Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಇರಾನ್​ನಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು

Friday, 19.05.2017, 3:00 AM       No Comments

ಚುನಾಯಿತ ಸಂಸದೀಯ ವ್ಯವಸ್ಥೆಯಿದ್ದರೂ ಅಯತೊಲ್ಲಾಹ್ ಖೊಮೇನಿಯ ಪಾಳೇಗಾರಿಕೆಗೆ ಹೆಸರಾದ ದೇಶ ಇರಾನ್. ಬಿಗಿನೀತಿಗಾರರು, ಸುಧಾರಣಾವಾದಿಗಳು, ಧಾರ್ವಿುಕ ವಿಧಾಯಕಶಕ್ತಿಗಳ ವಿಲಕ್ಷಣ ಮಿಶ್ರಣವಾಗಿರುವ ಇರಾನ್ ರಾಜಕೀಯ ವ್ಯವಸ್ಥೆ, ಈ ಕಾರಣದಿಂದಲೇ ಜಗದ ಗಮನ ಸೆಳೆದಿದೆ. ಇಂದು ಅಲ್ಲಿ ರಾಷ್ಟ್ರಾಧ್ಯಕ್ಷರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒಂದು ಕಿರುನೋಟ.

ಇಂದು (ಮೇ 19) ನಡೆಯಲಿರುವ ಇರಾನ್​ನ 12ನೇ ಅಧ್ಯಕ್ಷೀಯ ಚುನಾವಣೆ ಹಲವು ನೆಲೆಗಟ್ಟಿನಲ್ಲಿ ಕುತೂಹಲ ಕೆರಳಿಸಿದೆ. ಕಾರಣ, ಕಣದಲ್ಲಿ ತೊಡೆತಟ್ಟುತ್ತಿರುವ ಘಟಾನುಘಟಿ ಕಲಿಗಳು. ಇರಾನ್​ನ 7ನೇ ಹಾಗೂ ಹಾಲಿ ಅಧ್ಯಕ್ಷ, ಮಧ್ಯಸ್ಥಮಾರ್ಗದ ಹಸನ್ ರೌಹಾನಿ ಅವರಿಗೆ ಎದುರಾಗಿ ಕಟ್ಟುನಿಟ್ಟು ನೀತಿಗೆ ಹೆಸರಾದ ಇಬ್ರಾಹಿಂ ರೈಸಿ ಬಲವಾದ ಸವಾಲು ಒಡ್ಡಿರುವುದು ಈ ಬಾರಿಯ ವಿಶೇಷ. ಹಾಗೆ ನೋಡಿದರೆ, ಇರಾನ್​ನ ಆಂತರಿಕ ವಿಷಯಗಳು ಮತ್ತು ವಿದೇಶಾಂಗ ನೀತಿಯ ಕುರಿತು ಅಲ್ಲಿನ ಸವೋಚ್ಚ ನಾಯಕ ಅಯಾತೊಲ್ಲಾಹ್ ಅಲಿ ಖೊಮೇನಿ ಹೇಳಿದ್ದೇ ಅಲ್ಲಿ ವೇದವಾಕ್ಯ; ದೇಶದ ಅಧ್ಯಕ್ಷರೆನಿಸಿಕೊಂಡವರೂ ಅದನ್ನು ಚಾಚೂ ತಪ್ಪದೆ ಪಾಲಿಸಬೇಕಾದ್ದು ಅಲ್ಲಿನ ರಾಜಕೀಯ ಅನಿವಾರ್ಯ. ಇಷ್ಟಾಗಿಯೂ ರಾಷ್ಟ್ರಾಧ್ಯಕ್ಷರೆನಿಸಿಕೊಂಡವರಿಗೆ ಗಣನೀಯ ಮಹತ್ವ, ಪ್ರಭಾವ ಮತ್ತು ಹತೋಟಿ ಇರುತ್ತವೆ ಎಂಬುದನ್ನು ತಳ್ಳಿಹಾಕಲಾಗದು. ಇರಾನ್​ನ ವಿದೇಶಾಂಗ ನೀತಿಗಳು ಸೌಹಾರ್ದಯುತವಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬಂದಿರುವ ಬೆಳವಣಿಗೆಯಾದರೂ, ಒಂದೊಮ್ಮೆ ಹೊಸ ಅಧ್ಯಕ್ಷರು ಬಂದಲ್ಲಿ ಈ ಪರಿಸ್ಥಿತಿ ಬದಲಾಗಬಹುದು ಎಂಬ ಎಣಿಕೆಯೂ ಇದೆ. ಇರಾನ್​ನ ರಾಜಕೀಯ ಸ್ವರೂಪ, ಚುನಾವಣಾ ಚಟುವಟಿಕೆ ಹಾಗೂ ಕಣದಲ್ಲಿರುವ ‘ಓಡುವ ಕುದುರೆ’ಗಳ ಕುರಿತಾದ ಕಿರುಮಾಹಿತಿ ಇಲ್ಲಿದೆ.

