Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಆನಂದದ ಆಯಾಸವೆಂದರೆ ಗೊತ್ತಾ?

Sunday, 16.07.2017, 3:00 AM       No Comments

ಹೈರಾಣಾಗಿ ಹೋಗಿದ್ದೆ ಆವತ್ತು!

ಅದೆಷ್ಟೋ ಬಾರಿ ಅಮೆರಿಕದ ಉದ್ದಗಲ ಹಾರಾಡಿದ್ದೇನೆ. ಯಾವತ್ತೂ ಹೀಗಾಗಿರಲಿಲ್ಲ. ಹೀಗಾಗಿರಲೇ ಇಲ್ಲ ಅಂತಲ್ಲ; ಇಷ್ಟಾಗಿರಲಿಲ್ಲ. ಸಾಕಪ್ಪಾ ಈ ಅಮೆರಿಕ! ಅನ್ನಿಸಿಬಿಟ್ಟಿತ್ತು ಆವತ್ತಿನ ಮಟ್ಟಿಗೆ. ಜುಲೈ ಒಂದರಿಂದ ಮೂರನೇ ತಾರೀಕಿನವರೆಗೆ ಟೆಕ್ಸಸ್ ರಾಜ್ಯದ ಡಲ್ಲಾಸ್​ನ ಹಿಲ್ಟನ್ ಹೋಟೆಲಿನ ಸಭಾಂಗಣದಲ್ಲಿ ನಡೆದ ವಿಪಿಎ ಸಮಾವೇಶವನ್ನು ಮುಗಿಸಿಕೊಂಡು ಮರುದಿನ ಡಲ್ಲಾಸ್​ನ ಡಾ. ಬಾಲುಚಂದ್ರ ಅವರ ಮನೆಯಲ್ಲೇ ಇದ್ದು ಐದನೇ ತಾರೀಕು ರಿಚ್​ವುಂಡ್​ಗೆ ಹೋದೆ. ರಿಚ್​ವುಂಡ್​ಗೆ ಹೋದ ಉದ್ದೇಶ ನನ್ನ ಮುದ್ದುಮಗಳು ದಿವ್ಯಾಳನ್ನು ನೋಡಿಕೊಂಡು ಬರುವುದು. ಮಗಳು ಅಂದರೆ ಹೆತ್ತಮಗಳೇ ಆಗಬೇಕಾ? ದಿವ್ಯಾ ಕೆಲವು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿನಿಯಾಗಿದ್ದವಳು. ಓದಿನಲ್ಲಿ ಜಾಣೆ ಅನ್ನುವುದಷ್ಟೇ ಅಲ್ಲ. ಗುಣದ ಗಣಿ ಅವಳು. ನನ್ನ ಕರುಳಿಗೇ ಹೆಣೆದುಕೊಂಡು ಬಿಟ್ಟಳು. ನನ್ನ ಬದುಕಿನ ಎಷ್ಟೋ ಅದೃಷ್ಟಗಳಲ್ಲಿ ದಿವ್ಯಾ ಸಿಕ್ಕ ಅದೃಷ್ಟವೂ ಒಂದು. ಬಯೋಟೆಕ್ನಾಲಜಿಯಲ್ಲಿ ಎಂಎಸ್​ಸಿ ಮುಗಿಸಿದ ದಿವ್ಯಾಳನ್ನು ಮೆಚ್ಚಿ ಮದುವೆಯಾದ ಹುಡುಗ ಶಿವಮೊಗ್ಗದ ಸಂತೆಕಡೂರಿನ ಪ್ರಸನ್ನ. ಎರಡೂ ಪುಸ್ತಕದ ಹುಳುಗಳೇ. ಅಮೆರಿಕಕ್ಕೆ ಹೋದಮೇಲೆ ದಿವ್ಯಾ ಅಲ್ಲೇ ಪಿಎಚ್​ಡಿ ಮುಗಿಸಿ ಈಗ ಡಾ. ದಿವ್ಯಾರಾಣಿ ಆಗಿದ್ದಾಳೆ. ಇಲ್ಲೇ ಪಿಎಚ್​ಡಿ ಮುಗಿಸಿ ಡಾಕ್ಟರ್ ಆಗಿದ್ದ ಪ್ರಸನ್ನ ಅಲ್ಲಿ ಪೋಸ್ಟ್ ಡಾಕ್ ಮುಗಿಸಿದ್ದಾನೆ. ಬರೀ ಬದುಕುವುದಷ್ಟೇ ಅಲ್ಲ, ಬದುಕಿನಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಸಂಕಲ್ಪ ಕಟ್ಟಿಕೊಂಡು ಅಲ್ಲಿನ ಲ್ಯಾಬೊರೇಟರಿಗಳಲ್ಲಿ ಈಗಲೂ ಬೆವರು ನಿದ್ದೆ ಬಸಿಯುತ್ತಿದ್ದಾರೆ. ಒಂಭತ್ತು ವರ್ಷಗಳ ಹಿಂದೆ ಮದುವೆಯಾದ ಈ ಮಕ್ಕಳಿಗೆ ಅವರ ಅಧ್ಯಯನ ಸಂಶೋಧನೆಗಳ ನಡುವೆ ಒಂದು ಮಗು ಹೆತ್ತುಕೊಳ್ಳುವುದಕ್ಕೆ ಬಿಡುವಾಗಿರಲಿಲ್ಲ. ಈಗ ಮೊನ್ನೆ ಏಪ್ರಿಲ್ 21ನೇ ತಾರೀಕು ದಿವ್ಯಾ ‘ಅಮ್ಮ’ ಆಗಿದ್ದಾಳೆ. ಆ ಹೆಣ್ಣುಕೂಸಿಗೆ ‘ಅವನಿ ದೀಪಾನ್ವಿತ’ ಅಂತೊಂದು ಉದ್ದದ ಹೆಸರಿಟ್ಟುಕೊಂಡಿದ್ದಾರೆ.

