Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಇನ್ನಷ್ಟು ಬಲಗೊಂಡ ಭಾರತ-ರಷ್ಯಾ ಸಂಬಂಧ

Monday, 26.06.2017, 3:00 AM       No Comments

ಮಾಸದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ನಿವಾರಿಸಿ, ಬಾಂಧವ್ಯದ ಹಾದಿ ಪ್ರಶಸ್ತಗೊಳಿಸಿದೆ. ಏಷ್ಯಾದಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದ್ದು, ಮೈತ್ರಿಯನ್ನು ಗಟ್ಟಿಗೊಳಿಸಿದೆ.

 

ಜೂನ್ 2ರಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸಕ್ಕೆ ತೆರಳುವುದಕ್ಕೆ ಕೆಲದಿನಗಳ ಮುನ್ನವಷ್ಟೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ರಷ್ಯಾ ಮತ್ತು ಭಾರತದ ನಡುವಿನ ದಶಕಗಳ ಸಂಬಂಧ ಹದಗೆಟ್ಟಿದೆಯೇ? ರಷ್ಯಾ ಪಾಕಿಸ್ತಾನ ಮತ್ತು ಚೀನಾಗೆ ಹತ್ತಿರವಾಗುತ್ತಿದೆಯೇ ಎಂಬ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಇಂತಹ ಚರ್ಚೆ ಹುಟ್ಟಿಕೊಳ್ಳಲು ಕಾರಣವಾಗಿದ್ದು, ರಷ್ಯಾ ಪಾಕಿಸ್ತಾನಕ್ಕೆ ನಾಲ್ಕು ಹೆಲಿಕಾಪ್ಟರ್​ಗಳನ್ನು ಮಾರಾಟ ಮಾಡಿದ್ದು. ರಾಜಕೀಯ ಪಂಡಿತರು ಇದೊಂದೇ ಕಾರಣವನ್ನು ಮುಂದಿಟ್ಟುಕೊಂಡು ರಷ್ಯಾ ಮತ್ತು ಭಾರತದ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ಅಭಿಪ್ರಾಯಕ್ಕೆ ಬಂದರು.

ಈ ನಡುವೆ ಚೀನಾ ಹಾಗೂ ರಷ್ಯಾ ನಡುವೆ ಮಿತ್ರತ್ವ ಇರುವ ಹಿನ್ನೆಲೆಯಲ್ಲಿ, ಭಾರತವನ್ನು ಪರಮಾಣು ಪೂರೈಕೆದಾರರ ಸಮೂಹ (ಎನ್​ಎಸ್​ಜಿ) ಸೇರಿಸಲು ರಷ್ಯಾ ಚೀನಾದ ಮನವೊಲಿಸಬೇಕು ಎಂದು ಭಾರತ ಆಗ್ರಹಿಸಿತ್ತು. ಅದಿಲ್ಲವಾದಲ್ಲಿ, ಕೂಡಂಕೂಳಂ ಒಪ್ಪಂದದ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯ ಎದುರಾಗಲಿದೆ ಎಂದೂ ಎಚ್ಚರಿಸಿತ್ತು. ಹೀಗಾಗಿ ಉಭಯ ರಾಷ್ಟ್ರಗಳ ಸಂಬಂಧ ಹಳಸಿದೆಯೇ ಎಂಬ ಅನುಮಾನಕ್ಕೆ ಮತ್ತಷ್ಟು ಬಲಬಂದಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿ ಈ ಎಲ್ಲ ಅನುಮಾನಗಳಿಗೆ ಉತ್ತರ ನೀಡಿತು. ‘ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದೆ’ ಎಂದು ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿದರಲ್ಲದೆ ಕೂಡಂಕುಳಂ ಅಣುಸ್ಥಾವರದ ಐದು ಮತ್ತು ಆರನೇ ಘಟಕ ಸ್ಥಾಪನೆಗೆ ಸಂಬಂಧಿಸಿದ ಒಪ್ಪಂದಕ್ಕೂ ಸಹಿ ಹಾಕಿದರು. ಇದರೊಂದಿಗೆ ವಿಜ್ಞಾನ-ತಂತ್ರಜ್ಞಾನ, ರೈಲ್ವೆ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಂಬಂಧಿಸಿದಂತೆ ಒಟ್ಟು 12 ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳ ನಾಯಕರು ಸಹಿ ಹಾಕುವ ಮೂಲಕ ರಷ್ಯಾ ಮತ್ತು ಭಾರತದ ನಡುವಿನ ದಶಕಗಳ ಮಿತ್ರತ್ವಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಸಾರಿ ಹೇಳಿದ್ದಾರೆ.

