Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಎವರ್​ಗ್ರೀನ್ ವಿದ್ಯಾರ್ಥಿನಿ

Friday, 19.05.2017, 3:05 AM       No Comments

ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್​ನ ‘ಗಾಳಿಪಟ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿ ಗಮನಸೆಳೆದವರು ಭಾವನಾ. ಅದರಲ್ಲಿ ಅವರ ಅಭಿನಯದ ‘ಪಾವನಿ’ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅವರ ಬಣ್ಣದ ಬದುಕಿಗೆ ಹತ್ತನೇ ವರ್ಷ. ಶೀಘ್ರದಲ್ಲೇ ಅವರ ಅಭಿನಯದ ನಾಲ್ಕು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗಲಿವೆ. ಆ ಪೈಕಿ ‘ಟೈಗರ್ ಗಲ್ಲಿ’ ಚಿತ್ರ ಹಾಗೂ ಸಿನಿಜೀವನದ ಬಗ್ಗೆ ಅವರು ಹಂಚಿಕೊಂಡಿರುವ ಅನಿಸಿಕೆ-ಅನುಭವಗಳನ್ನು ನಿಮ್ಮ ಮುಂದಿಟ್ಟಿದೆ ಇಂದಿನ ಸಿನಿವಾಣಿ.

 ‘ಟೈಗರ್ ಗಲ್ಲಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಇಲ್ಲಿ ನಾನು ಹಾಗೂ ರೋಶ್ನಿ ಇಬ್ಬರೂ ನಾಯಕಿಯರು. ಒಬ್ಬರು ಹೆಚ್ಚು ಇನ್ನೊಬ್ಬರು ಕಡಿಮೆ ಅಂತೇನಿಲ್ಲ, ಎಲ್ಲ ಪಾತ್ರಗಳಿಗೂ ಈ ಚಿತ್ರದಲ್ಲಿ ಒಳ್ಳೆಯ ಸ್ಕೋಪ್ ಇದೆ. ಅದರಲ್ಲೂ ನನ್ನದು ವಿಭಿನ್ನ ಪಾತ್ರ. ಗ್ಲಾಮರಸ್ ಪಾತ್ರ ಎಂಬುದನ್ನು ಬಿಟ್ಟರೆ ಆ ಬಗ್ಗೆ ಈಗಲೇ ಏನೂ ಹೇಳುವ ಹಾಗಿಲ್ಲ. ‘ಗಾಳಿಪಟ’ದಲ್ಲಿ ನನ್ನನ್ನು ಪಾವನಿಯಾಗಿ ನೋಡಿದ್ದವರಿಗೆ ‘ಭಾವನಾ ಹೀಗೂ ಅಭಿನಯಿಸುತ್ತಾರಾ’ ಎಂಬ ಅಚ್ಚರಿ ಹುಟ್ಟಿಸುವಂಥ ಪಾತ್ರ ಎಂದಷ್ಟೇ ಹೇಳಬಲ್ಲೆ.

‘ಡೆಡ್ಲಿ’ ನಿರ್ದೇಶಕ ರವಿ ಶ್ರೀವತ್ಸ ಅವರ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದೀರಿ, ಹೇಗಿತ್ತು ಶೂಟಿಂಗ್ ಅನುಭವ?

ಹೌದು.. ಅವರ ನಿರ್ದೇಶನದ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದು ಪ್ರಾರಂಭದಲ್ಲಿ ಕಷ್ಟ ಎನಿಸಿತು. ಏಕೆಂದರೆ ನನ್ನ ಕಂಫರ್ಟ್ ಜೋನ್​ಗಿಂತಲೂ ಹೊರಗೆ ಹೋಗಿ ನಟಿಸಬೇಕಾಗಿದ್ದ ಪಾತ್ರವಿದು. ಕನ್ನಡದಲ್ಲಿ ಈ ಥರದ ಪಾತ್ರ ತುಂಬ ಕಷ್ಟ. ಆದರೆ ರವಿ ಶ್ರೀವತ್ಸ ಅವರು ಕಥೆ ಹೇಳುವಾಗಲೇ ಪಾತ್ರ ಹೀಗಿರುತ್ತೆ ಎಂದು ಮನದಟ್ಟಾಗಿಸಿದ್ದರು. ಜತೆಗೆ ಶೂಟಿಂಗ್ ಮಾಡುವ ಮುನ್ನ ಪ್ರಿಪೇರ್ ಮಾಡುತ್ತಿದ್ದರು. ಅವರು ಸಿನಿಮಾಗಾಗಿ ಪ್ರಾಣ ಕೊಡುವಷ್ಟು ಡೆಡಿಕೇಟೆಡ್ ನಿರ್ದೇಶಕ, ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ.

