Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಇಲ್ಲದಿರುವುದ ಬಿಟ್ಟು ಇರುವುದರೆಡೆಗೆ ತುಡಿಯಿರಿ

Wednesday, 15.11.2017, 3:03 AM       No Comments

| ಡಾ.ಎಚ್.ಎಸ್.ನಾಗರಾಜ

ಒಂದೂರಿನಲ್ಲಿ ಒಬ್ಬ ಬಾಲಕನಿದ್ದ. ಆತನಿಗೆ ಎಲ್ಲ ವಿಷಯಗಳಲ್ಲೂ ತಾನೇ ಗೆಲ್ಲಬೇಕು, ಆ ಮೂಲಕ ಅತ್ಯಂತ ಬುದ್ಧಿವಂತ ಅನ್ನಿಸಿಕೊಳ್ಳಬೇಕೆಂಬ ಬಯಕೆ. ಈ ಕಾರಣಕ್ಕೆ ಆತ ತನ್ನ ಸ್ನೇಹಿತರು, ಕುಟುಂಬ ಸದಸ್ಯರು, ಶಿಕ್ಷಕರು, ಅಷ್ಟೇ ಅಲ್ಲ, ಅಪರಿಚಿತರ ಮುಂದೆ ಕೂಡ ಸದಾ ಒಂದಲ್ಲ ಒಂದು ಪ್ರಶ್ನೆ ಇಡುತ್ತಿದ್ದ. ಒಂದು ವೇಳೆ ಅವರು ಅದಕ್ಕೆ ಉತ್ತರಿಸಲು ವಿಫಲರಾದರೆ, ಅವರನ್ನು ಅವಮಾನಿಸಿ, ಆ ಮೂಲಕ ಅಪರಿಮಿತ ಆನಂದ ಪಡೆಯುತ್ತಿದ್ದ.

ಹೀಗಿರುವಾಗ ಒಂದು ದಿನ ಆತನ ಶಾಲೆಗೆ ಹೊಸ ಶಿಕ್ಷಕರೊಬ್ಬರು ಬರುತ್ತಾರೆ. ಈ ಬಾಲಕ ಆ ಶಿಕ್ಷಕರನ್ನು ಭೇಟಿಯಾಗಿ, ತಾನು ಅವರಿಗಿಂತ ಹೆಚ್ಚು ವಿಚಾರಗಳನ್ನು ತಿಳಿದಿದ್ದೇನೆ ಎನ್ನುವುದನ್ನು ಸಾಬೀತುಪಡಿಸಲು ಬಯಸಿದ್ದ. ಹೀಗಾಗಿ ಶಿಕ್ಷಕರನ್ನು ಹುಡುಕಿಕೊಂಡು ಅಧ್ಯಾಪಕರ ಕೊಠಡಿಯತ್ತ ಸಾಗತೊಡಗಿದ. ದಾರಿ ಮಧ್ಯೆ ಗಿಡದ ಮೇಲೆ ಚಿಟ್ಟೆಯೊಂದು ಕುಳಿತಿರುವುದನ್ನು ಗಮನಿಸಿ, ಅದನ್ನು ಹಿಡಿದು ಕೈಯಲ್ಲಿಟ್ಟುಕೊಂಡು ಮುಂದೆ ಸಾಗಿದ. ಆ ಸಮಯದಲ್ಲಿ ಹೊಸ ಶಿಕ್ಷಕ ಅಧ್ಯಾಪಕರ ಕೊಠಡಿಯಿಂದ ತರಗತಿಗೆ ತೆರಳುತ್ತಿದ್ದರು. ಅವರನ್ನು ಸಂಧಿಸಿದ ಬಾಲಕ ಸರ್ ನಾನು ಯಾರೆಂದು ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ಶಿಕ್ಷಕ ನೀನು ಧರಿಸಿರುವ ಸಮವಸ್ತ್ರದಿಂದ ಈ ಶಾಲೆಯ ವಿದ್ಯಾರ್ಥಿ ಎನ್ನುವುದು ತಿಳಿಯುತ್ತದೆ. ಅದಕ್ಕೆ ಬಾಲಕನ ಮರುತ್ತರ ಬರೀ ವಿದ್ಯಾರ್ಥಿ ಅಷ್ಟೇ ಅಲ್ಲ, ಈ ಶಾಲೆಯ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ. ಎಲ್ಲದರಲ್ಲೂ ಸದಾ ವಿಜಯಶಾಲಿ. ಬಾಲಕನ ಮಾತನ್ನು ತುಸು ಗಂಭೀರವಾಗಿ ಪರಿಗಣಿಸಿದ ಶಿಕ್ಷಕರು, ಆತನಿಗೆ ನಮ್ರತೆ ಹಾಗೂ ಕೃತಜ್ಞತೆಯ ಪಾಠ ಕಲಿಸಲು ನಿರ್ಧರಿಸಿದರು. ಇದೇ ಸಮಯದಲ್ಲಿ ಬಾಲಕ ಸರ್ ನನ್ನ ಮುಷ್ಠಿಯೊಳಗೆ ಒಂದು ಚಿಟ್ಟೆಯಿದೆ. ಈಗ ಹೇಳಿ ಅದು ಬದುಕಿದೆಯೋ ಇಲ್ಲ ಸತ್ತಿದೆಯೋ? ಒಂದು ಕ್ಷಣ ಯೋಚಿಸಿದ ಶಿಕ್ಷಕರು, ಮನಸ್ಸಲ್ಲೇ ಹೀಗೆ ಲೆಕ್ಕಾಚಾರ ಹಾಕಿದರು -ಒಂದು ವೇಳೆ ನಾನು ಚಿಟ್ಟೆ ಬದುಕಿದೆ ಎಂದರೆ ಅದು ಸತ್ತಿದೆ ಎಂಬುದನ್ನು ಸಾಬೀತುಪಡಿಸಲು ಅದನ್ನು ಕೈಯೊಳಗೇ ಹಿಸುಕಿ ಹಾಕುತ್ತಾನೆ. ಆ ಮೂಲಕ ನನ್ನ ಉತ್ತರ ತಪ್ಪೆಂದು ಸಾಬೀತುಪಡಿಸುತ್ತಾನೆ. ಅದೇ ನಾನು ಚಿಟ್ಟೆ ಸತ್ತಿದೆ ಎಂದರೆ ಮುಷ್ಠಿ ಬಿಡಿಸಿ ಅದನ್ನು ಹಾರಲು ಬಿಡುತ್ತಾನೆ. ಬಳಿಕ ಉತ್ತರಿಸಿದರು ಚಿಟ್ಟೆ ಸತ್ತಿದೆ. ತಕ್ಷಣ ಬಾಲಕ ತನ್ನ ಮುಷ್ಠಿ ಬಿಡಿಸಿದ, ಚಿಟ್ಟೆ ಹಾರಿ ಹೋಯ್ತು. ನಂತರ ಹೇಳಿದ ನೀವು ತಪ್ಪು ಉತ್ತರ ನೀಡಿದ್ದೀರಿ. ನಾನು ಗೆದ್ದೆ. ಆಗ ಶಿಕ್ಷಕರು ನಸುನಗುತ್ತ ಹೇಳಿದರು ಚಿಟ್ಟೆ ಬದುಕಿದೆಯೋ ಇಲ್ಲ ಸತ್ತಿದೆಯೋ ಎಂಬುದು ನನಗೆ ತಿಳಿದಿರಲಿಲ್ಲ. ಆದರೆ, ಅದು ಜೀವಂತವಾಗಿದ್ದರೆ, ಸ್ವತಂತ್ರವಾಗಿ ಹಾರಿ ಹೋಗಲಿ ಎಂದು ಬಯಸಿದ್ದೆ. ಹೀಗಾಗಿ ಅದು ಸತ್ತಿದೆ ಎಂದೆ. ನಿನ್ನ ಉಪಾಯಗಳ ಬಗ್ಗೆ ಕೇಳಿದ್ದೇನೆ. ತುಂಬಾ ಚೆನ್ನಾಗಿದೆ. ಟಜ, ನೀನೊಬ್ಬ ಬುದ್ಧಿವಂತ ಹುಡುಗ. ನಮ್ಮ ದೈನಂದಿನ ಬದುಕಿನಲ್ಲಿ ಅನೇಕ ಕಾರ್ಯಗಳಿಗೆ ಬುದ್ಧಿವಂತಿಕೆ ಅತ್ಯಗತ್ಯ. ಆದರೆ, ಬದುಕಿನಲ್ಲಿ ಮಹೋನ್ನತವಾದುದ್ದನ್ನು