Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಒಕ್ಕೂಟಪ್ರಜ್ಞೆಯಲ್ಲಿ ಒಡಕಾಗದಿರಲಿ, ಸಾಮರಸ್ಯಕ್ಕೆ ತೊಡಕಾಗದಿರಲಿ

Thursday, 27.07.2017, 3:00 AM       No Comments

ನ್ನದೇ ಆದ ಚಿಹ್ನೆಗಳಿಗೆ ಮಾನ್ಯತೆ ನೀಡಿ ಬಳಸಲು ರಾಜ್ಯವೊಂದಕ್ಕೆ ಅಧಿಕಾರವಿದೆ. ಮೇಲಾಗಿ, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಿರುವುದರಿಂದ, ಅವು ಕೂಡ ತಂತಮ್ಮ ಧ್ವಜಗಳನ್ನು ಹಾರಿಸಬಹುದು. ಆದರೆ, ಅಸ್ಮಿತೆಯ ಒಂದು ಸಂಕೇತವಾಗಿರುವ ಇಂಥ ಯಾವುದೇ ಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸುವಂತಿಲ್ಲ; ಕಾರಣ, ರಾಷ್ಟ್ರಧ್ವಜವು ಜನರ ಸಾಮೂಹಿಕ ಇಚ್ಛಾಶಕ್ತಿಯ ಪ್ರತೀಕ.

 

‘ಒಕ್ಕೂಟ ವ್ಯವಸ್ಥೆಯ ಪ್ರತಿಪಾದನೆಯೆಂಬುದೀಗ ಕೇಂದ್ರ-ರಾಜ್ಯಗಳ ನಡುವಿನ ಸಂಬಂಧದ ದೋಷಯುಕ್ತ ಹಳಹಳಿಕೆಯಾಗಿಲ್ಲ, ಬದಲಿಗೆ ‘ಟೀಮ್ ಇಂಡಿಯಾ’ ಎಂಬ ಸಾಂಘಿಕ ಪರಿಕಲ್ಪನೆಯಂಥ ಹೊಸ ಸಹಭಾಗಿತ್ವದ ಒಂದು ವ್ಯಾಖ್ಯಾನವೇ ಆಗಿಬಿಟ್ಟಿದೆ. ದೇಶದ ನಾಗರಿಕರೀಗೆ ಬೇಕಿರುವುದು ಭರವಸೆಯ ವಿಶ್ವಾಸದ ಸಮಾಧಾನವೇ ವಿನಾ, ಸಂಬಂಧಿತ ಸಾಕ್ಷ್ಯಾಧಾರ ಮತ್ತು ಪ್ರಕ್ರಿಯೆಯ ಹೊರೆಯಲ್ಲ’- ನರೇಂದ್ರ ಮೋದಿ, ಪ್ರಧಾನ ಮಂತ್ರಿ.

ತನ್ನದೇ ಆದ ಬಾವುಟವೊಂದನ್ನು ಹೊಂದುವ ಮತ್ತು ಹಾರಿಸುವ ಕರ್ನಾಟಕದ ಆಶಯದ ಕುರಿತಾದ ಚರ್ಚೆಗೆ ಕಳೆದ ಕೆಲ ವಾರಗಳಿಂದೀಚೆಗೆ ವೇಗ ದಕ್ಕಿದೆಯೆನ್ನಬೇಕು. ಒಕ್ಕೂಟ ವ್ಯವಸ್ಥೆಯ ಪ್ರತಿಪಾದನೆಯ ದೃಷ್ಟಿಕೋನದಿಂದ ಇದನ್ನೀಗ ಅವಲೋಕಿಸೋಣ. ಭಾರತೀಯ ಸಂವಿಧಾನದಡಿಯಲ್ಲಿನ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯು ನಿಸ್ಸಂದೇಹವಾಗಿ ರಾಜ್ಯಗಳ ಗಡಿ ಗುರುತಿಸುವಿಕೆ ಅಥವಾ ವಿಂಗಡಣೆಗೆ ಮತ್ತು ತತ್ಪಲವಾಗಿ ಇಂಥ ರಾಜ್ಯಗಳ ಸುಸ್ಪಷ್ಟ ಅಸ್ಮಿತೆಗೆ ಅನುವು ಮಾಡಿಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೇಂದ್ರ ಮತ್ತು ರಾಜ್ಯಗಳ ಸಂಬಂಧಪಟ್ಟ ಕಾರ್ಯಕ್ಷೇತ್ರಗಳು ಹಾಗೂ ಅಧಿಕಾರಗಳನ್ನೂ ನಮ್ಮ ಸಂವಿಧಾನ ನಿರಪೇಕ್ಷವಾಗಿ ನಿರೂಪಿಸುತ್ತದೆ. ಉದಾಹರಣೆಗೆ, ಕೇಂದ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ನಡುವಿನ ಅಧಿಕಾರಗಳ ಪ್ರತ್ಯೇಕತೆಯನ್ನು ಪ್ರತಿಬಿಂಬಿಸುವಿಕೆ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನಾತ್ಮಕ ವಿಚಾರಣಾಧಿಕಾರದ ಎಲ್ಲೆಯನ್ನು ಗುರುತಿಸುವಿಕೆ ಇವು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಅಂಶಗಳೇ.

