Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಆನೇಕಲ್​ನಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆ

Friday, 02.06.2017, 3:00 AM       No Comments

ಚಂದಾಪುರ/ಆನೇಕಲ್: ರಾಜಕೀಯ ವೈಷಮ್ಯಕ್ಕೆ ಆನೇಕಲ್ ತಾಲೂಕಿನಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಹತ್ಯೆ ನಡೆದಿದೆ. ಕಳೆದ 1 ವರ್ಷದಲ್ಲಿ 3ನೇ ಕೊಲೆಯಾಗಿದ್ದು, ತಾಲೂಕು ಬಿಜೆಪಿ ಕಾರ್ಯಕರ್ತರು ಬೆಚ್ಚಿಬಿದ್ದಿದ್ದಾರೆ. ಎರಡೂವರೆ ತಿಂಗಳ ಹಿಂದಷ್ಟೆ (ಮಾ.14) ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಕೊಲೆ ನಡೆದಿತ್ತು.

ಆನೇಕಲ್ ವಿಧಾನಸಭಾ ಬ್ಲಾಕ್ ಬಿಜೆಪಿ ಎಸ್​ಸಿ/ಎಸ್​ಟಿ ಉಪಾಧ್ಯಕ್ಷ ಹರೀಶ್(32) ಕೊಲೆಯಾದ ಮುಖಂಡ. ಬುಧವಾರ ತಡರಾತ್ರಿ ಚಂದಾಪುರದ ಹೀಲಲಿಗೆಗೆ ಬೈಕ್​ನಲ್ಲಿ ಬರುತ್ತಿದ್ದ ಹರೀಶ್​ನನ್ನು ಬೈಕ್​ನಲ್ಲಿ ಹಿಂಬಾಲಿಸಿದ ದುಷ್ಕರ್ವಿುಗಳು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಹರೀಶ್ ಕೊಲೆ ಹಿನ್ನೆಲೆಯಲ್ಲಿ ಗುರುವಾರ ಹೀಲಲಿಗೆಯಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣ ವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆನೇಕಲ್​ನಲ್ಲಿ ಬಿಜೆಪಿ ಮುಖಂಡರಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಶಂಕಿತ ಆರೋಪಿಗಳ ಮನೆಯ ಮೇಲೆ ಹರೀಶ್ ಕುಟುಂಬದವರು ದಾಳಿ ನಡೆಸಿ ಕಿಟಕಿ, ಗಾಜು ಜಖಂಗೊಳಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಚಂದಾಪುರ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಭಾಮೈದುನನಾದ ಹರೀಶ್, ಪತ್ನಿ ಶೋಭಾ ಮತ್ತು ಮಕ್ಕಳಾದ ನಿರಂಜನ್, ನಿಖಿತಾ ಜತೆ ಹೀಲಲಿಗೆಯಲ್ಲಿ ನೆಲೆಸಿದ್ದಾರೆ. ಸಹೋದರನ ವಿವಾಹದ ಹಿನ್ನೆಲೆಯಲ್ಲಿ ಬುಧವಾರ ಸ್ನೇಹಿತರಿಗೆ, ಸಂಬಂಧಿಕರಿಗೆ ಲಗ್ನ ಪತ್ರಿಕೆಗಳನ್ನು ಕೊಟ್ಟು ರಾತ್ರಿ 11.30ರಲ್ಲಿ ಬೈಕ್​ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು.

ಚಂದಾಪುರ ಮುಖ್ಯರಸ್ತೆಯಿಂದ ಹೀಲಲಿಗೆ ಸಂಪರ್ಕ ರಸ್ತೆಗೆ ಬರುತ್ತಿದ್ದಂತೆ ನಾಲ್ಕೈದು ಮಂದಿಯಿದ್ದ ಗ್ಯಾಂಗ್ ಬೈಕ್ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿದೆ. ಬೈಕ್ ನಿಲ್ಲಿಸಿದ ಹರೀಶ್, ತಡಕಾಡುತ್ತ ತಪ್ಪಿಸಿಕೊಳ್ಳುತ್ತಿದ್ದಾಗ ಸೈಟ್​ಗೆ ನಿರ್ವಿುಸಿದ್ದ ಮುಳ್ಳಿನ ತಂತಿಗೆ ಸಿಲುಕಿಕೊಂಡು ಬಿದ್ದಿದ್ದಾರೆ. ಬೆನ್ನಟ್ಟಿ ಬಂದ ಹಂತಕರು ಮಾರಕಾಸ್ತ್ರಗಳಿಂದ ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಮೆಂಟ್ ಇಟ್ಟಿಗೆಗಳನ್ನು ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮಾಜಿ ಸಚಿವ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