ನನ್ನ ಈ ಹಳೇ ಮಗಳು, ಹೊಸ ಅಮ್ಮನನ್ನು ಮತ್ತು ಆ ಹೊಸ ಜೀವವನ್ನು ಅವಳು ಅಮೆರಿಕದಲ್ಲಿರುವಾಗಲೇ ನೋಡಿ ಬರಬೇಕು ಎಂಬ ಆಸೆಯಿತ್ತು ನನಗೆ. ಆ ಆಸೆಯನ್ನು ತುಳುಕಾಡಿಸುತ್ತಲೇ ರಿಚ್​ವುಂಡ್​ಗೆ ಹೋದದ್ದು. ನಾನು ಬರುವ ಸುದ್ದಿ ಗೊತ್ತಾಗುತ್ತಿದ್ದಂತೇ ರಿಚ್​ವುಂಡ್​ನಲ್ಲೇ ಇರುವ ಹಿರಿಯ ಮಿತ್ರರಾದ ಸ್ವರೂಪ್​ರಾಜ್ ಕನ್ನಡ ಸಂಘದ ಗೆಳೆಯರಿಗೆ ಹೇಳಿ ಅಲ್ಲೂ ಒಂದು ಕಾರ್ಯಕ್ರಮ ಏರ್ಪಾಡು ಮಾಡಿಕೊಂಡಿದ್ದರು.

ದಿವ್ಯಾ-ಪ್ರಸನ್ನ ಮನೆಯಲ್ಲಿ ಎರಡು ರಾತ್ರಿ ತಂಗಿದ್ದು, ಅವರೊಂದಿಗೆ ಒಂದು ಮಣ ಮಾತಾಡಿಕೊಂಡು, ನಡುವೆ ರಿಚ್​ವುಂಡ್ ಕನ್ನಡ ಸಂಘದ ಭಾಷಣ, ಸ್ವರೂಪ್ ಮನೆಯ ರಾತ್ರಿ ಭೋಜನ ಎಲ್ಲಾ ಮುಗಿಸಿಕೊಂಡು ಮರುದಿನ ಬೆಳಗ್ಗೆ ರಿಚ್​ವುಂಡ್​ನಿಂದ ಹತ್ತು ಸಾವಿರ ಸರೋವರಗಳ ರಾಜ್ಯ (ಔಚ್ಞಛ ಟ್ಛ ಠಿಛ್ಞಿ ಠಿಜಟ್ಠಠಚ್ಞಛ ್ಝkಛಿಠ) ಅನ್ನುವ ಮಿನಿಸೋಟಾದ ಮಿನಿಯಾ ಪೊಲಿಸ್​ಗೆ ಹೊರಟೆ. ದಿವ್ಯಾ-ಪ್ರಸನ್ನ ಇಬ್ಬರೂ ಏರ್​ಪೋರ್ಟಿನವರೆಗೂ ಬಂದು ಕಳುಹಿಸಿಕೊಟ್ಟರು. ಕಣ್​ಗಳಿಗೆ ಸಿಗುವವರೆಗೂ ಆ ಮಕ್ಕಳನ್ನು ನೋಡಿಕೊಂಡು ಕದ್ದು ಕಣ್ಣೊರೆಸಿಕೊಂಡು ರಿಚ್​ವುಂಡ್​ನಿಂದ ಫಿಲಿಡೆಲ್ಪಿಯಾಕ್ಕೆ ಹಾರುವ ವಿಮಾನ ಹತ್ತಿ ಕೂತೆ.

