Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಇಂದಿಗೂ ಮೈಲಿಗಲ್ಲಾಗಿಯೇ ಉಳಿದ ಶರಪಂಜರ!

Friday, 18.05.2018, 3:02 AM       No Comments

| ಗಣೇಶ್​ ಕಾಸರಗೋಡು

60-70ರ ದಶಕದಲ್ಲಿ ಮಿಂಚಿ ಮರೆಯಾದ ಮಹಾತಾರೆ ಸಾವಿತ್ರಿಯವರ ಬದುಕಿನ ಕಥೆಯಾಧರಿಸಿ ತಯಾರಾದ ‘ಮಹಾನಟಿ’ ಚಿತ್ರವು ತೆರೆಮೇಲೆ ಬರುತ್ತಿರುವುದು ಇದೇ ಮೊದಲಲ್ಲ. ಬೆಳ್ಳಿತೆರೆಯ ತಾರೆಯ ಬದುಕಿನ ಎಲ್ಲ ಏರಿಳಿತಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟ ‘ಮಹಾನಟಿ’ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ಇಂಥ ಪ್ರಯತ್ನಗಳು ಕನ್ನಡದಲ್ಲೂ ನಡೆದಿವೆ. ಅದರಲ್ಲೂ ನಮ್ಮ ‘ಮಿನುಗುತಾರೆ’ ಕಲ್ಪನಾ ಅವರ ಬದುಕಿನ ಕಥೆ ಸಾವಿತ್ರಿಯ ಬದುಕಿನ ಕಥೆಯನ್ನೂ ಮೀರಿಸುವಂಥದ್ದು. ಕೆಲವರು ಇದನ್ನೇ ಹಸಿಬಿಸಿಯಾಗಿ ಸೆಲ್ಯೂಲಾಯಿಡ್​ಗಿಳಿಸಲು ಪ್ರಯತ್ನಪಟ್ಟು ವಿಫಲರಾದ ಉದಾಹರಣೆ ನಮ್ಮಲ್ಲಿದೆ. ಸಮರ್ಥ ನಿರ್ದೇಶಕರೊಬ್ಬರು ನಮ್ಮ ಈ ‘ಮಿನುಗುತಾರೆ’ಯ ಬದುಕಿನ ಕಥೆಯನ್ನು ಬೆಳ್ಳಿತೆರೆಗೆ ತಂದರೆ ಅದೊಂದು ಅಪರೂಪದ ದಾಖಲೆಯಾದೀತು.

ಆದರೆ ನಾನಿಲ್ಲಿ ಹೇಳ ಹೊರಟಿರುವುದು ಕಲ್ಪನಾ ನಟಿಸಿದ ಎವರ್​ಗ್ರೀನ್ ‘ಶರಪಂಜರ’ ಚಿತ್ರದ ಸ್ವಾರಸ್ಯಕರ ಮತ್ತು ರೋಚಕ ವಿವರಗಳನ್ನು..

