Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಉತ್ತಮರನ್ನು ಉಳಿಸಿಕೊಳ್ಳಲಾಗದ ಕಷ್ಟ-ನಷ್ಟ

Wednesday, 21.06.2017, 3:03 AM       No Comments

ಕರ್ನಾಟಕ ಕ್ರಿಕೆಟ್​ಗೆ ಈ ಮಂಗಳವಾರ ಬಹಳ ನಿರಾಸೆಯ ದಿನ. ಅತ್ಯಂತ ಯಶಸ್ವಿ ಕೋಚ್ ಎನಿಸಿಕೊಂಡರೂ, ನಾಯಕ ವಿರಾಟ್ ಕೊಹ್ಲಿಯ ಅರ್ತಾಕ ವಿರೋಧದಿಂದಾಗಿ ಅನಿಲ್ ಕುಂಬ್ಳೆ ಭಾರತ ತಂಡದ ತರಬೇತುದಾರನ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಇತ್ತ ಕಳೆದೆರಡು ದಶಕಗಳ ಅತ್ಯಂತ ನಂಬಿಗಸ್ಥ ಬ್ಯಾಟ್ಸ್​ಮನ್ ರಾಬಿನ್ ಉತ್ತಪ್ಪ ರಾಜ್ಯ ತಂಡ ತೊರೆದು, ಅನ್ಯ ರಾಜ್ಯಕ್ಕೆ (ಕೇರಳ?) ವಲಸೆ ಹೋಗುವ ನಿರ್ಧಾರ ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣವಾದ ವಿಚಾರಗಳು ಏನೇ ಇರಲಿ, ಭಾರತ ಹಾಗೂ ಕರ್ನಾಟಕ ತಂಡಕ್ಕೆ ಇದರಿಂದ ಭಾರೀ ನಷ್ಟವಾಗಿದೆ ಎನ್ನುವುದಂತೂ ಸತ್ಯ.

2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳಿ. ಮಹೇಂದ್ರ ಸಿಂಗ್ ಧೋನಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ರಂಗಪ್ರವೇಶ ಮಾಡಿದ್ದ ಆ ಟೂರ್ನಿಯಲ್ಲಿ ಭಾರತ ಪಾಕಿಸ್ತಾನವನ್ನು ಒಮ್ಮೆ ಲೀಗ್​ನಲ್ಲಿ ಹಾಗೂ ಮತ್ತೊಮ್ಮೆ ಫೈನಲ್​ನಲ್ಲಿ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಬೌಲ್​ಔಟ್​ನಲ್ಲಿ ಫಲಿತಾಂಶ ನಿರ್ಣಯವಾದ ಆ ಪಂದ್ಯದಲ್ಲಿ ಭಾರತದ ಪ್ರಶಸ್ತಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ನಮ್ಮ ಕನ್ನಡಿಗ ರಾಬಿನ್ ಉತ್ತಪ್ಪ. ಆ ದಿನ ಭಾರತೀಯ ಬ್ಯಾಟಿಂಗ್ ಪರದಾಟದಲ್ಲಿದ್ದಾಗ ಅದ್ಭುತ ಆಟವಾಡಿ ಅರ್ಧ ಶತಕ ಬಾರಿಸಿದ್ದ ಉತ್ತಪ್ಪ, ಬಳಿಕ ಬೌಲ್​ಔಟ್​ನಲ್ಲೂ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಬಳಿಕ ಭಾರತದ ಪರ ಕೊನೆಯವರಾಗಿ ಪಾಕಿಸ್ತಾನವನ್ನು ಬೌಲ್​ಔಟ್ ಮಾಡಿ ಗೆಲುವು ತಂದುಕೊಟ್ಟಿದ್ದರು. ಸ್ಪೋಟಕ ಬ್ಯಾಟ್ಸ್​ಮನ್, ಚುರುಕಿನ ಫೀಲ್ಡರ್, ಉಪಯುಕ್ತ ವಿಕೆಟ್ಕೀಪರ್ ಎಲ್ಲವೂ ಆಗಿರುವ ಉತ್ತಪ್ಪ ಆಧುನಿಕ ಕ್ರಿಕೆಟ್ ಬಯಸುವ ಸಮಗ್ರ ಪ್ಯಾಕೇಜ್ ಆಗಿದ್ದರೂ, ಸದ್ಯ ಟೀಮ್ ಇಂಡಿಯಾ, ಕರ್ನಾಟಕ ರಣಜಿ ತಂಡ ಎಲ್ಲೂ ಸಲ್ಲದವರಾಗಿ ಕೇರಳ ತಂಡದತ್ತ ವಲಸೆ ಹೊರಟಿದ್ದಾರೆ. ರಾಜ್ಯ ಕ್ರಿಕೆಟ್ ಪಾಲಿಗೆ ಅತ್ಯಂತ ಬೇಸರದ ಸಂಗತಿ ಇದು.