ವಾಸ್ತವವಾಗಿ, ಆಯಾ ರಾಜ್ಯಗಳಿಗೆ, ಅಷ್ಟೇಕೆ ಕೇಂದ್ರಕ್ಕೆ ಸಂಬಂಧಿಸಿದಂತಿರುವ ಇಂಥ ಮಾನ್ಯತೆ, ಗುರುತಿಸುವಿಕೆ ಮತ್ತು ನಿಶ್ಚಿತ ಅಧಿಕಾರ ನೀಡುವಿಕೆಯು, ವೈವಿಧ್ಯದಿಂದ ಕೂಡಿದ್ದರೂ ಅಖಂಡವಾಗಿರುವ ‘ಭಾರತ’ ಎಂಬ ವಸ್ತ್ರವನ್ನು ಹೆಣೆಯುವ ಸಂವಿಧಾನಾತ್ಮಕ ಮತ್ತು ಸಾಮಾಜಿಕ ನೂಲೆಳೆಗಳನ್ನು ಕಾಪಿಟ್ಟುಕೊಳ್ಳುವುದಕ್ಕೆ ಅತ್ಯವಶ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವ್ಯಾಪಕ ಭೌಗೋಳಿಕ ಹರಹುಗಳು, ಜನಾಂಗೀಯ ಅಥವಾ ಸಾಂಸ್ಕೃತಿಕ ವೈವಿಧ್ಯ, ಧಾರ್ವಿುಕ ಬಹುತ್ವ ಸಿದ್ಧಾಂತ, ಅಧಿಕವಿರುವ ಗ್ರಾಮೀಣರು ಮತ್ತು ಅಮುಖ್ಯವೆನ್ನಲಾಗದ ಅಲ್ಪಸಂಖ್ಯಾತ ನಗರವಾಸಿಗಳನ್ನು ಹುದುಗಿಸಿಕೊಂಡಿರುವ ಬಹುಭಾಷೀಯ ಭಾರತೀಯ ಸಮಾಜವು, ಭಾರತ ಎಂಬ ಒಂದು ಒಕ್ಕೂಟ ಸ್ವರೂಪವನ್ನು, ಅಂದರೆ ರಾಜ್ಯಗಳ ಒಕ್ಕೂಟವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯವಾದ ‘ಹಸ್ತಪ್ರತಿ’ಯೊಂದನ್ನು ನಮ್ಮ ಸಂವಿಧಾನಕ್ಕೆ ಒದಗಿಸುತ್ತದೆ ಎನ್ನಲಡ್ಡಿಯಿಲ್ಲ.

