Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಈ ಸಮರದಲ್ಲಿ ನಾವೂ ಕೈಜೋಡಿಸೋಣ

Wednesday, 08.11.2017, 3:06 AM       No Comments

ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕ ಮುಖಬೆಲೆಯ 500 ಹಾಗೂ 1,000 ರೂ. ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಅಂದರೆ, 2016ರ ನವೆಂಬರ್ 8ರ ಮಧ್ಯರಾತ್ರಿಯಿಂದ ಈ ನೋಟುಗಳು ಬೆಲೆ ಕಳೆದುಕೊಂಡವು. ದೇಶದಲ್ಲಿ ಸಂಚಲನ ಮೂಡಿಸಿದ ಈ ಘೋಷಣೆಯನ್ನು ಮಾಡುವಾಗ ಪ್ರಧಾನಿಗಳು ಈ ನಿರ್ಧಾರದ ಹಿಂದಿನ ಉದ್ದೇಶಗಳನ್ನು ಪಟ್ಟಿಮಾಡಿದರು. ವ್ಯವಸ್ಥೆಗೆ ಗೆದ್ದಲು ಹಿಡಿಸಿರುವ ಭ್ರಷ್ಟಾಚಾರ, ಖೋಟಾನೋಟು, ಕಪ್ಪುಹಣ ಮತ್ತು ಭಯೋತ್ಪಾದನೆಯನ್ನುನಿಮೂಲನ ಮಾಡುವುದು ಆದ್ಯತೆ ಎಂದು ಹೇಳಿದರು. ಈ ಕಾರ್ಯವನ್ನು ಅವರು ‘ಮಹಾಯಜ್ಞ’ ಎಂದೇ ಬಣ್ಣಿಸಿದರು. ನೋಟು ಅಮಾನ್ಯದ ಬಳಿಕದ ಒಂದು ವರ್ಷದಲ್ಲಿ ಏನೇನಾಯಿತು, ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಪ್ರತಿಕ್ರಿಯೆ ಏನಿದೆ, ಈ ಕ್ರಮದಿಂದ ಪ್ರಯೋಜನ ಏನಾಗಿದೆ ಮತ್ತು ಮುಂದಿನ ದಾರಿ ಯಾವುದು ಮುಂತಾದ ವಿಷಯಗಳನ್ನು ಅವಲೋಕಿಸುವುದಕ್ಕೆ ಇದು ಸೂಕ್ತ ಸಮಯ.

ಹಾಗೆನೋಡಿದರೆ, ಅಧಿಕ ಮುಖಬೆಲೆಯ ನೋಟು ಅಮಾನ್ಯೀಕರಣದ ಕ್ರಮ ಇದೇ ಮೊದಲೇನೂ ಅಲ್ಲ. ಭಾರತವೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳು ಇಂಥದೊಂದು ಉಪಾಯಕ್ಕೆ ಮುಂದಾದ ನಿದರ್ಶನಗಳು ಸಿಗುತ್ತವೆ. ಎರಡನೆಯ ಮಹಾಯುದ್ಧದಿಂದ ಬಸವಳಿದಿದ್ದ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮುಂತಾದ ದೇಶಗಳು ನೋಟು ಅಮಾನ್ಯೀಕರಣ ಮಾಡಿದ್ದವು. ಅದರ ಪರಿಣಾಮ ಭಾರತದ ಮೇಲೂ ಆಗಿ 1946ರ ಜನವರಿಯಲ್ಲಿ 500, 1000, 5000 ಹಾಗೂ 10000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು. ಅಮೆರಿಕದಲ್ಲಿ ರಿಚರ್ಡ್ ನಿಕ್ಸನ್ ಸರ್ಕಾರ 100 ಡಾಲರ್​ಗಳಿಗಿಂತ ಅಧಿಕ ಮುಖಬೆಲೆಯ ಎಲ್ಲ ನೋಟುಗಳನ್ನು ನಿಷೇಧಿಸಿತ್ತು. ಉದ್ದೇಶ-ಅನಿಯಂತ್ರಿತವಾಗಿದ್ದ ಕಪ್ಪುಹಣದ ಸಮಸ್ಯೆಗೆ ಮೂಗುದಾರ ಹಾಕುವುದು. ಆಸ್ಟ್ರೇಲಿಯಾ 1996ರಲ್ಲಿ ಇಂಥ ಹೆಜ್ಜೆಯಿರಿಸಿತ್ತು. ಅಲ್ಲಿಯೂ ಉದ್ದೇಶ ಕಪ್ಪುಹಣದ ನಿಯಂತ್ರಣವೇ ಆಗಿತ್ತು. ಅಷ್ಟೇ ಏಕೆ, ಪಾಕಿಸ್ತಾನವೂ ಇಂಥ ಕ್ರಮಕ್ಕೆ ಮುಂದಾಗಿತ್ತು. ಆ ದೇಶಗಳಲ್ಲಿ ಭಿನ್ನ ಬಗೆಯ ಫಲಿತಾಂಶಗಳು ಕಂಡುಬಂದುವು ಎಂಬುದು ಬೇರೆ ವಿಚಾರ.

