Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಐತಿಹಾಸಿಕ ಕ್ಲೀನ್​ಸ್ವೀಪ್ ಕನಸಿನಲ್ಲಿ ಕೊಹ್ಲಿ ಪಡೆ

Saturday, 12.08.2017, 3:06 AM       No Comments

ಪಲ್ಲೆಕಿಲೆ: ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ, ಶನಿವಾರ ಆರಂಭವಾಗಲಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರಭುತ್ವವನ್ನು ಮುಂದುವರಿಸಿಕೊಳ್ಳುವ ವಿಶ್ವಾಸದಲ್ಲಿ ಹಾಗೂ ವಿದೇಶದಲ್ಲಿ ಮೊಟ್ಟ ಮೊದಲ ಕ್ಲೀನ್​ಸ್ವೀಪ್ ಸಾಧನೆ ಮಾಡುವ ಹಂಬಲದಲ್ಲಿ ಕಣಕ್ಕಿಳಿಯಲಿದೆ.

ಕ್ಯಾಂಡಿಯಲ್ಲಿರುವ ಪಲ್ಲೆಕಿಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಆಲ್ರೌಂಡ್ ನಿರ್ವಹಣೆಯ ಮೂಲಕ ಮೊದಲೆರಡು ಟೆಸ್ಟ್​ಗಳಲ್ಲಿ ದ್ವೀಪರಾಷ್ಟ್ರದ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಗಾಲೆ ಟೆಸ್ಟ್​ಅನ್ನು 304 ರನ್​ಗಳಿಂದ ಹಾಗೂ ಕೊಲಂಬೊ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 53 ರನ್​ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಅದಲ್ಲದೆ, ಶ್ರೀಲಂಕಾ ವಿರುದ್ಧ ಶ್ರೀಲಂಕಾದಲ್ಲಿ ಭಾರತ ಮೊಟ್ಟಮೊದಲ ಇನಿಂಗ್ಸ್ ವಿಜಯವನ್ನೂ 2ನೇ ಟೆಸ್ಟ್​ನಲ್ಲಿ ದಾಖಲಿಸಿತ್ತು. ಮೂರನೇ ಟೆಸ್ಟ್ ನಲ್ಲೂ ಗೆದ್ದರೆ ಭಾರತ ತಂಡ ಲಂಕಾ ನೆಲದಲ್ಲಿ 9 ಪಂದ್ಯ ಗೆದ್ದ ದಾಖಲೆ ಮಾಡಲಿದೆ. ಶ್ರೀಲಂಕಾ ಪ್ರವಾಸ ಮಾಡಿದ ಯಾವ ತಂಡ ಕೂಡ ಈವರೆಗೂ 9 ಟೆಸ್ಟ್ ಪಂದ್ಯ ಗೆದ್ದ ಇತಿಹಾಸ ಹೊಂದಿಲ್ಲ.

ಕಳೆದ ಎರಡು ಟೆಸ್ಟ್​ಗಳಲ್ಲಿ ಭಾರತಕ್ಕೆ ಕನಿಷ್ಠ ಪೈಪೋಟಿಯನ್ನಾದರೂ ನೀಡುವ ಹಂತದಲ್ಲಿ ಶ್ರೀಲಂಕಾ ತಂಡಕ್ಕೆ ಕಾಡಿದ್ದು ಪ್ರಮುಖ ಆಟಗಾರರ ಗಾಯ. ಅನುಭವಿ ವೇಗಿ ನುವಾನ್ ಪ್ರದೀಪ್ ಹಾಗೂ ಹಿರಿಯ ಆಟಗಾರ ಹಾಲಿ ವಿಶ್ವ ಕ್ರಿಕೆಟ್​ನ ಅತ್ಯುತ್ತಮ್ಮ ಸ್ಪಿನ್ನರ್​ಗಳಲ್ಲಿ ಒಬ್ಬರಾದ ರಂಗನಾ ಹೆರಾತ್ ಸೇವೆಯನ್ನು ಅಂತಿಮ ಪಂದ್ಯಕ್ಕೆ ಕಳೆದುಕೊಂಡಿದೆ. ಆತಿಥೇಯ ತಂಡದ ಬೌಲಿಂಗ್ ಬಲ ಭಾರತದ ದೈತ್ಯ ಬ್ಯಾಟಿಂಗ್ ಶಕ್ತಿಗೆ ಸವಾಲೆನಿಸುತ್ತಲೇ ಇಲ್ಲ. ಸರಣಿಯಲ್ಲಿ ಈಗಾಗಲೇ 2 ಬಾರಿ 600 ಪ್ಲಸ್ ಮೊತ್ತ ಪೇರಿಸಿದ್ದೇ ಇದಕ್ಕೆ ಸಾಕ್ಷಿ.

