Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಇನ್ಪೋಸಿಸ್​​​ಗಿದು ಪರೀಕ್ಷೆಯ ಕಾಲ

Sunday, 20.08.2017, 3:02 AM       No Comments

ನ್ಪೋಸಿಸ್​ನ ಸಿಇಒ ಮತ್ತು ಎಂಡಿ ಹುದ್ದೆಯಿಂದ ವಿಶಾಲ್ ಸಿಕ್ಕಾ ನಿರ್ಗಮಿಸಿರುವುದು ಸಂಚಲನೆ ಸೃಷ್ಟಿಸಿದೆ. ವಿಷಯದ ಆಳ ಅರಿಯದೆ ಈ ಬಗ್ಗೆ ಮನಬಂದಂತೆ ಮಾತಾಡುವ ಬದಲು, ಒಂದು ಕಾಲಕ್ಕೆ ಇನ್ಪೋಸಿಸ್ ಕಂಪನಿಯನ್ನು ಆರಾಧಿಸಿದ ಶ್ರೀಸಾಮಾನ್ಯರ ಮೇಲೆ ಈ ಬೆಳವಣಿಗೆಯಿಂದಾಗುವ ದೂರಗಾಮಿ ಪರಿಣಾಮಗಳ ಕುರಿತು ಚಿಂತನೆ ನಡೆಸಬೇಕಿದೆ. ಇನ್ಪೋಸಿಸ್​ಗಿದು ಪರೀಕ್ಷೆಯ ಕಾಲ

ಇಂದಿನ ಪೀಳಿಗೆಯವರಿಗೆ ಫ್ಲಿಪ್​ಕಾರ್ಟ್, ಓಲಾ, ಅಮೆಝಾನ್, ಫೇಸ್​ಬುಕ್, ಗೂಗಲ್, ವಾಟ್ಸಾಪ್​ಗಳು ಹೇಗೋ, ನಮ್ಮ ಪೀಳಿಗೆಗೆ ಇನ್ಪೋಸಿಸ್ ಹಾಗೆ! ನಾವು ವಿದ್ಯಾರ್ಥಿಗಳಾಗಿದ್ದಾಗ, ಇಂದಿನ ಸ್ಟಾರ್ಟ್​ಅಪ್​ಗಳ ಬಗ್ಗೆ ಈಗ ಜನ ಮಾತನಾಡಿಕೊಳ್ಳುವಂತೆ, ಆಗೆಲ್ಲರೂ ಮಾತನಾಡುತ್ತಿದ್ದುದು ಇನ್ಪೋಸಿಸ್ ಮತ್ತು ವಿಪ್ರೊಗಳ ಬಗ್ಗೆಯೇ. ಅದರಲ್ಲೂ ಇನ್ಪೋಸಿಸ್​ಗೆ ವಿಶೇಷ ಸ್ಥಾನ- ಏಕೆಂದರೆ, ವಿಪ್ರೊಗೆ ತನ್ನ ಮೂಲ ಉತ್ಪನ್ನವಾದ ವನಸ್ಪತಿಯ ವಾಸನೆ ಸ್ವಲ್ಪ ಇತ್ತು. ಹಳೆಯ ಕಂಪನಿ ಹೊಸದೇನನ್ನೋ ತಯಾರಿಸುತ್ತಿದೆ ಎನ್ನುವ ಗೌರವವಿದ್ದರೂ, ಸ್ವಲ್ಪಮಟ್ಟಿಗೆ ಪರಿಚಿತವಾದ ಹೆಸರಾದ್ದರಿಂದ, ಅಜೀಂ ಪ್ರೇಮ್ ವಿಶ್ವದ ಎರಡನೆಯ ಅತಿಶ್ರೀಮಂತ ವ್ಯಕ್ತಿ ಎಂದು ಕರೆಸಿಕೊಳ್ಳುವವರೆಗೆ, ವಿಪ್ರೊ ಬಗ್ಗೆ ಅತಿವಿಶೇಷವಾದ ಕುತೂಹಲ ಇರಲಿಲ್ಲ ಎನ್ನಬೇಕು.

