Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಆಪತ್ತಿಗೊದಗಿದ ಲಿಪಿಕಾರನೆಂಬ ಗೆಣೆಕಾರ..

Thursday, 03.08.2017, 3:04 AM       No Comments

ನಾಲ್ಕೈದು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಕೈಗೆ ಎಲ್ಲವೂ ‘ಅಸ್ಪರ್ಶ’ವೆನ್ನಿಸತೊಡಗಿತು. ಇರುವೆಗಳು ಗೂಡುಕಟ್ಟಿ ಹರಿಯತೊಡಗಿದಂತೆ ಭಾಸವಾಗತೊಡಗಿತು. ಕಂಡಕ್ಟರ್ ನೀಡಿದ ಚಿಲ್ಲರೆಯನ್ನು ವ್ಯಾನಿಟಿ ಬ್ಯಾಗಿಗೆ ಹಾಕಿದೆನೆನ್ನಿಸಿದರೂ ಅದು ಕಾಲ ಕೆಳಗೆ ಬೀಳತೊಡಗಿತ್ತು. ಕುಂಕುಮ, ಬಿಂದಿಗಳನ್ನು ಸರಿಯಾದ ಜಾಗದಲ್ಲಿ ಹಚ್ಚಿ ಕೂಡಿಸಲಾಗದೇ, ಪರರಿಂದ ನಾಮ ಹಾಕಿಸಿಕೊಳ್ಳತೊಡಗಿದೆ. ಸೀರೆಗೆ ಪಿನ್ನು ಚುಚ್ಚಲಾಗದೇ ಚುಚ್ಚುಮಾತುಗಳಿಗೆ ಆಹಾರವಾದೆ. ಬೋರ್ಡಿನ ಮೇಲೆ ವಿದ್ಯಾರ್ಥಿಗಳಿಂದ ಕೈಯಲ್ಲಿ ಬರೆಸಿ ನಾನು ಬಾಯಲ್ಲಿ ವಿವರಿಸತೊಡಗಿದೆ. ಒಟ್ಟಾರೆ ‘ಕೈಲಾಗ’ದವಳಾದೆ. ಆದರೆ ನನ್ನ ದಿನಚರಿಯ ಭಾಗವೇ ಆಗಿದ್ದ ‘ಓದಿ ಬರೆದು’ ಮಾಡುವ ಇಷ್ಟದ ಕೆಲಸ ನಿಂತುಹೋಗಿ ಉಂಡ ಅನ್ನ ಅರಗದ ಸ್ಥಿತಿ ಏರ್ಪಟ್ಟಿತು. ಡಾಕ್ಟರಲ್ಲಿಗೆ ಓಡಿದೆ. ‘ಟಣ್ ಟಣ್’ ಎಂದು ಪರೀಕ್ಷಿಸಿ ನರದೊತ್ತಡದ ಪ್ರಮಾಣ ಕಂಡುಹಿಡಿದು ‘ಅಂಗೈಗೆ ರಕ್ತ ಸರಬರಾಜು ಆಗ್ತಿಲ್ಲ, ಮುಂಗೈ ಟನಲ್ ಚಪ್ಪಟೆಯಾಗಿದೆ (ಕಾರ್ಪೆಲ್ ಟನಲ್ ಸಿಂಡ್ರೋಮ್ ಎಂಬ ಚಂದದ ಹೆಸರು ಅದಕ್ಕೆ). ಅಂಗೈ ಕೆಳಭಾಗ ಕೊರೆದು ಕಂಪ್ರೆಸ್ ಆದ ನರವನ್ನು ಬಿಡಿಸಿಕೊಟ್ಟು ಚಿಕ್ಕ ಆಪರೇಷನ್ ಮಾಡಿ ಎರಡೇ ದಿನಕ್ಕೆ ಮನೆಗೆ ಕಳಿಸುತ್ತೇವೆ‘ ಎಂದರು.