ಭಾರತದಲ್ಲಿ ನೋಟು ಅಮಾನ್ಯೀಕರಣದಿಂದ ಏನೂ ಪ್ರಯೋಜನವಾಗಿಲ್ಲ, ಆರ್ಥಿಕ ವ್ಯವಸ್ಥೆಗೆ ಹೊಡೆತ ಬಿದ್ದಿದೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಮತ್ತಿತರ ಕೆಲ ಪಕ್ಷಗಳು ಆಪಾದಿಸುತ್ತಲೇ ಇವೆ. 1991ರಲ್ಲಿ ಹಣಕಾಸು ಮಂತ್ರಿಯಾಗಿ ಉದಾರೀಕರಣಕ್ಕೆ ಭಾರತವನ್ನು ತೆರೆದ, ನಂತರ ಪ್ರಧಾನಿಯೂ ಆದ ಮನಮೋಹನ್ ಸಿಂಗ್ ಅವರು ನೋಟು ನಿಷೇಧ ‘ಸಂಘಟಿತ ಲೂಟಿ’ ಎಂದು ಕಟುವಾಗಿ ಟೀಕಿಸಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳ ಬಗ್ಗೆ ರ್ಚಚಿಸುವುದಕ್ಕಿಂತ ಮೊದಲು, ಈ ಕ್ರಮ ಯಾವ ಸನ್ನಿವೇಶದಲ್ಲಿ ಘೋಷಣೆಯಾಯಿತು ಎಂಬುದನ್ನು ನೋಡೋಣ. 2004ರಲ್ಲಿ 500 ಹಾಗೂ 1000 ರೂ. ಮುಖಬೆಲೆ ನೋಟುಗಳ ಪ್ರಮಾಣ ಶೇ.34ರಷ್ಟಿತ್ತು. ಈ ಪ್ರಮಾಣ ಯಾವ ಪರಿ ಹೆಚ್ಚುತ್ತ ಹೋಯಿತು ಎಂದರೆ, ಆರೇ ವರ್ಷಗಳಲ್ಲಿ ಶೇ.79ಕ್ಕೇರಿತು. 2014ರಲ್ಲಿ ಅಂದರೆ ಯುಪಿಎ ಸರ್ಕಾರದ ಅವಧಿಯ ಕೊನೆಯ ವೇಳೆಗೆ ಈ ಪ್ರಮಾಣ ಶೇ.86ಕ್ಕೆ ಜಿಗಿದಿತ್ತು. ಅಂದರೆ, 1.4 ಲಕ್ಷ ಕೋಟಿಯಷ್ಟಿದ್ದ ಈ ನೋಟುಗಳು ಹತ್ತು ವರ್ಷಗಳಲ್ಲಿ 14.6 ಲಕ್ಷ ಕೋಟಿ ರೂ.ಗೇರಿದವು. ಆದರೆ ಈ ಅವಧಿಯಲ್ಲಿ 5, 10, 20, 50 ಹಾಗೂ 100 ರೂ. ಮುಖಬೆಲೆ ನೋಟುಗಳ ಪ್ರಮಾಣ ತೀವ್ರವಾಗಿ ಕುಗ್ಗಿತು. 2004ರಲ್ಲಿ ಶೇ.66ರಷ್ಟಿದ್ದ ಈ ನೋಟುಗಳ ಪ್ರಮಾಣ 2014ರ ಹೊತ್ತಿಗೆ ಶೇ.14ಕ್ಕೆ ಕುಸಿಯಿತು. ಅರ್ಥಾತ್, ಕಪ್ಪುಹಣ ಶೇಖರಿಸುವವರಿಗೆ ಭಾರಿ ಅನುಕೂಲವಾಯಿತು. ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಮ ರಾಜನ್ ಸರ್ಕಾರಕ್ಕೆ ನೀಡಿದ ವರದಿಯೊಂದರಲ್ಲಿ ಉಲ್ಲೇಖಿಸಿದ ಅಂಶ ಗಮನಸೆಳೆಯುವಂಥದು. ಆರ್​ಬಿಐ ಬಿಡುಗಡೆ ಮಾಡಿದ 500 ರೂ. ಮುಖಬೆಲೆ ನೋಟುಗಳಲ್ಲಿ ಮೂರನೇ ಒಂದರಷ್ಟು ಹಾಗೂ 1000 ರೂ. ಮುಖಬೆಲೆ ನೋಟುಗಳ ಪೈಕಿ ಮೂರನೇ ಎರಡರಷ್ಟು ಅರ್ಥವ್ಯವಸ್ಥೆಗೆ ವಾಪಸಾಗುತ್ತಿಲ್ಲ, ಅಂದರೆ ‘ನಾಪತ್ತೆಯಾಗುತ್ತಿವೆ’ ಎಂಬ ಮಾಹಿತಿ ಈ ವರದಿಯಲ್ಲಿತ್ತು.