ಕಳೆದ ಹದಿನೈದು ವರ್ಷಗಳಿಂದ ರಾಜ್ಯ ಕ್ರಿಕೆಟ್ ತಂಡದ ಭಾಗವಾಗಿದ್ದ, ಹಲವು ಯಶಸ್ವಿ ಅಭಿಯಾನಗಳ ಹಿಂದಿನ ಶಕ್ತಿಯಾಗಿದ್ದ ಉತ್ತಪ್ಪ ವೃತ್ತಿಜೀವನದಲ್ಲಿ ಕರ್ನಾಟಕವನ್ನು ತೊರೆದು ಅನ್ಯರಾಜ್ಯಕ್ಕೆ ವಲಸೆ ಹೋಗುವ ಪ್ರಸಂಗವೊಂದು ಬರುತ್ತದೆ ಎಂದು ಊಹೆ ಮಾಡುವುದೂ ಸಾಧ್ಯವಿರಲಿಲ್ಲ. ಆದರೆ, ಪ್ರಪಂಚದ ರಿವಾಜೇ ಹೀಗೆ.. ಇಲ್ಲಿ ನಿರೀಕ್ಷಿತಕ್ಕಿಂತ ಅನಿರೀಕ್ಷಿತ ಅನಿವಾರ್ಯಗಳು ಒದಗಿಬರುವುದೇ ಜಾಸ್ತಿ.

ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಮಾದರಿಗೆ ಹೊಂದುವಂಥ, ರಕ್ಷಣಾತ್ಮಕ ಆಟವಿರಲಿ, ಹೊಡಿಬಡಿ ಆರ್ಭಟವಿರಲಿ ಯಾವ ಸನ್ನಿವೇಶಕ್ಕೂ ಒಗ್ಗುವ ಬ್ಯಾಟ್ಸ್​ಮನ್​ಗಳು ಅಪರೂಪ. ಉತ್ತಪ್ಪ ಅಂಥ ವಿರಳ ತಳಿಯ ಬ್ಯಾಟ್ಸ್​ಮನ್. ಯಾವುದೇ ಪಿಚ್ ಇರಲಿ, ಎಂಥ ಘಟಾನುಘಟಿ ಬೌಲರ್​ಗಳೇ ಇರಲಿ, ನಿರ್ಭೀತ ಬ್ಯಾಟಿಂಗ್ ಉತ್ತಪ್ಪ ಛಾತಿ. ಬ್ಯಾಟಿಂಗ್ ಕ್ರೀಸಿನಲ್ಲಿರುವಾಗ ಉತ್ತಪ್ಪ ಮುಖದಲ್ಲಿ ಯಾವತ್ತೂ ಅಳುಕು ಕಾಣಿಸಿಕೊಂಡಿದ್ದೇ ಇಲ್ಲ. ಪಾಕಿಸ್ತಾನ, ಆಸ್ಟ್ರೇಲಿಯಾ ತಂಡವೇ ಇರಲಿ ಅಥವಾ ತಮಿಳುನಾಡು, ಮುಂಬೈನಂಥ ರಣಜಿ ಎದುರಾಳಿಗಳೇ ಆಗಲಿ ಉತ್ತಪ್ಪ ಬ್ಯಾಟಿಂಗ್ ಮಾಡುವಾಗ ಅದೇ ಆತ್ಮವಿಶ್ವಾಸ, ಲವಲವಿಕೆ. ಇಂಥ ಬ್ಯಾಟಿಂಗ್ ಶೈಲಿ ಅವರಿಗೆ ಸಿದ್ಧಿಸಿದ್ದು ಅತ್ಯುತ್ತಮ ತಂತ್ರಗಾರಿಕೆಯಿಂದ. ದಿನೇ ದಿನೇ ಅಪ್​ಡೇಟ್ ಆಗುವ ಮನೋಭಾವದಿಂದ, ತಮ್ಮ ಆಟದಲ್ಲಿ, ಹೊಡೆತಗಾರಿಕೆಯಲ್ಲಿ ಪ್ರತೀ ಬಾರಿ ನಾವಿನ್ಯಕ್ಕೆ ತುಡಿಯುವ ಪ್ರಯೋಗಶೀಲತೆಯಿಂದ. ಟಿ20 ಕ್ರಿಕೆಟ್​ನಲ್ಲಿ ಈಗಿನ ಆಟಗಾರರು ಪ್ರಯತ್ನಿಸುತ್ತಿರುವ ಅನೇಕ ಹೊಸ ಬಗೆಯ ಹೊಡೆತಗಳನ್ನು ಉತ್ತಪ್ಪ 2007, 08, 09ರಲ್ಲೇ ಪ್ರಯೋಗಿಸಿದ್ದರು. ಇಂಥ ಆಟಗಾರನಿಗೆ ಭಾರತ ತಂಡದಲ್ಲಿ ಕಾಯಂ ಆಟಗಾರನೆನಿಸುವ ಯೋಗ ಸಿಗಲಿಲ್ಲ ಎನ್ನುವುದೇ ದುರಂತ.