ಬದುಕಿದ್ದಿದ್ದರೆ ಕಲ್ಪನಾ ವಯಸ್ಸು 75 ದಾಟಿರುತ್ತಿತ್ತು. ಅವರು ನಟಿಸಿದ ‘ಶರಪಂಜರ’ ಚಿತ್ರ ತೆರೆಕಂಡದ್ದು 1971ರಲ್ಲಿ. ಆಗ ಕಲ್ಪನಾ ವಯಸ್ಸು 28. ‘ಶರಪಂಜರ’ ಚಿತ್ರ ತೆರೆಕಂಡು ಆಗಲೇ 47 ವರ್ಷ ದಾಟಿದೆ. ಕಲ್ಪನಾ ಅವರ ಅಭಿನಯದ ಉತ್ತುಂಗ ಈ ಚಿತ್ರ. ಈಗಲೂ ಅಷ್ಟೇ, ಯಾವ ನಟಿಯರನ್ನೇ ಕೇಳಿ ನೋಡಿ, ‘ನೀವು ಎಂಥ ಪಾತ್ರ ಇಷ್ಟಪಡ್ತೀರಿ’ ಅಂತ. ತಕ್ಷಣದ ಪ್ರತಿಕ್ರಿಯೆ; ‘ಶರಪಂಜರ’ ಚಿತ್ರದಲ್ಲಿ ಕಲ್ಪನಾ ನಿರ್ವಹಿಸಿದಂಥ ಪಾತ್ರ…’- ಇದು ಕಲ್ಪನಾ ತಾಕತ್ತು. ಈ ತಾಕತ್ತಿಗೆ ಸಾಣೆ ಹಿಡಿದು ಅದಕ್ಕೊಂದು ರೂಪು ಕೊಟ್ಟದ್ದು ಪುಟ್ಟಣ್ಣ ಕಣಗಾಲ್. ಅವರಿಗೆ ಸಾಥ್ ನೀಡಿದ್ದು ದೊಡ್ಡಬಳ್ಳಾಪುರದ ರೇಷ್ಮೆ ವ್ಯಾಪಾರಿ ಕೆ.ಸಿ.ಎನ್. ಗೌಡರು.