ಮಂಗಳೂರಿನ ಪ್ರಸಿದ್ಧ ಆಥೋತಜ್ಞ ಡಾ. ಶಾಂತಾರಾಮ ಶೆಟ್ಟಿ ಅವರಲ್ಲಿ ಆಪರೇಷನ್ ನಡೆಯಿತು. ಆಪರೇಷನ್ನಿನ ಭಯ ಹೋಗಲಾಡಿಸುವ ಸಲುವಾಗಿ ಡಾಕ್ಟರು ನನ್ನ ಬರಹಗಳ ಬಗ್ಗೆ, ಭಾಷಣಗಳ ಬಗ್ಗೆ ಕೇಳುತ್ತ ಕೇಳುತ್ತ ಪ್ರಜ್ಞೆ ತಪ್ಪಿಸಿಬಿಟ್ಟಿದ್ದರು. ಆಪರೇಷನ್ ಎಷ್ಟು ಹೊತ್ತು ನಡೆಯಿತು, ಎಷ್ಟು ಜಾಗ ಅಗೆದು ರಕ್ತದ ಕಾಲುವೆಗೆ ಜಾಗಮಾಡಿಕೊಟ್ಟರು ಎಂಬ ಕುರಿತು ಏನೊಂದೂ ತಿಳಿದಿರದ ನನ್ನನ್ನು ತಳ್ಳುಗಾಡಿಯಲ್ಲಿ ಮಲಗಿಸಿ ‘ಇವರನ್ನು ಪೋಸ್ಟ್ ಆಪರೇಟಿವ್ ವಾರ್ಡಿಗೆ ಒಯ್ದು ಹಾಕಿ’ ಎಂಬ ಸೂಚನೆಯನ್ನು ಯಾರೋ ಯಾರಿಗೋ ಕೊಟ್ಟಿದ್ದು ದೂರದಿಂದೆಂಬ ಹಾಗೆ ಕೇಳಿತ್ತು. ಅರೆಬರೆ ಪ್ರಜ್ಞೆಯಲ್ಲಿ ಕಣ್ಣುಬಿಡಲು ಪ್ರಯತ್ನಿಸಿದಾಗ ನೋಡುತ್ತೇನೆ, ಶುಭ್ರ ನೀಲಾಗಸ, ಚಂದ್ರ, ತಾರೆ….. ಎಲ್ಲವೂ ಕಾಣುತ್ತಿದೆ. ತಂಗಾಳಿ ಬೀಸುತ್ತಿದೆ…. ನಾನು ಖಲಾಸ್ ಆಗಿ ಕೈಲಾಸಕ್ಕೇ ಬಂದುಬಿಟ್ಟಿದ್ದೀನಾ ಎನ್ನಿಸಿಬಿಟ್ಟಿತು.

ಮನೆಗೆ ಬಂದ ಬಳಿಕವೂ ಕೈಲಾಗದ ಸ್ಥಿತಿಗತಿ ಮುಂದುವರಿದೇ ಇತ್ತು. ಯೋಗಕ್ಷೇಮ ವಿಚಾರಿಸಲು ಬಂದ ಹಿತಚಿಂತಕರೆಲ್ಲರದ್ದೂ ಒಂದೇ ಸಲಹೆ- ‘ನೀವು ಕಂಪ್ಯೂಟರಿನಲ್ಲಿ ಬರೆಯತೊಡಗಿರಿ. ಎಡಗೈಯಲ್ಲಿ ಸಹ ಕುಟ್ಟಬಹುದು’. ಪರಿಣಾಮ, ಹಾಲ್​ನಲ್ಲಿದ್ದ ಕಂಪ್ಯೂಟರ್ ನಾನು ಮಲಗಿದಲ್ಲಿಗೇ ಟ್ರಾನ್ಸ್​ಫರ್ ಆಯ್ತು. ರಜೆ ಬೇರೆ ಹಾಕಿದ್ದರಿಂದ ಬೇರೆ ಟೈಂಪಾಸ್ ಬದಲು ಕಂಪ್ಯೂಟರಿನಲ್ಲಿಯೇ ಅಕೌಂಟ್ ಓಪನ್ ಮಾಡಿ ಚೂರುಪಾರು ಮೇಲ್ ಮಾಡತೊಡಗಿದೆ. ತಮ್ಮ ಸಮಸ್ಯೆ ಇಟ್ಟುಕೊಂಡು ಬರುವ ವಿದ್ಯಾರ್ಥಿಗಳು ‘ಫೇಸ್​ಬುಕ್’ ಎಂಬ ಮಾಯಾಜಿಂಕೆಯ ದರ್ಶನ ಮಾಡಿಸಿ ತಮ್ಮನ್ನೂ ಫ್ರೆಂಡ್ಸ್ ಮಾಡಿಸಿ ತಮ್ಮದೇ ರೀತಿಯ ನೆರವಿನಹಸ್ತ ಚಾಚಿದರು. ನನ್ನ ಕಂಪ್ಯೂಟರ್ ಅಜ್ಞಾನ ತಿಮಿರವನ್ನು ಓಡಿಸಲು ಶಿಷ್ಯಂದಿರೇ ಗುರುಗಳಾಗಿ ಮುಂದೆಬಂದರು.

