Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಉ.ಪ್ರ. ಉತ್ತಮ ಆಡಳಿತಕ್ಕೆ ಸಂಕಲ್ಪ

Tuesday, 21.03.2017, 7:20 AM       No Comments

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಯೋಗಿ ಆದಿತ್ಯನಾಥ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಯತ್ನ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆದ ಅವರು, 15 ದಿನದೊಳಗೆ ಅಸ್ತಿ ವಿವರ ಘೊಷಣೆ ಮಾಡುವಂತೆ ಸೂಚಿಸಿದರು. ಇದೇ ರೀತಿಯ ನಿರ್ದೇಶನವನ್ನು ತಮ್ಮ ಮಂತ್ರಿಮಂಡಲದ ಸಹೋದ್ಯೋಗಿಗಳಿಗೆ ಭಾನುವಾರ ನೀಡಿದ್ದ ಅವರು, ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು. ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಲೋಕ ಭವನದಲ್ಲಿ ಸೋಮವಾರ ಸಭೆ ನಡೆಸಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೊರತಂದಿದ್ದ ‘ಸಂಕಲ್ಪ ಪತ್ರ’ವನ್ನು (ಪ್ರಣಾಳಿಕೆ) ಅಧಿಕಾರಿಗಳಿಂದಲೆ ಓದಿಸಿ, ಈ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ 65 ಅಧಿಕಾರಿಗಳಿಗೂ ‘ಸಂಕಲ್ಪ ಪತ್ರ’ದ ಪ್ರತಿ ನೀಡಿ, ಇಲಾಖಾವಾರು ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ ಶರ್ಮಾ ಪಾಲ್ಗೊಂಡಿದ್ದರು.

ಕಾನೂನು ಸುವ್ಯವಸ್ಥೆಗೆ ನೀಲಿ ನಕ್ಷೆ: ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬೆಳಗ್ಗೆ ಸಭೆ ನಡೆಸಿದ ಸಿಎಂ ಯೋಗಿ, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಕಾನೂನು ಸುವ್ಯವಸ್ಥೆ ಪ್ರಥಮ ಆದ್ಯತೆಯ ವಿಷಯ; ಇದನ್ನು ಸುಸ್ಥಿತಿಗೆ ತರಲು 15 ದಿನಗಳ ಒಳಗೆ ನೀಲನಕ್ಷೆ ನೀಡುವಂತೆ ಸೂಚಿಸಿದ್ದಾರೆ. ಅಲಹಾಬಾದ್​ನಲ್ಲಿ ಭಾನುವಾರ ರಾತ್ರಿ ಬಿಎಸ್​ಪಿ ಮುಖಂಡ ಮಹ್ಮದ್ ಶಮಿ ಹತ್ಯೆಯಾದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಾವೀದ್ ಅಹ್ಮದ್ ಅವರಿಗೆ ಖಡಕ್ ಆದೇಶ ನೀಡಿದರು ಎಂದು ಮೂಲಗಳು ತಿಳಿಸಿವೆ.

ವಿಐಪಿ ಸಂಸ್ಕೃತಿಗೆ ಕಡಿವಾಣ: ಸಚಿವರು ಮತ್ತು ಅಧಿಕಾರಿಗಳ ನಡೆನುಡಿ ಸರಳವಾಗಿರಬೇಕು ಎಂದು ಬಯಸಿರುವ ಸಿಎಂ ಯೋಗಿ, ಕಾರಿನ ಮೇಲೆ ಕೆಂಪುದೀಪ ಬಳಸದಂತೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾಷಣ/ಹೇಳಿಕೆ ನೀಡುವಾಗ ಯಾರೊಬ್ಬರ ಭಾವನೆಗೂ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ಸಡಿಲ ನಾಲಿಗೆಯ ಸಚಿವರಿಗೆ ಲಾಗಾಮು ಹಾಕಿರುವ ಅವರು, ಸಚಿವರಾದ ಶ್ರೀಕಾಂತ ಶರ್ಮಾ ಮತ್ತು ಸಿದ್ಧಾರ್ಥನಾಥ ಸಿಂಗ್ ಸರ್ಕಾರದ ಅಧಿಕೃತ ವಕ್ತಾರರನ್ನಾಗಿ ನೇಮಿಸಿದ್ದಾರೆ.

ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಹವನ

ಲಖನೌನ ಕಾಳಿದಾಸ ಮಾರ್ಗದಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಸೋಮವಾರ ಗೃಹ ಶುದ್ಧಿಗಾಗಿ ವಿಶೇಷ ಪೂಜೆ, ಹೋಮಗಳು ನಡೆದವು. ಗೋರಖಪುರ ಮತ್ತು ಅಲಹಾಬಾದ್​ನ ಏಳು ಆರ್ಚಕರ ತಂಡ ಪೂಜೆ ನೇರವೇರಿಸಿತು. ಶುಭ ಮುಹೂರ್ತದಲ್ಲಿ ಯೋಗಿ ಅವರು ಅಧಿಕೃತ ನಿವಾಸಕ್ಕೆ ಬರಲಿದ್ದಾರೆ.