ಅದೇ ವೇಳೆಗೆ, ಒಂದು ಪರಿಪೂರ್ಣ ಅಥವಾ ಸರ್ವತಂತ್ರ ಸ್ವತಂತ್ರ ಒಕ್ಕೂಟವಾಗಿ ಭಾರತದ ಸ್ಥಾಪನೆಯಾಗಿಲ್ಲ ಎಂಬುದನ್ನೂ ನಾವು ಮರೆಯುವಂತಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದಂಥ ಒಂದು ಪರಿಪೂರ್ಣ ಒಕ್ಕೂಟ ವ್ಯವಸ್ಥೆಗೆ (ಆಯಾಯ ಸಂಸ್ಥಾನದ ಪೌರತ್ವದ ಜತೆಜತೆಗೆ, ಒಟ್ಟಾರೆಯಾಗಿ ಅಮೆರಿಕದ ಪೌರತ್ವ ಹೊಂದುವಂಥ ದ್ವಿ-ಪೌರತ್ವದಂಥ ಪರಿಕಲ್ಪನೆಗಳು ಇಲ್ಲಿ ಚಾಲ್ತಿಯಲ್ಲಿದ್ದು, ಮಹತ್ತರ ಪ್ರಾಮುಖ್ಯವನ್ನು ಹೊಂದಿವೆ) ತದ್ವಿರುದ್ಧವಾಗಿ ಭಾರತ ಒಕ್ಕೂಟವು ರಾಜ್ಯಗಳೆಂದು ಕರೆಯಲಾಗುವ ‘ವಿನಾಶ್ಯ’ ಘಟಕಗಳನ್ನು ಒಳಗೊಂಡಿರುವ ಒಂದು ‘ಅವಿನಾಶಿ’ ಘಟಕವಾಗಿದೆ. ಇಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ವೈಲಕ್ಷಣ್ಯವೆಂದರೆ, ಘಟಕವಾಗಿರುವ ಬಹುಸಂಸ್ಥಾನ/ರಾಜ್ಯಗಳು ‘ಒಗ್ಗೂಡುವುದರ’ ಫಲಿತವೇ ಒಂದು ನಿಜಾರ್ಥದ ಒಕ್ಕೂಟವಾಗಿರುತ್ತದೆ; ಅಮೆರಿಕ ಸಂಯುಕ್ತ ಸಂಸ್ಥಾನಗಳು ಇದಕ್ಕೊಂದು ಉದಾಹರಣೆ. ಆದರೆ, ಭಾರತದಂಥ ಭಾಗಶಃ-ಒಕ್ಕೂಟವು, ‘ರಾಜ್ಯಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ’ ಒಂದು ರಾಷ್ಟ್ರವಾಗಿದೆ.

ಇಂಥ ವೈಲಕ್ಷಣ್ಯಗಳು, ಭಾರತ ಒಕ್ಕೂಟದ ವಿಶಿಷ್ಟ ಸ್ವರೂಪವನ್ನು ಹೊರಗೆಡಹುತ್ತವೆ; ಒಂದು ಅವಿನಾಶಿ ಒಕ್ಕೂಟವಾಗಿ ಭಾರತದ ಸಾರ್ವಭೌಮತ್ವಕ್ಕೆ ಅಗ್ರಗಣ್ಯತೆ ಮತ್ತು ಅನನ್ಯತೆಯಿರುವುದು, ದೇಶದೊಳಗಿನ ರಾಜ್ಯಗಳಿಗೆ ಸೀಮಿತ ಸ್ವಾತಂತ್ರ್ಯಅಧಿಕಾರವನ್ನು ನೀಡಲಾಗಿರುವುದು ಇಲ್ಲಿನ ವೈಶಿಷ್ಟ್ಯ. ವಿಲಕ್ಷಣ ಸಂಗತಿಯೆಂದರೆ, ಸಂವಿಧಾನಾತ್ಮಕ ಅಧಿಕಾರದ ಸಿಂಹಪಾಲನ್ನು ಕೇಂದ್ರದ ಸಾಂವಿಧಾನಿಕ ಅಧಿಕಾರ ವ್ಯವಸ್ಥೆಗಳು ಚಲಾಯಿಸುತ್ತ ಬಂದಿದ್ದಾಗ್ಯೂ ಮತ್ತು ಎರಡು-ಸ್ತರದ ವ್ಯವಸ್ಥೆಯೊಂದರ ಕುರಿತು ಸಂವಿಧಾನವು ಆರಂಭದಲ್ಲಿ ಪರಿಕಲ್ಪಿಸಿಕೊಂಡಿದ್ದಾಗ್ಯೂ, ಆಮೂಲಾಗ್ರ ಪ್ರಜಾಪ್ರಭುತ್ವದ ಅಚ್ಚೊತ್ತಿ ಕಾರ್ಯಸಾಧ್ಯವಾಗಿಸಲೆಂದು ತರುವಾಯದ ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಮಾಡಲಾಯಿತು. ಇದರ ಪರಿಣಾಮವಾಗಿ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕಾಗಿ, ಮೂರನೇ-ಸ್ತರದ ಆಡಳಿತ ವ್ಯವಸ್ಥೆಯೊಂದು ಸ್ಥಾಪಿಸಲ್ಪಟ್ಟಿದೆ; ಪಂಚಾಯತ್​ಗಳು, ನಗರ ಜಿಲ್ಲಾ ಘಟಕಗಳು ಮತ್ತಿತರ ಸ್ಥಳೀಯ ಸಂಸ್ಥೆಗಳು ಈ ವ್ಯವಸ್ಥೆಯ ಘಟಕಾಂಶಗಳಾಗಿದ್ದು, ಸ್ಥಳೀಯ ಪ್ರದೇಶ ವ್ಯಾಪ್ತಿಯ ಆಡಳಿತ ಚಟುವಟಿಕೆಗಳನ್ನು ಕೈಗೊಳುವ ಅಧಿಕಾರವನ್ನು ಅವು ಪಡೆದಿವೆ.

