Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ಆರ್​ಟಿಇ ಜಿಜ್ಞಾಸೆ

Wednesday, 10.01.2018, 3:00 AM       No Comments

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಎಷ್ಟೋ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂಬ ಕಳವಳ ಚರ್ಚೆಗೂ ಗ್ರಾಸವಾಗಿದೆ. ಈ ಶಾಲೆಗಳನ್ನು ಉಳಿಸಲು ಸರ್ಕಾರ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆಕ್ಷೇಪವೂ ಇದೆ. ಇದೆಲ್ಲದರ ಮಧ್ಯೆ ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಮೇಲ್ದರ್ಜೆಗೇರಿಸಲು ಕೇರಳ ಮಾದರಿಯನ್ನು ಅನುಸರಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ ಹಕ್ಕು ಕಾಯ್ದೆ(ಆರ್​ಟಿಇ) ಜಾರಿ ಬಳಿಕ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆ ಪಾಲಾಗುತ್ತಿದ್ದು, ಮಗು ಗುಣಮಟ್ಟದ ಅದರಲ್ಲೂ ಆಂಗ್ಲ ಮಾಧ್ಯಮದ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ಪಾಲಕರು ಖಾಸಗಿ ಶಾಲೆಗಳಿಗೇ ಆರ್​ಟಿಇ ಅಡಿ ಪ್ರವೇಶ ಗಿಟ್ಟಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ.

ಇದನ್ನೆಲ್ಲ ಗಮನಿಸಿ ಶಿಕ್ಷಣ ಇಲಾಖೆ ಒಂದು ನಿರ್ಧಾರಕ್ಕೆ ಬಂದಿದೆ. ಆರ್​ಟಿಇ ಅಡಿ ಪ್ರವೇಶ ಪಡೆಯಲು ಮೊದಲ ಆದ್ಯತೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ, ಆ ಬಳಿಕ ಅನುದಾನಿತ, ಖಾಸಗಿ ಶಾಲೆಗಳಿಗೆ ನೀಡಬೇಕು ಎಂಬ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು ಸರ್ಕಾರದ ಸಮ್ಮತಿ ದೊರೆತರೆ 2018-19ನೇ ಸಾಲಿನ ಪ್ರವೇಶ ಪ್ರಕ್ರಿಯೆಯಿಂದಲೇ ಈ ನೀತಿ ಜಾರಿಗೆ ಬರಲಿದೆ. ಸದ್ಯ, ಕೇರಳದಲ್ಲಿ ಇಂಥ ನೀತಿ ಇದ್ದು, ಇದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕದ್ದು ಉತ್ತಮ ನಡೆಯೇ ಹೌದು. ಆರ್​ಟಿಇ ಮೂಲಕ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶುಲ್ಕ ಮರುಪಾವತಿ ಮಾಡುತ್ತದೆ. 2012-13ನೇ ಸಾಲಿನಲ್ಲಿ 230 ಕೋಟಿ ರೂ., 2015-16ನೇ ಸಾಲಿನಲ್ಲಿ 330 ಕೋಟಿ ರೂ. ಸರ್ಕಾರ ಮರುಪಾವತಿಸಿದೆ. ಇಷ್ಟೊಂದು ಭಾರಿ ಪ್ರಮಾಣದ ಮೊತ್ತವನ್ನು ಸರ್ಕಾರಿ ಶಾಲೆಗಳ ಮೇಲ್ದರ್ಜೆಗೆ ಬಳಸಿದರೆ ಕೊರತೆಗಳನ್ನೆಲ್ಲ ನೀಗಿಸಿ, ಶಿಕ್ಷಣದ ಗುಣಮಟ್ಟವನ್ನೂ ಹೆಚ್ಚಿಸಬಹುದಾಗಿದೆ. ಕನ್ನಡ ಶಾಲೆಗಳ ಉಳಿವಿನ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ವರದಿಯಲ್ಲೂ ಈ ಅಂಶ ಪ್ರಸ್ತಾಪಿಸಲಾಗಿದೆ. ಈ ಶುಲ್ಕ ಮರುಪಾವತಿಯಲ್ಲಿ ಉಳಿಯುವ ಹಣವನ್ನು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಬಳಸಲು ಚಿಂತನೆ ನಡೆದಿದೆ.

ಶಿಕ್ಷಕರಿದ್ದರೆ ಮೂಲಸೌಕರ್ಯಗಳಿಲ್ಲ ಮೂಲಸೌಕರ್ಯಗಳಿದ್ದರೆ ಗುಣಮಟ್ಟದ ಶಿಕ್ಷಣವಿಲ್ಲ ಎಂಬ ಸ್ಥಿತಿ ಸರ್ಕಾರಿ ಶಾಲೆಗಳದ್ದು. ಒಂದು ವೇಳೆ ಈ ಚಿಂತನೆ ಸಾಕಾರವಾಗಿ ಆರ್​ಟಿಇಯಡಿ ಮರುಪಾವತಿಸುವ ಶುಲ್ಕ ಸರ್ಕಾರಿ ಶಾಲೆಗಳಿಗೆ ವಿನಿಯೋಗವಾದರೆ ಬದಲಾವಣೆ ಕಾಣಬಹುದು. ಈ ಆಶಯ, ಯೋಜನೆಯೇನೋ ಉತ್ತಮವಾಗಿದೆ. ಆದರೆ, ಇದರ ಅನುಷ್ಠಾನ ಹೇಗೆ ಎಂಬುದೂ ಮುಖ್ಯ. ಇಂದಿನ ಸ್ಥಿತಿಯಲ್ಲಿ ಬಹುತೇಕ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಬಯಸುತ್ತಿಲ್ಲ. ಹೀಗಿರುವಾಗ, ಆರ್​ಟಿಇ ಅಡಿ ಅವರು ಮೊದಲ ಆದ್ಯತೆಯಾಗಿ ಸರ್ಕಾರಿ ಶಾಲೆಗಳನ್ನು ಹೇಗೆ ಸ್ವೀಕರಿಸಿಯಾರು? ಬೋಧನಾ ಗುಣಮಟ್ಟ ಹೆಚ್ಚಳವಾಗದೆ ಮಕ್ಕಳು ಸರ್ಕಾರಿ ಶಾಲೆಗಳತ್ತ ಹೇಗೆ ಮುಖ ಮಾಡಿಯಾರು? ಎಂಬ ಬಗೆಗೂ ಚಿಂತನೆ ನಡೆಸಬೇಕಿದೆ. ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಬೇಕು ಎಂಬುದು ನಿರ್ವಿವಾದವೇ. ಆದರೆ, ಬೋಧಕ ಮತ್ತು ಬೋಧಕೇತರ ವಲಯದಲ್ಲಿ ಆಮೂಲಾಗ್ರ ಸುಧಾರಣೆ ತರದೆ ಈ ಆಶಯ ಈಡೇರದು.

Leave a Reply

Your email address will not be published. Required fields are marked *

Back To Top