Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಈಗ ಮನೆಯೂ ಸ್ಮಾರ್ಟ್!

Sunday, 06.08.2017, 3:00 AM       No Comments

| ಟಿ.ಜಿ. ಶ್ರೀನಿಧಿ

ಈಚಿನ ದಿನಗಳಲ್ಲಿ ಎಲ್ಲ ಸಾಧನಗಳೂ ಒಂದರ ನಂತರ ಒಂದರಂತೆ ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಟೀವಿ, ಸ್ಮಾರ್ಟ್ ವಾಚ್- ಹೀಗೆ ಮನೆಯ ಸಾಧನಗಳೆಲ್ಲ ಸ್ಮಾರ್ಟ್ ಆದಮೇಲೆ ಇನ್ನೇನು, ಪೂರ್ತಿ ಮನೆಯೂ ಸ್ಮಾರ್ಟ್ ಆಗುವುದೇ ಬಾಕಿ!

ಹೌದು, ಡಿಜಿಟಲ್ ತಂತ್ರಜ್ಞಾನದ ಅನುಕೂಲತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೆ, ಅರ್ಥಾತ್ ‘ಸ್ಮಾರ್ಟ್ ಹೋಮ್​ಗಳು ಇದೀಗ ರೂಪುಗೊಳ್ಳುತ್ತಿವೆ. ಇಲ್ಲಿನ ಫ್ಯಾನು-ಲೈಟುಗಳನ್ನು ಮೊಬೈಲಿನಿಂದ ನಿಯಂತ್ರಿಸಬಹುದು, ಮನೆಯ ತಾಪಮಾನ-ಗಾಳಿಯ ಗುಣಮಟ್ಟದ ಮಾಹಿತಿಯನ್ನು ಮೊಬೈಲಿನಲ್ಲೇ ಪಡೆದುಕೊಳ್ಳಬಹುದು, ವಾಶಿಂಗ್ ಮಶೀನ್- ಮೈಕ್ರೋವೇವ್ ಓವನ್ ಕೆಲಸಗಳನ್ನೆಲ್ಲ ಆಫೀಸಿನಲ್ಲಿ ಕುಳಿತೇ ಗಮನಿಸಿಕೊಳ್ಳಬಹುದು, ಸೆಕ್ಯೂರಿಟಿ ಕ್ಯಾಮೆರಾಗೆ ಕಾಣುತ್ತಿರುವ ದೃಶ್ಯಗಳನ್ನು ಸ್ಮಾರ್ಟ್​ಫೋನಿನಲ್ಲಿ ನೋಡಬಹುದು. ಅಂದಹಾಗೆ ಇದೆಲ್ಲ ಮುಂದೆಂದೋ ಸಾಧ್ಯವಾಗುವ ಸಂಗತಿಗಳಲ್ಲ- ಮೇಲಿನ ಉದಾಹರಣೆಗಳ ಪೈಕಿ ಬಹಳಷ್ಟು ಸೌಲಭ್ಯಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ, ನಮ್ಮ ದೇಶದಲ್ಲೂ!

ಈ ಪೈಕಿ ಸ್ಮಾರ್ಟ್ ಬಲ್ಬ್​ನಂತಹ ಸಾಧನಗಳಂತೂ ಕೆಲವೇ ನೂರು ರೂಪಾಯಿಗಳಲ್ಲಿ ದೊರಕುತ್ತವೆ. ಮೊಬೈಲ್ ಮೂಲಕ ನಿಯಂತ್ರಿಸಬಹುದಾದ ಈ ದೀಪಗಳು ನಮಗೆ ಬೇಕಾದಾಗ ಬೆಳಕನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳಬಲ್ಲವು, ಬೆಳಕಿನ ಬಣ್ಣವನ್ನೂ ಬದಲಿಸಬಲ್ಲವು. ಮೊಬೈಲಿನಿಂದ ಹೊಮ್ಮುವ ಹಾಡಿಗೆ ಸ್ಮಾರ್ಟ್​ಬಲ್ಬ್ ಸಾಂಗತ್ಯವಿದ್ದರೆ ಮನೆಯಲ್ಲೇ ಡಿಸ್ಕೋ ಎಫೆಕ್ಟ್ ರೆಡಿ! ಸೀಲಿಂಗ್ ಫ್ಯಾನ್​ನಿಂದ ಟಾಯ್ಲೆಟ್ ಸೀಟ್​ವರೆಗೆ ಇದೇ ರೀತಿ ಮೊಬೈಲ್ ಮೂಲಕ ನಿಯಂತ್ರಿಸಬಹುದಾದ ಇನ್ನೂ ಅನೇಕ ಸ್ಮಾರ್ಟ್ ಸಾಧನಗಳು ಮಾರುಕಟ್ಟೆಯಲ್ಲಿವೆ. ಅಂರ್ತಜಾಲ ಸಂಪರ್ಕವಿರುವ ಇಂತಹ ಸಾಧನಗಳ ಬಳಕೆಯಿಂದ ಏನೆಲ್ಲ ಸಾಧ್ಯವಾಗಬಹುದು? ಕಾಲಿಂಗ್ ಬೆಲ್ ಉದಾಹರಣೆ ನೋಡೋಣ. ಕ್ಯಾಮೆರಾ ಸೌಲಭ್ಯವಿರುವ ಕಾಲಿಂಗ್ ಬೆಲ್ ಅನ್ನೂ ಅಂರ್ತಜಾಲ ಸಂಪರ್ಕವನ್ನೂ ಬಳಸಿಕೊಂಡು ಮನೆಯಲ್ಲಿ ಬೆಲ್ ಒತ್ತುತ್ತಿರುವುದು ಯಾರು ಎನ್ನುವುದನ್ನು ನೀವು ಎಲ್ಲೇ ಇದ್ದರೂ ಮೊಬೈಲಿನಲ್ಲೇ ನೋಡಬಹುದು. ಬಂದಿರುವವರ ಜೊತೆ ಮಾತನಾಡಲೂಬಹುದು. ಮೊಬೈಲ್ ಮೂಲಕವೇ ಬೀಗ ತೆರೆದು ಅವರನ್ನು ಮನೆಯೊಳಗೆ ಸ್ವಾಗತಿಸಬಹುದು.