ಸರ್ವತಂತ್ರ ಸ್ವತಂತ್ರವಾದ ಅಥವಾ ಪರಿಪೂರ್ಣವಾದ ಒಕ್ಕೂಟ ವ್ಯವಸ್ಥೆಯೊಂದಕ್ಕೆ ತದ್ವಿರುದ್ಧವಾಗಿ ಭಾಗಶಃ-ಒಕ್ಕೂಟ ಮಾದರಿಯೊಂದಕ್ಕೆ ಆದ್ಯತೆ ನೀಡುವುದರ ಹಿಂದಿರುವ ಕಾರಣವೆಂದರೆ ಸಂಶಯ ಮನೋವೃತ್ತಿ; ಅಂದರೆ, ಪ್ರಾದೇಶಿಕ ಸ್ವಾಯತ್ತತೆ ಅಥವಾ ಸ್ವಯಮಾಧಿಪತ್ಯ ತೀವ್ರಗೊಂಡುಬಿಟ್ಟಲ್ಲಿ ಅದು ರಾಷ್ಟ್ರದ ವಿಘಟನೆ ಅಥವಾ ರಾಜ್ಯಗಳ ಬೇರ್ಪಡುವಿಕೆಗೆ ಕಾರಣವಾಗಿಬಿಡಬಹುದೆಂಬ ಶಂಕೆ. ಉದಾಹರಣೆಗೆ, ಸ್ಪೇನ್​ನಂಥ ಮುಂದುವರಿದ ದೇಶ, ಐರೋಪ್ಯ ಒಕ್ಕೂಟದ ಬಹುತೇಕ ದೇಶಗಳ ರೀತಿಯಲ್ಲೇ ತನ್ನ ಜನರ ಸಮಷ್ಟಿ ಪರಂಪರೆಯಲ್ಲಿ ಸಾರ್ವಭೌಮತೆ ಮತ್ತು ಅಸ್ಮಿತೆಯನ್ನು ಕಂಡುಕೊಂಡಿದ್ದರೂ, ವಿಲಕ್ಷಣ ಪರಿಸ್ಥಿತಿಯನ್ನು ಎದುರಿಸುತ್ತಿದೆ- ಅಂದರೆ, ಸ್ಪೇನ್​ನ ಅಂಗೀಭೂತ ಸ್ವಯಮಾಧಿಕಾರದ ಪ್ರಾಂತ್ಯವಾದ ಕೆಟಲೋನಿಯಾ, ಅಲ್ಲಿ ಮಾತನಾಡಲಾಗುವ ಕೆಟಲಾನ್ ಎಂಬ ವಿಶಿಷ್ಟ ಭಾಷೆಯ ಆಧಾರದ ಮೇಲೆ ಸ್ಪೇನ್​ನಿಂದ ಪ್ರತ್ಯೇಕಗೊಳ್ಳಲು ಬಯಸುತ್ತಿದೆ. ಬಲವಾದ ಐತಿಹಾಸಿಕ ಮತ್ತು ಸಮಕಾಲೀನ ಬೆಂಬಲವನ್ನು ಕಂಡುಕೊಳ್ಳುವ ಇಂಥದೊಂದು ಶಂಕೆಯನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸಂವಿಧಾನ ನಿರ್ವತೃಗಳು ‘ಒಗ್ಗಟ್ಟಾಗಿದ್ದರೆ ದೃಢವಾಗಿ ನಿಲ್ಲುತ್ತೇವೆ, ಬೇರ್ಪಟ್ಟರೆ ಕುಸಿದು ಬೀಳುತ್ತೇವೆ’ ಎಂಬ ಆಧಾರವಾಕ್ಯವನ್ನು ಬಲವಾಗಿ ನೆಚ್ಚಿ ಭಾಗಶಃ-ಒಕ್ಕೂಟದ ಮಾದರಿಗೆ ಆದ್ಯತೆ ನೀಡಿದ್ದರು.