‘ಟೈಗರ್ ಗಲ್ಲಿ’ ಬಗ್ಗೆ ನಿಮ್ಮ ನಿರೀಕ್ಷೆ ಹೇಗಿದೆ?

ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆ ಆಗಿವೆ. ಒಳ್ಳೆಯ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ನನಗೂ ಈ ಚಿತ್ರದಲ್ಲಿ ಒಂದೊಳ್ಳೆಯ ಹಾಡು ಇದೆ. ಮೂಲತಃ ನಾನು ನೃತ್ಯಗಾತಿ, ನನ್ನ ಪಾತ್ರವೂ ವಿಭಿನ್ನವಾಗಿದೆ. ಜತೆಗೆ ನೀನಾಸಂ ಸತೀಶ್ ಅವರು ಮೊಟ್ಟಮೊದಲ ಬಾರಿಗೆ ಸಾಹಸಮಯ ಪಾತ್ರದಲ್ಲಿ ಕಾಣಿಸಿದ್ದಾರೆ. ಹಾಗಾಗಿ ಎಲ್ಲರಿಗೂ ನಿರೀಕ್ಷೆ ಸಹಜ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರ ಗೆಲ್ಲಬೇಕು. ಒಂದು ಸಿನಿಮಾ ಗೆದ್ದಾಗಲೇ ಎಲ್ಲರಿಗೂ ಯಶಸ್ಸು, ನಾನು ಅದೇ ನಿರೀಕ್ಷೆಯಲ್ಲಿದ್ದೇನೆ.

ಇಷ್ಟು ವರ್ಷಗಳ ಬಣ್ಣದ ಬದುಕಿನಿಂದ ನೀವು ಕಲಿತ ಪಾಠವೇನು?

ಇಲ್ಲಿ ಕಲಿಕೆಯ ಪ್ರಕ್ರಿಯೆ ಮುಗಿಯುವಂಥದ್ದಲ್ಲ. ನಾನು ಸದಾ ವಿದ್ಯಾರ್ಥಿನಿಯಾಗಿಯೇ ಇರುತ್ತೇನೆ. ಆದರೆ ಒಬ್ಬ ನಟಿಯಾಗಿ ಹೇಗಿರಬೇಕು ಎಂಬುದನ್ನು ಚೆನ್ನಾಗಿ ಕಲಿತಿದ್ದೇನೆ. ಇಲ್ಲಿ ಎಲ್ಲರೂ ಸಮನ್ವಯತೆಯಿಂದ ನಗುನಗುತ್ತ ಖುಷಿಯಾಗಿ ಕೆಲಸ ಮಾಡಿದರಷ್ಟೇ ಒಂದು ಸಿನಿಮಾ ಸಂಪೂರ್ಣವಾಗಿ ಸುಂದರವಾಗಿ ಮೂಡಿಬರಲು ಸಾಧ್ಯ ಎಂಬುದನ್ನು ಕಲಿತೆ.

ಈ ಸುದೀರ್ಘ ಸಿನಿಜೀವನದಲ್ಲಿನ ಸದಾ ಸ್ಮರಣೀಯ ಸಿಹಿ ಹಾಗೂ ಕಹಿ ಘಟನೆ ಯಾವುದು?

