Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಈ ಹೊತ್ತಿನ ಹುಚ್ಚು ಮನಸ್ಸಿನ ಹತ್ತು ಮುಖಗಳು!

Sunday, 08.10.2017, 3:04 AM       No Comments

ಮುಖವಾಡ ಧರಿಸಿ ವ್ಯವಹರಿಸುತ್ತಿರುವ ಇಂದಿನ ದಿನಮಾನದಲ್ಲಿ, ಕಣ್ಣಿಗೆ ಕಂಡದ್ದೆಲ್ಲವೂ ನಿಜವಲ್ಲದಿರಬಹುದು. ಹೊರತೋರಿಕೆಗೆ ಒಳ್ಳೆಯವರಂತೆ ಕಂಡವರು ಒಳಗೊಳಗೇ ಬೇರೆಯದೇ ಚಿಂತನೆಯಲ್ಲಿ ವ್ಯಸ್ತರಾಗಿರಬಹುದು. ಇಂಥ ಚಿತ್ತಸ್ಥಿತಿ ವಿಶ್ಲೇಷಣೆ ಮತ್ತು ಅಂಥವರಿಂದ ಒದಗುವ ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಳ್ಳುವಿಕೆ ಇಂದಿನ ಅನಿವಾರ್ಯತೆಯಾಗಿದೆ.

ಸೈಕೋಪ್ಯಾತ್ ಎಂದೊಡನೆ ಸಿನಿಮಾಗಳು ನೆನಪಾಗುತ್ತವೆ. ಅದರಲ್ಲಿ ತೋರಿಸಲಾಗುವ, ವಿಚಿತ್ರವಾಗಿ ವರ್ತಿಸುವ ವಿಕಾರರೂಪಿ ವ್ಯಕ್ತಿ ಮನಸ್ಸಿಗೆ ಬರುತ್ತಾನೆ. ಅವನ ಕಡೆ ನೋಡಿದರೆ ಅವನು ನಮ್ಮನ್ನು ಕೊಂದುಬಿಡುತ್ತಾನೇನೋ ಎಂಬಷ್ಟು ಭಯವಾಗುತ್ತದೆ. ಇವನೊಬ್ಬ ಸೈಕೋಪ್ಯಾತ್ ಎಂದು ಸಿನಿಮಾದಲ್ಲಿಯೂ ಯಾರೂ ನಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವನ ಮುಖ-ತಿರುಚುವಿಕೆ, ಕೆಂಗಣ್ಣುಗಳು, ಕೆದರಿದ ಕೂದಲು, ವೇಷಭೂಷಣಗಳು, ನಡೆಯುವ ಭಂಗಿ, ಆಡುವ ಮಾತುಗಳೆಲ್ಲದರ ಜತೆಗೆ ಘಾತುಕವಾದ ಹಿನ್ನೆಲೆ ಸಂಗೀತವೂ ಸೇರಿ ನಮಗೆ ಅವನ ಮನೋವಿಕಾರದ ಭೀಕರ ಚಿತ್ರ ಕಟ್ಟುಕೊಟ್ಟಿರುತ್ತವೆ. ಒಟ್ಟಿನಲ್ಲಿ, ಚಲನಚಿತ್ರಗಳಲ್ಲಿ/ಇತರೆ ದೃಶ್ಯಮಾಧ್ಯಮಗಳಲ್ಲಿ ಈ ಸೈಕೋಪ್ಯಾತ್ ಪಾತ್ರಗಳನ್ನು ಪತ್ತೆಹಚ್ಚುವುದು ಸುಲಭದ ಕೆಲಸ.