ನನ್ನನ್ನು ಹೈರಾಣ ಮಾಡಿದ ಆ ದಿನ ಆರಂಭವಾದದ್ದೇ ಅಲ್ಲಿಂದ. ಐವತ್ತೇ ಆಸನಗಳ ಪುಟ್ಟ ವಿಮಾನ ಅದು. ಅದರ ಒಳಗೆ ಕೂತರೆ ಹಿಂದೆ ನಮ್ಮೂರಿನಲ್ಲಿ ಒಂದು ಕುಕ್ಕೆ ದಬಾಕಿ ಕೋಳಿಮರಿಗಳನ್ನು ಕವುಚಿ ಹಾಕುತ್ತಿದ್ದುದು ನೆನಪಾಗುತ್ತದೆ. ಅಂತೂ ಹೀಗೇ ಆ ಕವುಚಿದ ಕೋಳಿಮರಿಯ ಹಾಗಿನ ಸ್ಥಿತಿಯಲ್ಲಿ ಸುಮಾರು ಒಂದೂವರೆ ಗಂಟೆ ಕೂತರೂ ವಿಮಾನ ಹಾರಲಿಲ್ಲ. ಮಧ್ಯೆ ಮಧ್ಯೆ ವಿಮಾನದ ಕಾಕ್​ಪಿಟ್​ನಿಂದ ಪೈಲಟ್ ಅದೇನೇನೋ ಹೇಳುತ್ತಿದ್ದ. ಅಮೆರಿಕನ್ನರ ‘ನಾಲಿಗೆಯ ಇಂಗ್ಲಿಷ್‘ ನನಗೆ ಈಗಲೂ ಸರಿಯಾಗಿ ಅರ್ಥವಾಗುವುದಿಲ್ಲ. ಆದರೆ ನನಗೆ ಗ್ರಹಿಕೆಯಾಗುತ್ತಿದ್ದುದು ಇಷ್ಟು, ಆ ವಿಮಾನಕ್ಕೆ ‘ಏರ್ ಟ್ರಾಫಿಕ್ ಕ್ಲಿಯರೆನ್ಸ್’ ಸಿಗುತ್ತಿಲ್ಲ. ಆದ್ದರಿಂದ ವಿಮಾನ ನೆಲಕಚ್ಚಿಕೊಂಡೇ ಕೂತಿದೆ. ಹಾರುತ್ತಿಲ್ಲ. ಸುಮಾರು ಒಂದೂವರೆ ಗಂಟೆ ಕೂತಮೇಲೆ ‘ಪ್ರಯಾಣಿಕರೆಲ್ಲರೂ ಏರ್​ಪೋರ್ಟಿಗೆ ಮರಳಿ ಮುಂದಿನ ಸೂಚನೆಯವರೆಗೆ ಕಾಯುತ್ತಿರಿ’ ಅನ್ನುವ ಸಂದೇಶ ಬಂತು. ಏರ್​ಪೋರ್ಟಿನಲ್ಲಿ ಸುಮಾರು ಒಂದರ್ಧ ಗಂಟೆ ಕಾದ ನಂತರ ಮತ್ತೆ ವಿಮಾನಕ್ಕೆ ‘ಬೋರ್ಡ್’ ಆದೊ. ಆಮೇಲೂ ಒಂದರ್ಧ ಗಂಟೆ ಕಾಯಿಸಿದ ವಿಮಾನ ಆ ನಂತರ ’ಖಜಚ್ಞk ಢಟ್ಠ ್ಛ್ಟ ಢಟ್ಠ್ಟ ಟಚಠಿಜಿಛ್ಞಿ್ಚ. ಘಟಡಿ ಡಿಛಿ ಠಿಚkಛಿ ಟ್ಛ್ಛ ಠಿಟ ಕಜಜ್ಝಿಚಛಛ್ಝಿಟಜಜಿಚ ಚ್ಞಛ ಡಿಜಿಠಜ ಢಟ್ಠ ಚ ಜಚಟಟಢ fಜಿಜಜಠಿ’ ಎಂಬ ಸಂದೇಶ ಬಿತ್ತರಿಸಿ ನೆಲಬಿಟ್ಟು ಹಾರಿತು.

