Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಆ ಪುಟ್ಟದೇಶದ ಪ್ರಧಾನಿ ಹೇಳಿದ್ದೇನೆಂದರೆ…..

Sunday, 10.09.2017, 3:01 AM       No Comments

| ಪ್ರೋ. ಎಂ. ಕೃಷ್ಣೇಗೌಡ

ಭಾರತದ ನಕ್ಷೆ ನಮ್ಮ ಎದುರಿಗೆ ನಿಂತಿದೆಯೆಂದರೆ ಅದರ ಚಾಚಿದ ಎಡಗೈನ ಮಣಿಕಟ್ಟಿನ ಮೇಲೆ ಕೂತಂತಿರುವ ಪುಟ್ಟದೇಶ ಭೂತಾನ್. ನಕ್ಷೆಯಲ್ಲಿ ಕಾಣುವಷ್ಟು ಸುರಳೀತವಲ್ಲ ಅದು ಕೂತ ಜಾಗ! ಹಿಮಾಲಯ ಪರ್ವತಶ್ರೇಣಿಗಳಲ್ಲಿ ಹೇಗೋ ಜಾಗಮಾಡಿಕೊಂಡು ಅವುಚಿ ಕೂತಿರುವ ದೇಶ ಅದು. ಪುಟ್ಟದೇಶವಾದರೂ ಅದು ವ್ಯಾಖ್ಯಾನಿಸುವ ಬದುಕಿನ ಪರಿಕಲ್ಪನೆ ಅಮೋಘವಾದುದು.

ಮೊನ್ನೆ ಯೂಟ್ಯೂಬಿನಲ್ಲಿ ಏನನ್ನೋ ತಡಕಾಡುತ್ತಿದ್ದಾಗ ಈ ಭೂತಾನ್ ದೇಶದ ಪ್ರಧಾನಮಂತ್ರಿ ತ್ಷೆರಿಂಗ್ ಟೋಬ್​ಗೆ ತನ್ನ ದೇಶದ ಬಗ್ಗೆ ಮಾಡಿರುವ ಒಂದು ಭಾಷಣ ಸಿಕ್ಕಿತು. ಕುತೂಹಲಕ್ಕೆಂದು ಕೇಳಲು ಶುರುಮಾಡಿದರೆ, ಆ ಪ್ರಧಾನಮಂತ್ರಿಯ ಭಾಷಣದ ಧಾಟಿ, ನನ್ನಂಥವನಿಗೂ ಅರ್ಥವಾಗುವ ಸರಳ ಹಾಗೂ ಪರಿಣಾಮಕಾರಿ ಶೈಲಿ ನನ್ನನ್ನು ‘ಅತ್ತಲಿತ್ತ ಹೋಗದಂತೆ, ಮತ್ತೊಂದ ಕೇಳದಂತೆ’ ಸೆಳೆದುಬಿಟ್ಟಿತು. ಅದರಲ್ಲೂ ಭೂತಾನನ್ನು ಆಳಿದ ದೊರೆಗಳು ತಮ್ಮ ದೇಶದ ಜನರಿಗೆ ಕಟ್ಟಿಕೊಟ್ಟಿರುವ ಸರಳ ಸುಂದರ ಬದುಕು ನನ್ನ ಕಣ್ಣೆದುರಿಗೊಂದು ಕಾವ್ಯಪ್ರತಿಮೆಯನ್ನೇ ಕಡೆದು ನಿಲ್ಲಿಸಿಬಿಟ್ಟಿತು. ಈ ವಾರದ ಅಂಕಣಕ್ಕೆ ಪ್ರಧಾನಿ ತ್ಷೆರಿಂಗ್ ಭಾಷಣವೇ ಒಳ್ಳೆಯ ವಸ್ತುವೆನಿಸಿತು. ನಾನು ಈ ಭಾಷಣದ ಭಾವಾನುವಾದ ಮಾಡಿ ಅದನ್ನು ನೀವು ಓದಿದರೆ ನಿಮಗೆ ಖಂಡಿತ ಇಷ್ಟವಾಗುತ್ತದೆ ಅನ್ನಿಸಿತು. ಆದ್ದರಿಂದ 14 ನಿಮಿಷ 20 ಸೆಕೆಂಡುಗಳಷ್ಟಿರುವ ಅವರ ಇಂಗ್ಲಿಷ್ ಭಾಷಣವನ್ನು, ಸಾಧ್ಯವಾದಷ್ಟೂ ಸ್ವಾರಸ್ಯ ಕೆಡದಂತೆ ನಿರೂಪಿಸುತ್ತಿದ್ದೇನೆ. ಓದಿ ನೋಡಿ-