ಆದರೆ, ನಿಜಜೀವನದಲ್ಲಿ ಹಾಗಲ್ಲ! ಏಕೆಂದರೆ, ಈ ಸೈಕೋಪ್ಯಾತ್​ಗಳು ಮೇಲೆ ಹೇಳಿದ ಯಾವ ಹೊರಲಕ್ಷಣಗಳನ್ನೂ ತೋರದೆ, ನಮ-ನಿಮ್ಮೊಳ ಗೊಬ್ಬರಾಗಿಬಿಟ್ಟಿರುತ್ತಾರೆ! ಬೇರಾವುದೋ ವಿಷಯವಾಗಿ ಆನ್​ಲೈನ್ ಸಂಶೋಧನೆ ಮಾಡುತ್ತಿರುವಾಗ ಸೈಕೋಪ್ಯಾತ್​ಗಳನ್ನು ಗುರುತಿಸಲು ಈ ಹತ್ತು ಲಕ್ಷಣಗಳನ್ನು ಗಮನಿಸಿ ಎಂಬ ಶೀರ್ಷಿಕೆಯ ಲೇಖನ ಗಮನ ಸೆಳೆಯಿತು. ಆದರೆ, ಅದನ್ನು ಓದಿದ ನಂತರ ನನಗೆ ಬೇರೇನೋ ಆಲೋಚನೆ ಹೊಳೆಯಿತು! ಅದೇನು ಎನ್ನುವುದನ್ನು ಹಂಚಿಕೊಳ್ಳುವ ಮುನ್ನ ಸೈಕೋಪ್ಯಾತ್​ಗಳ ಈ ಗುಪ್ತ ಲಕ್ಷಣಗಳನ್ನು ತಿಳಿದುಕೊಳ್ಳೋಣ.

ಮ್ಯಾನಿಪ್ಯುಲೇಷನ್/ಕೃತ್ರಿಮದಿಂದ ಏನನ್ನಾದರೂ ಬದಲಾಯಿಸುವುದು: ಅತಿವಿನಯದಿಂದಲೋ, ಹೊಗಳಿಕೆ ಯಿಂದಲೋ ಇವರು ಇನ್ನೊಬ್ಬರ ಸ್ನೇಹ-ಪ್ರೀತಿಗಳನ್ನು ಸಂಪಾದಿಸಬಲ್ಲರು. ತಮಗಿಷ್ಟವಿಲ್ಲದ ಪರಿಸ್ಥಿತಿಗಳಲ್ಲಿಯೂ ಅದು ಯಾರಿಗೂ ಗೊತ್ತಾಗದಂತೆ ನಟಿಸಬಲ್ಲರು. ತಾವು ಇಂಪ್ರೆಸ್ ಮಾಡಬೇಕಾದ ವ್ಯಕ್ತಿಯನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಸೈಕೋಪ್ಯಾತ್​ಗಳು ಸಂದರ್ಭಗಳನ್ನೂ ವ್ಯಕ್ತಿಗಳನ್ನೂ ತಮಗೆ ಅನುಕೂಲ ಆಗುವಂತೆ ಮ್ಯಾನಿಪ್ಯುಲೇಟ್ ಮಾಡುವುದು ಸಾಮಾನ್ಯ.

ಇಂಪಲ್ಸಿವ್​ನೆಸ್/ ಹಿಂದುಮುಂದು ನೋಡದಿರುವುದು: ಸೈಕೋಪ್ಯಾತ್​ಗಳು ಯಾವಾಗಲೂ ದುಡುಕಿನಿಂದಲೋ ಕೋಪದಿಂದಲೋ ವರ್ತಿಸುವುದಿಲ್ಲ. ಮಿಕ್ಕೆಲ್ಲರಂತೆ ತಮ್ಮ ಜೀವನದ ಬಹುಕಾಲ ಶಾಂತರಾಗಿಯೇ ಸಾಮಾನ್ಯರಾಗಿಯೇ ಕಾಣಸಿಗುತ್ತಾರೆ. ಆದರೆ, ತಲೆಗೆ ಏನಾದರೂ ಹುಚ್ಚು ಆಲೋಚನೆ ಬಂದಾಗ ಅದನ್ನು ಹಿಂದೆಮುಂದೆ ನೋಡದೆ ಮಾಡುವುದನ್ನು ಗಮನಿಸಬಹುದು. ಉದಾಹರಣೆಗೆ- ಅಂಗಡಿಯಲ್ಲಿ ಯಾವುದೋ ಚಿಕ್ಕ ವಸ್ತುವನ್ನು ತಮಾಷೆಗೆಂಬಂತೆ ಕದ್ದುಬಿಡುವುದು; ಯಾರದ್ದೋ ವಾಹನದ ಚಕ್ರದ ಗಾಳಿ ತೆಗೆದುಬಿಡುವುದು. ಇಂಥದೇ ಇಂಪಲ್ಸಿವ್​ನೆಸ್ ಮುಂದೆ ದೊಡ್ಡ ಕುಕೃತ್ಯಗಳಲ್ಲಿ ತೊಡಗುವಂತೆ ಮಾಡಬಹುದು.