ಸಾಧಿಸಲು ಬರೀ ಬುದ್ಧಿವಂತಿಕೆವೊಂದಿದ್ದರೆ ಸಾಲದು. ಅದಕ್ಕೆ ನಮ್ರತೆ ಹಾಗೂ ಕೃತಜ್ಞತೆ ಕೂಡ ಅಗತ್ಯ. ಜೀವನದಲ್ಲಿ ನಮಗೆ ಒದಗಿರುವ ಎಲ್ಲ ಆಶೀರ್ವಾದಗಳನ್ನು ಲೆಕ್ಕ ಹಾಕುವುದನ್ನು ಕೂಡ ಕಲಿಯಬೇಕಾಗುತ್ತದೆ. ಬದುಕಿನಲ್ಲಿ ಒಲಿದಿರುವುದನ್ನು ಲೆಕ್ಕವಿಡದಿದ್ದರೆ ಹಾಗೂ ನಮ್ರತೆ ಬೆಳೆಸಿಕೊಳ್ಳದಿದ್ದರೆ ನೀನು ಜಾಣನಾಗಿ ಬೆಳೆಯಲು ಸಾಧ್ಯವಿಲ್ಲ. ಜ್ಞಾನ ನಿನ್ನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುವುದು ಮಾತ್ರವಲ್ಲ, ಬದಲಿಗೆ ಈ ಜಗತ್ತನ್ನು ವಾಸಯೋಗ್ಯ ಸ್ಥಳವನ್ನಾಗಿ ಪರಿವರ್ತಿಸಿಕೊಳ್ಳಲು ನೆರವು ನೀಡುತ್ತದೆ ಕೂಡ.

ಬದುಕಿನಲ್ಲಿ ಖುಷಿಯಾಗಿರಲು ನಮಗೆ ಧಕ್ಕಿರುವ ಸುಖಗಳನ್ನು ಲೆಕ್ಕ ಹಾಕುವುದು ಅತ್ಯಗತ್ಯ. ಅದರಲ್ಲೂ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಇದು ಇನ್ನೂ ಮಹತ್ವದ ಪಾತ್ರ ವಹಿಸುತ್ತದೆ. ನಿರಾಸೆಗಳು, ಕಷ್ಟಗಳು, ಭಯ, ಅಸಹನೆಗಳು ಬದುಕಿನ ಅಂಗಗಳು. ಆದರೆ, ನಮಗೆ ಅವು ಎದುರಾದಾಗ ಜೀವನ ದುರ್ಬರ ಅನಿಸಿಬಿಡುತ್ತದೆ. ಆದರೆ, ಇಂಥ ಸಂದರ್ಭದಲ್ಲಿ ಬದುಕಿನಲ್ಲಿ ನಮಗೆ ಧಕ್ಕಿರುವ ವರಗಳನ್ನು ಲೆಕ್ಕ ಹಾಕಿದಾಗ, ಸಂತೋಷವಾಗುತ್ತದೆ. ಅಷ್ಟೇ ಅಲ್ಲ, ಎಲ್ಲ ಸವಾಲುಗಳನ್ನು ಎದುರಿಸಬಲ್ಲೆವು ಎಂಬ ಭರವಸೆಯೂ ಮೂಡುತ್ತದೆ. ನಮಗೆ ಸಿಕ್ಕ ಆಶೀರ್ವಾದಗಳನ್ನು ಲೆಕ್ಕ ಹಾಕಲು ಪ್ರಾರಂಭಿಸಿದಾಗ ನಮ್ಮಲ್ಲಿರುವ ನೇತ್ಯಾತ್ಮಕ ಆಲೋಚನೆಗಳು ದೂರವಾಗಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ. ಇದು ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಳ್ಳಲು ಸಹಾಯ ಮಾಡುತ್ತದೆ.