ಹಾಗೆ ನೋಡಿದರೆ ಪುಟ್ಟಣ್ಣ ಕಣಗಾಲ್ ಅವರಿಗೆ ‘ನಾಗರಹಾವು’ ಚಿತ್ರಕ್ಕಿಂತಲೂ ಮೊದಲೇ ದೊಡ್ಡ ಹೆಸರು ತಂದು ಕೊಟ್ಟ ಚಿತ್ರಗಳೆಂದರೆ, ‘ಗೆಜ್ಜೆಪೂಜೆ’, ‘ಬೆಳ್ಳಿಮೋಡ’, ‘ಶರಪಂಜರ’. ಅದರಲ್ಲೂ ‘ಶರಪಂಜರ’ ಚಿತ್ರ ಕನ್ನಡ ಚಿತ್ರೋದ್ಯಮದ ಮೈಲಿಗಲ್ಲಾಯಿತು. ಪುಟ್ಟಣ್ಣ ಅವರ ಯಶಸ್ಸು ಆಕಸ್ಮಿಕವಲ್ಲ ಎನ್ನುವುದನ್ನು ಸಾಬೀತು ಪಡಿಸಿದ ಚಿತ್ರ ‘ಶರಪಂಜರ’. ಮಡಿಕೇರಿಯ ಹಸಿರು ಗುಡ್ಡದ ಮೇಲಿಂದ ಲಾರಿಗಟ್ಟಲೆ ಕಿತ್ತಾಳೆಯನ್ನು ಉರುಳಿಸಿ ಆ ಎಫೆಕ್ಟ್ ಹೇಗಿರುತ್ತದೆ?- ಈ ಕಲ್ಪನೆ ಬಂದದ್ದೇ ತಡ ಪುಟ್ಟಣ್ಣ ಸಿದ್ಧರಾಗಿಯೇ ಬಿಟ್ಟರು. ಹತ್ತು ಲಾರಿಗಳ ತುಂಬ ಕಿತ್ತಳೆಗೆ ಆರ್ಡರ್ ಮಾಡಿದ ಪುಟ್ಟಣ್ಣ ಗುಡ್ಡದ ತುದಿಯಲ್ಲಿ ನಿಂತರು. ನೋಡನೋಡುತ್ತಿರುವಂತೆಯೇ ಗುಡ್ಡದಿಂದ ಉರುಳುರುಳಿ ಬೀಳುವ ಕಿತ್ತಳೆಯ ದೃಶ್ಯ ಕಣ್ಣ ಮುಂದಿತ್ತು. ‘ಸಂದೇಶ ಮೇಘ ಸಂದೇಶ..’- ಎಂಬ ಹಾಡಿನ ಚಿತ್ರೀಕರಣಕ್ಕಾಗಿ ಪುಟ್ಟಣ್ಣ ಇಂಥದ್ದೊಂದು ಕಲ್ಪನೆ ಮಾಡಿಕೊಂಡಾಗಲೇ ಯೂನಿಟ್ ಹುಡುಗರಿಂದಾಗಿ ಸುದ್ದಿ ಮಡಿಕೇರಿ ದಾಟಿ ಬೆಂಗಳೂರು ಸೇರಿತ್ತು! ಚಿತ್ರೀಕರಣ ಆರಂಭಿಸುವ ಮೊದಲೇ ವಿವಾದ ಎದ್ದುಬಿಟ್ಟಿತು. ‘ಹಠಮಾರಿ ಪುಟ್ಟಣ್ಣ ಅವರು ವಿನಾಕಾರಣ ಖರ್ಚು ಮಾಡಿಸುತ್ತಿದ್ದಾರೆ. ಹತ್ತು ಲಾರಿಯಷ್ಟು ಕಿತ್ತಳೆ ತರಿಸಿ ಗುಡ್ಡದಿಂದ ಉರುಳಿಸಿ ಅದ್ಯಾವ ಎಫೆಕ್ಟ್ ತರುತ್ತಾರೋ?’ – ಎನ್ನುವ ಸುದ್ದಿ ಪತ್ರಿಕೆಗಳ ಆ ಕಾಲದ ಗಾಸಿಪ್ ಕಾಲಂಗಳಿಗೆ ಆಹಾರವಾಗಿತ್ತು! ಪುಟ್ಟಣ್ಣ ಕಿಡಿಕಿಡಿ. ಹಠಬಿಡದ ಅವರು ಕಿತ್ತಳೆಯನ್ನು ಗುಡ್ಡದ ಮೇಲಿಂದ ಉರುಳಿಸಿಯೇ ಬಿಡುತ್ತಾರೆ. ನಾಲ್ಕು ದಿನಗಳ ಕಾಲ ಚಿತ್ರಿಸಿದ ಈ ಸನ್ನಿವೇಶದ ಎಫೆಕ್ಟ್ ಏನು ಎನ್ನುವುದನ್ನು ಸಿನಿಮಾ ನೋಡಿಯೇ ಸವಿಯಬೇಕು. ಎದ್ದ ವಿವಾದಗಳಿಗೆ ಪುಟ್ಟಣ್ಣ ನೀಡಿದ ತಿರುಗೇಟು ಈ ಸನ್ನಿವೇಶ! ಇಷ್ಟಕ್ಕೂ ‘ಶರಪಂಜರ’ ಚಿತ್ರಕ್ಕಾಗಿ ಖರ್ಚಾದ ಒಟ್ಟು ಮೊತ್ತ 10 ಲಕ್ಷ ರೂ.! ಇದು 1971ರ ಕಥೆ, ಅಂದರೆ ಸುಮಾರು 47 ವರ್ಷಗಳ ಹಿಂದಿನ ಬಜೆಟ್. ಈಗ ಇದರ ಮೌಲ್ಯ ಎಷ್ಟಿರಬಹುದು ನೀವೇ ಲೆಕ್ಕ ಹಾಕಿ ನೋಡಿ!