ಎಂಪಥಿ/ಸಂವೇದನೆಯ ಕೊರತೆ: ಇದು ಸೈಕೋಪ್ಯಾತ್​ಗಳ ಪ್ರಮುಖ ಲಕ್ಷಣಗಳಲ್ಲೊಂದು. ಸೈಕೋಪ್ಯಾತ್​ಗಳು ಸಾಮಾನ್ಯವಾಗಿ ಸ್ವಯಂಕೇಂದ್ರಿತ ಮತ್ತು ಹೆಚ್ಚು ಅಹಂಭಾವವುಳ್ಳವರಾಗಿರುತ್ತಾರೆ. ಇನ್ನೊಬ್ಬರ ದೃಷ್ಟಿಯಿಂದ ಅವರು ಪ್ರಪಂಚವನ್ನು ನೋಡಲಾರರು. ತಮ್ಮ ಮೌಲ್ಯಗಳು ಮತ್ತು ಅಲೋಚನೆಗಳು ಇತರರದ್ದಕ್ಕಿಂತ ಶ್ರೇಷ್ಠ ಎಂದು ಅವರು ನಂಬಿರುವುದರಿಂದ ಎಲ್ಲವೂ ಸದಾ ತಾವೆಣಿಸಿದಂತೆಯೇ ನಡೆಯಬೇಕು ಎಂದು ಬಯಸುತ್ತಾರೆ.

ಸುಳ್ಳು/ಮೋಸ: ಸೈಕೋಪ್ಯಾತ್​ಗಳು ಸ್ವಭಾವತಃ ಸುಳ್ಳುಗಾರರಾಗಿರುತ್ತಾರೆ. ಚಿಕ್ಕ ವಿಷಯಗಳಿಗೂ ಇವರು ದೊಡ್ಡ ಸುಳ್ಳುಗಳನ್ನು ಹೇಳಲು ಹಿಂದೆಮುಂದೆ ನೋಡುವುದಿಲ್ಲ. ತಾವು ಹೇಳಿದ ಅಸತ್ಯವನ್ನು ಇನ್ನೊಬ್ಬರು ನಂಬಿದ್ದರ ಆನಂದವನ್ನು ಅನುಭವಿಸಲೆಂದೇ ಸೈಕೋಪ್ಯಾತ್​ಗಳು ಕೆಲವೊಮ್ಮೆ ಸುಳ್ಳು ಹೇಳುತ್ತಾರಂತೆ. ಹಾಗೆಯೇ, ಅವರು ಹೇಳಿದ ಸುಳ್ಳನ್ನು ಮತ್ತೊಬ್ಬರು ನಂಬಿದಾಗ ಅವರಿಗೆ ಇತರರನ್ನು ನಿಯಂತ್ರಿಸಿದ ಅನುಭವ ಸಿಗುವುದರಿಂದ, ಹೀಗೆ ಪದೇಪದೆ ಸುಳ್ಳು ಹೇಳಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಾರೆ.

ಹಿಂಸಾತ್ಮಕ ಪ್ರವೃತ್ತಿ: ಅನೇಕ ಸೈಕೋಪ್ಯಾತ್​ಗಳಲ್ಲಿ ಚಿಕ್ಕ ವಿಷಯಗಳಿಗೇ ಹಿಂಸೆಗೆ ತೊಡಗುವ ಪ್ರವೃತ್ತಿ ಕಾಣಬಹುದು. ಹಿಂಸೆಯೆಂದರೆ, ಅದು ದೊಡ್ಡ ಜಗಳವೊಂದರಲ್ಲಿ ಯಾರ ಮೇಲೋ ಕೋಪ ಬಂದು ಹೊಡೆಯುವಂತಹ ಹಿಂಸೆಯಲ್ಲ. ಇವರು ಮಾಡುವ ಹಿಂಸೆ ಯೋಜಿತವೂ ಕ್ರಮಬದ್ಧವೂ ಆಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ವಿನಾಕಾರಣ ಮಾಡಿದ ಹಿಂಸೆಯಾಗಿರುತ್ತದೆ. ಉದಾಹರಣೆಗೆ- ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಕ್ಕೆ ಹೊಂಚುಹಾಕಿ, ಮೊದಲೇ ತಯಾರಿಟ್ಟುಕೊಂಡಿದ್ದ ಸಾಧನ/ಕ್ರಮಗಳಿಂದ ತಮ್ಮದೇ ಮನೆಯ ಸಾಕುಪ್ರಾಣಿಯನ್ನು ಕಾರಣವಿಲ್ಲದೆ ಹಿಂಸೆಗೀಡುಮಾಡಿ ಅದರಿಂದ ವಿಕೃತವಾದ ಆನಂದವನ್ನು ಅನುಭವಿಸುವುದು.

