Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಇಂದೆಂಬ ಇರುಳಲ್ಲಿ ನಾಳೆಯೆಂಬ ಕನಸು!

Sunday, 06.08.2017, 3:05 AM       No Comments

ಇತ್ತೀಚಿನ ದಿನಗಳಲ್ಲಿ ಭವಿಷ್ಯವಾಣಿ ನುಡಿಯುವುದು ಕಷ್ಟವಾಗುತ್ತಿದೆ. ವಾಣಿಜ್ಯ, ಕೃಷಿ, ಪರಿಸರ, ತಂತ್ರಜ್ಞಾನ, ಮಾಧ್ಯಮಗಳು- ಹೀಗೆ ಯಾವ ಕ್ಷೇತ್ರವನ್ನು ನೋಡಿದರೂ ಅನಿಶ್ಚಿತತೆಯೇ ಕಾಣುತ್ತದೆ. ಮುಂದೇನಾಗುತ್ತದೆಯೋ ಬಲ್ಲವರು ಯಾರು ಎನ್ನುವ ಸ್ಥಿತಿ ಎಲ್ಲೆಲ್ಲೂ ಏರ್ಪಟ್ಟಿದೆ.

ಎಲ್ಲ ಕಾಲಮಾನಗಳಲ್ಲಿಯೂ ಮಕ್ಕಳಿಂದ ಮುದುಕರವರೆಗೆ, ರಾಜರಿಂದ ರಾಜಕಾರಣಿಗಳವರೆಗೆ, ಕವಿಗಳಿಂದ ತತ್ತ್ವಜ್ಞಾನಿಗಳವರೆಗೆ, ಅರ್ಥಶಾಸ್ತ್ರಜ್ಞರಿಂದ ಹವಾಮಾನತಜ್ಞರವರೆಗೆ ಎಲ್ಲರಿಗೂ ಹೀಗೆಯೇ ಅನ್ನಿಸಿರಬೇಕು! ಭವಿಷ್ಯದ ಚಿಂತೆ ಕಾಡಿರಬೇಕು! ‘ನಾಳೆ ಏನಾಗುತ್ತದೆಯೋ ಗೊತ್ತಿಲ್ಲ’. ‘ಭವಿಷ್ಯವನ್ನು ಮುಂಗಾಣುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು’, ಇತ್ಯಾದಿ ಆಲೋಚನೆಗಳು ಬಂದಿರಬೇಕು. ನಾಳೆಯ ಅನಿಶ್ಚಿತತೆ ಸಾಮಾನ್ಯರನ್ನು ಬಲಹೀನವಾಗಿಸುವಂತೆ, ಬುದ್ಧಿವಂತರನ್ನೂ ಯೋಚನೆಗೀಡುಮಾಡಿರಬೇಕು. ಹೀಗೆ ಯೋಚಿಸುತ್ತಿರುವಾಗ, ಮೂರ್ನಾಲ್ಕು ವರ್ಷಗಳ ಹಿಂದೆ, ಮಾಧ್ಯಮ ಮತ್ತು ಸಂದೇಶಗಳ ಮಾಪನದ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಖ್ಯಾತ ಉದ್ಯಮಿ ಡಾ. ಚಂದ್ರಶೇಖರ್ ಹರಿಹರನ್ ಹೇಳಿದ ಮಾತು ನೆನಪಿಗೆ ಬಂತು. ಅವರು, ಎಂಭತ್ತರ ದಶಕದಲ್ಲಿ ಡಾಕ್ಟರೇಟ್ ಪಡೆಯಲು ಅಮೆರಿಕದ ಖ್ಯಾತ ವಿಶ್ವವಿದ್ಯಾಲಯವೊಂದರಲ್ಲಿ ವ್ಯಾಸಂಗ ಮಾಡಿದರಂತೆ. ಅವರು ಸಂಶೋಧನೆ ಮಾಡುತ್ತಿದ್ದುದು ಅರ್ಥಶಾಸ್ತ್ರದಲ್ಲಿ ಬರುವ ಎಕನಾಮೆಟ್ರಿಕ್ಸ್ ಎಂಬ ಕ್ಷಿಷ್ಟ ವಿಷಯದಲ್ಲಿ. ತಮ್ಮ ಸಂಶೋಧನೆಯ ಅಂಗವಾಗಿ ಅವರು ಜಗತ್ತಿನ ಮುಂದಿನ ಮೂವತ್ತು ವರ್ಷಗಳ ಆರ್ಥಿಕ ಭವಿಷ್ಯವನ್ನು ಪ್ರಿಡಿಕ್ಟ್ ಮಾಡಬೇಕಿತ್ತು!

