Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಕಣಜದಲ್ಲಿ ಕಾಳೆಷ್ಟು ಜೊಳ್ಳೆಷ್ಟು?

Saturday, 13.05.2017, 3:00 AM       No Comments

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 4 ವರ್ಷಗಳೇ ಸಂದಿವೆ. ಹೀಗಾಗಿ ಪಕ್ಷದ ಅಂಗಳದಲ್ಲಿ ಸಹಜ-ಸಂಭ್ರಮವಿದ್ದಿರಲಿಕ್ಕೂ ಸಾಕು. ಆದರೆ ಶ್ರೀಸಾಮಾನ್ಯರಲ್ಲೂ ಇದೇ ಚಿತ್ತಸ್ಥಿತಿ ಇದೆಯೇ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ, ಸರ್ಕಾರದ ಸಾಧನಾ ಕಣಜದಲ್ಲಿರಬಹುದಾದ ಕಾಳು-ಜೊಳ್ಳನ್ನು ಹೆಕ್ಕಲು, ಭರವಸೆ-ಅನುಷ್ಠಾನದ ನಡುವಿನ ಅಂತರವನ್ನು ಅಳೆಯಲು ಇದು ಸಕಾಲ. ‘ಅನ್ನಭಾಗ್ಯ’ದಂಥ ಜನಪ್ರಿಯ ಯೋಜನೆಯ ಘೊಷಣೆಯೊಂದಿಗೆ ಕಾರ್ಯಾರಂಭಿಸಿದ ಈ ಸರ್ಕಾರ, ಇಂಥ ಮತ್ತಷ್ಟು ಯೋಜನೆಗಳನ್ನು ಘೊಷಿಸಿತು. ಹೀಗಾಗಿ, ದೂರಗಾಮಿ ಚಿಂತನೆಯ ಯೋಜನೆಗಳು ವಿರಳವಾಗಿದ್ದವು ಎಂಬುದು ಒಪ್ಪಿತಸತ್ಯ. ಮುಖ್ಯಮಂತ್ರಿಗಳು ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದರೂ, ಭವಿಷ್ಯದ ಕರ್ನಾಟಕದ ಬಗ್ಗೆ ಒಂದು ದೊಡ್ಡ ಚಿತ್ರವನ್ನು ಜನರೆದುರು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದನ್ನು ಒಪ್ಪಲೇಬೇಕು. ನೋಡು ನೋಡುತ್ತಿದಂತೆಯೇ 4 ವರ್ಷಗಳು ಸಂದಿವೆ; ಮಿಕ್ಕಿರುವುದು ಒಂದೇ ವರ್ಷ. ದೀರ್ಘಾವಧಿಯಲ್ಲಿ ಕೈಗೂಡದ್ದು ಅಲ್ಪಾವಧಿಯಲ್ಲಿ ಕೈಗೆಟುಕಿಬಿಡುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನವಾದೀತು. ಕಾರಣ, ‘ಅಧಿಕಾರ ಇನ್ನೊಂದೇ ವರ್ಷ’ ಎಂಬ ಕಟುವಾಸ್ತವ, ಬೇರೆಯೇ ತೆರನಾದ ಲೆಕ್ಕಾಚಾರಗಳಿಗೆ ಆಳುಗರನ್ನು ಅಣಿಮಾಡಿಬಿಡುತ್ತದೆ. ಇಂಥ ಸಂದರ್ಭದಲ್ಲಿ ‘ಜನಕಲ್ಯಾಣ’ ಯೋಜನೆಗಳಿಗಿಂತ, ಮುಂದಿನ ‘ಜನಾದೇಶ’ದ ಕಡೆಗೇ ಗಮನಹರಿಸುವ, ಈ ನಿಟ್ಟಿನಲ್ಲಿ ತಂತ್ರ-ಪ್ರತಿತಂತ್ರಗಳನ್ನು ರೂಪಿಸುವ ಚಿತ್ತಸ್ಥಿತಿ ಅವರಲ್ಲಿ ರೂಪುಗೊಂಡುಬಿಡುತ್ತದೆ ಎಂಬುದು ದಿಟ. ಇಷ್ಟಾಗಿಯೂ, ಇದುವರೆಗೂ ನೆರವೇರದ್ದು ‘ಕ್ಲೈಮ್ಯಾಕ್ಸ್’ನಲ್ಲಿ ಸಾಕಾರವಾಗಿಬಿಟ್ಟರೆ…. ಎಂಬ ಪುಟ್ಟ ಆಸೆ ಹೊಮ್ಮುವುದು ಸಹಜ. ವರ್ಷಪೂರ್ತಿ ಓದದ ವಿದ್ಯಾರ್ಥಿ ಪರೀಕ್ಷೆಯ ಹಿಂದಿನ ದಿನ ಪಟ್ಟುಹಿಡಿದು ಓದಿ ಯಶಸ್ವಿಯಾಗುವಂತೆ, ಅಲ್ಪಾವಧಿಯಲ್ಲಾದರೂ ರಚನಾತ್ಮಕ ಕೆಲಸ ಮಾಡುವ ಛಲ ಈ ಸರ್ಕಾರದಿಂದ ಹೊಮ್ಮುವುದೇ ಎಂಬುದು ಶ್ರೀಸಾಮಾನ್ಯರಲ್ಲಿ ಕೆನೆಗಟ್ಟಿರುವ ನಿರೀಕ್ಷೆ.

ಗದ್ದುಗೆ ಅಪ್ಪಿದ ದಿನದಿಂದಲೇ ಆಳುಗರಲ್ಲಿ ಇಂಥ ಛಲ ಸ್ಪುರಿಸಬೇಕು. ಆದರೆ ಆರೋಪ-ಪ್ರತ್ಯಾರೋಪ, ವಿಳಂಬನೀತಿ, ನಿರ್ಲಕ್ಷ್ಯಳಲ್ಲೇ ದಿನದೂಡಿದವರಿಗೆ ಕಾಲ ಸರಿದದ್ದೇ ಗೊತ್ತಾಗುವುದಿಲ್ಲ. ಅರಿವಾಗುವ ಹೊತ್ತಿಗೆ, ಆಡಳಿತವಿರೋಧಿ ಅಲೆ ಪ್ರಬಲವಾಗಿರುತ್ತದೆ. ಈ ಮಾತಿಗೆ ಪುಷ್ಟಿನೀಡುವ ನಿದರ್ಶನಗಳು ದೇಶದ ರಾಜಕೀಯ ಇತಿಹಾಸದಲ್ಲಿ ಸಾಕಷ್ಟಿದ್ದರೂ, ಅಧಿಕಾರಸ್ಥರು ಅವುಗಳಿಂದ ಪಾಠ ಕಲಿಯದೆ ‘ಕೊನೇಕ್ಷಣದ ಪವಾಡ’ವನ್ನೇ ನೆಚ್ಚುವುದು ವಿಷಾದನೀಯ. ಆಳುಗರ ನಡೆ-ನುಡಿ, ಧೋರಣೆಗಳು ಬದಲಾಗದಿದ್ದಲ್ಲಿ, ಅದನ್ನು ಬದಲಿಸುವ ಶಕ್ತಿ ಮತದಾರರ ಕೈನಲ್ಲಿದೆ ಎಂಬುದನ್ನು ತಥಾಕಥಿತ ಜನನಾಯಕರು ಮರೆಯದಿರಲಿ.

Leave a Reply

Your email address will not be published. Required fields are marked *

Back To Top