Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಆರೋಗ್ಯಕರ ಹೆಜ್ಜೆ

Monday, 07.08.2017, 3:00 AM       No Comments

ರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ವಿದ್ಯಮಾನಗಳು ಜನರಿಗೆ ಕೊಂಚ ಸಮಾಧಾನ ತರುವಂಥದ್ದಾಗಿವೆ. ಹೃದ್ರೋಗಿಗಳು ಬಳಸುವ ಸ್ಟೆಂಟ್​ಗಳಿಗೆ ದರ ನಿಗದಪಡಿಸುವ ಮೂಲಕ ಬಡರೋಗಿಗಳನ್ನು ವಂಚಿಸುವ ದಂಧೆಗೆ ಕಡಿವಾಣ ಹಾಕಿದ್ದ ಕೇಂದ್ರ ಸರ್ಕಾರ ಈಗ ಮಂಡಿ ಚಿಪು್ಪ ಬದಲಾವಣೆಗೂ ದರ ನಿಗದಿ ಮಾಡಲು ಮುಂದಾಗಿದೆ. ಮಂಡಿ ಚಿಪು್ಪ ಬದಲಾವಣೆಗೆ ವಿವಿಧೆಡೆ ವಿಧಿಸಲಾಗುತ್ತಿರುವ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಚಿಂತನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಸ್ಟೆಂಟ್​ಗಳಿಗೆ ದರ ನಿಗದಿ ಮಾಡಿದ ಬಳಿಕವೂ ಕೆಲವೆಡೆ ಸುಲಿಗೆ ನಡೆಯುತ್ತಿದೆಯಾದರೂ, ಹೃದ್ರೋಗಿಗಳು ಸ್ಟೆಂಟ್​ಗಳಿಗೆ ಮಾಡುವ ವೆಚ್ಚ ಅಪಾರ ಪ್ರಮಾಣದಲ್ಲಿ ತಗ್ಗಿದೆ ಎಂಬುದು ವಾಸ್ತವ. ಪ್ರಸಕ್ತ ಮಂಡಿಚಿಪು್ಪ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುವ ಫೆಮೋರಲ್ ಎಂಬ ಉಪಕರಣದ ಮೂಲಬೆಲೆಗಿಂತ ಶೇ.67ರಿಂದ ಶೇ.449ರವರೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ(ಎನ್​ಪಿಪಿಎ)ದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ದರ ನಿಗದಿ ಮಾಡುವ ಚಿಂತನೆ ಮೊಳಕೆಯೊಡೆದಿದೆ. ಈ ಆಲೋಚನೆ ಕಾರ್ಯಗತವಾದಲ್ಲಿ ಅಸಂಖ್ಯ ರೋಗಿಗಳು ನಿರಾಳಗೊಳ್ಳಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಎರಡನೆಯ ವಿದ್ಯಮಾನ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಜನರಿಗೆ ಆನ್​ಲೈನ್ ಮೂಲಕ ಆರೋಗ್ಯ ಸಲಹೆ ನೀಡುವ ಹೊಸ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. 1.40 ಕೋಟಿ ಕುಟುಂಬಗಳಿಗೆ ಸರ್ಕಾರಿ ಹಾಗೂ ಸರ್ಕಾರೇತರ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಟಾಟಾ ಟ್ರಸ್ಟ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಜತೆ ಶನಿವಾರ ಒಡಂಬಡಿಕೆ ಮಾಡಿಕೊಂಡಿದ್ದು, 24*7 ಶುಲ್ಕರಹಿತ ಸಹಾಯವಾಣಿ ಸೇವೆ ಲಭ್ಯವಾಗಲಿದೆ. ಅಷ್ಟೇ ಅಲ್ಲ, ಡಿಜಿಟಲ್ ನರ್ವ್ ಸೆಂಟರ್(ಡಿಐಎನ್ಸಿ) ಕೇಂದ್ರದಲ್ಲಿ ಆರೋಗ್ಯ ಇಲಾಖೆ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ್ ಹಾಗೂ ಆಶಾ ಕಾರ್ಯಕರ್ತರು ಜಾಲತಾಣದ ಮೂಲಕ ಒಂದು ತಂಡವಾಗಿ ಕೆಲಸ ನಿರ್ವಹಿಸಲಿರುವುದು ಈ ಯೋಜನೆಯ ವಿಶೇಷತೆ. ಕೋಲಾರ ಜಿಲ್ಲೆಯಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಂಡ ಬಳಿಕ, ರಾಜ್ಯಾದ್ಯಂತ ವಿಸ್ತರಣೆ ಆಗಲಿದೆ.

ಈಗಿನ ಧಾವಂತದ ದಿನಗಳಲ್ಲಿ ಜನರು ಹಲವು ಕಾಯಿಲೆಗಳಿಗೆ ತಾವೇ ಆನ್​ಲೈನ್ ಮೂಲಕ ಔಷಧ ಹುಡುಕಿ ತೆಗೆದುಕೊಳ್ಳುತ್ತಾರೆ. ಆದರೆ, ಹೀಗೆ ವೈದ್ಯರ ಸಲಹೆ, ಶಿಫಾರಸು ಇಲ್ಲದೆ ಪಡೆಯುವ ಔಷಧ ಅಥವಾ ಚಿಕಿತ್ಸೆಯಿಂದ ಎಷ್ಟೋ ಬಾರಿ ಅವಘಡ ಇಲ್ಲವೆ ಫಜೀತಿ ಸೃಷ್ಟಿಯಾಗಿರುವ ನಿದರ್ಶನಗಳಿವೆ. ಈ ಹೊಸ ಯೋಜನೆಯಲ್ಲಿ ತಜ್ಞ ವೈದ್ಯರೇ ಆನ್​ಲೈನ್ ಮೂಲಕ ಸಲಹೆ ನೀಡುವುದರಿಂದ ರೋಗಿಗಳಿಗೆ ಅಧಿಕೃತ ಮಾಹಿತಿ ದೊರಕುತ್ತದೆ ಅಲ್ಲದೆ ಮುಂದಿನ ಚಿಕಿತ್ಸೆಯ ದಾರಿಯನ್ನು ಸರಳಗೊಳಿಸುತ್ತದೆ. ಇಂದು ಎಲ್ಲ ರಂಗಗಳಲ್ಲೂ ಮಾಹಿತಿ ಮತ್ತು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿ, ಮಹತ್ವದ ಬದಲಾವಣೆ ಸಾಕಾರಗೊಳಿಸುತ್ತಿರುವಾಗ ಆರೋಗ್ಯ ಕ್ಷೇತ್ರದಲ್ಲೂ ಇದನ್ನು ಅನ್ವಯಿಸಿ ಸುಧಾರಣೆಗೆ ನಾಂದಿ ಹಾಡಬಹುದು. ಆನ್​ಲೈನ್ ಮೂಲಕ ನುರಿತ ವೈದ್ಯರಿಂದ ಸಲಹೆ, ಮಾಹಿತಿಯನ್ನು ಜನರು ತಾವು ಇರುವಲ್ಲಿಂದಲೇ ಪಡೆಯುವಂತಾದರೆ ನಿಜಕ್ಕೂ ಅದೊಂದು ಉತ್ತಮ ಬೆಳವಣಿಗೆಯೇ ಸರಿ. ಈ ಹೊಸ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು, ಜನರು ಕೂಡ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂದಾಗಲೇ ಉದ್ದೇಶ ಸಾರ್ಥಕ.

Leave a Reply

Your email address will not be published. Required fields are marked *

Back To Top