Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಎಫ್​ಡಿಐ ಬಂತು, ಉದ್ಯೋಗಸೃಷ್ಟಿ ಭರವಸೆ ಏನಾಯ್ತು?

Monday, 19.06.2017, 3:00 AM       No Comments

ದೇಶದ ಒಳನಾಡು ಪ್ರದೇಶಗಳಿಗೆ ಹೂಡಿಕೆ ಆಕರ್ಷಿಸಲು ಚೀನಾ ಅಳವಡಿಸಿಕೊಂಡಿರುವ ಕಾರ್ಯನೀತಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳುವುದು ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಪೂರಕವಾದೀತು. ಜತೆಗೆ ಕೆಲ ನೀತಿ-ನಿಯಮಗಳನ್ನು ಮರುರೂಪಿಸಿ, ತೆರಿಗೆ ಮತ್ತು ಸುಂಕಗಳಲ್ಲಿನ ಅಸಮರ್ಪಕತೆ ಸರಿಪಡಿಸಿದರೆ ಉತ್ತಮ ಫಲಿತಾಂಶ ಕಟ್ಟಿಟ್ಟಬುತ್ತಿ.

| ವರುಣ್​ ಗಾಂಧಿ

ಭಾರತದ ಆರ್ಥಿಕತೆಯು ಒಂದು ವಿಶಿಷ್ಟ ವಿರೋಧಾಭಾಸವನ್ನು ಎದುರಿಸುತ್ತಿದೆ. ಕಳೆದ ಕೆಲ ದಶಕಗಳಲ್ಲಿ ಅಸ್ತಿತ್ವಕ್ಕೆ ಬಂದ ಬೃಹದಾರ್ಥಿಕ ನೀತಿಯ ಪ್ರವೃತ್ತಿಗಳು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗಿರುವ ರಾಮಬಾಣ ಎಂಬಂತೆ ವಿದೇಶಿ ನೇರ ಹೂಡಿಕೆ

(ಎಫ್​ಡಿಐ)ಯನ್ನು ನೆಚ್ಚಿಬಿಟ್ಟಿವೆ. ಇಂಥ ಹೂಡಿಕೆಯ ಪ್ರಮಾಣ ಅಧಿಕವಾಗಿದ್ದಲ್ಲಿ, ಅದು ದೇಶವೊಂದರ ಆರ್ಥಿಕತೆಯ ಸ್ವಾಸ್ಥ್ಯ ಹುರುಪನ್ನು ಸೂಚಿಸುವುದರ ಜತೆಜತೆಗೆ, ಆರ್ಥಿಕ ಕಾರ್ಯನೀತಿಗೆ ದಕ್ಕಿದ ‘ದೃಢೀಕರಣ ಪತ್ರ’ದ ಪಾತ್ರವನ್ನೂ ವಹಿಸುತ್ತದೆಯೆನ್ನಬೇಕು. ಹಾಗೆ ನೋಡಿದರೆ, ಕಳೆದ ಕೆಲ ವರ್ಷಗಳಿಂದ ನಿಂತ ನೀರಾಗಿಬಿಟ್ಟಿದ್ದ ಎಫ್​ಡಿಐ ಹರಿವಿನ ಪ್ರಮಾಣವು ಕಳೆದ 3 ವರ್ಷಗಳ ಅವಧಿಯಲ್ಲಿ ಶೇ. 28.2ರ ಪ್ರಮಾಣದಲ್ಲಿ ಬೆಳೆಯುತ್ತಿದೆ (ಈ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಯ ಪ್ರಮಾಣ 1.44 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ). ಭಾರತದಲ್ಲಿನ ಎಫ್​ಡಿಐ ಸಂಬಂಧಿತ ನೀತಿಗಳಲ್ಲಿ ಗಣನೀಯ ಸಡಿಲಿಕೆಯನ್ನು ಉಂಟುಮಾಡಿದ್ದು ಹಾಗೂ ಸರಳೀಕೃತ ವ್ಯವಹಾರ ಪರಿಪಾಠದಲ್ಲಿ ಸುಧಾರಣೆ ತಂದಿದ್ದರ ಪರಿಣಾಮವಿದು ಎನ್ನಲಡ್ಡಿಯಿಲ್ಲ.

