Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಕನ್ನಡದ ಹರಟೆಗಳ ಆಚಾರ್ಯರು- ಪಾ.ವೆಂ.

Thursday, 20.04.2017, 3:00 AM       No Comments

‘ಹೌದು’, ‘ಅಲ್ಲ’ ಎಂದು ಮಾತ್ರ ಉತ್ತರಿಸಬಹುದಾದ ಒಂದು ಪ್ರಶ್ನೆಯನ್ನು ನಿಮಗೆ ಕೇಳುತ್ತಾರೆ. ನೀವು ಎರಡನ್ನೂ ಹೇಳಲಾರಿರಿ. ಆ ಪ್ರಶ್ನೆಯನ್ನು ಉತ್ತರಿಸುವುದೇ ಕಷ್ಟ. ‘ಹೌದು’ ಎಂದರೂ ಕಷ್ಟ, ‘ಅಲ್ಲ’ ಎಂದರೂ ಕಷ್ಟ. ಯಾವುದು ಆ ಪ್ರಶ್ನೆ?-‘ನೀವು ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ್ದೀರಾ?’.

ಹೌದು ಎಂದಿರಾ, ಮೊದಲು ಹೊಡೆಯುತ್ತಿದ್ದೀರಿ ಈಗ ನಿಲ್ಲಿಸಿದ್ದೀರಿ ಎಂದಾಗುತ್ತದೆ. ಇಲ್ಲ ಎಂದಿರಾ, ಈಗಲೂ ಹೊಡೆಯುತ್ತಿದ್ದೀರಿ ಎಂದೇ ಅರ್ಥ. ಸಿಕ್ಕಿಬೀಳಿಸುವ ಪರಿ ನಗು ತರಿಸುವುದಿಲ್ಲವೇ? ಉದ್ದಕ್ಕೂ ಇಂಥ ಕಚಗುಳಿಗಳನ್ನು ಇಡುತ್ತಲೇ ಬುದ್ಧಿವಂತ ಮಿದುಳೊಂದು ತನ್ನ ಪಾಂಡಿತ್ಯ, ಅಧ್ಯಯನಗಳ ಅಗಾಧ ಸಾರಕ್ಕೆ ವಿನೋದದ ರುಚಿ ಸೇರಿಸಿ ಕನ್ನಡಿಗರಿಗೆ ಹರಟೆಗಳ ಹೆಸರಿನಲ್ಲಿ ನೀಡಿ, ಓದುಗರ ಬುದ್ಧಿ ಭಾವಗಳೆರಡಕ್ಕೂ ಚಾಲನೆ ನೀಡಿದ ಹೆಸರು ಪಾಡಿಗಾರು ವೆಂಕಟರಮಣ (ಪಾ.ವೆಂ.) ಆಚಾರ್ ಅಥವಾ ಪಾ.ವೆಂ. ತಾವೇ ಇಟ್ಟುಕೊಂಡ ಹೆಸರು ಲಾಂಗೂಲಾಚಾರ್ಯ.

ಕನ್ನಡ ವಿನೋದ ಸಾಹಿತ್ಯವಾಹಿನಿಗೆ ಹರಟೆಗಳೆಂಬ ಪ್ರಮುಖವಾದ ಒಂದು ಪ್ರಕಾರವನ್ನೇ ಧಾರೆ ಎರೆದು, ಕನ್ನಡ ವಿನೋದ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಲಾಂಗೂಲಾಚಾರ್ಯ ಶೈಲಿ ಇವತ್ತಿಗೂ ಅನನ್ಯ, ಅನುಕರಣೀಯ ಮಾದರಿಯಾಗಿ ನಮ್ಮೆದುರಿಗಿದೆ. ‘ಲಾಂಗೂಲಾಚಾರ್ಯ’ ಎಂಬ ತಮ್ಮ ಅಂಕಿತನಾಮದ ಕುರಿತು ವಿಶ್ಲೇಷಿಸುತ್ತ, ತಾವು ಈ ಬಿರುದನ್ನೇ ಆರಿಸಿಕೊಳ್ಳಲು ಕಾರಣ ‘ಲಾಂಗೂಲವಂತ ಜಾತಿಗಳ ಬಗೆಗೆ ತಮಗಿರುವ ಆದರವೊಂದು ಮತ್ತು ಅವುಗಳೊಡನೆ ಮನುಷ್ಯಜಾತಿ ಪುನಃ ಸಮಾವೇಶ ಹೊಂದಿದರೇನೇ ಅವರ ಉದ್ಧಾರವೆಂಬ ಅಚಲ ವಿಶ್ವಾಸವೊಂದು’ ಎನ್ನುತ್ತಾರೆ.

ಲಾಂಗೂಲಾಚಾರ್ಯರ ಪ್ರಕಾರ- ಲಾಂಗೂಲವಂತ ಬಾಂಧವ್ಯದಲ್ಲಿ ಅತ್ಯಂತ ಆದರಣೀಯರೆಂದರೆ ಒಂದು ಗಾರ್ದಭ ಜಾತಿ, ಇನ್ನೊಂದು ವಾನರ ಜಾತಿ. ಗಾರ್ದಭನು ಮೃಗಜಾತಿಯಲ್ಲೇ ಶ್ರೇಷ್ಠ ತತ್ತ್ವಜ್ಞಾನಿ ಮತ್ತು ಋಷಿ. ಅವನ ರೋಮರೋಮದಲ್ಲಿ ಅನಾಸಕ್ತಿಯೋಗ. ಗಾರ್ದಭನು ಕರ್ಮವನ್ನು ತುಚ್ಛೀಕರಿಸುವುದಿಲ್ಲವಾದರೂ ಅವನು ಮುಖ್ಯವಾಗಿ ಜ್ಞಾನಯೋಗಿ. ಆದರೆ ವಾನರನನ್ನು ಕರ್ಮಯೋಗಿ ಎಂದು ವರ್ಗೀಕರಿಸಬಹುದು. ಅವನು ಕ್ಷಣಕಾಲವೂ ಸುಮ್ಮನೆ ಕುಳಿತಿರಲಾರ. ಸದಾ ಕರ್ಮನಿರತ. ಅವನ ಕುತೂಹಲ ವಿಜ್ಞಾನಿಗಳಂತೆ. ಅವನ ಬುದ್ಧಿ ಪೃಥಕ್ಕರಣಾತ್ಮಕವಾದದ್ದು. ಅವನ ಕೈಯಲ್ಲಿ ಒಂದು ಕನ್ನಡಿ ಹಾಕಿರಿ. ಅದರ ಫ್ರೇಮು ಕಿತ್ತು ಕನ್ನಡಿ ಬೇರ್ಪಡಿಸಿ ಅದರ ಬೆನ್ನಿಗೆ ಹಚ್ಚಿದ ಪಾದರಸಲೇಪವೇ ಅದರ ಪ್ರತಿಬಿಂಬನ ಶಕ್ತಿಯ ಆಧಾರವೆಂದು ಕ್ಷಣಾರ್ಧದಲ್ಲಿ ಕಂಡುಹಿಡಿಯುತ್ತಾನೆ (ಲೋಕದ ಡೊಂಕು, ಪುಟ 206).

ಲಾಂಗೂಲಹೀನ ನರರ ನಡವಳಿಕೆಗಳಲ್ಲಿನ ಬೂಟಾಟಿಕೆಗಳನ್ನೂ, ಹದಗೆಟ್ಟ ಸ್ಥಿತಿಗಳನ್ನೂ ತಮ್ಮದೇ ಆದ ರೀತಿಯಲ್ಲಿ ವಿಡಂಬಿಸುತ್ತ ಸಾಗುತ್ತಾರೆ. ನಮ್ಮ ದೇಶದ ರಾಜಕೀಯ, ಮಂತ್ರಿ-ಮಾನ್ಯರುಗಳ ನಡವಳಿಕೆ ವ್ಯವಹಾರ, ಸಾಮೂಹಿಕ ಸೋಮಾರಿತನ, ಪರಕೀಯರ ಅನುಕರಣೆ, ಮೂಢನಂಬಿಕೆಗಳು, ಮನುಷ್ಯ ಸಂಬಂಧಗಳು, ಹಣದಾಸೆ ಇವೇ ಮೊದಲಾದ ವಿಷಯಗಳನ್ನೆತ್ತಿಕೊಂಡು ಮುಲಾಜಿಲ್ಲದ, ನಿರ್ಭಿಡೆಯ ನಗೆಲೇಖನಗಳನ್ನು ರಚಿಸಿದ್ದಾರೆ. ಅವರ ಹರಟೆಗಳ ವಸ್ತುವೈವಿಧ್ಯವೂ ವಿಸ್ಮಯಕಾರಿಯಾದುದು.