ಮೇಲ್ಮೇಲಿನ ತೋರಿಕೆಯ ವ್ಯವಹಾರ: ಸೈಕೋಪ್ಯಾತ್​ಗಳು ಇತರರೊಂದಿಗೆ ವ್ಯವಹರಿಸುವುದೆಲ್ಲವೂ ಮೇಲ್ಪದರದಲ್ಲಿ ಮಾತ್ರ. ಆಳವಾದ ಮಾತುಕತೆಗೆ ಇವರು ಸಾಮಾನ್ಯವಾಗಿ ಇಳಿಯುವುದಿಲ್ಲ. ತಮ್ಮ ನಿಜವಾದ ವ್ಯಕ್ತಿತ್ವವನ್ನಾಗಲೀ, ವಿವರಗಳನ್ನಾಗಲೀ ಯಾರಿಗೂ ಬಿಟ್ಟುಕೊಡುವುದಿಲ್ಲ. ಯಾರನ್ನೂ ಹತ್ತಿರವಾಗಲು ಬಿಡುವುದಿಲ್ಲ. ಯಾರೊಂದಿಗೂ ಆಳವಾಗಿ ವ್ಯವಹರಿಸುವುದಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ. ಸಾಲದೆಂಬಂತೆ, ಇವರು ತಮ್ಮ ಸುತ್ತಲು ಸುಳ್ಳು ವರ್ಚಸ್ಸೊಂದನ್ನು ಕಟ್ಟಿಕೊಂಡು ಎಲ್ಲರಿಗೂ ಆ ‘ಪ್ರೊಟೆಕ್ಟೆಡ್ ಇಮೇಜ್’ ಅನ್ನು ನಂಬಿಸಲು ಯತ್ನಿಸುತ್ತಿರುತ್ತಾರೆ. ಅದಕ್ಕಾಗಿ ಉದ್ದುದ್ದ ಕತೆಗಳನ್ನು ಹೆಣೆಯಲು ಹೇಸುವುದಿಲ್ಲ.

ಬುದ್ಧಿವಂತಿಕೆ: ಬಹುಮಟ್ಟಿಗೆ ಸೈಕೋಪ್ಯಾತ್​ಗಳು ಬಹಳ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಬುದ್ಧಿವಂತಿಕೆಯ ತೀಕ್ಷ್ಣ ಅರಿವಿರುವ ಅವರು, ಅದನ್ನು ಪೋಷಿಸಿ ಬೆಳೆಸಲು ಹೊಸ ವಿಷಯಗಳನ್ನು ಅನ್ವೇಷಿಸುವಲ್ಲಿ ಅತೀವವಾದ ಆಸಕ್ತಿ ತೋರುತ್ತಾರೆ. ಅವರು ಶಾಲಾಕಾಲೇಜಿನ ಓದಿನಲ್ಲಿ ಜಾಣರಾಗಿರಬಹುದಾದರೂ, ಅವರ ಪಠ್ಯೇತರ ಓದು ಮತ್ತು ಸಂಶೋಧನೆಯ ಪರಿಧಿ ವಿಸ್ತಾರವಾಗಿರುತ್ತದೆ. ಆದರೂ, ಕೆಲವೊಮ್ಮೆ ಅವರು ವಿಷಯದ ಬಗ್ಗೆ ಹಿಡಿತವಿಲ್ಲದಿದ್ದರೂ ಇತರರೆದರು ಪಾಂಡಿತ್ಯ ಪ್ರದರ್ಶಿಸಲು ಯತ್ನಿಸುವುದನ್ನು ನೋಡಬಹುದು. ಅದರಲ್ಲೂ ಸ್ವಲ್ಪ ಅಮಾಯಕರು ಸಿಕ್ಕರೆ ಅವರ ಮುಂದೆ ಬೇಕೆಂತಲೇ ತಾಂತ್ರಿಕ ಅಂಶಗಳನ್ನೂ, ಜಾರ್ಗನ್​ಗಳನ್ನೂ ಬಳಸಿ ತಮ್ಮ ಮೇಲ್ಮೆಯನ್ನು ಮೆರೆಸುತ್ತಾರೆ.