ಈ ‘ನಾಪತ್ತೆ’ ಎಂದರೆ ಮತ್ತೇನಲ್ಲ, ಕಪ್ಪುಹಣ ಕುಬೇರರ ಖಜಾನೆ ಸೇರುವುದು; ಬೇರೆ ಬೇರೆ ವಲಯಗಳಲ್ಲಿ ತೆರಿಗೆ ತಪ್ಪಿಸಿ ಬಳಕೆಯಾಗುವುದು. ಅಧಿಕ ಮುಖಬೆಲೆ ನೋಟುಗಳನ್ನು ಪೇರಿಸುವುದು ಸುಲಭ. 2014ರ ಲೋಕಸಭಾ ಚುನಾವಣೆಯಲ್ಲಿ ಕಪ್ಪುಹಣದ ವಾಪಸಾತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದ ಬಿಜೆಪಿ, ಈ ನಿಟ್ಟಿನಲ್ಲಿ ಏನಾದರೊಂದು ಮಾಡಲೇಬೇಕಾದ ಅನಿವಾರ್ಯತೆಯಿತ್ತು. ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಕಪ್ಪುಹಣ ವಾಪಸಾತಿ ಕುರಿತಂತೆ ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಿತು. ನಂತರದಲ್ಲಿ ಆಗಿದ್ದೇ ಅಧಿಕ ಮುಖಬೆಲೆ ನೋಟುಗಳ ಮೇಲೆ ಸರ್ಜಿಕಲ್ ಸ್ಟ್ರೈಕ್! ಸರ್ಕಾರ ಇಂಥ ಮಹತ್ವದ ಕ್ರಮದ ಘೋಷಣೆಗೆ ಆ ಸಂದರ್ಭವನ್ನೇ ಯಾಕೆ ಆರಿಸಿಕೊಂಡಿತು ಎಂಬುದು ಕುತೂಹಲಕರ. ಆಗ ದೇಶದ ಜಿಡಿಪಿ ಶೇ.7ರ ಆಸುಪಾಸಿನಲ್ಲಿ ಏರುಗತಿಯಲ್ಲಿತ್ತು. ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರದಂತಹ ಅಡೆತಡೆಗಳು ಎದುರಾಗಿದ್ದರೂ, ಭಾರತ ಹಾಗೂ ಚೀನಾ ಮಾತ್ರ ನಾಗಾಲೋಟದಲ್ಲಿದ್ದವು. ಭಾರತದಲ್ಲಿ ಹಣದುಬ್ಬರ ಪ್ರಮಾಣ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿತ್ತು. ಕಬ್ಬಿಣ ಸರಿಯಾಗಿ ಕಾದಿದೆ ಎಂದು ಗ್ರಹಿಸಿದ ಮೋದಿ ಮತ್ತು ಟೀಮ್ ಇದೇ ಸರಿಯಾದ ಸಮಯ ಎಂಬ ನಿರ್ಧಾರಕ್ಕೆ ಬಂತು. 2017ರ ನವೆಂಬರ್ 8ರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದರು. ಮರುದಿನದಿಂದಲೇ ಎಲ್ಲೆಲ್ಲೂ ಗೊಂದಲವೋ ಗೊಂದಲ. ಬ್ಯಾಂಕುಗಳ ಎದುರು ಉದ್ದುದ್ದ ಕ್ಯೂ. ತಮ್ಮ ಕೈಲಿದ್ದ ಅಧಿಕ ಮುಖಬೆಲೆ ನೋಟುಗಳನ್ನು ಬ್ಯಾಂಕಿನಲ್ಲಿ ಜಮಾಮಾಡಲು ಜನರು ಸರದಿ ಸಾಲಲ್ಲಿ ನಿಂತರು. ಇನ್ನೊಂದೆಡೆ, ನಗದು ಹಿಂಪಡೆಯಲು ಸಹ ಮಿತಿ. ಆರ್​ಬಿಐ ಸತತ ಸುತ್ತೋಲೆಗಳ ಮುಖಾಂತರ ಜನರ ಕಷ್ಟನಷ್ಟಗಳನ್ನು ತಗ್ಗಿಸಲು ಯತ್ನಿಸಿತು. ಇಷ್ಟೆಲ್ಲ ತೊಂದರೆಗಳ ನಡುವೆಯೂ, ಎಲ್ಲೋ ಕೆಲವು ಅಪವಾದಗಳನ್ನು ಬಿಟ್ಟರೆ ಜನರು ಸಹನೆಯಿಂದಲೇ ಕಷ್ಟಗಳನ್ನು ಸೈರಿಸಿದರು;ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಆಶಾವಾದದಲ್ಲಿ ದಿನದೂಡಿದರು. ಜನರಲ್ಲಿ ಈ ರೀತಿಯ ಸಕಾರಾತ್ಮಕ ಭಾವನೆ ಮೂಡಲು ಒಂದು ಪ್ರಮುಖ ಕಾರಣವಿತ್ತು. ಅದು- ಪ್ರಧಾನಿ ಮೋದಿ ಮೇಲಿನ ನಂಬಿಕೆ, ಭರವಸೆ. ಇದಲ್ಲದೆ, ಭ್ರಷ್ಟಾಚಾರ, ಕಪ್ಪುಹಣದ ಆಟಾಟೋಪವನ್ನು ನೋಡಿ ನೋಡಿ ಜನ ಇನ್ನಿಲ್ಲದಂತೆ ರೋಸಿಹೋಗಿ ಪರಿಹಾರದ ದಾರಿಯನ್ನು ಎದುರುನೋಡುತ್ತಿದ್ದರು. ಮೋದಿ ಸುಖಾಸುಮ್ಮನೆ ಹೀಗೆ ಮಾಡಿಲ್ಲ, ಏನೋ ಮಹತ್ತರವಾದ ಗುರಿ ಅವರಿಗಿದೆ ಎಂಬ ವಿಶ್ವಾಸ ಜನರಲ್ಲಿ ಅದುಹೇಗೋ ಮೂಡಿತ್ತು. ಯಾವುದೇ ವ್ಯವಸ್ಥೆಯಲ್ಲಿ ಜನರಿಗೆ ನಾಯಕನ ಮೇಲೆ ಹೀಗೆ ನಂಬಿಕೆ ಕುದುರುವುದು ಮುಖ್ಯ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ, ಸರ್ಕಾರ ಮತ್ತು ಸಾರ್ವಜನಿಕರು ಬೇರೆ ವಲಯಗಳಲ್ಲ; ಎರಡೂ ಅವಿನಾಭಾವ ಸಂಬಂಧ ಹೊಂದಿರುವಂಥವು. ಸರ್ಕಾರದ ಸದುದ್ದೇಶದ ಕ್ರಮಗಳಿಗೆ ಬೆಂಬಲ ನೀಡುವುದು ಜನರ ಕರ್ತವ್ಯವಾದರೆ, ಜನರೆಡೆಗಿನ ತನ್ನ ಬದ್ಧತೆಯನ್ನು ನೆರವೇರಿಸುವುದು ಸರ್ಕಾರದ ಕರ್ತವ್ಯ. ಇಲ್ಲೊಂದು ಘಟನೆ ನೆನಪಾಗುತ್ತಿದೆ. 1930ರ ದಶಕದ ಆರಂಭದಲ್ಲಿನ ಮಹಾ ಆರ್ಥಿಕ ಹಿಂಜರಿತ (Great Depression) ಜಗತ್ತಿನ ವಿವಿಧ ದೇಶಗಳನ್ನು ಹೈರಾಣಗೊಳಿಸಿತ್ತು. ಅಮೆರಿಕದ ಕತೆಯೂ ಆದೇ ಆಗಿತ್ತು. ಆಗ ಫ್ರ್ರಾಂಕ್ಲಿನ್ ರೂಸ್​ವೆಲ್ಟ್ ಅಧ್ಯಕ್ಷರಾಗಿದ್ದರು. ಸರ್ಕಾರ ರಕ್ಷಣೆಯಂಥ ವಿಷಯ ಹೊರತುಪಡಿಸಿ ಆರ್ಥಿಕತೆಯಲ್ಲಿ ಪಾತ್ರವಹಿಸಬಾರದು; ಅದನ್ನು ಖಾಸಗಿ ವಲಯಕ್ಕೆ ಬಿಡಬೇಕು ಎಂಬುದು ಅಮೆರಿಕದ ಆಗಿನ ನೀತಿಯಾಗಿತ್ತು. ಆದರೆ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಖಾಸಗಿಯವರು ಜನರಿಗೆ ಕೆಲಸ ಕೊಡಲು ಮುಂದಾಗಲಿಲ್ಲ. ಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ ಅವರು, ಅಗತ್ಯಬಿದ್ದಾಗ ಸರ್ಕಾರ ಆರ್ಥಿಕ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು; ಅಮೆರಿಕ ಈಗ ಆ ಘಟ್ಟದಲ್ಲಿದೆ ಎಂದರು. ಈ ಚಿಂತನೆಯನ್ನು ರೂಸ್​ವೆಲ್ಟ್ ಜಾರಿಗೆ ತಂದು, ಬೃಹತ್ ಅಣೆಕಟ್ಟುಗಳನ್ನು ಹಾಗೂ ಸಾವಿರಾರು ಕಿಮೀ ಹೆದ್ದಾರಿಗಳನ್ನು ಜನರಿಂದಲೇ ಮಾಡಿಸಿದರು. ಇದರಿಂದ ಜನರ ಕೈಗೆ ಹಣ ಸಿಕ್ಕಿ, ಅವರಿಗೆ ಖರೀದಿ ಶಕ್ತಿ ಬಂದು, ಉತ್ಪಾದನಾ ವಲಯವೂ ಚೇತರಿಸಿಕೊಳ್ಳುತ್ತದೆ, ಹೀಗಾದಲ್ಲಿ ದೇಶದ ಆರ್ಥಿಕತೆಗೆ ಟಾನಿಕ್ ಸಿಕ್ಕಂತಾಗುತ್ತದೆ ಎಂಬುದು ಈ ಕ್ರಮದ ಹಿಂದಿನ ಆಲೋಚನೆಯಾಗಿತ್ತು.

