Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಎಲ್ಲದರಲ್ಲೂ ಒಳ್ಳೆಯದನ್ನು ಕಂಡರೆ ನೆಮ್ಮದಿ

Saturday, 24.12.2016, 4:00 AM       No Comments

ನಮ್ಮ ಸುಪ್ತಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ ಗೊತ್ತಿಲ್ಲ. ಆದರೆ ಅನವಶ್ಯಕವಾಗಿ ಯಾರಮೇಲೋ ಅಸಹನೆಯನ್ನು ಹೊರ ಮನಸ್ಸು ಅನುಭವಿಸುತ್ತಿರುತ್ತದೆ. ಅನೇಕ ಬಾರಿ ಇದು ಅಕಾರಣವಾಗಿರುತ್ತದೆ. ನಾವು ನಮ್ಮನ್ನು ಸಮರ್ಥಿಸಿಕೊಳ್ಳಲು ಅದಕ್ಕೆ ಇಲ್ಲದ ಕಾರಣಗಳನ್ನು ಕೊಟ್ಟುಕೊಳ್ಳುತ್ತೇವೆ.

  •  ಶಾಂತಾ ನಾಗರಾಜ್

ನಮ್ಮ ಒಳನೋಟವು ಯಾವುದಾಗಿರುತ್ತದೋ ಅದೇ ನಮ್ಮ ಹೊರನೋಟವೂ ಆಗಿರುತ್ತದೆ. ಇದನ್ನೇ ರಾಷ್ಟ್ರಕವಿ ಕುವೆಂಪುರವರು ‘ದೃಷ್ಟಿಯಂತೆ ಸೃಷ್ಟಿ’ ಎಂದರು! ಇದನ್ನೇ ಮನೋವಿಜ್ಞಾನವು ‘ಸಕಾರಾತ್ಮಕ ಮನಸ್ಸಿನ ನೋಟ ಸಕಾರಾತ್ಮಕ’ ಎನ್ನುತ್ತದೆ. ಏನಿದು ಹೀಗೆಂದರೆ? ಎನ್ನುವ ಪ್ರಶ್ನೆಹುಟ್ಟುವ ಮೊದಲೇ ಉದಾಹರಣೆಗಳನ್ನು ಕೊಟ್ಟುಬಿಟ್ಟರೆ ಎಲ್ಲವೂ ಸರಳವೇ ಅನಿಸುತ್ತದೆ.