‘ಪರೋಪಕಾರ ಮಾಡುವುದು, ದೇಶಕ್ಕೋಸ್ಕರ ಜೀವ ತೇಯುವುದು ಇವೆಲ್ಲ ಹಳೆಯ ಭಾವನೆಗಳು. ಈ ಕಾಲದಲ್ಲಿ ನಮಗೆ ಪರೋಪಕಾರಕ್ಕೆ ಪುರುಸೊತ್ತಿಲ್ಲ. ಎಲ್ಲವನ್ನೂ ಎಲ್ಲರನ್ನೂ ಉದ್ಧಾರ ಮಾಡುವುದಕ್ಕಾಗಿ ಟೊಂಕಕಟ್ಟಿ ಎದೆತಟ್ಟಿ ನಿಂತಿರುವ ಸರ್ಕಾರಗಳಿರುವಾಗ, ನಾವು ವ್ಯಕ್ತಿಗಳಾಗಿ ಪರೋಪಕಾರ ಮಾಡುವ ಮಬ್ಬಿಗೆ ಬೀಳುವುದರಲ್ಲಿ ಅರ್ಥವಿಲ್ಲ’ (ವಿಪರೀತ, ಪುಟ 29).

‘ಸತ್ಯವನ್ನೂ ರಾಜಕಾರಣವನ್ನೂ ಬೆರೆಸಿ ಕಿಚಡಿ ಮಾಡಲು ನಾನೇನೂ ಗಾಂಧಿಯಲ್ಲ ತಿಳಿಯಿತೆ?’ (ಲೋಕದ ಡೊಂಕು, ಪುಟ 101).

‘ಸಂಭಾವಿತ ಮಂತ್ರಿಯೆಂಬುದು ಯುಟೋಪಿಯನ್ ಕಲ್ಪನೆ’ (ಲೋಕದ ಡೊಂಕು, ಪುಟ 102).

ನೀವು ಇಷ್ಟೇಕೆ ಭಾಷಣ ಮಾಡುತ್ತೀರಿ ಅಂತ ಮಂತ್ರಿಯೋರ್ವರನ್ನು ಒಬ್ಬರು ಕೇಳಿದಾಗ ಅವರು, ‘ಏನಾದರೂ ಮಾಡುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ’ ಎಂದುತ್ತರಿಸುವ ಮಂತ್ರಿಯೋರ್ವನ ದಿನಚರಿಯ ಕೆಲ ವಾಕ್ಯಗಳಿವು-

‘ಇಂದಿನ ಕಾಲದಲ್ಲಿ ಸರ್ವಜ್ಞತ್ವ ಪದವಿಯನ್ನು ಪಡೆಯಲು ಎಲ್ಲಕ್ಕಿಂತ ಶ್ರೇಷ್ಠಸಾಧನ ಎಂದರೆ ಮಂತ್ರಿಪದಕ್ಕೇರುವುದು. ಮಂತ್ರಿಯಾದ ನಿರಕ್ಷರಿಯನ್ನು ವಿಜ್ಞಾನಿಗಳು ತಮ್ಮ ಪರಿಷತ್ತುಗಳನ್ನು ಉದ್ಘಾಟಿಸಲು ಕರೆಯುತ್ತಾರೆ ಮತ್ತು ಪರಮಾಣವನ್ನು ಜನಹಿತಕ್ಕೆ ಹೇಗೆ ಬಳಸಬೇಕೆಂಬ ಬಗ್ಗೆ ಅವನಿಂದ ಉಪದೇಶಾಮೃತ ಸ್ವೀಕರಿಸುತ್ತಾರೆ. ಸಂಸ್ಕೃತ ಪಂಡಿತರು ಅವನನ್ನು ಬರಮಾಡಿಕೊಂಡು ಸಂಸ್ಕೃತದ ಹಿರಿಮೆಯ ಬಗ್ಗೆ ಹೇಳಿಸಿಕೊಳ್ಳುತ್ತಾರೆ…. ಕವಿಗಳು ನಮ್ಮನ್ನು ಸ್ವಾಗತಿಸಿ ಕವಿತ್ವದ ವಿಷಯದಲ್ಲಿ ಸಲಹೆಗಳನ್ನು ಆಲಿಸುತ್ತಾರೆ. ಕಳ್ಳರು ಸಮ್ಮೇಳನಗಳನ್ನು ಮಾಡಿ ನಮ್ಮನ್ನು ಆಮಂತ್ರಿಸಿದ್ದರೆ ಅವರಿಗೂ ನಾವು ಒಂದೆರಡು ಉಪಯುಕ್ತ ಸಲಹೆಗಳನ್ನು ಕೊಡಬಹುದಿತ್ತು…..’ ಹೀಗೆ ಸಾಗುತ್ತದೆ ರಾಜಕಾರಣಿಗಳ ಮೇಲಿನ ‘ಪ್ರಹಾರ’.