ಆದರೆ, ಇನ್ಪೋಸಿಸ್ ಬಗ್ಗೆ ಹಾಗಿರಲಿಲ್ಲ. ಒಂದಷ್ಟು ಸ್ನೇಹಿತರು ಸೇರಿ ಸೃಷ್ಟಿಸಿದ ಹೊಚ್ಚಹೊಸ ತಳಿಯ ಮಾಹಿತಿ ತಂತ್ರಜ್ಞಾನದ ಕಂಪನಿಯೆಂಬ ಬೆರಗು. ನಮ್ಮ ದೇಶದಲ್ಲಿ, ಭೌತಿಕ ರೂಪವಿರದ ಯಾವುದೋ ಉತ್ಪನ್ನ/ಸೇವೆಯನ್ನು ತಯಾರಿಸಿ, ಅದನ್ನು ನಮಗಿಂತಲೂ ಮುಂದುವರಿದ ದೊಡ್ಡ ದೇಶಗಳಿಗೆ ಮಾರಿದ- ಅತ್ಯಲ್ಪ ಕಾಲದಲ್ಲೇ ಜಗವನ್ನು ಗೆದ್ದ ಮೆರುಗು. ಇಂಜಿನಿಯರ್​ಗಳ ಮಟ್ಟಿಗಾದರೋ, ಮೈಗೆ ಗ್ರೀಸ್ ಮೆತ್ತಿಸಿಕೊಳ್ಳಬೇಕಾಗಿದ್ದ ಶಾಪ್​ಫ್ಲೋರ್​ನಿಂದ, ಒಂದೇ ಜಿಗಿತಕ್ಕೆ ಕಂಪ್ಯೂಟರ್ ಒಂದರಿಂದಲೇ ಜಗದೊಡನೆ ಸಂವಹಿಸುವ ವರ್ಕ್​ಸ್ಟೇಷನ್​ವರೆಗೆ ಹಾರಿದ ಮಹದಾನಂದ! ಒಂದೆರಡು ದಶಕಗಳ ಕೆಳಗೆ, ಬೆಂಗಳೂರಿನ ವಿಮಾನ ನಿಲ್ದಾಣದ ‘ಇಂಟರ್​ನ್ಯಾಷನಲ್ ಡಿಪಾರ್ಚರ್ಸ್’ ಬಳಿ ಕಣ್ಣಲ್ಲಿ ನೀರು ತುಂಬಿಕೊಂಡ ಅಪ್ಪ-ಅಮ್ಮಂದಿರು, ಮಗನಿಗೋ ಮಗಳಿಗೋ ಹೆಮ್ಮೆಯಿಂದ ಟಾಟಾ ಮಾಡುತ್ತಿದ್ದಾರೆ ಎಂದರೆ, ನೋಡಿದವರು ಸಹಜವಾಗಿಯೇ ಮಾತನಾಡಿಕೊಳ್ಳುತ್ತಿದ್ದರು- ‘ಇನ್ಪೋಸಿಸ್​ನಲ್ಲಿ ಕೆಲಸ ಮಾಡ್ತಿರಬೇಕು!’.

ಕಳೆದೆರಡು ದಶಕಗಳಲ್ಲಿ, ಈ ಪ್ರಾಂತ್ಯದಲ್ಲಿ ಹುಟ್ಟಿಬೆಳೆದ ಎಲ್ಲರಿಗೂ ಇನ್ಪೋಸಿಸ್ ಜತೆಗೆ ಒಂದಿಲ್ಲೊಂದು ರೀತಿಯ ನಂಟು ಇದ್ದಿರಲೇಬೇಕು. ಇನ್ಪೋಸಿಸ್ ಎಂದೊಡನೆ ನನ್ನ ಮನಸ್ಸಿಗೆ ಥಟ್ಟನೆ ಬರುವುದು ಈ ಮೂರು ಘಟನೆಗಳು-

ಮೊದಲನೆಯ ಘಟನೆ: ಹದಿನೈದು ವರ್ಷದ ಕೆಳಗೆ ನಮ್ಮ ಎಂಬಿಎ ವಿದ್ಯಾಲಯದಲ್ಲಿ ಪ್ಲೇಸ್​ವೆುಂಟ್ ಸೀಸನ್ ನಡೆಯುತ್ತಿತ್ತು. ಅನೇಕ ದೊಡ್ಡ ಕಂಪನಿಗಳು ನಮ್ಮ ವಿದ್ಯಾಲಯಕ್ಕೆ ಭೇಟಿ ನೀಡಿ ‘ಭಾವಿ-ಉದ್ಯೋಗಿ’ಗಳನ್ನು ಆರಿಸಿಕೊಳ್ಳುತ್ತಿದ್ದವು. ಆಗ, ನನ್ನ ಸಹಪಾಠಿಯೊಬ್ಬ, ಅಂದಿನ ಕಾಲಕ್ಕೆ ಯಶಸ್ವಿ ಮಲ್ಟಿ ನ್ಯಾಷನಲ್ ಕಂಪನಿ (ಎಮ್ಮೆನ್ಸಿ) ಎನಿಸಿಕೊಂಡಿದ್ದ ಮೈಕೋ ಬಾಷ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಈ ವಿಷಯವನ್ನು ಮನೆಗೆ ಹೋಗಿ ಹೆಮ್ಮೆಯಿಂದ ಹೇಳಿಕೊಂಡ. ಆದರೆ, ಅವನ ಸಂತೋಷಕ್ಕೆ ನೀರೆರಚಿದವರು ಅಲ್ಪಸ್ವಲ್ಪ ಓದಿಕೊಂಡಿದ್ದ ಅವನ ಅಜ್ಜಿ! ಆಕೆ ಕೇಳಿದರಂತೆ, ‘ನೀನ್ಯಾಕೋ ಯಾವುದೋ ಲೋಕಲ್ ಕಂಪನಿಗೆ ಸೇರ್ತಾ ಇದೀಯಾ? ಇನ್ಪೋಸಿಸ್ ತರಹದ ದೊಡ್ಡ ಎಮ್ಮೆನ್ಸಿಗೆ ಸೇರ್ಕೋಬಾರ್ದಾ?’. ವೈದೃಶ್ಯವೆಂದರೆ, ದೊಡ್ಡ ಎಮ್ಮೆನ್ಸಿಯಾಗಿದ್ದ ಮೈಕೋ ಬಾಷ್ ‘ಲೋಕಲ್’ ಎನಿಸಿಕೊಂಡರೆ, ಆಗಿನ್ನೂ ಭಾರತದ ಹೊರಗೆ ಪದಾರ್ಪಣೆ ಮಾಡಲಾರಂಭಿಸಿದ್ದ ಇನ್ಪೋಸಿಸ್, ಸಹಪಾಠಿಯ ಅಜ್ಜಿಯಂಥವರ ಮನಸ್ಸಿನಲ್ಲಿ ಆಗಲೇ ದೊಡ್ಡ ಎಮ್ಮೆನ್ಸಿಯ ಸ್ಥಾನ ಗಿಟ್ಟಿಸಿಕೊಂಡುಬಿಟ್ಟಿತ್ತು!

