಲ. ಇದೆಲ್ಲವೂ ಕಾಗದದಲ್ಲಿ ಮಾತ್ರ. ವಾಸ್ತವವಾಗಿ ಕೊಳವೆಬಾವಿ ತೆಗೆಸಿಯೇ ಇರುವುದಿಲ್ಲ. ಹಣ ಮಾತ್ರ ಬಿಡುಗಡೆಯಾಗಿರುತ್ತದೆ. ಮುಂದೆ ತೆರೆದ ಕೊಳವೆಬಾವಿಯನ್ನು ಹಾಗೆಯೇ ಬಿಡುವಂತಿಲ್ಲವಲ್ಲ! ಅದನ್ನು ಮುಚ್ಚಿಸಲು ಮತ್ತೆ ಹಣ ಬಿಡುಗಡೆಯಾಗುತ್ತದೆ. ತೆಗೆಯದ ಬಾವಿಯನ್ನು ಮುಚ್ಚಿಸುತ್ತಾರೆ. ಅದೂ ದಾಖಲೆಯಲ್ಲಿ ನಮೂದಾಗುತ್ತದೆ. ನಮ್ಮ ‘ಅಧಿಕಾರಿ’ಗಳು ರಾಜಕಾರಣಿಗಳ ಬೆಂಬಲದೊಡನೆ ಹೀಗೆ ಕಾಗದದ ಮೇಲೆಯೇ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿದಂತೆ ತೋರಿಸುವ ಪವಾಡ ನಡೆಯುತ್ತಿರುತ್ತದೆ. ಜನರ ತೆರಿಗೆಯ ಹಣ ಯಾರ ಜೇಬು ಸೇರುತ್ತದೆ?

ಸಂಸ್ಕೃತಿ ಕಟ್ಟುವ ಕೆಲಸ: ಇದು ಅಧಿಕಾರಶಾಹಿಯ ಒಂದು ಮುಖ ಮಾತ್ರ. ಜನಪರ ಯೋಜನೆಗಳನ್ನು ಶ್ರದ್ಧೆ, ಪ್ರಾಮಾಣಿಕತೆಗಳಿಂದ ಜಾರಿಗೆ ತರುವ ಅನೇಕ ಅಧಿಕಾರಿಗಳೂ ನಮ್ಮ ನಡುವೆ ಇದ್ದಾರೆ. ಹಾಗೆ ನೋಡಿದರೆ ಸಮಾಜದ ಪ್ರಗತಿಯಲ್ಲಿ ಇವರ ಪಾತ್ರವೇ ಅತ್ಯಂತ ಪ್ರಮುಖವಾದುದು. ಸೂಕ್ತ ಸ್ಥಾನದಲ್ಲಿ ಸಮರ್ಥ ಪ್ರಾಮಾಣಿಕ ಅಧಿಕಾರಿಯಿದ್ದರೆ ಅದರಿಂದ ಲಕ್ಷಾಂತರ ನಾಗರಿಕರು ಲಾಭ ಪಡೆಯುತ್ತಾರೆ. ಜನಸಾಮಾನ್ಯರ ಬದುಕನ್ನು ಸಹನೀಯಗೊಳಿಸುವ ಅವಕಾಶ ಹಾಗೂ ಸಂಪನ್ಮೂಲ ಇವರ ಅಧಿಕಾರದ ವ್ಯಾಪ್ತಿಯಲ್ಲಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಕನ್ನಡ ಸಂಸ್ಕೃತಿಯನ್ನು ಕಟ್ಟುವಲ್ಲಿಯೂ ನಮ್ಮ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ದೂರದೃಷ್ಟಿಯುಳ್ಳ ಅಧಿಕಾರಿ ಭೌತಿಕ ಅನುಕೂಲಗಳನ್ನು ಕಲ್ಪಿಸುವುದರ ಜತೆಗೆ ಸಂಸ್ಕೃತಿಯನ್ನು ಕಟ್ಟುವ ಕೆಲಸವನ್ನೂ ಮಾಡುತ್ತಿರುತ್ತಾನೆ. ಹಿಂಸೆ ಕ್ರೌರ್ಯಗಳಿಂದ ಮುಕ್ತವಾದ ಸೃಜನಶೀಲ ವಾತಾವರಣ ನಿರ್ವಿುಸಲು ನೆರವಾಗುತ್ತಾನೆ.

