Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಆರೋಗ್ಯ ಭಾಗ್ಯ ಜನಪರ ಕಾಳಜಿ ಒಡಮೂಡಲಿ!

Tuesday, 03.10.2017, 3:04 AM       No Comments

| ಡಾ. ಮಂಜುನಾಥ್ ಬಿ.ಎಚ್.

ಕೆಲವು ತಿಂಗಳ ಹಿಂದಿನ ಕತೆಯಿದು. ಬೈಕ್ ಸವಾರರಿಬ್ಬರು ಅಪಘಾತಕ್ಕೀಡಾಗಿ ರಸ್ತೆಯಲ್ಲೇ ಬಿದ್ದಿದ್ದರು. ಅಲ್ಲಿ ನೂರಾರು ಜನ ಸೇರಿದ್ದರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬರಲಿಲ್ಲ. ಹತ್ತಿರದಲ್ಲೆಲ್ಲೂ ವ್ಯವಸ್ಥಿತ ಆರೋಗ್ಯ ಕೇಂದ್ರವಿಲ್ಲದ್ದು ಒಂದು ಕಾರಣವಾದರೆ, ಸಹಾಯಕ್ಕೆ ಧಾವಿಸಿದರೆ ಎಲ್ಲಿ ಪೊಲೀಸ್ ವಿಚಾರಣೆಗೊಳಗಾಗಬೇಕೋ ಎಂಬ ಚಿಂತೆ ಇನ್ನೊಂದು ಕಾರಣ! ತೀವ್ರ ರಕ್ತಸ್ರಾವಕ್ಕೊಳಗಾದ ಆ ಯುವಕರು ಆಸ್ಪತ್ರೆಗೆ ತಲುಪುವ ಮೊದಲೇ ಸಾವಿಗೀಡಾದರು.

ಯಾಕೆ ಹೀಗಾಗುತ್ತಿದೆ? ಹಳ್ಳಿಗಳಲ್ಲಿ ಅಪಘಾತ, ಅನಾರೋಗ್ಯಕ್ಕೆ ಈಡಾದರೆ ನಗರಗಳ ಆಸ್ಪತ್ರೆಗೇ ಕರೆದೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಇಂದಿಗೂ ಇದೆ. ದೇಶದ ಶೇ.70ಕ್ಕೂ ಹೆಚ್ಚಿನ ಜನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದರೂ ಅಗತ್ಯ ವೈದ್ಯಕೀಯ ಸೇವೆ ಅಲ್ಲಿಲ್ಲ. 125 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಭಾರತದಲ್ಲಿ ಏಕರೂಪದ ಆರೋಗ್ಯ ನೀತಿಯನ್ನು ಹೊಂದುವುದು ಸುಲಭಸಾಧ್ಯವಲ್ಲ. ಹೀಗಾಗೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವೈದ್ಯಕೀಯ ಹೊಣೆಗಾರಿಕೆ ಹಂಚಿಕೆಯಾಗಿದ್ದು, ಇದರ ಹೆಚ್ಚಿನ ಹೊರೆ ರಾಜ್ಯ ಸರ್ಕಾರಗಳ ಹೆಗಲ ಮೇಲಿದೆ. ಈ ವ್ಯವಸ್ಥೆಯಲ್ಲಿ, ಗ್ರಾಮೀಣ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಕಏಇ), ತಾಲೂಕು ಹಂತದಲ್ಲಿ ಒಂದು ಸರ್ಕಾರಿ ಆಸ್ಪತ್ರೆ, ಜಿಲ್ಲಾ ಹಂತದಲ್ಲಿ ವೈದ್ಯಕೀಯ ಕಾಲೇಜುಗಳಿವೆ.