ಸಾಮಾಜಿಕ ಒಗ್ಗಟ್ಟು: ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಶಿಷ್ಟ ಅಂಶವೆಂದರೆ, ನಮ್ಮ ಸಂವಿಧಾನದಡಿಯಲ್ಲಿ ಜನಮತಸಂಗ್ರಹ ಅಥವಾ ಸಾರ್ವಜನಿಕ ಅಭಿಪ್ರಾಯ ಎಂಬ ಪರಿಕಲ್ಪನೆಯ ಅನುಪಸ್ಥಿತಿ. ಇದಕ್ಕೆ ಪ್ರತಿಯಾಗಿ, ಹೊಸದೊಂದು ರಾಜ್ಯವನ್ನು ರೂಪಿಸುವ ಮತ್ತು ಅಸ್ತಿತ್ವದಲ್ಲಿರುವ ರಾಜ್ಯವೊಂದರ ಗಾತ್ರವನ್ನು ಹೆಚ್ಚಿಸುವ ಇಲ್ಲವೇ ತಗ್ಗಿಸುವ ಅಧಿಕಾರವನ್ನು ಸಂಸತ್ತು ಹೊಂದಿದ್ದರೂ, ಅದರ ಸೀಮೆಯ ಯಾವುದೇ ಭಾಗವನ್ನು ಬೇರ್ಪಡಿಸುವ/ಪ್ರತ್ಯೇಕಿಸುವ ಅಧಿಕಾರ ಅದಕ್ಕಿರುವುದಿಲ್ಲ ಎಂಬುದು ಗಮನಾರ್ಹ. ಸ್ವಾರಸ್ಯಕರ ಸಂಗತಿಯೆಂದರೆ, ಇಂಥ ಯಾವುದೇ ಮಾರ್ಪಾಡು, ‘ಸ್ವತಃ ಸಂವಿಧಾನದ ಒಂದು ತಿದ್ದುಪಡಿಯಲ್ಲ ಎಂದೇ ಪರಿಗಣಿಸಲ್ಪಡುತ್ತದೆ’. ಸಾಂವಿಧಾನಿಕ ಮಟ್ಟದಲ್ಲಿ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ಹಾಗೂ ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ತಡೆಗಟ್ಟುವುದು ಮೇಲೆ ರ್ಚಚಿಸಲಾಗಿರುವ ವಿಷಯದ ರ್ತಾಕ ತೀರ್ಮಾನ ಎನ್ನಲಡ್ಡಿಯಿಲ್ಲ.

ಆದ್ದರಿಂದ, ರಾಷ್ಟ್ರೀಯ ಚಿಹ್ನೆಗಳ ಮೂಲಕ ಪ್ರತಿನಿಧಿಸಲ್ಪಡುವ ಮತ್ತು ಪ್ರದರ್ಶಿಸಲ್ಪಡುವ ರಾಷ್ಟ್ರದ ಸಾರ್ವಭೌಮತ್ವವನ್ನು, ರಾಜ್ಯದ ಅಸ್ಮಿತೆಯ ವೇಷಧರಿಸಿ ಅತಿಕ್ರಮಿಸುವ ಯಾವುದೇ ಯತ್ನವನ್ನು ಚಿಗುರಿನ ಹಂತದಲ್ಲೇ ಚಿವುಟಿಹಾಕಬೇಕಾಗುತ್ತದೆ. ಸಂವಿಧಾನದ ವಿಧಿ 51 ಎ (ಎ) ಅಡಿಯಲ್ಲಿ ಉಲ್ಲೇಖಿಸಲಾಗಿರುವ ನಮ್ಮ ಮೂಲಭೂತ ಕರ್ತವ್ಯವೂ ಇದಕ್ಕೆ ಪೂರಕವಾಗೇ ಇದೆ- ಅಂದರೆ, ಸಂವಿಧಾನಕ್ಕೆ ನಿಷ್ಠೆಯಿಂದಿರುವುದು/ಅದರ ಅನುಸಾರ ನಡೆದುಕೊಳ್ಳುವುದು, ಸಂವಿಧಾನದ ಆದರ್ಶಗಳು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ. ಸ್ವಾರಸ್ಯಕರ ಸಂಗತಿಯೆಂದರೆ, ಸಮಾನತೆಯ ಹಕ್ಕೆಂಬುದು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಂಡುಕೊಂಡಿರುವಂತೆಯೇ, ರಾಷ್ಟ್ರೀಯ ಚಿಹ್ನೆಗಳನ್ನು ಗೌರವಿಸಬೇಕಾದ ಕರ್ತವ್ಯವು, ಮೂಲಭೂತ ಕರ್ತವ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಕಿಸಿಕೊಂಡಿದೆ.