ಇಷ್ಟಾಗಿಯೂ, ಭಾರತದಲ್ಲಿನ ಉದ್ಯೋಗಾವಕಾಶದ ಪ್ರಮಾಣವು ಕುಸಿತ ಕಂಡಿದೆ. ದೇಶದ ಶೇ. 30ಕ್ಕೂ ಹೆಚ್ಚು ಯುವಸಮೂಹ ಪ್ರಸ್ತುತ ನಿರುದ್ಯೋಗಪರ್ವದಲ್ಲೇ ದಿನದೂಡುತ್ತಿರುವುದು ಇದಕ್ಕೆ ಸಾಕ್ಷಿ. 1991ರ ಚಿತ್ರಣಕ್ಕೆ ಹೋಲಿಸಿದಾಗ, ಭಾರತದಲ್ಲಿನ ಉದ್ಯೋಗಾವಕಾಶದ ಸ್ಥಿತಿಸ್ಥಾಪಕತ್ವ ಅಥವಾ ಪುನಶ್ಒ್ಯೆತನ್ಯ ಶಕ್ತಿಯು (ಇದು, ಜಿಡಿಪಿ ಬೆಳವಣಿಗೆಯಲ್ಲಿನ ಪ್ರತಿ ಶೇಕಡವಾರು ಬದಲಾವಣೆಗೆ ಪ್ರತಿಯಾಗಿ ಕಾಣಬರುವ ಉದ್ಯೋಗಾವಕಾಶದಲ್ಲಿನ ಶೇಕಡವಾರು ಬದಲಾವಣೆಯನ್ನು ಅಳೆಯುವ ಒಂದು ಮಾಪಕ) ಪ್ರಸ್ತುತ ಶೇ. 50ರಷ್ಟು ಕುಸಿತವನ್ನು ಕಂಡಿದೆ ಎನ್ನುತ್ತವೆ ಅಂಕಿ-ಅಂಶಗಳು. ಇದು ಎಫ್​ಡಿಐ ಹೂಡಿಕೆಗಳ ಇತಿಮಿತಿಗೆ ಅಥವಾ ಉದ್ಯೋಗಸೃಷ್ಟಿಗೆ ಸಂಬಂಧಿಸಿದಂತೆ ಅದಕ್ಕಿರುವ ಸೀಮಿತ ಶಕ್ತಿಗೆ ದ್ಯೋತಕ ಎಂದೇ ಹೇಳಬೇಕಾಗುತ್ತದೆ. ಸ್ಟಾರ್ಟಪ್ ಉದ್ಯಮಗಳಲ್ಲಿನ ಹೂಡಿಕೆಗಳ ಹೆಚ್ಚಳದಿಂದಾಗಿ ಭರಪೂರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಅಬ್ಬರದ ಮಾತುಗಳು ಹಿಂದೊಮ್ಮೆ ಕೇಳಿಬಂದಿದ್ದವು. ಆದರೆ ಆಗಿದ್ದೇನು? ಮಂದಗತಿಯ ವ್ಯವಹಾರದ ಕಾರಣದಿಂದಲೋ ಅಥವಾ ಹಂಗಾಮಿ ವಜಾ ಪ್ರಕ್ರಿಯೆಯಿಂದಾಗಿಯೋ ಕಳೆದೊಂದು ವರ್ಷದಲ್ಲೇ 10,000ಕ್ಕೂ ಹೆಚ್ಚು ಮಂದಿಯ ಉದ್ಯೋಗಗಳಿಗೆ ಸಂಚಕಾರ ಒದಗಿದೆ. ಅಷ್ಟೇ ಅಲ್ಲ, ದೂರಸಂಪರ್ಕ ಹಾಗೂ ವಾಹನ ತಯಾರಿಕಾ ವಲಯಗಳಲ್ಲಿನ ಗಣನೀಯ ಬಲವರ್ಧನೆ, ಮಾಹಿತಿ ತಂತ್ರಜ್ಞಾನ ಸೇವೆಗಳಂಥ ಉದ್ಯೋಗ ಸೃಷ್ಟಿಕಾರಕ ವಲಯಗಳಲ್ಲಿನ ಆಮೂಲಾಗ್ರ ಬದಲಾವಣೆ ಮತ್ತು ಸ್ವಯಂಚಾಲಿತ ಯಂತ್ರಗಳ ಬಳಕೆಯಂಥ ಉಪಕ್ರಮಗಳಿಂದಾಗಿ ಮುಂಬರುವ ಕೆಲ ವರ್ಷಗಳಲ್ಲಿ ಉದ್ಯೋಗಸೃಷ್ಟಿಯ ಪ್ರವೃತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ನೌಕರರ/ಕಾರ್ವಿುಕರ ಸಂಖ್ಯೆಯನ್ನು ಕಡಿಮೆ ಮಾಡಿ, ಯಂತ್ರಾವಲಂಬನೆಗೆ ಹೆಚ್ಚು ಒತ್ತು ನೀಡುವುದರಿಂದ ಉತ್ಪಾದಕತೆಯೂ ಹೆಚ್ಚುವ ವಿರೋಧಾಭಾಸವನ್ನು ಹಲವು ಉತ್ಪಾದನಾ ವಲಯಗಳಲ್ಲಿ ಕಾಣಬಹುದು. ಗಣಿಗಾರಿಕೆಯನ್ನೇ ಉದಾಹರಣೆಯಾಗಿ ಪರಿಗಣಿಸಿದರೆ- 1994-95ರ ಅವಧಿಯಲ್ಲಿ 1 ಕೋಟಿ ರೂ. ಮೌಲ್ಯದ ಖನಿಜ ವಸ್ತುವಿನ ಗಣಿಗಾರಿಕೆಗೆ 25 ಮಂದಿ ಕೆಲಸಗಾರರು ಬೇಕಾಗುತ್ತಿದ್ದುದು, ಪ್ರಸ್ತುತ ಕೇವಲ 8 ಮಂದಿಯಿಂದ ಅದೇ ಕೆಲಸ ನೆರವೇರುತ್ತಿದೆ.