ರಿಚ್​ವುಂಡ್​ನಿಂದ ಫಿಲಡೆಲ್ಪಿಯಾಕ್ಕೆ ಕೇವಲ ಒಂದು ಗಂಟೆ ಹಾರಾಟ ಅಷ್ಟೆ. ಆದರೆ ತಾನೇ ಏನು? ನಮ್ಮ ವಿಮಾನ ಫಿಲಡೆಲ್ಪಿಯಾ ಏರ್​ಪೋರ್ಟ್ ತಲುಪಲು ಎರಡೂವರೆಗಂಟೆ ತಡ. ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಮಿನಿಯಾ ಪೊಲಿಸ್​ಗೆ ಹೋಗಬೇಕಾಗಿತ್ತು. ಆದರೆ ಅದು ಅದಾಗಲೇ ಫಿಲಡೆಲ್ಪಿಯಾದಿಂದ ಹಾರಿ ಆಗಿತ್ತು. ಆಗ ಅಮೆರಿಕನ್ ಏರ್​ಲೈನ್ಸ್ ಡೆಸ್ಕ್​ಗೆ ಹೋಗಿ ನನಗೆ ಮುಂದಿನ ವಿಮಾನಕ್ಕೆ ಬೋರ್ಡಿಂಗ್ ಪಾಸ್ ಕೊಡಿ ಎಂದು ಕೇಳಿದೆ. ಮುಂದಿನ ವಿಮಾನ ಇದ್ದುದೇ ಆರುಗಂಟೆಗೆ. ಸರಿ, ವಿಧಿಯಿಲ್ಲ. ಆವತ್ತು ಮಿನಿಯಾ ಪೊಲಿಸ್​ನಲ್ಲಿ ನನ್ನ ಕಾರ್ಯಕ್ರಮ ಇದ್ದದ್ದೇ ಆರು ಗಂಟೆಗೆ. ಇನ್ನೆಲ್ಲಿಯ ಕಾರ್ಯಕ್ರಮ. ಮಿನಿಸೋಟಾ ಕನ್ನಡ ಸಂಘದ ಅಧ್ಯಕ್ಷ ರಮೇಶ್​ಗೆ ಫೋನು ಮಾಡಿದೆ. ರಮೇಶ್ ‘ಪರವಾಗಿಲ್ಲ ಬನ್ನಿ, ಫಿಲಡೆಲ್ಪಿಯಾಕ್ಕಿಂತ ನಾವು ಒಂದು ಗಂಟೆ ಹಿಂದೆ. ಆದ್ದರಿಂದ ನೀವು ಎಂಟೂವರೆಗೆ ಮಿನಿಯಾಪೊಲಿಸ್​ಗೆ ಬರುತ್ತೀರಿ. ನಾವು 9ಕ್ಕೆ ಕಾರ್ಯಕ್ರಮ ಇಟ್ಟುಕೊಳ್ಳುತ್ತೇವೆ. ಅಮೆರಿಕದಲ್ಲಿ ವಿಮಾನಗಳು ತಡವಾಗುವುದು ಮಾಮೂಲು‘ ಅಂದರು. ನಾನು ಆರುಗಂಟೆ ವಿಮಾನಕ್ಕೆ ಐದೂವರೆಗೆ ಬೋರ್ಡ್ ಆದೆ. ಆನಂತರ ಶುರುವಾದದ್ದು ಮತ್ತೊಂದು ದುಃಸ್ವಪ್ನ. ಆ ವಿಮಾನವೂ ಹಾರಲಿಲ್ಲ. ರನ್​ವೇ ಕಡೆಗೆ ಹೊರಟ ವಿಮಾನ ಮಧ್ಯದಲ್ಲೇ ನಿಂತು ನಿಂತು ಹೋಗುತ್ತಿತ್ತು. ಮತ್ತೆ ಏರ್​ಟ್ರಾಫಿಕ್ ಸಮಸ್ಯೆ. ಆ ನಂತರ ಧೋ ಅಂತ ಮಳೆ- ಹವಾಮಾನ ವೈಪರೀತ್ಯ. ಐದೂವರೆಯಿಂದ ಸುಮಾರು 4 ಗಂಟೆಗಳ ಕಾಲ ವಿಮಾನದಲ್ಲೇ ಉಬ್ಬಸಪಡುತ್ತಾ, ಬೇಜಾರುಪಡುತ್ತಾ ಕಾದದ್ದಾಯಿತು. ಹೊಟ್ಟೆ ಬೇರೆ ತುಂಬಾ ಹಸಿಯುತ್ತಿತ್ತು. ಅಮೆರಿಕದ ಡೊಮೆಸ್ಟಿಕ್ ವಿಮಾನಗಳಲ್ಲಿ ಏನೂ ಆಹಾರ ಕೊಡುವುದಿಲ್ಲ. ಕೊಟ್ಟರೆ ಒಂದೆರಡು ಬಿಸ್ಕತ್ತು. ಒಂದಿಷ್ಟು ಕೋಕ್ ಅಷ್ಟೆ. ಅಂತೂ ಆ ಇಡೀ ದಿನ ವಿಮಾನಗಳಲ್ಲಿ ಕೂತು ಗಂಟೆಗಟ್ಟಲೆ ಕಾದೂ ಕಾದೂ ಬೇಸತ್ತು ಹೋದೆ. 4 ಗಂಟೆ ನಮ್ಮನ್ನು ಕಾಯಿಸಿದ ಮೇಲೆ ಆ ವಿಮಾನ 3 ಗಂಟೆ ಹಾರಿ ಮಿನಿಯಾಪೊಲಿಸ್ ಏರ್​ಪೋರ್ಟಿನಲ್ಲಿ ಕಾಲಿಕ್ಕಿತು.

ಆಮೇಲೆ ಅಮೆರಿಕದ ಗೆಳೆಯರೊಬ್ಬರು ಹೇಳಿದರು- ಇಲ್ಲಿಯ ವಿಮಾನಗಳನ್ನು ನಂಬುವಂತೆಯೇ ಇಲ್ಲ. ಆದ್ದರಿಂದಲೇ ಜನ ಎಷ್ಟು ದೂರವಾದರೂ ಕಾರುಗಳಲ್ಲೇ ಪ್ರಯಾಣಿಸುತ್ತಾರೆ. ನನಗೊಂದಿಷ್ಟು ‘ಸಮಾಧಾನ’ವಾಯಿತು. ತಡವಾಗಿ ಹೊರಡುವುದು, ತಡವಾಗಿ ತಲುಪುವುದು ನಮ್ಮ ದೇಶದ ರೈಲು, ಬಸ್ಸುಗಳು ಮಾತ್ರವಲ್ಲ ಅಂತ.