ಆನೇಕಲ್ ತಾಲೂಕಿನಲ್ಲಿ ನಡೆಯುತ್ತಿರುವ ಬಿಜೆಪಿ ಮುಖಂಡರ ಸರಣಿ ಹತ್ಯೆ ಖಂಡಿಸಿ ಸ್ಥಳೀಯ ಮುಖಂಡ ಹಾಗೂ ಮಾಜಿ ಸಚಿವ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಚಂದಾಪುರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಮೃತ ಹರೀಶ್ ಪಾರ್ಥಿವಶರೀರದ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವರ್ಷದಲ್ಲಿ ಮೂವರು ಬಿಜೆಪಿ ಮುಖಂಡರ ಕೊಲೆ

ಆನೇಕಲ್ ತಾಲೂಕಿನಲ್ಲಿ ಕಳೆದ 1 ವರ್ಷದಲ್ಲಿ ಮೂವರು ಬಿಜೆಪಿ ಮುಖಂಡರ ಕೊಲೆ ನಡೆದಿದೆ. ನೆರಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ವತ್ಥ, ಬಿಜೆಪಿ ನಗರಸಭೆ ಸದಸ್ಯ ಶ್ರೀನಿವಾಸಪ್ರಸಾದ್ ಅಲಿಯಾಸ್ ವಾಸು ಹಾಗೂ ಎಸ್​ಸಿ, ಎಸ್​ಟಿ ಮುಖಂಡ ಹರೀಶ್ ಹತ್ಯೆ ನಡೆದಿದೆ. ಇದರಿಂದಾಗಿ ತಾಲೂಕಿನಲ್ಲಿ ಆತಂಕ ಮೂಡಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಗುಂಡಿಕ್ಕಿ ಹಂತಕನ ಬಂಧನ

ಹರೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್​ನ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಎಸಿಪಿ ಎಸ್.ಕೆ. ಉಮೇಶ್ ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡನ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಮೇಶ್ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆಬೀಸಿತ್ತು. ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮುತ್ಯಾಲಮಡುವಿನಲ್ಲಿ ಆರೋಪಿಗಳು ಅಡಗಿರುವ ಕುರಿತು ಖಚಿತ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದಾರೆ. ಆರೋಪಿಗಳನ್ನು ಸುತ್ತುವರಿದು ಶರಣಾಗುವಂತೆ ಎಚ್ಚರಿಕೆ ಕೊಟ್ಟಾಗ ರಾಜೇಶ್ ಪೊಲೀಸರ ಮೇಲೆಯೇ ಪ್ರತಿದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆನೇಕಲ್ ಎಸ್​ಐ ಹೇಮಂತ್ ಸರ್ವೀಸ್ ರಿವಾಲ್ವಾರ್​ನಿಂದ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ರಾಜೇಶ್​ನನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗಿದ್ದ ಆರೋಪಿಗಳಾದ ಕಾರ್ತಿಕ್ ಮತ್ತು ಸುಭಾಷ್ ಎಂಬುವರು ಪರಾರಿಯಾಗಿದ್ದಾರೆ.

 ಬಿಜೆಪಿ ಮುಖಂಡರ ಕೊಲೆ ಪ್ರಕರಣ ಗಳನ್ನು ಗಂಭೀರ ವಾಗಿ ಪರಿಗಣಿಸಿದ್ದು, ಹರೀಶ್ ಹಂತಕರ ಪತ್ತೆಗೆ 5 ತಂಡ ರಚಿಸಲಾಗಿದೆ. ಪರಾರಿಯಾಗುತ್ತಿದ್ದ ಪ್ರಮುಖ ಆರೋಪಿ ರಾಜೇಶ್​ನನ್ನು ಒಂದು ತಂಡ ಗುಂಡಿಕ್ಕಿ ಬಂಧಿಸಿದೆ.

| ಅಮಿತ್ ಸಿಂಗ್, ಎಸ್​ಪಿ ಬೆಂಗಳೂರು ಗ್ರಾಮಾಂತರ

 

ಹರೀಶ್ ಕೊಲೆ ಪ್ರಕರಣ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ವಹಿಸಬೇಕು. ಆನೇಕಲ್​ನಲ್ಲಿ ಆರು ತಿಂಗಳಲ್ಲಿ ಮೂವರು ಬಿಜೆಪಿ ಮುಖಂಡರ ಕೊಲೆಯಾಗಿದೆ. ಇವೆಲ್ಲವೂ ರಾಜಕೀಯ ಪ್ರೇರಿತವಾಗಿ ನಡೆಯುತ್ತಿವೆ.