ಎರಡು ಕ್ಷಣ ಮಹಾಭಾರತ ಕಾಲಕ್ಕೆ ಹೋಗೋಣ. ಕೌರವರಿಗೂ ಪಾಂಡವರಿಗೂ ಯುದ್ಧವಾಗುವುದು ನಿಶ್ಚಯವೇ ಆಗಿದೆ. ಯಾವ ಯಾವ ಸಾಮಂತರಾಜರು ಯಾರ್ಯಾರ ಪಕ್ಷದಲ್ಲಿದ್ದು ಹೋರಾಡಬೇಕು ಎನ್ನುವುದನ್ನು ನಿಶ್ಚಯಿಸಲು ಸಭೆ ಕರೆಯಲಾಗಿದೆ. ಮಾತುಗಳು ಇನ್ನೂ ಪ್ರಾರಂಭವಾಗಿಲ್ಲ, ಆಗ ಧರ್ಮರಾಯನ ಮನದಲ್ಲಿ ಇಂಥ ಭಾವಗಳು ಮೂಡುತ್ತಿವೆ- ‘‘ಭೀಷ್ಮ ನಮ್ಮ ಕುಲದ ಹಿರಿಯ. ಆತ ನಮ್ಮ ಪಕ್ಷಕ್ಕೇ ಒಲವು ತೋರುತ್ತಾನೆ. ದ್ರೋಣ ನಮ್ಮ ಗುರು. ನಮ್ಮನ್ನು ಬಿಟ್ಟುಕೊಡುವುದಿಲ್ಲ. ವಿದುರ ನಮ್ಮ ಹಿತೈಷಿ, ಖಂಡಿತಾ ಅವನೂ ನಮ್ಮ ಪಕ್ಷವೇ. ಅಶ್ವತ್ಥಾಮ ನಮ್ಮ ಸಹಪಾಠಿ, ಅವನೇಕೆ ನಮ್ಮನ್ನು ವಿರೋಧಿಸಿಯಾನು?’’ ಹೀಗೇ ಒಬ್ಬೊಬ್ಬರ ಮುಖ ನೋಡುತ್ತಾ ‘ಇವರೂ ನಮ್ಮ ಹಿತೈಷಿಯೇ, ಇವರೂ ನಮ್ಮವರೇ’ ಎಂದುಕೊಳ್ಳುತ್ತಾ ಕಡೆಗೆ ಅವನ ದೃಷ್ಟಿ ದುರ್ಯೋಧನನ ಮೇಲೆ ಬೀಳುತ್ತದೆ. ಆಗಲೂ ಅವನಿಗೆನಿಸುತ್ತದೆಯಂತೆ ‘ಛೇ ಪಾಪ ಸುಮ್ಮನೇ ಮಗುವಿನ ಹಾಗೆ ಹಠ ಮಾಡುತ್ತಿದ್ದಾನೆ. ದೊಡ್ಡವರೆಲ್ಲ ಹೇಳಿದರೆ ಅವನೇ ಯುದ್ಧ ಬೇಡವೆಂದಾನು!!’’ ಅದೇ ಕ್ಷಣದಲ್ಲಿ ದುರ್ಯೋಧನನ ಮನದಲ್ಲೂ ಭಾವನೆಗಳು ಉಕ್ಕುತ್ತಿವೆ. ಅವನೆಂದುಕೊಳ್ಳುತ್ತಾನೆ-‘‘ಈ ಭೀಷ್ಮನನ್ನು ನಂಬಬಾರದು, ಇರುವುದು ಮಾತ್ರ ನಮ್ಮ ಜೊತೆಗೆ, ಆದರೆ ಸದಾ ಪಾಂಡವರ ಪಕ್ಷಪಾತಿಯಾಗಿರುತ್ತಾನೆ. ಈ ದ್ರೋಣನನ್ನು ನಂಬಬಾರದು, ಹೆಸರಿಗೆ ಗುರು ಅಷ್ಟೆ. ಅರ್ಜುನನೆಂದರೆ ಪ್ರಾಣಬಿಡುತ್ತಾನೆ. ಈ ವಿದುರನನ್ನು ನಂಬಬಾರದು, ನಮ್ಮಪ್ಪನ ತಲೆ ಕೆಡಿಸಿ ಪಾಂಡವರಿಗೆ ರಾಜ್ಯ ಕೊಡಿಸಿದವನು’’. ಹೀಗೇ ಎಲ್ಲರನ್ನೂ ಹಿಯಾಳಿಸುತ್ತಾ, ಕಡೆಗೆ ಆಪ್ತಸ್ನೇಹಿತನೆಂದು ತಾನೇ ಕರೆವ ಕರ್ಣ, ತನ್ನವರೇ ಆದ ತಮ್ಮಂದಿರು, ಎಲ್ಲರೂ ಯಾವಾಗ ಬೇಕಾದರೂ ತನಗೆ ಕೇಡನ್ನು ಬಗೆಯಬಹುದು ಎಂದುಕೊಳ್ಳುತ್ತಾನಂತೆ!