ರ್ತಾಕವಾಗಿ ನೋಡಿದರೆ, ಎಫ್​ಡಿಐ ಹರಿವಿನಲ್ಲಿನ ಹೆಚ್ಚಳವು ಪ್ರತ್ಯಕ್ಷ ಹಾಗೂ ಪೂರಕ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸಬೇಕು; ಆದರೆ, ಭಾರತದಲ್ಲಿ ಭೌಗೋಳಿಕ ಹಾಗೂ ವಲಯವಾರು ಅಸಮತೋಲನಗಳು ತಮ್ಮದೇ ಆದ ಪಾತ್ರವನ್ನು ವಹಿಸುವುದರಿಂದ ನಿರೀಕ್ಷಿತ ಫಲಿತಾಂಶ ದಕ್ಕಿಲ್ಲ. ಇದಕ್ಕೊಂದು ನಿದರ್ಶನ ನೀಡುವುದಾದರೆ, ಭಾರತಕ್ಕೆ ಹರಿದುಬರುವ ಒಟ್ಟಾರೆ ಎಫ್​ಡಿಐನ ಸಿಂಹಪಾಲು (ಅಂದರೆ ಸುಮಾರು ಶೇ. 75ರಷ್ಟು) ಮಹಾರಾಷ್ಟ್ರ, ಗುಜರಾತ್, ದೆಹಲಿ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಂಥ ‘ನಗರೀಕೃತ’ ರಾಜ್ಯಗಳ ಮಡಿಲು ಸೇರಿಬಿಡುತ್ತದೆ ಎಂಬುದು ದಶಕಗಳಿಂದ ದಾಖಲಾಗಿರುವ ಸತ್ಯ; 2014-2017ರ ನಡುವಣ ಅವಧಿಯಲ್ಲಿ ಈ ರಾಜ್ಯಗಳಿಗೆ 13.4 ಲಕ್ಷ ಕೋಟಿ ರೂ.ಗೂ ಹೆಚ್ಚು ಎಫ್​ಡಿಐ ಹರಿದುಬಂದಿರುವುದು ಇದಕ್ಕೆ ಸಾಕ್ಷಿ. 2017ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟಾರೆ ಎಫ್​ಡಿಐ ಒಳಹರಿವಿನಲ್ಲಿ ಈ ರಾಜ್ಯಗಳ ಪಾಲು ಶೇ. 82ರಷ್ಟು ಆಗುವುದರೊಂದಿಗೆ ಈ ಪ್ರವೃತ್ತಿ ಅಬಾಧಿತವಾಗಿದೆ. ಈ ರಾಜ್ಯಗಳಿಗೆ ಹೋಲಿಸಿದಾಗ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಂಥ ‘ಜನಸಂಖ್ಯೆಯ ವಿಷಯದಲ್ಲಿ ಮುಂಚೂಣಿಯಲ್ಲಿರುವ’ ರಾಜ್ಯಗಳಿಗೆ ದಕ್ಕಿರುವುದು ಭಾರತದ ಒಟ್ಟಾರೆ ಎಫ್​ಡಿಐ ಒಳಹರಿವಿನ ಶೇ. 1ರಷ್ಟು ಪಾಲು ಮಾತ್ರ! ಈ ಅಸಮತೋಲನ ಹೀಗೇ ಮುಂದುವರಿದಲ್ಲಿ, ನಗರೀಕೃತ ಹಾಗೂ ಶ್ರೀಮಂತ ರಾಜ್ಯಗಳು ಮತ್ತಷ್ಟು ಬಲಿಷ್ಠವಾಗುವ, ಮಿಕ್ಕ ರಾಜ್ಯಗಳು ಬಂಡವಾಳ ಆಕರ್ಷಿಸಲು ಹರಸಾಹಸ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ. ಇಷ್ಟು ಸಾಲದೆಂಬಂತೆ ವಲಯವಾರು ಪಕ್ಷಪಾತ ಅಥವಾ ಪೂರ್ವಗ್ರಹಗಳೂ ಈ ನಿಟ್ಟಿನಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತವೆ; ನಿರ್ದಿಷ್ಟವಾಗಿ ಹೇಳುವುದಾದರೆ ಸೇವಾಕ್ಷೇತ್ರಗಳು ಮತ್ತು ಮಾಹಿತಿ ತಂತ್ರಜ್ಞಾನ ವಲಯ (2014-17ರ ನಡುವಿನ ಅವಧಿಯಲ್ಲಿನ ಸಂಚಿತ ಎಫ್​ಡಿಐ ಹೂಡಿಕೆಗಳ ಪೈಕಿ ಇವು ಶೇ. 