ಗಮನಿಸಬೇಕಾದ ಅಂಶವೆಂದರೆ ಸ್ಮಾರ್ಟ್​ಫೋನ್, ಸ್ಮಾರ್ಟ್​ವಾಚ್​ಗಳಿಗೆಲ್ಲ ಇರುವಂತೆ ಸ್ಮಾರ್ಟ್ ಮನೆಗೆ ನಿರ್ದಿಷ್ಟವಾದ ಸ್ವರೂಪವೇನೂ ಇರುವುದಿಲ್ಲ. ಮೇಲೆ ಹೇಳಿದ ವಿವಿಧ ಸೌಲಭ್ಯಗಳು ಸೇರಿದ ಒಂದು ವಿಶಾಲವಾದ ಪರಿಕಲ್ಪನೆಯಷ್ಟೇ ಆದ್ದರಿಂದ ನಮ್ಮ ಸ್ಮಾರ್ಟ್​ವುನೆ ಇನ್ನೊಬ್ಬರದ್ದಕ್ಕಿಂತ ಸಂಪೂರ್ಣ ಭಿನ್ನವಾಗಿರುವುದು ಸಾಧ್ಯ. ನಮ್ಮ ಅಗತ್ಯಗಳಿಗೆ ತಕ್ಕಂತೆ ನಾವು ಬಳಸುವ ಸಾಧನಗಳೂ ಬೇರೆಬೇರೆಯಾಗಿರಬಹುದು: ಹಿರಿಯರ ಆರೋಗ್ಯದ ಮೇಲೆ ನಿಗಾ ಇಡುವ ಯಂತ್ರಗಳಿಂದ ಪ್ರಾರಂಭಿಸಿ ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕುವ ವ್ಯವಸ್ಥೆಯವರೆಗೆ ವಿವಿಧ ಅಗತ್ಯಗಳಿಗೆ ಸ್ಪಂದಿಸುವ ಅದೆಷ್ಟೋ ಸ್ಮಾರ್ಟ್ ಸಾಧನಗಳು ಈಗಾಗಲೇ ರೂಪುಗೊಂಡಿವೆ. ಅಷ್ಟೇ ಅಲ್ಲ, ಕೊಂಚ ತಾಂತ್ರಿಕ ಪರಿಣತಿ ಇದ್ದರೆ ಹೊಸ ವ್ಯವಸ್ಥೆಗಳನ್ನು ನಾವೇ ರೂಪಿಸಿ ಸ್ಮಾರ್ಟ್ ಮನೆಯ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದೂ ಸಾಧ್ಯವಾಗಿದೆ.

ಮನೆಯೊಳಗಿನ ವಸ್ತುಗಳಷ್ಟೇ ಅಲ್ಲ, ವಾಹನಗಳೂ ಸ್ಮಾರ್ಟ್ ಆಗಿವೆ. ನಾವು ಹೊರಗಡೆ ಎಲ್ಲೋ ಇದ್ದಾಗಲೂ ಸ್ಮಾರ್ಟ್​ಫೋನ್ ಮೂಲಕ ನಮ್ಮ ಕಾರಿನೊಡನೆ ಸಂಪರ್ಕದಲ್ಲಿರುವುದು ಇದೀಗ ಸಾಧ್ಯ. ಅಷ್ಟೇ ಅಲ್ಲ, ಕಾರಿನೊಳಗಿರುವ ಕಂಪ್ಯೂಟರುಗಳೊಡನೆ ಸಂಪರ್ಕ ಏರ್ಪಡಿಸಿಕೊಡುವ ಸಾಧನಗಳ ನೆರವಿನಿಂದ ನಮ್ಮ ಕಾರಿನ ಆರೋಗ್ಯದ ಸ್ಥಿತಿಗತಿಯನ್ನು ಥಟ್ ಅಂತ ತಿಳಿದುಕೊಂಡುಬಿಡಬಹುದು.

