Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಐಸಿಯುನಲ್ಲಿ ಆರೋಗ್ಯಭಾಗ್ಯ

Friday, 29.12.2017, 3:07 AM       No Comments

| ವಿಲಾಸ ಮೇಲಗಿರಿ ಬೆಂಗಳೂರು

ಕಡು ಬಡವರಿಗೂ ಉತ್ತಮ ಚಿಕಿತ್ಸೆ ಭಾಗ್ಯ ಕೊಡಿಸುವ ಬಹು ನಿರೀಕ್ಷಿತ ಸಾರ್ವತ್ರಿಕ ಆರೋಗ್ಯಯೋಜನೆಗೆ ರಾಜ್ಯ ಸರ್ಕಾರದ ಪೂರ್ವ ಸಿದ್ಧತೆ ಕೊರತೆಯಿಂದಾಗಿ ಗ್ರಹಣ ಹಿಡಿದಿದೆ. ರಾಜ್ಯೋತ್ಸವ ದಿನದಂದೇ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಿದ್ದ ಯೋಜನೆ ಹೊಸ ವರ್ಷ ಸಮೀಪಿಸುತ್ತಿದ್ದರೂ ಜಾರಿ ಮರೀಚಿಕೆಯಾಗಿದೆ.

ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ, ಅತ್ಯಾಧುನಿಕ ತಂತ್ರಜ್ಞಾನ, ಮೂಲಸೌಕರ್ಯಗಳ ಪೂರ್ವ ತಯಾರಿ ಇಲ್ಲದೆ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಘೋಷಿಸಿದ್ದೇ ಈ ವಿಳಂಬಕ್ಕೆ ಕಾರಣವಾಗಿದೆ. 1.40 ಕೋಟಿ ಕುಟುಂಬಗಳ ಆರೋಗ್ಯಕ್ಕೆ ರಕ್ಷಣೆ ಭಾಗ್ಯ ಕಲ್ಪಿಸುವ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ನ.1 ರಂದು ರಾಜ್ಯದ ಜನರಿಗೆ ಕೊಡುಗೆಯಾಗಿ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಆದರೆ ಇದಾದ ಬಳಿಕ ನಡೆದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕದ ಗಲಾಟೆಯಲ್ಲಿ ಈ ಯೋಜನೆ ಕಳೆದುಹೋಗಿದೆ.

ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಬಿಟ್ಟರೇ ಮುಂದಿನ ಹಂತದ ಕೆಲಸಗಳು ನಿರೀಕ್ಷೆಯಂತೆ ನಡೆದಿಲ್ಲ. ಚುನಾವಣೆಗೆ ಮುನ್ನ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಉಪಕೇಂದ್ರ ಉನ್ನತೀಕರಣವಿಲ್ಲ

ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೆ ಮುನ್ನ ಸರ್ಕಾರ ಉಪ ಆರೋಗ್ಯ ಕೇಂದ್ರ ಉನ್ನತೀಕರಣಗೊಳಿಸುವುದು ಅತ್ಯವಶ್ಯ. ಆದರೆ, ಇದುವರೆಗೆ 105 ಕೇಂದ್ರಗಳನ್ನಷ್ಟೇ ಹೆಲ್ತ್ ವೆಲ್​ನೆಸ್ ಸೆಂಟರ್​ಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ 105ರ ಜತೆಗೆ ಇನ್ನೂ 466 ಕೇಂದ್ರಗಳನ್ನು ಉನ್ನತೀಕರಿಸಬೇಕಿದೆ. ಆ ಕೆಲಸವೂ ಇನ್ನೂ ಆಮೆಗತಿಯಲ್ಲಿ ಸಾಗಿದೆ. ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ಕೊಡುವ ಕೆಲಸ ನಡೆಯುತ್ತಿದೆ. ಯೋಜನೆ ಜಾರಿಗೆ ಪೂರಕವಾಗಿ ಮಾನವ ಸಂಪನ್ಮೂಲ, ಮೂಲಸೌಕರ್ಯ, ಕೌಶಲ ತರಬೇತಿ ತಡವಾಗುತ್ತಿದೆ. ಜನೌಷಧ ಕೇಂದ್ರ, ಡಯಾಲಿಸಿಸ್, ಐಸಿಯು ಘಟಕ, ಎಂಆರ್​ಐ ಮತ್ತು ಸಿಟಿ ಸ್ಕಾ್ಯನ್​ಗಳನ್ನು ನಿಗದಿತ ಗುರಿಯಂತೆ ಪೂರ್ಣ ಪ್ರಮಾಣದಲ್ಲಿ ಅಳವಡಿಸಲಾಗಿಲ್ಲ.