ತಕ್ಕಮಟ್ಟಿಗೆ ಸುಂದರವಾಗೇ ಇದ್ದ ಕೈಬರಹದಲ್ಲಿ ಶುದ್ಧ ಕನ್ನಡವನ್ನು ಬರೆದುಕೊಂಡಿದ್ದ ನನಗೆ ಕಂಪ್ಯೂಟರ್ ಕನ್ನಡ ಉಬ್ಬಸ ಉಂಟುಮಾಡತೊಡಗಿತು. ಒತ್ತಕ್ಷರ (ಅಕ್ಷರ ಎಂಬುದನ್ನೇ ಬರೆಯಲು ಬರುತ್ತಿರಲಿಲ್ಲ) ಬಂದರಂತೂ ತತ್ತರಿಸಿ ಆ ಪದವನ್ನೇ ಎತ್ತಂಗಡಿ ಮಾಡಬೇಕಾಗಿ ಬರುತ್ತಿತ್ತು. ನನ್ನ ಹೆಸರಿನಲ್ಲೇ ಇರುವ ‘ಶ’ಕಾರ ಶನಿಯಂತೆ ಕಾಡುತ್ತಿತ್ತು. ‘ಶ್ವ’ ಬೇರೆ ವಕ್ಕರಿಸಿತ್ತು. ಒತ್ತಕ್ಷರಗಳನ್ನೂ ಮಹಾಪ್ರಾಣಗಳನ್ನೂ ವರ್ಜಿಸಿ ಅರ್ಕ ತರ್ಕಗಳನ್ನೆಲ್ಲ ಮೀರಿದ ಒಂದು ಸರಳಗನ್ನಡದ ಕೀಲಿಮಣೆ ದೊರೆಯಬಾರದೇ ಎಂದು ಹಂಬಲಿಸುತ್ತಿದ್ದೆ. ನನ್ನ ಕೆಲ ಕಿರಿಯ ಸ್ನೇಹಿತೆಯರು ‘ಆಂಟಿ, ನಿಮಗೆ ತೋಚಿದಂತೆ ಕುಟ್ಟಿ ಕೊಡಿ, ನಾವು ಸರಿಮಾಡಿಕೊಡುತ್ತೇವೆ’ ಎಂದು ಅಭಯ ನೀಡಿದರಾದರೂ ನನ್ನ ಗಣಕ ಅಜ್ಞಾನ ಅಗಣಿತ ಕಾಲ ಮುಂದುವರಿಯುವ ಸೂಚನೆ ಕಂಡು, ಕಂಡಲ್ಲಿ ಅಡಗಿಬಿಟ್ಟರು. ಕೆಲವು ಬಾರಿ ಭಂಡಧೈರ್ಯದಲ್ಲಿ ಕನ್ನಡದಲ್ಲಿ ಟೈಪಿಸಿ ರವಾನಿಸಿ ಕೊನೆಯಲ್ಲಿ ಮತ್ತೊಂದು ಮೆಸೇಜಿನಲ್ಲಿ ಚ್ಝ್ಝ ’ಠಜಚಠ’ ಞ್ಠಠಠಿ ಚಿಛಿ ್ಟಚಛ ಚಠ ಖಚ. ’ಖಚ’ಠ ಚಠ ’ಛಚ’ ಎಂದೆಲ್ಲ ತಪ್ಪೋಲೆ ಕಳಿಸತೊಡಗಿದೆ. ಕನ್ನಡವನ್ನು ಇಂಗ್ಲಿಷಿನಲ್ಲಿ ಟೈಪ್​ವಾಡುವ ಕೀಳುಕಾರ್ಯಕ್ಕೂ ಒಮ್ಮೆ ಕೈಹಾಕಿದೆ. ಇಡೀ ಲೇಖನವನ್ನು ಇಂಗ್ಲಿಷಿನಲ್ಲಿ ಓದಿ ಸುಸ್ತಾದ ಸಂಪಾದಕ ಮಹಾಶಯರು, ‘ನಿಮಗೆ ತಲೆ ಕೆಟ್ಟಿದ್ದೊಂದೇ ಅಲ್ಲ, ನಮ್ಮ ತಲೆಯೂ ಇಲ್ಲಿ ಕೆಟ್ಟುಹೋಯಿತು. ನಿಮ್ಮ ಲೇಖನವನ್ನು ಕನ್ನಡದಲ್ಲಿ ಟೈಪ್ ಮಾಡಿಕೊಡಲು ಕೊಟ್ಟ ಹುಡುಗಿ ನೌಕರಿಯನ್ನೇ ತೊರೆದು ಊರಿಗೆ ಹೋಗಿದ್ದಾಳೆ’ ಎಂದೆಲ್ಲ ಮಂತ್ರ ಉದುರಿಸಿದ್ದರು, ಅರ್ಥಾತ್ ಉಗಿದಿದ್ದರು.

