Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಆರ್ಥಿಕತೆಗೆ ಹೊಡೆತ

Friday, 13.10.2017, 3:00 AM       No Comments

ಕಳೆದ ಮೂರು ವರ್ಷಗಳಲ್ಲೇ ಜಿಡಿಪಿ ಕನಿಷ್ಠಮಟ್ಟಕ್ಕೆ ಕುಸಿದಿದ್ದು, ದೇಶದ ಆರ್ಥಿಕ ರಂಗದಲ್ಲಿ ಪ್ರಸ್ತುತ ಸವಾಲಿನ ಹಾಗೂ ನೈರಾಶ್ಯದ ವಾತಾವರಣ ಇರುವುದನ್ನು ತಳ್ಳಿಹಾಕುವಂತಿಲ್ಲ. ಮತ್ತೊಂದೆಡೆ, ಸುಸ್ತಿ ಸಾಲದ ಹೊರೆ ಹೆಚ್ಚುತ್ತಲೇ ಸಾಗಿರುವ ಪರಿಣಾಮ ಬ್ಯಾಂಕುಗಳ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಅನುತ್ಪಾದಕ ಆಸ್ತಿ ಪ್ರಮಾಣ (ಎನ್​ಪಿಎ) ಹೆಚ್ಚುತ್ತಲೇ ಸಾಗಿದ್ದು, ಪ್ರಸಕ್ತ ಕಳೆದ 15 ವರ್ಷಗಳ ಅವಧಿಯಲ್ಲೇ ಗರಿಷ್ಠ ಹಂತಕ್ಕೆ ತಲುಪಿದೆ (9.53 ಲಕ್ಷ ಕೋಟಿ ರೂ.). ಈ ಬೆಳವಣಿಗೆ ಬ್ಯಾಂಕುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಒಟ್ಟಾರೆ ಆರ್ಥಿಕತೆ ನಿಟ್ಟಿನಲ್ಲೂ ಆಶಾದಾಯಕವಲ್ಲ. ಈ ಸುಸ್ತಿಸಾಲದ ಪೈಕಿ ಬಹುತೇಕ ಮೊತ್ತ ವಸೂಲಿ ಮಾಡಲಾಗದ ಹಂತಕ್ಕೆ ತಲುಪಿದ್ದು, ಬ್ಯಾಂಕುಗಳು ಕೈಚೆಲ್ಲಿ ಕುಳಿತಿವೆ ಎಂಬುದು ವಿಪರ್ಯಾಸ. ಈ ಪ್ರಮಾಣದ ಭಾರಿ ಹೊರೆಯನ್ನು ಬ್ಯಾಂಕುಗಳು ಹೇಗೆ ತಾನೇ ಸಹಿಸಲು ಸಾಧ್ಯ? ಪರಿಣಾಮ, ಕೆಲವೊಮ್ಮೆ ಬ್ಯಾಂಕುಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಅಪಾಯಗಳೂ ಇರುತ್ತವೆ. ಎನ್​ಪಿಎ ಪ್ರಮಾಣ ಕಳೆದ ಆರು ತಿಂಗಳಲ್ಲಿ(ಜೂನ್ ಅಂತ್ಯಕ್ಕೆ) ಶೇ.4.5, ಅದಕ್ಕೂ ಹಿಂದಿನ 6 ತಿಂಗಳ ಅವಧಿಯಲ್ಲಿ ಶೇ.5.8 ಏರಿಕೆಯಾಗಿರುವುದನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಿಗೆ ಬರಬಹುದು.