ನಮ್ಮೆಲ್ಲರಲ್ಲೂ ಹೀಗೆ ಧರ್ಮರಾಯನ ದೃಷ್ಟಿಯೂ, ದುರ್ಯೋಧನನ ದೃಷ್ಟಿಯೂ ಸದಾ ಜಾಗೃತವೇ ಆಗಿರುತ್ತದೆ. ನಮ್ಮ ಸುಪ್ತಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ ಗೊತ್ತಿಲ್ಲ. ಆದರೆ ಅನವಶ್ಯಕವಾಗಿ ಯಾರಮೇಲೋ ಅಸಹನೆಯನ್ನು ಹೊರ ಮನಸ್ಸು ಅನುಭವಿಸುತ್ತಿರುತ್ತದೆ. ಅನೇಕ ಬಾರಿ ಇದು ಅಕಾರಣವಾಗಿರುತ್ತದೆ. ನಾವು ನಮ್ಮನ್ನು ಸಮರ್ಥಿಸಿಕೊಳ್ಳಲು ಅದಕ್ಕೆ ಇಲ್ಲದ ಕಾರಣಗಳನ್ನು ಕೊಟ್ಟುಕೊಳ್ಳುತ್ತೇವೆ. ಒಮ್ಮೊಮ್ಮೆ ಹೀಗೆ ಸಮರ್ಥಿಸಿಕೊಳ್ಳಲು ಕಾರಣವೂ ಸಿಗುವುದಿಲ್ಲ. ಆಗ ನಿಜವಾಗಿಯೂ ಗೊಂದಲಕ್ಕೆ ಒಳಗಾಗುತ್ತೇವೆ. ಇದು ಹೇಗೆ ಎಂದರೆ ದಿಣ್ಣೆಯ ಮೇಲೆ ಹರಿಯುವ ನೀರನ್ನು ಕುಡಿಯುತ್ತಿರುವ ತೋಳ, ದಿಣ್ಣೆಯ ಕೆಳಗೆ ಹರಿಯುತ್ತಿರುವ ನೀರನ್ನು ಕುಡಿಯುತ್ತಿರುವ ಕುರಿಮರಿಯನ್ನು ‘ನಿನ್ನ ಎಂಜಲನ್ನು ನಾನು ಕುಡಿಯಬೇಕಾ?’ ಎಂದು (ತೋಳ ಕುರಿಮರಿಯ ಕಥೆಯಲ್ಲಿ ) ಗದರಿದಂತೆ!!

ಒಮ್ಮೆ ಹೀಗಾಯಿತು. ನನಗೆ ಹದಿನೈದೋ ಹದಿನಾರೋ ವಯಸ್ಸು. ನಮ್ಮ ಕುಟುಂಬ ಆಗತಾನೇ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ತಮ್ಮ ಮದುವೆಯಾದಾಗಿನಿಂದ ಬೆಂಗಳೂರಿನಲ್ಲೇ ವಾಸವಾಗಿದ್ದ, ನಮ್ಮ ತಾಯಿಯ ಬಾಲ್ಯದ ಗೆಳತಿ ನಮ್ಮ ವಿಳಾಸವನ್ನು ಯಾರಿಂದಲೋ ಪಡೆದು, ನಮ್ಮಮ್ಮನಿಗೆ ಪತ್ರ ಬರೆದು ನಮ್ಮ ಮನೆಗೆ ಬಂದರು. ಅವರು ಬಂದ ದೊಡ್ಡ ಕಾರು, ಅವರ ಹಿಂದೇ ಬಂದು ಹಣ್ಣು, ಸಿಹಿತಿಂಡಿಯ ಬುಟ್ಟಿಯನ್ನು ಇಟ್ಟು ಹೋದ ಅವರ ಮನೆಯಾಳು, ಗೆಳತಿಯ ಮನೆಗೆ ಬರುವಾಗಲೂ ಅವರುಟ್ಟಿದ್ದ ಗೇಣಂಚಿನ ಜರತಾರೀ ಸೀರೆ, ಕಿವಿಯಲ್ಲಿ, ಮೂಗಿನಲ್ಲಿ ಹೊಳೆಯುತ್ತಿದ್ದ ವಜ್ರಾಭರಣಗಳು, ಕುತ್ತಿಗೆ ಮತ್ತು ಕೈತುಂಬಾ ಇದ್ದ ಬಂಗಾರದ ಒಡವೆಗಳು, ಇವೆಲ್ಲ ಯಾಕೆ ನನ್ನಲ್ಲಿ ಅಸಹನೆಯನ್ನು ತುಂಬಿತೋ ನನಗಿನ್ನೂ ಅರ್ಥವಾಗಿಲ್ಲ. ಈಗೆನಿಸುತ್ತದೆ ಬಹುಶಃ ಆಕೆಯನ್ನು ನೋಡಿದ ತಕ್ಷಣವೇ ‘ಬಡಮುತೆôದೆಯಂತಿದ್ದ’ ನಮ್ಮಮ್ಮನ ಜೊತೆ ನನ್ನ ಸುಪ್ತಮನಸ್ಸು ಹೋಲಿಸಿಕೊಂಡು ವಿಚಲಿತವಾಯಿತೋ ಏನೋ. ಆದರೆ ಅದೂ ಸಹ ಬಾಲಿಶವೇ!

