Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಇದೊಂದು ಕತೆ ಅಂತ ಹೇಳಿದ್ದೇನೆ ಆದರೆ ಕತೆಯಲ್ಲ…

Sunday, 13.08.2017, 3:00 AM       No Comments

ಈ ವಾರ ಇದೊಂದು ಕತೆ ಓದಿಬಿಡಿ.

ಪ್ರಗತಿಪರ, ಮನುಷ್ಯಪರ, ಜೀವಪರ, ಭಾವಪರ ಇತ್ಯಾದಿ ಮಣ್ಣುಮಸಿ ಏನೂ ಇಲ್ಲ. ಕತೆ ಅಂದರೆ ಕತೆ ಅಷ್ಟೆ. ಅವನು ಗಿಡಗಳಿಗೆ ನೀರು ಹಾಕ್ತಾ ಇದ್ದ. ಸೋನೆ ಬೇರೆ ಸಣ್ಣಗೆ ಹನಿಯಾಡ್ತಾ ಇತ್ತು. ಬೇರೆ ಮಾಲಿಯಾಗಿದ್ರೆ ಆವತ್ತು ಗಿಡಗಳಿಗೆ ನೀರು ಹಾಕದೇ ಇರೋದಕ್ಕೆ ಅಷ್ಟು ನೆಪ ಸಾಕಾಗ್ತಿತ್ತು. ಆದರೆ ಅವನು ಮಾತ್ರ ಹಾಗಲ್ಲ. ಸೋನೆಯಲ್ಲೂ ಗಿಡಗಳಿಗೆ ನೀರು ಹಾಕ್ತಾನೇ ಇರ್ತಾನೆ. ಹಾಗಂತ ಅವನು ತೀರಾ ಮುಗ್ಧನೂ ಅಲ್ಲ, ಮೂರ್ಖನೂ ಅಲ್ಲ; ಜಾಣ ಅಲ್ಲ ಅಷ್ಟೆ.

‘ಅಲ್ಲಪಾ, ಸೋನೆ ಬರ್ತಾ ಇದೆ, ಆದರೂ ನಿನ್ನ ಗಿಡಗಳಿಗೆ ನೀರು ಹಾಕ್ತಾ ಇದ್ದೀಯಲ್ಲ….?’ ಅಂತ ಯಾರಾದರೂ ಕೇಳಿದರೆ, ‘ಅಯ್, ಬುಡಿ ಬುದ್ದಿ! ಒಟ್ಟೆ ಅಸುವಾದ್ರೆ, ನೀರು ಕುಡಿಯುವಂಗಾದ್ರೆ ನಾವು ಬಾಯಿಬುಟ್ಟು ಕೇಳ್ತೀವಿ; ಪಾಪ, ಈ ಗಿಡಮರಗೊಳ್ಗೆ ಬಾಯ್ ಐತಾ ಕೇಳಾಕೆ…?’ ಅಂತಾನೆ. ಅವನು ಇಷ್ಟು ಮಾತಾಡೋದೇ ಹೆಚ್ಚು. ನೀವು ಎಷ್ಟೇ ಮಾತಾಡಿಸಿದ್ರೂ, ಏನೇ ಕೇಳಿದ್ರೂ ಹೆಚ್ಚೆಂದರೆ ಒಂದೆರಡು ವಾಕ್ಯದಲ್ಲಿ ಮಾತು ಮುಗಿಸಿಬಿಡ್ತಾನೆ. ಕೆಲವೊಮ್ಮೆ ಅಷ್ಟೂ ಇಲ್ಲ. ಅರ್ಧವಾಕ್ಯದಲ್ಲೋ, ಒಂದೇ ಅಕ್ಷರದಲ್ಲೋ, ಒಂದು ಹುಸಿನಗುವಿನಲ್ಲೋ, ನಿಟ್ಟುಸಿರಿನಲ್ಲೋ ಜವಾಬುಕೊಟ್ಟು ಸುಮ್ಮನಾಗುತ್ತಾನೆ. ಅಷ್ಟನ್ನು ಬಿಟ್ಟರೆ ತಾನಾಯಿತು, ತನ್ನ ಕೆಲಸವಾಯಿತು.

ಅದೊಂದು ದೊಡ್ಡ ಇಂಟರ್​ನ್ಯಾಷನಲ್ ಸ್ಕೂಲು. ನಮ್ಮ ಗೌರ್ಮೆಂಟ್ ಸ್ಕೂಲಿನಂಗಲ್ಲ ಅದು. ಆ ಸ್ಕೂಲಿನ ಹಿಂದೆ ಮುಂದೆಯೆಲ್ಲಾ ಸ್ಕೂಲಿಗೆ ಮಕ್ಕಳನ್ನು ಸೇರಿಸುವುದಕ್ಕೆ ಬರುವ ತಾಯ್ತಂದೆಯರ ಕಣ್ಸೆಳೆಯುವಂಥಾ ಬಹುದೊಡ್ಡ ಉದ್ಯಾನವಿದೆ. ಅಲ್ಲಿ ಥರಾವರಿ ಬಣ್ಣದ, ಡಿಸೈನಿನ ಗಿಡಮರಗಳನ್ನು ಬೆಳೆಸಿದ್ದಾರೆ. ಅವನು ಅಲ್ಲಿಯ ಮಾಲಿ.