ವಿನೋದ ಬರವಣಿಗೆಯ ಮೂಲಜೀವಾಳ ಬುದ್ಧಿವಂತಿಕೆ. ಭಾವನೆಗಳ ಮಹಾಪೂರದಲ್ಲಿ ಮುಳುಗಿದವ ಹಾಸ್ಯಲೇಖನಗಳನ್ನು ಬರೆಯಲಾರ. ಭಾವುಕತೆಯ ಗಡಿಯಾಚೆ ಬುದ್ಧಿಯ ಬೆಳಕಿನಲ್ಲಿ ಲೋಕವಿವರಗಳನ್ನು ವಿಶ್ಲೇಷಿಸಿ ನಗಬಲ್ಲ ವ್ಯಕ್ತಿ ನಿರ್ವಿಕಾರನಾಗಿ ಬದುಕನ್ನೂ ನೋಡಬಲ್ಲ.

ಲಾಂಗೂಲಾಚಾರ್ಯರ ಹರಟೆಗಳ ಇನ್ನೊಂದು ವೈಶಿಷ್ಟ್ಯ ಎಂದರೆ, ಅವರ ಬರಹಗಳಲ್ಲಿ ಹಾಸ್ಯ ಎಲ್ಲೂ ವಾಚ್ಯವಾಗಿ ಗೋಚರಿಸುವುದಿಲ್ಲ. ಅವರ ಲೇಖನ ಪ್ರತಿಪಾದಿತವಾದ ಒಟ್ಟು ಧೋರಣೆಯಲ್ಲೇ ಹಾಸ್ಯ ಅಂತರ್ಗತವಾಗಿರುತ್ತದೆಯೇ ಹೊರತು ಓದುಗರನ್ನು ನಗಿಸುವುದಕ್ಕಾಗಿ ಯಾವುದೋ ರೀತಿಯ ಕಸರತ್ತನ್ನು ಮಾಡುವ ಅಗತ್ಯ ಅವರಿಗಿಲ್ಲ. ತನ್ನಲ್ಲಿನ ಅಪಾರ ಧ್ವನಿಶಕ್ತಿಯಿಂದಾಗಿ ಲಾಂಗೂಲಾಚಾರ್ಯರ ಬರಹಗಳು ನಮ್ಮ ಸಾಮಾನ್ಯ ನಿರೀಕ್ಷೆಯ ನಗೆಬರಹಗಳಿಗಿಂತ ಭಿನ್ನವಾಗಿರುತ್ತವೆ. ಉದಾಹರಣೆಗೆ, ‘ವಿಪರೀತ ಧ್ಯಾನಯೋಗಿಯೊಡನೆ ಒಂದು ಸಂಜೆ’ ಎಂಬ ಲೇಖನದಲ್ಲಿನ ಕ್ಷುರ್ದÅಗಳು. ನಮ್ಮ ಸಾಮಾನ್ಯ ನಿರೀಕ್ಷೆಯ ನಗೆಬರಹಗಳಲ್ಲಿನ ಸ್ವಾಮಿಗಳು ವಿಷಯಾಸಕ್ತರು, ಭೋಗಿಗಳು ಎಂಬಂತೆ ವರ್ಣಿತರಾಗಿರುತ್ತಾರೆ. ಆದರೆ ಈ ಕ್ಷುರ್ದÅಗಳು ಮನಶ್ಶಾಸ್ತ್ರಜ್ಞರಂತೆ ಮಾತಾಡುತ್ತಾರೆ. ಕಾಲದ ಅಗತ್ಯಕ್ಕೆ ತಕ್ಕಂತೆ ಮನುಷ್ಯರ ಮಾನಸಿಕ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ಚಾಣಾಕ್ಷರು ಆ ಕ್ಷುರ್ದÅಗಳು.