ಈ ವ್ಯವಸ್ಥೆಯನ್ನು ಉತ್ತಮಪಡಿಸುವ, ಆರೋಗ್ಯ ನೀತಿಯನ್ನು ಸುಧಾರಿಸುವ ಬಗೆ ಹೇಗೆ? ಇದಕ್ಕೆ ಅಗತ್ಯವಿರುವುದು ದೂರದೃಷ್ಟಿ ಹಾಗೂ ಬದ್ಧತೆಯಿರುವ ಸಮರ್ಥ ನಾಯಕತ್ವ. ರಾಜ್ಯದಲ್ಲಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಕೇವಲ 2,206. ಗ್ರಾಮೀಣ ಹಂತದಿಂದಲೇ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವ ಕಾರ್ಯ ನಡೆಯಬೇಕಿದೆ. ಈಗಿರುವ ಇಂಥ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆಯಿದ್ದು, ಈ ನಿಟ್ಟಿನಲ್ಲಿ ಆಮೂಲಾಗ್ರ ಸುಧಾರಣೆಯ ಅಗತ್ಯವಿದೆ. ಇನ್ನು ಸರ್ಕಾರಗಳು ಮತಬ್ಯಾಂಕನ್ನು ಗಟ್ಟಿಮಾಡಲೋಸುಗ ಆರೋಗ್ಯ ಕ್ಷೇತ್ರದಲ್ಲಿ ಸಾಲುಸಾಲು ಯೋಜನೆಗಳನ್ನು ಘೋಷಿಸಿಕೊಂಡೇ ಬಂದಿವೆ; ಆದರೆ ಮೂಲಸೌಕರ್ಯಗಳ ಅಭಿವೃದ್ಧಿಯಾಗದೆ ಯೋಜನೆಗಳನ್ನಷ್ಟೇ ಘೋಷಿಸಿದರೆ ಅದರಿಂದ ಏನು ಸಾಧಿಸಿದಂತಾದೀತು?

