Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ಉತ್ತರದಾಯಿತ್ವ ನಿಗದಿಯಾಗಲಿ

Monday, 09.10.2017, 3:00 AM       No Comments

ಮಳೆಸುರಿತದಂಥ ಪ್ರಕೃತಿ ಸಹಜ ವಿದ್ಯಮಾನವನ್ನು ಸಮರ್ಪಕವಾಗಿ ನಿರ್ವಹಿಸಲಾಗದ ಆಳುಗ ವ್ಯವಸ್ಥೆ ಯಾವೆಲ್ಲ ಅವ್ಯವಸ್ಥೆ, ದುರಂತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಬೆಂಗಳೂರಿನ ರಸ್ತೆಗಳ ಕರ್ಮಕಾಂಡವೇ ಜ್ವಲಂತಸಾಕ್ಷಿಯಾಗಿದೆ. ರಸ್ತೆ ಅಭಿವೃದ್ಧಿ/ದುರಸ್ತಿಯ ಹಣೆಪಟ್ಟಿಯಡಿ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದ್ದರೂ, ಇಲ್ಲಿನ ರಸ್ತೆಗಳ ‘ಹಣೆಬರಹ‘ ಬದಲಾಗುತ್ತಿಲ್ಲ ಎಂಬುದು ವಿಪರ್ಯಾಸ. ತತ್ಪರಿಣಾಮವಾಗಿ ರಸ್ತೆಗಳು ಸಾವಿನ ಕೂಪವಾಗಿ ಪರಿಣಮಿಸುತ್ತಿವೆ. ಭರಪೂರ ಮಳೆ ಬಂದಾಗ ರಸ್ತೆಗಳಲ್ಲಿ ಪ್ರವಹಿಸುವ ನೀರಿನಿಂದಾಗಿ ದ್ವಿಚಕ್ರ ವಾಹನ ಚಾಲಕರು ರಸ್ತೆಗುಂಡಿಗಳನ್ನು ಸಮರ್ಪಕವಾಗಿ ಅಂದಾಜಿಸಲಾಗದೆ ಬಿದ್ದು ಗಾಯಮಾಡಿಕೊಳ್ಳುವ, ಅಪಘಾತಕ್ಕೆ ಬಲಿಯಾಗುವ ನಿದರ್ಶನಗಳು ಹೆಚ್ಚುತ್ತಿವೆ. ಅತೀವ ವಾಹನ ದಟ್ಟಣೆಯಿರುವ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇಂಥದೇ ರಸ್ತೆಗುಂಡಿಯೊಂದನ್ನು ದ್ವಿಚಕ್ರ ವಾಹನ ಚಾಲಕರೊಬ್ಬರು ತಪ್ಪಿಸುವ ಯತ್ನದಲ್ಲಿದ್ದಾಗ, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು, ಹಿಂಬದಿಯಿಂದ ಬಂದ ಲಾರಿ ಹರಿದ ಪರಿಣಾಮವಾಗಿ ಅಸುನೀಗಿದ ದುರಂತ ಭಾನುವಾರ (ಅ.8) ಸಂಭವಿಸಿದೆ.

ಇಲ್ಲಿ ಬೆಂಗಳೂರಿನ ರಸ್ತೆಗಳದ್ದು ಪ್ರಾತಿನಿಧಿಕ ಉದಾಹರಣೆಯಷ್ಟೇ. ಹುಡುಕುತ್ತ ಹೋದರೆ ರಾಜ್ಯದ ತುಂಬ ಇಂಥ ಸಾವಿನಕೂಪಗಳು ಹೇರಳವಾಗಿ ಸಿಕ್ಕಾವು. ಆದರೆ ಇಂಥ ದುರ್ಘಟನೆಗಳು ಸಂಭವಿಸುತ್ತಲೇ ಇದ್ದರೂ, ಸಂಬಂಧಿತ ಆಳುಗವ್ಯವಸ್ಥೆಗಳು ಮೌನವ್ರತಕ್ಕೆ ಮೊರೆಹೋಗುವ, ಕಾರಣವನ್ನು ಮತ್ತೊಬ್ಬರ ತಲೆಗೆ ಕಟ್ಟಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪರಿಪಾಠವೇ ಹೆಚ್ಚುತ್ತಿದೆ. ಇದಕ್ಕೊಂದು ರ್ತಾಕ ಅಂತ್ಯ ಸಿಗುವಂತಾಗಬೇಕು.