ಬಹುತೇಕ ಸಂದರ್ಭಗಳಲ್ಲಿ ನಾವು ನಮ್ಮ ಬಳಿಯಿರುವುದೆಲ್ಲವನ್ನು ಬಿಟ್ಟು ಇನ್ನೊಬ್ಬರ ಬಳಿ ಏನಿದೆ ಎಂಬುದನ್ನು ಲೆಕ್ಕ ಹಾಕುತ್ತೇವೆ. ಇದರಿಂದ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತೇವೆ. ಆದರೆ, ನೆಮ್ಮದಿಯ ಜೀವನ ನಡೆಸಲು ಒಂದು ಕ್ಷಣ ನಮ್ಮ ಬಳಿಯಿರುವ ಬೌದ್ಧಿಕ, ಭಾವನಾತ್ಮಕ ಹಾಗೂ ಭೌತಿಕ ಸಂಪತ್ತುಗಳನ್ನು ಲೆಕ್ಕ ಹಾಕಿ ನೋಡಿದರೆ ಸಾಕು. ನೀವೇ ಯೋಚಿಸಿ, ಉತ್ತಮ ಆರೋಗ್ಯ, ಕೌಟುಂಬಿಕ ಬೆಂಬಲ, ಸಹೋದ್ಯೋಗಿಗಳು ಹಾಗೂ ಸ್ನೇಹಿತರ ಆತ್ಮೀಯತೆ, ನಮ್ಮ ಸುತ್ತಮುತ್ತಲಿರುವ ಸಜ್ಜನರು, ನಮ್ಮ ಕಲಿಕಾ ಸಾಮರ್ಥ್ಯ, ಆಹ್ಲಾದಕರ ವಾತಾವರಣ ಇವೆಲ್ಲ ಸಂತೋಷಭರಿತ ಜೀವನಕ್ಕೆ ಸಾಕಷ್ಟಾಗಿಲ್ಲವೆ! ನಮ್ಮ ಪಕ್ಕದ ಮನೆಯವರ ಬಳಿಯಿರುವ ಕಾರು ನಮ್ಮ ಬಳಿ ಇಲ್ಲದಿರಬಹುದು ಅಥವಾ ನಮ್ಮ ಸ್ನೇಹಿತರು ಸುತ್ತಾಡಿದಷ್ಟು ನಾವು ಸುತ್ತದಿರಬಹುದು. ಆದರೆ, ಈ ಜಗತ್ತಿನಲ್ಲಿ ನಮ್ಮ ಬಳಿಯಿರುವ ವಸ್ತುಗಳಲ್ಲಿ ಒಂದಂಶದಷ್ಟನ್ನೂ ಹೊಂದಿರದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಮರೆಯಬಾರದು. ನಮಗಿಂತ ಕಷ್ಟದಲ್ಲಿರುವ ಅಥವಾ ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ಕಂಡಾಗ ನಾವೆಷ್ಟು ಅದೃಷ್ಟಶಾಲಿಗಳು ಎಂಬುದು ಅರಿವಾಗುತ್ತದೆ.

ನಾನಾ ಸಂದರ್ಭಗಳಲ್ಲಿ ನಮಗೆ ನೆರವು ನೀಡಿದ ವ್ಯಕ್ತಿಗಳನ್ನು ಸದಾ ನನೆಯುವ ಜತೆಗೆ ಅವರಿಗೆ ಅಭಾರಿಗಳಾಗಿರಬೇಕು. ಇಂಥ ನಡೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಮಿದುಳಿಗೆ ನೆರವು ನೀಡುತ್ತದೆ. ಮಿದುಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದಾಗ ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ನಮಗೆ ಧಕ್ಕಿರುವ ಸಂಗತಿಗಳ ಬಗ್ಗೆ ಗಮನ ಕೇಂದ್ರೀಕರಿಸುವುದರಿಂದ ಉನ್ನತ ಮಟ್ಟದ ಭಾವನಾತ್ಮಕ ಹಾಗೂ ವ್ಯಕ್ತಿಗತ ನೆರವುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.