ಹಾಗೆ ಮಾಡಲು, ಎಕನಾಮೆಟ್ರಿಕ್ಸ್​ನಲ್ಲಿ ಬಳಸಲಾಗುವ ಕ್ರಮ ಎಂದರೆ, ಆ ಹಿಂದಿನ 30, 60, 90… ವರ್ಷಗಳ ಅವಧಿಯಲ್ಲಿ ನಡೆದ ಆರ್ಥಿಕ ಘಟನಾವಳಿಗಳನ್ನು ಆಧರಿಸಿ, ಮುಂದಿನ ಮೂವತ್ತು ವರ್ಷಗಳು ಹೇಗಿರಬಹುದು ಎನ್ನುವುದರ ಬಗ್ಗೆ ಭವಿಷ್ಯವಾಣಿ ನುಡಿಯುವುದು. ಅದಕ್ಕಾಗಿ ಪೂರ್ವನಿಯೋಜಿತ ಮಾನದಂಡಗಳನ್ನು ಇಟ್ಟುಕೊಂಡು, ಅದರ ಪ್ರಕಾರವಾಗಿ ಹಿಂದಿನ ಅವಧಿಗಳಲ್ಲಿ ನಡೆದ ಘಟನೆಗಳನ್ನೂ ಮತ್ತು ಟ್ರೆಂಡ್​ಗಳನ್ನೂ ವಿಶ್ಲೇಷಿಸಬೇಕು. ಪುನರಾವರ್ತನೆಯಾಗುವ ಘಟನೆಗಳು ಮತ್ತು ಪ್ರವೃತ್ತಿಗಳಿಗೆ ಇಲ್ಲಿ ವಿಶೇಷ ಆದ್ಯತೆ. ಏಕೆಂದರೆ, ಅಂಥ ಪ್ರವೃತ್ತಿಗಳಿಗೆ ಸೈಕ್ಲಿಕಲ್/ವರ್ತಲ ರೂಪ ಇರುತ್ತದೆ. ಹಾಗಾಗಿ ಅವುಗಳನ್ನು ಮುಂಗಂಡು, ಅಂತಹ ಘಟನೆ/ಪ್ರವೃತ್ತಿಗಳನ್ನು ಎದುರಿಸಲು ಅಥವಾ ಅವುಗಳ ಲಾಭ ಪಡೆಯಲು ಸಿದ್ಧರಾಗಿರಬಹುದು. ಹಾಗಾಗಿ ಇಂತಹ ‘ಪ್ರಿಡಿಕ್ಟಿವ್ ಮಾಡೆಲ್’/ಭವಿಷ್ಯವಾಣಿ ನುಡಿಯಬಲ್ಲ ಮಾದರಿಗಳನ್ನು ತಯಾರುಮಾಡುವ ಸಂಶೋಧನೆಗಳನ್ನು ವಿಶ್ವಾದ್ಯಂತ ಆರ್ಥಿಕ ತಜ್ಞರು ಮತ್ತು ಉದ್ಯಮಿಗಳು ಹತ್ತಿರದಿಂದ ಗಮನಿಸುತ್ತಿರುತ್ತಾರೆ.