‘ಜವರಯ್ಯಾ!’ ಅಂತ ಯಾರೋ ಕೂಗಿದ ಹಾಗಾಯಿತು. ಜವರಯ್ಯ ತಿರುಗಿ ನೋಡಿದ. ಅವನನ್ನು ಕರೆದದ್ದು ಅದೇ ಸ್ಕೂಲಿನ ಅಟೆಂಡರ್ ಅಣ್ಣಾಜಿ.

‘ಏನು?’ ಅನ್ನುವಂತೆ ಕತ್ತೆತ್ತಿದ ಜವರಯ್ಯ. ‘ಪ್ರಿನ್ಸಿಪಾಲ್ ಮೇಡಂ ಕರೀತಾ ಅವ್ರೆ. ಈಗಲೇ ಬರಬೇಕಂತೆ, ಈಗಲೇ!’ ಅಂದ ಅಟೆಂಡರ್. ತಟಕ್ಕನೆ ಎದ್ದ ಜವರಯ್ಯ, ಪ್ರಿನ್ಸಿಪಾಲ್ ಮೇಡಂ ಚೇಂಬರಿನ ಕಡೆ ದಡಬಡಾಯಿಸಿಕೊಂಡು ನಡೆದ. ಅವನು ಹಾಗೆ ನಡೆಯುವಾಗ ಎದೆ ಡವಡವ ಅಂತ ಹೊಡೆದುಕೊಳ್ಳುತ್ತಿತ್ತು. ಹೃದಯ ಎದೆಗೂಡಿನಿಂದ ಆಚೆಗೆ ಜಿಗಿದು ಬಂದುಬಿಡುತ್ತೇನೋ ಅನಿಸುತ್ತಿತ್ತು.

‘ಏನು ತಪ್ಪಾಗದೋ ಏನೋ, ಈ ತ್ವಾಟದಲ್ಲಿ ಸಾವಿರಾರು ರುಪಾಯಿ ಸುರಿದು ತಂದು ನೆಟ್ಟಿರೋ ನಮನಮೂನೆಯ ಹೂವಿನ ಗಿಡ ಅವೆ. ದನಕರ ಯಾವುದೂ ಗೇಟುದಾಟಿ ಬರೂವಂಗಿಲ್ಲ. ಆದರೂ ಎಲ್ಲಿ ಏನಾಗದೋ ಏನೋ, ಒಂದೊಂದು ಗಿಡದ ಬೆಲೆಗೆ ನನ್ನ ಒಂದು ತಿಂಗಳ ಸಂಬಳ ಹಿಡಿದ್ರೂ ಆಗೋದಿಲ್ಲ….’. ಹಾಗೆಲ್ಲಾ ಅಂದುಕೊಂಡು ದಾರಿಯುದ್ದಕ್ಕೂ ತನ್ನ ಮನೆ ಹೆಣ್ಣುದೇವು›, ಗಂಡುದೇವು›ಗಳನ್ನೆಲ್ಲಾ ನೆನೆಸಿಕೊಂಡ. ‘ಅವ್ವಾ ಉತ್ತುನಳ್ಳಿ ಉರಿಕಾರಿ, ಮೂಗೂರು ತಿಬ್ಬಾದೇವಿ, ಬೆಟ್ಟದ ಚಾಮುಂಡವ್ವ, ನಂಜಲಗೂಡು ನಂಜುಂಡೇಶ್ವರ, ಮಲೆ ಮಾದಪ್ಪ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ತಿರುಪತಿ ಯಂಕಟೇಸ್ವರ…. ನನ್ನ ಕೈ ಬುಡಬ್ಯಾಡಿ, ಏನೋ ಈ ಇಸ್ಕೂಲಿನ ಕೆಲಸದಿಂದಾಗಿ ಒಂದಿಷ್ಟು ಅಂಬಲೀನೋ ತುಂಬೆಸೊಪ್ಪೋ ನೋಡ್ತಾ ಇವ್ನಿ. ನನ್ ಬಂಗ-ಬಡತನ, ಉಬ-ಸುಬ ಎಲ್ಲಾ ನಿಮ್ಮದೇ…. ನನ್ನವ್ವದೀರಾ, ನನ್ನಪ್ಪದೀರಾ, ನನ್ ಕೈ ಬುಡಬ್ಯಾಡಿ, ನಿಮ್ ಪಾದ….’ ಈ ಥರವಾಗಿ ಪ್ರಾರ್ಥನೆ ಮಾಡ್ತಾ ಪ್ರಿನ್ಸಿಪಾಲ್ ಮೇಡಂ ಚೇಂಬರಿನ ಮುಂದೆ ನಿಂತ. ಚೇಂಬರಿನೊಳಗೆ ಇಣುಕಿದರೆ ಅಲ್ಲಿ ಇನ್ನೂ 2-3 ಜನ ಟೀಚರುಗಳು ಇದ್ದಹಾಗೆ ಕಾಣಿಸಿತು.