ಇತರೆಲ್ಲ ಸ್ಮಾರ್ಟ್ ಸಾಧನಗಳಂತೆ ಸ್ಮಾರ್ಟ್ ಮನೆಯ ಹಿನ್ನೆಲೆಯಲ್ಲಿರುವುದೂ ಅಂರ್ತಜಾಲವೇ. ಆದರೆ ಇಲ್ಲಿರುವುದು ಕಂಪ್ಯೂಟರುಗಳಷ್ಟೇ ಅಲ್ಲವಾದ್ದರಿಂದ ಇದು ಬರಿಯ ಅಂರ್ತಜಾಲವಲ್ಲ- ವಸ್ತುಗಳ ಅಂರ್ತಜಾಲ, ಅಂದರೆ ‘ಇಂಟರ್​ನೆಟ್ ಆಫ್ ಥಿಂಗ್ಸ್‘!

ಇಂಟರ್​ನೆಟ್ ಎಂದಾಕ್ಷಣ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಷ್ಟೇ ನಮ್ಮ ಮನಸ್ಸಿಗೆ ಬರುವುದು ಸಾಮಾನ್ಯ. ಅಂರ್ತಜಾಲ ಸಂಪರ್ಕವನ್ನು ಇಂತಹ ಸಾಧನಗಳಿಗಷ್ಟೇ ಸೀಮಿತಗೊಳಿಸದೆ ನಿತ್ಯದ ಬಳಕೆಯ ವಸ್ತುಗಳನ್ನೂ ಅದರ ವ್ಯಾಪ್ತಿಗೆ ತರುವುದು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವುದು ಈ ಪರಿಕಲ್ಪನೆಯ ವೈಶಿಷ್ಟ್ಯ.

ನಾವು ದಿನನಿತ್ಯವೂ ಬಳಸುವ ನೂರಾರು, ಸಾವಿರಾರು ಸಂಖ್ಯೆಯ ವಸ್ತುಗಳು (ಥಿಂಗ್ಸ್) ಬೃಹತ್ ಜಾಲವೊಂದರ ಭಾಗವಾಗಿ ಬೆಳೆದಾಗ ವಸ್ತುಗಳ ಅಂರ್ತಜಾಲ ರೂಪುಗೊಳ್ಳುತ್ತದೆ. ನಮ್ಮ ಪರಿಚಯದ ಅಂರ್ತಜಾಲದಲ್ಲಿ ಹೇಗೆ ಲ್ಯಾಪ್​ಟಾಪ್-ಡೆಸ್ಕ್​ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂರ್ಪತವಾಗಿವೆಯೋ ಹಾಗೆ ವಸ್ತುಗಳ ಈ ಅಂರ್ತಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಎಲ್ಲ ಸಾಧನಗಳೂ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು, ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಲ್ಲವು. ಗೃಹೋಪಯೋಗಿ ವಸ್ತುಗಳು- ವಾಹನಗಳು ಮುಂತಾದ ದೊಡ್ಡ ಸಾಧನಗಳಷ್ಟೇ ಅಲ್ಲ, ನಮ್ಮ ದೇಹದೊಳಗೆ ಸೇರಿ ಆರೋಗ್ಯವನ್ನೂ ನಮ್ಮ ಓಡಾಟವನ್ನೂ ಗಮನಿಸಿಕೊಳ್ಳುವ ಸೆನ್ಸರುಗಳಂತಹ ಅತಿಸೂಕ್ಷ್ಮ ವಸ್ತುಗಳೂ ಈ ಜಾಲದ ಭಾಗವಾಗಿರುವುದು ಸಾಧ್ಯ.