ಎರಡನೆಯ ಘಟನೆ: 2005ರ ಜುಲೈ 18, ಸೋಮವಾರ. ದೆಹಲಿ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಜನಜಂಗುಳಿ. ‘ಸಂಜೆ 7-50ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಇಂಡಿಯನ್ ಏರ್​ಲೈನ್ಸ್ ವಿಮಾನ ಎರಡು ಗಂಟೆ ತಡವಾಗಿ ಹೊರಡಲಿದೆ’ ಎನ್ನುವ ಘೊಷಣೆ ಮೊಳಗಿತು. ಆ ವಿಮಾನಕ್ಕೆ ಕಾದು ಕುಳಿತಿದ್ದ ಎಲ್ಲರ ಮುಖದಲ್ಲಿದ್ದ ನಿರುತ್ಸಾಹ ಈಗ ನಿರಾಸೆಗೆ ತಿರುಗಿತು. ಪಕ್ಕದಲ್ಲಿದ್ದವರ ಮುಖ ನೋಡಲು ತಿರುಗಿದೆ. ಅರೆ! ಇನ್ಪೋಸಿಸ್​ನ ನಾರಾಯಣಮೂರ್ತಿ! ಯಾವುದೋ ಪುಸ್ತಕದೊಳಗೆ ಮುಖ ಹುದುಗಿಸಿ ಶಾಂತವಾಗಿ ಕುಳಿತಿದ್ದರು! ಇನ್ಪೋಸಿಸ್ ಸಂಸ್ಥಾಪಕ, ಭಾರತದ ಐಟಿ ದೊರೆ, ಇಲ್ಲಿ ವಿಮಾನ ನಿಲ್ದಾಣದ ಸಾಮಾನ್ಯ ವೇಟಿಂಗ್ ಲೌಂಜ್​ನಲ್ಲಿ, ನನ್ನ ಪಕ್ಕದಲ್ಲಿ ಯಾರೂ ಅಲ್ಲದವರಂತೆ ಗೋಡೆಗೊರಗಿ ಕುಳಿತಿದ್ದಾರೆ!

ಈ ಮುಂಚೆ ಯಾವುದೋ ಸಮಾರಂಭವೊಂದರಲ್ಲಿ ಅವರೊಡನೆ ಮಾತನಾಡಿದ್ದ ಪರಿಚಯ ಹೇಳಿಕೊಂಡು ಸ್ವಲ್ಪ ಹಿಂಜರಿಕೆಯಿಂದಲೇ ಅವರನ್ನು ಮಾತಿಗೆಳೆಯುವ ಪ್ರಯತ್ನಕ್ಕಿಳಿದೆ. ಮೊದಲು ಸೌಜನ್ಯಕ್ಕಾಗಿ ಕೇಳಿದಷ್ಟಕ್ಕೆ ಮಾತ್ರ ಉತ್ತರ ಕೊಡುವುದರಿಂದ ಪ್ರಾರಂಭವಾದ ನಮ್ಮ ಸಂಭಾಷಣೆ ನಿಧಾನವಾಗಿ ರಂಗೇರಿತು. ಕೆಲಸದ ಬಗ್ಗೆ, ದೆಹಲಿಗೆ ಬಂದ ನಿಮಿತ್ತದ ಬಗ್ಗೆ, ಹೀಗೆ ಔಪಚಾರಿಕ ಮಾತುಗಳು ಮುಗಿದ ಮೇಲೆ ಸಾಮಾನ್ಯವಾಗಿ ಮಾತು ಮುಂದುವರಿಸುವುದು ಕಷ್ಟ. ಅದರಲ್ಲೂ, ಎದುರಿಗಿರುವ ವ್ಯಕ್ತಿ ನಾರಾಯಣಮೂರ್ತಿಯಾದಾಗ ಹವಾಮಾನದ ಬಗ್ಗೆಯೋ ರಾಜಕೀಯದ ಬಗ್ಗೆಯೋ ಬಲವಂತವಾಗಿ ಸುಮ್ಮನೆ ಮಾತನಾಡುವುದು ಇನ್ನೂ ಕಷ್ಟ. ಆದರೆ, ನಾನು ಕನ್ನಡದವನೆಂದು ತಿಳಿದ ನಂತರ ನಮ್ಮ ಮಾತು ತಂತಾನೆ ಚುರುಕಾಯಿತು. ಸಂಗೀತ, ಸಾಹಿತ್ಯ, ನಾಟಕಗಳ ಬಗೆಗಿನ ಮೂರ್ತಿಯವರ ಅಭಿರುಚಿ ನನ್ನನ್ನು ನಿಜಕ್ಕೂ ಅಚ್ಚರಿಗೊಳಿಸಿತು. ನಾಟಕವೊಂದಕ್ಕೆ ಹೋದಾಗ ಅವರ ಪತ್ನಿ ಸುಧಾಮೂರ್ತಿಯವರನ್ನು ನೋಡಿದ್ದನ್ನು ನಾನು ಅವರಿಗೆ ತಿಳಿಸಿದಾಗ, ತಮಗೆ ಇತ್ತೀಚೆಗೆ ಕನ್ನಡ ನಾಟಕಗಳನ್ನು ನೋಡಲು ಸಮಯವಾಗದೆ ಇರುವುದರ ಬಗ್ಗೆ ಅವರು ವ್ಯಥೆಪಟ್ಟರು. ಅವರಿಗೆ ಕನ್ನಡದ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ ನಿಜಕ್ಕೂ ಆಸಕ್ತಿ ಇದ್ದಂತಿತ್ತು.

ಕೊನೆಗೂ, ನಮಗೆ ಬೋರ್ಡಿಂಗ್ ಕಾಲ್ ಬಂದು ವಿಮಾನ ಏರಿದಾಗ ಮತ್ತೊಂದು ಅಚ್ಚರಿ ಕಾದಿತ್ತು! ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ನನ್ನ ಪಕ್ಕದಲ್ಲಿ ಮತ್ತದೇ ನಾರಾಯಣಮೂರ್ತಿ! ಅವರು ಬಿಜಿನೆಸ್ ಕ್ಲಾಸ್​ನಲ್ಲಿ ಪ್ರಯಾಣ ಮಾಡುವುದಿಲ್ಲ ಎನ್ನುವುದನ್ನು ಪತ್ರಿಕೆಗಳಲ್ಲಿ ಓದಿದ್ದ ನನಗೆ ಅದು ಬರೀ ಬೂಟಾಟಿಕೆ ಅಲ್ಲ ಎನ್ನುವುದು ಪ್ರಮಾಣವಾಯಿತು. ಮುಂದಿನ ಮೂರು ಗಂಟೆಗಳ ಕಾಲ ಅವರು ನಡೆದುಕೊಂಡ ರೀತಿ ನಿಜಕ್ಕೂ ಸ್ಮರಣಾರ್ಹವಾಗಿತ್ತು. ನಾನು, ನನ್ನ ವೃತ್ತಿಯ ಕಾರಣದಿಂದಾಗಿ, ಅನೇಕ ‘ಗಣ್ಯ ವ್ಯಕ್ತಿ’ಗಳ ಜತೆ ಒಡನಾಡಿದ್ದೇನೆ ಮತ್ತು ಅವರು ತಮಗಿಂತ ಕೆಳಗಿನ ಸ್ತರದ ವ್ಯಕ್ತಿಗಳ ಜತೆ ವ್ಯವಹರಿಸುವುದನ್ನು ನೋಡಿದ್ದೇನೆ. ಮೂರ್ತಿ, ಇಂಥ ಅನೇಕರಿಗೆ ಅಪವಾದವೆಂಬಂತಿದ್ದರು. ಅಪರಿಚಿತರು ಗುರುತು ಹಿಡಿದು ಮಾತನಾಡಿಸಿದಾಗ ಅವರು ನಡೆದುಕೊಳ್ಳುತ್ತಿದ್ದ ರೀತಿ, ಪರಿಚಾರಕರೊಡನೆ ಅವರು ತೋರುತ್ತಿದ್ದ ಸೌಜನ್ಯ, ಸಹಪ್ರಯಾಣಿಕರೊಡನೆ ಅವರು ತೋರುತ್ತಿದ್ದ ನಯ-ವಿನಯ, ಇವೆಲ್ಲವೂ ಅವರೊಬ್ಬ ಶ್ರೇಷ್ಠ ಉದ್ಯಮಿ ಮಾತ್ರವಲ್ಲ, ಬದಲಾಗಿ ಇತರ ವ್ಯಕ್ತಿ/ವಿಷಯಗಳ ಬಗ್ಗೆ ಸಹಜ ಗೌರವ ಹಾಗೂ ಅನುಭೂತಿ ಉಳ್ಳ ಮನುಷ್ಯ ಎನ್ನುವುದಕ್ಕೆ ನಿದರ್ಶನವಾಗಿದ್ದವು.