ಭಾರತೀಯ ಯೋಗದ ಅಷ್ಟಾಂಗವನ್ನೆಲ್ಲ ಒಂದು ಕಾಲುಗಂಟೆಯ ರಹಸ್ಯ ಮಂತ್ರೋಪದೇಶದಲ್ಲಿ ಅಡಕಮಾಡುವ ಅವರ ‘ವಿಪರೀತ ಧ್ಯಾನಯೋಗ’ದಿಂದ ಸಂಪೂರ್ಣ ಮನಶ್ಶಾಂತಿ ದೊರಕುವ ರೀತಿ ಹೇಗೆ ಗೊತ್ತೆ? ಮನುಷ್ಯ ತಪ್ಪುಕೆಲಸ ಮಾಡಿದ ಬಳಿಕ ಅವನ ಆತ್ಮಸಾಕ್ಷಿ ಅವನ ಬದುಕಿನ ಶಾಂತಿಯನ್ನು ಕದಡುತ್ತದೆಯಷ್ಟೆ? ಈ ಆತ್ಮವನ್ನು ಮನಸ್ಸಿಗೆ ಜೋಡಿಸುವ ಒಂದು ನಾಡಿಯಿದೆಯೆಂದು ಕ್ಷುರ್ದÅಗಳು ಕಂಡುಹಿಡಿದು ಅದಕ್ಕೆ ವಿಷಮ್ನಾನಾಡಿಯೆಂದು ಹೆಸರಿಟ್ಟಿದ್ದಾರೆ. ಆ ನಾಡಿಯನ್ನು ಅವರ ವಿಪರೀತ ಧ್ಯಾನಯೋಗ ಕತ್ತರಿಸಿಹಾಕುತ್ತದೆ. ಆಗ ಆತ್ಮಸಾಕ್ಷಿ ನಿಮ್ಮ ಮನಸ್ಸನ್ನು ಗುಂಡುಸೂಜಿಯಿಂದ ಚುಚ್ಚುವುದು ನಿಂತುಹೋಗುತ್ತದೆ.

ಲಾಂಗೂಲಾಚಾರ್ಯರ ಹರಟೆಗಳಲ್ಲಿ ವಿಶಿಷ್ಟವಾದ ಇನ್ನೊಂದು ಅಂಶ ಅವರು ಕೊಡುವ ಹೋಲಿಕೆಗಳಲ್ಲಿರುವ ಸ್ವಾರಸ್ಯ. ಉದಾಹರಣೆಗೆ ಅವರು ನೇಟಿವ್ ವೈದ್ಯರು ಮತ್ತು ಅಲೋಪತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸುವ ಬಗೆ- ನೇಟಿವ್ ವೈದ್ಯರು ಎಂದು ತಿರಸ್ಕಾರಪೂರಿತ ಅಭಿಮಾನದಿಂದ ಕರೆಯಲ್ಪಡುವ ದೇಸೀ ಚಿಕಿತ್ಸಕರಿಗಿಂತ ಅಲೋಪತಿ ಡಾಕ್ಟರು ಹೆಚ್ಚು ಜನಪ್ರಿಯರಾಗಲು ಅವರು ರೋಗಿಯ ಚಟಗಳ ಬಗ್ಗೆ ಉದಾರಬುದ್ಧಿ ತೋರುವುದೇ ಮುಖ್ಯಕಾರಣ.