ಜಾಫರ್ ಷರೀಫ್ ಅವರು ಅಧಿಕಾರಶಾಹಿಯ ಮಹತ್ವವನ್ನು ಕುರಿತು ಹೇಳಿದ್ದು ನನ್ನ ಮನಸ್ಸಿಗೆ ನಾಟಿತು. ಕನ್ನಡ ಮನಸ್ಸಿನ ಅಧಿಕಾರಿಗಳು ಸೂಕ್ತ ಸ್ಥಾನದಲ್ಲಿದ್ದಾಗ ಕನ್ನಡದ, ಕರ್ನಾಟಕದ ಬೆಳವಣಿಗೆ ಪರಿಣಾಮಕಾರಿಯಾಗಿ ಆಗಲು ಸಾಧ್ಯ. ಅದಕ್ಕಾಗಿ ನಾವು ಕನ್ನಡ ಮನಸ್ಸುಗಳು ಅಧಿಕಾರಶಾಹಿಯನ್ನು ಪ್ರವೇಶಿಸಲು ಅವಕಾಶ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿಯೇ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಪ್ರತಿಭೆಗಳು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ನೆರವಾಗಲು ತರಬೇತಿ ನೀಡಲು ನಾವು ಕೆಲವರು ಆರಂಭಿಸಿದೆವು. ನಾವು ಆರಂಭಿಸಿದಾಗ ಐದಾರು ವಿದ್ಯಾರ್ಥಿಗಳಿರುತ್ತಿದ್ದರು. ಈಗ ಆ ಸಂಖ್ಯೆ ಸಾವಿರಾರು ಆಗಿರುವುದು ಸಂತೋಷದ ಸಂಗತಿ. ಐಚ್ಚಿಕ ಕನ್ನಡವನ್ನು ವಿಶೇಷ ವಿಷಯವನ್ನಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿ ಉನ್ನತ ಅಧಿಕಾರ ಪಡೆಯುತ್ತಿದ್ದಾರೆ. ಮಾತ್ರವಲ್ಲ, ಅಖಿಲ ಭಾರತ ಮಟ್ಟದಲ್ಲಿ ಐಚ್ಚಿಕ ಕನ್ನಡ ವಿದ್ಯಾರ್ಥಿನಿಯಾದ ನಂದಿನಿಯಂಥವರು ಪ್ರಥಮ ಸ್ಥಾನವನ್ನೂ ಪಡೆದು ಕನ್ನಡದ ಕೀರ್ತಿಯನ್ನು ರಾಷ್ಟ್ರದಾದ್ಯಂತ ಎತ್ತಿ ಹಿಡಿಯುತ್ತಿದ್ದಾರೆ. ಇವರೆಲ್ಲ ಪದವಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ವಿಷಯಗಳನ್ನು ಓದಿದವರು. ಆದರೆ ಇಲ್ಲಿ ಕನ್ನಡ ಸಾಹಿತ್ಯವನ್ನು ವಿಶೇಷ ವಿಷಯವನ್ನಾಗಿ ಆರಿಸಿಕೊಂಡು ಅಧ್ಯಯನ ಮಾಡುತ್ತಾರೆ. ಸಾಹಿತ್ಯ ಓದಿದ ವಿದ್ಯಾರ್ಥಿಗಳು ಅಧಿಕಾರದಲ್ಲಿದ್ದರೆ ಅಂಥವರು ಮಾನವೀಯತೆಯಿಂದ ನಡೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ನಮ್ಮ ಯಶಸ್ವೀ ರಾಜನೀತಿಜ್ಞರು, ಅಧಿಕಾರಿಗಳು ಸಾಹಿತ್ಯಪ್ರಿಯರಾಗಿದ್ದರೆಂಬುದನ್ನು ಇತಿಹಾಸ ಬಲ್ಲವರಿಗೆ ಹೇಳಬೇಕಾಗಿಲ್ಲ.

ಕನ್ನಡದ, ಕರ್ನಾಟಕದ ಬೆಳವಣಿಗೆಯೆಂದರೆ ಅದಕ್ಕೆ ಅನೇಕ ಮುಖಗಳಿವೆ. ನಾಡು, ನುಡಿ ಬೆಳೆಸಲು ಬಹುಮುಖೀ ಸಾಧ್ಯತೆಗಳಿವೆ. ಈ ಎಲ್ಲವೂ ಕನ್ನಡ, ಕರ್ನಾಟಕ ಕಟ್ಟುವ ದೀರ್ಘಕಾಲೀನ ಪರಿಣಾಮದ ವಿವಿಧ ಮಾದರಿಗಳು. ದೂರದೃಷ್ಟಿಯ ಚಿಂತನೆ, ಅನುಷ್ಠಾನದ ಸಂಕಲ್ಪಬಲ ಇಂದಿನ ಅಗತ್ಯ.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top