‘ಈ ಮೇಡಮ್ಮದೀರು ಇಲಿ ಓಯ್ತು ಅಂದ್ರೆ ಉಲಿ ಓಯ್ತು ಅಂತಾರೆ. ಅದ್ಯಾವ ಪುಣ್ಯಾತಗಿತ್ತಿ ನನ್ನ ಮೇಲೆ ಅದೇನು ದೂರು ಹೇಳವಳೋ ಕಾಣೆ….’ ಅಂತ ಜವರಯ್ಯ ಯೋಚನೆ ಮಾಡ್ತಾ ಇರುವಾಗಲೇ ಪ್ರಿನ್ಸಿಪಾಲ್ ಮೇಡಮ್ಮನಿಗೆ ತಾನು ಕೂತ ಜಾಗದಿಂದಲೇ ಜವರಯ್ಯನ ಕಾಲು ಕಂಡಿರಬಹುದು. ‘ಕಮಿನ್!’ ಅಂದ್ರು. ಜವರಯ್ಯನಿಗೆ ಇಂಗ್ಲೀಷು-ಗಿಂಗ್ಲೀಷು ಬರೋದಿಲ್ಲ. ಆದರೆ ಹತ್ತಾರು ವರ್ಷದಿಂದ ಆ ಇಂಟರ್​ನ್ಯಾಷನಲ್ ಸ್ಕೂಲಿನಲ್ಲಿ ಕೆಲಸ ಮಾಡಿದ್ದರಿಂದ ‘ಕಮಿನ್’ ಅಂದರೆ ‘ಒಳಗೆ ಬಾ’ ಅಂತ ಅನ್ನುವಷ್ಟು ಗೊತ್ತಾಗಿತ್ತು. ಹೇಳಿಕೇಳಿ ಇಂಟರ್​ನ್ಯಾಷನಲ್ ಸ್ಕೂಲು. ಅಲ್ಲಿ ಉಣ್ಣುವುದು, ತಿನ್ನುವುದು, ಕೆಮ್ಮುವುದು, ಕ್ಯಾಕರಿಸುವುದು ಎಲ್ಲಾ ಇಂಗ್ಲಿಷಿನಲ್ಲೇ. ಮೊನ್ನೆ ತಾನೆ ಒಬ್ಬ ಹುಡುಗ ಓಡಿಹೋಗುವಾಗ ಬಿದ್ದ. ಬಿದ್ದ ಕೂಡಲೇ ‘ಅಯ್ಯಯ್ಯಪ್ಪೋ’ ಅಂತ ಕನ್ನಡದಲ್ಲಿ ಅತ್ತಿದ್ದು ಗೊತ್ತಾಗಿ, ಕ್ಲಾಸ್ ಟೀಚರು ಆ ಹುಡುಗನಿಗೆ ಇಂಗ್ಲಿಷಿನಲ್ಲಿ ಸಿಕ್ಕಾಪಟ್ಟೆ ಬಯ್ದಿದ್ದರು. ಅವನು ಒಳಗೆಹೋಗಿ ಉಗುಳು ನುಂಗುವುದಕ್ಕೂ ಧೈರ್ಯವಿಲ್ಲದೆ ಪ್ರಿನ್ಸಿಪಾಲ್ ಮೇಡಮ್ಮನವರ ಎದುರಿಗೆ ನಿಂತ.

ಪ್ರಿನ್ಸಿಪಾಲ್ ಮೇಡಮ್ಮು, ನರಮನ್ಸ ಇನ್ನಿದಕ್ಕಿಂತ ಬೆಳ್ಳಗಿರೋದಕ್ಕೆ ಸಾಧ್ಯವೇ ಇಲ್ಲ ಅನ್ನುವಷ್ಟು ಬೆಳ್ಳಗಿದ್ದರು. ತುಟಿಗೆ ನೀಲಿಯೂ ಅಲ್ಲ, ಕೆಂಪೂ ಅಲ್ಲ ಅನ್ನುವಂಥಾದ್ದೊಂದು ಬಣ್ಣ ಹಚ್ಚಿಕೊಂಡಿದ್ದರು. ಕಣ್ಣುಹುಬ್ಬುಗಳನ್ನು ಒಂದು ದಾರದ ಗಾತ್ರ ಬಿಟ್ಟುಕೊಂಡು, ಅತ್ತ ಇತ್ತ ಅಡ್ಡಾದಿಡ್ಡಿ ಬೆಳೆದಿದ್ದ ಕೂದಲುಗಳನ್ನೆಲ್ಲಾ ಕಿತ್ತಿಸಿಕೊಂಡಿದ್ದರು. ಮೊಕದ ಮೇಲೆ ಮಂದವಾಗಿ ಬಣ್ಣ ಬಳಕೊಂಡಿದ್ದರು. ಕಣ್ಣುಗಳಿಗೆ ಥಳಥಳಾ ಹೊಳೆಯುವಂಥ ಒಂದು ಬಂಗಾರ ಕಟ್ಟಿನ ಕನ್ನಡಕ ಇತ್ಯಾದಿತ್ಯಾದಿಯಾಗಿ ಅಲಂಕಾರಗೊಂಡಿರುವಂಥಾ ಆ ಪ್ರಿನ್ಸಿಪಾಲ್ ಮೇಡಮ್ಮನೋರ ಎದುರಿಗೆ ನಿಂತಿದ್ದ ಜವರಯ್ಯ.

ಜವರಯ್ಯ ಉಗುಳು ನುಂಗಿ, ಧೈರ್ಯ ತಂದುಕೊಂಡು- ‘ಅಮ್ಮಾ, ಕರೆದ್ರಂತೆ?!’ ಅಂದ.