ನೇಟಿವ್ ವೈದ್ಯರು ಹಿಂದೂ ದೇವರಂತೆ ತುಂಬಾ ಬಿಗಿ. ಉಪ್ಪನ್ನು ಕಿರುಬೆರಳಲ್ಲಿ ಮುಟ್ಟಬಾರದ ಪಥ್ಯ, ಮೆಣಸಿನಕಾಯನ್ನು ಕಣ್ಣಲ್ಲಿ ನೋಡಬಾರದ ಪಥ್ಯ, ನಿಮ್ಮ ಪ್ರೀತಿಯ ಚಹಾವನ್ನೋ ಕಾಫಿಯನ್ನೋ ಒಯ್ದ ದಾರಿಯಲ್ಲಿ ಕೂಡ ನಲವತ್ತೆಂಟು ತಾಸು ಕಾಲ ನಡೆಯಕೂಡದೆಂಬ ಪಥ್ಯ… ಹೀಗೆ ನೇಟಿವ್ ವೈದ್ಯರ ಚಿಕಿತ್ಸೆಯಲ್ಲಿ ನೀವು ಕಟ್ಟಿಕೊಂಡ ರೋಗದ ಋಣವನ್ನೂ ಪಥ್ಯ ಮಾಡಿಯೇ ತೀರಿಸಬೇಕಾಗುವುದು.

ಅದೇ ಅಲೋಪತಿ ವೈದ್ಯರ ಮೊರೆಹೊಕ್ಕಿರಿ. ಅಲೋಪಥಿಕನಾದರೋ ಅವನ ಫೀಯೊಂದನ್ನು ನೀವು ಸಲೀಸಾಗಿ ಸಲ್ಲಿಸುತ್ತಿದ್ದರೆ ನಿಮ್ಮಿಂದ ಪಥ್ಯರೂಪದ ಪ್ರಾಯಶ್ಚಿತ್ತವನ್ನು ಅಪೇಕ್ಷಿಸುವುದಿಲ್ಲ. ನಿಮಗೆ ಕಾಫಿ ಪ್ರಿಯವಾಗಿದ್ದರೆ ಅದೇ ನಿಮಗೆ ಪಥ್ಯವೆಂದು ಅವನು ಮಂಜೂರುಮಾಡುತ್ತಾನೆ. ಅಭ್ಯಾಸ ಬಿದ್ದಿದ್ದನ್ನು ಒಂದೇ ಹೊಡೆತಕ್ಕೆ ಪರಿತ್ಯಾಗ ಮಾಡುವುದು ಒಳ್ಳೇದಲ್ಲವೆಂದು ಕೂಡ ನಿಮಗೆ ಮನೋಹರವಾದ ಹಿತವಚನವನ್ನೇ ಹೇಳುತ್ತಾನೆ. ಅವನು ನಿಮಗೆ ನಿದ್ದೆ ಬಾರದಿದ್ದರೆ ನಿದ್ರೆಯ ಗುಳಿಗೆಗಳನ್ನು ಕೊಡುತ್ತಾನೆ (ಲೋಕದ ಡೊಂಕು: ಸಿಗರೇಟಿನ ಹೊಗೆ).