(ಭೂತಾನಿನ ಪ್ರಧಾನಿ ತಮ್ಮ ರಾಷ್ಟ್ರೀಯ ಉಡುಪಿನಲ್ಲೇ ಕಾಣಿಸಿಕೊಂಡು ಹೀಗೆ ಹೇಳುತ್ತಾರೆ)- ಇದು ನಮ್ಮ ರಾಷ್ಟ್ರೀಯ ಉಡುಪು. ‘ಗೊ’ ಅನ್ನುತ್ತೇವೆ ಇದನ್ನು. ಭೂತಾನಿನ ಎಲ್ಲ ಪುರುಷರೂ ಇಂಥ ಉಡುಪನ್ನೇ ಧರಿಸುತ್ತಾರೆ. ನಮ್ಮ ಮಹಿಳೆಯರ ಉಡುಪೂ ವಿಶಿಷ್ಟವೇ (ಓರ್ವ ಮಹಿಳೆ ಅವರ ರಾಷ್ಟ್ರೀಯ ಉಡುಪನ್ನು ಧರಿಸಿ ನಿಂತಿರುವ ಚಿತ್ರವನ್ನು ತೆರೆಯ ಮೇಲೆ ತೋರಿಸುತ್ತಾರೆ). ನಾವು ಕೂಡಾ ನಮ್ಮ ಮಹಿಳೆಯರ ಹಾಗೇ ಢಾಳಾದ ಬಣ್ಣದ ಉಡುಪನ್ನೇ ಧರಿಸುತ್ತೇವೆ. ನಮ್ಮ ಮಹಿಳೆಯರು ಪಾದದವರೆಗೂ ಉಡುಪು ಧರಿಸುತ್ತಾರಾದರೆ ನಾವು ಕಾಲು ಕಾಣುವಂತೆ ಉಡುಪು ಧರಿಸುತ್ತೇವೆ. ನಮ್ಮ ರಾಷ್ಟ್ರೀಯ ಉಡುಪು ವಿಶಿಷ್ಟವಾದುದು ನಿಜ; ಆದರೆ, ನಮ್ಮ ದೇಶದಲ್ಲಿ ವಿಶಿಷ್ಟ ಎಂದು ಹೇಳಬಹುದಾದದ್ದು ಅದಷ್ಟೇ ಅಲ್ಲ. ಇಂಗಾಲರಹಿತ ವಾತಾವರಣದಲ್ಲಿ ಬದುಕಬೇಕೆಂಬ ನಮ್ಮ ಪ್ರತಿಜ್ಞೆಯೂ ವಿಶಿಷ್ಟ. ನಾನಿವತ್ತು ನಿಮ್ಮೊಂದಿಗೆ ಇದನ್ನು ಕುರಿತೇ ಮಾತಾಡಲು ಬಯಸುತ್ತೇನೆ. ಅದಕ್ಕೆ ಮೊದಲು ನಮ್ಮ ದೇಶದಲ್ಲಿನ ನಮ್ಮ ಬದುಕಿನ ಸನ್ನಿವೇಶವನ್ನು ನಿಮಗೆ ಹೇಳಬೇಕು.

ಭೂತಾನ್ ಹಿಮಾಲಯದಲ್ಲಿರುವ ಒಂದು ಪುಟ್ಟದೇಶ. ಇದನ್ನು ಶಾಂಗ್ರಿ-ಲಾ ಎಂದು ಕರೆಯಲಾಗುತ್ತದೆ (ಶಾಂಗ್ರಿ-ಲಾ ಅಂದರೆ 1933ರಲ್ಲಿ ಜೇಮ್್ಸ ಹಿಲ್ಟನ್ ಎಂಬ ಬ್ರಿಟಿಷ್ ಲೇಖಕ ಬರೆದ ‘ಲಾಸ್ಟ್ ಹೊರೈಜಾನ್’ ಎಂಬ ಕಾದಂಬರಿಯಲ್ಲಿ ವರ್ಣಿತವಾಗಿರುವ ಒಂದು ಕಲ್ಪನೆಯ ಸ್ವರ್ಗಪ್ರದೇಶ. ಅದೊಂದು ರಮ್ಯಾದ್ಭುತವಾದ, ಬೌದ್ಧಸಂತರಾದ ಲಾಮಾಗಳ ಮಾರ್ಗದರ್ಶನದಲ್ಲಿ ಸಮೃದ್ಧ ಸಂಪನ್ನವಾಗಿರುವ ಪರ್ವತ ಕಣಿವೆಗಳ ನಾಡು. ಅಲ್ಲಿ ಎಲ್ಲವೂ ಆನಂದಮಯ, ಬಯಸಿದ್ದೆಲ್ಲವೂ ಕೈಯಳತೆಯಲ್ಲೇ ದೊರೆಯುತ್ತದೆಯಂತೆ. ನೆನಪಿರಲಿ, ಅದು ಕಲ್ಪನೆಯಷ್ಟೆ!). ನಾನು ಹೇಳಬಯಸುತ್ತೇನೆ, ನಮ್ಮದು ಶಾಂಗ್ರಿ-ಲಾ ಅಲ್ಲ. ನಮ್ಮ ದೇಶವೆಂದರೆ ಆನಂದವಾಗಿರುವ ಸಂತರಿಂದ ಕೂಡಿರುವ ಒಂದು ಬೌದ್ಧಮಠವಲ್ಲ. ನಾವಿರುವುದು ಕೇವಲ 7 ಲಕ್ಷ ಜನರಷ್ಟೇ. ನಾವು ಚೀನಾ ಮತ್ತು ಇಂಡಿಯಾ- ಈ ಎರಡು ಅಧಿಕ ಜನಸಂಖ್ಯೆಯ ದೊಡ್ಡದೇಶಗಳ ಮಧ್ಯೆ ಅಪ್ಪಚ್ಚಿಯಾಗಿ ಕೂತಿದ್ದೇವೆ. ನಿಜಸಂಗತಿಯೆಂದರೆ ನಾವು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ, ಅದಕ್ಕಾಗಿ ನಮ್ಮ ಕೈಲಾದುದನ್ನೆಲ್ಲಾ ಮಾಡುತ್ತಿರುವ ಒಂದು ಪುಟ್ಟದೇಶ. ನಾವಿನ್ನೂ ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ಕಾರಣ, ನಾವು ಅನುಗ್ರಹೀತರಾಗಿ ಪಡೆದಿರುವ ನಮ್ಮ ಅಸಾಮಾನ್ಯ ದೊರೆಗಳು. ಆ ದೊರೆಗಳು ನಮ್ಮ ದೇಶವನ್ನು ಅಭಿವೃದ್ಧಿಯ ದಾರಿಯಲ್ಲಿ ಕೊಂಡೊಯ್ಯಲು ಆಯಾಸವನ್ನೇ ಅರಿಯದೆ ದುಡಿದಿದ್ದಾರೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಜೀವಂತಿಕೆ- ಇವೆಲ್ಲವನ್ನೂ ಉತ್ತಮ ರಾಜ್ಯಭಾರದ ಚೌಕಟ್ಟಿನಲ್ಲಿ ಎಚ್ಚರದಿಂದ ಸರಿದೂಗಿಸಿಕೊಂಡು ಬಂದಿದ್ದಾರೆ. ಈ ಒಟ್ಟಂದದ ಅಭಿವೃದ್ಧಿಯನ್ನೇ ನಾವು ‘ಒಟ್ಟು ರಾಷ್ಟ್ರೀಯ ನೆಮ್ಮದಿ’ ಅಥವಾ ಜಿಎನ್​ಎಚ್ (ಎಟಠಠ ಘಚಠಿಜಿಟ್ಞಚ್ಝ ಏಚಟಟಜ್ಞಿಛಿಠಠ) ಎಂದು ಕರೆಯುತ್ತೇವೆ. 1970ರಷ್ಟು ಹಿಂದೆ, ನಮ್ಮ ನಾಲ್ಕನೆಯ ದೊರೆ ಎಲ್ಲರಿಗೂ ಅರಿವಾಗುವಂತೆ ಹೇಳಿದರು- ನಮ್ಮ ದೇಶಕ್ಕೆ ‘ಒಟ್ಟು ರಾಷ್ಟ್ರೀಯ ನೆಮ್ಮದಿ’ ಅನ್ನುವುದು ‘ಒಟ್ಟು ರಾಷ್ಟ್ರೀಯ ಉತ್ಪನ್ನ’ (ಎಟಠಠ ಘಚಠಿಜಿಟ್ಞಚ್ಝ ಕ್ಟಟಛ್ಠ್ಚ ಎಈಕ)ಕ್ಕಿಂತ ಮುಖ್ಯವಾದುದು ಅಂತ. ಆವಾಗಿನಿಂದಲೂ ಭೂತಾನ್​ನಲ್ಲಿ ಏನೇ ಅಭಿವೃದ್ಧಿ ಎಂದರೂ ಅದು ಈ ಜಿಎನ್​ಎಚ್ ಪರಿಕಲ್ಪನೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಡೆದುಬಂದಿದೆ. ಇದು ನಮ್ಮ ಜನರ ಸುಖ-ಸಂತೋಷಗಳಿಗಾಗಿ ಸೃಷ್ಟಿಯಾದ ಅನನ್ಯ ಪರಿಕಲ್ಪನೆ. ನಮ್ಮದು ಜಗತ್ತಿನ ಅತಿಸಣ್ಣ ಆರ್ಥಿಕತೆ. ನಮ್ಮ ‘ಒಟ್ಟು ರಾಷ್ಟ್ರೀಯ ಉತ್ಪನ್ನ’ (ಜಿಡಿಪಿ) ಎರಡು ಶತಕೋಟಿ ಡಾಲರ್​ಗಿಂತಲೂ ಕಡಿಮೆ. ನನಗೆ ಗೊತ್ತಿದೆ, ಈ ಸಭೆಯಲ್ಲಿರುವ ಕೆಲವರು ಇದಕ್ಕಿಂತಲೂ ಹೆಚ್ಚು ಸಿರಿವಂತರಾಗಿದ್ದೀರಿ. ಅಂದರೆ ಗೊತ್ತಾಯಿತಲ್ಲ, ನಮ್ಮದು ಸಣ್ಣ ಆರ್ಥಿಕತೆಯ ದೇಶ. ಇಲ್ಲಿಯೇ ನಿಮಗೆ ಗಮನಾರ್ಹವಾದ ವಿಷಯವಿರುವುದು. ನಮ್ಮಲ್ಲಿ ಶಿಕ್ಷಣವು ಸಂಪೂರ್ಣ ಉಚಿತ. ನಮ್ಮ ಎಲ್ಲ ಪ್ರಜೆಗಳಿಗೂ ಉಚಿತ ಶಾಲಾಶಿಕ್ಷಣವೆನ್ನುವುದು ನಿಶ್ಚಿತವಾಗಿದೆ. ಯಾರು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಾರೋ ಅವರಿಗೆ ಕಾಲೇಜು ವಿದ್ಯಾಭ್ಯಾಸವೂ ಉಚಿತವಾಗಿಯೇ ದೊರೆಯುತ್ತದೆ. ಆರೋಗ್ಯ ಸೇವೆಯೂ ಸಂಪೂರ್ಣ ಉಚಿತ. ವೈದ್ಯಕೀಯ ಸಮಾಲೋಚನೆ, ಶುಶ್ರೂಷೆ ಹಾಗೂ ಔಷಧಗಳು ಎಲ್ಲವನ್ನೂ ಉಚಿತವಾಗಿಯೇ ಒದಗಿಸುತ್ತೇವೆ. ಇದೆಲ್ಲವನ್ನೂ ನಾವು ಹೇಗೆ ನಿಭಾಯಿಸುತ್ತೇವೆಂದರೆ, ನಾವು ನಮ್ಮ ಮಿತ ಸಂಪನ್ಮೂಲಗಳನ್ನು ಬಹಳ ಎಚ್ಚರದಿಂದ ಬಳಸುತ್ತೇವೆ ಮತ್ತು ನಾವೆಲ್ಲರೂ ಈ ‘ಒಟ್ಟು ರಾಷ್ಟ್ರೀಯ ನೆಮ್ಮದಿ’ ಎಂಬ ದರ್ಶನಕ್ಕೆ ಬದ್ಧರಾಗಿದ್ದೇವೆ, ನಿಷ್ಠರಾಗಿದ್ದೇವೆ. ಇದನ್ನೇ ನಾವು ಮೌಲ್ಯಾಧಾರಿತ ಅಭಿವೃದ್ಧಿ ಎನ್ನುತ್ತೇವೆ. ನಮ್ಮದು ಸಣ್ಣ ಆರ್ಥಿಕತೆ. ಅದನ್ನು ಬಲಪಡಿಸಬೇಕು. ಆರ್ಥಿಕ ಬೆಳವಣಿಗೆಯೆನ್ನುವುದು ನಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಡೆಗಣಿಸಬಾರದು, ನಮ್ಮ ಪರಿಶುದ್ಧ ಪರಿಸರವನ್ನು ಹಾಳುಗೆಡವಬಾರದು ಎಂಬುದು ನಮ್ಮ ಗಮನದಲ್ಲಿರುತ್ತದೆ. ನಾವು ನಮ್ಮ ಕಲೆ, ವಾಸ್ತುಶಿಲ್ಪ, ಆಹಾರ ಪದ್ಧತಿ, ಹಬ್ಬಗಳು, ನಮ್ಮ ಸಂತರು ಹಾಗೂ ಮಠಗಳನ್ನು ಮೆರೆಸುತ್ತಲೇ ಹೋಗುತ್ತೇವೆ. ಅಷ್ಟೇ ಅಲ್ಲ, ನಮ್ಮ ಈ ರಾಷ್ಟ್ರೀಯ ಉಡುಪನ್ನು ಕೂಡಾ. ಆದ್ದರಿಂದಲೇ ನಾನು ನನ್ನ ‘ಗೊ’ ಅನ್ನು ಅಭಿಮಾನದಿಂದ ಧರಿಸುತ್ತೇನೆ. ತಮಾಷೆಗೆ ಹೇಳುತ್ತೇನೆ ನೋಡಿ, ನೀವೀಗ ನೋಡುತ್ತಿರುವುದು ಜಗತ್ತಿನ ಅತಿದೊಡ್ಡ ಜೇಬು (ಸಭೆಯಲ್ಲಿ ನಗು). ನಮ್ಮ ಜೇಬು ಎದೆಯ ಭಾಗದಲ್ಲಿ ಶುರುವಾಗಿ ಬೆನ್ನಿನ ಭಾಗವನ್ನೆಲ್ಲಾ ಸುತ್ತುವರಿದುಕೊಂಡು ಮತ್ತು ಎದೆಯ ಮತ್ತೊಂದು ಭಾಗದವರೆಗೂ ವ್ಯಾಪಿಸಿದೆ. ಈ ಜೇಬಿನಲ್ಲಿ ನಮ್ಮ ಎಲ್ಲಾ ಬಗೆಯ ವೈಯಕ್ತಿಕ ವಸ್ತುಗಳನ್ನೂ ತುಂಬಿರುತ್ತೇವೆ- ಫೋನು, ಹಣದ ಪಾಕೀಟು, ಐಪ್ಯಾಡು, ಕಚೇರಿ ಫೈಲುಗಳು ಮತ್ತು ಪುಸ್ತಕಗಳು ಎಲ್ಲವನ್ನೂ! (ಸಭೆಯಲ್ಲಿ ಮತ್ತೆ ನಗು!). ಕೆಲವು ಬಾರಿ ಅತಿ ಅಮೂಲ್ಯವಾದ ಸರಕುಗಳನ್ನೂ ಈ ಜೇಬಿನಲ್ಲೇ ಇರಿಸಿಕೊಂಡಿರುತ್ತೇವೆ. ಅಂತೂ ನಮ್ಮ ಸಂಸ್ಕೃತಿ ಉಜ್ವಲವಾಗಿ ಬೆಳಗುತ್ತಿದೆ. ಹಾಗೆಯೇ ನಮ್ಮ ಪರಿಸರ ಕೂಡಾ. ನಮ್ಮ ದೇಶದ ಶೇ. 72 ಭಾಗ ಕಾಡಿನಿಂದಾವೃತವಾಗಿದೆ. ನಮ್ಮ ಸಂವಿಧಾನವು, ಭೂತಾನಿನ ನೆಲದ ಕನಿಷ್ಠ ಶೇ. 