ಪ್ರಿನ್ಸಿಪಾಲ್ ಮೇಡಮ್ಮು ತಮ್ಮ ಮುಂದೆ ಇದ್ದ ಒಂದು ಹಾಳೆಯನ್ನು ಎತ್ತಿ ಜವರಯ್ಯನಿಗೆ ಕೊಡುತ್ತಾ, ‘ಓದು ಇದನ್ನ!’ ಅಂದ್ರು. ಜವರಯ್ಯನಿಗೆ ಜಂಘಾಬಲ ಉಡುಗಿಹೋಯ್ತು. ಯಾರೋ ತನ್ನ ಮೇಲೆ ದೂರು ಕೊಟ್ಟಿರಬೇಕು ಅಂದುಕೊಂಡು ಮತ್ತೆ ತನ್ನ ಮನೆದೇವರುಗಳನ್ನೆಲ್ಲಾ ನೆನೆಸಿಕೊಂಡ. ‘ಓದು ಜವರಯ್ಯ ಇದನ್ನ!’ ಅಂದರು ಪ್ರಿನ್ಸಿಪಾಲ್, ಅದೇ ಗತ್ತಿನಿಂದ. ‘ನನಗೆ ಓದೋಕೆ ಬರೋದಿಲ್ಲ ಕಣ್ರಮ್ಮ. ಕನ್ನಡ ಆದ್ರೆ ಸುಮಾರಾಗಿ ಒಂದೊಂದಕ್ಷರ ಹಿಡಿದು ಓದ್ತೀನಿ. ಆದ್ರೆ ಈ ಹಾಳೆ ಮ್ಯಾಲೆ ಬರೆದಿರೋದು ಇಂಗ್ಲೀಸು. ನನ್ಗೆ ಒಂದು ರವಷ್ಟೂ ತಿಳಿಯೋದಿಲ್ಲ ಕಣ್ರಮ್ಮ. ನಾನು ಏನೇ ತೆಪು್ಪ ಮಾಡಿದ್ರೂ, ನಿಮ್ ದಮ್ಮಯ್ಯ ಹೊಟ್ಟೆಗಾಕ್ಕಬುಡಿ. ಹೊಟ್ಟೆಮ್ಯಾಲೆ ಹೊಡೀಬ್ಯಾಡಿ. ನಿಮ್ ಋಣ ಈ ಜಲ್ಮದಲ್ಲಿ ನಾನು ತೀರ್ಸಕಾಗೋದಿಲ್ಲ. ನನ್ ಮಗಳಿಗೆ ಈ ದೊಡ್ಡ ಇಸ್ಕೂಲಲ್ಲಿ ಪುಗಸಟ್ಟೆ ಸೀಟು ಕೊಟ್ಟು ಓದುಸ್ತಾ ಇದ್ದೀರಿ. ಇಂತಾ ಇಸ್ಕೂಲಲ್ಲಿ ನನ್ ಮಗ್ಳು ಓದ್ತಾಳೆ ಅಂತ ನಾನು ಕನಸಲ್ಲೂ ಕಂಡಿರ್ಲಿಲ್ಲ. ಅಂಥಾದ್ರಲ್ಲಿ ನನ್ ತಬ್ಬಲಿ ಮಗೀಗೆ ನೀವು ನೆಳ್ಳು ಕೊಟ್ಟಿದ್ದೀರಿ. ನನ್ನದೇನೇ ತೆಪ್ಪಿದ್ರೂ ಯೇಳಿ, ತಿದ್ಕೋತೀನಿ. ನಿಮ್ ಪಾದ ಕಣ್ರಮ್ಮಾ….’. ಇಷ್ಟು ಹೇಳುವಷ್ಟರಲ್ಲಿ ಜವರಯ್ಯನ ಕಣ್ಣೀರು ಕೆನ್ನೆ ದಾಟಿದ್ದವು.

‘ಹೇಯ್, ಹೋಲ್ಡ್ ಆನ್! ಯಾವತ್ತೂ ಇಲ್ಲದೋನು ಈವತ್ತು ಯಾಕ್ ಇಷ್ಟ್ ಮಾತಾಡ್ತಾ ಇದ್ದೀಯಾ? ಅಂಥದ್ದೇನೂ ಆಗಿಲ್ಲ. ಕಣ್ಣೀರು ಒರೆಸ್ಕೋ. ನೀನೇ ಏನೇನೋ ಕೆಟ್ಟದ್ದೆಲ್ಲಾ ಯೋಚನೆ ಮಾಡಿಬಿಡಬೇಡ…’ ಅಂದರು ಪ್ರಿನ್ಸಿಪಾಲ್ ಮೇಡಮ್ಮು. ಜವರಯ್ಯನಿಗೆ ರವಷ್ಟು ಸಮಾಧಾನವಾಯಿತು. ಪ್ರಿನ್ಸಿಪಾಲ್ ಹೇಳಿದರು- ‘ನಿನ್ನ ಮಗಳು ತುಂಬಾ ಬ್ರೖೆಟ್ ಆಗಿದ್ದಾಳೆ ಅಂತಾನೇ ಇಲ್ಲಿ ಸೀಟು ಕೊಟ್ಟಿದ್ದು. ಅಂಡರ್​ಸ್ಟಾ್ಯಂಡ್? ಜೊತೆಗೆ ನೀನೂ ಇಲ್ಲಿ ಸಿನ್ಸಿಯರ್ ವರ್ಕರ್, ಓಕೆ? ಇದು ಯಾರೋ ನಿನ್ನ ಮೇಲೆ ಬರೆದುಕೊಟ್ಟಿರೋ ಕಂಪ್ಲೇಂಟ್ ಅಲ್ಲ. ಇದನ್ನ ನಿನ್ನ ಮಗಳೇ ಬರೆದಿರೋದು. ನೆನ್ನೆ ‘ಮದರ್ಸ್ ಡೇ’ ಬಗ್ಗೆ ಒಂದು ಎಸ್ಸೆ ಬರೆಯೋದಕ್ಕೆ ಅಂತ ಹೇಳಿದ್ವಿ. ಅದಕ್ಕೆ ನಿನ್ ಮಗಳು ಬರೆದಿರೋ ಎಸ್ಸೆ ಇದು. ನಾನು ಈಗ ಒಬ್ಬ ಟೀಚರ್ ಹತ್ರ ಇದನ್ನು ಓದಿಸಿ, ಕನ್ನಡದಲ್ಲಿ ಅದರ ಅರ್ಥ ಹೇಳಿಸ್ತೀನಿ. ನೀನು ಕೇಳಬೇಕು ಇದನ್ನ, ಓಕೆ?’.

