Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಒಗ್ಗಟ್ಟಿನ ಯತ್ನದ ಅಗತ್ಯವಿದೆ

Wednesday, 11.10.2017, 3:00 AM       No Comments

ಮೈಸೂರಿನ ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’ (ಕೆಎಸ್​ಒಯು) ಮಾನ್ಯತೆ ಕಳೆದುಕೊಂಡಾಗಿನಿಂದ ಅದರ ಮುಂದುವರಿಕೆಯ ಸಾಧ್ಯಾಸಾಧ್ಯತೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಕುರಿತಾದ ಚರ್ಚೆಗಳು ನಡೆಯುತ್ತಲೇ ಇವೆ. ಮುಕ್ತ ವಿವಿಯನ್ನು ಉಳಿಸಿ ಎಂಬ ಒತ್ತಾಯದೊಂದಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈಗಾಗಲೇ ‘ಬೆಂಗಳೂರು ಚಲೋ’ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಶುಕ್ರವಾರದಂದು (ಅ. 13) ಬೆಂಗಳೂರಿನಲ್ಲಿ ಅದು ಸಮಾವೇಶಗೊಳ್ಳಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಈ ಸಂದರ್ಭದಲ್ಲಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಲಿದ್ದಾರೆ ಎಂಬುದೇನೋ ಸರಿಯೇ. ಆದರೆ ಇಷ್ಟು ಮಾತ್ರದಿಂದಲೇ ಕೆಎಸ್​ಒಯು ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಬಲ್ಲವರ ಅಭಿಪ್ರಾಯ.

ಮುಕ್ತ ವಿವಿಯಲ್ಲಿ ತಾಂಡವವಾಡುತ್ತಿದ್ದ ಸ್ವಜನ ಪಕ್ಷಪಾತ, ದುರಾಡಳಿತ, ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು ಇತ್ಯಾದಿ ಕಾರಣದಿಂದಾಗಿ 2013-14ರ ವರ್ಷದಿಂದಲೇ ಅದು ಮಾನ್ಯತೆಗೆ ಸಂಚಕಾರ ತಂದುಕೊಂಡಿದ್ದು ಈಗಾಗಲೇ ಜಗಜ್ಜಾಹೀರು. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ವಿವಿಗೆ ಮಾನ್ಯತೆ ದಕ್ಕಿಸಿಕೊಡಲು ಸಂಬಂಧಪಟ್ಟವರಿಗೆ ಈವರೆಗೆ ಸಾಧ್ಯವಾಗದ ಕಾರಣ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ನಿಂತಿವೆ. ಆದ್ದರಿಂದ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವುದರ ಜತೆಜತೆಗೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಬರಡಾಗದಂತಿರುವುದನ್ನು ತಪ್ಪಿಸಲು ವಿವಿಗೆ ಮಾನ್ಯತೆಯನ್ನು ಮರಳಿ ದಕ್ಕಿಸಿಕೊಡುವ ವಿಷಯದಲ್ಲೂ ಆಳುಗರು ಯತ್ನಿಸಬೇಕಿದೆ.

ಒಂದೊಮ್ಮೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ವಿವಿಗೆ ಯುಜಿಸಿಯಿಂದ ಮಾನ್ಯತೆ ದಕ್ಕದೆ ಹೋದಲ್ಲಿ ಮುಂದಿನ ನಡೆ ಏನಾಗಬೇಕು ಎಂಬುದರ ಕುರಿತು ರ್ಚಚಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂಬುದೇನೋ ಸರಿ. ಆದರೆ ವಿವಿಗೆ ಮರುಮಾನ್ಯತೆ ದಕ್ಕಿಸಿಕೊಡುವ ವಿಷಯದಲ್ಲಿ ಬದ್ಧತೆ ತೋರುವ ಬದಲು, ಎದುರಾಳಿ ಪಕ್ಷಗಳ ಜನನಾಯಕರು ಒಬ್ಬರ ಮೇಲೊಬ್ಬರು ಆರೋಪದ ಕೆಸರೆರಚುವ ಇಲ್ಲವೇ ಈ ಚರ್ಚಾವಿಷಯವನ್ನು ರಾಜಕೀಯ ಹಗ್ಗಜಗ್ಗಾಟಕ್ಕೆ ಬಳಸಿಕೊಳ್ಳುವ ಯತ್ನದಲ್ಲಿ ತೊಡಗಿರುವುದು ಅಥವಾ ಅವರಿಂದ ಏಕನಿಷ್ಠ ಮತ್ತು ಪ್ರಾಮಾಣಿಕ ಯತ್ನಗಳಾಗದಿರುವುದು ವಿಷಾದನೀಯ. ಈ ಚರ್ಚಾವಿಷಯದ ಹಿಂದೆ ಕೆಎಸ್​ಒಯುನಂಥ ಶೈಕ್ಷಣಿಕ ವ್ಯವಸ್ಥೆಯ ಪ್ರತಿಷ್ಠೆ ಮತ್ತು ವಿದ್ಯಾರ್ಥಿವೃಂದದ ಹಿತದೃಷ್ಟಿಯೂ ಅಡಗಿರುವುದರಿಂದ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾನ್ಯತೆಯ ಮರುಗಳಿಕೆಗೆ ಸಂಬಂಧಪಟ್ಟವರು ಯತ್ನಿಸಬೇಕಿದೆ.