ಆ ದಿನ, ಡಾ. ಹರಿಹರನ್ ಅತ್ಯಂತ ವಿನಯದಿಂದ ಒಪ್ಪಿಕೊಂಡ ಮಾತá- ‘‘1984ರಲ್ಲಿ, ಅಂದರೆ ಮೂವತ್ತು ವರ್ಷಗಳ ಹಿಂದೆ ನಾನು ನುಡಿದ ಮೂವತ್ತು ವರ್ಷಗಳ ಭವಿಷ್ಯ ಸಂಪೂರ್ಣವಾಗಿ ಸುಳ್ಳಾಗಿದೆ. ನಾನು ಪ್ರಿಡಿಕ್ಟ್ ಮಾಡಿದೆ ಎಂದುಕೊಂಡಿದ್ದ ಏನೂ ನಿಜವಾಗಿಲ್ಲ’. ತಮಗೆ ಡಾಕ್ಟರೇಟ್ ಕೊಟ್ಟ, ತಮ್ಮ ಜೀವನದ ಅತ್ಯಂತ ಪ್ರಮುಖ ಸಂಶೋಧನೆಯನ್ನು ಸಾರಾಸಗಟಾಗಿ ವಿಫಲವಾಯಿತೆಂದು ಹೇಳುವ, ಇಷ್ಟು ನಿಷ್ಠುರವಾಗಿ ಸತ್ಯವನ್ನು ನುಡಿಯುವ ಧೈರ್ಯ ಅನೇಕರಿಗೆ ಇರುವುದಿಲ್ಲ. ತಾವು ಮುಂಗಂಡು, ಮುಂದೊಮ್ಮೆ ನನಸಾದ ಭವಿಷ್ಯದ ಬಗ್ಗೆ ಮಾತನಾಡುವುದೇ ಎಲ್ಲರಿಗೂ ಇಷ್ಟ. ಆ ಕಾರಣಕ್ಕಾಗಿ, ಡಾ. ಹರಿಹರನ್​ರ ನೇರ ನುಡಿ ಅಲ್ಲಿ ನೆರೆದಿದ್ದವರೆಲ್ಲರನ್ನೂ ನಿಬ್ಬೆರಗಾಗಿಸಿತ್ತು.

ಇಲ್ಲಿ, ಅಚ್ಚರಿಯ ಜತೆಗೇ ಆತಂಕವನ್ನೂ ಮೂಡಿಸಿದ ಇನ್ನೊಂದು ವಿಷಯ ಇತ್ತು. ಅದೇನೆಂದರೆ, ಭವಿಷ್ಯವಾಣಿ ನುಡಿಯುವುದು ಕಷ್ಟವಾಗುತ್ತಿದೆ ಎನ್ನುವುದು. ಮಾತ್ರವಲ್ಲ, ಈ ಹೊತ್ತು, ಭವಿಷ್ಯವಾಣಿ ನುಡಿಯುವುದು ಕಷ್ಟವಾಗುತ್ತಿರುವುದು ಅರ್ಥಶಾಸ್ತ್ರಜ್ಞರಿಗೆ ಮಾತ್ರವಲ್ಲ, ಎಲ್ಲ ಕ್ಷೇತ್ರದವರಿಗೂ ಎನ್ನುವುದು! ವಾಣಿಜ್ಯ, ಕೃಷಿ, ಪರಿಸರ, ತಂತ್ರಜ್ಞಾನ, ಆಟೋಟಗಳು, ರಾಷ್ಟ್ರಗಳ ನಡುವಿನ ಸಂಬಂಧಗಳು, ಅಂತರ್ಜಾಲ, ಮಾಧ್ಯಮಗಳು- ಹೀಗೆ ಯಾವ ಕ್ಷೇತ್ರವನ್ನು ನೋಡಿದರೂ ಅನಿಶ್ಚಿತತೆಯೇ ಕಾಣುತ್ತದೆ. ಮುಂದೇನಾಗುತ್ತದೆಯೋ ಬಲ್ಲವರು ಯಾರು ಎನ್ನುವ ಸ್ಥಿತಿ ಎಲ್ಲೆಲ್ಲೂ ಏರ್ಪಟ್ಟಿದೆ.

ಪ್ರಗತಿಯ ಪಥದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಜಗತ್ತಿನಲ್ಲಿ ಭವಿಷ್ಯವನ್ನು ಮುಂಗಾಣಲು ಸಾಧ್ಯವಾಗದಿದ್ದರೆ, ಸಮರ್ಪಕವಾಗಿ ಯೋಜನೆಗಳನ್ನು ರೂಪಿಸುವುದಾದರೂ ಹೇಗೆ? ಏನಾಗಬಹುದು ಎನ್ನುವುದರ ಬಗ್ಗೆ ಅರಿವೇ ಇರದಿದ್ದರೆ ಅದರ ಮೇಲೆ ನಿಯಂತ್ರಣ ಸಾಧಿಸುವುದಾದರೂ ಹೇಗೆ? ಮೂವತ್ತು ವರ್ಷಗಳನ್ನು ಮುಂಗಾಣುವುದು ದೂರದ ಮಾತು. ಮುಂದಿನ ಹತ್ತು ವರ್ಷಗಳ ಮೇಲಾದರೂ ನಮಗೆ ನಿಯಂತ್ರಣವಿದೆಯೇ? ಹೀಗೆ ಅನಿಶ್ಚಿತವಾಗುತ್ತಿರುವ ಜಾಗತಿಕ ಸಂಗತಿಗಳ ಪಟ್ಟಿ ದೊಡ್ಡದಾದರೂ, ವಿಷಯ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಗ್ರಹಿಸಲು, ಕೆಲವು ತುಣುಕುಗಳನ್ನು ನೋಡಿ-

