ದೇಶದಲ್ಲಿ ಮೊಬೈಲ್ ಸೇವೆ ನೀಡುತ್ತಿರುವ ಖಾಸಗಿ ದೂರಸಂಪರ್ಕ ಸಂಸ್ಥೆಗಳಾದ ವೊಡಾಫೋನ್ ಮತ್ತು ಐಡಿಯಾ ಪರಸ್ಪರ ವಿಲೀನಕ್ಕೆ ಸಮ್ಮತಿ ಸೂಚಿಸುವುದರೊಂದಿಗೆ ದೇಶದ ಅತಿದೊಡ್ಡ ದೂರಸಂಪರ್ಕ ಕಂಪನಿಯಾಗಿ ಹೊರಹೊಮ್ಮಿದೆ. ವೊಡಾಫೋನ್ ಸಮೂಹದ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ವೊಡಾಫೋನ್ ಮೊಬೈಲ್ ಸರ್ವೀಸಸ್ ಲಿಮಿಟೆಡ್ ಜತೆಗೆ ಐಡಿಯಾ ಸೆಲ್ಯುಲರ್ ವಿಲೀನ ಒಪ್ಪಂದಕ್ಕೆ ಸೋಮವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ದೊರಕಿದೆ. ಒಟ್ಟಾರೆ ವಿಲೀನ ಪ್ರಕ್ರಿಯೆ ಪೂರ್ಣವಾಗಲು 24 ತಿಂಗಳುಗಳು ಬೇಕು.
ಪ್ರಸ್ತುತ ಚಂದಾದಾರರ ಸಂಖ್ಯೆಯಲ್ಲಿ ಭಾರ್ತಿ ಏರ್ಟೆಲ್ ದೇಶದಲ್ಲೇ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಆದರೆ ಐಡಿಯಾ ಮತ್ತು ವೊಡಾಫೋನ್ ವಿಲೀನದ ಬಳಿಕ ಅದು 40 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿಯಾಗಿ ಹೊರಹೊಮ್ಮಲಿದೆ. ದೇಶದ ಪ್ರತಿ ಮೂವರು ಮೊಬೈಲ್ ಚಂದಾದಾರರಲ್ಲಿ ಓರ್ವ ಐಡಿಯಾ-ವೊಡಾಫೋನ್ ಸಂಸ್ಥೆಯ ಗ್ರಾಹಕರಾಗಿರುತ್ತಾರೆ.
ಪ್ರಸಕ್ತ ವೊಡಾಫೋನ್ ಶೇಕಡ 45.1, ಐಡಿಯಾ ಶೇ. 26 ಪಾಲು ಮಾರುಕಟ್ಟೆ ಪಾಲು ಹೊಂದಲಿವೆ. ವಿಲೀನ ಪ್ರಕ್ರಿಯೆ ಪೂರ್ಣವಾದ ಬಳಿಕ ಐಡಿಯಾ ಮತ್ತಷ್ಟು ಸಂಖ್ಯೆಯ ಷೇರುಗಳನ್ನು ಹೊಂದಲಿದೆ. ವಿಲೀನದಿಂದಾಗಿ ಈ ಸಂಸ್ಥೆಯು ಒಟ್ಟು 80,000 ಕೋಟಿ ರೂ. ಆದಾಯ ಹೊಂದಲಿರುವ ಸಂಸ್ಥೆಯಾಗಲಿದೆ.
ದರ ಸಮರಕ್ಕೆ ದಾರಿ
ಎರಡು ಸಂಸ್ಥೆಗಳ ವಿಲೀನದಿಂದ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರ ಏರ್ಪಡಲಿದ್ದು, ರಿಲಯನ್ಸ್ ಜಿಯೋದ ಜತೆಗಿನ 4ಜಿ ಡೇಟಾ ದರ, ಕರೆ ದರ ಇತ್ಯಾದಿ ಕೊಡುಗೆಗಳ ಸಮರದಲ್ಲಿದ್ದ ಕಂಪನಿಗಳ ಮಧ್ಯೆ ಮತ್ತಷ್ಟು ಸ್ಪರ್ಧೆ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ರಿಲಯನ್ಸ್ ಜಿಯೋ 4ಜಿ ಪ್ರವೇಶದ ಬಳಿಕ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹಿತ ಪ್ರಮುಖ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ದರ ಕಡಿತ ಮತ್ತು ಹೆಚ್ಚುವರಿ ಡೇಟಾ ಕೊಡುಗೆ ನೀಡಿವೆ.