‘ಗಾಳಿಪಟ’ ಚಿತ್ರವೇ ನನಗೆ ಅವಿಸ್ಮರಣೀಯ ಸಿಹಿನೆನಪು. ಯಾವಾಗಲೂ ಮೊದಲ ಅನುಭವವೇ ಹೆಚ್ಚು ಆಪ್ತವಾಗಿರುತ್ತದೆಯಂತೆ. ಆ ಸಿನಿಮಾಕ್ಕಾಗಿ ಆಡಿಷನ್ ಹೋಗಿದ್ದು ಎಂದೆಂದಿಗೂ ಮರೆಯಲಾಗದ ಸಿಹಿ ನೆನಪು. ಇನ್ನು ಕಹಿ ಘಟನೆಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ, ಅವನ್ನು ನೆನಪಿಸಿಕೊಳ್ಳುವುದೂ ಇಲ್ಲ.

ನೀವು ‘ಗಾಳಿಪಟ’ ಹಾರಿಸಿ ಇದೀಗ 10ನೇ ವರ್ಷ, ಇದುವರೆಗಿನ ಪಯಣ ಹೇಗಿತ್ತು?

5-10 ವರ್ಷಗಳು ಎಂಬುದೆಲ್ಲ ಲೆಕ್ಕಕ್ಕೇ ಬರುವುದಿಲ್ಲ. ಏಕೆಂದರೆ, ನಾನು ಸಾಧನೆಯನ್ನು ವರ್ಷಗಳಿಂದ ಅಳೆಯುವುದಿಲ್ಲ. ನಾನು ಸಾಧಿಸುವುದು ಇನ್ನೂ ಸಾಕಷ್ಟಿದೆ, ಸಾಧಿಸುತ್ತಲೇ ಇರಬೇಕು. ಎಲ್ಲ ಕ್ಷೇತ್ರಗಳಲ್ಲಿರುವಂತೆ ಇಲ್ಲಿಯೂ ಸಾಕಷ್ಟು ಏಳುಬೀಳುಗಳಿರುತ್ತವೆ. ಒಟ್ಟಾರೆಯಾಗಿ ಯಾವುದರ ಬಗ್ಗೆಯೂ ಈಗ ನೋ ರಿಗ್ರೆಟ್ಸ್.

ನಿಮ್ಮ ಮುಂದಿನ ಯೋಜನೆಗಳು ಯಾವುವು?

ಸದ್ಯ ನಾಲ್ಕು ಚಿತ್ರಗಳು ಬಿಡುಗಡೆ ಆಗಬೇಕಿವೆ. ಇನ್ನು ಎರಡು ಚಿತ್ರಗಳು ಮಾತುಕತೆಯ ಹಂತದಲ್ಲಿವೆ. ಸದ್ಯ ನನ್ನ ಗಮನವೆಲ್ಲ ಈ ಚಿತ್ರಗಳ ಬಗ್ಗೆಯಷ್ಟೇ. ಅವುಗಳ ಬಳಿಕವಷ್ಟೇ ಮುಂದೇನು ಎಂಬುದನ್ನು ಯೋಚಿಸುವೆ.

ಸದ್ಯ ಯಾವ್ಯಾವ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಿ?

‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ರಘು ಮುಖರ್ಜಿಗೆ ನಾಯಕಿಯಾಗಿ ಅಭಿನಯಿಸಿದ್ದೇನೆ. ಇನ್ನು ಶರಣ್ ಅಭಿನಯದ ‘ಸತ್ಯ ಹರಿಶ್ಚಂದ್ರ’, ಪ್ರೇಮ್ ನಟನೆಯ ‘ಗಾಂಧಿಗಿರಿ’ಯಲ್ಲೂ ಅಭಿನಯಿಸುತ್ತಿದ್ದೇನೆ, ಅಲ್ಲದೆ, ಇನ್ನೆರಡು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ. ಕನ್ನಡದಲ್ಲೇ ಈಗ ಹೇರಳ ಅವಕಾಶಗಳು ಬರುತ್ತಿವೆ. ಹಾಗಾಗಿ ಬೇರೆ ಚಿತ್ರರಂಗದತ್ತ ಗಮನ ಹರಿಸುತ್ತಿಲ್ಲ.

 

Leave a Reply

Your email address will not be published. Required fields are marked *

Back To Top