ಕೃಷಿ: ಇನ್ನು 10 ವರ್ಷಗಳಲ್ಲಿ ಜಗತ್ತಿಗೆ ಸಾಕಾಗುವಷ್ಟು ಕೃಷಿ ಉತ್ಪನ್ನಗಳನ್ನು ಬೆಳೆಯಲು ಸಾಕಾಗುವಷ್ಟು ಭೂಮಿ ಉಳಿದಿರುತ್ತದೆಯೇ? ಅಷ್ಟು ಮಂದಿ ರೈತರು ಉಳಿದಿರುತ್ತಾರೆಯೇ? ಯಂತ್ರ-ತಂತ್ರಗಳು ಆಳುಗಳ ಜಾಗವನ್ನು ಆಕ್ರಮಿಸಿಕೊಂಡು, ಹೊಲಗದ್ದೆಗಳು ಯುದ್ಧಭೂಮಿಯಂತೆ ಕಾಣುವುದೇ? ಆಹಾರದ ಕೊರತೆಯನ್ನು ನೀಗಲು, ಷಾರ್ಟ್​ಕಟ್ ಬಳಸಿ, ಕುಲಾಂತರಿ ಆಹಾರಗಳನ್ನು ನಾವು ಒಪ್ಪಿಕೊಂಡರೆ, ಮುಂದೆ ಮನುಜರಾದ ನಾವೂ ಬೇರೇನೋ ಆಗಿ ಕುಲಾಂತರಗೊಂಡು ಕಂಗಾಲಾಗುವ ಅಪಾಯ ಇದೆಯೇ?

ಆರ್ಥಿಕತೆ: ಅಮೆರಿಕ ಮುಳುಗೆದ್ದಿದೆ. ಯುರೋಪ್ ಮುಳುಗುತ್ತಿದೆ. ಮಿಕ್ಕ ಎಷ್ಟೋ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಹದಗೆಟ್ಟು ಕುತ್ತಿಗೆಯ ಮಟ್ಟಕ್ಕೆ ನೀರು ಬಂದಿದೆ. ಮುಂದಿನ ಸೂಪರ್ ಪವರ್​ಗಳೆಂದು ಬಿಂಬಿಸಲಾಗುತ್ತಿರುವ ಬ್ರಿಕ್ ರಾಷ್ಟ್ರಗಳಾದ- ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾಗಳಲ್ಲೂ ಕಾಳಿಗಿಂತ ಜೊಳ್ಳೇ ಹೆಚ್ಚು ಎಂದು ಪ್ರತಿಪಾದಿಸಲಾಗುತ್ತಿದೆ. ಇವರ್ಬಿಟ್-ಇವರ್ಬಿಟ್-ಇವರ್ಯಾರು ಆಟ ಆರಂಭಗೊಂಡು ಎರಡು ದಶಕಗಳೇ ಕಳೆದಿವೆೆ. ಒಬ್ಬರ ಕಾಲೆಳೆಯಲು ಮತ್ತೊಬ್ಬರು ಹವಣಿಸುವ ಜಗತ್ತಿನಲ್ಲಿ, ರಾಜಕೀಯ ಆರ್ಥಿಕತೆಯನ್ನು ನಿರ್ದೇಶಿಸುತ್ತಿದೆ. ಇದರಿಂದ, ಎರಡೂ ಸೋಲುತ್ತಿವೆ. ದೇಶಗಳ ಆರ್ಥಿಕತೆಯ ವಿಷಯದಲ್ಲಂತೂ ಮುಂದಿನ ಹತ್ತು ವರ್ಷಗಳು ಥ್ರಿಲ್ಲರ್ ಸಿನಿಮಾದಷ್ಟು ರೋಚಕ. ಡಾಲರ್, ಪೌಂಡ್, ಯುರೋ, ಯೆನ್, ಯಾನ್​ಗಳ ಭರ್ಜರಿ ಜಟಾಪಟಿಯಲ್ಲಿ ಯಾರು ಗೆದ್ದು ಯಾರು ಸೋತರೂ ವಿಶ್ವ ಆರ್ಥಿಕತೆ ನಡುಗುತ್ತದೆ!