ಉದ್ಧಟತನ: ತಮ್ಮ ಸಾಮರ್ಥ್ಯದ ಬಗ್ಗೆ ಸೈಕೋಪ್ಯಾತ್​ಗಳಿಗೆ ಅತ್ಯಂತ ಉತ್ಪ್ರೇಕ್ಷಿತವಾದ ಲೆಕ್ಕಾಚಾರವಿರುತ್ತದೆ. ಅವರೆಂದೂ ತಾವು ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಯೋಚಿಸುವುದಿಲ್ಲ. ಮಾಡಿದ ಕೆಲಸವೆಲ್ಲ ಪೂರ್ವಯೋಜಿತವಾದ್ದರಿಂದ, ತಾನು ಬುದ್ಧಿಯಲ್ಲಿ ಇತರರಿಗಿಂತ ಶ್ರೇಷ್ಠನಾದುದರಿಂದ, ತನ್ನನ್ನು ಯಾರೂ ಬೆಂಬತ್ತಲಾರರು ಎನ್ನುವ ಆತ್ಮವಿಶ್ವಾಸ ಅವರಿಗಿರುತ್ತದೆ. ಈ ಅತಿಯಾದ ಉದ್ಧಟತನ ಮುಂದೆ ಭ್ರಾಂತಿಗೆ ಎಡೆಮಾಡಿಕೊಟ್ಟು, ಆ ಭ್ರಾಂತಿನಲ್ಲಿ ತಾನು ಬಯಸಿದ ಭಾಗ್ಯವನ್ನೆಲ್ಲ ಹೇಗೋ ಮಾಡಿ ಪಡೆಯುವಂತೆ ಪ್ರೇರೇಪಿಸಬಹುದು.

ವಿಭಿನ್ನವಾದ ನೈತಿಕತೆಯ ಮಾನದಂಡಗಳು: ಸೈಕೋಪ್ಯಾತ್​ಗಳು ನೈತಿಕತೆಯ ಬಗ್ಗೆ ಸಾಮಾನ್ಯರು ಯೋಚಿಸುವಂತೆ ಯೋಚಿಸುವುದಿಲ್ಲ. ಪ್ರಾಯಶಃ ಆ ಕಾರಣಕ್ಕಾಗಿಯೇ, ಅವರಿಗೆ ಚಿಕ್ಕ ವಯಸ್ಸಿನಲ್ಲಿ ಪ್ರಾಣಿಗಳನ್ನು ಹಿಂಸಿಸಿದಾಗ ಏನೂ ಅನ್ನಿಸದಿರುವುದು. ಇಂತಹ ಚಿಕ್ಕಪುಟ್ಟ ಸುಳ್ಳು, ಮೋಸ, ಹಿಂಸೆಗಳಿಂದ ಅವರು ಯಾವಾಗಲೂ ಇತರರ ನೈತಿಕ ಪರಿಧಿಯನ್ನೂ ಸಹಿಷ್ಣುತೆಯನ್ನೂ ಪರೀಕ್ಷಿಸುತ್ತಿರುತ್ತಾರೆ. ಒಳ್ಳೆಯದು ಮತ್ತು ಕೆಟ್ಟದ್ದು ನನ್ನ ಜೀವನಕ್ಕೆ ಅಪ್ರಸ್ತುತ ಎನ್ನುವುದರ ಕಡೆಗೆ ಅವರ ಧೋರಣೆ ವಾಲುತ್ತಿರುತ್ತದೆ. ಹಾಗೆಯೇ, ತಾವು ಸರಿ ಎಂದುಕೊಂಡದ್ದನ್ನು ಇತರರು ಧಿಕ್ಕರಿಸಿದರೆ ಅಥವಾ ಪ್ರಶ್ನಿಸಿದರೆ, ಅವರು ಶಿಕ್ಷಾರ್ಹರು ಎನ್ನುವ ಧೋರಣೆಯೂ ಮೊಳೆಯುತ್ತಿರುತ್ತದೆ.