ಅಂತೂ ನಮ್ಮ ವಿಮಾನ ಮಿನಿಯಾಪೊಲಿಸ್​ನಲ್ಲಿ ನೆಲಕ್ಕಿಳಿದು ರಮೇಶ್ ಕಾರಿನಲ್ಲಿ ನಾನು ಅವರ ಮನೆಮುಟ್ಟುವ ಹೊತ್ತಿಗೆ ರಾತ್ರಿ ಹನ್ನೆರಡು ಗಂಟೆ. ಮನೆ ತಲುಪಿದ್ದೇ ತಡ, ನೇರ ಹೋಗಿ ಡೈನಿಂಗ್ ಟೇಬಲ್ಲಿನ ಮೇಲೆ ಕುಳಿತೆ. ರಮೇಶ್ ಮಡದಿ ಶೋಭಾ ಬಿಸಿಬಿಸಿ ಅಡುಗೆ ಮಾಡಿಟ್ಟಿದ್ದರು. ಸೌಜನ್ಯಕ್ಕಾದರೂ ಒಂದಿಷ್ಟು ನಾಚಿಕೆಯಿಟ್ಟುಕೊಳ್ಳದೆ ಇಡೀ ದಿನದ ಹಸಿವನ್ನು ತೀರಿಸಿಕೊಂಡೆ. ಅಮೆರಿಕದ ಮೇಲಿನ ಅಸಮಾಧಾನ ಕಡಿಮೆಯಾಯಿತು.

ನನಗೆ ಆವತ್ತು ವಿಚಿತ್ರ ಅನಿಸಿದ್ದು ಏನೆಂದರೆ ಅಮೆರಿಕದ ಜನರ ಅಸಾಧಾರಣವೆನ್ನುವಂಥ ಸಹನೆ. ಆ ವಿಮಾನಗಳ ಇಕ್ಕಟ್ಟು ಗೂಡಿನಲ್ಲಿ ಅಷ್ಟೊಂದು ಗಂಟೆಗಟ್ಟಲೆ ಕಾದರೂ ಜನ ಒಂದಿಷ್ಟೂ ಸಿಡಿಮಿಡಿಯಾಗಲಿಲ್ಲ. ಯಾರನ್ನೂ ಶಪಿಸಲಿಲ್ಲ. ತಮ್ಮ ಪಾಡಿಗೆ ತಾವು ಲ್ಯಾಪ್​ಟಾಪ್ ಬಿಡಿಸಿಕೊಂಡೋ, ಸೆಲ್​ಫೋನುಗಳ ಮೇಲೆ ಬೆರಳಾಡಿಸುತ್ತಲೋ ಸಮಯ ಕಳೆಯುತ್ತಿದ್ದರು. ನಾನು ಒಂದು ಸಣ್ಣಕತೆಗಳ ಪುಸ್ತಕವನ್ನು ಬೇಗನೇ ಓದಿ ಮುಗಿಸಿಬಿಟ್ಟು ಮುಂದೇನು ಮಾಡಲೂ ತೋಚದೆ ಒಳಗೇ ಚಡಪಡಿಸುತ್ತಿದ್ದೆ.

ಮಿನಿಯಾಪೊಲಿಸ್ ಕನ್ನಡಿಗರ ಸೌಜನ್ಯ ದೊಡ್ಡದು. ಆ ದಿನ ನಾನು ತಡವಾದ್ದರಿಂದ ಬೇಸರಗೊಳ್ಳದೆ ಮರುದಿನ ಬೆಳಗ್ಗೆ ಕಾರ್ಯಕ್ರಮವನ್ನು ಇಟ್ಟುಕೊಂಡರು. ಅಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆಯ ಕಾರ್ಯಕ್ರಮಕ್ಕಾಗಿ ವಿಸ್​ಕಾನ್​ಸಿನ್ ರಾಜ್ಯದ ಮಿಲ್​ವಾಕಿಗೆ ಹಾರಿದೆ. ಸಂಜೆ ಮಿಲ್​ವಾಕಿಯ ಮಿಲನ ಕನ್ನಡ ಸಂಘದ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಗಿರೀಶ್ ಮತ್ತು ಅನಿತಾ ಹಾಗೂ ಶಿವಮೂರ್ತಿ ಕೀಲಾರ ಅವರೊಂದಿಗೆ ಕಾರಿನಲ್ಲಿ ಶಿಕಾಗೋ ನಗರಕ್ಕೆ ಹೋಗಿ ಗಿರೀಶ್-ಅನಿತಾ ಮನೆಯಲ್ಲಿ ಉಳಿದುಕೊಂಡೆ. ಅಂದ ಹಾಗೆ ಗಿರೀಶ್ ನನ್ನ ಗೆಳೆಯ. ಅನಿತಾ ನಮ್ಮ ಮೈಸೂರಿನ ಹುಡುಗಿ ಮಾತ್ರವಲ್ಲ, ನನ್ನ ಹಳೆಯ ವಿದ್ಯಾರ್ಥಿನಿ.

