Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಎಚ್ಚರಿಕೆ ಅಗತ್ಯ

Monday, 11.12.2017, 3:00 AM       No Comments

ಜಗತ್ತಿನ ವಿವಿಧ ನೆಲೆಗಳಲ್ಲಿ ತಲ್ಲಣ ಮೂಡಿಸಿದ ಉಗ್ರಸಂಘಟನೆ ಐಸಿಸ್. ಶರಿಯಾ ಕಾನೂನು ಮತ್ತು ಇಸ್ಲಾಂ ಆಡಳಿತ ಜಗತ್ತಿನೆಲ್ಲೆಡೆ ಜಾರಿಗೊಳ್ಳುವಂತಾಗಬೇಕು ಎಂಬ ಅವಾಸ್ತವಿಕ ಮತ್ತು ಹುಚ್ಚು ಆಶಯದೊಂದಿಗೆ ಹಿಂಸಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಐಸಿಸ್, 2014ರಲ್ಲಿ ಸಿರಿಯಾ ಮತ್ತು ಇರಾಕ್​ನ ವಿವಿಧ ಪ್ರದೇಶಗಳನ್ನು ಅತಿಕ್ರಮಿಸಿ, ಸಿರಿಯಾದ ಉತ್ತರ ಭಾಗದ ರಖ್ಖಾ ಪ್ರದೇಶವನ್ನು ರಾಜಧಾನಿಯಾಗಿ ಘೋಷಿಸಿಕೊಂಡಿತ್ತು. ಇದೀಗ ಈ ಉಗ್ರಪಡೆಯನ್ನು ಇರಾಕ್ ಸೇನೆ ಹಣಿದು, ಅದರ ವಶದಲ್ಲಿದ್ದ ರಾವಾ ಪ್ರದೇಶವನ್ನು ಮರುವಶಮಾಡಿಕೊಳ್ಳುವ ಮೂಲಕ, ಶಾಂತಿ-ನೆಮ್ಮದಿಯ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಇದು ನಿಜಕ್ಕೂ ಶ್ಲಾಘನೀಯ ಬೆಳವಣಿಗೆಯೇ ಸರಿ.