ನಮ್ಮ ಮನೆಯಲ್ಲಿ ಎರಡು ಕುರ್ಚಿಗಳಿದ್ದವು. ಅದರ ಮುಂದೆ ಚಾಪೆ ಹಾಸಲಾಗಿತ್ತು. ಆಕೆ ನಮ್ಮಮ್ಮನ ಜೊತೆಯಲ್ಲಿ ಚಾಪೆಯ ಮೇಲೆ ಕುಳಿತೇ ಬಹಳ ಹೊತ್ತು ಮಾತನಾಡಿದರು. ಇಬ್ಬರು ಗೆಳತಿಯರೂ ತಮ್ಮ ಬಾಲ್ಯದ ನೆನಪುಗಳ ಸವಿಯನ್ನು ಚೆನ್ನಾಗಿಯೇ ಸವಿದರು. ಆ ನಂತರ ನಮ್ಮಮ್ಮ ಗೆಳತಿಗಾಗಿ ಮೊದಲೇ ಮಾಡಿಟ್ಟಿದ್ದ ತಿಂಡಿಯ ಸರಬರಾಜು ಆಯಿತು. ಕೊನೆಗೆ ನನಗೆ ಕಾಫಿ ಮಾಡಿತರಲು ಹೇಳಿದರು. ನನಗೋ ಅಡುಗೆಮನೆಯೇ ಅಪರಿಚಿತ! ಜೊತೆಗೆ ಮನಸ್ಸು ಬೇರೆ ಅಸುಖದಲ್ಲಿ ತೊಳಲಾಡುತ್ತಿದೆ. ಅದೇ ಮನಸ್ಥಿತಿಯಲ್ಲಿ ಅರ್ಧ ಅರ್ಧ ಲೋಟ ಕೆಟ್ಟ ಕಾಫಿ ಮಾಡಿ ಅವರಿಬ್ಬರ ಮುಂದೆ ಇಟ್ಟೆ.