ಈ ನಿಟ್ಟಿನಲ್ಲಿ ಎಬಿವಿಪಿಯಂಥ ವಿದ್ಯಾರ್ಥಿ ಸಂಘಟನೆಗಳಾಗಲೀ ಅಥವಾ ಇನ್ನಾವುದೇ ಸಂಘ-ಸಂಸ್ಥೆಗಳಾಗಲೀ, ಸಾರ್ವಜನಿಕರಾಗಲೀ ಮಾಡುವ ಹೋರಾಟಗಳಿಗೆ ಅವುಗಳದ್ದೇ ಆದ ತೂಕವಿರುವುದು ನಿಜ. ಆದರೆ, ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸದ ಹೊರತು ಇದು ಕೈಗೂಡುವ ಕಾರ್ಯಭಾರವಲ್ಲ ಎಂಬುದೂ ಅಷ್ಟೇ ನಿಜ. ಈ ವಿಷಯದಲ್ಲಿ ಕೇಂದ್ರ ಸರ್ಕಾರವೂ ಜಿಗುಟುತನವನ್ನು ಬಿಡಬೇಕು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೂ ಸಹಕಾರ ಹಸ್ತವನ್ನು ನೀಡಬೇಕು ಮತ್ತು ರಾಜ್ಯ ಸರ್ಕಾರದ ವತಿಯಿಂದಲೂ ಪೂರಕ ಯತ್ನಗಳಾಗಬೇಕು. ಅಕ್ರಮ-ಅಪಸವ್ಯಗಳು ಜರುಗಿವೆಯೆಂದ ಮಾತ್ರಕ್ಕೆ ವಿವಿಯನ್ನೇ ಮುಚ್ಚುವ ನಿರ್ಧಾರಕ್ಕೆ ಜೋತುಬಿದ್ದರೆ, ಅದು ಪಲಾಯನವಾದ ಎನಿಸಿಕೊಳ್ಳುತ್ತದೆಯೇ ವಿನಾ ಸಮಸ್ಯೆಗೆ ಪರಿಹಾರೋಪಾಯವಾಗದು. ಒಂದೊಮ್ಮೆ ಹೀಗೆ ಹಳೆ ವಿವಿಯನ್ನು ಮುಚ್ಚಿ ಹೊಸತನ್ನು ತೆರೆದರೂ ಅಕ್ರಮಗಳ ಮರುಕಳಿಕೆಯಾಗದು ಎಂಬುದಕ್ಕೆ ಏನು ಖಾತರಿ? ಅವ್ಯವಸ್ಥೆಗೆ ಚುಚ್ಚುಮದ್ದು ನೀಡಿ ವ್ಯವಸ್ಥಿತವಾಗಿಸುವ ದಕ್ಷ ಮತ್ತು ಚಿಕಿತ್ಸಕ ನಡೆಯ ಅಗತ್ಯವೀಗ ಹೆಚ್ಚಾಗಿದೆ. ಆದ್ದರಿಂದ ಆಳುಗರು ಈ ವಿಷಯದಲ್ಲಿ ವಿವೇಚನಾತ್ಮಕ ಹೆಜ್ಜೆ ಇರಿಸಲು ಇದು ಸಕಾಲ.

Leave a Reply

Your email address will not be published. Required fields are marked *

Back To Top