ಜನರು ತೊಂದರೆಯಲ್ಲಿದ್ದಾಗ ಸರ್ಕಾರವೊಂದು ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಇದೊಂದು ಮಾದರಿ ನಿದರ್ಶನವಾಗಬಲ್ಲದು. ಇದೇ ಮಾತು ಸಾರ್ವಜನಿಕರಿಗೂ ಅನ್ವಯಿಸುತ್ತದೆ. ಸರ್ಕಾರ ಮುಂದಾಲೋಚನೆಯಿಂದ, ಸಮಷ್ಟಿಯ ಹಿತದೃಷ್ಟಿಯಿಂದ ಜಾರಿಗೊಳಿಸುವ ಯೋಜನೆಗಳಿಗೆ ತಮ್ಮ ಕೈಲಾದ ಸಹಕಾರ ನೀಡುವುದು ಜನರ ಜವಾಬ್ದಾರಿ. ಇದರಿಂದ ಅಂತಿಮವಾಗಿ ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ. ಅಂದರೆ, ರಾಷ್ಟ್ರಹಿತದ ಪ್ರಶ್ನೆ ಬಂದಾಗ ಅಲ್ಪಸ್ವಲ್ಪ ತ್ಯಾಗಕ್ಕೆ ಸಿದ್ಧರಿರಬೇಕಾಗುತ್ತದೆ. ನೋಟು ಅಮಾನ್ಯೀಕರಣ ಪ್ರಸಂಗದಲ್ಲಿ ದೇಶದ ಜನತೆ ಈ ಮನೋಭಾವವನ್ನು ಪ್ರದರ್ಶಿಸಿದ್ದು ಸರ್ಕಾರದ ಮನೋಬಲವನ್ನು ಹೆಚ್ಚಿಸಿರಲೂ ಸಾಕು. ಜನರನ್ನು ಈ ಯಜ್ಞಕ್ಕೆ ಸಜ್ಜುಗೊಳಿಸಲು ಆಗ ಮೋದಿ ಹೇಳಿದ ಮಾತು: ‘ಕಪು್ಪಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸರ್ಕಾರವು ನಿತ್ಯ ಸಮರ ಸಾರಿದೆ. ಈ ಹೋರಾಟದಲ್ಲಿ ಜನಸಾಮಾನ್ಯರು ಕೈ ಜೋಡಿಸಬೇಕಾದ ಸಂದರ್ಭ ಒದಗಿದೆ. ನೋಟು ನಿಷೇಧದಿಂದ ನಿಮಗೆ ಕಷ್ಟವಾಗುತ್ತದೆ ಗೊತ್ತು. ಆದರೆ ನಾವು ಕಷ್ಟವನ್ನು ಸಹಿಸೋಣ. ರಾಷ್ಟ್ರ ನಿರ್ವಣ, ರಾಷ್ಟ್ರ ಪುನರ್ ಸಂಘಟನೆಯಲ್ಲಿ ಪಾಲ್ಗೊಳ್ಳುವಂತಹ ಇಂಥ ಅಪರೂಪದ ಸಂದರ್ಭವು ಜೀವಮಾನದಲ್ಲಿ ಯಾವಾಗಲೋ ಒಮ್ಮೊಮ್ಮೆ ಬರುತ್ತದೆ. ಭ್ರಷ್ಟಾಚಾರ, ಕಪು್ಪಹಣ, ಭಯೋತ್ಪಾದಕತೆ ಪಿಡುಗುಗಳ ನಿವಾರಣೆಗಾಗಿ ಈ ಮಹಾ ಸಂಗ್ರಾಮ; ಇದರಲ್ಲಿ ನೀವೂ ಭಾಗಿಯಾಗಿ.’