ಜೀವನದಲ್ಲಿ ನಮಗೆ ಸಿಕ್ಕಿರುವ ಭಾಗ್ಯಗಳಿಗೆ ಖುಷಿಪಡಬೇಕು ಎಂಬುದನ್ನು ಈ ಕೆಳಗಿನ ಕಥೆ ಸುಂದರವಾಗಿ ಕಟ್ಟಿಕೊಟ್ಟಿದೆ: ಅನೇಕ ವರ್ಷಗಳ ಹಿಂದೆ ಪುಟ್ಟ ಪಟ್ಟಣವೊಂದರಲ್ಲಿ ಹನುಮ ಎಂಬ ಹೆಸರಿನ ಮಂಗ ವಾಸವಾಗಿತ್ತು. ರಂಗ ಎಂಬ ವ್ಯಕ್ತಿ ಹನುಮನನ್ನು ತನ್ನ ಮನೆಯಲ್ಲಿಟ್ಟುಕೊಂಡು ಸಾಕುತ್ತಿದ್ದ. ರಂಗ ಹನುಮನಿಗೆ ಕೆಲವೊಂದು ಕಲೆಗಳನ್ನು ಕರಗತ ಮಾಡಿಸಿದೆ. ಇವನ್ನು ದಾರಿ ಬದಿಯಲ್ಲಿ ಪ್ರದರ್ಶಿಸಿ, ಅದರಿಂದ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದ. ರಂಗ ಹನುಮನನ್ನು ತನ್ನ ಕುಟುಂಬದ ಸದಸ್ಯರಲ್ಲೊಬ್ಬ ಎಂಬಂತೆ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಒಂದು ದಿನ ತನ್ನ ದೈನಂದಿನ ಕೆಲಸಕಾರ್ಯಗಳಿಂದ ರಜೆ ಪಡೆದ ರಂಗ, ಹನುಮನನ್ನು ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿರುವ ಸಿಂಹಗಳು, ಹುಲಿಗಳು, ಜಿರಾಫೆಗಳು, ಜಿಂಕೆಗಳು ಮತ್ತಿತರ ಪ್ರಾಣಿಗಳನ್ನು ನೋಡಿ ಹನುಮನಿಗೆ ಖುಷಿಯಾಗುತ್ತದೆ. ಆ ಬಳಿಕ ಅವರು ಮಂಗಗಳಿರುವ ಪಂಜರದ ಬಳಿ ಬರುತ್ತಾರೆ. ಅಲ್ಲಿ ಮಂಗಗಳು ಆಡುತ್ತ ಕಾಲ ಕಳೆಯುತ್ತಿದ್ದವು. ಯಾವುದೇ ಕೆಲಸ ಮಾಡದಿದ್ದರೂ ಅವುಗಳಿಗೆ ಹೊಟ್ಟೆ ತುಂಬ ಊಟ ನೀಡುತ್ತಿರುವುದನ್ನು ಕಂಡು ಹನುಮನಿಗೆ ಆಶ್ಚರ್ಯವಾಗುತ್ತದೆ. ಮೃಗಾಲಯದ ವೀಕ್ಷಣೆ ಬಳಿಕ ರಂಗನೊಂದಿಗೆ ಹನುಮ ಮನೆಗೆ ಹಿಂತಿರುಗುತ್ತಾನೆ. ಆದರೆ, ಮೃಗಾಲಯದಲ್ಲಿ ಕಂಡ ದೃಶ್ಯಗಳು ಹನುಮನನ್ನು ಆಲೋಚನೆಗೆ ಪ್ರೇರೇಪಿಸುತ್ತವೆ. ಅಲ್ಲಿರುವ ಮಂಗಗಳು ದಿನವಿಡೀ ಆರಾಮಾವಾಗಿ, ಖುಷಿಯಾಗಿ ಕಾಲ ಕಳೆಯುತ್ತವೆ. ಆದರೆ, ತಾನು ಮಾತ್ರ ಹೊಟ್ಟೆ ತುಂಬಿಸಿಕೊಳ್ಳಲು ಇಡೀ ದಿನ ವಿವಿಧ ಕಲೆಗಳನ್ನು ಪ್ರದರ್ಶಿಸಬೇಕು. ಇದು ಎಷ್ಟು ಸರಿ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ ಹನುಮ ತಾನು ಕೂಡ ಮೃಗಾಲಯಕ್ಕೆ ಹೋಗಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಒಂದು ದಿನ ರಂಗನ ಮನೆಯಿಂದ ಹೊರಬೀಳುವ ಹನುಮ ನೇರವಾಗಿ ಮೃಗಾಲಯಕ್ಕೆ ಹೋಗುತ್ತಾನೆ. ಮಂಗಗಳಿಗೆ ಆಹಾರ ನೀಡಲು ಗೂಡಿನ ಬಾಗಿಲುಗಳನ್ನು ತೆರೆದಿಟ್ಟ ಸಂದರ್ಭದಲ್ಲಿ ಒಳಗಡೆ ಸೇರಿಕೊಳ್ಳುತ್ತಾನೆ. ಮೃಗಾಲಯದಲ್ಲಿದ್ದ ಮಂಗಗಳಿಗೆ ಕೂಡ ಹೊಸ ಸಂಗಾತಿ ಸಿಕ್ಕಿದ್ದು ಖುಷಿ ನೀಡಿತು. ಹನುಮ ಅವುಗಳೊಂದಿಗೆ ಸೇರಿಕೊಂಡು ಉದಾಸೀನದ ಜೀವನ ನಡೆಸತೊಡಗಿದ. ಊಟ, ಆಟ, ನಿದ್ರೆ ಇಷ್ಟೇ ಆತನ ಬದುಕಾಯಿತು. ಆತ ಅಲ್ಲಿ ಖುಷಿಯಿಂದ ದಿನಗಳನ್ನು ಕಳೆಯತೊಡಗಿದ. ಆದರೆ, ದಿನ ಸರಿದಂತೆ ಹನುಮನಿಗೆ ಮೃಗಾಲಯದ ಬದುಕು ಬೇಸರ ತರಿಸಲಾರಂಭಿಸಿತು. ಪಟ್ಟಣದ ತುಂಬ ಸುತ್ತಾಡಬೇಕು, ಮರಗಳನ್ನು ಹತ್ತಬೇಕು ಹಾಗೂ ತನ್ನ ಕಲೆಗಳನ್ನು ಪ್ರದರ್ಶಿಸಬೇಕೆಂಬ ಬಯಕೆ ಮೂಡಿತು. ರಂಗನ ಜೊತೆ ಇರುವಾಗ ಆತ ಸ್ವತಂತ್ರವಾಗಿ ಸುತ್ತಾಡುತ್ತಿದ್ದ. ಆದರೆ, ಇಲ್ಲಿ ಪಂಜರದೊಳಗೆ ಸೆರೆಯಾಗಿದ್ದ. ಈ ಸೆರೆಯಿಂದ ಬಿಡಿಸಿಕೊಳ್ಳುವ ಅವಕಾಶಕ್ಕೆ ಹನುಮ ಕಾಯುತ್ತಿದ್ದ. ಒಂದು ದಿನ ತಪ್ಪಿಸಿಕೊಳ್ಳುವ ಅವಕಾಶ ಸಿಕ್ಕಿತು. ಇದನ್ನು ಸದುಪಯೋಗಪಡಿಸಿಕೊಂಡು, ರಂಗನ ಮನೆಗೆ ಓಡಿ ಹೋದ. ರಂಗ ಕೂಡ ಹನುಮನನ್ನು ನೋಡಿ ಖುಷಿಪಟ್ಟ. ಆತನನ್ನು ಮನೆಗೆ ಸೇರಿಸಿಕೊಂಡ. ಇಬ್ಬರೂ ಮೊದಲಿನಂತೆ ಸಂತಸದಿಂದ ಜೀವನ ನಡೆಸಲಾರಂಭಿಸಿದರು. ಈ ಕಥೆಯಿಂದ ಕಲಿಯಬೇಕಾದ ನೀತಿ ಏನೆಂದರೆ ನಮ್ಮ ಬಳಿಯಿರುವ ವಸ್ತುಗಳಿಂದ ಸಂತೃಪ್ತಿ ಪಡೆಯುವ ಜತೆಗೆ ನಾವೆಷ್ಟು ಅದೃಷ್ಟವಂತರು ಎಂಬ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಬದಲಿಗೆ ನಮ್ಮ ಬಳಿಯಿರದ ವಸ್ತುಗಳೇ ಉತ್ತಮವಾದವು ಎಂದು ಯೋಚಿಸಿ, ಕೊರಗುತ್ತೇವೆ.

(ಲೇಖಕರು ಸುಪ್ರಸಿದ್ಧ BASE ಅಕಾಡೆಮಿ ಸಂಸ್ಥಾಪಕರು, ಶಿಕ್ಷಣ ತಜ್ಞರು)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top