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇಂದಿಗೂ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಇದಕ್ಕಾಗಿ ಪ್ರತಿ ಗ್ರಾಮದಲ್ಲೂ ಒಂದು ಗುಣಮಟ್ಟದ ಆರೋಗ್ಯ ಕೇಂದ್ರ ನಿರ್ವಣವಾಗಬೇಕು. ಒಂದು ಅಪಘಾತವಾಯಿತೆಂದರೆ, ನಂತರದ ಅರ್ಧ ಗಂಟೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಗೋಲ್ಡನ್ ಅವರ್’ ಎನ್ನುತ್ತೇವೆ. ಆ ಸಮಯದಲ್ಲಿ ತುರ್ತಚಿಕಿತ್ಸೆ ಲಭಿಸದಿದ್ದರೆ ರೋಗಿಯನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತ ಹೋಗುತ್ತದೆ. ಇಂಥ ಚಿಕಿತ್ಸೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಮಾತ್ರ ಸಾಧ್ಯ. ಅಲ್ಲಿ ತುರ್ತಚಿಕಿತ್ಸೆ ನೀಡಲು ನುರಿತ ವೈದ್ಯ ಹಾಗೂ ಸಹಾಯಕ, ಮೂಲಭೂತ ಸೌಲಭ್ಯ, ಮುಂದಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಒಯ್ಯಲು ಆಂಬುಲೆನ್ಸ್ ಒದಗಿಸಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು. ತಾಲೂಕು ಆಸ್ಪತ್ರೆ ನಿರ್ವಣಕ್ಕೆ ಸರ್ಕಾರ ಹತ್ತಾರು ಎಕರೆ ಜಾಗ ಒದಗಿಸುತ್ತದೆ. ಮೈಸೂರಿನಲ್ಲಿ ಕೇವಲ 5 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಯ ನಿರ್ವಣವನ್ನು ನಾವು ಸಾಧ್ಯವಾಗಿಸಿದ್ದೇವೆ. ಅದೇ ಮೊತ್ತದಲ್ಲಿ, ಡಯಾಲಿಸಿಸ್, ಆಪರೇಷನ್ ಥಿಯೇಟರ್, ವೆಂಟಿಲೇಟರ್ ಮುಂತಾದ ವ್ಯವಸ್ಥೆಗಳನ್ನೊಳಗೊಂಡ ಸುವ್ಯವಸ್ಥಿತ ಆಸ್ಪತ್ರೆಯ ನಿರ್ಮಾಣ ಸಾಧ್ಯ. ಅದೂ ಇಚ್ಛಾಶಕ್ತಿ ಇದ್ದು, ನಯಾಪೈಸೆಯೂ ವ್ಯರ್ಥವಾಗದಂತೆ ಕ್ರಮ ಕೈಗೊಂಡರಷ್ಟೇ! ಇನ್ನು ಈ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಬೇಕಲ್ಲ? ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಈಗಾಗಲೇ ಆದೇಶಿಸಿದೆ. ಕರ್ನಾಟಕ ದೇಶದಲ್ಲೇ ಅತಿಹೆಚ್ಚು (53) ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು, 7,355 ಎಂಬಿಬಿಎಸ್ ಹಾಗೂ 3,646 ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಒದಗಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಅಂಥ ವೈದ್ಯರನ್ನು ನೇರವಾಗಿ ಈ ಆಸ್ಪತ್ರೆಗಳಿಗೆ ನೇಮಿಸಿ, ಗೌರವಯುತ ಸಂಭಾವನೆ ನೀಡಿದರೆ ಅವರು ಆತ್ಮತೃಪ್ತಿಯಿಂದ ಜನಸೇವೆ ಮಾಡುವುದು ನಿಶ್ಚಿತ. ಈ ಯುವವೈದ್ಯರ ಮೇಲುಸ್ತುವಾರಿಯನ್ನು ತಾಲೂಕಿನ ಯಾವುದಾದರೊಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಸಿಎಸ್​ಆರ್ ಅಡಿಯಲ್ಲಿ ವಹಿಸಿದರೆ ಅವು ಶ್ರದ್ಧೆಯಿಂದ ನಿಗಾ ವಹಿಸುತ್ತವೆ. ಸ್ನಾತಕೋತ್ತರ ಪದವಿ ಮುಗಿಸಿದ ವೈದ್ಯರಿಗೆ ಮಾರ್ಗದರ್ಶನ ನೀಡುವ ನುರಿತ ವೈದ್ಯರಿದ್ದಾರೆಂದಾದಾಗ, ಅಗತ್ಯ ಕೌಶಲ ದಕ್ಕಿದಂತಾಗುತ್ತದೆ. ಪ್ರಾಥಮಿಕ, ತಾಲೂಕು ಹಂತಗಳಲ್ಲಿ ಇಷ್ಟನ್ನು ಪೂರೈಸಿದರೆ ಬಹುಶಃ ಜಿಲ್ಲಾಸ್ಪತ್ರೆಗೆ ರೋಗಿಗಳು ದಾಖಲಾಗುವ ಅಗತ್ಯವೇ ಬರುವುದಿಲ್ಲವೇನೋ?! ಆರೋಗ್ಯ ಯೋಜನೆಗಳು ಕಣ್ಣೊರೆಸುವ ತಂತ್ರ ಎಂದನಿಸುವುದೇಕೆ? ಈಗಾಗಲೇ ಸರ್ಕಾರ ಹರೀಶ್ ಸಾಂತ್ವನ, ಅಟಲ್ ಆರೋಗ್ಯ, ಯಶಸ್ವಿನಿಯಂಥ ಯೋಜನೆಗಳ ಮೂಲಕ ಒದಗಿಸಿದ ಸೇವೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ 80 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಬೇಕಿದೆ. ಅದಾಗುವವರೆಗೂ ಖಾಸಗಿ ಆಸ್ಪತ್ರೆಗಳು ಈ ಯೋಜನೆಗಳ ಫಲಾನುಭವಿಗಳಿಗೆ ಏನನ್ನೂ ಉಚಿತವಾಗಿ ಒದಗಿಸಲು ಸಿದ್ಧವಿಲ್ಲ. ಅಲ್ಲದೆ ಒಂದು ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗಳಿಗೆ ತಗಲುವ ವೆಚ್ಚಕ್ಕೂ ಸರ್ಕಾರ ಮರುಪಾವತಿಸುವ ಮೊತ್ತಕ್ಕೂ ಅಗಾಧ ವ್ಯತ್ಯಾಸವಿದೆ. ಹೀಗಿರುವಾಗ ಈ ಯೋಜನೆಗಳಿಗೆ ಕೋಟಿಗಟ್ಟಲೆ ವ್ಯಯಿಸುವ ಬದಲಿಗೆ, ರಾಜ್ಯದೆಲ್ಲ ತಾಲೂಕುಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ವಿುಸಿ, ವೈದ್ಯರನ್ನು ಒದಗಿಸಿದರೆ ಜನರೇಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ?