100 ದಿನಗಳ ಅಜೆಂಡಾ ಸಿದ್ಧ

ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಪೂರೈಸುವ ನಿಟ್ಟಿನಲ್ಲಿ 100 ದಿನಗಳ ಅಜೆಂಡಾ ಸಿದ್ಧಪಡಿಸುತ್ತಿದೆ. ಕೃಷಿಕರ ಸಾಲ ಮನ್ನಾ, ಅಕ್ರಮ ಕಸಾಯಿಖಾನೆ ಮುಚ್ಚುವುದು, ಕಬ್ಬು ಬೆಳೆಗಾರರ ಸಮಸ್ಯೆಗಳು, ಮಹಿಳಾ ಸುರಕ್ಷತೆ ಪ್ರಮುಖ ವಿಚಾರವಾಗಿರಲಿದೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮೇಲೆ ಪ್ರಧಾನಿ ನಿಗಾ

ಉತ್ತರ ಪ್ರದೇಶ ಅಭಿವೃದ್ಧಿ ಕಾರ್ಯಗಳ ಮೇಲೆ ಪ್ರಧಾನಿ ನಿಗಾ ಇಡಲಿದ್ದಾರೆ. ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಮನ್ವಯಕಾರ ರಾಗಿರುತ್ತಾರೆ ಎಂದು ಸಿಎಂ ಯೋಗಿ ಅವರು ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಸಾಲ ಮನ್ನಾಕ್ಕೆ 27420 ಕೋಟಿ ರೂ.ಬೇಕು

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಉತ್ತರ ಪ್ರದೇಶ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಆ ರಾಜ್ಯದ ಬ್ಯಾಂಕ್​ಗಳ ಮೇಲೆ 27,420 ಕೋಟಿ ರೂ. ಹೊರೆ ಬೀಳಲಿದೆ. ಇದು ರಾಜ್ಯದ ಹಣಕಾಸು ಸ್ಥಿತಿಯನ್ನು ಸಂಕಷ್ಟಕ್ಕೆ ದೂಡುತ್ತದೆ. ರಾಜ್ಯದ ಒಟ್ಟಾರೆ ಆದಾಯದಲ್ಲಿ ಶೇ. 8ರಷ್ಟು ಕೊರತೆ ಆಗುತ್ತದೆ. ಸಣ್ಣ ಮತ್ತು ಅತಿಸಣ್ಣ ರೈತರೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಪಡೆದಿದ್ದಾರೆ ಎಂದು ಎಸ್​ಬಿಐನ ಸಂಶೋಧನಾ ಘಟಕ ಹೇಳಿದೆ.

ಗೋರಖಪುರದಲ್ಲಿ ಸಿಎಂಒ?

ಯೋಗಿ ಆದಿತ್ಯನಾಥ ಅವರು ತಮ್ಮ ಸ್ವಕ್ಷೇತ್ರ ಗೋರಖಪುರದಲ್ಲಿ ಸಿಎಂ ಕಾರ್ಯಾಲಯ (ಮಿನಿ ಸಿಎಂಒ) ತೆರೆಯುವ ಚಿಂತನೆ ಹೊಂದಿದ್ದು, ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಾದಿಯಲ್ಲಿ ಸಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ಮಿನಿ ಪಿಎಂಒ ತೆರೆದಿದ್ದಾರೆ.

ಹುಟ್ಟೂರಲ್ಲಿ ಸಂಭ್ರಮ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿ ಯೋಗಿ ಆದಿತ್ಯನಾಥ (ಮೂಲ ಹೆಸರು ಅಜಯ್ ಸಿಂಗ್ ಬಿಸಹ್ತ್) ಅವರು ಪದಗ್ರಹಣ ಮಾಡಿದ ಸಮಾರಂಭವನ್ನು ಅವರ ಹುಟ್ಟೂರಾದ ಉತ್ತರಾಖಂಡದ ಪೌರಿ ಜಿಲ್ಲೆಯ ಪಂಚುರ್ ಗ್ರಾಮದಲ್ಲಿ ಸಂಬಂಧಿಗಳು ಮತ್ತು ಗ್ರಾಮಸ್ಥರು ಟಿವಿಯಲ್ಲಿ ವೀಕ್ಷಿಸಿ ಕಣ್ತುಂಬಿಕೊಂಡರು.

‘ನನ್ನ ತಮ್ಮ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾನೆಂದು ತಿಳಿದಾಗ ಹೊಲದಲ್ಲಿದ್ದೆವು. ಮನೆಗೆ ಓಡಿ ಬಂದು ಟಿವಿ ನೋಡತೊಡಗಿದವು. ಸಂತೋಷದ ಭರದಲ್ಲಿ ಅಡುಗೆಯನ್ನೆ ಮಾಡಲಿಲ್ಲ. ಈ ವಿಚಾರ ತಿಳಿದ ನೆರೆಹೊರೆಯವರು ತಮ್ಮ ಮನೆಗಳಿಂದ ಸಿಹಿ ತಿನಿಸು, ಅಡುಗೆಯನ್ನು ತಂದುಕೊಟ್ಟರು’ ಎಂದು ಆದಿತ್ಯನಾಥ ಅವರ ಹಿರಿಯ ಸೋದರಿ ಶಶಿ ಭಾವುಕರಾಗಿ ನುಡಿದರು. ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಪೌರಿ ಜಿಲ್ಲೆಯ ಖೈರ್​ಸೈನ್ ಮೂಲದವರು.

Leave a Reply

Your email address will not be published. Required fields are marked *

Back To Top