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತಿತರ ಪಕ್ಷಗಳು ನೋಟ್ ಬ್ಯಾನ್ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸುತ್ತಿವೆ; ಇದರಿಂದ ಜನರಿಗೆ ತೊಂದರೆಯಾಗಿದೆಯೇ ಹೊರತು ಪ್ರಯೋಜನವಾಗಿಲ್ಲ; ದೇಶದ ಆರ್ಥಿಕ ವ್ಯವಸ್ಥೆಗೂ ಮಾರಕ ಹೊಡೆತ ಬಿದ್ದಿದೆ ಎಂಬುದು ಅವುಗಳ ವಾದ. ರಾಜಕೀಯ ವಾದವಿವಾದಗಳನ್ನು ಬದಿಗಿಟ್ಟು ವಾಸ್ತವಾಂಶಗಳತ್ತ ನೋಡಿದರೆ, ನೋಟು ಅಮಾನ್ಯೀಕರಣ ಪರಿಣಾಮಗಳು ಕಣ್ಣಿಗೆ ಗೋಚರಿಸುವಂತಿದೆ; ಅನೇಕ ಅರ್ಥಶಾಸ್ತ್ರಜ್ಞರೂ ಇದನ್ನು ಗುರುತಿಸಿದ್ದಾರೆ. ಅಮಾನ್ಯಗೊಂಡ ನೋಟಿನ ಬಹುಭಾಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿರುವುದರಿಂದ ಬ್ಯಾಂಕುಗಳ ನಿಧಿ ವೆಚ್ಚ ತಗ್ಗಿ, ಗ್ರಾಹಕರಿಗೆ ನೀಡುವ ಗೃಹ ಹಾಗೂ ಕೈಗಾರಿಕಾ ಸಾಲದ ಬಡ್ಡಿದರಗಳಲ್ಲಿ ಇಳಿಕೆಯಾಗಿದೆ; ಕಪ್ಪುಹಣ ಚೆಲ್ಲಾಟ-ಚಲಾವಣೆಯಿಂದಾಗಿ ವಿಪರೀತ ಏರಿದ್ದ ರಿಯಲ್ ಎಸ್ಟೇಟ್ ದರಗಳಲ್ಲಿ ಶೇ.20-40 ಕುಸಿತ ಕಂಡುಬಂದಿದೆ; ಡಿಜಿಟಲ್ ವಹಿವಾಟಿನ ಪ್ರಮಾಣ ಹೆಚ್ಚಳವಾಗಿದೆ-ಪ್ರಸಕ್ತ ವರ್ಷದ ಅಕ್ಟೋಬರ್​ವರೆಗೆ ದೇಶದಲ್ಲಿ 1 ಸಾವಿರ ಕೋಟಿ ರೂ. ಮೊತ್ತದ ಡಿಜಿಟಲ್ ವಹಿವಾಟು ನಡೆದಿದ್ದು, 2017-18ರಲ್ಲಿ ಶೇ.80 ಹೆಚ್ಚಳದೊಂದಿಗೆ 1,800 ಕೋಟಿ ರೂ.ಗಳಿಗೆ ಏರುವ ಮುನ್ಸೂಚನೆ ದೊರೆತಿದೆ; ನಕಲಿ ನೋಟುಗಳ ಕಾರುಬಾರಿಗೆ ಏಟು ಬಿದ್ದಿದೆ (ನಕಲಿ ನೋಟಿನವರು ಅಧಿಕ ಮುಖಬೆಲೆ ನೋಟುಗಳನ್ನೇ ಮುದ್ರಿಸಿ ಚಲಾವಣೆಗೆ ಬಿಡುವುದು); ಭಯೋತ್ಪಾದಕರು, ನಕ್ಸಲರು ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿಗಳ ಹಣದ ಮೂಲಕ್ಕೆ ಹೊಡೆತ ಬಿದ್ದಿದೆ; ಆದಾಯ ತೆರಿಗೆ ಪಾವತಿಸುವವರ ತಳಹದಿ ವಿಸ್ತರಿಸಿದೆ; ಚಿನ್ನ ಹಾಗೂ ಷೇರುಪೇಟೆಯಲ್ಲಿ ಹರಿಯುತ್ತಿದ್ದ ಕಪ್ಪುಹಣದ ಹೊಳೆ ಸೊರಗಿದೆ; ರಾಜಕಾರಣದಲ್ಲಿ ಕಪ್ಪುಹಣದ ಮೆರೆದಾಟಕ್ಕೆ ಅಂಕುಶ ಬಿದ್ದಿದೆ. ಇನ್ನೊಂದೆಡೆ, ನೋಟು ಅಮಾನ್ಯೀಕರಣದ ಬಳಿಕ 17 ಸಾವಿರ ಕೋಟಿ ರೂ. ಜಮಾಮಾಡಿ, ನಂತರದಲ್ಲಿ ಹಿಂಪಡೆದ 35 ಸಾವಿರ ಕಂಪನಿಗಳ ನೋಂದಣಿಯನ್ನು ಸರ್ಕಾರ ರದ್ದುಪಡಿಸಿದೆ; ದೀರ್ಘಕಾಲದಿಂದ ಕಾರ್ಯಾಚರಿಸದಿದ್ದ 2.24 ಲಕ್ಷ ಕಂಪನಿಗಳ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಇಷ್ಟೇ ಅಲ್ಲ, ಶಂಕಾಸ್ಪದ ವ್ಯವಹಾರಗಳ ತನಿಖೆ ಕೂಡ ನಡೆಯುತ್ತಿದೆ.

ಹಾಗಂತ ಎಲ್ಲವೂ ಇಲ್ಲಿಗೇ ಮುಗಿಯಿತು ಎಂದಲ್ಲ. ಇದು ಆರಂಭ ಮಾತ್ರ. ನೋಟು ಅಮಾನ್ಯೀಕರಣದ ಮೂಲ ಉದ್ದೇಶ ಭ್ರಷ್ಟಾಚಾರ, ಕಪ್ಪುಹಣಕ್ಕೆ ಲಗಾಮು ಹಾಕುವ ಜತೆಗೆ, ಡಿಜಿಟಲ್ ಅಂದರೆ ಕ್ಯಾಷ್​ಲೆಸ್ ವ್ಯವಸ್ಥೆಯತ್ತ ಸಾಗುವುದೂ ಸೇರಿದೆ. ಭಾರತದಂತಹ ಹಳ್ಳಿಗಳ, ಪ್ರಾದೇಶಿಕ ವೈವಿಧ್ಯದ ದೇಶ ಡಿಜಿಟಲ್ ವ್ಯವಸ್ಥೆಗೆ ಬದಲಾಗುವುದು ಅಷ್ಟು ಸುಲಭವಲ್ಲ, ಇಲ್ಲಿ ಸವಾಲುಗಳ ಸರಮಾಲೆಯೇ ಇದೆ ಎಂಬುದು ನಿಜ. ಆದರೆ ನಡೆಯುವವನು ಮಾತ್ರ ಎಡವುತ್ತಾನೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ದಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುನ್ನಡೆಯುವ ಇಚ್ಛಾಶಕ್ತಿ ಮತ್ತು ವಿವೇಕವನ್ನು ಸಂಬಂಧಪಟ್ಟವರು ಪ್ರದರ್ಶಿಸಿದರೆ ಅಂದುಕೊಂಡ ಗಮ್ಯ ಸೇರಬಹುದು.