ಸಂಕೇತಗಳು ಮತ್ತು ಧ್ವಜಗಳು: ರಾಜ್ಯಗಳು ತಂತಮ್ಮ ಧ್ವಜಗಳನ್ನು ಹಾರಿಸುವ ಹಕ್ಕು ಹೊಂದಿಲ್ಲ ಎಂಬ ಅಭಿಪ್ರಾಯ ಸೂಚಿಸಲ್ಪಡುತ್ತಿರುವುದು ಇದೇ ಮೊದಲೇನಲ್ಲ. ವಾಸ್ತವವಾಗಿ, ಹಾಗೆ ಮಾಡುವುದಕ್ಕೊಂದು ಪರಿಪೂರ್ಣ ಅರ್ಥವಿರಬೇಕಾಗುತ್ತದೆ. ಹಾಗಂತ ಅದೇ ರಾಜ್ಯದ ‘ಸಾರ್ವಭೌಮತೆ’ಯ ಒಂದು ಅಸಾಂವಿಧಾನಿಕ ಚಿತ್ರಣವಾಗಿಬಿಡಬಾರದು, ಒಕ್ಕೂಟದ ಸಾರ್ವಭೌಮತೆಯನ್ನು ಅತಿಶಯಿಸಿ ಗೆಲ್ಲುವಂತಾಗಬಾರದು. ನಮ್ಮ ಸಂವಿಧಾನ ಮತ್ತು ಅದರಲ್ಲಿನ ರಚನಾತ್ಮಕ, ವಿವೇಚನಾತ್ಮಕ ವ್ಯಾಖ್ಯಾನವು ಹಕ್ಕುಗಳನ್ನು ಸ್ಪಷ್ಟವಾಗಿಯೇ ಗುರುತಿಸಿವೆ, ಮಾನ್ಯಮಾಡಿವೆ. ಇದು ಆಯಾ ರಾಜ್ಯಗಳಿಗೂ ಅನ್ವಯವಾಗುವಂಥದ್ದು. ಉದಾಹರಣೆಗೆ, ಸಂವಿಧಾನದ ವಿಧಿ 343ರ ಅಡಿಯಲ್ಲಿ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ಅಂಗೀಕರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ, ಮತ್ತು ಹಿಂದಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಿ 344ರ ಅಡಿಯಲ್ಲಿ ಮಾರ್ಗದರ್ಶಿ ಸೂಚನೆಯೊಂದನ್ನು ನೀಡಲಾಗಿದ್ದರೂ, ಪ್ರಾದೇಶಿಕ ಭಾಷೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆಯೂ ನಿರ್ದಿಷ್ಟ ಭರವಸೆಗಳನ್ನು ನೀಡಲಾಗಿದೆ.