ಅರ್ಧ ಲೋಟ ಕಾಫಿ ನೋಡಿದ ನಮ್ಮಮ್ಮನ ಮುಖ ಕಪ್ಪಗಾಯಿತು. ಅದನ್ನು ಗಮನಿಸಿದ ಆಕೆ, ನಸುನಗುತ್ತಾ- ‘‘ನಿನ್ನ ಮಗಳು ದೊಡ್ಡ ಮನೆ ಕಟ್ಟುತ್ತಾಳೆ ಬಿಡು ಸೀತಾ’’ ಎಂದರು. ನನಗೋ ಉರಿಯುತ್ತಿದ್ದ ಗಾಯದ ಮೇಲೆ ಉಪ್ಪೆರಚಿದಂತಾಯಿತು! ‘ನನ್ನನ್ನು ಇವರು ಜಿಪುಣಿ ಎಂದು ಹಂಗಿಸುತ್ತಿದ್ದಾರೆ’ ಎಂದು ಮನದಲ್ಲೇ ಗೊಣಗಿಕೊಂಡೆ. ಆಕೆ ಮುಖದಲ್ಲಿ ಒಂದಿಷ್ಟೂ ಅಸಮಾಧಾನ ತೋರಿಸದೇ ಆ ಕೆಟ್ಟ ಕಾಫಿಯನ್ನು ನಗುತ್ತಲೇ ಕುಡಿದರು. ಅವರು ಹೊರಟುಹೋದ ಮೇಲೆ ನಮ್ಮಮ್ಮ ನನ್ನನ್ನು ಕರೆದರು. ಗಂಟು ಮುಖದಲ್ಲೇ ‘ಏನು’ ಎಂದೆ. ‘ಇಲ್ಲಿ ಬಾ ಕುಳಿತುಕೋ’ ಎಂದು ಚಾಪೆಯ ಮೇಲೆ ಕೂಡಿಸಿದರು. ತಾವೂ ಕುಳಿತು ನನ್ನ ತಲೆ ಸವರುತ್ತಾ ‘ಯಾಕೆ ಪುಟ್ಟಾ ಬೇಜಾರಿನಲ್ಲಿದ್ದೀಯೆ’ ಎಂದರು. ನನಗೆ ಕಾರಣವಿಲ್ಲದೇ ಅಳು ಬಂತು! ಸ್ವಲ್ಪ ಹೊತ್ತು ಬಿಕ್ಕಿಬಿಕ್ಕಿ ಅತ್ತೆ. ನಂತರ ಗೊತ್ತಿಲ್ಲಮ್ಮ ಯಾಕೋ ಬೇಜಾರಾಯಿತು ಎಂದೆ. ಅಷ್ಟಕ್ಕೆ ಸುಮ್ಮನಾಗಿದ್ದರೆ ಪ್ರಸಂಗ ಅಲ್ಲಿಗೇ ಮುಗಿಯುತ್ತಿತ್ತೇನೋ. ಆದರೆ ಸುಮ್ಮನಿರುವ ಜಾಯಮಾನ ನನ್ನದಲ್ಲವಲ್ಲ? ಮುಖ ಉಬ್ಬಿಸಿಕೊಂಡು- ‘ನಿನ್ನ ಫ್ರೆಂಡ್​ಗೆ ದುಡ್ಡಿದೆ ಅಂತ ಅಹಂಕಾರ, ನನ್ನನ್ನು ಜಿಪುಣಿ ಎಂದರು’ ಎಂದೆ. ನನ್ನಮ್ಮ ದೊಡ್ಡದಾಗಿ ನಕ್ಕರು. ‘ನಿನಗೆ ಅವರ ಅಹಂಕಾರ ಮಾತ್ರ ಕಾಣಿಸಿತಾ? ಮತ್ತೇನೂ ಕಾಣಲಿಲ್ಲವಾ?’ ಎಂದರು. ನಾನು ಕಣ್ಣುಕಣ್ಣು ಬಿಟ್ಟೆ. ಅವರೇ ಮುಂದುವರಿದು ಹೇಳಿದರು-‘ನೋಡು ಇಲ್ಲಿ ಕುರ್ಚಿಯಿತ್ತು, ಆದರೂ ಅವರು ಚಾಪೆಯ ಮೇಲೆ ಕುಳಿತರು. ಈ ವಿನಯಕ್ಕೆ ದುಡ್ಡು ಬೇಡ ಅಲ್ಲವಾ? ಅವರು ಬಂದಾಗಿನಿಂದ ಹೋಗುವವರೆಗೆ ನಗುನಗುತ್ತಾ ಮಾತಾಡಿದರು. ಅದಕ್ಕೂ ದುಡ್ಡು ಬೇಡ ಅಲ್ಲವಾ? ತಮ್ಮ ಹಿತ್ತಲಲ್ಲಿ ಬೆಳೆದ ಹೂವನ್ನು ತಾವೂ ಮುಡಿಯದೇ ಕಟ್ಟಿ ನಮಗಾಗಿ ತಂದಿದ್ದಾರೆ, ಈ ಪ್ರೀತಿಗೆ ದುಡ್ಡು ಖರ್ಚಾಗುವುದಿಲ್ಲ ಅಲ್ಲವಾ? ನೀನು ಕೊಟ್ಟ ಕೆಟ್ಟ ಕಾಫಿ ನನಗೇ ಕುಡಿಯಲಾಗಲಿಲ್ಲ, ಆಕೆ ನಗುತ್ತಾ ಕುಡಿದರು. ಈ ಸಹನೆಗೆ ದುಡ್ಡು ಬೇಡತಾನೆ? ನೀನು ಅವರ ಕಾರು ಒಡವೆ ಮಾತ್ರ ಗಮನಿಸಿದೆ, ಆದರೆ ಅವರಲ್ಲಿದ್ದ ಎಷ್ಟೊಂದು ಒಳ್ಳೆಯ ಗುಣಗಳನ್ನು, ಸರಳತೆಯನ್ನು ಗಮನಿಸಲೇ ಇಲ್ಲವಲ್ಲ? ಸ್ನೇಹದಲ್ಲಿ ಹಣ ಎಂದೂ ಅಡ್ಡಬರುವುದಿಲ್ಲ ಮಗು. ನೀನು ಸ್ನೇಹವನ್ನು ಮಾತ್ರ ಗಮನಿಸಬೇಕು, ಹಣವನ್ನಲ್ಲ’ ಎಂದರು. ಅಂದಿನಿಂದ ಇಂದಿನವರೆಗೂ ಯಾರನ್ನು ನೋಡಿದರೂ ಪ್ರಮುಖವಾಗಿ ಕಾಣುವ ಒಳ್ಳೆಯ ಅಂಶಗಳನ್ನು ಪತ್ತೆಹಚ್ಚುವ ಅಭ್ಯಾಸ ಮಾಡಿಕೊಂಡಿದ್ದೇನೆ. ಹೀಗೆ ಮಾಡಿದಾಗ ನಾನು ಯಾರನ್ನೂ ಉದ್ಧಾರ ಮಾಡುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಬದಲಾಗಿ ನನಗೇ ಲಾಭವಾಗುತ್ತದೆ. ಏಕೆಂದರೆ ಇದು ಮನಸ್ಸಿಗೆ ಖುಷಿಕೊಡುತ್ತದೆ. ನನ್ನ ಆತ್ಮಬಲಕ್ಕೆ ಇಂಬುಕೊಡುತ್ತದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ‘ಯೋಗಕ್ಷೇಮ’ ಎನ್ನುವ ಸಂಸ್ಥೆ ತನ್ನ ಹತ್ತನೇ ವಾರ್ಷಿಕೋತ್ಸವದ ಸಮಾರಂಭವನ್ನು ‘ನಾವು ಸಕಾರಾತ್ಮಕವಾಗಿ ಬದಲಾಗೋಣ’ಎನ್ನುವ ಶೀರ್ಷಿಕೆಯೊಂದಿಗೆ ಆಚರಿಸಿತು. ಅದರ ರೂವಾರಿಗಳಾದ ಡಾ. ಉಷಾ ವಸ್ತಾರೆಯವರು ಕಾರ್ಯಕ್ರಮವನ್ನು ಸಾಧಾರಣ ವಾರ್ಷಿಕೋತ್ಸವವಾಗಿಸದೆ ಬಹಳ ಅರ್ಥಪೂರ್ಣವಾಗಿಯೂ ಸುಂದರವಾಗಿಯೂ ರೂಪಿಸಿದ್ದರು. ಅಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನರರೋಗ ತಜ್ಞ ಡಾ. ವೆಂಕಟರಮಣ ಅವರು ಹೇಳಿದ ಕೆಲವು ವಿಷಯಗಳು ಎಲ್ಲರ ತಿಳಿವಳಿಕೆಗೂ ದಕ್ಕಲೇ ಬೇಕಾಗಿದೆ.

