Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಐರ್ಲೆಂಡ್ ಆಡಳಿತ ಸೂತ್ರ ಮುಂಬೈ ವರದ್ಕರ್ ಕೈಗೆ

Sunday, 04.06.2017, 3:00 AM       No Comments

| ಉಮೇಶ್​ ಕುಮಾರ್​ ಶಿಮ್ಲಡ್ಕ

ಸಾರ್ವತ್ರಿಕ ಚುನಾವಣೆ ಮೂಲಕ ಸುದ್ದಿಯಾದ ಭಾರತ, ಅಮೆರಿಕ, ಫ್ರಾನ್ಸ್ ಮುಂತಾದ ದೊಡ್ಡ ರಾಷ್ಟ್ರಗಳ ಸಾಲಿಗೆ ಐರ್ಲೆಂಡ್ ಕೂಡ ಸೇರಿದೆ. ಇದಕ್ಕೆ ಕಾರಣ, ಲಿಯೋ ವರದ್ಕರ್ ಎಂಬ 38 ವರ್ಷದ ಅರೆ-ಭಾರತೀಯ ಯುವಕ ಅಲ್ಲಿನ ಪ್ರಧಾನಿ ಪಟ್ಟಕ್ಕೇರಿದ್ದು! ಹೌದು, ಎರಡು ವರ್ಷಗಳ ಹಿಂದೆ ತಾನು ಸಲಿಂಗಿ, ಡಾ. ಮ್ಯಾಥ್ಯೂ ಬಾರ್ರೆಟ್ ತನ್ನ ಸಂಗಾತಿ ಎಂದು ಬಹಿರಂಗವಾಗಿ ಘೊಷಿಸಿಕೊಂಡ ದಿಟ್ಟ ವ್ಯಕ್ತಿ ಲಿಯೋ. ಫೈನ್ ಗೇಲ್ ಪಾರ್ಟಿ(Fine Gael Party)ಯ ಸಕ್ರಿಯ ನಾಯಕರಲ್ಲೊಬ್ಬ. ಈ ಪಾರ್ಟಿಯನ್ನು ಕಳೆದ ಹದಿನೈದು ವರ್ಷಗಳಿಂದ ಮುನ್ನಡೆಸಿದ್ದ ಪ್ರಧಾನಿ ಎಂಡಾ ಕೆನ್ನಿ ಮೇ ತಿಂಗಳ ಮಧ್ಯಭಾಗದಲ್ಲಿ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮುನ್ನೆಲೆಗೆ ಬಂದವರು ಲಿಯೋ. ಕೂಡಲೇ ಉಮೇದುವಾರಿಕೆ ಘೊಷಿಸಿದ ಲಿಯೋ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಕಂಡಿದ್ದು, ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.

ವರದ್ಕರ್ ಬಗ್ಗೆ ಹೇಳುವುದಕ್ಕೆ ಮುನ್ನ ಐರ್ಲೆಂಡ್ ಬಗ್ಗೆ ಕಿರು ಮಾಹಿತಿ ಇರುವುದು ಒಳಿತು. ಜಗತ್ತಿನ ಭೂಪಟದಲ್ಲಿ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಐರ್ಲೆಂಡಿನ ಗಾತ್ರ ಚಿಕ್ಕದು. ಹೆಚ್ಚೂ ಕಡಿಮೆ ನಮ್ಮ ದೇಶದ ಅಸ್ಸಾಂ ರಾಜ್ಯದಷ್ಟು ದೊಡ್ಡದು. ಜನಸಂಖ್ಯೆಯೂ ಹೆಚ್ಚೇನಿಲ್ಲ, 2016ರ ಗಣತಿ ಪ್ರಕಾರ 47,61,8465. ಇದು ಬಹುಸಂಸ್ಕೃತಿಯ ರಾಷ್ಟ್ರ. ಇಲ್ಲಿ, ಐರಿಷೇತರರು ಬಹಳ ಜನ ಇದ್ದಾರೆ. ಆದರೂ, ಐರ್ಲೆಂಡ್​ನವರಾಗಿಯೇ ಯಾವುದೇ ತಾರತಮ್ಯ ನೀತಿಗಳಿಲ್ಲದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅಲ್ಲೀಗ ಮೈತ್ರಿ ಸರ್ಕಾರ ಆಡಳಿತ ಸೂತ್ರ ಹಿಡಿದಿದೆ.