ಹಾಗೆಂದು ಪ್ರಿನ್ಸಿಪಾಲ್ ಮೇಡಂ ಒಬ್ಬ ಟೀಚರ್ ಕಡೆ ತಿರುಗಿ, ‘ಪ್ಲೀಸ್ ಗೋ ಅಹೆಡ್’ ಅಂದರು. ಆ ಟೀಚರ್ ಇಂಗ್ಲಿಷಿನಲ್ಲಿ ಬರೆದಿದ್ದ ಆ ಪ್ರಬಂಧವನ್ನು ಓದಿ ಕನ್ನಡದಲ್ಲಿ ಹೇಳ್ತಾ ಹೋದರು. ಜವರಯ್ಯನ ಮಗಳು ‘ಮದರ್ಸ್ ಡೇ’ ಬಗ್ಗೆ ಬರೆದಿದ್ದು ಹೀಗೆ-

‘‘ನಾನೀಗ ಬರೆಯಲು ಹೊರಟಿರುವ ಪ್ರಬಂಧದ ವಿಷಯ ಮದರ್ಸ್ ಡೇ, ಅಂದರೆ ತಾಯಂದಿರ ದಿನ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಎಳೆಯ ಮನಸ್ಸಿಗೆ ತೋಚಿದಂತೆ ಬರೆಯುತ್ತಿದ್ದೇನೆ. ನಾನು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದವಳು. ನನ್ನ ತಂದೆ-ತಾಯಿ ಅನಕ್ಷರಸ್ಥರು. ಇಷ್ಟೆಲ್ಲಾ ಆಧುನಿಕ ವೈದ್ಯಕೀಯ ಸೌಕರ್ಯಗಳಿರುವಾಗಲೂ ನಮ್ಮ ದೇಶದಲ್ಲಿ ಎಷ್ಟೊಂದು ಹೆಣ್ಣುಮಕ್ಕಳು ಹೆರಿಗೆಯ ಸಂದರ್ಭದಲ್ಲಿ ಸತ್ತೇಹೋಗುತ್ತಾರೆ. ಹಾಗೆ ಸತ್ತವರಲ್ಲಿ ನನ್ನ ತಾಯಿ ಕೂಡಾ ಒಬ್ಬಳು. ಅವಳು ಹೆರಿಗೆ ಸಮಯದಲ್ಲಿ ಮುಚ್ಚಿದ ಕಣ್ಣನ್ನು ಮತ್ತೆ ತೆರೆಯಲೇ ಇಲ್ಲ. ಹಾಗಾಗಿ ನನ್ನ ತಾಯಿಯೂ ನನ್ನನ್ನು ನೋಡಲಿಲ್ಲ. ಎಳೆಹಸುಳೆಯಾಗಿದ್ದ ನಾನೂ ನನ್ನ ತಾಯಿಯನ್ನು ನೋಡಲಿಲ್ಲ. ‘ತಾಯಿಯನ್ನೇ ತಿಂದುಕೊಂಡು ಹುಟ್ಟಿದ ಅನಿಷ್ಟ’ ಅಂತ ಹುಟ್ಟಿದ ಕೆಲಹೊತ್ತಿನಲ್ಲೇ ನನ್ನನ್ನು ಸುತ್ತಮುತ್ತ ಇದ್ದವರೆಲ್ಲಾ ಬಯ್ದರಂತೆ, ಶಾಪ ಹಾಕಿದರಂತೆ.

ಆಗ ನನ್ನನ್ನು ಎತ್ತಿಕೊಂಡವನು ಅಪ್ಪ. ನನ್ನ ಮೈತೊಳೆದವನು, ನನಗೆ ಹಾಲು ಹುಯ್ದವನು ಎಲ್ಲಾ ಅಪ್ಪನೇ. ಆಗ ಅಪ್ಪನಿಗೆ ಇನ್ನೊಂದು ಮದುವೆಯಾಗುವಂತೆ ನನ್ನ ಅಜ್ಜಿ-ತಾತ ಒಂದೇ ಒತ್ತಾಯವಿಟ್ಟರಂತೆ. ಆದರೆ ಅಪ್ಪ ಒಪ್ಪಲಿಲ್ಲ. ಅಜ್ಜಿ-ತಾತ ಏನೇನೋ ಪುಸಲಾಯಿಸಿದರು, ಪೂಸಿ ಮಾಡಿದರು, ರೇಗಿದರು, ಬಯ್ದರು, ಕಣ್ಣೀರಿಟ್ಟರು. ಆದರೂ ಅಪ್ಪ ಒಪ್ಪಲಿಲ್ಲ. ಕಡೆಗೆ ನನ್ನ ಅಜ್ಜಿ-ತಾತ ‘ನಮಗಿರೋದು ನೀನೊಬ್ಬನೇ ಮಗ. ನಿನ್ನಿಂದ ಒಂದು ಗಂಡುಸಂತಾನ ಆಗದಿದ್ದರೆ ನಮ್ಮ ವಂಶವೇ ನಿಂತುಹೋಗುತ್ತದೆ, ನೀನು ಮದುವೆಯಾಗಲೇಬೇಕು. ತಾಯನ್ನೇ ತಿಂದುಕೊಂಡು ಹುಟ್ಟಿದ ಈ ಅನಿಷ್ಟವನ್ನು ಸಾಕುವುದಕ್ಕೆ ನಿನ್ನ ಜೀವನವನ್ನ ತೇಯ್ದುಹಾಕಬೇಡ, ಸುಮ್ಮನೆ ಮದುವೆಯಾಗು. ಕೊನೇಮಾತು ಹೇಳ್ತೀವಿ. ನೀನು ಮದುವೆಯಾಗದೇ ಹೋದರೆ ನಮ್ಮ ಆಸ್ತಿಯಲ್ಲಿ ಒಂದು ದಮ್ಮಡೀನೂ ಕೊಡೋದಿಲ್ಲ!’.