ಅಂತರ್ಜಾಲ ಮತ್ತು ಮಾಧ್ಯಮಗಳು: 10 ವರ್ಷಗಳಲ್ಲಿ ಮಾಧ್ಯಮಗಳು ಅಂತರ್ಜಾಲದಲ್ಲಿ ವಿಲೀನಗೊಂಡುಬಿಡುವುದೇ? ಸಮೂಹ ಮಾಧ್ಯಮಕ್ಕೂ ಸಾಮಾಜಿಕ ಮಾಧ್ಯಮಕ್ಕೂ ವ್ಯತ್ಯಾಸವೇ ಇಲ್ಲವಾಗಿ, ಸುದ್ದಿ ಎನ್ನುವುದು ಸಂಪೂರ್ಣವಾಗಿ ಸಾಮಾಜಿಕ ಹರಟೆಯಾಗಿ ಬದಲಾಗುವುದೇ? 140 ಅಕ್ಷರಗಳ ಟ್ವೀಟ್​ಗಳನ್ನು ಮೊಬೈಲ್​ಗಳಿಗೆ ಉಣಿಸಲು 24/7 ವರದಿಗಾರರು ಹವಣಿಸುವ ದೃಶ್ಯ ಕಾಣುವುದೇ? ಅಷ್ಟಾಗಿ, ಇನ್ನು ಹತ್ತು ವರ್ಷಗಳಲ್ಲಿ ಇಂದಿನ ಅತಿದೊಡ್ಡ ಸಾಮಾಜಿಕ ಮಾಧ್ಯಮವಾದ ಫೇಸ್​ಬುಕ್ ಇರುತ್ತದೆಯೇ? ಇಲ್ಲವಾದಲ್ಲಿ ನಾವು ಅಪ್​ಲೋಡ್ ಮಾಡಿದ ಫೋಟೋಗಳ, ನಮ್ಮ ಇಡೀ ಜೀವನದ ಎಲ್ಲ ವೃತ್ತಾಂತಗಳ ಕಥೆ ಏನು? ಇವೆಲ್ಲದರ ಪರಿಣಾಮವಾಗಿ ಜನರು ಎಲ್ಲವನ್ನೂ ಹಂಚಿಕೊಳ್ಳುವ ಬಹಿಮುಖಿಗಳಾಗುತ್ತಾರೋ ಅಥವಾ ಕುತೂಹಲಿ ಕಣ್ಣುಗಳಿಗೆ ಹೆದರಿ ತಮ್ಮ ಖಾಸಗಿ ಜೀವನವನ್ನು ಅವಿತಿಡುವ ಅಂತಮುಖಿಗಳಾಗುತ್ತಾರೋ.

ಆಟೋಟಗಳು: ವಿವಾದಗಳಿರದ ಆಟೋಟ ಸ್ಪರ್ಧೆಗಳನ್ನು ನೋಡಿ ಅದೆಷ್ಟು ಕಾಲವಾಯಿತೋ! ಒಂದೆಡೆ ಆಟವನ್ನು ನಿಯಂತ್ರಿಸುವವರ ಮೋಸವಾದರೆ, ಇನ್ನೊಂದೆಡೆ, ಸೈಕ್ಲಿಂಗ್​ನಿಂದ ಹಿಡಿದು ಫುಟ್​ಬಾಲ್​ವರೆಗೆ ಅಥ್ಲೀಟ್​ಗಳಿಂದ ಹಿಡಿದು ಈಜುಗಾರರವರೆಗೆ ಮಾದಕದ್ರವ್ಯಗಳ ಸುಳಿಯಲ್ಲಿ ಎಲ್ಲರೂ ಸಿಲುಕಿದ್ದಾರೆ! ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ಧವಿರುವವರು ಒಂದೆಡೆಯಾದರೆ; ಇನ್ನೊಂದೆಡೆ, ಗೆಲ್ಲಲು ಎಷ್ಟು ದುಡ್ಡೋ, ಸೋಲಲು ಅದಕ್ಕಿಂತಲೂ ಹೆಚ್ಚು! ಮುಂದಿನ ಹತ್ತು ವರ್ಷಗಳಲ್ಲಿ ಆಟೋಟಗಳಲ್ಲಿನ ಗೆಲುವು-ಸೋಲುಗಳ ಸಮೀಕರಣ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಏಕೆಂದರೆ, ಈಗಾಗಲೇ ಸೋತವರಿಗೆ ಹೆಚ್ಚು ಲಾಭವಾಗುತ್ತಿದೆ!