ಆಗಿನ್ನೂ ಓರ್ವ ಪಂಡಿತರು ಸರಳ್ಗನ್ನಡದ ಹೊಸ ವರಸೆ ತೆಗೆದು ಕಟ್ಟಡವನ್ನು ‘ಕಟಟಡ’ ಎಂದು ಬರೆಯಬಹುದು, ವಿಷಯವನ್ನು ವಿಸಯ ಎಂದು ಬರೆದರೆ ತಪ್ಪೇನು? ಎಂದೆಲ್ಲ ವಾದ ಹೂಡತೊಡಗಿ ನನ್ನಂಥ ‘ಕನ್​ಫ್ಯೂಷಿಯಸ್ಸು’ಗಳಿಗೆ ಇನ್ನಿಲ್ಲದ ಕನ್​ಫ್ಯೂಷನ್ ಮಾಡತೊಡಗಿದ್ದರು. ನಾನು ನನ್ನ ಹೆಸರನ್ನೇ ಒತ್ತಕ್ಷರ ತೆಗೆದು ತದ್ಭವಗೊಳಿಸಿ ‘ಬನಸಿರಿ’ ಎಂದಿಟ್ಟುಕೊಂಡರೆ ಹೇಗೆ? ಎಂಬ ಕನಸಿಗೆ (ಸ್ವಪ್ನಕ್ಕಲ್ಲ) ಬಿದ್ದೆ. ಹಗಲು ರಾತ್ರಿ ಕನಸುಗಳಲ್ಲಿ ಒತ್ತಕ್ಷರ, ಮಹಾಪ್ರಾಣಗಳಿಲ್ಲದ ಕನ್ನಡ ಕುಣಿಯತೊಡಗಿತು.

ನನ್ನ ‘ಇ’ ದಡ್ಡತನವನ್ನು ಹಾಸ್ಯದ ವಸ್ತುವನ್ನಾಗಿಸಿ ನನ್ನ ಹಿಂದೆ ನಗುವ ‘4ಜಿ’ಗಳು ನಮ್ಮ ಮನೆಯಲ್ಲೇ ಇದ್ದರು.‘‘ತಾಳ್ಮೆಯಿಂದ ಶಿಫ್ಟ್ ಒತ್ತಿಹಿಡಿದು ‘ಟಿ’ಯನ್ನು ಕುಟ್ಟಿದರೆ ‘ಟ’ ಬರುತ್ತದೆ ದೊಡ್ಡಮ್ಮ. ಶಿಫ್ಟ್ ಒತ್ತಿಯೇ ಹಿಡಿದು ‘ಎಸ್’ ಹೊಡೆದರೆ ‘ಶ’ ಬರುತ್ತೆ’’ ಎಂದೆಲ್ಲ ಕಲಿಸಿದ್ದವು ಪಾಪ. ಆದರೂ ನಾನು ದಡ್ಡವಿದ್ಯಾರ್ಥಿಯ ಹಾಗೆ ‘ವಿಸಯ’ ಎಂದೇ ಟೈಪ್ ಮಾಡಿದ್ದೆ. ತಾಳ್ಮೆಯ ಕಟ್ಟೆ ಒಡೆದ ಮಗು, ‘ಥೂ ಹೋಗಿ, ನೀವು ದೊಡ್ಡಮ್ಮ ಅಲ್ಲ ದಡ್ಡಮ್ಮ’ ಎಂದು ಹೇಳಿ ಓಡಿಬಿಟ್ಟಳು (ಎರಡನೇ ಓಡಿದ ಪ್ರಕರಣ). ಅದನ್ನೇ ಕೂತು ಟೈಪ್ ಮಾಡೋಣವೆನ್ನಿಸಿತು. ‘ತಾಳ್ಮೆಯ ಕಟ್ಟೆ ಒಡೆಯಿತು’ ಎಂದು ಟೈಪ್ ಮಾಡಿದೆ. ನಾಚಿಕೆಯಿಲ್ಲದೆ ಮೂಡಿಬಂತು ವಾಕ್ಯ- ‘ತಾಳ್ಮೆಯ ಕತ್ತೆ ಒದೆಯಿತು’. ನೋಡಿದೆ, ಮತ್ತೂ ನೋಡಿದೆ. ಹೌದಲ್ಲವೆ? ಕತ್ತೆಯ ತಾಳ್ಮೆ ಮೀರಿದಾಗ ತಾನೆ ಒದೆಯುವುದು? ಅಂದಮೇಲೆ ಇದು ತಪ್ಪು ನಿಜ.