ವರದ್ಕರ್ ಅವರು 2015ರಲ್ಲಿ ಜಾಗತಿಕವಾಗಿ ಸುದ್ದಿಯಾಗುವ ಮುನ್ನ ಐರ್ಲೆಂಡಿನ ರಾಜಕಾರಣದಲ್ಲಿ ತಮ್ಮ ಛಾಪನ್ನು ವಿದ್ಯಾರ್ಥಿ ದೆಸೆಯಿಂದಲೇ ಮೂಡಿಸಲಾರಂಭಿಸಿದ್ದರು. ಅವರ ರಾಜಕೀಯ ಬದುಕು ಆರಂಭವಾಗಿದ್ದು 1999ರಲ್ಲಿ. ಅವರು ಆಗಿನ್ನೂ ದ್ವಿತೀಯ ವರ್ಷದ ಮೆಡಿಕಲ್ ವಿದ್ಯಾರ್ಥಿ. ಮುಲ್​ಹುದ್ದರ್ಟ್ ಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ಕೇವಲ 380 ಮೊದಲ ಪ್ರಾಶಸ್ಱದ ಮತ ಪಡೆದು ಒಂಭತ್ತನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಮುಂದೆ 2003ರ ಅಕ್ಟೋಬರ್ 13ರಂದು ಫಿಂಗಲ್ ಕೌಂಟಿ ಕೌನ್ಸಿಲ್​ನಲ್ಲಿ ಕ್ಯಾಸೆಲ್​ನಾಕ್ ಪ್ರದೇಶದಲ್ಲಿ ಶೀಲಾ ಟೆರ್ರಿ ಅವರ ಬದಲಿಯಾಗಿ ಕಾಣಿಸಿದ್ದರು. ಮುಂದೆ, 2004ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಪ್ರಾಶಸ್ಱದ ಗರಿಷ್ಠ 4,894 ಮತಗಳಿಸಿ ಮೊದಲ ಸುತ್ತಿನಲ್ಲೇ ಆಯ್ಕೆಯಾಗಿದ್ದರು. 2007ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಅವರು, ಅಲ್ಲಿಂದೀಚೆಗೆ ಸಂಸತ್ತಿಗೆ ಆಯ್ಕೆಯಾಗುತ್ತ ಬಂದಿದ್ದಾರೆ. 2011ರ ಸಾರ್ವತ್ರಿಕ ಚುನಾವಣೆಯಲ್ಲಿ ಫೈನ್ ಗೇಲ್ ಪಾರ್ಟಿ ಮೈತ್ರಿ ಸರ್ಕಾರ ರಚಿಸಿತು. 2011-14ರ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಸಾರಿಗೆ, ಪ್ರವಾಸೋದ್ಯಮ ಮತ್ತು ಕ್ರೀಡಾ ಖಾತೆಗಳ ಹೊಣೆಗಾರಿಕೆ ನಿರ್ವಹಿಸಿದರು. ಕ್ರೀಡಾ ಪ್ರೇಮಿಯಾದ ಅವರ ಪಾಲಿಗೆ ಇದು ಅಚ್ಚರಿಯ ಅಂಶವಾಗಿತ್ತು. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ವರದ್ಕರ್ ಅವರು ಎರಡನೇ ‘ಬೇಲ್ ಔಟ್’(ಆರ್ಥಿಕವಾಗಿ ಕುಸಿತ ಕಾಣುತ್ತಿರುವ ದೇಶ ಬೇಡುವ ಹಣಕಾಸಿನ ನೆರವು) ಘೊಷಿಸಿದರು. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐರ್ಲೆಂಡ್​ನ ವಿಶ್ವಾಸಾರ್ಹತೆ ಮೇಲೆ ಪರಿಣಾಮ ಬೀರಿತು. ಇದೇ ವೇಳೆ, ಅಂದಿನ ಪ್ರಧಾನಿ ಎಂಡಾ ಕೆನ್ನಿ ಕೂಡಲೇ ಸ್ಪಷ್ಟೀಕರಣ ನೀಡಿ ಐರ್ಲೆಂಡ್​ಗೆ

