Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಉತ್ತಮ ಚಿಂತನೆ

Friday, 06.10.2017, 3:06 AM       No Comments

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆ ಜುಲೈ 1ರಿಂದ ಅನುಷ್ಠಾನಗೊಂಡಿದೆ. ಹಾಗೇ, ‘ಒಂದು ದೇಶ ಒಂದು ಚುನಾವಣೆ’ಯೂ ಅನುಷ್ಠಾನಗೊಳ್ಳಬೇಕು ಎಂಬ ಚಿಂತನೆ ಚರ್ಚೆಯ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತ ‘ರಾಜಕೀಯವನ್ನು ಬದಿಗಿರಿಸಿ, ಏಕಕಾಲಕ್ಕೆ ಸಾರ್ವತ್ರಿಕ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಪ್ರಸ್ತಾವನೆಗೆ ಬೆಂಬಲ ನೀಡಬೇಕು’ ಎಂದು ಎಲ್ಲ ರಾಜಕೀಯ ಪಕ್ಷಗಳನ್ನು ಕೇಳಿಕೊಂಡಿದ್ದರು. ಪ್ರಧಾನಿಯ ಈ ಪ್ರಸ್ತಾವಕ್ಕೆ ನೀತಿ ಆಯೋಗ ಬೆಂಬಲ ಸೂಚಿಸಿದೆ. ಈಗ ಚುನಾವಣಾ ಆಯೋಗವು ಲೋಕಸಭೆ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು 2018ರ ಸೆಪ್ಟೆಂಬರ್ ವೇಳೆಗೆ ಸರ್ವರೀತಿಯಲ್ಲೂ ಸಜ್ಜಾಗುವುದಾಗಿ ಹೇಳಿರುವುದು ಮಹತ್ವದ ಬೆಳವಣಿಗೆಯೇ ಸರಿ.

ನಮ್ಮ ದೇಶದಲ್ಲಿ ಚುನಾವಣಾ ವಾತಾವರಣ ಸರ್ವಕಾಲದಲ್ಲೂ ಜಾಗೃತವಾಗಿರುತ್ತದೆ. ಪಂಚಾಯಿತಿ, ಸ್ಥಳೀಯ ಸಂಸ್ಥೆ, ವಿಧಾನಸಭೆ, ಲೋಕಸಭೆ… ಹೀಗೆ ಒಂದಿಲ್ಲೊಂದು ಚುನಾವಣೆಗಳು ಸದ್ದು-ಸುದ್ದಿ ಮಾಡುತ್ತವೆ. ಆಯಾ ರಾಜ್ಯಗಳಲ್ಲಿ ವಿಧಾನಸಭಾ ಅವಧಿ ಮುಕ್ತಾಯಗೊಂಡ ಬಳಿಕ ಚುನಾವಣೆ ನಡೆಸುವುದು ವಾಡಿಕೆ. ಆದರೆ, ವರ್ಷದ ಹಲವು ತಿಂಗಳುಗಳು ಚುನಾವಣಾ ತಾಪದಲ್ಲಿಯೇ ಕಳೆದುಹೋಗುವುದರಿಂದ ಆಡಳಿತಯಂತ್ರ ಸಂಪೂರ್ಣ ಸ್ತಬ್ಧವಾಗುತ್ತದೆ. ನೀತಿಸಂಹಿತೆ ಜಾರಿಯಲ್ಲಿದ್ದಾಗ ಸರ್ಕಾರಗಳು ಯಾವುದೇ ಹೊಸ ಘೋಷಣೆ ಮಾಡುವಂತಿಲ್ಲ, ಯೋಜನೆ ಆರಂಭಿಸುವಂತಿಲ್ಲ. ಹೀಗೆ ಸರಾಸರಿ ವರ್ಷದ ಮೂರು ತಿಂಗಳು ನೀತಿಸಂಹಿತೆಯಲ್ಲಿಯೇ ಕಳೆದು ಹೋಗುವುದರಿಂದ ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣುವುದು ಸ್ವಾಭಾವಿಕ. ಅಲ್ಲದೆ, ಹೀಗೆ ಬೇರೆ-ಬೇರೆ ಅವಧಿಯಲ್ಲಿ ನಡೆಯುವ ಚುನಾವಣೆಗಳು ಅಪಾರ ಖರ್ಚಿಗೂ ಕಾರಣವಾಗುತ್ತವೆ ಮತ್ತು ಮಾನವ ಸಂಪನ್ಮೂಲವನ್ನು ಪದೇಪದೆ ಈ ಸಂಬಂಧಿ ಕೆಲಸಗಳಲ್ಲೇ ತೊಡಗಿಸಬೇಕಾಗುತ್ತದೆ. ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ದೊಡ್ಡ ಸವಾಲು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮೊದಲಿಗೆ, ಇದು ಅನುಷ್ಠಾನ ಮಾಡುವಾಗ ಒಂದೇ ಬಾರಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗಿ ಬರಬಹುದು. ಅಲ್ಲದೆ, ವಿಧಾನಸಭೆಗಳ ಅವಧಿಯನ್ನೂ ಹಿಗ್ಗಿಸುವ-ಕುಗ್ಗಿಸುವ ನಿಟ್ಟಿನಲ್ಲಿ ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು. ಆದರೆ, ಇವು ಆರಂಭಿಕ ತೊಡಕುಗಳಷ್ಟೇ. ಒಮ್ಮೆ ಏಕಕಾಲಕ್ಕೆ ಸುಗಮವಾಗಿ ಚುನಾವಣೆ ನಡೆದಲ್ಲಿ ಮುಂದಿನ ಅವಧಿಗೆ ಚುನಾವಣೆ ನಡೆಸುವಾಗ ಯಾವುದೇ ಅಡ್ಡಿ-ಆತಂಕ ಕಾಡುವ ಸಾಧ್ಯತೆ ತೀರಾ ಕಡಿಮೆ.