ಖೊಮೇನಿಯೇ ಪರಮೋಚ್ಚ ನಾಯಕ

 • 1989ರಿಂದಲೂ ದೇಶದ ರಾಜಕೀಯ ವಲಯದಲ್ಲಿ ಪಾರುಪತ್ಯ ಸಾಧಿಸಿಕೊಂಡೇ ಬಂದಿರುವ ಅಯಾತೊಲ್ಲಾಹ್ ಖೊಮೇನಿ, ಅಲ್ಲಿನ ಧಾರ್ವಿುಕ ವಿಧಾಯಕಶಕ್ತಿಯೂ ಹೌದು. ಇರಾನ್​ನ ಅಧ್ಯಕ್ಷ ಮತ್ತು ಸಂಸತ್ತು ಜನರಿಂದ ಚುನಾಯಿಸಲ್ಪಟ್ಟರೂ, ಖೊಮೇನಿಯೇ ಪರಮೋಚ್ಚ ನಾಯಕ ಎಂಬುದು ಗಮನಿಸಬೇಕಾದ ಸಂಗತಿ.
 • ‘ಗಾರ್ಡಿಯನ್ ಕೌನ್ಸಿಲ್’ ಎಂದೇ ಕರೆಯಲ್ಪಡುವ ‘ಪಾಲಕ ಸಮಿತಿ’ಯನ್ನು ಖೊಮೇನಿ ನೇಮಿಸುತ್ತಾರೆ; ಸಂಭಾವ್ಯ/ಸಮರ್ಥ ಅಧ್ಯಕ್ಷೀಯ ಅಭ್ಯರ್ಥಿಗಳ ಪರಿಶೀಲನೆ ನಡೆಸುವುದು ಈ ಸಮಿತಿಯ ಹೊಣೆಗಾರಿಕೆ.
 • ಆರಂಭದಲ್ಲಿ, ಕಣದಲ್ಲಿ 6 ಮಂದಿ ಅಭ್ಯರ್ಥಿಗಳಿದ್ದರು; ಇಬ್ಬರು ಉಮೇದುವಾರಿಕೆಯನ್ನು ಹಿಂತೆಗೆದುಕೊಂಡ ಪರಿಣಾಮ ಈಗ ಉಳಿದಿರುವುದು 4 ಮಂದಿಯೇ.
 • ಮೊದಲ ಸುತ್ತಿನ ಮತದಾನ ಇಂದು (ಮೇ 19) ನಡೆಯುತ್ತದೆ; ಒಂದೊಮ್ಮೆ ಯಾವ ಅಭ್ಯರ್ಥಿಗೂ ಶೇ. 50ಕ್ಕಿಂತ ಹೆಚ್ಚು ಮತಗಳು ಬಾರದಿದ್ದಲ್ಲಿ, ಮೇ 26ರಂದು ನಿರ್ಣಾಯಕ ಚುನಾವಣೆ ನಡೆಯುತ್ತದೆ.