ಅಷ್ಟಕ್ಕೂ, ರಷ್ಯಾದೊಂದಿಗಿನ ಭಾರತದ ನಂಟು ಇಂದು ನಿನ್ನೆಯದೇನಲ್ಲ. ಸ್ವಾತಂತ್ರ್ಯೂರ್ವದಲ್ಲಿ ಅಂದರೆ 1905ರಲ್ಲಿ ರಷ್ಯಾದಲ್ಲಿ ನಡೆದ ಕ್ರಾಂತಿ ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿತ್ತು. ನಂತರದಲ್ಲಿ 1917ರಲ್ಲಿ ನಡೆದ ಬೊಲ್ಶೆವಿಕ್ ಕ್ರಾಂತಿ ಭಾರತ ಮತ್ತು ರಷ್ಯಾ ಸಂಬಂಧಕ್ಕೆ ಹೊಸ ಆಯಾಮವೊಂದನ್ನು ನೀಡಿತು. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖಪಾತ್ರ ವಹಿಸಿದ್ದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಸೋವಿಯತ್ ನಾಯಕರ ಪ್ರಭಾವಕ್ಕೊಳಗಾಗಿದ್ದರು. ಗಾಂಧಿ ರಷ್ಯಾದ ಲಿಯೋ ಟಾಲ್ಸ್​ಟಾಯ್ ಮತ್ತು ಲೆನಿನ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗೆ ಹಲವು ಹಂತಗಳಲ್ಲಿ ರಷ್ಯಾ ಮತ್ತು ಭಾರತದ ಸಂಬಂಧ ಬಲಿಷ್ಠವಾಗುತ್ತ ಸಾಗಿತ್ತು. ಹೀಗಾಗಿಯೆ ಭಾರತಕ್ಕೆ ಸ್ವಾತಂತ್ರ್ಯ ಘೊಷಣೆಗೂ ಮೊದಲು ಅಂದರೆ 1947 ಏಪ್ರಿಲ್ 13ರಂದೇ ಭಾರತ ಮತ್ತು ಸೋವಿಯತ್ ಒಕ್ಕೂಟದ ನಡುವೆ ರಾಜತಾಂತ್ರಿಕ ಸಂಬಂಧವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು.

ಹೀಗೆ ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಬೆಸೆದುಕೊಂಡ ಸಂಬಂಧ ಬಲಿಷ್ಠವಾಗುತ್ತ ಸಾಗಿತು. ಸ್ವಾತಂತ್ರ್ಯ ನಂತರದಲ್ಲಿ ಭಾರತದ ಸರ್ವತೋಮುಖ ಬೆಳವಣಿಗೆಗೆ ರಷ್ಯಾ ನೆರವಾಗಿ ನಿಂತಿತು. 1950ರ ದಶಕದಿಂದಲೇ ಸೋವಿಯತ್ ಒಕ್ಕೂಟ ಭಾರತದಲ್ಲಿ ಕೈಗಾರೀಕರಣ, ರಕ್ಷಣಾ, ಬಾಹ್ಯಾಕಾಶ ಮತ್ತು ಅಣುಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದೆ. ಇದರ ಜತೆಗೆ ತೈಲ, ತೈಲೋತ್ಪನ್ನಗಳು, ರಸಗೊಬ್ಬರ ಮತ್ತು ಲೋಹಗಳ ಪೂರೈಕೆ ಮಾಡಿತು. ಅಲ್ಲದೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಚ್​ಇಎಲ್, ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ(ಒಎನ್​ಜಿಸಿ), ಹಿಂದೂಸ್ಥಾನ್ ಏರೊನಾಟಿಕಲ್ ಲಿಮಿಟೆಡ್(ಎಚ್​ಎಎಲ್) ಮತ್ತು ಉಕ್ಕು ಉದ್ಯಮ ಸ್ಥಾಪನೆಗೂ ಸೋವಿಯತ್ ಒಕ್ಕೂಟ ನೆರವು ನೀಡಿತು. ವಿದೇಶಿ ನೆರವಿನೊಂದಿಗೆ ಮುಂಬೈನಲ್ಲಿ ಆರಂಭವಾದ ಭಾರತದ ಪ್ರಥಮ ಐಐಟಿಗೂ ಸೋವಿಯತ್ ಒಕ್ಕೂಟದ ನೆರವೇ ಕಾರಣವಾಯಿತು. 1971ರಲ್ಲಿ ಇಂಡೋ-ಸೋವಿಯತ್ ಸ್ನೇಹ, ಶಾಂತಿ ಮತ್ತು ಸಹಕಾರ ಒಪ್ಪಂದಕ್ಕೆ ಸಹಿಹಾಕಿದವು. ಇದು ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ 1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಜಯಗಳಿಸಲು ಸಹಕಾರಿಯಾಯಿತು.

ರಕ್ಷಣಾ ನೆರವು: ಭಾರತವು ಅಮೆರಿಕ, ಫ್ರಾನ್ಸ್, ಇಸ್ರೇಲ್​ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಯುದ್ಧ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆಯಾದರೂ ಭಾರತದ ರಕ್ಷಣಾ ಕ್ಷೇತ್ರ ಬಲಪಡಿಸುವಲ್ಲಿ ರಷ್ಯಾದ ಪಾಲು ದೊಡ್ಡದು. ಭಾರತದ ಸೇನೆಯಲ್ಲಿ ಬಳಕೆಯಾಗುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಶೇ.50ರಷ್ಟು ರಷ್ಯಾದಲ್ಲಿಯೇ ತಯಾರಾಗಿರುವಂತವು. ಪರಮಾಣು ಜಲಾಂತರ್ಗಾಮಿ ಅರಿಹಂತ್ ನಿರ್ವಣಕ್ಕೆ ರಷ್ಯಾದ ಬೆಂಬಲವಿದೆ. ಫಿಫ್ತ್ ಜನರೇಷನ್ ಫೈಟರ್ ಏರ್​ಕ್ರಾಫ್ಟ್(ಎಫ್​ಜಿಎಫ್​ಎ) ನಿರ್ವಣಕ್ಕೂ ರಷ್ಯಾ ನೆರವಾಗಿದೆ. ನರೇಂದ್ರ ಮೋದಿ ಸರ್ಕಾರ ರಷ್ಯಾದೊಂದಿಗಿನ ಬೆಸುಗೆಯನ್ನು ಕೃಷಿ, ವಿದ್ಯುತ್, ವಿಜ್ಞಾನ ಮುಂತಾದ ಕ್ಷೇತ್ರಗಳಿಗೂ ವಿಸ್ತರಿಸಿದೆ.