ಬೇಲ್​ಔಟ್ ಬೇಕಾಗಿಲ್ಲ ಎಂದರು. ಅಲ್ಲದೆ, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಈ ರೀತಿ ಋಣಾತ್ಮಕ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದರು ಕೂಡ. ಮುಂದೆ 2014ರಲ್ಲಿ ಸಚಿವ ಸಂಪುಟ ಪುನಾರಚನೆಯಾದಾಗ ಆರೋಗ್ಯ ಖಾತೆ ಹೊಣೆಗಾರಿಕೆ ವರದ್ಕರ್ ಹೆಗಲೇರಿತು. ನಂತರ 2016ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಪುನರಾಯ್ಕೆಯಾಗಿ, ಸರ್ಕಾರ ರಚನೆ ವಿಳಂಬವಾದುದರಿಂದ ಆರೋಗ್ಯ ಖಾತೆಯ ಹೊಣೆಗಾರಿಕೆಯಲ್ಲೇ ಮುಂದುವರಿದರು. 2016ರ ಮೇ 6ರಿಂದ ಸಾಮಾಜಿಕ ಸಂರಕ್ಷಣೆ ಸಚಿವರಾಗಿದ್ದ ಅವರು, ಕಳೆದ ತಿಂಗಳು ಪ್ರಧಾನಿ ಎಂಡಾ ಕೆನ್ನಿ ರಾಜೀನಾಮೆ ನೀಡಿದ ಕೂಡಲೇ ಆ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೊಷಿಸಿದ್ದರು. ಕೂಡಲೇ ಅವರಿಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ನಂತರ ನಡೆದಿರುವುದು ಈಗ ಇತಿಹಾಸ. ಈ ಚುನಾವಣೆ ತಲೆಮಾರುಗಳ ಅಂತರದ ಬದಲಾವಣೆ, ಐರ್ಲೆಂಡಿನ ರಾಜಕೀಯ ವ್ಯವಸ್ಥೆಯಲ್ಲೇ ಒಂದು ಬದಲಾವಣೆಯನ್ನು ನಿರೀಕ್ಷಿಸಬಹುದು ಎಂಬಿತ್ಯಾದಿ ವಿಶ್ಲೇಷಣೆಗಳು ಕೇಳಿಬಂದಿವೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಈ ಚುನಾವಣಾ ಗೆಲುವಿನೊಂದಿಗೆ ವರದ್ಕರ್ ಅವರ ವ್ಯಕ್ತಿತ್ವವೇ ಹೆಚ್ಚು ಪ್ರಚಲಿತಕ್ಕೆ ಬಂದುದು. ಅಂದರೆ, ಅವರೊಬ್ಬ ಸಲಿಂಗ ಕಾಮಿ, ಅರೆ ಭಾರತೀಯ ಎಂಬಿತ್ಯಾದಿ. ಇದಕ್ಕೆ ಪ್ರತಿಕ್ರಿಯಿಸಿದ ಅವರು,‘ನಾನು ಅರೆ ಭಾರತೀಯನೋ ಅಥವಾ ಸಲಿಂಗಕಾಮಿ ರಾಜಕಾರಣಿಯೋ ಅಥವಾ ಡಾಕ್ಟರ್ ರಾಜಕಾರಣಿಯೋ ಅಲ್ಲ. ಅವೆಲ್ಲವೂ ನನ್ನ ವ್ಯಕ್ತಿತ್ವದ ಭಾಗಗಳಷ್ಟೆ. ಅವು ನನ್ನನ್ನು ವ್ಯಾಖ್ಯಾನಿಸಲಾರವು. ಭವಿಷ್ಯಕ್ಕೆ ಸಂಬಂಧಿಸಿದ ತತ್ತ್ವಶಾಸ್ತ್ರಗಳೇ ನನ್ನನ್ನು ಮುನ್ನಡೆಸುತ್ತಿರುವುದು. ಅವುಗಳ ಬಗ್ಗೆ ನಾನು ಆಸಕ್ತನಾಗಿದ್ದೇನೆ. ಜಗತ್ತಿನಾದ್ಯಂತ ಇಂತಹ ಬೆಳವಣಿಗೆಗಳೇ ಆಗುತ್ತಿದ್ದು, ಫ್ರಾನ್ಸ್​ನ ಮ್ಯಾಕ್ರನ್, ಕೆನಡಾದ ಟ್ರೂಡ್ ಇವರ ಚಳವಳಿಗಳೆಲ್ಲವೂ ಅದೇ ಹಾದಿಯಲ್ಲಿವೆ ’ ಎಂದು ಸ್ಪಷ್ಟವಾಗಿ ಹೇಳಿದ್ದರು.