ಪಶ್ಚಾತ್ತಾಪ ಇಲ್ಲದಿರುವುದು: ಸೈಕೋಪ್ಯಾತ್​ಗಳಿಗೆ ಜನರೆಂದರೆ ಅಟಿಕೆಗಳಿ ದ್ದಂತೆ. ಅವರಿಗಾಗುವ ನೋವು, ಅವಮಾನಗಳು ಇವರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ತಾವು ಮಾಡಿದ ಕುಕೃತ್ಯಗಳ ಬಗ್ಗೆ ಸೈಕೋಪ್ಯಾತ್​ಗಳಿಗೆ ಯಾವುದೇ ಪಶ್ಚಾತ್ತಾಪ ಇರುವುದಿಲ್ಲ. ತಾವು ತೆಗೆದುಕೊಂಡ ‘ಕ್ರಮ’ ಸರಿಯಾದುದು ಎಂದು ಇವರು ಸಂಪೂರ್ಣವಾಗಿ ನಂಬಿರುವುದರಿಂದ, ಇವರು ತಾವು ತೋರಿದ ಕ್ರೌರ್ಯದ ಬಗ್ಗೆಯಾಗಲೀ ಅಥವಾ ಸರಿ-ತಪ್ಪುಗಳ ಬಗ್ಗೆಯಾಗಲೀ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹಿಂದಿರುಗಿ ವಿಮಶಿಸುವುದೂ ಇಲ್ಲ. ಮುಂದೆ ಅಂಥದ್ದೇ ಕೆಲಸ ಮಾಡಲೂ ಹೇಸುವುದಿಲ್ಲ.

ಏನೋ ಹುಡುಕುತ್ತಾ, ಸೈಕೋಪ್ಯಾತ್​ಗಳನ್ನು ಪತ್ತೆಹಚ್ಚುವುದು ಹೇಗೆ ಎನ್ನುವ ಬಗ್ಗೆ ಈ ಹತ್ತು ಸೂಚನೆಗಳು ಸಿಕ್ಕಿದ್ದು ಒಳ್ಳೆಯದಾಯಿತು. ನಮ್ಮ ಸುತ್ತಲೇ ಅದೆಷ್ಟು ಮಂದಿ ಮನೋವಿಕೃತಿಯುಳ್ಳವರು ಅಡಗಿದ್ದಾರೋ ಬಲ್ಲವರ್ಯಾರು? ದಿನಪತ್ರಿಕೆಗಳಲ್ಲಿ ಬರುವ ಕ್ರೈಮ್ ಸುದ್ದಿಗಳಲ್ಲಿ ಕೆಲವಷ್ಟರ ಹಿಂದಾದರೂ ಇಂತಹ ಸೈಕೋಪ್ಯಾತ್​ಗಳ ಕೈವಾಡ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಲಕ್ಷಣಗಳ ಬಗ್ಗೆ ಜನರು ಗಮನ ಕೊಡದಿರುವುದರಿಂದ ಪರಿಚಯದವರಿಂದಲೇ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗುತ್ತಿದೆ. ಹಾಗಾಗಿ ಈ ಲಕ್ಷಣ ತೋರುವವರನ್ನು ಗಮನಿಸಿ ಎಚ್ಚರ ವಹಿಸುವುದು ಒಳಿತು.

ಗಮನಿಸಿ ಎಚ್ಚರ ವಹಿಸುವುದೇನೋ ಒಳಿತೇ! ಆದರೆ, ನಮ್ಮನ್ನೂ ಸೇರಿದಂತೆ ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ಇಂಥವೇ ಲಕ್ಷಣಗಳನ್ನು ತೋರುತ್ತಿದ್ದರೆ, ಏನು ಮಾಡುವುದು? ಅಸಲಿ ಸೈಕೋಪ್ಯಾತ್​ಗಳನ್ನು ಹೇಗೆ ಪತ್ತೆ ಹಚ್ಚುವುದು? ನಾನು ಹೀಗೆ ಹೇಳಲು ಕಾರಣವಿದೆ. ಇಂದು ಫೇಸ್​ಬುಕ್, ವಾಟ್ಸಾಪ್, ಟ್ವಿಟರ್, ಇನ್ಸಾ್ಟಗ್ರಾಮ್ಳಲ್ಲಿ ಜನರ ವರ್ತನೆಯನ್ನು ಗಮನಿಸಿದರೆ, ಮೇಲಿನ ಕೆಲವಾದರೂ ಲಕ್ಷಣಗಳನ್ನು ನಮ್ಮ-ನಿಮ್ಮಂಥ ಸಾಮಾನ್ಯ ಜನರೂ ತೋರುತ್ತಿದ್ದೇವೆ! ಸಾಮಾಜಿಕ ಮಾಧ್ಯಮಗಳಲ್ಲಿ ಜನರ ವರ್ತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ದಯವಿಟ್ಟು ಮೇಲಿನ ಸೈಕೋಪ್ಯಾತ್ ಲಕ್ಷಣಗಳ ಪಟ್ಟಿಯ ಮೇಲೆ ಮತ್ತೊಮ್ಮೆ ಕಣ್ಣು ಹಾಯಿಸಿ. ಈಗ ಒಂದೊಂದಾಗಿ ವಿಶ್ಲೇಷಿಸಿ, ಆತ್ಮವಿಮರ್ಶೆಗೊಡ್ಡಿಕೊಳ್ಳಿ-