ಕೇಂದ್ರ ಸರ್ಕಾರ ಈಗಾಗಲೇ ಇವಿಎಂಗೆ 12 ಸಾವಿರ ಕೋಟಿ ಹಾಗೂ ವಿವಿಪ್ಯಾಟ್ ಯಂತ್ರ ಖರೀದಿಸಲು 3,400 ಕೋಟಿ ರೂ. ಅನುದಾನ ನೀಡಿದೆ. ಚುನಾವಣಾ ಆಯೋಗವು ಮತಯಂತ್ರಗಳ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, 2018ರ ಸೆಪ್ಟೆಂಬರ್ ವೇಳೆಗೆ 40 ಲಕ್ಷ ವಿವಿಪ್ಯಾಟ್ ಯಂತ್ರಗಳನ್ನು ಖರೀದಿಸಲಿದೆ. ಅಂದರೆ ಚುನಾವಣಾ ಆಯೋಗ ಏಕಕಾಲದ ಚುನಾವಣೆಗೆ ತನ್ನ ಸಂಪೂರ್ಣ ತಯಾರಿ ಮತ್ತು ಬದ್ಧತೆಯನ್ನು ತೋರಿದೆ. ಈ ವಿಷಯದಲ್ಲೀಗ ಒಮ್ಮತ ಏರ್ಪಡಬೇಕಿರುವುದು ರಾಜಕೀಯ ಪಕ್ಷಗಳಲ್ಲಿ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು-ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆದರೆ ಜನಾದೇಶವೂ ಯಾರ ಪರವಾಗಿದೆ, ಯಾವ ಪಕ್ಷಗಳ ನೀತಿ, ಕಾರ್ಯಕ್ರಮಗಳನ್ನು ಮತದಾರರು ಒಪ್ಪಿಕೊಂಡಿದ್ದಾರೆ ಎಂಬುದೂ ಸ್ಪಷ್ಟವಾಗುತ್ತದೆ. ಕಾರಣ, ಆಯಾ ಕಾಲಕ್ಕೆ ನಡೆಯುವ ಚುನಾವಣೆಗಳು ಆಗಿನ ಜ್ವಲಂತ ವಿಷಯಗಳು ಮತ್ತು ಸಮಸ್ಯೆಯನ್ನು ಮಾತ್ರ ಆಧರಿಸಿ ನಡೆಯುತ್ತವೆ.

ಏಕಕಾಲಕ್ಕೆ ಚುನಾವಣೆ ಕುರಿತಂತೆ ದೇಶದಲ್ಲಿ ಚಿಂತನ-ಮಂಥನ ಆರಂಭವಾಗಿದ್ದು, ರ್ತಾಕ ಮತ್ತು ಪ್ರಾಯೋಗಿಕ ನೆಲೆಗಟ್ಟುಗಳನ್ನು ಅವಲೋಕಿಸಿ, ವಿಶ್ಲೇಷಿಸಿ ಎಲ್ಲ ರಾಜಕೀಯ ಪಕ್ಷಗಳು ಸೂಕ್ತ ಮತ್ತು ಒಮ್ಮತದ ನಿರ್ಣಯಕ್ಕೆ ಬಂದರೆ ಅದರಿಂದ ಆಡಳಿತ ರಂಗ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುಕೂಲವಾಗಲಿದೆ.

Leave a Reply

Your email address will not be published. Required fields are marked *

Back To Top