ಇರಾನ್​ನ ಆಡಳಿತ ವ್ಯವಸ್ಥೆಯ ಸ್ಥೂಲರೂಪ

 • ಅಯತೊಲ್ಲಾಹ್ ಅಲಿ ಖೊಮೇನಿ ಈ ವ್ಯವಸ್ಥೆಯ ಪರಮೋಚ್ಚ ನಾಯಕ. ರಾಜಕೀಯ ಮತ್ತು ಧಾರ್ವಿುಕ ವಿಧಾಯಕಶಕ್ತಿಯಲ್ಲಿ ಇವರದೇ ಪಾರುಪತ್ಯ. ಹಿರಿಯ ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸುವ ಅಧಿಕಾರ ಇವರಿಗಿದೆ.
 • ಸಶಸ್ತ್ರ ಪಡೆಗಳು: ಕ್ರಾಂತಿಕಾರಕ ರಕ್ಷಕರು ಮತ್ತು ಸೇನಾ ಕಮಾಂಡರ್​ಗಳನ್ನು ಒಳಗೊಂಡಿರುತ್ತದೆ.
 • ‘ಎಕ್ಸ್​ಪೀಡಿಯೆನ್ಸಿ ಕೌನ್ಸಿಲ್’: ಪರಮೋಚ್ಚ ನಾಯಕ ಖೊಮೇನಿಯ ಸಲಹಾ ಮಂಡಳಿಯಿದು.
 • ಗಾರ್ಡಿಯನ್ ಕೌನ್ಸಿಲ್: 12 ಮಂದಿ ನ್ಯಾಯಶಾಸ್ತ್ರಜ್ಞರನ್ನು ಇದು ಒಳಗೊಂಡಿರುತ್ತದೆ. ಇವರ ಪೈಕಿ ಆರು ಮಂದಿಯನ್ನು ಖೊಮೇನಿ ಆರಿಸಿದರೆ, ಉಳಿದ ಆರು ಮಂದಿಯನ್ನು ನ್ಯಾಯಾಂಗ ವ್ಯವಸ್ಥೆ ಆಯ್ಕೆಮಾಡುತ್ತದೆ ಹಾಗೂ ಸಂಸತ್ತು ಅದನ್ನು ಅನುಮೋದಿಸುತ್ತದೆ. ಸಂಸತ್ತಿನ ಕಾನೂನುಗಳಿಗೆ ತಡೆಯೊಡ್ಡುವ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅಭ್ಯರ್ಥಿಗಳ ಮೇಲೆ ನಿಷೇಧ ಹೇರುವ ಅಧಿಕಾರ ಇದಕ್ಕಿದೆ.
 • ರಾಷ್ಟ್ರೀಯ ಭದ್ರತಾ ಮಂಡಳಿ: ವಿದೇಶಾಂಗ ನೀತಿ ಹಾಗೂ ಪರಮಾಣು ನೀತಿಗಳ ಕುರಿತು ಮಾರ್ಗದರ್ಶನ ನೀಡುವ ಘಟಕವಿದು.
 • ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥ: ಇಸ್ಲಾಮಿಕ್ ಕಾನೂನು ಕುರಿತಾದ ಅತ್ಯುಚ್ಚ ವಿಧಾಯಕಶಕ್ತಿ ಇವರಾಗಿರುತ್ತಾರೆ.
 • ಪರಿಣತರ ಕೂಟ: 88 ಮಂದಿ ಧಾರ್ವಿುಕ ಮುಖಂಡರ (ಇಛ್ಟಿಜ್ಚಿಠ) ಒಂದು ಸಂಪ್ರದಾಯಪಾಲಕ ಘಟಕವಿದು. 8 ವರ್ಷಗಳ ಅವಧಿಗೆ ಇವರನ್ನು ಚುನಾಯಿಸಲಾಗಿರುತ್ತದೆ. ಪರಮೋಚ್ಚ ನಾಯಕನನ್ನು ಆಯ್ಕೆಮಾಡುವ ಅಥವಾ ವಜಾಗೊಳಿಸುವ ಹಕ್ಕು ಈ ಘಟಕಕ್ಕೆ ಇದೆಯಾದರೂ, ಖೊಮೇನಿಯ ಯಾವುದೇ ನಿರ್ಣಯಗಳನ್ನು ಇದು ಪ್ರಶ್ನಿಸಿದ ಉದಾಹರಣೆಗಳು ಇದುವರೆಗೂ ವರದಿಯಾಗಿಲ್ಲ.