***

ಐತಿಹಾಸಿಕ ಸಾಧನೆ ಹೊಸ್ತಿಲಲ್ಲಿ ಭಾರತ

ಭಾರತ ಈವರೆಗೂ ವಿದೇಶದಲ್ಲಿ ಆಡಿದ 3 ಹಾಗೂ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲೂ ಗೆದ್ದ ಉದಾಹರಣೆಯಿಲ್ಲ. ಬಾಂಗ್ಲಾದೇಶ ವಿರುದ್ಧ 2 ಬಾರಿ (2004, 2010) ಹಾಗೂ ಜಿಂಬಾಬ್ವೆ ವಿರುದ್ಧ ಒಮ್ಮೆ (2005) 2 ಪಂದ್ಯಗಳ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದಿರುವುದು ದಾಖಲೆ. ಆದರೆ, ಕ್ರಿಕೆಟ್ ಪರಿಭಾಷೆಯಲ್ಲಿ ವೈಟ್​ವಾಷ್ ಅಥವಾ ಕ್ಲೀನ್​ಸ್ವೀಪ್ ಎನ್ನುವ ಪದಗಳು ಕನಿಷ್ಠ ಮೂರು ಪಂದ್ಯಗಳ ಸರಣಿಗೆ ಮಾತ್ರವೇ ಅನ್ವಯವಾಗುತ್ತದೆ. ಭಾರತ ಪಲ್ಲೆಕಿಲೆ ಟೆಸ್ಟ್ ಗೆದ್ದಲ್ಲಿ 82 ವರ್ಷಗಳ ತನ್ನ ಟೆಸ್ಟ್ ಇತಿಹಾಸದಲ್ಲಿ ಮೊಟ್ಟ ಮೊದಲ ವಿದೇಶಿ ‘ಕ್ಲೀನ್​ಸ್ವೀಪ್‘ ಇದಾಗಿರಲಿದೆ.

***

ಮಳೆ ಭೀತಿ

ಐತಿಹಾಸಿಕ ಕ್ಲೀನ್​ಸ್ವೀಪ್​ನ ನಿರೀಕ್ಷೆಯಲ್ಲಿರುವ ಭಾರತಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಅಭ್ಯಾಸದ ವೇಳೆಯೂ ಮಳೆ ಅಡ್ಡಿಪಡಿಸಿದೆ. ಪಂದ್ಯದ ಮೊದಲ ನಾಲ್ಕು ದಿನಗಳ ಆಟಕ್ಕೂ ಮಳೆ ಮುನ್ಸೂಚನೆ ನೀಡಲಾಗಿದೆ.

***

ಪಿಚ್ ರಿಪೋರ್ಟ್

ಪಲ್ಲೆಕಿಲೆ ಪಿಚ್ ಸಾಂಪ್ರದಾಯಿಕವಾಗಿ ವೇಗ ಹಾಗೂ ಬೌನ್ಸ್​ಗೆ ನೆರವೀಯುವ ಮೈದಾನ. ಟೆಸ್ಟ್ ಹಿನ್ನೆಲೆಯಲ್ಲಿ ನಿರ್ವಿುಸಲಾಗಿರುವ ಪಿಚ್​ನ ಮೇಲೂ ಸಣ್ಣ-ಸಣ್ಣ ಹುಲ್ಲುಗಳಿದ್ದು, ಮೊದಲ ಎರಡು ದಿನಗಳ ಆಟದಲ್ಲಿ ವೇಗಿಗಳೂ ಯಶ ಕಾಣಲಿದ್ದಾರೆ. ಅಲ್ಲದೆ, ವಿಶ್ವದ ಅತ್ಯಂತ ತೇವಯುತ ಮೈದಾನಗಳಲ್ಲಿ ಇದೂ ಒಂದು. ಬೆಟ್ಟ-ಗುಡ್ಡಗಳಿಂದ ಸುತ್ತುವರಿದಿರುವ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದೆ.