ಇನ್ನು, ವಿಧಿ 345ರ ಅನುಸಾರ, ರಾಜ್ಯವೊಂದರ ಶಾಸನಸಭೆ ಕಾನೂನು ಅನುಮೋದನೆಯ ಮೂಲಕ, ರಾಜ್ಯದಲ್ಲಿ ಬಳಕೆಯಲ್ಲಿರುವ ಯಾವುದೇ ಒಂದು ಭಾಷೆ ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು, ಆ ರಾಜ್ಯದ ಎಲ್ಲ ಅಥವಾ ಯಾವುದೇ ಅಧಿಕೃತ ಉದ್ದೇಶಗಳಿಗಾಗಿ ಬಳಸಲ್ಪಡುವ ಭಾಷೆ ಅಥವಾ ಭಾಷೆಗಳಾಗಿ ಅಂಗೀಕರಿಸಬಹುದಾಗಿದೆ. ಭಾರತದಲ್ಲಿನ ರಾಜಕೀಯ ವ್ಯವಸ್ಥೆ, ದೇಶವು ಒಳಗೊಂಡಿರುವ ಅನೇಕ ಸಂಸ್ಕೃತಿಗಳ ಒಂದು ಸೂಕ್ಷ್ಮರೂಪವಾಗೇ ಉಳಿದುಕೊಳ್ಳುವಂತಾಗುವುದನ್ನು ಖಾತ್ರಿಪಡಿಸಲು ಇಂಥದೊಂದು ಸಂರಕ್ಷಣೆಯು ಅತಿಮುಖ್ಯವಾಗಿದೆ ಎನ್ನಲಡ್ಡಿಯಿಲ್ಲ. ಹಿಂದಿ ಮತ್ತು ಇಂಗ್ಲಿಷ್​ಗಳನ್ನು ಭಾರತ ಸರ್ಕಾರದ ಅಧಿಕೃತ ಭಾಷೆಯಾಗಿ ಗೊತ್ತುಪಡಿಸಲಾಗಿದ್ದರೂ, ಅವೆರಡರ ಪೈಕಿ ಯಾವುದೂ ಭಾರತ ಒಕ್ಕೂಟದ ರಾಷ್ಟ್ರೀಯ ಭಾಷೆಯಲ್ಲ ಎಂಬುದನ್ನಿಲ್ಲಿ ಗಮನಿಸಬೇಕು.

ಆದ್ದರಿಂದ, ತನ್ನದೇ ಆದ ಚಿಹ್ನೆಗಳಿಗೆ ಮಾನ್ಯತೆ ನೀಡಿ ಬಳಸಲು ರಾಜ್ಯವೊಂದಕ್ಕೆ ಅಧಿಕಾರವಿದೆ ಎಂಬುದು ನಿರ್ವಿವಾದ. ಅದೇ ರೀತಿಯಲ್ಲಿ, ಒಂದು ಪಂಚಾಯತಿ, ಒಂದು ಕ್ಲಬ್, ಅಷ್ಟೇಕೆ ಒಂದು ಕುಟುಂಬ ಕೂಡ ತನ್ನದೇ ಆದ ಚಿಹ್ನೆಗಳನ್ನು ಹೊಂದಲು ಅವಕಾಶವಿದೆ. ಮೇಲಾಗಿ, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣವಾಗಿರುವುದರಿಂದಾಗಿ, ಇಂಥ ಸಂಸ್ಥೆಗಳು ಕೂಡ ತಂತಮ್ಮ ಧ್ವಜಗಳನ್ನು ಹಾರಿಸಬಹುದಾಗಿದೆ ಎಂಬುದನ್ನು ನಿರಾಕರಿಸಲಾಗದು. ಅದೇನೇ ಇದ್ದರೂ, ಅಸ್ಮಿತೆಯ ಒಂದು ಸಂಕೇತವಾಗಿರುವ ಇಂಥ ಯಾವುದೇ ಧ್ವಜವನ್ನು ನಮ್ಮ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಿಸುವಂತಿಲ್ಲ ಎಂಬ ಮೂಲಭೂತ ಅಂಶವನ್ನೂ ಇಲ್ಲಿ ಮರೆಯಬಾರದು; ಕಾರಣ, ರಾಷ್ಟ್ರಧ್ವಜ ಎಂಬುದು ಜನರ ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರತಿನಿಧಿಸುತ್ತದೆ ಮತ್ತು ಸಂವಿಧಾನಕ್ಕೆ ನಾವು ನಿಷ್ಠರಾಗಿರುವುದು ‘ಭಾರತದ ಜನರಾಗಿರುವ ನಾವು’ ಎಂಬ ಪರಿಕಲ್ಪನಾ ಸ್ವರೂಪದಲ್ಲೇ ವಿನಾ ‘ಭಾರತದ ರಾಜ್ಯಗಳಾಗಿರುವ ನಾವು’ ಎಂಬ ರೀತಿಯಲ್ಲಲ್ಲ. ಆದ್ದರಿಂದ, ಕೂಟಗಳನ್ನು ರೂಪಿಸಿಕೊಳ್ಳಲು ನಾಗರಿಕರಿಗೆ ಅಧಿಕಾರ ನೀಡುವ ಸಂವಿಧಾನದ 19 (1)(ಸಿ) ವಿಧಿಯ ಮೇಲೆ 19 (4) ವಿಧಿಯು ನಿರ್ಬಂಧ ಹೇರುವುದು ಸಮಂಜಸವಾಗೇ ಇದೆ; ‘ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು’ ಸದರಿ ಹಕ್ಕಿನ ಮೇಲೆ ನಿರ್ಬಂಧಗಳನ್ನು ಹೇರುವುದಕ್ಕೆ 19 (4) ವಿಧಿ ಅವಕಾಶ ಕಲ್ಪಿಸುತ್ತದೆ ಎಂಬುದಿಲ್ಲಿ ಗಮನಾರ್ಹ.