ತಮ್ಮ ಚಿತ್ರದ ಸಂಗೀತ ಸಂಯೋಜನೆಗಾಗಿ ಒಬ್ಬರನ್ನೇ ನೆಚ್ಚಿ ಕೂತವರಲ್ಲ ಪುಟ್ಟಣ್ಣ ಕಣಗಾಲ್. ಎಂ.ರಂಗಾರಾವ್, ವಿಜಯಭಾಸ್ಕರ್, ಆರ್. ರತ್ನ… ಯಾರೇ ಆದರೂ ಪರವಾಗಿಲ್ಲ. ತಮಗೆ ಬೇಕಾದ ಸಂಗೀತವನ್ನು ತೆಗೆಸುವುದಷ್ಟೇ ಅವರ ಗುರಿ. ಹೀಗಾಗಿ ‘ಶರಪಂಜರ’ ಚಿತ್ರದ ಸಂಗೀತ ಸಂಯೋಜನೆಗಾಗಿ ಪುಟ್ಟಣ್ಣ ಆಯ್ಕೆ ಮಾಡಿಕೊಂಡದ್ದು ಜಿಗರಿ ದೋಸ್ತ್ ವಿಜಯಭಾಸ್ಕರ್ ಅವರನ್ನು ಮತ್ತು ಗೀತರಚನೆಗಾಗಿ ಆಯ್ಕೆ ಮಾಡಿಕೊಂಡದ್ದು ಮತ್ತೊಬ್ಬ ದೋಸ್ತ್ ವಿಜಯನಾರಸಿಂಹ ಅವರನ್ನು. ಮೊದಲೇ ಹೇಳಿದ ಹಾಗೆ ಈ ಚಿತ್ರದ ನಿರ್ವಪಕರಾದ ಕೆ.ಸಿ.ಎನ್. ಗೌಡರು ಮಹಾ ಪ್ರಾಕ್ಟಿಕಲ್ ಮನುಷ್ಯ. ವಾದ ವಿವಾದ ಏನೇ ನಡೆದರೂ ಅದಕ್ಕೆ ಕಿವಿಗೊಟ್ಟವರಲ್ಲ. ಅವರಿಗೆ ಪುಟ್ಟಣ್ಣನವರ ಕೆಲಸದ ಮೇಲೆ ನಂಬಿಕೆಯಿತ್ತು. ಹೀಗಾಗಿ ಚಿತ್ರೀಕರಣದ ಸಮಯದಲ್ಲಿ ಚಕಾರವೆತ್ತದೆ ಸಹಕರಿಸುತ್ತ ಬಂದರು. ಪುಟ್ಟಣ್ಣ ಅವರ ನಿರ್ದೇಶನ, ಕಲ್ಪನಾ ಅವರ ಅಭಿನಯ ಮತ್ತು ಕಾದಂಬರಿಕಾರ್ತಿ ತ್ರಿವೇಣಿಯವರ ಕೃತಿ ಮೇಲಿನ ಅಪಾರ ನಂಬಿಕೆಯಿಂದಾಗಿ ಗೌಡರು ನೀರಿನಂತೆ ಹಣ ಸುರಿದರು! ‘ಶರಪಂಜರ’ ಒಂದು ಮನೋವಿಶ್ಲೇಷಣಾತ್ಮಕ ಕಥೆ ಹೊಂದಿರುವ ಚಿತ್ರ. ಕಾದಂಬರಿಯಲ್ಲಿ ತ್ರಿವೇಣಿಯವರು ಅದನ್ನು ಅಕ್ಷರಗಳಲ್ಲಿ ತುಂಬ ಸೊಗಸಾಗಿ ವಿವರಿಸಿರಬಹುದು. ಆದರೆ ದೃಶ್ಯರೂಪಕ್ಕೆ ಇದನ್ನು ತರುವುದೊಂದು ಸವಾಲೇ ಸರಿ. ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ದೃಶ್ಯರೂಪಕ್ಕೆ ಅಳವಡಿಸಿಕೊಂಡವರು ಪುಟ್ಟಣ್ಣ ಕಣಗಾಲ್. ಇದೊಂದು ದೃಶ್ಯ ಕಾವ್ಯವೂ ಹೌದು. ಇಲ್ಲಿ ಒಂದು ಮುಖ್ಯ ವಿಚಾರವನ್ನು ಹೇಳಲೇಬೇಕು. ಅದೆಂದರೆ, ಚಿತ್ರೀಕರಣ ಕಾಡೊಂದರಲ್ಲಿ ನಡೆದಿದ್ದಾಗ ಕಾಡ್ಗಿಚ್ಚು ಹರಡಿದ್ದು! ಮಡಿಕೇರಿ ಬಳಿಯ ಕಾಡೊಂದರಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಪಕ್ಕದ ಕಾಡಿಗೆ ಬೆಂಕಿ ಬಿತ್ತು. ಮೈ ಸುಡುವ ಶಾಖದ ನಡುವೆಯೂ ಪುಟ್ಟಣ್ಣ ಚಿತ್ರೀಕರಣ ನಿಲ್ಲಿಸಲಿಲ್ಲ. ತಮಗೆ ಬೇಕಾದ ದೃಶ್ಯವನ್ನು ಚಿತ್ರೀಕರಿಸಿದ ಮೇಲೆ ಛಾಯಾಗ್ರಾಹಕ ಡಿ.ವಿ. ರಾಜಾರಾಮ್ ಬಳಿ ಆ ಕಾಡ್ಗಿಚ್ಚನ್ನು ಚಿತ್ರೀಕರಿಸುವಂತೆ ವಿನಂತಿಸಿಕೊಂಡರು. ರಾಜಾರಾಮ್ ಅಚ್ಚರಿಯಿಂದ ಪುಟ್ಟಣ್ಣನನ್ನೇ ದಿಟ್ಟಿಸಿದರಂತೆ. ಆದರೆ ಪುಟ್ಟಣ್ಣನ ವಿನಂತಿಯನ್ನು ಅಥವಾ ಆದೇಶವನ್ನು ಮೀರುವುದುಂಟೇ? ರಾಜಾರಾಮ್ ಆ ಭಯಂಕರ ಕಾಡ್ಗಿಚ್ಚನ್ನು ತಮ್ಮ ಕ್ಯಾಮರಾದಲ್ಲಿ ತುಂಬಿಕೊಂಡರು. ಈ ಕಾಡ್ಗಿಚ್ಚಿನ ಭಾಗವನ್ನು ಎಲ್ಲಿ ಉಪಯೋಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅವರಿಗೆ ಇದ್ದೇ ಇತ್ತು! ಕೊನೆಗೂ ಇವರ ಕುತೂಹಲಕ್ಕೆ ತೆರೆ ಬಿದ್ದದ್ದು ಕಾಡ್ಗಿಚ್ಚು ದೃಶ್ಯವನ್ನು ‘ಬೆಟ್ಟದಾ ಕಾಡ್ಗಿಚ್ಚು ದೀಪವೇ, ಬಿರುಗಾಳಿ ಕೆಂಧೂಳಿ ಧೂಪವೇ..’ ಹಾಡಿಗೆ ಈ ರುದ್ರ ಮನೋಹರ ದೃಶ್ಯವನ್ನು ಜೋಡಿಸಿದಾಗ!