# ಇನ್ನೊಬ್ಬರ ಮೆಚ್ಚುಗೆ, ವಿಶ್ವಾಸ ಗಳಿಸಲು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟರ ಮಟ್ಟಿಗೆ ನಮ್ಮನ್ನು ನಾವು ಬಿಂಬಿಸಿಕೊಳ್ಳುವ ರೀತಿಯಲ್ಲಿ ‘ಮ್ಯಾನಿಪ್ಯುಲೇಷನ್’ ಮಾಡುತ್ತೇವೆ ಎನ್ನುವುದು ಗೊತ್ತಿರುವ ವಿಷಯವೇ!

# ಮಿಕ್ಕಂತೆ ಸಮಚಿತ್ತದಿಂದಿರುವವರೂ ಸಾಮಾಜಿಕ ಮಾಧ್ಯಮಗಳಲ್ಲಿ ದುಡುಕಿನಿಂದ, ‘ಇಂಪಲ್ಸಿವ್’ ಆಗಿ ವರ್ತಿಸುತ್ತಾರೆ.

# ನಾವು ಅನುಸರಿಸುವ ಮೌಲ್ಯಗಳು ಮತ್ತು ನಮ್ಮ ಚಿಂತನೆ ‘ಇತರರಿಗಿಂತ ಶ್ರೇಷ್ಠ’ ಎಂದು ಎಗ್ಗಿಲ್ಲದೆ ಬಿಂಬಿಸಿಕೊಳ್ಳುತ್ತಿರುತ್ತೇವೆ.

# ಚಿಕ್ಕ ‘ಸುಳ್ಳುಗಳನ್ನು ಹರಡಿ’, ಅದರಿಂದ ವಿಕೃತಾನಂದವನ್ನು ಅನುಭವಿಸುವವರ ಸಂಖ್ಯೆ ಸಹಸ್ರಾರು!

# ಯಾರೋ ಹಿಂಸಿಸುತ್ತಿರುವ ಚಿತ್ರ/ವಿಡಿಯೋಗಳನ್ನು ನೋಡುವುದು, ಅವುಗಳನ್ನು ಹರಡುವುದು, ‘ಹಿಂಸೆಯನ್ನು ಸಂಭ್ರಮಿಸುವ ಒಂದು ಪರಿ’ಯಲ್ಲವೇ! ಹಾಗೆ ಮಾಡಲು ನೆಪ ಏನೇ ಇರಲಿ, ಪರಿಣಾಮ ಒಂದೇ ಅಲ್ಲವೇ?

# ಫೇಸ್​ಬುಕ್, ವಾಟ್ಸಾಪ್​ಗಳಲ್ಲಿ ‘ಎಲ್ಲವೂ ಮೇಲ್ಮೇಲಿನ ತೋರಿಕೆಯ ವ್ಯವಹಾರವೇ’!

# ಮಾಹಿತಿಯ ದೆಸೆಯಿಂದಾಗಿ ಇಂದು ನಾವು ಅನೇಕ ವಿಷಯಗಳನ್ನು ‘ತಿಳಿದುಕೊಂಡವ’ರಾಗಿದ್ದೇವೆ. ಆದರೆ, ‘ನಿನಗಿಂತಲೂ ನನಗೆ ಹೆಚ್ಚು ಗೊತ್ತು’ ಎನ್ನುವುದು ‘ನಿತ್ಯದ ಮೇಲಾಟ’ವಾಗಿದೆ.

# ಸಾಮಾಜಿಕ ಮಾಧ್ಯಮಗಳಲ್ಲಿ ಜನರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ‘ಓವರ್ ಎಸ್ಟಿಮೇಟ್’ ಮಾಡಿ ‘ಉದ್ಧಟ’ರಾಗಿದ್ದೇವೆ, ಅದರಿಂದಾಗಿ ಕೆಲವೊಮ್ಮೆ ಗೋಡೆಗೆ ಡಿಕ್ಕಿ ಹೊಡೆದುಕೊಳ್ಳುವುದು ಎಂದಿನ ದೃಶ್ಯ.