ಐಪಿಎಲ್ ಇರಲಿ, ಅಂತಾರಾಷ್ಟ್ರೀಯ ಪಂದ್ಯಗಳಿರಲಿ ಉತ್ತಪ್ಪ ಅವರಿಗೆ ಬೌಲಿಂಗ್ ಮಾಡುವುದೆಂದರೆ, ಬೌಲರ್​ಗಳು ಹೆದರಿದಂಥ ಸಂದರ್ಭಗಳಿವೆ. ಒಂದೆಡೆ ವಿಕೆಟ್​ಗಳು ಉರುಳುತ್ತಿದ್ದರೂ, ಉತ್ತಪ್ಪ ಕ್ರೀಸಿನಲ್ಲಿದ್ದರೆ ಸೋಲಿನ ಭೀತಿ ಇರುವುದಿಲ್ಲ. ಅಂಥ ವಿಶ್ವಾಸಭರಿತ ಆಟ ಅವರದ್ದು. ದೀರ್ಘಕಾಲೀನ ಅವಕಾಶ ದೊರೆತಿದ್ದರೆ, ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ ಅಥವಾ ಭಾರತೀಯ ವೀರೇಂದ್ರ ಸೆಹ್ವಾಗ್ ಮಟ್ಟಕ್ಕೆ ಬೆಳೆಯುವ ಎಲ್ಲ ಪ್ರತಿಭೆ ಹಾಗೂ ಮನೋಬಲ ಉತ್ತಪ್ಪ ಅವರಿಗಿತ್ತು, ಈಗಲೂ ಇದೆ. ಆದರೆ, ಅವಕಾಶದ್ದೇ ಸಮಸ್ಯೆ. ಗೇಲ್ ಮತ್ತು ಸೆಹ್ವಾಗ್​ಗಾದಂತೆ ಉತ್ತಪ್ಪಗೂ ತಮ್ಮನ್ನು ಸದಾಕಾಲ ಬೆಂಬಲಿಸುವ ನಾಯಕ/ಮ್ಯಾನೇಜ್​ವೆುಂಟ್ ಸಿಗಲಿಲ್ಲ.