ಹಿಂದಿನ ಯೋಜನೆಗಳು, ವಿಭಿನ್ನ ಪ್ಯಾಕೇಜುಗಳು, ವಿಭಿನ್ನ ಗುರಿ ಫಲಾನುಭವಿಗಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವಲ್ಲಿ ತೊಡಕಾಗುತ್ತಿವೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ನಿರಂತರವಾಗಿ ಸರಣಿ ಸಭೆಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಯಾರಿಗೂ ಯಾವ ದಿನಾಂಕದಂದು ಯೋಜನೆ ಜಾರಿಗೆ ಬರಲಿದೆ ಎಂಬುದನ್ನು ನಿಶ್ಚಿತವಾಗಿ ಹೇಳಲಾಗುತ್ತಿಲ್ಲ.

ರೋಗದ ಬಗ್ಗೆ ಗೊಂದಲ

ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳೇ ಜನರನ್ನು ಹೈರಾಣು ಮಾಡುತ್ತಿದ್ದರೂ ಸಾರ್ವತ್ರಿಕ ಆರೋಗ್ಯ ಯೋಜನೆ ಸಾಂಕ್ರಾಮಿಕ ರೋಗ ಚಿಕಿತ್ಸೆ ಒಳಗೊಂಡಿಲ್ಲ. ಜತೆಗೆ ವಿರಳವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳನ್ನು ಸೇರಿಸಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸಂಖ್ಯೆ ಶೇ.50 ಕಡಿಮೆಯಿರುವುದು ದೊಡ್ಡ ತಲೆನೋವಾಗಿದೆ.

ಏನಿದು ಯೋಜನೆ

ದೇಶದಲ್ಲೇ ಅನನ್ಯವಾದ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡದಾರರಿಗೆ 1 ಸಾವಿರ ಶಸ್ತ್ರ ಚಿಕಿತ್ಸಾ ವಿಧಾನ, 516 ದ್ವಿತೀಯ ಹಂತದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್ ಕಾರ್ಡದಾರರಿಗೆ ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಶೇ.30 ರಷ್ಟನ್ನು ಸರ್ಕಾರ ಭರಿಸುವ ಗುರಿ ಹೊಂದಿದೆ. ಈ ಯೋಜನೆಗೆ ಸರ್ಕಾರ 869 ಕೋಟಿ ರೂ. ನಿಗದಿಪಡಿಸಿದೆ. ಈಗಾಗಲೇ ಅಸ್ತಿತ್ವದಲ್ಲಿದ್ದ ಯಶಸ್ವಿನಿ, ವಾಜಪೇಯಿ ಆರೋಗ್ಶಶ್ರೀ, ಜ್ಯೋತಿ ಸಂಜೀವಿನಿ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಮತ್ತಿತರ ಕಾರ್ಯಕ್ರಮಗಳು ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳಲಿವೆ.

ವಾಸ್ತವ, ತೊಡಕುಗಳು

# ಸರ್ಕಾರಿ ವಲಯದಲ್ಲಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ

# ತಜ್ಞ ವೈದ್ಯರ ಅಭಾವ, ನರ್ಸ್ ಹಾಗೂ ತಾಂತ್ರಿಕ ಸಿಬ್ಬಂದಿಗೆ ತರಬೇತಿ ಇಲ್ಲ

# ಕೆಪಿಎಂಇ ಕಾಯ್ದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತಿಲ್ಲ

# ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಹಾಗೂ ಶಸ್ತ್ರ ಚಿಕಿತ್ಸೆಗಳಿಗೆ ದರ ನಿಗದಿಯಾಗಿಲ್ಲ

# ಉಪ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ ಕಾರ್ಯ ಆಮೆಗತಿಯಲ್ಲಿ ಸಾಗಿದೆ.

# ಸರ್ಕಾರಿ ಆಸ್ಪತ್ರೆಗಳು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯಗಳ ದೊಡ್ಡ ಕೊರತೆ ಎದುರಿಸುತ್ತಿವೆ.

ಗೊಂದಲಗಳೇನು…?