ವಿಜ್ಞಾನ-ತಂತ್ರಜ್ಞಾನ: ಪ್ರಗತಿಯ ಬೆನ್ನೆಲುಬಾದ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಜೀವನವನ್ನು ಸಂಶೋಧನೆ ಹಂತದಲ್ಲೇ ತಲುಪುತ್ತಿವೆ. ಉದಾಹರಣೆಗೆ ಮೊಬೈಲ್​ಗಳಿಂದ, ಮೊಬೈಲ್ ಟವರ್​ಗಳಿಂದ ಆಗುವ ಹಾನಿ ಏನು ಎನ್ನುವುದನ್ನು ವಿಜ್ಞಾನಿಗಳು ಅರ್ಥ ಮಾಡಿಕೊಳ್ಳುವ ಮೊದಲೇ ಎಲ್ಲರ ಕೈಲೂ ಮೊಬೈಲಿದೆ ಮತ್ತು ಮನೆಯ ಪಕ್ಕದಲ್ಲೇ ಪ್ರಬಲ ಮತ್ತು ಅಪಾಯಕಾರಿ ರೇಡಿಯೇಷನ್ ಬೀರುವ ಟವರ್​ಗಳಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಉದ್ಯಮ ವಿಜ್ಞಾನವನ್ನು ನಿರ್ದೇಶಿಸುತ್ತಿದೆ. ಇದರಿಂದ ಪರಿಸರಕ್ಕೂ ಮನುಷ್ಯರ ಜೀವಕ್ಕೂ ಅಪಾಯ ವೃದ್ಧಿಸುತ್ತಿದೆ. ಇನ್ನು ಹತ್ತು ವರ್ಷಗಳಲ್ಲಿ ನಮ್ಮ ಅತಿಬುದ್ಧಿವಂತಿಕೆಗೆ ನಾವು ತೆರಬೇಕಾದ ಬೆಲೆ ಇನ್ನೆಷ್ಟೋ?