ಮೂರನೆಯ ಘಟನೆ: ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರತಿವಾರವೂ ಪ್ರಯಾಣಿಸುತ್ತಿದ್ದ ದಿನಗಳವು. ‘ನಿಮ್ಮ ಬಳಿ ಇನ್ಪೋಸಿಸ್ ಇದೆಯಾ?’- ಈ ಪ್ರಶ್ನೆಯನ್ನು ಯಾರು ಯಾರನ್ನಾದರೂ ಯಾವಾಗ ಬೇಕಾದರೂ ಕೇಳಬಹುದಿತ್ತು! ಈ ಪ್ರಶ್ನೆಯನ್ನು ನಾನು ಮೊದಲ ಸಲ ಕೇಳಿಸಿಕೊಂಡಾಗ, ನಿಜಕ್ಕೂ ಕಸಿವಿಸಿಯಾಗಿತ್ತು. ಇನ್ಪೋಸಿಸ್ ಜತೆ ಯಾವ ಸಂಬಂಧವೂ ಇದ್ದಂತೆ ಕಾಣದ ಇಬ್ಬರು- ಪ್ರಾಯಶಃ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿ ಮಾಡುವ ರೈಲಿನ ನಿತ್ಯ ಪಯಣಿಗರು- ‘ನಿಮ್ಮ ಬಳಿ ಇನ್ಪೋಸಿಸ್ ಇದೆಯಾ?’ ಎನ್ನುವುದರಿಂದ ಆರಂಭಗೊಂಡ ಸಂಭಾಷಣೆಯಲ್ಲಿ ಭಾಗವಹಿಸಿದ್ದರು.

ಇದು, ಇನ್ಪೋಸಿಸ್ ಷೇರಿನ ಬಗೆಗಿನ ಚರ್ಚಾಕೂಟ ಎನ್ನುವುದು ಅರ್ಥವಾಗುವ ವೇಳೆಗೆ, ‘ಇ-ಸಾಪ್’ಗಳಿಂದಾಗಿ ಹೇಗೆ ಇನ್ಪೋಸಿಸ್​ನ ಡ್ರೈವರ್​ಗಳು ಕೂಡ ಕೋಟ್ಯಧಿಪತಿಗಳಾಗಿದ್ದಾರೆ ಎನ್ನುವ ಬಗ್ಗೆ ಉಪಕತೆಗಳು ಹರಡಲಾರಂಭಗೊಂಡಿತ್ತು. ‘ಇ-ಸಾಪ್’ ಅಥವಾ ತನ್ನ ಉದ್ಯೋಗಿಗಳಿಗೆ ಕೃತಜ್ಞತಾಪೂರ್ವಕವಾಗಿ ರಿಯಾಯಿತಿ ದರದಲ್ಲಿ ಷೇರುಗಳನ್ನು ಕೊಡುವ ಪರಿಪಾಠವನ್ನು ದೊಡ್ಡ ಪ್ರಮಾಣದಲ್ಲಿ ಮೊದಲು ಮಾಡಿದ್ದು ಇದೇ ಇನ್ಪೋಸಿಸ್. ಸ್ವಲ್ಪವೇ ದಿನಗಳಲ್ಲಿ, ಮಾತು ಬದಲಾಗಿತ್ತು- ‘ನಮ್ಮೂರ್ನೋನೆ ಮಾರಾಯ. ಲಾಟರಿ ಹೊಡದಂಗೆ ಇನ್ಪೋಸಿಸ್​ನಲ್ಲಿ ಕೆಲಸ ಸಿಕ್ತು. ಈಗ, ಬಿಟ್ಟಿ ಷೇರು ಬೇರೆ ಕೊಟ್ಟಿದಾರಂತೆ! ಮಾಡೋದ್ ಡ್ರೈವರ್ ಕೆಲಸ ಆದ್ರೂ, ಸಾಫ್ಟ್​ವೇರ್ ಇಂಜಿನಿಯರ್​ಗಿಂತ ಜೋರಾಗಿದಾನೆ!’.