ಪ್ರಮುಖ ಚರ್ಚಾವಿಷಯಗಳು

ಪರಮಾಣು ಒಪ್ಪಂದವು ಈ ಚುನಾವಣೆಯ ಚರ್ಚಾವಿಷಯಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಜಾಗತಿಕ ತೈಲಬೆಲೆಗಳಲ್ಲಿನ ಕುಸಿತ ಹಾಗೂ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಚುನಾಯಿತರಾದದ್ದು ಈ ಒಪ್ಪಂದದ ಪ್ರಯೋಜನಗಳನ್ನು ಇರಾನ್ ಪಡೆಯುವ ನಿಟ್ಟಿನಲ್ಲಿ ತಡೆಯೊಡ್ಡಿದವು. ಇದನ್ನು ಹೊರತುಪಡಿಸಿದರೆ, ತೀವ್ರವಾಗಿರುವ ನಿರುದ್ಯೋಗ ಸಮಸ್ಯೆ, ಜಿಡಿಪಿ ಬೆಳವಣಿಗೆ ಪ್ರಮಾಣದಲ್ಲಿ ಚೇತರಿಕೆ ತರುವುದು, ಸಿರಿಯಾದಲ್ಲಿ ಇರಾನ್​ನ ಪ್ರಭಾವವನ್ನು ಕಾಯ್ದುಕೊಂಡು ಹೋಗುವಿಕೆ- ಇವು ಈ ಚುನಾವಣೆಯ ಇನ್ನಿತರ ಚರ್ಚಾವಿಷಯಗಳಾಗಿವೆ.

ಅಧ್ಯಕ್ಷೀಯ ಅಭ್ಯರ್ಥಿಗಳ ಪ್ರವರ

ಹಸನ್ ರೌಹಾನಿ (68) : ಪ್ರಸ್ತುತ ಅಧಿಕಾರ ದಲ್ಲಿರುವ ರೌಹಾನಿ ಮೃದುನಡೆಯ ಅಥವಾ ಮಧ್ಯಸ್ಥಮಾರ್ಗದ ಸುಧಾರಣಾವಾದಿ ಎಂದೇ ಹೆಸರುವಾಸಿ. ಮಹತ್ತರವಾದ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಪಾಶ್ಚಾತ್ಯ ರಾಷ್ಟ್ರಗಳೊಂದಿಗಿನ ಬಾಂಧವ್ಯ ಸುಧಾರಣೆಯ ವಾಗ್ದಾನದೊಂದಿಗೆ 2013ರಲ್ಲಿ ಚುನಾಯಿತರಾಗಿ ಗದ್ದುಗೆಗೇರಿದ ರೌಹಾನಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವಿ. ಅಯಾತೊಲ್ಲಾಹ್ ಖೊಮೇನಿಯ ಸಲಹೆಗಾರರೂ ಆಗಿದ್ದ ಇವರು, ಇರಾಕ್ ಜತೆಗಿನ ಯುದ್ಧದ ಸಂದರ್ಭದಲ್ಲಿ ರಾಷ್ಟ್ರೀಯ ವಾಯು ಪಡೆಯ ಮೇಲೆ ಅಧಿಕೃತ ನಿಯಂತ್ರಣವನ್ನೂ ಹೊಂದಿದ್ದರು. 2015ರ ಪರಮಾಣು ಒಪ್ಪಂದದಲ್ಲಿ ಇವರ ನಿರ್ಣಾಯಕ ಪಾತ್ರವಿತ್ತು.