ಪ್ರಜೆಗಳಿಗೆ ವಿದ್ಯೆ, ಆರೋಗ್ಯ, ಆಶ್ರಯ ನೀಡುವುದು ಸರ್ಕಾರದ ಆದ್ಯತೆಯಾಗಿರಬೇಕು. ರಾಜ್ಯಾದ್ಯಂತ ಸುಸಜ್ಜಿತ ಆಸ್ಪತ್ರೆಗಳು ನಿರ್ವಣವಾದವೆಂದರೆ, ಯಾವುದೇ ಯೋಜನೆಗಳ ಕಾರ್ಡಗಳಿಲ್ಲದೆ ಜನರಿಗೆ ಉಚಿತ ಆರೋಗ್ಯ ಸೇವೆ ಲಭಿಸುತ್ತದಲ್ಲವೇ! ಇದಕ್ಕೆ ಮುಖ್ಯವಾಗಿ ಆರೋಗ್ಯ ಸಚಿವಾಲಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವಾಲಯಗಳ ಮಧ್ಯೆ ಒಮ್ಮತ ಮೂಡಬೇಕು. ಉಚಿತ ಚಿಕಿತ್ಸೆಯ ಜತೆಗೆ ಜನೌಷಧ ಕೇಂದ್ರಗಳ ಮೂಲಕ ಔಷಧಗಳನ್ನು ಒದಗಿಸಿದಲ್ಲಿ ಜನರ ಮೇಲಿನ ಭಾರ ಇನ್ನಷ್ಟು ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೊಷಿಸುವುದರ ಜತೆಜತೆಗೆ ಜನಪರ ಹೆಜ್ಜೆಗಳನ್ನಿಡುವ ಅಗತ್ಯವೂ ಇದೆ. ವೈದ್ಯಕೀಯ ಸೌಲಭ್ಯಗಳ ಅಭಿವೃದ್ಧಿಗೆ ಒಂದು ಬಾರಿಯ ಬಜೆಟ್​ನಲ್ಲಿ 900 ಕೋಟಿ ರೂ. ಮೀಸಲಿಟ್ಟರೆ ಸುಸಜ್ಜಿತ ಆಸ್ಪತ್ರೆಗಳು ರೂಪುಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇಂಥ ಒಂದು ಬಾರಿಯ ಹೂಡಿಕೆಯಿಂದ ಶಾಶ್ವತ ಪರಿಹಾರ ಲಭಿಸುವುದಾದರೆ ಆ ಕುರಿತು ಸರ್ಕಾರವೇಕೆ ಯೋಚಿಸಬಾರದು?

ಹಳ್ಳಿಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಓರ್ವ ವೈದ್ಯಾಧಿಕಾರಿ, ಶುಶ್ರೂಷಕ, ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞ, ಪ್ರಥಮ ದರ್ಜೆ ಸಹಾಯಕ ಇರಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಅದೆಷ್ಟೋ ಕಡೆ ವೈದ್ಯರ ನೇಮಕವೇ ಆಗಿಲ್ಲ! ರಾಜ್ಯದ ಜನಸಂಖ್ಯೆಯ ಸುಮಾರು 4 ಕೋಟಿ ಜನ ಗ್ರಾಮೀಣರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವುದು ಕೇವಲ 2,206! ಸರ್ಕಾರದ ಲೆಕ್ಕಾಚಾರದಂತೆ ಇಂಥ ಇನ್ನೂ 1,350 ಕೇಂದ್ರಗಳು ಸ್ಥಾಪನೆಯಾಗಬೇಕಿದೆ.

ಇನ್ನು ಕೆಲವೊಂದು ಆರೋಗ್ಯ ಯೋಜನೆಗಳು ಉತ್ತಮವಾಗಿದ್ದರೂ ಅಗತ್ಯವಿರುವವರಿಗೆ ಅವುಗಳ ಪ್ರಯೋಜನ ಲಭಿಸುತ್ತಿಲ್ಲ. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಮುಂತಾದ ಯೋಜನೆಗಳ ಕುರಿತು ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಇದ್ದರೂ ಅಗತ್ಯವಾದ ದಾಖಲೆಗಳಿಲ್ಲ. ವಲಸಿಗರು, ಕೂಲಿ ಕಾರ್ವಿುಕರು ಎಲ್ಲಿಂದ ದಾಖಲೆಗಳನ್ನು ತಂದಾರು? ಇಂಥ ಯೋಜನೆಗಳ ಪ್ರಯೋಜನ ಪಡೆಯಲು ಓರ್ವ ಬಡವ ತಾನು ಬಡವ ಎಂಬುದನ್ನು ಮೊದಲು ಸಾಬೀತುಪಡಿಸಬೇಕು! ಅದಕ್ಕಾಗಿ ಆತ ಸರ್ಕಾರ ನೀಡುವ ಕಾರ್ಡ್ ಹೊಂದಿರಬೇಕು. ಕಾರ್ಡ್ ಮಾಡಿಸಲು ಹಣ ಖರ್ಚು ಮಾಡಲೇಬೇಕು! ಅಷ್ಟಾದರೂ ಆ ಕಾರ್ಡ್​ನಿಂದ ಪ್ರಯೋಜನವಾಗುತ್ತದೆ ಎನ್ನಲಾಗದು.