ಅನುತ್ಪಾದಕ ಆಸ್ತಿ ಹೊರೆಯಿಂದ ಬ್ಯಾಂಕುಗಳ ಆರ್ಥಿಕತೆಗೆ ಹೊಡೆತ ಬೀಳುವುದರ ಜತೆಗೆ ಅವುಗಳ ಕಾರ್ಯದಕ್ಷತೆಯನ್ನೂ ತಗ್ಗಿಸಿದೆ. ಕೆಲವೇ ಪ್ರಭಾವಿ ವ್ಯಕ್ತಿಗಳಿಂದ, ಉದ್ಯಮಿಗಳಿಂದ ಸಾವಿರಾರು ಕೋಟಿ ರೂ. ಸಾಲ ವಸೂಲಿಯಾಗಬೇಕಿದ್ದು, ಆ ನಿಟ್ಟಿನಲ್ಲಿ ದೀರ್ಘ ಕಾನೂನು ಸಮರವನ್ನೇ ನಡೆಸಬೇಕಾಗುತ್ತದೆ. ಉದಾಹರಣೆಗೆ, ಉದ್ಯಮಿ ವಿಜಯ ಮಲ್ಯ ಹಲವು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಅವರನ್ನು ಭಾರತಕ್ಕೆ ಮರಳಿ ತರುವುದು, ಖಟ್ಲೆ ಹೂಡಿ ಸಾಲ ವಸೂಲಾತಿ ಮಾಡುವುದು-ಇವೆಲ್ಲ ಬೇಗ ಆಗುವ ಕೆಲಸಗಳಲ್ಲ. ಅಷ್ಟೇ ಅಲ್ಲ, ಮಲ್ಯರ ಆಸ್ತಿ ಹರಾಜು ಹಾಕಿದರೂ ಅದರಿಂದ ಸಾಲ ವಸೂಲಾತಿ ಪುರ್ಣಪ್ರಮಾಣದಲ್ಲಿ ಆಗಲು ಸಾಧ್ಯವಿಲ್ಲ.

ಜನಸಾಮಾನ್ಯರು ಸಣ್ಣಮೊತ್ತದ ಸಾಲ ಪಡೆಯಬೇಕಾದರೂ ಹತ್ತೆಂಟು ಬಾರಿ ಬ್ಯಾಂಕುಗಳಿಗೆ ಎಡತಾಕಿ, ನೂರೆಂಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಹೀಗಿರುವಾಗ ಸಾವಿರಾರು ಕೋಟಿ ರೂ. ಸಾಲ ಪ್ರಭಾವಿಗಳ ಪಾಲಾಗುವುದು ಹೇಗೆ…? ಇದರ ಹಿಂದೆ ರಾಜಕೀಯ ಒತ್ತಡ ಮತ್ತು ಪ್ರಭಾವದ ಛಾಯೆ ಇರುವುದನ್ನು ತಳ್ಳಿ ಹಾಕಲಾಗದು. ಇಂಥ ಸಂದರ್ಭಗಳಲ್ಲಿ ಬ್ಯಾಂಕುಗಳ ಮೇಲೆ ಅತೀವ ಒತ್ತಡ ತಂದು, ರಾಜಕಾರಣಿಗಳು ಪ್ರಭಾವಿ ವ್ಯಕ್ತಿಗಳಿಗೆ ಸಾಲವನ್ನೇನೋ ಕೊಡಿಸುತ್ತಾರೆ. ಆದರೆ, ಅವು ಸಕಾಲಕ್ಕೆ ವಸೂಲಿಯಾಗದೆ ಬ್ಯಾಂಕುಗಳು ಬರಡಾಗುತ್ತಿವೆ. ಮಾತ್ರವಲ್ಲ, ಸಣ್ಣಪುಟ್ಟ ಕಂಪನಿಗಳನ್ನು ನಡೆಸುವ ಕಿರುಉದ್ಯಮಿಗಳಿಗೆ ಸಾಲ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಬಿಕ್ಕಟ್ಟಿನಿಂದ ಪಾರಾಗಲು ಸದ್ಯಕ್ಕಂತೂ ಕೆಲ ಸೀಮಿತ ಮಾಗೋಪಾಯಗಳಿವೆ. ಸಾಲ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಿ ಸಾಧ್ಯವಾದಷ್ಟು ಮಟ್ಟಿಗೆ ಎನ್​ಪಿಎ ಪ್ರಮಾಣ ತಗ್ಗಿಸುವುದು. ಎನ್​ಪಿಎ ಪ್ರಮಾಣ ಮತ್ತೆ ಹೆಚ್ಚದಂತೆ ಮಾಗೋಪಾಯಗಳನ್ನು ರೂಪಿಸುವುದು. ಮುಖ್ಯವಾಗಿ, ಯಾವುದೋ ಒತ್ತಡ, ಪ್ರಭಾವಗಳಿಗೆ ಮಣಿದು ಪ್ರಭಾವಿ ವ್ಯಕ್ತಿಗಳಿಗೆ ಸಾಲ ನೀಡುವ ಪದ್ಧತಿ ಕೊನೆಗೊಳ್ಳಬೇಕು. ಆಗ ಮಾತ್ರ, ಬ್ಯಾಂಕುಗಳ ಸ್ಥಿತಿ ಸುಧಾರಣೆಯಾಗಿ ಒಟ್ಟಾರೆ ಆರ್ಥಿಕತೆಯ ಆರೋಗ್ಯವೂ ಚೇತರಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

Back To Top