ಮುಂದಿನ ಪೀಳಿಗೆಗೆ ಪ್ರಾಮಾಣಿಕ, ಪಾರದರ್ಶಕ ವ್ಯವಸ್ಥೆಯನ್ನು ನಾವು ಬಳುವಳಿಯಾಗಿ ನೀಡಬೇಕು ಎಂದಾದಲ್ಲಿ ವರ್ತಮಾನದಲ್ಲಿ ಕೆಲವು ಕಷ್ಟ, ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ. ವ್ಯವಸ್ಥೆಯ ಅಪಸವ್ಯಗಳ ಬಗ್ಗೆ ಜನರಲ್ಲಿ ಆಕ್ರೋಶ ಇದ್ದರಷ್ಟೇ ಸಾಲದು, ಆ ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕ ಸ್ಪಂದನೆಯೂ ಮುಖ್ಯ. ನೋಟು ಅಮಾನ್ಯೀಕರಣದ ಉದ್ದೇಶ ಈಡೇರಿದಲ್ಲಿ ಸರ್ಕಾರ ಮಾತ್ರವಲ್ಲ, ಜನರಲ್ಲಿಯೂ ಪ್ರಾಮಾಣಿಕತೆ-ಪಾರದರ್ಶಕತೆ ನೆಲೆಯಾಗಲು ಸಹಾಯವಾಗುತ್ತದೆ. ಸರ್ಕಾರಗಳ ಸದುದ್ದೇಶಕ್ಕೆ ಸಾರ್ವಜನಿಕ ಸಹಭಾಗಿತ್ವ ದೊರೆತಲ್ಲಿ ಭಾರತದ ಬೆಳಕು ಜಗವನ್ನೇ ಬೆಳಗೀತು. ರಾಜಕೀಯ ಪಕ್ಷಗಳೂ ಕೂಡ ದೇಶಹಿತದ ವಿಷಯ ಬಂದಾಗ ತಂತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಮುಂದೆಸಾಗುವ ವಿವೇಕವನ್ನು ತೋರಿದರೆ ಬದಲಾವಣೆ ಅಸಾಧ್ಯವಲ್ಲ. ಆ ಹಾದಿಯಲ್ಲಿ ನಮ್ಮ ಪಯಣವಿರಲಿ. ಪ್ರಧಾನಿ ಮೋದಿ ಹೇಳಿದಂತೆ, ರಾಷ್ಟ್ರ ನಿರ್ವಣ, ರಾಷ್ಟ್ರ ಮರು ಸಂಘಟನೆಯಲ್ಲಿ ಪಾಲ್ಗೊಳ್ಳುವಂತಹ ಇಂಥ ಅಪರೂಪದ ಸಂದರ್ಭವು ಜೀವಮಾನದಲ್ಲಿ ಯಾವಾಗಲೋ ಒಮ್ಮೊಮ್ಮೆ ಬರುತ್ತದೆ. ಆ ಅವಕಾಶ ಈಗ ಬಂದಿದೆ.

 

ಕಳೆದ ಒಂದು ದಶಕದಿಂದ ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆಯುತ್ತಿದ್ದು ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಬಡತನ ನಿಮೂಲನೆಗೆ ಇದು ಪ್ರಮುಖ ಸವಾಲಾಗಿದೆ. ಭಷ್ಟಾಚಾರ, ಭಯೋತ್ಪಾದನೆಯಂಥ ಪಿಡುಗು ತೊಲಗಿಸುವ ಯತ್ನವಾಗಿ ನೋಟು ನಿಷೇಧ ಕ್ರಮ ಕೈಗೊಳ್ಳಲಾಗಿದೆ.

| ನರೇಂದ್ರ ಮೋದಿ ಪ್ರಧಾನಿ (ಕಳೆದ ವರ್ಷ ನ. 8ರಂದು ನೋಟು ನಿಷೇಧ ಘೊಷಣೆ ವೇಳೆ)

 

ಭ್ರಷ್ಟಾಚಾರ, ಕಾಳಧನಕ್ಕೆ ಕಡಿವಾಣ ಹಾಕಿ, ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಲು ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ್ದ ಹಳೇ 500 ಹಾಗೂ ಸಾವಿರ ರೂ. ನೋಟು ನಿಷೇಧ ಕ್ರಮಕ್ಕೆ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಐತಿಹಾಸಿಕ ಹಾಗೂ ಕ್ರಾಂತಿಕಾರಿ ಕ್ರಮದಿಂದ ಒಂದು ವರ್ಷದಲ್ಲಿ ದೇಶದಲ್ಲಿ ಏನೇನು ಬದಲಾವಣೆಯಾಗಿದೆ ಎಂಬ ಬಗ್ಗೆ ಇಣುಕುನೋಟ ಇಲ್ಲಿದೆ…

ಒಂದು ವರ್ಷದಲ್ಲಿ ಆಗಿದ್ದೇನು?