ಕೆಟ್ಟ ಫಾಮ್ರ್ ಎನ್ನುವುದು ಪ್ರತಿಯೊಬ್ಬ ಆಟಗಾರರ ಜೀವನದಲ್ಲಿ ಇದ್ದಿದ್ದೇ. ಆದರೆ, ವೃತ್ತಿಜೀವನದ ಇಂಥ ಘಟ್ಟದಲ್ಲಿ ಆಟಗಾರರು ಹತಾಶರಾಗದಂತೆ, ನೇಪಥ್ಯಕ್ಕೆ ಸರಿದುಹೋಗದಂತೆ ಸಂರಕ್ಷಿಸಿಕೊಳ್ಳುವ ಕೆಲಸ ಟೀಮ್ ಮ್ಯಾನೇಜ್​ವೆುಂಟ್​ಗಳಿಂದ ಆಗಬೇಕು. ಆದರೆ, ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ಮುರಳಿ ವಿಜಯ್, ಸುರೇಶ್ ರೈನಾ, ಶಿಖರ್ ಧವನ್ ಮೊದಲಾದ ಆಟಗಾರರಿಗೆ ಸಿಕ್ಕ ಅವಕಾಶ ಉತ್ತಪ್ಪ, ಮನೀಷ್ ಪಾಂಡೆಯಂಥ ಆಟಗಾರರಿಗೆ ಸಿಗಲೇ ಇಲ್ಲ. ಜೊತೆಗೆ ಉತ್ತಪ್ಪ ದುರದೃಷ್ಟವೆಂದರೆ, ಅವರು ಧೋನಿ ಕಾಲಘಟ್ಟಕ್ಕೆ ಸೇರಿದವರಾಗಿದ್ದು. ಉತ್ತಪ್ಪ ರಾಷ್ಟ್ರೀಯ ತಂಡದಲ್ಲಿ ಬೇರೂರುವುದಕ್ಕೆ ಧೋನಿ ಅವಕಾಶವನ್ನೇ ಕೊಡಲಿಲ್ಲ ಎಂಬ ಅಭಿಪ್ರಾಯವಿದೆ. ಇದಕ್ಕೆ ಉತ್ತಪ್ಪ ವಿಕೆಟ್ ಕೀಪರ್ ಆಗಿರುವುದೂ ಕಾರಣ.

ಕೆಲವು ಆಟಗಾರರಿರುತ್ತಾರೆ… ಅವರು ಉತ್ತಮವಾಗಿ ಆಡಿದ ದಿನ ತಂಡಕ್ಕೆ ಗೆಲುವು ಗ್ಯಾರಂಟಿ. ಬೇಗನೆ ಔಟಾದ ಸಂದರ್ಭದಲ್ಲೂ ಅವರು ಕಳಪೆ ಆಟವಾಡಿ, ಓವರ್​ಗಳನ್ನು ವ್ಯರ್ಥ ಮಾಡಿರುವುದಿಲ್ಲ. ಸಾಹಸದ ಹೊಡೆತಕ್ಕೆ ಯತ್ನಿಸಿ ಅಥವಾ ಅಚಾತುರ್ಯದಿಂದ ಔಟಾಗಿರುತ್ತಾರೆ… ಆದರೆ, ಒಂದೆರಡು ಇನಿಂಗ್ಸ್​ಗಳಲ್ಲಿ ವಿಫಲರಾದರೆಂದು ಡ್ರಾಪ್ ಮಾಡಬಹುದಾದಂಥ ಆಟಗಾರರಲ್ಲ ಅವರು. ಕ್ರಿಸ್ ಗೇಲ್ ಅಂಥ ಆಟಗಾರ. ಅವರು ತಂಡದಲ್ಲಿದ್ದರೇ ಸಾಕು, ಎದುರಾಳಿಗಳಿಗೆ ಅರ್ಧ ಬಲ ಕುಸಿದಿರುತ್ತದೆ. ಇನ್ನು ಬ್ಯಾಟ್ ಬೀಸಿದರಂತೂ ಪಂದ್ಯದ ದಿಕ್ಕುದೆಸೆ ಬದಲಿಸಿಬಿಟ್ಟಿರುತ್ತಾರೆ. ಟಿ20, ಏಕದಿನಗಳಲ್ಲಿ ಶರವೇಗದಲ್ಲಿ ಆಡುವ ಅವರು ಟೆಸ್ಟ್​ಗಳಲ್ಲಿ ದಿನಪೂರ್ತಿ ಆಡಿ ದ್ವಿಶತಕ, ತ್ರಿಶತಕ, ನಾಲ್ಕೂಶತಕ ಬಾರಿಸಲೂ ಬಲ್ಲರು. ವೀರೇಂದ್ರ ಸೆಹ್ವಾಗ್ ಸಹ ಅಂಥವರೇ. ದುರದೃಷ್ಟವೆಂದರೆ, ಗೇಲ್​ರ ಮೌಲ್ಯ ವೆಸ್ಟ್ ಇಂಡೀಸ್ ಮಂಡಳಿಯ ರಾಜಕೀಯದ ಎದುರು ಮುಕ್ಕಾಗಿದೆ. ಸೆಹ್ವಾಗ್ ವೃತ್ತಿಜೀವನ ಧೋನಿ ಕಾರಣದಿಂದ ಮೊಟಕಾಯಿತು. ಉತ್ತಪ್ಪ ಸಹ ಇಂಥ ಆಟಗಾರರೇ. ಆದರೆ, ಫಾಮರ್್​ನ ನೆಪದಿಂದ ಕಳೆದ ವರ್ಷ ಕರ್ನಾಟಕದ ರಣಜಿ ಅಭಿಯಾನದಲ್ಲಿ ಪದೇ ಪದೇ ಅವರಿಗೆ ಕೊಕ್ ನೀಡಲಾಯಿತು. ಋತುವಿನಲ್ಲಿ ಉತ್ತಪ್ಪ ಆಡಿದ್ದು ಕೇವಲ 7 ಇನಿಂಗ್ಸ್​ಗಳಲ್ಲಿ. ಕ್ವಾರ್ಟರ್​ಫೈನಲ್​ನಂಥ ಮಹತ್ವದ ಪಂದ್ಯದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಬಹುಶಃ ಈ ಎಲ್ಲಾ ಕಾರಣಗಳೇ ಅವರು ಅನ್ಯರಾಜ್ಯಕ್ಕೆ ವಲಸೆ ಹೋಗಲು ಕಾರಣವಾಗಿದೆ. ಉತ್ತಪ್ಪ ವಲಸೆ ಕೇರಳಕ್ಕೆ ಲಾಭ ಎನ್ನುವುದರಲ್ಲಿ ಅನುಮಾನವಿಲ್ಲ. ಸದ್ಯ ರಣಜಿ ಸಿ ಗುಂಪಿನಲ್ಲಿರುವ ತಂಡ ಬರುವ ಋತುವಿನಲ್ಲಿ ಮುಂಬಡ್ತಿಗೆ ಯತ್ನಿಸಬಹುದು. ಆದರೆ, ರಾಜ್ಯ ತಂಡ ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಪ್ಪ ಉಪಸ್ಥಿತಿ ಹಾಗೂ ಅನುಭವದ ಕೊರತೆ ಎದುರಿಸಲಿದೆ.