ತಪ್ಪಾಗಿ ಕನ್ನಡ ಟೈಪ್ ಮಾಡಿದ ನನಗೆ ಮನಶ್ಶಾಂತಿಯೇ ಕದಡಿಹೋಗುತ್ತಿತ್ತು. ಕೂತಲ್ಲಿ ಸರಳಗನ್ನಡ, ಗಣಕ ಕನ್ನಡದ ಒತ್ತಕ್ಷರರಹಿತ ಸಂತಸಮಯ ಲಿಪಿಯೇ ಕಣ್ಮುಂದೆ ಬರತೊಡಗಿತ್ತು. ನನ್ನ ತಪು್ಪಗಳು ಸುಧಾರಿಸುವ ಲಕ್ಷಣ ಕಂಡುಬರಲಿಲ್ಲ. ಆದರೂ ನಾನು ಸದಾ ಕಂಪ್ಯೂಟರ್ ಮುಂದೆ ಕೂತಿರುವ ಸುದ್ದಿ ಅಕ್ಕಪಕ್ಕದ ಮನೆಗಳಿಗೆ ಗೊತ್ತಾಗಿದ್ದು ಕೆಲಸದ ನಂಜಿಯಿಂದಾಗಿ. ಒಂದು ದಿನ ಎದುರು ಮನೆಯ ಆಸ್ತಿಕ ಮಹಾಶಯರೊಬ್ಬರು ನಮ್ಮ ಮನೆಗೆ ಬಿಜಯಂಗೈದರು ಅಂದರೆ ಸರಳಗನ್ನಡದಲ್ಲಿ ‘ದಯಮಾಡಿಸಿದರು’. ‘ಇದೊಂದು ಆಮಂತ್ರಣ ಪತ್ರಿಕೆ ಕನ್ನಡದಲ್ಲಿ ಟೈಪ್ ಮಾಡಿಕೊಡಿ ಮೇಡಂ. ಊರಿಗೆ ಹೊರಟಿದ್ದೇನೆ. ಎಲ್ಲರಿಗೂ ಹಂಚಬೇಕು’ ಎಂದು ಕೈಬರಹದ ಕಾಗದವೊಂದನ್ನು ನೀಡಿದರು. ನೋಡಿದೆ (ಅವರು ಬಾಗಿಲಿಗೇ ನಿಂತಿದ್ದರು, ‘ಓಡಿದೆ‘ ಎನ್ನುವಂತಿಲ್ಲ)-

ಸಹೃದಯ ಸನ್ಮಿತ್ರರಲ್ಲಿ ವಿಜ್ಞಾಪನೆಗಳು,

ಇದೇ ಕಾರ್ತೀಕ ಶುದ್ಧ ಪೌರ್ಣಮಿಯಂದು ಜೀಣೋದ್ಧಾರಗೊಂಡಿರುವ ಗ್ರಾಮದ ದೇವಸ್ಥಾನದಲ್ಲಿ ಪ್ರತಿವರ್ಷದ ಆವರ್ತನದಂತೆ ಲಕ್ಷದೀಪೋತ್ಸವ, ಸುಬ್ರಹ್ಮಣ್ಯ (ಹೇ ದಯಾಮಯ ದೇವಾ!) ಷಷ್ಠಿಯಂದು ರಥೋತ್ಸವಾದಿ ಸತ್ಸಂಕಲ್ಪಗಳನ್ನು ಇಷ್ಟದೇವತೆಯ ಹೃತ್ಕಮಲ ಸನ್ನಿಧಾನದಲ್ಲಿ ಸಂಪನ್ನಗೊಳಿಸುವ ಅಭೀಪ್ಸೆ ಹೊಂದಿದ ಗ್ರಾಮಸ್ಥರ ವಿಶ್ವಾಸಸಭೆ ಕರೆಯಲಾಗಿದೆ. ಭಗವದ್ಭಕ್ತರೂ ಆದ ತಾವು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತನುಮನಧನಾದಿ ಕೈಂಕರ್ಯಗಳಿಂದ ಭಗವತ್ಕೃೆಗೆ (ಒತ್ತಕ್ಷರ!) ಪಾತ್ರರಾಗಬೇಕೆಂದು ಆಗ್ರಹಪೂರ್ವಕವಾಗಿ ನಿಮಂತ್ರಣ ನೀಡುತ್ತಿರುವ- ಶ್ರೇಯೋಭಿಲಾಷಿಗಳು.