ಸರ್ಕಾರಿ ವಲಯದಲ್ಲಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೆರಳೆಣಿಕೆಯಷ್ಟು ಮಾತ್ರ ಇರುವ ಕಾರಣ ಈ ಯೋಜನೆಯಡಿ ತೃತೀಯ ಹಂತದ ಸೇವೆ ಒದಗಿಸಲು ಬಹುತೇಕ ಖಾಸಗಿ ಆಸ್ಪತ್ರೆಗಳನ್ನೇ ಸರ್ಕಾರ ಅವಲಂಬಿಸಬೇಕಿದೆ. ಆದರೆ, ಈ ಆಸ್ಪತ್ರೆಗಳ ಜತೆ ಒಡಂಬಡಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಚಿಕಿತ್ಸೆ ದೊರಕಿಸಿಕೊಡುವ ಸಂಬಂಧ ಹಣಕಾಸು ಮಾರ್ಗಸೂಚಿ ಇನ್ನೂ ಸಿದ್ಧಗೊಂಡಿಲ್ಲ. ವಿವಿಧ ಹಂತದ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗೆ ಎಷ್ಟು ಹಣ ಭರಿಸಬೇಕು ಎಂಬುದು ನಿಗದಿಯಾಗಿಲ್ಲ. ಈ ಯೋಜನೆಯಡಿ ಒಬ್ಬ ಫಲಾನುಭವಿಗೆ ದ್ವಿತೀಯ ಹಂತದ ಚಿಕಿತ್ಸೆಗಾಗಿ 5 ಸಾವಿರ ರೂ. ಹಾಗೂ ತೃತೀಯ ಹಂತಕ್ಕೆ 60 ಸಾವಿರ ರೂ.ವರೆಗೆ ಖರ್ಚು ಮಾಡಲಾಗುತ್ತದೆ. ಇಷ್ಟೊಂದು ದೊಡ್ಡ ಮಟ್ಟದ ಯೋಜನೆ ಜಾರಿಗೆ ಮುನ್ನ ಸಿದ್ಧತೆಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗಿದೆ.

ಜಾರಿ ಹಾದಿ ದುರ್ಗಮ

ಕೆಪಿಎಂಇ ಕಾಯ್ದೆಗೂ ರಾಜ್ಯಪಾಲರಿಂದ ಸಮ್ಮತಿ ಸಿಕ್ಕಿಲ್ಲ. ಹೀಗಾಗಿ ರಾಜ್ಯಪಾಲರ ಒಪ್ಪಿಗೆ ದೊರೆತ ಬಳಿಕ ದರ ನಿಗದಿಗೆ ತಜ್ಞರ ಸಮಿತಿ ರಚನೆಯಾಗಬೇಕು. ಈ ಸಮಿತಿ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ದರ ಪಟ್ಟಿ ನಿಗದಿ ಮಾಡಲಿದೆ. ಅದಾದ ಬಳಿಕ ಸಚಿವ ಸಂಪುಟವು ಈ ದರಪಟ್ಟಿಗೆ ಅನುಮೋದನೆ ನೀಡಬೇಕು. ಹಾಗೆಯೇ ಪ್ರತಿ ಆಸ್ಪತ್ರೆಯ ಜತೆಗೂ ಈ ಸಂಬಂಧ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಬೇಕು. ಹೀಗಾಗಿ ಯೋಜನೆ ದಾರಿ ಅಷ್ಟೊಂದು ಸುಗಮವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

Leave a Reply

Your email address will not be published. Required fields are marked *

Back To Top