ಯಶಸ್ವಿನಿ ಯೋಜನೆಯನ್ನು ಪಡೆಯುವುದೇ ಒಂದು ಸಾಹಸ. ಅದಕ್ಕಾಗಿ ಸಹಕಾರಿ ಸಂಸ್ಥೆಯ ಸದಸ್ಯತ್ವ ಹೊಂದಿ, ನಿರ್ದಿಷ್ಟ ವಿಮಾಮೊತ್ತ ಸಂಘದ ಮೂಲಕ ಪಾವತಿಯಾಗಬೇಕು. ಇಷ್ಟಾದರೂ ಆತನ ಕುಟುಂಬದ ಎಲ್ಲ ಆರೋಗ್ಯ ಸಮಸ್ಯೆಗಳು ಯಶಸ್ವಿನಿ ಯೋಜನೆಯಡಿ ಬರುತ್ತವೆ ಎನ್ನಲಾಗದು!

‘ರಾಜೀವ್ ಆರೋಗ್ಯಭಾಗ್ಯ’ ಯೋಜನೆಯಡಿ ಎಪಿಎಲ್, ಬಿಪಿಎಲ್ ಎಂಬ ಭೇದವಿಲ್ಲದೆ ಜನರು ಕೇವಲ ಶೇ. 10ರಷ್ಟು ಹಣ ಪಾವತಿಸಿ ಕ್ಯಾನ್ಸರ್, ನರಸಂಬಂಧಿ ಸಮಸ್ಯೆ, ಬೆಂಕಿಯ ಗಾಯಗಳ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎಂದು ಘೊಷಿಸಲಾಯಿತು. ಇಂದಿಗೂ ಅದರ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ. ಇದಕ್ಕೆ ಕಾರಣ ಅನುಷ್ಠಾನದಲ್ಲಿನ ಅಜಾಗರೂಕತೆಯೇ, ಮಾಹಿತಿಯ ಕೊರತೆಯೇ? ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 1,13,46,934 ಜನರಿಗೆ ಆರೋಗ್ಯ ವಿಮೆ ಒದಗಿಸಬೇಕು ಎಂಬ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ವಿಮೆ ಪಡೆದವರು ಕೇವಲ 67 ಲಕ್ಷ. ಇನ್ನೂ ಎಷ್ಟೋ ಜನ ಈ ಯೋಜನೆಯ ವ್ಯಾಪ್ತಿಗೆ ಒಳಪಡುವವರಾಗಿದ್ದರೂ, ಮಾಹಿತಿಯ ಮತ್ತು ದಾಖಲೆಗಳ ಕೊರತೆ ಅವರನ್ನು ವಂಚಿತರನ್ನಾಗಿಸಿದೆ.

ಆದ್ದರಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ, ರಾಜ್ಯದ ಜನರೆಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಡ್​ರಹಿತವಾಗಿ, ಉಚಿತ ವೈದ್ಯಕೀಯ ಸೇವೆ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಬಹುದು. ಅಷ್ಟಕ್ಕೂ ಆರೋಗ್ಯವಂತ ಮನಸ್ಸುಗಳು ಆರೋಗ್ಯವಂತ ಶರೀರದಲ್ಲಷ್ಟೇ ಇರುತ್ತದಲ್ಲವೇ!

(ಲೇಖಕರು ತಜ್ಞವೈದ್ಯರು)

Leave a Reply

Your email address will not be published. Required fields are marked *

Back To Top