ಈ ನಡುವೆ ರಷ್ಯಾ ಮತ್ತು ಚೀನಾ ನಡುವೆ ವಾರ್ಷಿಕ 4.51 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟುಗಳು ನಡೆದರೆ, ಭಾರತ- ಚೀನಾ ನಡುವೆ 3.86 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರವಿದೆ. ಆದರೆ ಭಾರತ ಮತ್ತು ರಷ್ಯಾದ ಸಂಬಂಧ 7 ದಶಕಗಳಷ್ಟು ಹಿಂದಿನದಾಗಿದ್ದರೂ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧ ಕೇವಲ 45,148 ಕೋಟಿ ರೂಪಾಯಿ ಮೌಲ್ಯದ್ದು. ಇದನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎರಡು ಪಟ್ಟುಗಳಷ್ಟು ವಿಸ್ತರಿಸಬೇಕೆಂಬ ಉದ್ದೇಶವಿದೆ. ಅಣು ವಿದ್ಯುತ್ ಉತ್ಪಾದನೆಯಲ್ಲಿ ರಷ್ಯಾ ವಿಶ್ವಸನೀಯ ರಾಷ್ಟವಾಗಿದೆ. ಈಗಾಗಲೇ ತಮಿಳುನಾಡಿನ ಕೂಡಂಕುಳಂನಲ್ಲಿ ಪ್ರಥಮ ಮತ್ತು ದ್ವಿತೀಯ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ತೃತೀಯ ಮತ್ತು ಚತುರ್ಥ ಘಟಕಗಳು 2024ರ ವೇಳೆಗೆ ಕಾರ್ಯಾಚರಣೆ ಆರಂಭಿಸಲಿವೆ. ಇದೀಗ ಐದು ಮತ್ತು ಆರನೇ ಘಟಕ ನಿರ್ವಣಕ್ಕೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಕೆಎಂವಿ ಕೆಎ 226 ಹೆಲಿಕಾಪ್ಟರ್​ಗಳನ್ನು ಹಿಂದೂಸ್ಥಾನ ಏರೋನಾಟಿಕಲ್ ಜತೆ ಸೇರಿ ನಿರ್ಮಾಣ ಮಾಡಲೂ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬಲಾಢ್ಯ ರಾಷ್ಟ್ರ: ಪಾಶ್ಚಾತ್ಯ ರಾಷ್ಟ್ರಗಳ ಎದುರಲ್ಲಿ ರಷ್ಯಾ ಬಲಾಡ್ಯ ದೇಶವಾಗಿ ಬೆಳೆದು ನಿಂತಿದೆ. 2000ನೇ ಇಸವಿಯಿಂದ ರಷ್ಯಾದ ಅಧ್ಯಕ್ಷರಾಗಿರುವ ಪುತಿನ್ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಅಲ್ಲಿ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದರಲ್ಲೂ ಪುತಿನ್ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸಶಕ್ತ ಮತ್ತು ತೀವ್ರಗತಿಯಲ್ಲಿ ಆರ್ಥಿಕವಾಗಿ ಬಲಗೊಳ್ಳುತ್ತಿರುವ ರಾಷ್ಟ್ರದ ನಾಯಕರಾಗಿ ಹೊರಹೊಮ್ಮಿದ್ದಾರೆ. ಮೋದಿ 2019ರ ಚುನಾವಣೆಯಲ್ಲೂ ಜಯಗಳಿಸಿದರೆ ಮೋದಿ ಮತ್ತು ಪುತಿನ್ 2024ರವರೆಗೂ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳನ್ನು ಮುನ್ನಡೆಸುವ ನಾಯಕರಾಗಿ ಗುರುತಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ದಕ್ಷಿಣ ಏಷ್ಯಾ, ದಕ್ಷಿಣ ಪೂರ್ವ ಏಷ್ಯಾ ಮಾತ್ರವಲ್ಲ ವಿಶ್ವದಲ್ಲೇ ಭಾರಿ ಪ್ರಮಾಣದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣವಾಗಿ ಗುರುತಿಸಿಕೊಳ್ಳಲಿದೆ.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

 

Leave a Reply

Your email address will not be published. Required fields are marked *

Back To Top