ಒಟ್ಟಿನಲ್ಲಿ, ವಾಣಿಜ್ಯ-ತಂತ್ರಜ್ಞಾನಗಳಾದಿಯಾಗಿ ಜಗತ್ತಿನ ಎಲ್ಲ ಚಟುವಟಿಕೆಯ ವೇಗವೂ ನಾವು ಊಹಿಸಲೂ ಆಗದಷ್ಟು ಹೆಚ್ಚಿನ ಗತಿಯಲ್ಲಿ ವೃದ್ಧಿಸುತ್ತಿರುವುದೇ ಈ ಅನಿಶ್ಚಿತತೆಗೆ ಮೂಲ ಕಾರಣ. ಆದರೆ, ಇದನ್ನು ಗ್ರಹಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ, ಪ್ರಗತಿಯ ವೇಗ ಮತ್ತು ಅಪಾಯದ ನಡುವೆ ಇರುವ ನೇರ ಸಂಬಂಧವನ್ನು ಮನಸ್ಸಿನಲ್ಲಿ ಸಮರ್ಪಕವಾಗಿ ಚಿತ್ರಿಸಿಕೊಳ್ಳಲು ಈ ಉದಾಹರಣೆ ಸಹಾಯಕವಾಗಬಹುದೇನೋ- ಈವರೆಗೂ ಸರಿಯಾದ ರಸ್ತೆಯೇ ಇರದಿದ್ದ ಕಡೆ ದೊಡ್ಡದೊಂದು ಹೆದ್ದಾರಿ ನಿರ್ವಣಗೊಂಡಿತು ಎಂದಿಟ್ಟುಕೊಳ್ಳಿ. ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದ ವಾಹನಗಳು ಈಗ, 120 ಕಿಲೋಮೀಟರ್ ವೇಗದಲ್ಲಿ ಹೋಗುತ್ತವೆ. ಸುತ್ತಲಿನ ಊರಿನವರ ಮನಸ್ಸಿನಲ್ಲಿ ವಾಹನಗಳ ವೇಗ ಹೆಚ್ಚಾಗಿದೆ ಎಂದೇನೋ ಅಚ್ಚೊತ್ತಿರುತ್ತದೆ. ಆದರೆ, ಅದು ಆರು ಪಟ್ಟು ಹೆಚ್ಚಾಗಿದೆ ಎನ್ನುವುದು ಗ್ರಹಿಕೆಗೆ ಬಂದಿರುವುದಿಲ್ಲ. ಹೆದ್ದಾರಿ ನಿರ್ಮಾಣ ಆದ ನಂತರ ಅಪಘಾತಗಳ ಪ್ರಮಾಣ ಹೆಚ್ಚಾದಾಗ ದೊಡ್ಡ ಕಾರು, ಬಸ್ಸುಗಳ ಚಾಲಕರನ್ನು ಎಗ್ಗಿಲ್ಲದೆ ಬೈಯ್ಯುತ್ತೇವೆ.

ವಾಸ್ತವದಲ್ಲಿ ಆಗಿರುವುದೇನೆಂದರೆ, ವಾಹನದ ವೇಗ ಆರು ಪಟ್ಟು ಹೆಚ್ಚುವ ಪರಿಸ್ಥಿತಿ ನಿರ್ವಣಗೊಂಡಿರುವುದು. ಅದಕ್ಕೆ ಹೊಂದುಕೊಳ್ಳುವ ಮನಸ್ಥಿತಿ ನಿರ್ವಣವಾಗಿಲ್ಲದೆ ಇರುವುದು! ರಸ್ತೆ ದಾಟಲು ಮುಂಚೆ, ಆರು ಸೆಕೆಂಡ್ ಸಿಗುತ್ತಿದ್ದಾಗ, ಗುಡುಗುಡು ಓಡಿ ರಸ್ತೆ ದಾಟಿಬಿಡುತ್ತಿದ್ದ ವ್ಯಕ್ತಿ, ಈಗ ಅಷ್ಟೇ ದೂರದಲ್ಲಿರುವ ಅದೇ ವಾಹನ ಒಂದೇ ಸೆಕೆಂಡ್​ನಲ್ಲಿ ತನಗೆ ಬಂದು ಅಪ್ಪಳಿಸಲಿದೆ ಎನ್ನುವುದನ್ನು ಸುಲಭವಾಗಿ ಮುಂಗಾಣಲಾರ. ವಾಹನದ ವೇಗ ಹೆಚ್ಚಿರುವುದು ಅವನಿಗೆ ಗೊತ್ತು. ಆದ್ದರಿಂದ, ಹಿಂದಿಗಿಂತಲೂ ಹೆಚ್ಚಿನ ವೇಗದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಾನೆ. ಆದರೆ, ಹಿಂದಿಗಿಂತಲೂ ‘ಆರು ಪಟ್ಟು ಹೆಚ್ಚಿನ ವೇಗ’ದಲ್ಲಿ ವಾಹನ ಬರುವುದು ಆತನ ಗ್ರಹಿಕೆಗೆ ನಿಲುಕದ್ದು. ಜತೆಗೆ, ಹಿಂದಿಗಿಂತ ಆರು ಪಟ್ಟು ಹೆಚ್ಚು ತನ್ನ ವೇಗವನ್ನು ಆತ ವೃದ್ಧಿಸಿಕೊಳ್ಳಲಾರ. ಹಾಗಾಗಿಯೇ ಅಪಘಾತಗಳು ಹೆಚ್ಚಾಗುವುದು!