# ‘ನನ್ನ ನೈತಿಕತೆ ನಿನ್ನದಕ್ಕಿಂತ ಶ್ರೇಷ್ಠ’ ಎಂದೂ, ‘ನಿನ್ನ ನೈತಿಕತೆಯನ್ನು ಪ್ರಶ್ನಿಸುವ ಹಕ್ಕು ನನಗಿದೆ’ ಎಂದೂ ಆಗಾಗ್ಗೆ ಘೊಷಿಸಿಕೊಳ್ಳುತ್ತಿರುತ್ತೇವೆ.

# ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಒಡ್ಡೊಡ್ಡು, ಒರಟೊರಟು ಟಿಪ್ಪಣಿಗಳನ್ನು ನೋಡುತ್ತಿರುತ್ತೀರಿ. ಆದರೆ, ‘ತಪ್ಪಾಯ್ತು’, ‘ಕ್ಷಮಿಸಿ’, ‘ಸಾರಿ’ಗಳು ತೀರಾ ವಿರಳ. ಸಾಮಾಜಿಕ ಮಾಧ್ಯಮಗಳಲ್ಲಿ ‘ಪಶ್ಚಾತ್ತಾಪ’ ತೀರಾ ಅಪರೂಪದ ಸರಕು.

ಅಲ್ಲಿಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹತ್ತೂ ಲಕ್ಷಣಗಳನ್ನು ತೋರುತ್ತಾರೆಂದಾಯಿತು. ಎಲ್ಲರೂ ಎಲ್ಲ ಲಕ್ಷಣಗಳನ್ನೂ ತೋರುತ್ತಾರೆಂದಲ್ಲ. ಆದರೆ, ಇದರಲ್ಲಿ ಕೆಲವನ್ನಾದರೂ ನಾವು ನಮ್ಮಲ್ಲಿಯೋ ಇತರರಲ್ಲಿಯೋ ಕಾಣುತ್ತಿದ್ದರೆ, ಆದಷ್ಟೂ ಜಾಗರೂಕತೆಯಿಂದಿರಬೇಕು. ನಮಗೆ ತಿಳಿಯದೆಯೇ ಈ ಸಾಮಾಜಿಕ ಮಾಧ್ಯಮಗಳ ಅಮಲು ನಮ್ಮ ಮಿದುಳಿಗೇರುತ್ತಿರಬೇಕು. ನಮ್ಮನ್ನು ಸೈಕೋಪ್ಯಾತ್​ಗಳನ್ನಾಗಿಸಿದರೂ, ಅದು ಮಿದುಳಿನೊಳಗೆ ಚಿಕ್ಕಂದಿನಿಂದ ಕಷ್ಟಪಟ್ಟು ಓದಿ, ಕೇಳಿ, ನೋಡಿ, ಕಲಿತು, ಅಭ್ಯಸಿಸಿ ಮಾಡಿಕೊಂಡ ಪ್ಯಾಟರ್ನ್​ಗಳ ಜತೆ ಅದೇನೋ ಆಟವಾಡುತ್ತಿರಬಹುದು. ಒಟ್ಟಿನಲ್ಲಿ, ನಮ್ಮ ಹುಚ್ಚು ಮನಸ್ಸಿನ ಹತ್ತು ಮುಖಗಳು ನಮ್ಮ ಅಂತಃಚಕ್ಷುವಿಗೆ ಗೋಚರಿಸುವ ಮುನ್ನ ನಮ್ಮ ಹುಚ್ಚುತನದ ಹತ್ತಾರು ಲಕ್ಷಣಗಳು ಜಗತ್ತಿಗೆ ಕಾಣುವಂತಾಗದಿರಲಿ. ನಮ್ಮ ಬುದ್ಧಿ-ಮನ-ಚಿತ್ತಗಳು ಮತ್ತಷ್ಟು ಬಗ್ಗಡವಾಗುವ ಮುನ್ನ ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ ಸ್ವಲ್ಪ ಸಂಯಮ, ಸಾಕಷ್ಟು ವಿವೇಚನೆ ಎಲ್ಲರಿಗೂ ಬರಲಿ.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top