ಅತಿದೊಡ್ಡ ಸಂಸ್ಥೆ
ಟ್ರಾಯ್ ಅಂಕಿಅಂಶಗಳ ಪ್ರಕಾರ, ಏರ್ಟೆಲ್ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ. 23.58 ಪಾಲು ಹೊಂದಿದೆ. 26.58 ಕೋಟಿ ಏರ್ಟೆಲ್ ಗ್ರಾಹಕರಿದ್ದಾರೆ. ಎರಡನೇ ಸ್ಥಾನದಲ್ಲಿರುವ ವೊಡಾಫೋನ್ 20.46 ಕೋಟಿ ಗ್ರಾಹಕರೊಂದಿಗೆ ಶೇ. 18.16 ಮಾರುಕಟ್ಟೆ ಪಾಲು ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಐಡಿಯಾ 19.05 ಕೋಟಿ ಗ್ರಾಹಕರನ್ನು ಹೊಂದಿದ್ದು, ಶೇ. 16.9 ಪಾಲು ಹೊಂದಿದೆ. ವೊಡಾಫೋನ್ ಮಾರುಕಟ್ಟೆ ಮೌಲ್ಯ 82,800 ಕೋಟಿ ರೂ.ಗಳಾಗಿದ್ದರೆ, ಐಡಿಯಾ 72,200 ಕೋಟಿ ರೂ. ಮೌಲ್ಯ ಹೊಂದಿದೆ. ವಿಲೀನದ ಬಳಿಕ 80,000 ಕೋಟಿ ರೂ. ಆದಾಯ ಹೊಂದುವ ಸಂಸ್ಥೆಗೆ 39.5 ಕೋಟಿ ಗ್ರಾಹಕರು ಸೇರ್ಪಡೆಯಾಗುವುದರಿಂದ ಅತಿದೊಡ್ಡ ಸಂಸ್ಥೆಯಾಗಲಿದೆ.
ಸಂಸ್ಥೆಗೆ ಅಧಿಕ ಆದಾಯ ನಿರೀಕ್ಷೆ
ವಿಲೀನ ಪ್ರಕ್ರಿಯೆಯ ಬಳಿಕ ಎರಡೂ ಕಂಪನಿಗಳ ಮಧ್ಯೆ ತಂತ್ರಜ್ಞಾನ, ಸ್ಪೆಕ್ಟ್ರಂ ಮತ್ತು ಸೌಕರ್ಯಗಳ ಹಂಚಿಕೆಯಾಗಲಿದೆ. ಇದರಿಂದ ಸಂಸ್ಥೆಗೆ ನಿರ್ವಹಣಾ ವೆಚ್ಚದಲ್ಲಿ ಉಳಿತಾಯವಾಗಲಿದೆ. ವೆಚ್ಚ ಕಡಿತದಿಂದಾಗಿ ಉಭಯ ಸಂಸ್ಥೆಗಳ ಆದಾಯ ಏರಿಕೆಯಾಗಲಿದೆ. ನೆಟ್ವರ್ಕ್ ಮತ್ತು ಮಾರುಕಟ್ಟೆ ವಿಸ್ತರಣೆ, ವೆಚ್ಚಗಳು, ಜಾಹೀರಾತು ಸಹಿತ ಹಲವು ಕ್ಷೇತ್ರಗಳಲ್ಲಿ ವೆಚ್ಚ ಇಳಿಕೆಯಾಗುವುದರಿಂದ ಆದಾಯ ಏರಿಕೆ ನಿರೀಕ್ಷಿಸಲಾಗಿದೆ.
ವೊಡಾಫೋನ್ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ಐಡಿಯಾ ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿದೆ. ಉಭಯ ಕಂಪನಿಗಳ ವಿಲೀನದ ಬಳಿಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಅತ್ಯಧಿಕ ಸಂಖ್ಯೆಯ ಗ್ರಾಹಕರನ್ನು ಸಂಸ್ಥೆ ಹೊಂದಲಿದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಚಂದಾದಾರರ ಸಂಖ್ಯೆಯಲ್ಲಿ ಸಮತೋಲನ ಸಾಧ್ಯವಾಗುತ್ತದೆ. ಗುಣಮಟ್ಟದ ಸೇವೆ ಮತ್ತು ನೆಟ್ವರ್ಕ್ ಗ್ರಾಹಕರಿಗೆ ಲಭ್ಯವಾಗಲಿದೆ.
ವಿಲೀನದ ಬಳಿಕ ಉಭಯ ಕಂಪನಿಗಳು ಹೊಂದುವ ಹಕ್ಕುಗಳೇನು?
ಐಡಿಯಾ ಪ್ರಮೋಟರ್ಸ್ ಮತ್ತು ವೊಡಾಫೋನ್ ತಲಾ ಮೂವರು ನಿರ್ದೇಶಕರನ್ನು ನಾಮನಿರ್ದೇಶನ ಮಾಡುವ ಹಕ್ಕು ಹೊಂದಿವೆ. ಆದರೆ ಚೇರ್ಮನ್ ನೇಮಕ ಅಧಿಕಾರ ಐಡಿಯಾಗಿದ್ದು, ಕುಮಾರ ಮಂಗಲಂ ಬಿರ್ಲಾ ಚೇರ್ಮನ್ ಆಗಿರುತ್ತಾರೆ. ಕಂಪನಿಗೆ ಸಿಎಫ್ಒ ನೇಮಕವನ್ನು ವೊಡಾಫೋನ್ ಮಾಡಲಿದೆ. ವಿಲೀನಕ್ಕೆ ಸೆಬಿ, ಟೆಲಿಕಾಂ ಇಲಾಖೆ ಮತ್ತು ಆರ್ಬಿಐ ಸಹಿತ ಪ್ರಮುಖ ಹಲವು ಸಂಸ್ಥೆಗಳ ಒಪ್ಪಿಗೆ ಅಗತ್ಯವಾಗಿದೆ.