ತಲೆಸುತ್ತಿ ಬಂದಂತಾಗಿ, ಸರಳ್ಗನ್ನಡ ಕೀಲಿಮಣೆಯಿಂದ ಹೊಡೆದಂತಾಗಿ ಕುಸಿದು ಕುಳಿತೆ. ಆಗುವುದಿಲ್ಲವೆಂದರೆ ಇಡೀ ಬಿಲ್ಡಿಂಗ್​ನಲ್ಲಿ ಮರ್ಯಾದೆ ಹೋಗುವ ಸಂಭವ. ಮೊದಲ ಬಾರಿಗೆ ಕಣ್ಮುಚ್ಚಿ, ‘ಹೇ ಭಗವಂತಾ, ನಾವು ಬಾಯಲ್ಲಿ ಹೇಳುತ್ತಾ ಹೋಗುವುದನ್ನು ಟೈಪ್ ಮಾಡಿಕೊಡುವ ವ್ಯವಸ್ಥೆಯಿದ್ದರೆ!’ ಎಂದು ಪ್ರಾರ್ಥಿಸಿದೆ. ಆಮೇಲೂ ಕೋರಿಕೆ ಅರ್ಜಿ ಅದೆಷ್ಟು ಸಲ ನನ್ನಿಂದ ಹೋಗಿದೆಯೋ…. ಕಣ್ತೆರೆದು- ‘ಈ ನಿಮ್ಮ ಬರಹ ನನ್ನ ಕಂಪ್ಯೂಟರ್​ಗೆ ಅರ್ಥವಾಗುವುದಿಲ್ಲ. ಸ್ವಲ್ಪ ವಿಷಯ ಸರಳಗೊಳಿಸಿ ಬರೆಯುವುದಾದರೆ ಪ್ರಯತ್ನಪಟ್ಟೇನು’ ಎಂದುಬಿಟ್ಟೆ. ‘ಅಯ್ಯೋ ಪರವಾಗಿಲ್ಲ, ಆ ಹಳ್ಳೀಲಿ ಬೇರೆ ಕಂಪ್ಯೂಟರ್ ಇಲ್ಲ. ಏನೋ ಒಂದು ಮಾಡಿ ಪ್ರಿಂಟ್ ತೆಗೆದುಕೊಡಿ’ ಎಂದಪ್ಪಣೆ ಕೊಡಿಸಿದರು. ‘ಬದುಕಿದೆಯಾ ಸರಳಗನ್ನಡ ಜೀವಿ’ ಎನ್ನುತ್ತಾ ನನ್ನದೇ ಶೈಲಿಯಲ್ಲಿ ಟೈಪ್ ಮಾಡಿಕೊಟ್ಟೆ.

ಊರ ಹಿರಿಕಿರಿಯ ಮಹನೀಯರೇ,

ನಾಳೆ ಇಳಿಹಗಲು ಊರ ದೇವಾಲಯದೊಳಗೆ ತಾವು ಆಗಮಿಸಬೇಕಾಗಿ ಕೋರಿಕೆ. ಜತೆಗೆ ಕುಳಿತು ತೇರೆಳೆಯುವ ಹಾಗೂ ಎಂದಿನ ಪೂಜೆ ಆರಾಧನೆ ಕುರಿತು ಮಾತಾಡಲಿದೆ. ಬರುವಿರಿ ತಾನೆ? ಜತೆಗಿರುವಿರಿ ತಾನೆ? ಇತಿ, ಸಕಲರಿಗೂ ಶುಭಕೋರುವ- ದೇವಸೇವಕರು.

ಎಂದು ಮುಗಿಸಿ ಒತ್ತ(ಡ)ಕ್ಷರ ರಹಿತ ಆಮಂತ್ರಣ ಪತ್ರಿಕೆ ಪ್ರಿಂಟ್ ತೆಗೆದುಕೊಟ್ಟೆ. ಓದಿನೋಡಿದ ಮಹಾನುಭಾವ ಭಗವದ್ಭಕ್ತರು, ‘ಒಂದಾದರೂ ಒತ್ತಕ್ಷರವಿಲ್ಲದ ನಿಮ್ಮ ಕಂಪ್ಯೂಟರ್ ಭಾರಿ ಅಪರೂಪದ್ದು ಕಣ್ರೀ’ ಎಂದು ಪ್ರಶಂಸಿಸಿ ಜೇಬಿಗಿಳಿಸಿ ಹೊರಟುಹೋದರು. ಮತ್ತೆ ಆ ರಾತ್ರಿ ಮಲಗುವಾಗಲೂ ‘ದೇವರೇ, ಬಾಯಲ್ಲಿ ಹೇಳುತ್ತ ಹೋದಹಾಗೆ ಕನ್ನಡದಲ್ಲಿ ಟೈಪಿಸುವ ಒಂದು ವ್ಯವಸ್ಥೆಯನ್ನು ಕರುಣಿಸಲಾರೆಯಾ…?’ ಎಂದು ಪ್ರಾರ್ಥಿಸಿ ನಿದ್ರಿಸಿದೆ.