ಸರ್ವತಂತ್ರ ಸ್ವತಂತ್ರ ಒಕ್ಕೂಟವೊಂದರ ಘಟಕಾಂಶಗಳು, ತಂತಮ್ಮ ಧ್ವಜಗಳು ಹಾಗೂ ಚಿಹ್ನೆಗಳಲ್ಲಿ ತಮ್ಮ ಸ್ವಾಯತ್ತತೆ ಅಥವಾ ಸ್ವಯಮಾಡಳಿತವನ್ನು ಗುರುತಿಸಿಕೊಂಡರೆ, ಭಾಗಶಃ-ಒಕ್ಕೂಟವೊಂದರಲ್ಲಿನ ವಿಂಗಡಣೆ/ವ್ಯಾಪ್ತಿನಿರ್ಧಾರದ ಗುರುತು ಅದರ ಸಾಂಸ್ಕೃತಿಕ ವೈವಿಧ್ಯದಲ್ಲಿ, ವ್ಯಕ್ತಿಯೊಬ್ಬನ ಘನತೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಖಾತ್ರಿನೀಡುವ ಭ್ರಾತೃತ್ವದ ಹರಡಿಕೆಯಲ್ಲಿ ನೆಲೆಗೊಂಡಿರುತ್ತದೆ ಎನ್ನಲಡ್ಡಿಯಿಲ್ಲ. ವಿ.ಕೆ. ನಾಸ್ವಾ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿರುವಂತೆ, ರಾಷ್ಟ್ರಧ್ವಜ ಎಂಬುದು ಒಂದು ಆಶೀರ್ವಾದ ಮತ್ತು ಆಜ್ಞಾಸನ್ನೆಯಿದ್ದಂತೆ; ರಾಜ್ಯದ ಚಿಹ್ನೆಯೆಂಬುದು ನಿಷ್ಕೃಷ್ಟವಾಗಿ, ರಾಷ್ಟ್ರೀಯ ಚಿಹ್ನೆಗೆ ಮತ್ತು ಅದು ಪ್ರತಿನಿಧಿಸುವ ಆದರ್ಶಗಳಿಗೆ ಪೂರಕವಾಗಿರಬೇಕೇ ವಿನಾ, ಅದನ್ನು ಅತಿಕ್ರಮಿಸುವಂತಿರಬಾರದು. ಯಾವುದೇ ಸಂಕೇತವು ತನ್ನ ಮಡಿಲಲ್ಲಿ ಭಾರತದ ಸೂಕ್ಷ್ಮರೂಪವನ್ನು ಒಳಗೊಂಡಿದ್ದು ರಾಷ್ಟ್ರದ ಸಾಮರಸ್ಯಕ್ಕೆ ಪೂರಕವಾಗಿರಬೇಕೇ ವಿನಾ, ತನ್ನ ಜನರಲ್ಲಿ ಪ್ರತ್ಯೇಕತೆ ಅಥವಾ ವಿಘಟನೆಯನ್ನು ಹುಟ್ಟುಹಾಕುವಂತಿರಬಾರದು.

ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

 

Leave a Reply

Your email address will not be published. Required fields are marked *

Back To Top