ಗಿರೀಶ್ ಮನೆ ತಲುಪಿದಾಗ ರಾತ್ರಿ ಒಂದು ಗಂಟೆ. ಮತ್ತೆ ಬೆಳಗ್ಗೆ ನಾಲ್ಕಕ್ಕೆ ಎದ್ದು ಸಿದ್ಧವಾಗಿ ನಾಲ್ಕೂವರೆಗೆ ಮನೆಬಿಟ್ಟು ಐದಕ್ಕೆ ಶಿಕಾಗೋ ಮಿಡ್​ಲ್ಯಾಂಡ್ ಏರ್​ಪೋರ್ಟ್ ತಲುಪಿ ಆರಕ್ಕೆ ವಿಮಾನ ಹತ್ತಿ ಒಂಭತ್ತು ಗಂಟೆ(ಸ್ಥಳೀಯ ಕಾಲಮಾನ)ಗೆ ನ್ಯೂಜೆರ್ಸಿಯ ನೆವಾರ್ಕ್ ಏರ್​ಪೋರ್ಟಿಗೆ ಬಂದೆ. ಅಲ್ಲಿ ಕಾದಿದ್ದವರು ನ್ಯೂಜೆರ್ಸಿಯ ಈಸ್ಟ್ ವಿಂಡ್ಸರ್​ನಲ್ಲಿರುವ ನನ್ನ ಆತ್ಮೀಯ ಮಿತ್ರರಾದ ಪ್ರಸನ್ನ. ಅವರು ತಮ್ಮೊಂದಿಗೆ ಅಮೆರಿಕದ ವಾಷಿಂಗ್​ಟನ್ ಡಿ.ಸಿಯಲ್ಲಿರುವ ನಮ್ಮ ಮಿತ್ರರೂ ಕನ್ನಡದ ಪ್ರಸಿದ್ಧ ಲೇಖಕರೂ ಆದ ಶ್ರೀವತ್ಸ ಜೋಷಿಯವರನ್ನು ಕರೆತಂದಿದ್ದರು.

ಸೌಜನ್ಯ, ಸಜ್ಜನಿಕೆ, ಸಹೃದಯತೆ, ಮನುಷ್ಯಪ್ರೀತಿ- ಇಂಥ ಸದ್ಗುಣಗಳ ಮನುಷ್ಯಾಕಾರದಂತಿರುವವರು ನ್ಯೂಜೆರ್ಸಿಯ ಪ್ರಸನ್ನ-ಉಷಾ ದಂಪತಿ. ಅವರ ಮನೆಯ ಹೆಸರು ಸಂತೃಪ್ತಿ. ಮನೆಯ ಹೆಸರು ಮಾತ್ರವಲ್ಲ ಅದು ಆ ಮನೆಯ ಗುಣ. ಅವರಿಗೆ ಇಬ್ಬರು ಮಕ್ಕಳು- ಸ್ನೇಹಾ ಮತ್ತು ಸುಹಾಸ್. ಅಮೆರಿಕದಲ್ಲಿದ್ದೂ ಭಾರತೀಯರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು? ಎಂದು ಯಾರಾದರೂ ಕೇಳಿದರೆ ನಾನು ಬೆರಳು ತೋರಿಸುವುದು ಸ್ನೇಹಾ- ಸುಹಾಸರ ಕಡೆಗೆ. ಎರಡೂ ಮಕ್ಕಳು ಅರಳು ಹುರಿದಂತೆ ಕನ್ನಡ ಮಾತಾಡುತ್ತಾರೆ. ಅವರೇನೂ ಪುಟ್ಟ ಮಕ್ಕಳಲ್ಲ. ಇಬ್ಬರೂ ಓದು ಮುಗಿಸಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಭಾರತ ದೇಶಗಳ ಬದುಕಿನಲ್ಲಿ ಇರುವ ಉತ್ತಮಾಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ನಮ್ಮ ಕನ್ನಡಿಗರ ಮಕ್ಕಳು ಸಾಮಾನ್ಯವಾಗಿ ನಮ್ಮೊಂದಿಗೆ ಅಷ್ಟು ಸಲಿಗೆ, ಮಾತು ಬೆಳೆಸುವುದಿಲ್ಲ. ಕೆಲವು ಮಕ್ಕಳಂತೂ ನಾವು ಮೊದಲು ಕಂಡಾಗೊಂದು ‘ಹಾಯ್’ ಹೇಳಿ ಹೊರಟುಬರುವಾಗ ‘ಬಾಯ್’ ಹೇಳುವಷ್ಟಕ್ಕೆ ಸೀಮಿತವಾಗಿರುತ್ತವೆ. ಆದರೆ ಸ್ನೇಹಾ-ಸುಹಾಸ್ ಹಾಗಲ್ಲ. ಕಂಡಕೂಡಲೇ ಕೊರಳಿಗೇ ಜೋತು ಬೀಳುತ್ತವೆ. ಆಲಂಗಿಸಿಕೊಳ್ಳುತ್ತವೆ. ಕಣ್ಣು ಮುಖ ಅರಳಿಸಿಕೊಂಡು ಮಾತಾಡುತ್ತವೆ. ಅಮೆರಿಕದಲ್ಲಿ ನಮ್ಮವರು ತಮ್ಮ ಮಕ್ಕಳನ್ನು ಹೀಗೆ ಬೆಳೆಸುವುದು ಎಷ್ಟು ಕಷ್ಟ ಅನ್ನುವುದು ಆ ಸಮಾಜದ ಪರಿಚಯವಿರುವವರಿಗೆ ಮಾತ್ರ ಗೊತ್ತು. 2010ರಲ್ಲಿ ನ್ಯೂಜೆರ್ಸಿಯಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಇದೇ ಪ್ರಸನ್ನ ಸಮ್ಮೇಳನ ಸಮಿತಿಯ ಮುಖ್ಯ ಸಂಯೋಜಕರಾಗಿದ್ದರು. ಆಗ ಕನ್ನಡನಾಡಿನಿಂದ ಹೋಗಿದ್ದ ಸುಮಾರು 30 ಜನ ಕಲಾವಿದರನ್ನು ಪ್ರಸನ್ನ ಉಷಾ ತಮ್ಮ ಮನೆಯಲ್ಲೇ ಉಳಿಸಿಕೊಂಡು ಹತ್ತು ದಿನಗಳ ಕಾಲ ಅವರ ಯೋಗಕ್ಷೇಮ ನೋಡಿಕೊಂಡಿದ್ದರು. ಅಥವಾ ಸೇವೆ ಮಾಡಿದ್ದರು ಅನ್ನುವುದೇ ಸರಿ. ಇದೊಂದು ಪ್ರಸಂಗವನ್ನು ಮಾತ್ರ ಹೇಳಲೇಬೇಕು.