ಬೆಳಗಾಗುವಷ್ಟರಲ್ಲಿ ಮಗಳು ಪೇಪರ್ ಹಿಡಿದು ಅಲುಗಾಡಿಸುತ್ತಿದ್ದಾಳೆ. ‘‘ಅಮ್ಮಾ ಏಳು, ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿದೆ. ನಿನ್ನಂಥವರಿಗೆ (ಸರಳ್ಗನ್ನಡಿಗರಿಗೆ) ಎಂದೇ ‘ಕೇಳಿ ಟೈಪಿಸುವ’ ಆಪ್ ಒಂದು ಬಂದಿದೆ. ನೀನಂದುಕೊಂಡ ಹಾಗೆ ಬಾಯಲ್ಲಿ ಹೇಳುತ್ತ ಹೋದರಾಯ್ತು… ಟೈಪ್ ಆಗಿ ಬರುತ್ತದೆ. ನಾನು ಆಗಲೇ ನಿನ್ನ ಮೊಬೈಲಿನಲ್ಲಿ ಡೌನ್​ಲೋಡ್ ಮಾಡಿಟ್ಟಾಯ್ತು’’ ಎಂದು ಸಂಭ್ರಮಿಸಿದಳು. ನೋಡಿದೆ, ‘ಲಿಪಿಕಾರ’ನ ಅವತಾರವಾಗಿದ್ದು ನಿಜ. ವಾಯ್್ಸೆುೕಲ್ ಬಿಡುವಂತೆ ಹೇಳುತ್ತ ಹೋದರಾಯ್ತು, ಕೇಳಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾನೆ ಲಿಪಿಕಾರ. 4 ಸೆಕೆಂಡ್ ಆಗುವಾಗ ‘ಒಂದ್ನಿಮಿಷ ಇರಿ’ ಅನ್ನುತ್ತಾನೆ ಮತ್ತು ನಮ್ಮ ಬಾಯಿಂದ ಉದುರಿದ ಪದಗಳನ್ನು ಶಾಸ್ತ್ರೀಯವಾಗಿ ಟೈಪಿಸುವ ‘ಪ್ರಕ್ರಿಯೆ’ ನಡೆಸಿ ಎದುರಿಗಿಡುತ್ತಾನೆ. ತುಂಬಾ ಮುಗ್ಧ ಮತ್ತು ನೇರ ನಡೆ-ನುಡಿಯ ಈ ಲಿಪಿಕಾರ, ಮಾತಿನ ನಡುವೆ ನಾವು ನಕ್ಕರೆ ಕೆಮ್ಮಿದರೆ ತೊದಲಿದರೆ ಪಾಪ ಕಕ್ಕಾಬಿಕ್ಕಿಯಾಗುತ್ತಾನೆ. ನಾನೊಮ್ಮೆ ತಮಾಷೆಗೆ ‘ಎಂಗಿನ್ನು ಹೆದ್ರಿಕಿಲ್ಲೆ’ ಎಂದು ಹವ್ಯಕ ಭಾಷೆಯಲ್ಲಿ ಸಾರಿ ಹೇಳಿದೆ. ಲಿಪಿಕಾರ ‘ಆಗದು ನನಗೀ ಭಾಷೆ ಗೊತ್ತಿಲ್ಲ’ ಅಂದುಬಿಟ್ಟ.