ಇನ್ನು ವರದ್ಕರ್ ವೈಯಕ್ತಿಕ ವಿಷಯಕ್ಕೆ ಬರೋಣ. ಭಾರತೀಯರಿಗೆ ಐರ್ಲೆಂಡ್​ನ ವರದ್ಕರ್ ಬಗ್ಗೆ ಯಾಕಿಷ್ಟು ಕುತೂಹಲ ಎಂಬ ಪ್ರಶ್ನೆ ಸಹಜ. ಅವರು ಜನಿಸಿದ್ದು ಐರ್ಲೆಂಡ್​ನಲ್ಲಾದರೂ, ಅವರ ತಂದೆ ಡಾ.ಅಶೋಕ್ ವರದ್ಕರ್ ಭಾರತದವರು. ಅದರಲ್ಲೂ ಮುಂಬೈನ ಬೊರಿವಿಲಿಯ ವರದ್ಕರ್ ಕುಟುಂಬದವರು. ಮುಂಬೈನಿಂದ ಇಂಗ್ಲೆಂಡ್​ಗೆ 1960ರ ದಶಕದಲ್ಲಿ ವಲಸೆ ಹೋದ ಡಾ.ಅಶೋಕ್ ಅವರು ಐರಿಷ್ ನರ್ಸ್ ಮರಿಯಮ್ೆ ಮನಸೋತು ವಿವಾಹವಾದರು. ಲೈಸೆಸ್ಟರ್​ನಲ್ಲಿ ಹೊಸ ಬದುಕು ಆರಂಭಿಸಿದ ಈ ದಂಪತಿಯ ಮೊದಲ ಮಗಳು ಸೋಫಿ ಜನಿಸಿದ್ದು ಅಲ್ಲೇ. ಇದಾಗಿ ಭಾರತಕ್ಕೆ ಹಿಂತಿರುಗಿದ ಈ ಕುಟುಂಬ, 1973ರಲ್ಲಿ ಡಬ್ಲಿನ್​ಗೆ ಬಂದು ನೆಲೆಸಿತು. ಅಲ್ಲೇ ಎರಡನೇ ಮಗು ಸೋನಿಯಾಳ ಜನನ. ನಂತರ 1979ರ ಜನವರಿ 18ರಂದು ಲಿಯೋ ವರದ್ಕರ್ ಜನಿಸಿದರು.