ಅಷ್ಟಾದರೂ ಅಪ್ಪ ಎರಡನೇ ಯೋಚನೆ ಮಾಡಲೇ ಇಲ್ಲ. ಅವನಿಗೆ ನನ್ನ ಅಜ್ಜಿ-ತಾತಂದಿರಿಂದ ಸಿಗಬಹುದಾಗಿದ್ದ ಒಂದು ಚಂದವಾದ ಮನೆ, ಗದ್ದೆ, ತೋಟ, ದನ-ಕರು, ಒಡವೆ-ವಸ್ತು ಎಲ್ಲವನ್ನೂ ಬಿಟ್ಟು ನನ್ನನ್ನು ಎತ್ತಿಕೊಂಡು ಯಾರಿಗೂ ಹೇಳದೆ ಈ ಮಹಾನಗರಕ್ಕೆ ಬಂದುಬಿಟ್ಟ. ಅಪ್ಪನ ಕೈಲಿ ಏನೇನೂ ಇರಲಿಲ್ಲ. ಇದ್ದದ್ದು ನಾನು ಮಾತ್ರ. ಅಪ್ಪ ಹಗಲೂರಾತ್ರಿ ದುಡಿಯುತ್ತಲೇ ನನ್ನ ಲಾಲನೆ-ಪಾಲನೆ ಮಾಡಿದ. ಒಳ್ಳೊಳ್ಳೆ ಬಟ್ಟೆ-ಬರೆ ಕೊಡಿಸಿದ, ತಿಂಗಳ ಕೂಸನ್ನು ಹೊಟ್ಟೆಗೆ ಅವುಚಿಕೊಂಡು ಈ ಊರಿಗೆ ಬಂದ ಅಪ್ಪ ಅದೇನು ದುಡಿದನೋ, ಏನೇನು ಕೆಲಸ ಮಾಡಿದನೋ, ಎಷ್ಟು ಮನೆ ಬಿಕ್ಕೆ ಬೇಡಿದನೋ ನಾನು ಕಲ್ಪಿಸಿಕೊಳ್ಳಲಾರೆ. ನನಗೆ ಕಾಯಿಲೆ-ಕಸಾಲೆ ಬಂದಾಗ ಅಪ್ಪ ಅದೆಷ್ಟು ಬಾರಿ ಅತ್ತನೋ, ಅದೆಷ್ಟು ಬಾರಿ ಸತ್ತನೋ, ಅದು ಹೇಗೆ ಸಾಕಿದನೋ ನನಗಂತೂ ಗೊತ್ತಾಗುತ್ತಿಲ್ಲ. ಆದರೆ ಕಣ್ಣರೆಪ್ಪೆಗಳು ಕಣ್ಣುಗಳನ್ನು ಕಾಪಾಡುವಂತೆ ಕಾಪಾಡಿ ಬೆಳೆಸಿದ ಅನ್ನುವುದಷ್ಟೇ ನನಗೆ ಗೊತ್ತು.

ಈಗ ನನಗೆ ಅರ್ಥವಾಗುತ್ತಿದೆ, ಅಪ್ಪನಿಗೆ ಯಾವ ತಿಂಡಿ-ತಿನಿಸೂ ಇಷ್ಟವಾಗುತ್ತಿರಲಿಲ್ಲ ಯಾಕೆ ಅಂತ. ತಟ್ಟೆಯಲ್ಲಿ ಒಂದೇ ಚೂರು ತಿಂಡಿಯಿದ್ದರೆ, ನಾನು ‘ನೀನು ತಿನ್ನಪ್ಪಾ’ ಅಂದರೆ ಅಪ್ಪ ‘ಇದು ನನಗೆ ಇಷ್ಟ ಇಲ್ಲ ಕಂದಾ’ ಅನ್ನುತ್ತಿದ್ದ. ಅದು ಅವನಿಗೆ ಇಷ್ಟ ಇಲ್ಲ ಅನ್ನುವುದು ಸುಳ್ಳು. ಅದು ಅಪ್ಪ ಮಾಡಿದ ತ್ಯಾಗ ಅಂತ ನನಗೆ ಅರ್ಥವಾಗುತ್ತಿದೆ. ಅಪ್ಪ, ತಾನು ಉಂಡನೋ ಇಲ್ಲವೋ, ನನಗೆ ಮಾತ್ರ ಹೊಟ್ಟೆತುಂಬಾ ಉಣ್ಣಿಸಿದ, ತಾನು ಹಬ್ಬಕ್ಕಾದರೂ ಒಂದು ಹೊಸಬಟ್ಟೆ ಕೊಂಡನೋ ಇಲ್ಲವೋ, ನನಗೆ ಮಾತ್ರ ಬಗೆಬಗೆ ಹೊಸಬಟ್ಟೆ ಹಾಕಿ ಸಂಭ್ರಮಿಸಿದ.