ಉಷಾ ಮತ್ತು ಪ್ರಸನ್ನ ನಮ್ಮ ಬೆಂಗಳೂರು ಮತ್ತು ಮೈಸೂರಿನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಿಗೆ ಸೇರಿದವರು. ಅಮೆರಿಕದಲ್ಲಿದ್ದೂ ಅವರು ತಮ್ಮ ಕುಟುಂಬಗಳ ಸತ್ ಸಂಪ್ರದಾಯಗಳನ್ನೇನೂ ಬಿಟ್ಟಿಲ್ಲ. ಆ ವರ್ಷ ನಮ್ಮ ಕಲಾವಿದರು ಉಳಿದುಕೊಂಡಿದ್ದ ಸಮಯದಲ್ಲೇ ಅವರ ಮನೆಯಲ್ಲಿ ಗೌರಿ-ಗಣೇಶನ ಹಬ್ಬ. ಆದಿನ ಸಂಪ್ರದಾಯದಂತೆಯೇ ಅವರ ಮನೆಯಲ್ಲಿ ಗೌರಿ ಗಣೇಶನನ್ನು ಕೂರಿಸಿ ಪೂಜೆ ಪುನಸ್ಕಾರಗಳನ್ನು ನಡೆಸಿ ಎಲ್ಲಾ ಕಲಾವಿದರನ್ನೂ ಸಹಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡು ಭಕ್ಷ್ಯ ಭೋಜ್ಯಗಳನ್ನೆಲ್ಲಾ ಬಡಿಸಿ, ಉಣ್ಣಿಸಿ, ಅವರೆಲ್ಲರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ವಿಶೇಷವೇನು ಗೊತ್ತಾ? ಆ ಕಲಾವಿದರಲ್ಲಿ ಕೆಳವರ್ಗದವರು, ಅಸ್ಪೃಶ್ಯರು ಎಂದು ನಾವು ದೂರವಿಟ್ಟಿರುವ ಎಲ್ಲರೂ ಇದ್ದರು. ಆದರೆ ಉಷಾ-ಪ್ರಸನ್ನ ದಂಪತಿಗೆ ಕಂಡದ್ದು ಅವರ ಜಾತಿಗಳಲ್ಲ, ಅವರೊಳಗಿನ ಮನುಷ್ಯರು, ಕಲಾವಿದರು ಮಾತ್ರ. ನನಗಂತೂ ಪ್ರಸನ್ನ-ಉಷಾ ಅಂದರೆ ನನ್ನ ಒಡಹುಟ್ಟಿದವರಷ್ಟೇ ಅನ್ನುವಷ್ಟು ಪ್ರೀತಿ. ಆದ್ದರಿಂದ ನಾನು ಅಮೆರಿಕದ ಪೂರ್ವತೀರಕ್ಕೆ ಹೋದಾಗ ನ್ಯೂಜೆರ್ಸಿಯ ‘ಸಂತೃಪ್ತಿ’ ಮನೆಗೆ ಹೋಗಿಬರುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ಪ್ರಸನ್ನ-ಉಷಾ ನ್ಯೂಜೆರ್ಸಿಯ ಬೃಂದಾವನ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದವರು. ಅದರ ಜೊತೆಗೆ ಆಗೀಗ ತಮ್ಮ ಮನೆಯ ಬೇಸ್​ವೆುಂಟಿನಲ್ಲಿ ಸಾಹಿತ್ಯ, ಸಂಗೀತ, ಸಂಸ್ಕೃತಿ ಸಂಬಂಧವಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುತ್ತಾರೆ. ಕಳೆದ ಭಾನುವಾರ ತಮ್ಮ ಮನೆಯಲ್ಲಿ ‘ಶ್ರೀವತ್ಸ ಜೋಷಿ ಮತ್ತು ಪ್ರೊ. ಕೃಷ್ಣೇಗೌಡರ ಸಂವಾದ ಹಾಗೂ ಭಾವಧಾರೆ’ ಕಾರ್ಯಕ್ರಮಗಳನ್ನಿಟ್ಟುಕೊಂಡು ಹಲವಾರು ಇಷ್ಟಮಿತ್ರರನ್ನು ಆಹ್ವಾನಿಸಿದ್ದರು.