ಇಷ್ಟೆಲ್ಲ ಸಾಧನಗಳು ಅಂರ್ತಜಾಲದ ಸಂಪರ್ಕಕ್ಕೆ ಬಂದರೆ ಅವುಗಳ ನಡುವೆ ವಿನಿಮಯವಾಗುವ ಮಾಹಿತಿಯ ಪ್ರಮಾಣವೂ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದಲ್ಲ, ಅದನ್ನು ನಿಭಾಯಿಸುವ ಸಿದ್ಧತೆಗಳೂ ನಡೆದಿವೆ. ಈಗ ನಮಗೆ ಪರಿಚಯವಿರುವುದಕ್ಕಿಂತ ಹಲವಾರು ಪಟ್ಟು ಹೆಚ್ಚು ವೇಗದ ಅಂರ್ತಜಾಲ ಸಂಪರ್ಕಗಳನ್ನು ಕಲ್ಪಿಸಿಕೊಡುವುದು ಇಂತಹ ಸಿದ್ಧತೆಗಳ ಪೈಕಿ ಪ್ರಮುಖವಾದದ್ದು. ದೂರಸಂಪರ್ಕ ಕ್ಷೇತ್ರದ ಹಲವು ದೊಡ್ಡ ಸಂಸ್ಥೆಗಳು (ಉದಾ: ರಿಲಯನ್ಸ್ ಜಿಯೋ) ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಮಾಡುತ್ತಿವೆ. ಮನೆಯ ದೂರವಾಣಿ, ಬ್ರಾಡ್​ಬ್ಯಾಂಡ್ ಹಾಗೂ ಡಿಟಿಎಚ್ ಸಂಪರ್ಕಗಳೆಲ್ಲ ಪ್ರತ್ಯೇಕವಾಗಿರುವ ಬದಲು ಒಂದೇ ಅಂರ್ತಜಾಲ ಸಂಪರ್ಕ ಅವೆಲ್ಲದರ ಕೆಲಸವನ್ನೂ ನಿಭಾಯಿಸುವಂತೆ ಮಾಡುವ ಯೋಚನೆ ಕೂಡ ಇದೀಗ ಕಾರ್ಯಗತವಾಗುತ್ತಿದೆ!

ಆಪ್​ಗಳಿಗೆ ರ‍್ಯಾಂಕಿಂಗ್

ಗೂಗಲ್ ಪ್ಲೇಸ್ಟೋರ್​ಗೆ ಕಾಲಿಟ್ಟರೆ ಲಕ್ಷಾಂತರ ಆಪ್​ಗಳು ಸಿಗುತ್ತವೆ. ಇವುಗಳಲ್ಲಿ ಕೆಲ ಆಪ್​ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇಂಥ ಆಪ್​ಗಳಿಗೆ ಗೇಟ್​ಪಾಸ್ ನೀಡಲು ಗೂಗಲ್ ಪ್ಲೇ ಮುಂದಾಗಿದ್ದು, ಆಪ್​ನ ಗುಣಮಟ್ಟ ಆಧರಿಸಿ ರ್ಯಾಂಕಿಗ್ ನೀಡಲಿದೆ.

ಸದ್ಯ ಬಳಕೆದಾರರು ಆಪ್ ಪರ್ಫಾರ್ವೆನ್ಸ್ ನೋಡಿ ಅವುಗಳಿಗೆ ಸ್ಟಾರ್ ನೀಡಬದುದಾಗಿದೆ. ಗೂಗಲ್ ಪ್ಲೇ ಆಪ್​ಗೆ ರ‍್ಯಾಂಕಿಂಗ್ ನೀಡಲು ಮುಂದಾಗಿರುವುದರಿಂದ, ಬಳಕೆದಾರರಿಗೆ ಆಪ್​ನ ನೈಜ ಪರ್ಫಾರ್ವೆನ್ಸ್ ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

ಆಪ್ ಅಭಿವೃದ್ಧಿ ಪಡಿಸುವವರು ಅದರ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ನೀಡಬೇಕು. ಆಪ್ ಬಿಡುಗಡೆ ಮಾಡುವುದಕ್ಕೂ ಮುನ್ನ ಮತ್ತು ಆಪ್​ಗೆ ಸಂಬಂಧಿಸಿದ ಅಪ್​ಡೇಟ್ ನೀಡುವ ಮುನ್ನ ಈ ಬಗ್ಗೆ ಆಪ್ ಡೆವಲಪರ್​ಗಳು ಗೂಗಲ್ ಪ್ಲೇಗೆ ಸಂಪೂರ್ಣ ವರದಿ ನೀಡಬೇಕು. ಉತ್ತಮ ಪರ್ಫಾರ್ವೆನ್ಸ್ ನೀಡುವ ಆಪ್​ಗಳಿಗೆ ಉತ್ತಮ ರ್ಯಾಂಕ್ ನೀಡಲಾಗುತ್ತದೆ. ಇದರಿಂದ ಬಳಕೆದಾರರು ಯಾವ ಆಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸುಲಭವಾಗಿ ಗುರುತಿಸಬಹುದು ಎಂದು ಗೂಗಲ್ ಪ್ಲೇ ತನ್ನ ಬ್ಲಾಗ್​ನಲ್ಲಿ ಹೇಳಿದೆ.

Leave a Reply

Your email address will not be published. Required fields are marked *

Back To Top