ಅಂತೂ, ಇನ್ಪೋಸಿಸ್, ಮೊದಲಿನಿಂದಲೂ ಸಾಮಾನ್ಯ ಜನರ ಅಸಾಮಾನ್ಯ ಶಕ್ತಿಯ ಪ್ರತಿನಿಧಿಯಾಗಿಯೇ ಬೆಳೆಯಿತು. ಕಷ್ಟಪಟ್ಟು ಓದಿದ ಮಧ್ಯಮವರ್ಗದ ಹುಡುಗ ಸಾಫ್ಟ್​ವೇರ್ ಇಂಜಿನಿಯರ್ ಆಗಿ ದೇಶವಿದೇಶಗಳನ್ನು ಸುತ್ತಿ ಕೈತುಂಬ ಹಣ ಸಂಪಾದಿಸಿದರೆ, ಮತ್ತೊಂದು ರೀತಿಯಲ್ಲಿ, ಅಷ್ಟೇನೂ ಕಲಿಯದ ಡ್ರೈವರ್/ಆಫೀಸ್-ಬಾಯ್ಗಳ ಬಾಳೂ ಬೆಳಗಿತ್ತು. ‘ಸ್ಟಾಕ್​ವಾರ್ಕೆಟ್​ಗೆ ದಿಕ್ಕು ಕೊಡಲು ರಿಲಯನ್ಸ್ ಬೇಕಾಗಿಲ್ಲ; ನಾರಾಯಣಮೂರ್ತಿ ಮತ್ತು ಅವರ ಸಹಚರ ಮಧ್ಯಮವರ್ಗದ ಬುದ್ಧಿವಂತ ಹುಡುಗರು ಸ್ಥಾಪಿಸಿದ ಇನ್ಪೋಸಿಸ್ ಸಾಕು’ ಎನ್ನುವ ಪರಿಸ್ಥಿತಿ ಏರ್ಪಟ್ಟಿತು. ವಿಶ್ವದ ಮೂಲೆಮೂಲೆಗಳಲ್ಲಿ ಇನ್ಪೋಸಿಸ್​ನ ಖ್ಯಾತಿ ಹರಡುವ ವೇಳೆಗಾಗಲೇ, ಮೊದಲ ಘಟನೆಯಲ್ಲಿ ವಿವರಿಸಿದಂತೆ ನನ್ನ ಸಹಪಾಠಿಯ ಅಜ್ಜಿಯನ್ನೂ, ಮೂರನೆಯದರಲ್ಲಿ ವಿವರಿಸಿದಂತೆ ಇನ್ಪೋಸಿಸ್​ನ ಷೇರುಗಳನ್ನು ಕೊಂಡು ದುಡ್ಡು ಮಾಡಿದ ಸರ್ಕಾರಿ ನೌಕರರನ್ನೂ ಅದು ಮುಟ್ಟಿತ್ತು.

ಮಧ್ಯಮವರ್ಗದ ಯುವಕರು ಹತ್ತು ದೇಶ ಸುತ್ತಿ ಜಯಿಸಲು ದೊಡ್ಡ ವಿದೇಶಿ ಎಮ್ಮೆನ್ಸಿಗಳಿಗೆ ಸೇರಬೇಕಾಗಿಲ್ಲ ಎಂಬ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ ಇದೇ ಇನ್ಪೋಸಿಸ್​ಗೆ, ಮೂರು ವರ್ಷದ ಕೆಳಗೆ, ಕಷ್ಟಪಟ್ಟು ಜಾಣರಾದ ನಮ್ಮ ದೇಶದ ಯುವಕರಲ್ಲಿ ಹೊಸ ಹುಮ್ಮಸ್ಸನ್ನೂ, ಉಮೇದನ್ನೂ ಸೃಷ್ಟಿಸುವ ಅವಕಾಶ ದೊರೆಯಿತು. ಆಗ, ಇನ್ಪೋಸಿಸ್​ನ ಸಿಇಒ ಆಗಿ ಪದಗ್ರಹಣ ಮಾಡಿದ ಮೊದಲ ‘ಹೊರಗಿನವರಾದ‘ ವಿಶಾಲ್ ಸಿಕ್ಕಾ ದೆಸೆಯಿಂದ, ಅತ್ಯಂತ ಉನ್ನತ ಹುದ್ದೆ ಪಡೆಯಲು ಆ ಕಂಪನಿಯನ್ನು ಸೃಷ್ಟಿಸಿದವರಲ್ಲಿ ಒಬ್ಬರಾಗಿರಬೇಕಾಗಿಲ್ಲ ಎನ್ನುವ ನವೋತ್ಸಾಹ ಮೂಡಿತು. ವಿಶಾಲ್ ಸಿಕ್ಕಾ ಆಗಬಹುದಾದರೆ, ನಾವೇಕೆ ಆಗಬಾರದು? ಅತ್ಯುನ್ನತ ಸ್ಥಾನಕ್ಕೆ ಏರಲು ಅರ್ಹತೆಯೊಂದೇ ಮಾನದಂಡ- ಆ ಕಂಪನಿಯ ಸಂಸ್ಥಾಪಕರಾಗಲೀ, ಅವರ ಮಕ್ಕಳಾಗಲೀ ಆಗಿರಬೇಕಾಗಿಲ್ಲ ಎನ್ನುವುದು ಅಂದು ದಿಟವಾಯಿತು. ಸಿಇಒ ಎಂದು ಕರೆಸಿಕೊಳ್ಳಬೇಕಾದರೆ, ತಮ್ಮದೇ ಕಂಪನಿ ಸ್ಥಾಪಿಸಬೇಕಾಗಿಲ್ಲ. ಮತ್ತೊಬ್ಬರಿಗಾಗಿ ದುಡಿಯುವಾಗ, ಶ್ರಮಪಟ್ಟು ಸಾಧನೆ ತೋರಿದರೆ ಸಾಕು- ಆ ಕಂಪನಿಯ ಸಿಂಹಾಸನವನ್ನೇರಬಹುದು ಎನ್ನುವುದು ಅಂದಿನ ಇನ್ಪೋಸಿಸ್ ನಡೆಯಿಂದಾಗಿ ನಿಸ್ಸಂಶಯವಾಗಿ ದೃಢಪಟ್ಟಿತು. ಕೆಲಸಗಾರ ನಿಜವಾದ ಅರ್ಥದಲ್ಲಿ ಮಾಲೀಕನಾಗುವ ‘ಇ-ಸಾಪ್’ ಪರಿಕಲ್ಪನೆಯನ್ನು ಜನರಿಗೆ ಅರ್ಥ ಮಾಡಿಸಿದ್ದ ಇನ್ಪೋಸಿಸ್, ಈಗ ಕಂಪನಿ ತನ್ನ ಸಂಸ್ಥಾಪಕರನ್ನು ಹಿಂದೆ ಬಿಟ್ಟು ಮುಂದೆ ಹೋಗುವಾಗ ‘ಮೆರಿಟ್’ ಅಥವಾ ಶ್ರೇಷ್ಠತೆಯೊಂದೇ ಮಾನದಂಡ ಎನ್ನುವುದನ್ನೂ ಮೂರು ವರ್ಷದ ಕೆಳಗೆ ಮನದಟ್ಟಾಗಿಸಿತು.

ವಿಶಾಲ್ ಸಿಕ್ಕಾ ಯಾರು, ಏನು, ಅವರ ಸಾಧನೆ ಎಂಥದ್ದು, ಅವರಿಗೆ ಅನ್ಯಾಯವಾಯಿತಾ ಅಥವಾ ಅವರು ಅನ್ಯಾಯ ಮಾಡಿದರಾ, ಈಗ ಅವರ ರಾಜೀನಾಮೆ/ಪದಚ್ಯುತಿಯಿಂದ ಬಂದೊದಗಿರುವ ಸಂಕಷ್ಟಗಳೇನು ಎನ್ನುವುದನ್ನು ಸವಿಸ್ತಾರವಾಗಿ ವಿವರಿಸುವ ಸಾಕಷ್ಟು ವರದಿಗಳು ಮತ್ತು ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಬಂದಿದೆ. ಆದರೆ, ಅವರು ಹೊರನಡೆಯುತ್ತಿರುವ ಸಂದರ್ಭದಲ್ಲಿ, ಒಂದು ಕಾಲಕ್ಕೆ ಇನ್ಪೋಸಿಸ್ ಅನ್ನು ಆರಾಧಿಸಿದ ಸಾಮಾನ್ಯ ಜನರ ಮೇಲೆ ಆಗುವ ದೂರಗಾಮಿ ಪರಿಣಾಮಗಳ ವಿಷಯವಾಗಿ ಮಂಥನ ನಡೆಸಬೇಕಾದ್ದು ಅಗತ್ಯ.