ಇಂದಿನ ತಂತ್ರಜ್ಞಾನ ಯುಗದಲ್ಲಿ ನಮಗೆ ಆಗಿರುವುದು ಅದೇ! ಎಲ್ಲದರ ವೇಗ ಹೆಚ್ಚಿರುವುದರ ಅರಿವಿದೆ. ಆದರೆ, ಎಷ್ಟರ ಮಟ್ಟಿಗೆ ಹೆಚ್ಚಿದೆ ಎನ್ನುವುದನ್ನು ನಮ್ಮ ಪರಿಮಿತವಾದ ಮನಸ್ಸು ಗ್ರಹಿಸಲಾರದಾಗಿದೆ. ಹಾಗಾಗಿಯೇ ಮಾಹಿತಿಯುಗದಲ್ಲಿ ಅವಘಡಗಳು ಹೆಚ್ಚುತ್ತಿವೆ. ಕನಿಷ್ಟಪಕ್ಷ, ನಾವು ಅದರ ವೇಗಕ್ಕೆ ಹೊಂದುಕೊಳ್ಳಲಾಗದೆ ಒದ್ದಾಡುತ್ತಿದ್ದೇವೆ.

ಇದೆಲ್ಲದರ ಕೊನೆಯಲ್ಲಿ ಬೆಳಕಿದೆಯೇ? ಯಾರಾದರೂ ‘ದೆರ್ ಇಸ್ ಲೈಟ್ ಅಟ್ ದಿ ಎಂಡ್ ಆಫ್ ದಿ ಟನಲ್’ (ಸುರಂಗಮಾರ್ಗದ ತುದಿಯಲ್ಲಿ ಬೆಳಕಿದೆ) ಎಂದು ಹೇಳಿದಾಗಲೆಲ್ಲ ಕ್ರಿಕೆಟಿಗ ನವಜೋತ್ ಸಿದ್ಧು ಹೇಳುವ ಎಚ್ಚರಿಕೆಯ ಮಾತೇ ನೆನಪಾಗುತ್ತದೆ. ಸುರಂಗದ ಕೊನೆಯಲ್ಲಿ ಬೆಳಕಿರುವುದೇನೋ ನಿಜ. ಆದರೆ, ಆ ಬೆಳಕು ನಿಮ್ಮ ಕಡೆಗೇ ಬರುತ್ತಿರುವ ಬುಲೆಟ್ ಟ್ರೇನ್​ನದ್ದಾಗಿರಬಹುದು!

ಆದರೆ ಧೃತಿಗೆಡಬೇಕಾಗಿಲ್ಲ. ಇದು ಮಾಹಿತಿಯುಗ. ತಂತ್ರಜ್ಞಾನ ಮತ್ತು ಪ್ರಗತಿಯ ವೇಗ ಹೆಚ್ಚಿದಷ್ಟೂ, ಅದನ್ನು ನಿಯಂತ್ರಿಸುವ ಮಾರ್ಗಗಳೂ ಸೃಷ್ಟಿಗೊಳ್ಳಲಿವೆ. ಈ ನಿಟ್ಟಿನಲ್ಲಿ, ನಿಯಂತ್ರಣ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದರ ಬಗ್ಗೆ ನಾವು ಜಾಗೃತವಾಗುತ್ತಿರುವುದು ಒಳ್ಳೆಯ ಆರಂಭದ ಸೂಚನೆ.

ಮುಂದೊಮ್ಮೆ, ನಮಗೆ ಸಿದ್ಧು ಹೇಳಿದ ಬುಲೆಟ್ ಟ್ರೇನ್ ಕಾಣದಿದ್ದರೂ, ಅದು ನಮ್ಮನ್ನು ತಲುಪುತ್ತಿರುವ ವೇಗ ಗ್ರಹಿಕೆಗೆ ಬಾರದಿದ್ದರೂ, ಅದಕ್ಕೆ ನಾವು ಕಂಡೇವು! ಅದು ಬಂದು ನಮಗೆ ಅಪ್ಪಳಿಸುವ ಮೊದಲೇ, ತಂತ್ರಜ್ಞಾನದ ಮುಖೇನ ತಾನೇ ಗ್ರಹಿಸಿ ಚಕ್ಕನೆ ನಿಂತೀತು! ಆದರೆ, ಅಲ್ಲಿಯವರೆಗೂ, ಜೋಪಾನ!

Leave a Reply

Your email address will not be published. Required fields are marked *

Back To Top