ಇನ್ನು ಕುಂಬ್ಳೆ ವಿಚಾರಕ್ಕೆ ಬರುವುದಾದರೆ, ಕೋಚ್ ಹುದ್ದೆಗೇರಿದ ಒಂದು ವರ್ಷ ಅವಧಿಯಲ್ಲಿ ಶಿಸ್ತು ಹಾಗೂ ಘನತೆಯಿಂದ ತಮ್ಮ ಕರ್ತವ್ಯದ ಬಗ್ಗೆ ಮಾತ್ರ ಗಮನ ಕೊಟ್ಟ ಅವರು, ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆಯೇ ಸ್ಥಾನ ತೊರೆದಿದ್ದಾರೆ. ಇದಕ್ಕೆ ಕಾರಣ ರವಿಶಾಸ್ತ್ರಿ ಪರವಾಗಿ ಲಾಬಿ ಮಾಡುತ್ತಿರುವ ನಾಯಕ ಕೊಹ್ಲಿ ವಿರೋಧ. ಕಳೆದ ಒಂದು ತಿಂಗಳಿಂದ ತಮ್ಮ ಬಗ್ಗೆ ಎಷ್ಟೇ ನಕಾರಾತ್ಮಕ ವಿಚಾರಗಳು ಪ್ರಕಟವಾಗುತ್ತಿದ್ದರೂ, ತುಟಿ ಬಿಚ್ಚದ ಕುಂಬ್ಳೆಯ ಸಂಯಮಕ್ಕೆ ಹ್ಯಾಟ್ಸ್​ಆಫ್. ಅವರ ಶಿಸ್ತಿನ ತರಬೇತಿಯೇ ವಿರಾಟ್ ಹಾಗೂ ಇತರ ಆಟಗಾರರ ಮುನಿಸಿಗೆ ಕಾರಣವಾಗಿದ್ದರೆ, ಅದರಿಂದ ನಷ್ಟ ಸ್ವತಃ ಆಟಗಾರರಿಗೇ ಹೊರತು ಕುಂಬ್ಳೆಗಲ್ಲ…

 

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top