***

ಐತಿಹಾಸಿಕ ಕ್ಲೀನ್​ಸ್ವೀಪ್​ನ ನಿರೀಕ್ಷೆಯಲ್ಲಿ ಅಂತಿಮ ಟೆಸ್ಟ್ ಆಡುತ್ತಿಲ್ಲ. ಇದು ನಮಗೆ ಇನ್ನೊಂದು ಪಂದ್ಯವಷ್ಟೇ. ಈಗಾಗಲೇ ಸರಣಿ ಗೆದ್ದಿದ್ದೇವೆ. ಹಾಗೆಂದು ನಿರಾಳವಾಗಿ ಆಡುವಂತಿಲ್ಲ. ಈ ಪಂದ್ಯವನ್ನು ಹಾಗೂ ಪಂದ್ಯದ ಪ್ರತಿ ಅವಧಿಯನ್ನೂ ಗೆಲ್ಲುವುದು ನಮ್ಮ ಗುರಿ. ಪಲ್ಲೆಕಿಲೆ ಟೆಸ್ಟ್​ನಲ್ಲಿ ಕುಲದೀಪ್ ಯಾದವ್ ಆಡುವ ಹೆಚ್ಚಿನ ಅವಕಾಶ ಹೊಂದಿದ್ದಾರೆ.

| ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

***

ಟೀಮ್ ನ್ಯೂಸ್

ಶ್ರೀಲಂಕಾ: ಕೊಲಂಬೊ ಟೆಸ್ಟ್​ನ ಎರಡೂ ಇನಿಂಗ್ಸ್​ಗಳಲ್ಲಿ ಕಳಪೆ ನಿರ್ವಹಣೆ ತೋರಿದ್ದ ಹೊರತಾಗಿಯೂ ಧನಂಜಯ ಡಿ ಸಿಲ್ವ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, ತಂಡದ ಬೌಲಿಂಗ್ ವಿಭಾಗವನ್ನು ಆಯ್ಕೆ ಮಾಡುವುದೇ ನಾಯಕ ದಿನೇಶ್ ಚಾಂಡಿಮಲ್​ಗೆ ಸವಾಲಾಗಲಿದೆ. ದಿಲ್ರುವಾನ್ ಪೆರೇರಾ ಬಹುಶಃ ಸ್ಥಾನ ಪಡೆಯಲಿದ್ದಾರೆ. ವೇಗದ ಬೌಲಿಂಗ್ ವಿಭಾಗಕ್ಕೆ ಲಹಿರು ಕುಮಾರ ಮತ್ತು ವಿಶ್ವ ಫೆರ್ನಾಂಡೋ ಮುಖ್ಯ ಆಯ್ಕೆಯಾಗಲಿದ್ದಾರೆ. ವೇಗದ ಬೌಲಿಂಗ್​ಗೆ ಪಿಚ್ ಅಲ್ಪ ನೆರವು ನೀಡಲಿ ರುವ ಕಾರಣ, ಮೂರನೇ ವೇಗಿಯಾಗಿ ದುಷ್ಮಂತ ಚಾಮೀರ ಹಾಗೂ ಇದೇ ಮೈದಾನದಲ್ಲಿ ನಡೆದ ಕಳೆದ ಟೆಸ್ಟ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಲಕ್ಷನ್ ಸಂಡಕನ್ ನಡುವೆ ಪೈಪೋಟಿ ಇದೆ.