ಈ ಶಾಲೆ ಅಪ್ಪನಿಗೊಂದು ಕೆಲಸ ಕೊಟ್ಟಿತು. ಅಪ್ಪ ಇನ್ನಿಲ್ಲದಷ್ಟು ಪ್ರಾಮಾಣಿಕವಾಗಿ ದುಡಿದ. ಈ ಶಾಲೆ ಅಪ್ಪನಿಗೊಂದು ದೊಡ್ಡ ಬಹುಮಾನ ಕೊಟ್ಟಿತು. ಅದು, ನನ್ನನ್ನು ಇಲ್ಲಿ ಉಚಿತವಾಗಿ ಸೇರಿಸಿಕೊಂಡು ವಿದ್ಯೆ ಕೊಟ್ಟಿದ್ದು. ಅಮ್ಮ ಅಂದರೆ ಪ್ರೀತಿ, ಅಮ್ಮ ಅಂದರೆ ತ್ಯಾಗ, ಅಮ್ಮ ಅಂದರೆ ವಾತ್ಸಲ್ಯ ಅಂತ ಹೇಳುವುದಾದರೆ, ಆ ಪ್ರೀತಿ-ವಾತ್ಸಲ್ಯ-ತ್ಯಾಗಗಳ ಆಕಾರರೂಪವೇ ನನ್ನ ಅಪ್ಪ. ಅಮ್ಮ ಅಂದರೆ ಕರುಣೆ, ಅಮ್ಮ ಅಂದರೆ ಕಾಳಜಿ ಅನ್ನುವುದಾದರೆ ಅದರ ಪ್ರತಿರೂಪವೇ ನನ್ನ ಅಪ್ಪ. ಈ ಭೂಮಿಯ ಮೇಲಿರುವ ಏಕೈಕ ಅಮ್ಮ ಅಂದರೆ ನನಗೆ ಅಪ್ಪ ಮಾತ್ರವೇ.

ಇವತ್ತು ಅಮ್ಮಂದಿರ ದಿನ, ನಾನು ಅಮ್ಮಂದಿರ ದಿನದ ಶುಭಾಶಯಗಳನ್ನು ನನ್ನ ಅಪ್ಪನಿಗೇ ಹೇಳುತ್ತೇನೆ, ಅಪ್ಪನ ರೂಪದಲ್ಲಿರುವ ನನ್ನ ಅಮ್ಮನಿಗೆ. ಈ ಶಾಲೆಯ ಸುಂದರ ತೋಟದ ಮಾಲಿಗೆ ನಾನು ಅಭಿನಂದನೆ ಹೇಳುತ್ತೇನೆ. ನನ್ನ ಧನ್ಯತೆಯ ಕಣ್ಣೀರು ನನ್ನಪ್ಪನ ಪಾದಗಳನ್ನು ತೊಳೆಯಲಿ. ಅಮ್ಮನ ಬಗ್ಗೆ ಬರಿ ಅಂದರೆ ಅಪ್ಪನ ಬಗ್ಗೆ ಬರೆದುದಕ್ಕೆ ಉಪಾಧ್ಯಾಯರು ನನಗೆ ಅಂಕಗಳನ್ನು ಕೊಡದಿರಬಹುದು, ಚಿಂತೆಯಿಲ್ಲ. ಆದರೆ ನನ್ನ ತ್ಯಾಗಮಯಿ ಅಪ್ಪನ ಬಗ್ಗೆ ನಾಲ್ಕುಸಾಲು ಬರೆಯುವುದಕ್ಕೆ ಈ ‘ಅಮ್ಮಂದಿರ ದಿನ’ ನೆಪವಾಯಿತಲ್ಲ ಎಂದು ಹೆಮ್ಮೆಪಡುತ್ತೇನೆ….’.

ಪ್ರಿನ್ಸಿಪಾಲ್ ಮೇಡಂ ಚೇಂಬರಿನಲ್ಲಿ ಈಗೊಂದು ಗಾಢಮೌನ. ಎಲ್ಲರ ಕಣ್ಣೂ ತೇವತೇವ. ಧಾರಾಳ ಕಣ್ಣೀರು ಸುರಿದು ಜವರಯ್ಯನ ಬಟ್ಟೆಯೆಲ್ಲಾ ತೋಯ್ದುಹೋಗಿತ್ತು. ಸುಮ್ಮನೆ ಕೈಮುಗಿದುಕೊಂಡು ನಿಂತು ಬಿಕ್ಕುತ್ತಿದ್ದ. ಜವರಯ್ಯ ಆ ಹಾಳೆಗಳನ್ನು ನಡುಗುವ ಕೈಗಳಿಂದ ಈಸಿಕೊಂಡು ತನ್ನ ಎದೆಗೊತ್ತಿಕೊಂಡ.