ಟ್ವಿಟರ್ನಲ್ಲಿ ಟ್ರೆಂಡ್
ಐಡಿಯಾ-ವೊಡಾಫೋನ್ ವಿಲೀನ ವಿಚಾರ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಯಿತು. ಕೆಲವರು ಮುಂದೆ ಕಂಪನಿಗೆ ಇಡಬಹುದಾದ ಬ್ರಾಂಡ್ ಮತ್ತು ಹೆಸರಿನ ಬಗೆಗೆ ಟ್ರೋಲ್ ಮಾಡುತ್ತಿದ್ದರೆ, ಮತ್ತೆ ಕೆಲವರು ಉಭಯ ಕಂಪನಿಗಳ ಬ್ರಾಂಡ್ ಅಂಬಾಸಿಡರ್ಗಳಾದ ಅಭಿಷೇಕ್ ಬಚ್ಚನ್ ಮತ್ತು ಪಗ್ ನಾಯಿಯ ಬಗೆಗೆ ಜೋಕ್ ಮಾಡಿದರು.
ಉದ್ಯೋಗಿಗಳಿಗೆ ಸಮಸ್ಯೆಯಿಲ್ಲ
ವಿಲೀನದ ಬಳಿಕ ಉಭಯ ಸಂಸ್ಥೆಗಳಲ್ಲಿನ ಕೆಲ ಉದ್ಯೋಗಿಗಳ ಸ್ಥಾನಕ್ಕೆ ಕುತ್ತುಂಟಾಗಬಹುದು ಎಂಬ ಮಾತು ಕೇಳಿಬಂದಿರುವ ಹಿನ್ನೆಲೆಯಲ್ಲಿ ವೊಡಾಫೋನ್ ಸಮೂಹದ ಸಿಇಒ ವಿಟ್ಟೋರಿಯೊ ಕೊಲಾವೊ ಭಾರತದ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದಿದ್ದಾರೆ. ವಿಲೀನದ ಯಶಸ್ಸಿನಿಂದ ಭಾರತೀಯ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಕೊಲಾವೊ ಭಾರತೀಯ ಉದ್ಯೋಗಿಗಳಿಗೆ ಕಳುಹಿಸಿದ ಇ ಮೇಲ್ನಲ್ಲಿ ತಿಳಿಸಿದ್ದಾರೆ. ಜತೆಗೆ ಈ ವಿಲೀನವು ದೇಶದಲ್ಲಿ ಉಭಯ ನೆಟ್ವರ್ಕ್ಗಳ 4ಜಿ, 4ಜಿ ಪ್ಲಸ್ ಮತ್ತು 5ಜಿ ಜಾಲವನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆಯೂ ನಡೆದಿತ್ತು ವಿಲೀನ
ಇತ್ತೀಚಿಗೆ ಭಾರ್ತಿ ಏರ್ಟೆಲ್ ಟೆಲಿನೋರ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತ್ತು. ರಿಲಯನ್ಸ್ ಕಮ್ಯೂನಿಕೇಶನ್ ಏರ್ಸೆಲ್ ಜತೆ ಕೈಜೋಡಿಸಿತ್ತು. ಇದೀಗ ಟಾಟಾ ಟೆಲಿಸರ್ವೀಸಸ್ ಜತೆ ಕೈಜೋಡಿಸುವ ಸಂಬಂಧದ ಮಾತುಕತೆಯೂ ಪ್ರಗತಿಯಲ್ಲಿದೆ. ದೇಶದ ಮಹತ್ವದ ಡಿಜಿಟಲ್ ಇಂಡಿಯಾ ಯೋಜನೆಗೆ ಐಡಿಯಾ-ವೊಡಾಫೋನ್ ವಿಲೀನ ಹೆಚ್ಚು ಸಹಕಾರಿಯಾಗಲಿದೆ. ಅಲ್ಲದೆ ಹೆಚ್ಚು ಮೌಲ್ಯಯುತ ನೆಟ್ವರ್ಕ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ. ದೇಶದ ಎಲ್ಲ ಭಾಗಗಳ ಜನತೆಗೆ ಉತ್ತಮ ನೆಟ್ವರ್ಕ್ ಹಾಗೂ ಮೊಬೈಲ್ ಸೇವೆ ನೀಡಲು ವಿಲೀನ ಬದ್ಧವಾಗಿದೆ ಎಂದು ವೊಡಾಫೋನ್ ಸಿಇಒ ವಿಟ್ಟೋರಿಯೊ ಕೊಲಾವೊ ತಿಳಿಸಿದ್ದಾರೆ.