25ರಷ್ಟು ಪಾಲು ದಕ್ಕಿಸಿಕೊಂಡಿದ್ದವು) ಸೀಮಿತ ಉದ್ಯೋಗಾವಕಾಶ ಸಾಮರ್ಥ್ಯ ಹೊಂದಿದ್ದರೆ, ಅತಿಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ನಿರ್ಮಾಣ ವಲಯದಲ್ಲಿ ಎಫ್​ಡಿಐ ಹೂಡಿಕೆಯ ಪ್ರಮಾಣ ಕುಸಿಯುತ್ತಿದೆ- 2015ರ ಹಣಕಾಸು ವರ್ಷದಲ್ಲಿ 4,652 ಕೋಟಿ ರೂ.ಗಳಷ್ಟು ಎಫ್​ಡಿಐ ಹೂಡಿಕೆ ಆಕರ್ಷಿಸಿದ್ದ ನಿರ್ಮಾಣ ವಲಯ, 2017ರ ಹಣಕಾಸು ವರ್ಷದಲ್ಲಿ ಕೇವಲ 703 ಕೋಟಿ ರೂ.ನಷ್ಟು ಹೂಡಿಕೆಗಳನ್ನು ಆಕರ್ಷಿಸಲಿದೆ ಎಂಬ ಲೆಕ್ಕಾಚಾರ ಈ ಮಾತಿಗೆ ಪುಷ್ಟಿ ನೀಡುತ್ತದೆ. ಉದ್ಯೋಗಾವಕಾಶಗಳ ಸೃಷ್ಟಿಯ ಉದ್ದೇಶಕ್ಕೆ ಕೃಷಿ ಸಂಬಂಧಿತ ಜೀವನೋಪಾಯಗಳಿಗೆ ಹಾನಿಯುಂಟಾಗುವ ರೀತಿಯಲ್ಲಿ, ನಾವು ಎಫ್​ಡಿಐ ಹೂಡಿಕೆಗಳಿಗೆ ಇನ್ನಿಲ್ಲದಂತೆ ಉತ್ತೇಜನ ನೀಡುತ್ತ ಬಂದಿದ್ದೇವೆ ಎಂದು ತೋರುತ್ತಿದೆ. ಇಷ್ಟಾಗಿಯೂ ಆಶಯಗಳು ಈಡೇರಿಲ್ಲ. ಪ್ರಾದೇಶಿಕ ಅಸಮಾನತೆಯ ಕಾರಣದಿಂದಾಗಿ ಶ್ರೀಮಂತ ರಾಜ್ಯಗಳು ಮತ್ತಷ್ಟು ಬಲಿಷ್ಠವಾಗುತ್ತಿದ್ದರೆ, ವಿಭಿನ್ನ ಕಾರಣಗಳಿಂದಾಗಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲಾಗದ ರಾಜ್ಯಗಳು ಮತ್ತಷ್ಟು ಸೊರಗುವಂತಾಗುತ್ತಿದೆ. ಎಫ್​ಡಿಐ ಒಳಹರಿವಿಗೆ ಸಂಬಂಧಿಸಿದ ಈ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಮಹತ್ವದ ಕ್ರಮಗಳಿಗೆ ಮುಂದಾಗಬೇಕಿದೆ. ಕಾರ್ವಿುಕ ಪಡೆಯ ಅಗತ್ಯ ಹೆಚ್ಚಿರುವ ವಲಯಗಳಿಗೆ ಹಾಗೂ ಹಿಂದುಳಿದ ರಾಜ್ಯಗಳಿಗೆ ಅಗಾಧ ಪ್ರಮಾಣದ ಹೂಡಿಕೆಯನ್ನು ಸೆಳೆಯುವ ಉಪಕ್ರಮಕ್ಕೆ ಮುಂದಾದಲ್ಲಿ, ಉದ್ಯೋಗಾವಕಾಶ ಕಲ್ಪಿಸುವ ಸದಾಶಯಕ್ಕೆ ಬಲ ದಕ್ಕುವುದರ ಜತೆಜತೆಗೆ, ಹೊಟ್ಟೆಪಾಡಿಗಾಗಿ ನಗರಪ್ರದೇಶಕ್ಕೆ ಗುಳೆ ಹೋಗುವವರ ಸಂಖ್ಯೆಯೂ ಗಣನೀಯವಾಗಿ ತಗ್ಗುತ್ತದೆ.