ಇದು ಲಾಂಗೂಲ ಲಹರಿಯ ಒಂದು ಮಾದರಿ. ಲೋಕದ ಡೊಂಕನ್ನು ವಿಡಂಬಿಸುವ ಇವರ ಲೇಖನಿಗೆ ತನ್ನನ್ನೇ ತಾನು ನೋಡಿ ನಗುವ ಉದಾತ್ತ ವಿನೋದದ ಶೈಲಿಯೂ ಪ್ರಿಯವಾದುದು. ಇದನ್ನು ನನ್ನ ‘ಅಸ್ತಮಾ ಷಷ್ಟ್ಯ್ದ, ‘ನಾನು ಯಾರು?’, ‘ಸತ್ಯ, ನಾನು ಮತ್ತು ಹರಿಶ್ಚಂದ್ರ’ ಮೊದಲಾದ ಲೇಖನಗಳಲ್ಲಿ ಕಾಣಬಹುದು. ಪವಾಡಗಳನ್ನು ದೆವ್ವಗಳನ್ನು ಅವುಗಳ ಕುರಿತಾದ ಮೌಢ್ಯದ ಕತೆಗಳನ್ನು ಸೊಗಸಾಗಿ ವಿಡಂಬಿಸುವ ಲಾಂಗೂಲಾಚಾರ್ಯ ದೇವದೇವತಾ ಸ್ವಭಾವಗಳನ್ನು ಉಪದ್ವ್ಯಾಪಗಳನ್ನೂ ಬಿಟ್ಟಿಲ್ಲ. ದೇವತೆಗಳು ನಮ್ಮ ನಿಮ್ಮ ಹಾಗೆಯೇ ಪ್ರೀತಿ-ವಿಶ್ವಾಸ, ಕೋಪ-ತಾಪ, ಮರೆ-ಮೋಸ, ಚಟ-ಅಭ್ಯಾಸ ಎಲ್ಲದರಲ್ಲಿ ನಮಗಿಂತ ತುಂಬ ಹಿಗ್ಗಿಸಿದ ಆವೃತ್ತಿಗಳು ಎನ್ನುತ್ತಾರೆ. ಇಂದ್ರನ ಚಟಗಳನ್ನು ನಮ್ಮ ರಾಜಕೀಯ ಮುಖಂಡರ ಚಟಗಳೊಂದಿಗೆ ಸಮೀಕರಿಸುತ್ತಾರೆ. ಗಣಪತಿ ಬುದ್ಧಿವಂತನಾದ್ದರಿಂದಲೇ ಅವನು ಮದುವೆ ಮಾಡಿಕೊಳ್ಳಲಿಲ್ಲ. ಆದರೆ ಅವನಿಗೆ ತಿಂಡಿಯ ಚಟ. ಇನ್ನು ಸೂಪರ್ ದೇವತೆಗಳಾದ ವಿಷ್ಣು, ಶಿವ ಮೊದಲಾದವರಿಗೆ ಭಕ್ತಿಯ ಚಟ. ಭಕ್ತಿ ಎಂದರೆ ನಿಮ್ಮ ಎಲ್ಲವನ್ನೂ ಅರ್ಪಿಸಬೇಕು, ಎರಡನೇ ವಿಚಾರವೇ ಇರಬಾರದು. ಇವರಿಗೆ ಪೂಜೆ ಮಾಡುವಾಗ ಆ ಕಡೆ ಬೆಕ್ಕು ಹಾಲು ಕುಡಿಯುತ್ತಾ ಇದೆ ಅಂತ ಆಲೋಚನೆ ಬಂತೋ, ಮುಗಿದುಹೋಯಿತು… ನಿಮ್ಮ ಭಕ್ತಿ ವ್ಯರ್ಥ, ಫಲಶೂನ್ಯ….. ಎನ್ನುವ ಲಾಂಗೂಲಾಚಾರ್ಯರು ದೇವತೆಗಳ ಕೌಟುಂಬಿಕ ಕಲಹಗಳು, ದೇವತೆಗಳ ಪ್ರತಿಷ್ಠೆಗಾಗಿ ನಡೆಯುವ ಕಿತಾಪತಿಗಳು ಒಂದನ್ನೂ ಬಿಟ್ಟಿಲ್ಲ. ಅಂತೆಯೇ ‘ಮದುವೆಯಾದರೂ ಸುಖಪಡುವುದು ಹೇಗೆ?’, ‘ಮಾದರಿ ಮಡದಿ ಬೇಕೆ?’, ‘ನೀವು ಹೆಂಡತಿಗೆ ಹೊಡೆಯುವುದನ್ನು ಬಿಟ್ಟಿದ್ದೀರಾ?’ ಎಂಬ ಆಕರ್ಷಕ ತಲೆಬರೆಹದ ಹರಟೆಗಳು ನಮ್ಮ ಸಪ್ಪೆ ಸಾಂಸಾರಿಕ ಜೀವನಕ್ಕೆ ಲವಲವಿಕೆಯ ಸ್ಪರ್ಶ ನೀಡಬಲ್ಲವು.

ಪಾ.ವೆಂ.ರ ಕನ್ನಡದ ಹರಟೆಗಳನ್ನು ಓದಿಯೇ ಸವಿಯಬೇಕು.

Leave a Reply

Your email address will not be published. Required fields are marked *

Back To Top