ಈ ಚಿತ್ರದ ಮೊಟ್ಟ ಮೊದಲ ಸೌಹಾರ್ದ ಪ್ರದರ್ಶನ ಮದರಾಸಿನ ಚಿತ್ರಮಂದಿರವೊಂದರಲ್ಲಿ ನಡೆಯಿತು. ಪುಟ್ಟಣ್ಣನವರ ಚಿತ್ರವೆಂದರೆ ಕೆ.ಬಾಲಚಂದರ್ ಸೇರಿದಂತೆ ತಮಿಳು ಚಿತ್ರರಂಗದ ಅತಿರಥ ಮಹಾರಥರೆಲ್ಲ ಬೆಂಗಳೂರಿಗೆ ಬಂದು ಮೊದಲ ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು! ಆದರೆ ‘ಶರಪಂಜರ’ ಚಿತ್ರದ ಪ್ರದರ್ಶನವನ್ನು ಮದರಾಸಿನಲ್ಲಿ ವ್ಯವಸ್ಥೆಗೊಳಿಸಲಾಯಿತು. ತಮಿಳು ಮಾತ್ರವಲ್ಲ ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಗಣ್ಯರು ಪೈಪೋಟಿಗೆ ಬಿದ್ದವರಂತೆ ಚಿತ್ರಮಂದಿರಕ್ಕೆ ನುಗ್ಗಿ ಚಿತ್ರ ವೀಕ್ಷಿಸಿದರು. ಇಂಥವರಲ್ಲಿ ಆ ಕಾಲದ ಹಿಂದಿ ನಟಿ ಲೀನಾ ಚಂದಾವರ್ಕರ್ ಅವರೂ ಒಬ್ಬರು. ‘ಶರಪಂಜರ’ ಚಿತ್ರ ಅವರ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ಹಿಂದಿಯಲ್ಲಿ ಇದನ್ನು ತೆರೆಗೆ ತರುವ ಯೋಚನೆ ಮಾಡಿದ್ದಲ್ಲದೆ, ಕಲ್ಪನಾ ಪಾತ್ರವನ್ನು ತಾವೇ ನಿರ್ವಹಿಸುವುದಾಗಿಯೂ ಘೊಷಿಸಿಕೊಂಡಿದ್ದರಂತೆ! ಆಂದಹಾಗೆ, ‘ಶರಪಂಜರ’ ಚಿತ್ರಕ್ಕೆ ಪ್ರೇರಕ ಶಕ್ತಿಯಾಗಿ ನಿಂತವರು ಕೆ.ಸಿ.ಎನ್. ಗೌಡರು. ವರ್ಧಿನಿ ಆರ್ಟ್ಸ್ ಪಿಕ್ಚರ್ಸ್​ನ ಲಾಂಛನದಲ್ಲಿ ಈ ಚಿತ್ರವನ್ನು ನಿರ್ವಿುಸಿದವರು ಅವರ ಬಂಧು ಸಿ.ಎಸ್. ರಾಜ.

ಈ ಚಿತ್ರಕ್ಕೆ 1971-72ರ ಸಾಲಿನ ರಾಜ್ಯ ಪ್ರಶಸ್ತಿಯನ್ನು ಘೊಷಿಸಲಾಯಿತು. ಇದರೊಂದಿಗೆ ಹತ್ತಾರು ಪ್ರಶಸ್ತಿಗಳು ಪುಟ್ಟಣ್ಣ ಮತ್ತು ಕಲ್ಪನಾ ಮಡಿಲು ಸೇರಿದವು. ಆರ್ಥಿಕವಾಗಿ ಗೌಡರು ದೊಡ್ಡ ಲಾಭ ಕಂಡರು. ಬೆಂಗಳೂರಿನ ‘ಸ್ಟೇಟ್ಸ್’ ಚಿತ್ರಮಂದಿರದಲ್ಲಿ ಸತತವಾಗಿ 25 ವಾರಗಳ ಕಾಲ ಪ್ರದರ್ಶಿತವಾಯಿತು. ಈ ಬಗೆಗಿನ ಸಂಭ್ರಮದ ಸಮಾರಂಭವೊಂದು ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ನಡೆಯಿತು. ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮೊಟ್ಟಮೊದಲ ಗೌರವ ನೀಡಿದ್ದು ಚಿತ್ರ ಸಾಹಿತಿಗಳಿಗೆ! ಇದು ಪುಟ್ಟಣ್ಣನವರು ಸಾಹಿತಿಗಳ ಮೇಲಿಟ್ಟಿರುವ ಗೌರವದ ಸಂಕೇತ. ಮೊದಲ ಗೌರವದ ಕಾಣಿಕೆ ನೀಡಿದ್ದು ದಿ. ತ್ರಿವೇಣಿಯವರ ಪರವಾಗಿ ಅವರ ಮಗಳು ಮೀರಾಗೆ. ಈ ಎಲ್ಲ ಕಾರಣಗಳಿಗಾಗಿಯೇ ’ಶರಪಂಜರ’ ಚಿತ್ರವನ್ನು ಕನ್ನಡ ಚಿತ್ರೋದ್ಯಮದ ಮೈಲಿಗಲ್ಲೆಂದು ಪರಿಗಣಿಸಲಾಯಿತು…

Leave a Reply

Your email address will not be published. Required fields are marked *

Back To Top