ಇನ್ನು, ಒಳನಾಡು ಪ್ರದೇಶಗಳಿಗೆ ಹೂಡಿಕೆಗಳನ್ನು ಆಕರ್ಷಿಸಲು ಚೀನಾ ದೇಶವು ಅಳವಡಿಸಿಕೊಂಡಿರುವ ಕಾರ್ಯನೀತಿಯನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿ ಭಾರತದಲ್ಲೂ ಅಳವಡಿಸಿಕೊಂಡರೆ ಅದೊಂದು ಪೂರಕ ಉಪಕ್ರಮವಾದೀತು. ಇದರ ಜತೆಜತೆಗೆ ಕೆಲವೊಂದು ನೀತಿ-ನಿಯಮಗಳ ಮರುರೂಪಣೆಗೆ, ತೆರಿಗೆ ಮತ್ತು ಸುಂಕಗಳ ಸ್ವರೂಪದಲ್ಲಿ ಕಾಣಬರುವ ಅಸಮರ್ಪಕತೆಯನ್ನು ಸರಿಪಡಿಸುವಿಕೆಗೆ ಮುಂದಾಗುವುದರಿಂದಲೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಉದಾಹರಣೆಗೆ, ಸಿದ್ಧ ಉಡುಪುಗಳು ಯಾವುದೇ ಸುಂಕಗಳಿಲ್ಲದೆ ಭಾರತಕ್ಕೆ ಆಮದಾಗುವಂಥ ಉತ್ಪನ್ನಗಳು; ಆದರೆ ಅವುಗಳ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುಗಳಿಗೆ (ಉದಾಹರಣೆಗೆ ಮಾನವನಿರ್ವಿುತ ನೂಲು) ಗಣನೀಯ ಸುಂಕ ವಿಧಿಸಲಾಗುತ್ತದೆ. ಅದೇ ರೀತಿಯಲ್ಲಿ, ಲ್ಯಾಪ್​ಟಾಪ್ ಮತ್ತು ಮೊಬೈಲ್ ಫೋನುಗಳಂಥ ಇಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಸುಲಭ; ಆದರೆ ಅವುಗಳ ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ ಹೆಚ್ಚಿನ ಸುಂಕವನ್ನು ತೆರಬೇಕಾಗುತ್ತದೆ! ಇಂಥ ಅಸಮರ್ಪಕತೆಗಳ ನಿವಾರಣೆಗೆ ಯತ್ನಿಸಿದರೆ, ಭಾರತದ ರಫ್ತು ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ದಕ್ಕಿಸಿಕೊಳ್ಳುವ ಯತ್ನದಲ್ಲಿ ಯಶ ಕಾಣಬಹುದು ಮತ್ತು ದೇಶದ ತಯಾರಿಕಾ ವಲಯದ ಬಲವರ್ಧನೆಗೂ ಅದು ಪೂರಕ ಉಪಕ್ರಮವಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ದೇಶೀಯ ಉತ್ಪಾದನಾ ವಲಯದ ಸುಸಂಘಟಿತ ಬೆಳವಣಿಗೆಗೆ ಇಂಬುನೀಡುವ ನಿಟ್ಟಿನಲ್ಲಿ ಎಫ್​ಡಿಐ ಒಳಹರಿವುಗಳನ್ನು ಸರಿಹೊಂದಿಸಬೇಕಿದೆ. ದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಳ್ಳಲು ಇಂಥ ಕ್ರಮಗಳು ಮಹತ್ವದ ಕೊಡುಗೆ ನೀಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *

Back To Top