ಪುರಸಭೆ/ಮಹಾನಗರಪಾಲಿಕೆಯಂಥ, ಆಡಳಿತ ನಿರ್ವಹಣೆಯ ಹೊಣೆಹೊತ್ತ ಸ್ಥಳೀಯ ಸಂಸ್ಥೆಗಳು ಯಾವುದೇ ಇರಲಿ, ರಸ್ತೆ ಅಭಿವೃದ್ಧಿ/ದುರಸ್ತಿ ಕಾಮಕಾರಿಗಳ ಹೆಸರಲ್ಲಿ ದೊಡ್ಡಮೊತ್ತದ ಹಣದ ಖರ್ಚಾಗಿರುವುದನ್ನು ಲೆಕ್ಕದಲ್ಲಿ ತೋರಿಸುತ್ತವೆಯೇ ವಿನಾ, ಕಾಮಗಾರಿ ಕಳಪೆಯಾಗಿದ್ದಲ್ಲಿ ಅಥವಾ ಅದರಿಂದ ಅವಘಡ ಸಂಭವಿಸಿದಲ್ಲಿ ಉತ್ತರದಾಯಿಗಳ್ಯಾರು ಎಂಬುದಕ್ಕೆ ಸ್ಪಷ್ಟ ಚಿತ್ರಣ ನೀಡುವುದಿಲ್ಲ. ಹೀಗಾಗಿ ಇಂಥ ಅಪಸವ್ಯಗಳ ಉತ್ತರದಾಯಿತ್ವದ ಹೊರೆ ಆಡಳಿತ ವ್ಯವಸ್ಥೆಯ ವಿಭಿನ್ನ ಸ್ತರದ ಅಧಿಕಾರಿಗಳ ಹೆಗಲಿಂದ ಹೆಗಲಿಗೆ ವರ್ಗಾವಣೆಯಾಗುತ್ತದೆಯೇ ವಿನಾ, ಸಮಸ್ಯೆಗೆ ಪರಿಹಾರೋಪಾಯ ದಕ್ಕುವುದಿಲ್ಲ. ಕಡೆಗೆ, ಮಳೆಯಂಥ ಪ್ರಾಕೃತಿಕ ವಿದ್ಯಮಾನವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ!

ಹಾಲೆಂಡ್, ಥೈಲೆಂಡ್, ಸಿಂಗಾಪುರ, ಶ್ರೀಲಂಕಾ ಮೊದಲಾದೆಡೆಯೂ ಭರಪೂರ ಮಳೆಯಾಗುತ್ತದೆ. ಹೀಗಿದ್ದರೂ ಅಲ್ಲಿನ ರಸ್ತೆಗಳು ಹದಗೆಡುವುದಿಲ್ಲ, ಗುಂಡಿ ಬೀಳುವುದಿಲ್ಲ. ಆದರೆ ನಮ್ಮಲ್ಲಿನ ರಸ್ತೆಗಳೇಕೆ ಇಂಥ ‘ಮಲತಾಯಿ ಧೋರಣೆ‘ಯ ಬಲಿಪಶುಗಳಾಗಿವೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ರಸ್ತೆ ನಿರ್ವಣದ ಮಾರ್ಗಸೂಚಿಯ ಅನ್ವಯ, ಮರಳು, ಜಲ್ಲಿಕಲ್ಲು ಮತ್ತು ಬಿಟ್ಯುಮಿನ್ ಡಾಂಬರ್​ನಂಥ ಘಟಕಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹಾಗೂ ತಾಪಮಾನದಲ್ಲಿ ಮಿಶ್ರಣ ಮಾಡಿ ಬಳಸಬೇಕು. ಆದರೆ ನಮ್ಮಲ್ಲಿ ನಿಗದಿತ ತಾಪಮಾನವನ್ನೂ ಕಾಯ್ದುಕೊಳ್ಳುವುದಿಲ್ಲ, ಜತೆಗೆ ಮರಳಿಗೆ ಬದಲಾಗಿ ಮಣ್ಣು ಹಾಗೂ ನಿಗದಿತ ಗಾತ್ರದ್ದಲ್ಲದ ಜಲ್ಲಿಕಲ್ಲು ಬಳಸುವುದರಿಂದಾಗಿ ರಸ್ತೆಗೆ ಡಾಂಬರು ಸರಿಯಾಗಿ ಕಚ್ಚಿಕೊಳ್ಳುವುದಿಲ್ಲ. ಜತೆಗೆ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆನೀರು ಮೋರಿಯಲ್ಲಿ ಹರಿದುಹೋಗದೆ ರಸ್ತೆಯಲ್ಲೇ ಕಟ್ಟಿಕೊಳ್ಳುವಂತಾಗಿ ಬಿಟ್ಯುಮಿನ್ ಡಾಂಬರು ಜಲ್ಲಿಕಲ್ಲುಗಳಿಂದ ಬೇರ್ಪಟ್ಟು ಹೊಂಡಗಳು ನಿರ್ವಣವಾಗುತ್ತವೆ ಎಂಬುದು ತಜ್ಞರ ಅಭಿಮತ. ಈ ಮಾರ್ಗದರ್ಶಿ ಸೂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಷ್ಟವೇನಲ್ಲ. ಆದರೆ ರಸ್ತೆಗಳು ಸುದೀರ್ಘ ಕಾಲದವರೆಗೆ ಬಾಳಿಕೆ ಬಂದುಬಿಟ್ಟರೆ ಕೆಲವೊಂದು ಹಿತಾಸಕ್ತರ ಹಿತಾಸಕ್ತಿಗಳನ್ನು ಈಡೇರಿಸುವುದು ದುಸ್ತರ ಎಂಬ ಗ್ರಹಿಕೆಯಲ್ಲಿ ಕಳಪೆ ರಸ್ತೆಗಳೇ ನಿರ್ವಣವಾಗುತ್ತಿರುವುದು ಕಹಿವಾಸ್ತವ. ಈ ಪರಿಪಾಠ ಅಂತ್ಯವಾಗುವವರೆಗೂ ದುರಂತಪರ್ವ ತಪ್ಪಿದ್ದಲ್ಲ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

Leave a Reply

Your email address will not be published. Required fields are marked *

Back To Top