ವಿಕಟಾಟ್ಟಹಾಸ, ಹಿಂಸಾವಿನೋದದ ಕೃತ್ಯಗಳಿಂದಾಗಿ ಶಾಂತಿಪ್ರಿಯ ದೇಶಗಳಲ್ಲಿ ನೆತ್ತರು ಚಿಮ್ಮಿಸಿದ್ದ ಐಸಿಸ್ ಪ್ರಭಾವ ಅದೆಷ್ಟು ವ್ಯಾಪಿಸಿತ್ತೆಂದರೆ, ಈ ಉಗ್ರಜಾಲದಲ್ಲಿ ನೆಲೆಕಂಡುಕೊಳ್ಳಲು ಕೇರಳದ ಯುವಕರೂ ಸೇರಿದಂತೆ ಬಹಳೆಡೆಯಿಂದ ವಲಸೆಗಳಾಗಿದ್ದವು. ಆದರೆ ಐಸಿಸ್ ಪ್ರಭಾವ ಮತ್ತು ನೆಲೆಗಟ್ಟು ಕುಸಿಯುವಂತಾಗಿರುವುದರಿಂದ, ಐಸಿಸ್ ಸದಸ್ಯರು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದು ಹೇಗೆಂಬ ಲೆಕ್ಕಾಚಾರದಲ್ಲಿರುವುದು ದಿಟ. ಜತೆಗೆ ಅವರಲ್ಲೇ ಒಳಜಗಳಗಳೂ ಹುಟ್ಟಿಕೊಂಡಿವೆ ಎನ್ನಲಾಗಿದೆ. ಉಗ್ರನಿಗ್ರಹದ ಈ ಬೆಳವಣಿಗೆ ಶ್ಲಾಘನೀಯವಾಗಿರುವುದರ ಜತೆಜತೆಗೆ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದೆ ಎನ್ನಲಡ್ಡಿಯಿಲ್ಲ. ಕಾರಣ ಅಕ್ಷರಶಃ ನಿರುದ್ಯೋಗಿಗಳಾಗಿರುವ ಉಗ್ರರು ಸಂಭಾವ್ಯ ನೆಲೆಗಳನ್ನು ಹುಡುಕಿಕೊಂಡು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಮೂಲಕ ಭಾರತದೊಳಗೆ ನುಸುಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ರಷ್ಯಾವನ್ನು ಅಂಕೆಯಲ್ಲಿಟ್ಟುಕೊಳ್ಳಲು ಅಫ್ಘಾನಿಸ್ತಾನದ ಉಗ್ರಪಡೆಯನ್ನು ಪೋಷಿಸಿದ ಅಮೆರಿಕ, ತರುವಾಯದಲ್ಲಿ ಅದನ್ನು ಕೈಬಿಟ್ಟಾಗ, ಅದನ್ನು ನೆಚ್ಚಿದ್ದ ಸಾವಿರಾರು ಯುವಕರು ದಿಕ್ಕಿಲ್ಲದಂತಾಗಬೇಕಾಯಿತು ಎಂಬುದು ವಾಸ್ತವ. ಜಮ್ಮು-ಕಾಶ್ಮೀರದಲ್ಲಿ ಕೆಲ ಐಸಿಸ್ ಉಗ್ರರ ಅಸ್ತಿತ್ವವಿರುವ ಶಂಕೆ ಈಗಾಗಲೇ ವ್ಯಕ್ತವಾಗಿರುವುದರಿಂದ, ಈ ಪಿಡುಗನ್ನು ಮೊಳಕೆಯಲ್ಲೇ ಚಿವುಟುವ ನಿಟ್ಟಿನಲ್ಲಿ ವ್ಯೂಹಾತ್ಮಕ ಕಾರ್ಯತಂತ್ರದ ಅಗತ್ಯವಿದೆ. ಐಸಿಸ್ ಉಗ್ರರ ಕಪಿಮುಷ್ಟಿಯಲ್ಲಿದ್ದ ತೈಲಬಾವಿಗಳನ್ನು ಇರಾಕ್-ಸಿರಿಯಾ ಪಡೆಗಳು ಮರುವಶ ಮಾಡಿಕೊಂಡಿದ್ದರಿಂದಾಗಿ ಐಸಿಸ್ ಉಗ್ರರ ಆದಾಯದ ಮೂಲಕ್ಕೆ ಸಂಚಕಾರ ಒದಗಿದ್ದರೆ, ರಷ್ಯಾ-ಅಮೆರಿಕ ಬೆಂಬಲಿತ ಜಂಟಿ ಸೇನಾಪಡೆಯ ಏಕನಿಷ್ಠ ದಾಳಿಯಿಂದಾಗಿ ಐಸಿಸ್​ನ ಹತ್ತು ಹಲವು ಅಡಗುದಾಣಗಳು ಮತ್ತು ಶಸ್ತ್ರಾಸ್ತ್ರ ಕೋಠಿಗಳು ನಾಶವಾಗಿವೆ. ಹೀಗಾಗಿ ವಿವಿಧ ನೆಲೆಗಟ್ಟಿನಲ್ಲಿ ಬಲಕುಸಿತವನ್ನು ಅನುಭವಿಸಿರುವ ಐಸಿಸ್​ನ ಹೆಡೆಮುರಿಯನ್ನು ಈಗಿಂದೀಗಲೇ ಕಟ್ಟದಿದ್ದರೆ, ಮುಂದೊಮ್ಮೆ ಅದು ಬೆಳೆದು ನಿಂತಾಗ ಹಣಿಯುವುದು ಕಷ್ಟವಾಗಬಹುದು. ಭಾರತದ ವಿರುದ್ಧ ಈಗಾಗಲೇ ವಾಣಿಜ್ಯಿಕವಾಗಿ-ಸಾಮರಿಕವಾಗಿ ತೊಡೆತಟ್ಟಿ ನಿಂತಿರುವ ಚೀನಾ ಮತ್ತು ಭಾರತದ ಸಾಂಪ್ರದಾಯಿಕ ಶತ್ರು ಪಾಕಿಸ್ತಾನ ಈ ಎರಡೂ ತಂತಮ್ಮ ಹಿತಾಸಕ್ತಿಗಳ ಈಡೇರಿಕೆಗಾಗಿ ಉಗ್ರರು, ಪ್ರತ್ಯೇಕತಾವಾದಿಗಳು ಮತ್ತಿತರ ವಿಚ್ಛಿದ್ರಕಾರಿ ಶಕ್ತಿಗಳಿಗೆ ಎಲ್ಲ ತೆರನಾದ ಬೆಂಬಲ ಪೂರೈಸಿ, ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಸುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ, ದೇಶದೆಲ್ಲೆಡೆಯ ಗುಪ್ತಚರ ವ್ಯವಸ್ಥೆಯನ್ನು ಸರ್ವಸನ್ನದ್ಧವಾಗಿಸುವ ಮತ್ತು ಶಂಕಾಸ್ಪದ ವ್ಯಕ್ತಿಗಳು/ಚಟುವಟಿಕೆಗಳು ಕಂಡುಬಂದಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗುವ ಸಜ್ಜಿಕೆ ರೂಪುಗೊಳ್ಳಬೇಕಿದೆ.

ದಶಕಗಳ ಹಿಂದೆ, ರಾಜಕೀಯ ಹಿತಾಸಕ್ತಿಗಳ ಈಡೇರಿಕೆಗಾಗಿ ಬೆಳೆಸಲ್ಪಟ್ಟ ಪಂಜಾಬ್​ನ ಬಂಡುಕೋರ ನಾಯಕ ಭಿಂದ್ರನ್​ವಾಲೆ, ತರುವಾಯದಲ್ಲಿ ಉಗ್ರನಾಗಿ ರೂಪುಗೊಂಡಿದ್ದನ್ನು ಭಾರತ ಕಂಡಿದೆ. ಹೀಗಾಗಿ, ಉಗ್ರನಿಗ್ರಹದ ವಿಷಯದಲ್ಲಿ ಯಾವುದೇ ರಾಜಕೀಯದ ಬೇಳೆ ಬೇಯುವಂತಾಗಬಾರದು ಮತ್ತು ಒಮ್ಮತದ ಭಾವ-ಬದ್ಧತೆ ಅಲ್ಲಿ ಒಡಮೂಡುವಂತಾಗಬೇಕು. ನಾಗರಿಕ ಸಮಾಜದಲ್ಲಿ, ಮುಖ್ಯವಾಹಿನಿಯಲ್ಲಿ ಒಂದಾಗಿ ಬೆರೆಯಬೇಕಾದ ಯುವಸಮೂಹ, ಐಸಿಸ್​ನಂಥ ಉಗ್ರ ಸಂಘಟನೆಗಳೆಡೆಗೆ ಆಕರ್ಷಿತರಾಗುತ್ತಿರುವುದಕ್ಕೆ ಕಾರಣವಾಗಿರುವ ನಿರುದ್ಯೋಗವೇ ಮೊದಲಾದ ವಿವಿಧ ಸಮಸ್ಯೆಗಳ ಮೂಲೋತ್ಪಾಟನಕ್ಕೆ ಆಳುಗರು ಗಮನ ನೀಡಬೇಕಿದೆ.

Leave a Reply

Your email address will not be published. Required fields are marked *

Back To Top