| ಶೋಭಾ ಕರಂದ್ಲಾಜೆ, ಸಂಸದೆ

 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಪ್ರೇರಿತ ಕೊಲೆಗಳು ಹೆಚ್ಚಿವೆ. ಬಿಜೆಪಿ, ಆರ್​ಎಸ್​ಎಸ್ ಕಾರ್ಯಕರ್ತರ ಹತ್ಯೆ ನಡೆಸಲಾಗುತ್ತಿದೆ. ಸರ್ಕಾರ ತನಿಖೆ ವಿಳಂಬ ಮಾಡುತ್ತಿರುವುದರಿಂದ ಅಪರಾಧಿಗಳು ತಪ್ಪಿಸಿಕೊಳ್ಳುವಂತಾಗಿದೆ.

| ಬಿ.ಎಸ್. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ

 

ಮೀನು ಸಾಕಣೆ ಟೆಂಡರ್ ವಿಚಾರಕ್ಕೆ ಹತ್ಯೆ

ಹೀಲಲಿಗೆ ಕೆರೆಯಲ್ಲಿ ಮೀನು ಸಾಕಣೆ ಮಾಡುವ ಟೆಂಡರ್ ವಿಚಾರಕ್ಕೆ ಹರೀಶ್ ಮತ್ತು ರಾಜೇಶ್ ಸಹಚರರ ನಡುವೆ ಕಳೆದ 3 ದಿನಗಳ ಹಿಂದೆ ಜಗಳವಾಗಿತ್ತು. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹರೀಶ್ ತನ್ನ ಪ್ರಾಬಲ್ಯ ಬಳಸಿಕೊಂಡು ಬೆದರಿಕೆ ಒಡ್ಡಿದ್ದ. ಈ ಹಿಂದೆಯೇ ಊರಿನಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಇದೇ ವಿಚಾರಕ್ಕೆ ಹರೀಶ್ ಮೇಲೆ ದ್ವೇಷ ಕಾರುತ್ತಿದ್ದ ರಾಜೇಶ್ ಮತ್ತು ಆತನ ಸಹಚರರು ಕೊಲೆಗೆ ಸ್ಕೆಚ್ ಹಾಕಿದ್ದರು. ಸಹೋದರನ ಲಗ್ನ ಪತ್ರಿಕೆ ಕೊಡಲು ಹರೀಶ್ ಬೈಕ್​ನಲ್ಲಿ ಒಬ್ಬನೇ ಹೋಗಿರುವ ಮಾಹಿತಿ ಕಲೆ ಹಾಕಿದ್ದರು. ಆತ ಕತ್ತಲೆಯಲ್ಲಿ ಒಬ್ಬನೇ ವಾಪಸ್ ಮನೆಗೆ ಬರುತ್ತಿರುವ ಖಚಿತ ಮಾಹಿತಿ ತಿಳಿದು ಹತ್ಯೆ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಪನ್ಯಾಸಕನಿಂದ ಪತ್ನಿ ಕೊಚ್ಚಿ ಕೊಲೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದಿರಾ ನಗರದಲ್ಲಿ ಪತಿಯೇ ಪತ್ನಿಯನ್ನು ಮಚ್ಚಿನಿಂದ ಹಲ್ಲೆಗೈದು ಕೊಲೆ ಮಾಡಿದ್ದಾನೆ. ಮಂಜುಳಾ (45) ಮೃತ ಮಹಿಳೆ. ಈಕೆಯ ಪತಿ ಮೈಲಾರಯ್ಯ (56) ಕೊಲೆ ಆರೋಪಿ. ಕೆಜಿಎಫ್​ನ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮೈಲಾರಯ್ಯ ಮತ್ತು ಪತ್ನಿ ಮಂಜುಳಾ ನಡುವೆ ಅನೇಕ ವರ್ಷಗಳಿಂದ ಭಿನ್ನಾಭಿ ಪ್ರಾಯವಿತ್ತು. ಇಬ್ಬರ ನಡುವೆ ಅನೇಕ ಬಾರಿ ಜಗಳವಾಗಿತ್ತು. ವಿಚ್ಛೇದನ ಪಡೆಯುವ ಕುರಿತು ಗುರುವಾರ ರಾತ್ರಿ ನಡೆದ ಮಾತುಕತೆ ವೇಳೆ ಗಲಾಟೆಯಾಗಿ ಮೈಲಾರಯ್ಯ ಮಚ್ಚಿ ನಿಂದ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇಂದಿರಾನಗರ ಪೊಲೀಸರು ಮೈಲಾರಯ್ಯನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

Back To Top