ಪ್ರಿನ್ಸಿಪಾಲ್ ಮೇಡಂ ಕುರ್ಚಿಯಿಂದ ಎದ್ದು ನಿಂತರು. ಒತ್ತಾಯ ಮಾಡಿ ಅವನನ್ನೊಂದು ಕುರ್ಚಿಯ ಮೇಲೆ ಕೂರಿಸಿದರು. ಒಂದು ಲೋಟ ನೀರು ತರಿಸಿಕೊಟ್ಟು ತಾವೇ ಕೈಯಾರೆ ಕುಡಿಸಿದರು. ಅವನ ಮುಗಿದ ಕೈಗಳನ್ನು ಒತ್ತಿಹಿಡಿದುಕೊಂಡು ಗದ್ಗದಿತರಾಗಿ ಹೇಳಿದರು-

‘ಜವರಯ್ಯಾ, ನಿನ್ನ ಮಗಳ ಪ್ರಬಂಧಕ್ಕೆ ಹತ್ತಕ್ಕೆ ಹತ್ತು ನಂಬರ್ ಕೊಟ್ಟಿದ್ದೇವೆ. ಈ ವರ್ಷ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಬರೆದ ಪ್ರಬಂಧದಲ್ಲಿ ಇದು ಅತ್ಯುತ್ತಮ ಪ್ರಬಂಧ. ನಾಳೆ ನಮ್ಮ ಶಾಲೆಯಲ್ಲಿ ‘ಮದರ್ಸ್ ಡೇ’. ಈ ಸಲದ ‘ಮದರ್ಸ್ ಡೇ’ಗೆ ನೀನೇ ಮುಖ್ಯ ಅತಿಥಿ. ನೀನು ಈ ಜಗತ್ತಿನ ಅತ್ಯುತ್ತಮ ತಾಯಿ. ತಾಯಿ ಅನ್ನುವವಳು ಹೆಣ್ಣೇ ಆಗಿರಬೇಕಾಗಿಲ್ಲ ಅಂತ ಜಗತ್ತಿಗೆ ತೋರಿಸಿಕೊಟ್ಟ ದೊಡ್ಡಜೀವ ನೀನು. ಮಕ್ಕಳನ್ನು ಸಾಕುವುದಕ್ಕೆ ಗಂಡಸು ಮಾಡಬಹುದಾದ ತ್ಯಾಗಕ್ಕೆ ನೀನೊಂದು ಉದಾಹರಣೆ. ನೀನು ನಿಜವಾದ ಮಾಲಿ. ನೀನು ಬೆಳೆಸಿದ ಸುಂದರ ಸಸಿ ನಿನ್ನ ಮಗಳು. ನಿನ್ನ ಬಗ್ಗೆ, ನಿನ್ನ ಮಗಳ ಬಗ್ಗೆ ನಮ್ಮ ಶಾಲೆ ಹೆಮ್ಮೆಪಡುತ್ತದೆ! ಅಂದಹಾಗೆ ನಾಳಿನ ‘ಮದರ್ಸ್ ಡೇ’ಗೆ ಮುಖ್ಯ ಅತಿಥಿಯಾಗುವುದಕ್ಕೆ ನಿನ್ನ ಒಪ್ಪಿಗೆಯಿದೆ ತಾನೇ?

ಜವರಯ್ಯ ಅದೇನು ಹೇಳಿಯಾನು?!

* * *

ಇದನ್ನು ಕತೆ ಅಂದರೆ ಕತೆ ಅನ್ನಿ. ನನಗಿದು ಕತೆ ಅನ್ನಿಸುತ್ತಿಲ್ಲ, ಇಲ್ಲೇ ಎಲ್ಲೋ ನಮ್ಮ ಸುತ್ತಿನಲ್ಲಿ ಈ ‘ಕತೆ’ ನಡೆದಿರುವಂತಿದೆ. ಇದನ್ನು ನನಗೆ ವಾಟ್ಸಾಪ್​ನಲ್ಲಿ ಕಳುಹಿಸಿದವರು ನನಗೆ ಪರಿಚಿತರಾಗಿರುವ ಹಿರಿಯ ವೈದ್ಯೆ ಡಾ. ಮಲ್ಲಿಕಾ ಅವರು. ಇದನ್ನು ಸಾಧ್ಯವಾದಷ್ಟೂ ಜನರಿಗೆ ಫಾರ್ವರ್ಡ್ ಮಾಡಿ ಅಂತ ವಿನಂತಿಸಿಕೊಂಡಿದ್ದರು ಮಲ್ಲಿಕಾ ಮೇಡಂ. ಇಂಗ್ಲಿಷಿನಲ್ಲಿ ಬಂದ ಈ ‘ಕತೆ’ಯನ್ನು ನಮ್ಮ ಆವರಣಕ್ಕೆ ಒಗ್ಗುವಂತೆ ಕನ್ನಡಿಸಿ ನಾನು ಈ ಅಂಕಣದ ಮುಖಾಂತರ ನನ್ನ ಓದುಗಪ್ರಭುಗಳಿಗೆಲ್ಲಾ ಫಾರ್ವರ್ಡ್ ಮಾಡಿದ್ದೇನೆ. ಈ ಕತೆಯ ಮೂಲಕ ನಿಮ್ಮ ಭಾನುವಾರದ ಬೆಳಗು ಚೆಂದವೆನಿಸಿರಬಹುದೆಂದುಕೊಂಡಿದ್ದೇನೆ. ಮಲ್ಲಿಕಾ ಮೇಡಂ, ಇಲ್ಲೇ ನಮ್ಮ ಮೈಸೂರಿನ ಪಕ್ಕದ ಕೆ.ಆರ್. ನಗರದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅವರಿಗೂ ಸಂತೋಷವಾಗಿರಬಹುದು!

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top