# ಬಂದವು ಹೊಸ ನೋಟುಗಳು

# ಹೊಸ ವಿನ್ಯಾಸದಲ್ಲಿ ಮುದ್ರಿಸಲಾದ 500 ರೂ. ಹಾಗೂ 2 ಸಾವಿರ ರೂ. ಹೊಸ ನೋಟುಗಳು ಜನರಿಗೆ ಲಭ್ಯವಾದವು.

# ಆಗ ಚಲಾವಣೆಯಲ್ಲಿದ್ದ 500, ಸಾವಿರ ಮುಖಬೆಲೆಯ ಎಲ್ಲ ನಕಲಿ ನೋಟುಗಳು ಒಂದೇ ಬಾರಿಗೆ ಚಲಾವಣೆಯಿಂದ ಹೊರಬಿದ್ದವು

# ಹೆಚ್ಚಿನ ಸುರಕ್ಷತೆ ಕ್ರಮ ಹೊಂದಿರುವ 50 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳನ್ನು ಆರ್​ಬಿಐ ಬಿಡುಗಡೆ ಮಾಡಿತು.

ಜನರಿಗಾದ ಲಾಭ

# ಗೃಹಸಾಲ ಸಹಿತ ಎಲ್ಲ ಸಾಲಗಳ ಬಡ್ಡಿದರ ಇಳಿಕೆ

# ಪ್ರಧಾನಮಂತ್ರಿ ಆವಾಸ್ ಯೋಜನೆ ಸಹಿತ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಯೋಜನೆ ಕೇಂದ್ರದಿಂದ ಘೊಷಣೆ

# ನೋಟು ನಿಷೇಧ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸ್ಪಲ್ಪ ಮಟ್ಟಿಗೆ ಕಡಿವಾಣ

ಡಿಜಿಟಲ್ ಕ್ರಾಂತಿ

ನೋಟು ಅಮಾನ್ಯೀಕರಣ ನಂತರ ದೇಶದಲ್ಲಿ ಡಿಜಿಟಲ್ ಕ್ರಾಂತಿ ಉಂಟಾಗಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್​ವರೆಗೆ ದೇಶದಾದ್ಯಂತ 1 ಸಾವಿರ ಕೋಟಿ ರೂ. ಡಿಜಿಟಲ್ ವಹಿವಾಟು ನಡೆದಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಇದು 1,800 ಕೋಟಿ ರೂ.ಗೆ ತಲುಪುವ ಸಾಧ್ಯತೆ ಇದೆ.

ಕರಗಿತು ಕಾಳ ಕುಬೇರರ ಸಂಪತ್ತು

# ಕಪ್ಪುಹಣ ಹಾಗೂ ಸರ್ಕಾರಕ್ಕೆ ತೆರಿಗೆ ತಪ್ಪಿಸಿ ಕಾಳಧನಿಕರು ಸಂಗ್ರಹಿಸಿಟ್ಟುಕೊಂಡಿದ್ದ ಕೋಟ್ಯಂತರ ರೂ. ನಗದು ರದ್ದಿಯಾಯಿತು.

# ನೋಟು ನಿಷೇಧ ಬಳಿಕ ಶಂಕಿತ ವಹಿವಾಟು ಕಂಡುಬಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ 2 ಲಕ್ಷಕ್ಕೂ ಹೆಚ್ಚು ಖಾತೆದಾರರಿಗೆ ತೆರಿಗೆ ವಿಭಾಗ ಈಗಾಗಲೇ ನೋಟಿಸ್ ನೀಡಿ ತನಿಖೆ ಆರಂಭಿಸಿದೆ.

# ಅಕ್ರಮ ವಹಿವಾಟಿನ ಬೆನ್ನು ಬಿದ್ದ ಜಾರಿ ನಿರ್ದೇಶನಾಲಯ ದೇಶಾದ್ಯಂತ ಭರ್ಜರಿ ಬೇಟೆ ನಡೆಸಿ, ನೂರಾರು ಕಾಳಧನಿಕರ ಸಾವಿರಾರು ಕೋಟಿ ರೂ. ಆಸ್ತಿ ಜಪ್ತಿ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ.

# ಬೇನಾಮಿ ಹೆಸರಲ್ಲಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ವಂಚಿಸುತ್ತಿದ್ದ 2.24 ಲಕ್ಷ ಬೇನಾಮಿ ಕಂಪನಿಗಳಿಗೆ ಬೀಗ

ನೋಟು ನಿಷೇಧ ಬಳಿಕ ದೇಶದ ಒಟ್ಟು ಉತ್ಪನ್ನ (ಜಿಡಿಪಿ) ಶೇ. 5.7ಕ್ಕೆ ಕುಸಿದಿತ್ತು. ಇದು ಅಲ್ಪಾವಧಿ ಕುಸಿತ ಮಾತ್ರ. ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಶೇ. 7ಕ್ಕಿಂತ ಹೆಚ್ಚು ಅಭಿವೃದ್ಧಿ ದರ ದಾಖಲಾಗಲಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *

Back To Top