ಬ್ಲಾಂಚರ್ಡ್ಸ್​ಟೌನಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ನ್ಯಾಷನಲ್ ಸ್ಕೂಲ್​ನಲ್ಲಿ ಆರಂಭಿಕ ಶಿಕ್ಷಣ ಪಡೆದ ಲಿಯೋ, ಪ್ಲಾಮರ್ಸ್​ಟೌನಿನ ದ ಕಿಂಗ್ಸ್ ಹಾಸ್ಪಿಟಲ್​ನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬಳಿಕ ಡಬ್ಲಿನ್​ನ ಟ್ರಿನಿಟಿ ಕಾಲೇಜಿನಲ್ಲಿ ಕಾನೂನು ಪದವಿಗೆ ಸೇರ್ಪಡೆಯಾದರು. ಆದರೆ ಶಿಕ್ಷಣ ಪೂರ್ಣಗೊಳಿಸಲಿಲ್ಲ. ಬಳಿಕ ವೈದ್ಯಕೀಯ ಶಿಕ್ಷಣಕ್ಕೆ ಸೇರಿಕೊಂಡರು. ಇದೇ ಅವಧಿಯಲ್ಲಿ ಅವರು ಫೈನ್ ಗೇಲ್ ಪಾರ್ಟಿಗೆ ಸೇರಿಕೊಂಡು ಯುವ ಘಟಕದ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಇದಲ್ಲದೆ, ಕ್ರಿಶ್ಚಿಯನ್ ಡೆಮಾಕ್ರಟಿಕ್ ಗ್ರೂಪ್​ನ ಯುರೋಪಿಯನ್ ಪೀಪಲ್ಸ್ ಪಾರ್ಟಿಯ ಯುವ ಘಟಕದ ಉಪಾಧ್ಯಕ್ಷರ ಹೊಣೆಯನ್ನು ನಿಭಾಯಿಸಿದರು. ಪ್ರತಿಷ್ಠಿತ ವಾಷಿಂಗ್ಟನ್ ಐರ್ಲೆಂಡ್ ಪ್ರೋಗ್ರಾಂನಲ್ಲಿ ಮಹತ್ವಾಕಾಂಕ್ಷಿ ಯುವ ನಾಯಕರಾಗಿ ಪಾಲ್ಗೊಂಡಿದ್ದರು. 2003ರಲ್ಲಿ ವೈದ್ಯ ಶಿಕ್ಷಣ ಪದವಿ ಪೂರ್ಣಗೊಳಿಸಿದರು. ಬಳಿಕ ಸೇಂಟ್ ಜೇಮ್್ಸ ಹಾಸ್ಪಿಟಲ್ ಹಾಗೂ ಕೊನ್ನೋಲಿ ಹಾಸ್ಪಿಟಲ್​ನಲ್ಲಿ ಜ್ಯೂನಿಯರ್ ಡಾಕ್ಟರ್ ಆಗಿ ಸೇವೆಸಲ್ಲಿಸಿದರು. 2010ರಲ್ಲಿ ಜನರಲ್ ಪ್ರಾಕ್ಟೀಷನರ್ ಆಗಿ ಉತ್ತೀರ್ಣರಾದರು. ನೇರ ನಡೆ ನುಡಿ ಹೊಂದಿದ ವರದ್ಕರ್ ಐರೋಪ್ಯ ಒಕ್ಕೂಟದ ಪರವಾಗಿದ್ದು, ಅವರ ಎದುರು ಹಲವಾರು ಸವಾಲುಗಳಿವೆ. ಮುಖ್ಯವಾಗಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗುತ್ತಿದ್ದು(ಬ್ರೆಕ್ಸಿಟ್), ಅದರಿಂದಾಗುವ ಪರಿಣಾಮಗಳನ್ನು ಎದುರಿಸಬೇಕು. ಹಾಗೆಯೇ, ವರದ್ಕರ್ ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿರುವುದರಿಂದ ಆಡಳಿತ ಯಂತ್ರವನ್ನು ಚುರುಕಾಗಿ ಸರಿದೂಗಿಸಿಕೊಂಡು ಹೋಗಬೇಕಾದ ಬಹುಮುಖ್ಯ ಸವಾಲನ್ನು ಎದುರಿಸುತ್ತಿದ್ದಾರೆ. ಇದನ್ನು ಹೇಗೆ ನಿರ್ವಹಿಸುವರೆಂಬ ಕುತೂಹಲ ಸದ್ಯಕ್ಕಿದೆ.

Leave a Reply

Your email address will not be published. Required fields are marked *

Back To Top