‘‘ನೂರು ಬಿಲಿಯನ್ ನ್ಯೂರೋಸೆಲ್​ಗಳಿಂದ ಮುನ್ನೂರು ಬಿಲಿಯನ್ ಥಾಟ್ಸ್​ಗಳ ಚಟುವಟಿಕೆಗಳು ನಮ್ಮ ಮಿದುಳಿನಲ್ಲಿ ನಡೆಯುತ್ತಿರುತ್ತವೆ. ವಿಪರೀತ ನೇತ್ಯಾತ್ಮಕ ಅಂಶಗಳನ್ನೇ ನಾವು ತಲೆಯಲ್ಲಿ ಸೇರಿಸುತ್ತಾ ಹೋದರೆ ದೇಹಕ್ಕೆ ‘ಹಾರ್ಟ್ ಅಟ್ಯಾಕ್’ ಆದಹಾಗೆ ಮಿದುಳಿಗೂ ‘ಅಟ್ಯಾಕ್’ ಆಗುತ್ತದೆ. ‘ಹಾರ್ಟ್ ಅಟ್ಯಾಕ್’ ಆದಾಗ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಆದರೆ ಮಿದುಳಿಗೆ ಅಟ್ಯಾಕ್ ಆದರೆ ‘ನಿದ್ದೆ ಮಾಡಿದರೆ ಸರಿಹೋಗುತ್ತಾರೆ, ರೆಸ್ಟ್ ತೆಗೆದುಕೊಂಡರೆ ಸರಿಹೋಗುತ್ತಾರೆ’ ಎಂದೇ ಭಾವಿಸುತ್ತಾರೆ. ಇದು ನಿಜಕ್ಕೂ ದುರಂತ. ಮಿದುಳನ್ನು ಆರೋಗ್ಯವಾಗಿಟ್ಟುಕೊಳ್ಳಿ. ಅದಕ್ಕೆ ನೀವೇನೂ ಶ್ರಮ ಪಡಬೇಕಾಗಿಲ್ಲ. ಒಳ್ಳೆಯದನ್ನೇ ಯೋಚನೆ ಮಾಡಿ. ಎಲ್ಲರ ಬಗ್ಗೆ ಒಳ್ಳೆಯ ಮಾತಾಡಿ. ಎಲ್ಲರಲ್ಲೂ ಇರುವ ಒಳ್ಳೆಯದನ್ನೇ ಗುರುತಿಸಿ. ಇವಿಷ್ಟರಿಂದಲೇ ಮಿದುಳಿನಲ್ಲಿ ಸ್ಟ್ರೋಕ್ ಆಗುವುದನ್ನು ತಪ್ಪಿಸಬಹುದು. ಹಾರ್ಟ್ ಅಟ್ಯಾಕ್ ಆಗದಹಾಗೆ ರಕ್ತ ಸಲೀಸಾಗಿ ಹರಿಯಲು ಎಷ್ಟೊಂದು ಮಾತ್ರೆಗಳನ್ನು ನುಂಗಬೇಕು. ಆದರೆ ಮಿದುಳಿಗೆ ಅಟ್ಯಾಕ್ ಆಗದಹಾಗೆ ಹಣ ಖರ್ಚು ಮಾಡಬೇಕಿಲ್ಲ. ಮಾತ್ರೆಗಳನ್ನು ನುಂಗಬೇಕಿಲ್ಲ. ಒಳ್ಳೆಯದನ್ನು ಚಿಂತಿಸಿದರೆ ಸಾಕು. ನಗುನಗುತ್ತಿದ್ದರೆ ಅದೇ ದಿವ್ಯೌಷಧ!’’

ಅದೇ ಕಾರ್ಯಕ್ರಮದಲ್ಲಿ ಬಹಳ ಅರ್ಥವತ್ತಾಗಿ ನಿರೂಪಣೆ ಮಾಡಿದ ಗೆಳತಿ ಹಾಗೂ ಕವಯಿತ್ರಿ ಸುಧಾ ಶರ್ಮ ಹೇಳಿದ ಕವಿ ಗಾಲಿಬ್​ನ ಕವಿತೆ ಇಲ್ಲಿಗೆ ತುಂಬಾ ಸೂಕ್ತವಾಗಿದೆ.

ಜೀವನ ಪೂರ್ತಿ ಕನ್ನಡಿ ಒರೆಸುವುದರಲ್ಲೇ

ಕಳೆದುಬಿಟ್ಟೆ! ಎಂಥ ಮೂರ್ಖ ನಾನು!

ಧೂಳು ನನ್ನ ಮುಖದ ಮೇಲೇ ಇತ್ತು!!!

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

Leave a Reply

Your email address will not be published. Required fields are marked *

Back To Top