ಸಂಭಾವ್ಯ ತಂಡ: ಉಪುಲ್ ತರಂಗ, ದಿಮುತ್ ಕರುಣರತ್ನೆ, ಕುಸಲ್ ಮೆಂಡಿಸ್, ಚಾಂಡಿಮಲ್ (ನಾಯಕ), ಮ್ಯಾಥ್ಯೂಸ್, ಡಿಕ್​ವೆಲ್ಲಾ (ವಿ.ಕೀ), ಧನಂಜಯ ಡಿ ಸಿಲ್ವ, ದಿಲ್ರುವಾನ್ ಪೆರೇರಾ, ದುಷ್ಮಂತ ಚಾಮೀರ/ಸಂಡಕನ್, ವಿಶ್ವ ಫೆರ್ನಾಂಡೋ, ಲಹಿರು ಕುಮಾರ.

***

ಭಾರತ: ರವೀಂದ್ರ ಜಡೇಜಾ ಟೆಸ್ಟ್​ಗೆ ಅನರ್ಹ ಗೊಂಡಿರುವ ಕಾರಣ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಲಿದ್ದಾರೆ. ಜಡೇಜಾ ಸ್ಥಾನಕ್ಕೆ ಕುಲದೀಪ್ ಯಾದವ್ ನೇರ ಆಯ್ಕೆ ಎನಿಸಿದ್ದಾರೆ. ಇನ್ನೊಂದೆಡೆ ವೇಗದ ಬೌಲರ್ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಪಿಚ್ ವೇಗಿಗಳಿಗೆ ನೆರವೀಯುವ ಕಾರಣ, ಮೂವರು ಸ್ಪೆಷಲಿಸ್ಟ್ ವೇಗಿಗಳು ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಥವಾ 2ನೇ ಸ್ಪಿನ್ನರ್ ಸ್ಥಾನಕ್ಕೆ ಕುತ್ತು ಬೀಳುವ ನಿರೀಕ್ಷೆಯೂ ಇದೆ.

ಸಂಭಾವ್ಯ ತಂಡ: ಧವನ್, ಕೆಎಲ್ ರಾಹುಲ್, ಪೂಜಾರ, ಕೊಹ್ಲಿ (ನಾಯಕ), ರಹಾನೆ, ಅಶ್ವಿನ್, ಸಾಹ (ವಿ.ಕೀ), ಹಾರ್ದಿಕ್ ಪಾಂಡ್ಯ, ಭುವನೇಶ್ವರ್/ಉಮೇಶ್ ಯಾದವ್, ಕುಲದೀಪ್, ಮೊಹಮದ್ ಶಮಿ.

***

ಅಶೋಕವನದಲ್ಲಿ ಟೀಮ್ ಇಂಡಿಯಾ!

3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಪ್ರಮುಖ ಆಟಗಾರರು, ಸೀತಾ ಎಲಿಯಾದಲ್ಲಿರುವ ಅಶೋಕವನಕ್ಕೆ (ಅಶೋಕ ವಟಿಕಾ) ಭೇಟಿ ನೀಡಿದರು. ಹಿಂದು ಧಾರ್ವಿುಕ ಗ್ರಂಥ ರಾಮಾಯಣದಲ್ಲಿ ಬರುವ ಪ್ರಕಾರ, ಸೀತಾ ಮಾತೆಯನ್ನು ಅಪಹರಿಸಿದ ರಾವಣ ಇದೇ ವನದಲ್ಲಿ ಕೂಡಿಟ್ಟಿದ್ದ. ಸೀತಾ ಎಲಿಯಾದಲ್ಲಿ ಸೀತಾ ಮಾತೆಯ ದೇವಸ್ಥಾನ ಕೂಡ ಇದ್ದು, ಅಲ್ಲಿಯೇ ಇರುವ ಉದ್ಯಾನವನ ಇದಾಗಿದೆ. ಈ ಉದ್ಯಾನವನದಲ್ಲಿ ಹನುಮಂತನ ದೈತ್ಯ ಹೆಜ್ಜೆಯ ಗುರುತೂ ಇದೆ. ಈ ಹೆಜ್ಜೆಯ ಎದುರು ನಿಂತು ಉಮೇಶ್ ಹಾಗೂ ತಾನ್ಯಾ ಯಾದವ್ ಫೋಟೋಗೆ ಪೋಸ್ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top