ಇನ್ಪೋಸಿಸ್, ಟಾಟಾಗಳಂತಹ ದೊಡ್ಡಮನೆಗಳಲ್ಲಿ ಪುಟ್ಟ ಗಲಾಟೆಗಳಾದರೂ ಅದು ಸುದ್ದಿಯಾಗುವುದು ಸಹಜವೇ! ಆದರೆ, ಸಾಮಾನ್ಯರಾದ ನಾವು ಗಮನಿಸಬೇಕಾದ್ದಿಷ್ಟು. ಇನ್ಪೋಸಿಸ್​ನ ಈ ಹೊತ್ತಿನ ಸುದ್ದಿಗಳನ್ನು ವರದಿ ಮಾಡುತ್ತಿರುವ ಮಾಧ್ಯಮಗಳಾಗಲೀ, ಅದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಎಗ್ಗಿಲ್ಲದೆ ಟಿಪ್ಪಣಿ ಗೀಚುತ್ತಿರುವ ಜನರಾಗಲೀ, ಆ ಕಂಪನಿಯ ಸಾಮರ್ಥ್ಯ ಹಾಗೂ ಸಾಧ್ಯತೆಗಳ ಬಗ್ಗೆ ಆಳಕ್ಕಿಳಿಯದೆ, ದಡದಲ್ಲಿಯೇ ನಿಂತು ಕಲ್ಲೆಸೆಯುತ್ತಿದ್ದಾರೆ. ನಾರಾಯಣಮೂರ್ತಿಯವರು ಸೃಷ್ಟಿಸಿದ ಬೌದ್ಧಿಕ ಸ್ವತ್ತನ್ನೂ, ಔದ್ಯಮಿಕ ವಲಯದಲ್ಲಿ ಇನ್ಪೋಸಿಸ್ ತನ್ನ ವರ್ಚಸ್ಸನ್ನು ಮರುಸೃಷ್ಟಿಸಿಕೊಳ್ಳುವಲ್ಲಿ ವಿಶಾಲ್ ಸಿಕ್ಕಾ ತೋರಿದ ಸಾಮರ್ಥ್ಯವನ್ನೂ ನಗಣ್ಯವಾಗಿಸಿ- ಈ ಇನ್ಪೋಸಿಸ್ ಎಂಬ ಅತ್ಯದ್ಭುತ ಮೆಗಾಧಾರಾವಾಹಿಯ ಒಂದು ಕಳಪೆ ಎಪಿಸೋಡ್ ಅನ್ನು ಮಾತ್ರ ಖಂಡಿಸುತ್ತಿದ್ದಾರೆ. ಇಂದು ಆಡಿದ್ದನ್ನು ನಾಳೆ ಮರೆಯುವ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮಂದಿಯ ಎಲುಬಿಲ್ಲದ ನಾಲಿಗೆಗೆ ಸಿಕ್ಕ ಇನ್ಪೋಸಿಸ್​ಗೆ ಇಂದು ಔದ್ಯಮಿಕ-ನಷ್ಟಕ್ಕೂ ಮೀರಿ ವರ್ಚಸ್ಸಿನ-ನಷ್ಟ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಭಾರತದಲ್ಲಿ ಕಾರ್ಪೇರೇಟ್​ಗಳ ಪರ, ಅದರಲ್ಲೂ ಒಳ್ಳೆಯ ಕಾರ್ಪೇರೇಟ್​ಗಳ ಪರ ನಿಲ್ಲುವ ಮಾಧ್ಯಮಗಳಾಗಲೀ ಜನರಾಗಲೀ ಹೆಚ್ಚಿಲ್ಲ. ಏಕೆಂದರೆ, ದುಡ್ಡು ಮಾಡುವ ಸಂಸ್ಥೆಯೆಂದರೆ ಒಳಗೇನೋ ಕೆಟ್ಟದ್ದಿರಬೇಕೆಂಬ ಅತಿಸರಳೀಕರಣ. ಹಾಗಾಗಿಯೇ ಹಳ್ಳಕ್ಕೆ ಬಿದ್ದವನಿಗೆ ನಮ್ಮದೂ ಒಂದು ಕಲ್ಲು!

ಐಟಿ ಕ್ರಾಂತಿಯಿಂದ ನಮ್ಮ ದೇಶದ ಪತಾಕೆಯನ್ನು ಎಲ್ಲೆಡೆ ಹಾರಿಸಿದ ಇನ್ಪೋಸಿಸ್ ಕೆಟ್ಟ ಕಂಪನಿಯಲ್ಲ! ಇದನ್ನು ಅದರ ವಿರೋಧಿಗಳೂ ಕಟಕಿಗಳೂ ಒಪ್ಪುತ್ತಾರೆ. ಹಾಗಾದರೆ, ನಮ್ಮ-ನಿಮ್ಮಂಥವರೇಕೆ ದಡದಲ್ಲಿ ನಿಂತು ಕಲ್ಲೊಗೆಯಬೇಕು? ಸುದ್ದಿಸೃಷ್ಟಿಗಾಗಿ ಮಾಧ್ಯಮಗಳು ಕೊಡುವ ಕೆಟ್ಟ ಆಂಗಲ್​ಗಳು ನಮಗೆ ಬೇಡ. ಬೇಕಿರುವುದು, ಮೂರು ದಶಕಗಳಿಂದ ಮಧ್ಯಮ ವರ್ಗದ ಬುದ್ಧಿವಂತ ಜನರ ಸಾಧನೆಯ ಪ್ರತಿನಿಧಿಯಾಗಿರುವ ಇನ್ಪೋಸಿಸ್ ಈ ಬಿಕ್ಕಟ್ಟಿನಿಂದ ಶೀಘ್ರದಲ್ಲೇ ಹೊರಬಂದು ಮುಂದಿನ ಪೀಳಿಗೆಗಳಿಗೂ ಸ್ಪೂರ್ತಿದಾಯಕವಾಗಲಿ ಎನ್ನುವ ಆಶಾವಾದ.

 

Leave a Reply

Your email address will not be published. Required fields are marked *

Back To Top