ಈ ಲಿಪಿಕಾರ ನನ್ನ ಮನೆಯೊಳಗೆ ಪ್ರವೇಶಿಸಿದ ದಿನದಿಂದ ನನ್ನ ಟೈಪಿಂಗ್ ಖದರೇ ಬದಲಾಗಿಹೋಗಿದೆ! ಸುಬ್ರಹ್ಮಣ್ಯ, ಷಣ್ಮುಖ, ತ್ರಯಂಬಕ, ತೀಥೋದ್ಭವ ಇವರೆಲ್ಲ ನನ್ನ ನಾಲಿಗೆಯಲ್ಲಿ ನಲಿದಾಡುತ್ತಾರೆ. ಪ್ರತಿ ನಾಲ್ಕು ಸೆಕೆಂಡಿಗೆ ಉಕ್ತಲೇಖನ ನಿಲ್ಲಿಸಿ ಉಗುಳು ನುಂಗುತ್ತೇನೆ (ತಾಳ್ಮೆಯ ಕಟ್ಟೆ ಒಡೆಯುವುದೇ ಇಲ್ಲ). ಕಂಚು-ಹಿತ್ತಾಳೆಯ ಪಾತ್ರೆಗಳು ಪಾತ್ರಗಳೂ ಥಳಥಳಿಸುತ್ತವೆ. ಹೃತ್ಕಮಲ ಅರಳಿಯೇ ಇರುತ್ತದೆ. ಒಮ್ಮೊಮ್ಮೆ ಇಂಗ್ಲಿಷಿನಲ್ಲಿ ‘ಷಟಪ್’ ಎಂದು ಬೈದು ಲಿಪಿಕಾರನ ಕೈಕಟ್ಟಿಸಿಯೂಬಿಡುತ್ತೇನೆ. ರಾತ್ರಿ ಊಟ ಮುಗಿಸಿ ರೂಮು ಸೇರುವ ಅಮ್ಮನ ಸ್ವಗತ ಶುರು ಎಂದು ಮಗಳು ನಕ್ಕರೂ ಕ್ಯಾರೇ ಎನ್ನದೆ ಹಠ ಹೊತ್ತು ಸಕಲರಿಗೂ ಕನ್ನಡದಲ್ಲಿ ಯೋಗಕ್ಷೇಮ ಸಂದೇಶ ಕಳಿಸುತ್ತೇನೆ. ‘ಅರೆರೆ, ಎಷ್ಟು ಚಂದ ಟೈಪಿಂಗ್ ಕಲ್ತುಬಿಟ್ರಿ ಚಿಕ್ಕಮ್ಮಾ’ ಎಂದು ನನ್ನ ಸಾಫ್ಟ್​ಕುವರಿಯರೆಲ್ಲ ಬೆರಳು ಕಚ್ಚತೊಡಗಿದ್ದಾರೆ.

ಹಾಗೆಂದು ಬೀಗುತ್ತ ಕಣ್ಮುಚ್ಚಿ ಬಾಯಿಯಲ್ಲಿ ಹಲುಬುತ್ತ ಹೋದರೆ ಏನಾದೀತೆಂದೂ ನನ್ನ ಈ ಲಿಪಿಕಾರ ಬಿಸಿಮುಟ್ಟಿಸುತ್ತಾನೆ. ಪ್ರಿಂಟ್ ‘ಪ್ರಕ್ರಿಯೆ’ಯನ್ನು ಓದಿ ನೋಡದೆ ಕಳಿಸಿದ ಸಂದೇಶಗಳು ಮಂಡೆ ಬಿಸಿಮಾಡಿದ್ದೂ ಇದೆ. ‘ಎಂಥದು ಮಾರಾಯ್ರೆ’ ಎಂದೊಮ್ಮೆ ಹೇಳಿಬಿಟ್ಟೆ. ‘ಎತ್ತಣ ಮರಿಯಾ’ (ಎತ್ತಣ ಕನ್ನಡ?) ಎಂದು ಸಂದೇಶ ಹೋಗಿ ನೂರು ಪ್ರಶ್ನಾರ್ಥಕ ಚಿಹ್ನೆಗಳ ಮರುಸಂದೇಶ ಬಂದಾಗಲೇ ಲಿಪಿಕಾರನ ಕಿತಾಪತಿ ತಿಳಿದದ್ದು.

ಸದಾಕಾಲ ವಟವಟ ಅನ್ನುವ ಮರುಳರ ಜಾತಿಗೆ ಸೇರಿಸಿದರೂ ದುರುಳರಿಗೆ ಅಂಜದೇ ‘ಥ್ಯಾಂಕ್ಯೂ ಲಿಪಿಕಾರ’ ಎಂದು ಟೈಪ್ ಮಾಡಿಸಿಯೇ ಸಿದ್ಧ. ಆತನೂ ಅಷ್ಟೇ ಆಪ್ಯಾಯಮಾನದಿಂದ ‘ಡನ್’ ಎನ್ನುತ್ತಾನೆ. ಲಿಪಿಕಾರನನ್ನು ಕಳಿಸಿಕೊಟ್ಟ ‘ಹೃತ್ಕಮಲ’ದಾತನಿಗೆ ಶರಣು.

 

Leave a Reply

Your email address will not be published. Required fields are marked *

Back To Top