60 ಭಾಗವಾದರೂ ಯಾವಾಗಲೂ ಕಾಡಿನಿಂದ ಆವೃತವಾಗಿರಬೇಕೆಂದು ನಿರ್ದೇಶಿಸುತ್ತದೆ. ನಮ್ಮ ಸಂವಿಧಾನ, ಸಂವಿಧಾನವೇ ಕಾಡು ಇರಬೇಕೆಂದು ಒತ್ತಾಯಿಸುತ್ತದೆ. ಹಾಗೆಯೇ ನಮ್ಮ ದೊರೆ ಇದೇ ಸಂವಿಧಾನವನ್ನು ಬಳಸಿ ನಮ್ಮ ಮೇಲೆ ಪ್ರಜಾಪ್ರಭುತ್ವವನ್ನು ಹೇರಿದರು. ನಿಜವಾಗಿ ನಮಗೆ ಪ್ರಜಾಪ್ರಭುತ್ವ ಬೇಕಾಗಿರಲಿಲ್ಲ. ಅದನ್ನು ನಾವು ಕೇಳಿರಲಿಲ್ಲ, ಅದಕ್ಕಾಗಿ ಹೋರಾಡಲೂ ಇಲ್ಲ. ಆದರೆ ನಮ್ಮ ದೊರೆ ನಮ್ಮ ಮೇಲೆ ಈ ಪ್ರಜಾಪ್ರಭುತ್ವವನ್ನು ಹೇರಿದರು ಮತ್ತು ಅದನ್ನು ಸಂವಿಧಾನದೊಳಕ್ಕೂ ಸೇರಿಸಿದರು. ಇನ್ನೂ ಮುಂದೆ ಹೋಗಿ ದೊರೆಗಳನ್ನು ದಂಡಿಸುವ ಅಧಿಕಾರವನ್ನೂ ಪ್ರಜೆಗಳಿಗೆ ನೀಡಿದರು. ಅಲ್ಲದೆ, ಎಲ್ಲ ದೊರೆಗಳೂ ತಮ್ಮ 65 ವಯಸ್ಸಿನಲ್ಲಿ ನಿವೃತ್ತರಾಗುವುದನ್ನೂ ಕಡ್ಡಾಯ ಮಾಡಿದರು (ಸಭಿಕರಿಂದ ಚಪ್ಪಾಳೆ). ಆಗ ನಮ್ಮ ದೊರೆ ನಿವೃತ್ತಿಯಾಗುವುದರಲ್ಲಿದ್ದರು. ನಮ್ಮ ಹಿಂದಿನ ದೊರೆ, ಹತ್ತು ವರ್ಷಗಳ ಹಿಂದೆ, ಅವರ ಜನಪ್ರಿಯತೆ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿಯಾದರು. ಆಗ ಅವರ ವಯಸ್ಸು ಕೇವಲ 51 ವರ್ಷ.

ನಮ್ಮ ಭೂಭಾಗದ ಶೇ. 72 ಭಾಗ ಕಾಡು. ಮತ್ತು ಅದು ತುಂಬಾ ಪರಿಶುದ್ಧವಾಗಿದೆ. ಆದ್ದರಿಂದಲೇ ಈಗಲೂ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧವಾದ ಜೀವವೈವಿಧ್ಯವಿರುವ ದೇಶ ಭೂತಾನೇ ಆಗಿ ಉಳಿದಿದೆ. ಇಡೀ ಜಗತ್ತು ‘ವಾತಾವರಣ ವ್ಯತ್ಯಯ’ (ಇಜಿಞಚಠಿಛಿ ಇಜಚ್ಞಜಛಿ)ದ ಭಯದಲ್ಲಿರುವಾಗಲೂ ನಾವು ಇಂಗಾಲ ಸಮತೋಲನ ದೇಶವಾಗಿಯೇ ಉಳಿದಿದ್ದೇವೆ. ಜಗತ್ತಿನ ಸುಮಾರು ಇನ್ನೂರು ದೇಶಗಳ ಪೈಕಿ ಈ ಇಂಗಾಲ ಸಮತೋಲನ ಸಾಧಿಸಿರುವುದು ಭೂತಾನ್ ಮಾತ್ರ. ಸಮತೋಲನವೆಂಬ ಮಾತೂ ಸರಿಯಲ್ಲ. ಯಾಕೆಂದರೆ ನಮ್ಮ ಇಡೀ ದೇಶ ಉತ್ಪಾದಿಸುವ ಇಂಗಾಲದ ಡೈ ಆಕ್ಸೆ ೖಡ್ ಪ್ರಮಾಣ ವರ್ಷಕ್ಕೆ 2.2 ದಶಲಕ್ಷ ಟನ್. ಆದರೆ ನಮ್ಮ ಕಾಡುಗಳು ನಮ್ಮಲ್ಲಿ ಉತ್ಪಾದನೆಯಾಗುವ ಮೂರುಪಟ್ಟು ಇಂಗಾಲದ ಡೈ ಆಕ್ಸೆ ೖಡ್ ಅನ್ನು ನುಂಗಿಹಾಕುತ್ತವೆ. ಹಾಗಾಗಿ ನಮ್ಮದು ಇಂಗಾಲದ ಋಣಾಂಶವಿರುವ ದೇಶವಾಗಿದೆ. ಅದಷ್ಟೇ ಅಲ್ಲ, ವೇಗವಾಗಿ ಹರಿಯುವ ನಮ್ಮ ನದಿಗಳಿಂದ ಉತ್ಪಾದಿಸುವ ವಿದ್ಯುತ್ತನ್ನು ರಫ್ತುಮಾಡುತ್ತೇವೆ. ಇವತ್ತು ನಾವು ರಫ್ತುಮಾಡುವ ಶುದ್ಧ ವಿದ್ಯುತ್ತಿನಿಂದ ನಮ್ಮ ನೆರೆಹೊರೆಯ ದೇಶಗಳಲ್ಲೂ ಆರು ದಶಲಕ್ಷ ಟನ್​ಗಳಷ್ಟು ಇಂಗಾಲದ ಡೈ ಆಕ್ಸೆ ೖಡ್ ಪತನಗೊಳ್ಳುತ್ತದೆ. 2020ನೇ ಇಸವಿಯಷ್ಟು ಹೊತ್ತಿಗೆ 17 ದಶಲಕ್ಷ ಟನ್​ಗಳಷ್ಟು ಇಂಗಾಲದ ಡೈ ಆಕ್ಸೆ ೖಡ್ ಅನ್ನು ನುಂಗಿಹಾಕಬಲ್ಲಷ್ಟು ವಿದ್ಯುತ್ತನ್ನು ರಫ್ತುಮಾಡುತ್ತೇವೆ. ನಮ್ಮಲ್ಲಿರುವ ಜಲಶಕ್ತಿಯ ಅರ್ಧದಷ್ಟನ್ನು ಬಳಸಿದರೂ ಇದನ್ನು ಸಾಧಿಸಬಹುದು. ಮುಂದಿನ ದಿನಗಳಲ್ಲಿ ನಾವು ರಫ್ತುಮಾಡುವ ಪರಿಶುದ್ಧ, ಹಸಿರು ವಿದ್ಯುತ್ತಿನಿಂದ 50 ದಶಲಕ್ಷ ಟನ್​ನಷ್ಟು ಇಂಗಾಲದ ಡೈ ಆಕ್ಸೆ ೖಡನ್ನು ನಾಶಮಾಡಬಹುದು. ಹಾಗೆಂದರೆ ಇಡೀ ನ್ಯೂಯಾರ್ಕ್ ನಗರ ಒಂದು ವರ್ಷದಲ್ಲಿ ಉತ್ಪಾದಿಸುವ ಇಂಗಾಲದ ಡೈ ಆಕ್ಸೆ ೖಡ್​ಗಿಂತ ಹೆಚ್ಚು. ಅಂದರೆ ನಮ್ಮ ದೇಶದಲ್ಲಿ ಕಾರ್ಬನ್ ಇರುವಷ್ಟೂ ಇಲ್ಲ. ಹೊರದೇಶಗಳಲ್ಲಿ ಕೂಡಾ ಈ ಇಂಗಾಲವನ್ನು ಪತನ ಮಾಡಲು ನಾವು ಯತ್ನಿಸುತ್ತಿದ್ದೇವೆ.

ಜಗತ್ತು ಬದಲಾಗುತ್ತಿದೆ, ವಾತಾವರಣ ವ್ಯತ್ಯಯವಾಗುತ್ತಿದೆ. ಈ ವ್ಯತ್ಯಯದ ಪರಿಣಾಮ ನನ್ನ ದೇಶದ ಮೇಲೂ ಆಗುತ್ತಿದೆ. ವಾತಾವರಣದ ಉಷ್ಣತೆ ಬದಲಾಗುತ್ತಿರುವುದರಿಂದ ನಮ್ಮ ಹಿಮಬಂಡೆಗಳು ಕರಗುತ್ತಿವೆ. ಅದರಿಂದ ನಮ್ಮ ನದಿಗಳಲ್ಲಿ ಪ್ರವಾಹವುಂಟಾಗುತ್ತಿದೆ, ಭೂಮಿ ಕುಸಿಯುತ್ತಿದೆ. ನಾನು ಈಚೆಗೆ ಅದೊಂದು ಸರೋವರವನ್ನು ನೋಡಿದೆ. 20 ವರ್ಷಗಳ ಹಿಂದೆ ಈ ಸರೋವರ ಅಸ್ತಿತ್ವದಲ್ಲೇ ಇರಲಿಲ್ಲ. ಅದೊಂದು ಘನವಾದ ಹಿಮಬಂಡೆಯಾಗಿತ್ತು. ಇದು ಅತ್ಯಂತ ಆಘಾತಕಾರಿ. ಕೆಲವು ವರ್ಷಗಳ ಹಿಂದೆ ಇಂಥದೇ ಒಂದು ಸರೋವರ ಒಡೆದು ನಮ್ಮ ಕಣಿವೆಗಳಿಗೆಲ್ಲಾ ನುಗ್ಗಿ ತುಂಬಾ ನಾಶಮಾಡಿಬಿಟ್ಟಿತು. ಇದಾಗಿದ್ದು ಒಂದೇ ಒಂದು ಹಿಮಬಂಡೆಯಿಂದ. ಆದರೆ ನಮ್ಮಲ್ಲಿ ಈ ಬಗೆಯ 2700 ಬೃಹತ್ ಹಿಮಬಂಡೆಗಳಿವೆ. ನಾನು ಹೇಳಬಯಸುವುದೇನೆಂದರೆ, ನಮ್ಮ ದೇಶ, ಜನ ಭೂಮಿಯ ಉಷ್ಣತೆ ಹೆಚ್ಚುವಂಥದೇನನ್ನೂ ಮಾಡಿಲ್ಲ. ಆದರೆ ಅದರ ಘೋರ ಪರಿಣಾಮವನ್ನಷ್ಟೇ ನಾವು ಅನುಭವಿಸುತ್ತಿದ್ದೇವೆ. ನಮ್ಮಂಥ ಒಂದು ಪುಟ್ಟದೇಶಕ್ಕೆ, ಅದರಲ್ಲೂ ಪರ್ವತ ಪ್ರದೇಶಗಳಿಂದಾವೃತವಾದ ದೇಶಕ್ಕೆ ಇದು ತುಂಬಾ ಕಷ್ಟಕರ. ಆದರೂ ನಾವು ಸುಮ್ಮನೆ ಕೈಕಟ್ಟಿ ಕೂತಿಲ್ಲ. ಈ ವಾತಾವರಣ ವ್ಯತ್ಯಯದ ವಿರುದ್ಧ ಹೋರಾಡುತ್ತೇವೆ. ಆದ್ದರಿಂದಲೇ ನಾವು ಇಂಗಾಲ ಸಮತೋಲನ ಕಾಪಾಡಲು ಕಟಿಬದ್ಧರಾಗಿದ್ದೇವೆ. ನಾವು ಈ ಪ್ರತಿಜ್ಞೆ ಮಾಡಿದ್ದು 2009ರಲ್ಲಿ, ಕೋಪನ್ ಹೇಗನ್ ಸಮಾವೇಶದಲ್ಲಿ. ಆದರೆ ಯಾರೂ ಇದನ್ನು ಗುರುತಿಸಲಿಲ್ಲ. ಎಲ್ಲಾ ಸರ್ಕಾರಗಳೂ ಈ ವಾತಾವರಣ ವ್ಯತ್ಯಯವನ್ನುಂಟುಮಾಡಿದ ಕಾರಣಕ್ಕಾಗಿ ಪರಸ್ಪರ ದೋಷಾರೋಪಣೆ, ವಾದವಿವಾದಗಳಲ್ಲಿ ಮುಳುಗಿದ್ದವು. ನಾವೊಂದು ಪುಟ್ಟದೇಶ, ನಾವು ಇಂಗಾಲ ಸಮತೋಲನವನ್ನು ಸಾಧಿಸಲು ಪ್ರತಿಜ್ಞೆ ಮಾಡುತ್ತೇವೆಂದು ಕೈಯೆತ್ತಿ ಘೋಷಿಸಿದಾಗ ಯಾರೂ ಅದನ್ನು ಕೇಳಿಸಿಕೊಳ್ಳಲಿಲ್ಲ, ಗಮನಿಸಲಿಲ್ಲ. ಕಳೆದ ವರ್ಷ ಪ್ಯಾರಿಸ್ ಸಮ್ಮೇಳನದಲ್ಲಿ ನಾವು ಇದನ್ನೇ ಘೋಷಿಸಿದಾಗ ಬೇರೆ ದೇಶಗಳು ಕೇಳಿಸಿಕೊಂಡವು. ನಮ್ಮ ಬಗ್ಗೆ ಎಲ್ಲರೂ ಕಾಳಜಿ ತೋರಿದರು. ಪ್ಯಾರಿಸ್ ಸಮ್ಮೇಳನದಲ್ಲಿ ಆದ ಬದಲಾವಣೆಯೆಂದರೆ ಬೇರೆಬೇರೆ ಸರ್ಕಾರಗಳು ಒಟ್ಟಾಗಿ ಬಂದು ವಾತಾವರಣ ವ್ಯತ್ಯಯದ ಬಗ್ಗೆ ಕಾಳಜಿ ವಹಿಸಿದವು. ಎಲ್ಲಾ ದೇಶಗಳು ಒಕ್ಕೆ ೖಯಾಗಿ ಕೆಲಸ ಮಾಡಬೇಕೆಂದು ನಿರ್ಧರಿಸಿದವು. ವಿಶ್ವಸಂಸ್ಥೆಯ ಸಮಿತಿಯು, ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಿದರೆ, ಭೂಮಿಯ ಉಷ್ಣತೆಯನ್ನು 2 ಡಿಗ್ರಿಯಾದರೂ ತಗ್ಗಿಸಬಹುದೆಂದು ಅಭಿಪ್ರಾಯಪಟ್ಟಿತು. ಆದ್ದರಿಂದಲೇ ನಾನು ಈ ಸಂಘಟಕರನ್ನು ಕೇಳಿಕೊಂಡೆ. ಈಗ ನಿಮಗೆ ಗೊತ್ತು. ಈ ಅವಘಡಕ್ಕೆ ಕಾರಣ ಯಾರು ಎಂದು. ಈ ಪ್ರತಿಜ್ಞೆಗೆ ಎಲ್ಲ ದೇಶಗಳೂ ಬದ್ಧರಾಗಿರಬೇಕಾದುದು ತುರ್ತು ಅನಿವಾರ್ಯ. ನಾವು ಇಂಗಾಲ ಸಮತೋಲನ ಮಾಡಿಕೊಂಡೇ ಮುಂದುವರಿಯುತ್ತೇವೆಂದು ಭೂತಾನಿನ ಪರವಾಗಿ ನಾನು ಪ್ರಮಾಣ ಮಾಡುತ್ತೇನೆ. ನಾವು ಹೀಗೆ ಮಾಡುವ ಮಾರ್ಗಗಳು ಹಲವಾರು. ನಮ್ಮ ಗ್ರಾಮೀಣ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ. ಇದರ ಹಿಂದಿನ ಆಲೋಚನೆಯೆಂದರೆ ಅವರಿಗೆ ವಿದ್ಯುತ್ ಉಚಿತವಾಗಿ ಲಭ್ಯವಾಗುವುದರಿಂದ ಅಡುಗೆ ಮಾಡಲು ಸೌದೆ ಉರಿಸುವ ಅಗತ್ಯವಿರುವುದಿಲ್ಲ. ವಿದ್ಯುತ್ ವಾಹನಗಳನ್ನು ಬಳಸಲು ಸಬ್ಸಿಡಿ ಕೊಡುತ್ತೇವೆ. ಎಲ್​ಇಡಿ ಲೈಟುಗಳನ್ನು ಬಳಸಲು ಪ್ರೋತ್ಸಾಹಿಸುತ್ತೇವೆ. ನಮ್ಮ ಇಡೀ ಸರ್ಕಾರ ಕಾಗದರಹಿತ ಆಡಳಿತ ಮಾಡಲು ಬಯಸುತ್ತದೆ. ಇಡೀ ಭೂತಾನನ್ನು ಸ್ವಚ್ಛವಾಗಿಡುವ ರಾಷ್ಟ್ರೀಯ ಕಾರ್ಯಕ್ರಮ ನಡೆಸುತ್ತೇವೆ. ದೇಶದ ತುಂಬಾ ಗಿಡಮರಗಳನ್ನು ನೆಡುತ್ತೇವೆ. ಇದು ಕೂಡಾ ನಮ್ಮ ರಾಷ್ಟ್ರೀಯ ಕಾರ್ಯಕ್ರಮ. ನಮ್ಮ ಸಂರಕ್ಷಿತ ಪ್ರದೇಶಗಳಲ್ಲಿ ಇಂಗಾಲ ಇಲ್ಲವೇ ಇಲ್ಲ. ಆ ಪ್ರದೇಶಗಳೇ ನಮ್ಮ ಶ್ವಾಸಕೋಶಗಳು. ಈಗ ನಮ್ಮ ದೇಶದ ಅರ್ಧಭಾಗ ಸಂಪೂರ್ಣ ಸುರಕ್ಷಿತವಾಗಿದೆ. ನಮ್ಮ ರಾಷ್ಟ್ರೀಯ ಉದ್ಯಾನಗಳು, ವನ್ಯಮೃಗಗಳ ಉದ್ಯಾನಗಳು, ನೈಸರ್ಗಿಕ ಸಂರಕ್ಷಿತ ಪ್ರದೇಶಗಳು- ಇವೆಲ್ಲವನ್ನೂ ಒಂದು ಜೈವಿಕ ಸರಪಣಿಗೆ ಒಳಪಡಿಸಿದ್ದೇವೆ. ಇದರರ್ಥವೇನೆಂದರೆ ನಮ್ಮ ಪ್ರಾಣಿಗಳು ಇಡೀ ದೇಶದ ತುಂಬಾ ಹಾಯಾಗಿ ಓಡಾಡಬಹುದು. ಉದಾಹರಣೆಗೆ ಒಂದು ಹುಲಿ, 250 ಮೀ. ಎತ್ತರದ ಪ್ರದೇಶವೊಂದರಲ್ಲಿ ಕಾಣಿಸಿಕೊಂಡದ್ದು, ಎರಡು ವರ್ಷಗಳ ನಂತರ 4,000 ಮೀ. ಎತ್ತರದ ಶೀತ ಪರ್ವತ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ವಿಸ್ಮಯಕಾರಿ ಸಂಗತಿಯಲ್ಲವೆ? (ಸಭಿಕರಿಂದ ಚಪ್ಪಾಳೆ). ನಾವು ಹೀಗೇ ಮುಂದುವರಿಯಬೇಕು. ಪ್ರತಿವರ್ಷ ಪ್ರಾಣಿಗಳ ದಂತ, ಚರ್ಮ ಇತ್ಯಾದಿಗಳ ಕಳವು, ಬೇಟೆ, ಗಣಿಗಾರಿಕೆ, ಉದ್ಯಾನಗಳ ಮಾಲಿನ್ಯ ಇವುಗಳನ್ನು ತಡೆಯಲು ಸಾಕಷ್ಟು ಸಂಪನ್ಮೂಲಗಳನ್ನು ಮೀಸಲಿಟ್ಟಿದ್ದೇವೆ. ನಮ್ಮ ಜನರು ಪ್ರಕೃತಿಸ್ನೇಹಿಯಾಗಿ ಬದುಕಲು, ನೆಮ್ಮದಿಯಾಗಿರಲು ಬಹಳಷ್ಟು ಸಂಪನ್ಮೂಲಗಳನ್ನು ಖರ್ಚುಮಾಡುತ್ತಿದ್ದೇವೆ……

– ಇದು ಭೂತಾನ್ ಪ್ರಧಾನಿಯ ಒಂದು ಭಾಷಣ. ನಾವು ಕೇಳಿಸಿಕೊಳ್ಳುತ್ತಿದ್ದೇವಾ?

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top