ಶ್ರೀವತ್ಸ ಜೋಷಿ ನನ್ನ ಅಭಿಮಾನದ ಲೇಖಕರು ಮತ್ತು ಆತ್ಮೀಯ ಗೆಳೆಯರು. ಅವರ ಲೇಖನಗಳ ವಸ್ತು ವೈವಿಧ್ಯ, ಅವರ ನಿರೂಪಣೆಯ ಸರಸ ಸಾಹಿತ್ಯ ವಿಧಾನ, ಅಗಾಧ ನೆನಪಿನ ಶಕ್ತಿ ನನಗಿನ್ನೂ ವಿಸ್ಮಯವೇ. ಅವರೊಂದು ಬಗೆಯಲ್ಲಿ ಅನಿವಾಸಿ ಕನ್ನಡಿಗರ ಕಲಾತ್ಮಕ ವಕ್ತಾರ. ಅವರೊಂದಿಗೆ ಸಂವಾದಿಸುವುದು ನನಗೇ ಒಂದು ಗೌರವ. ನಮ್ಮ ಸಂವಾದಕ್ಕೆ ಇದೇ ಜಾಡು ಅಂತೇನೂ ಇರಲಿಲ್ಲ. ಅದು ಹೇಗೆ ಕಳೆಯಿತೋ ಸಮಯ ನಮಗೂ ತಿಳಿಯಲಿಲ್ಲ. ಅಲ್ಲಿದ್ದ ಸಂವಾದಕರಿಗೂ ತಿಳಿಯಲಿಲ್ಲ. ನನಗೆ ವಿಸ್ಮಯ! ಅಬ್ಬಾ ಕನ್ನವೆನ್ನುವುದು ನಮಗೆಂಥಾ ಶಕ್ತಿ, ತೇಜಸ್ಸು ಕೊಟ್ಟಿದೆ ಅಂತ. ಆನಂತರ ಭಾವಧಾರೆ ಕಾರ್ಯಕ್ರಮ. ಲಕ್ಷ್ಮೀ ಶೈಲೇಶ್, ವೈಷ್ಣವಿ ಕಿರಣ್ ಮತ್ತು ಶ್ರೇಯಸ್ ಶ್ರೀಕರ ಕೆಲವು ಭಾವಗೀತೆಗಳನ್ನು ಹಾಡಿದರು. ಅದಕ್ಕೆ ನನ್ನ ವ್ಯಾಖ್ಯಾನ. ನಡುನಡುವೆ ಶ್ರೀವತ್ಸ ಜೋಷಿಯವರ ಮಾತು. ಒಟ್ಟು ನಾಲ್ಕು ಗಂಟೆಗಳ ಪರಿಮಳದ ಪಯಣ. ಮಾತು ಕೇಳಿದವರಿಗೆ ಯಾರಿಗೂ ಒಂದಿಷ್ಟೂ ಆಯಾಸವಿಲ್ಲ. ನನಗೂ, ಜೋಷಿಯವರಿಗೂ, ಉಷಾ ಪ್ರಸನ್ನ ಅವರಿಗೂ ಮಾತ್ರ ಭಾರೀ ಆಯಾಸ- ಆನಂದದ ಆಯಾಸವೆಂದರೆ ಗೊತ್ತಾ? ನಮಗೆ ಆ ಆನಂದದ ಆಯಾಸ!

ಅಲ್ಲಿ ನಾನೊಂದು ಮಾತು ಹೇಳಿದೆ. ಈ ಜಗತ್ತಿನಲ್ಲಿ ಅದೆಷ್ಟೇ ಅನ್ಯಾಯ, ಕ್ರೌರ್ಯ, ಅನಾಚಾರ, ಭ್ರಷ್ಟಾಚಾರ ಇತ್ಯಾದಿಗಳು ನಡೆಯುತ್ತಿದ್ದರೂ ಈಗಲೂ ಅವುಗಳ ಸೋಂಕಿಲ್ಲದೆ ಬದುಕಲು ನಮಗೆ ಅವಕಾಶವಿದೆ. ಯಾಕೆಂದರೆ ನಮಗೆ ಬೇಕಾದ ಗೆಳೆಯರನ್ನು ನಾವೇ ಆಯ್ದುಕೊಳ್ಳಬಹುದು. ನಮಗೆ ಇಷ್ಟವಾದವರ ಸಹಚರ್ಯುಯಲ್ಲಿ ನಾವಿರಬಹುದು. ಈ ಮರ್ತ್ಯದಲ್ಲೂ ನಮಗೆ ಬೇಕಾದೊಂದು ಸ್ವರ್ಗವನ್ನು ಕಟ್ಟಿಕೊಳ್ಳಬಹುದು ಅಂತ. ಆವತ್ತು ಸಂತೃಪ್ತಿಯಲ್ಲಿ ಸೇರಿದ್ದ ಎಲ್ಲರಿಗೂ ನನ್ನ ಮಾತು ಹೌದಲ್ಲ!? ಅನ್ನಿಸಿತ್ತು.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top