ಇಬ್ರಾಹಿಂ ರೈಸಿ (56) : ಪ್ರವಾದಿ ಮೊಹಮ್ಮದರ ವಂಶಸ್ಥ ಎಂದೇ ತಮ್ಮನ್ನು ಬಿಂಬಿಸಿಕೊಳ್ಳುವ ರೈಸಿ, ಪ್ರಧಾನ ಅಭಿಯೋಜಕರಾಗಿದ್ದು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದಂಥವರು. ಖೊಮೇನಿಯ ಪ್ರತಿನಿಧಿಗಳಲ್ಲಿ ಒಬ್ಬರ ಮಗಳನ್ನು ಮದುವೆಯಾಗಿರುವ ಇವರು, ಆ ಪರಮೋಚ್ಚ ನಾಯಕನ ಉತ್ತರಾಧಿಕಾರಿ ಎಂದೇ ಬಿಂಬಿತ. ಇಸ್ಲಾಮಿಕ್ ಕಾನೂನು ವಿಷಯದಲ್ಲಿ ಪ್ರೊಫೆಸರ್ ಕೂಡ ಹೌದು. ಬಡತನ ಹಾಗೂ ಭ್ರಷ್ಟಾಚಾರದ ವಿರುದ್ಧ ಸೆಣಸುವುದು ಇವರ ವಾಗ್ದಾನ.

ಮೊಸ್ತಾಫಾ ಆಘಾ ಮೀರ್​ಸಲೀಂ (69) : ಖೊಮೇನಿಗೆ ಸಮಯೋಚಿತ ಸಲಹೆ ನೀಡುವ ‘ಎಕ್ಸ್​ಪೀಡಿಯೆನ್ಸಿ ಕೌನ್ಸಿಲ್’ ಎಂಬ ಪ್ರಬಲ ಸಮಿತಿಯ ಸದಸ್ಯರಾಗಿರುವ ಮೀರ್​ಸಲೀಂ, ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಖಾತೆಯ ಮಾಜಿ ಸಚಿವರೂ ಹೌದು. ಖೊಮೇನಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1981-89) ಅವರ ‘ಬಲಗೈ ಬಂಟ’ ಎಂದೇ ಗುರುತಿಸಿಕೊಂಡಿದ್ದವರು. ‘ಸುಧಾರಣಾವಾದಿ’ ಹಣೆಪಟ್ಟಿಯ ವೃತ್ತಪತ್ರಿಕೆಗಳನ್ನು ಮುಚ್ಚಿಸಿದ ಹಾಗೂ ಪಾಶ್ಚಾತ್ಯ ಸಂಸ್ಕೃತಿಯನ್ನು ಬಹಿರಂಗವಾಗಿ ಖಂಡಿಸಿದ ದಾಖಲೆಗಳೂ ಇವರ ಖಾತೆಯಲ್ಲಿವೆ.

ಮೊಸ್ತಾಫಾ ಹಾಶೆಮಿತಾಬಾ (70) : ರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ ಹಿಂದೆ ಕೆಲಸ ಮಾಡಿದ ಅನುಭವವಿರುವ ಹಾಶೆಮಿತಾಬಾ, ಮಾಜಿ ಅಧ್ಯಕ್ಷ ಮೊಹಮ್ಮದ್ ಖಟಾಮಿಯವರ ನಿಕಟವರ್ತಿ ಎಂದೇ ಜನಜನಿತ. ಪರಮಾಣು ಒಡಂಬಡಿಕೆಯ ಪ್ರಬಲ ಸಮರ್ಥಕರಾಗಿರುವ ಇವರು, ಬಿಗಿನೀತಿಗಾರರ ನಿರ್ದಾಕ್ಷಿಣ್ಯ ಟೀಕಾಕಾರ ಎಂದೇ ಖ್ಯಾತರು. 1994-2001ರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಇವರು, 2001ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Leave a Reply

Your email address will not be published. Required fields are marked *

Back To Top